ಕೇಶವರೆಡ್ಡಿ ಹಂದ್ರಾಳ   - ಮನುಷ್ಯರ ಹೆಣಗಳನ್ನು ಕಡಲೆಪುರಿಯಂತೆ ಮುಕ್ಕುವ ಮಣಿಕರ್ಣಿಕ ಘಾಟ್ !!!

keshav-reddy-handrala-manikarnika-ghat-bevarahani-news-web

ಕೇಶವರೆಡ್ಡಿ ಹಂದ್ರಾಳ     - ಮನುಷ್ಯರ ಹೆಣಗಳನ್ನು  ಕಡಲೆಪುರಿಯಂತೆ ಮುಕ್ಕುವ  ಮಣಿಕರ್ಣಿಕ ಘಾಟ್ !!!

ಸಾವಿನ ಅನಿಶ್ಚಿತತೆ ಮತ್ತು ಅನಿವಾರ್ಯತೆಗಳ ಬಗ್ಗೆ ಕಂತೆ ಕಂತೆ ಕಥೆಗಳನ್ನು ಬರೆದವನು. ಆದರೆ ದೇಹ ಮತ್ತು ಬದುಕನ್ನು ಹಂಚಿಕೊಂಡವರು ಸತ್ತಾಗ ಆಗುವ ಸಂಕಟದ ಸಾಕ್ಷಾತ್ಕಾರವೇ ಬೇರೆಯದಾಗಿರುತ್ತದೆ ಎಂಬ ಅನುಭವವಾದಾಗ ದ್ರವಿಸುವ ಸಂವೇದನೆಗಳನ್ನು ವ್ಯಾಖ್ಯಾನಿಸಲು ಜಗತ್ತಿನಲ್ಲಿ ಖಂಡಿತವಾಗಿಯೂ ಯಾರೊಬ್ಬರಿಗೂ ಬಹುಶಃ ಸಾಧ್ಯವಾಗುವುದಿಲ್ಲ.

 

 

“ನಾನು ಮನೆಗೆ ಹೋಗುವುದೇ ಅಪರೂಪ. ಮರಿಮೊಮ್ಮಕ್ಕಳೂ ಇದ್ದಾರೆ. ನನಗೂ ಸತ್ತ ನಂತರ ಇಲ್ಲೇ ಬೂದಿಯಾಗಿ ಗಂಗೆಯಲ್ಲಿ ಬೆರೆತುಹೋಗುವ ಆಸೆ. ಆದರೆ ಸಾವು ಅಷ್ಟು ಸುಲಭದ್ದಲ್ಲ. ಬದುಕಬೇಕೆಂಬ ಇಚ್ಛೆ ಇಲ್ಲದಿದ್ದರೂ ಬಲವಂತವಾಗಿ ಬದುಕುವುದಿದೆಯಲ್ಲ ಅದಕ್ಕಿಂತಲೂ ದೊಡ್ಡ ಯಾತನೆ ಮತ್ತೊಂದಿಲ್ಲ. ಆದ್ದರಿಂದಲೇ ಲಕ್ಷಾಂತರ ಜನರಿಗೆ ಬದುಕೊಂದು ಅತಿದೊಡ್ಡ ದುರಂತವಾಗಿಯೇ ಪರಿಣಮಿಸಿದೆ. ವಿಜ್ಞಾನ ಇಷ್ಟು ಮುಂದುವರಿದಿದೆಯಲ್ಲ, ಯಾರಾದರೂ ಯಾವ ನೋವೂ ಇಲ್ಲದೆ ಸುಲಭವಾಗಿ ಪ್ರಾಣತೆಗೆಯುವಂಥ ಮಾತ್ರೆಯೊಂದನ್ನು ಕಂಡು ಹಿಡಿಯಬೇಕು. ಸರ್ಕಾರ ಅದನ್ನು ಮಾನ್ಯ ಮಾಡಬೇಕು. ಆಗ ನೋಡಿ ಗಂಗೆಯಲ್ಲಿ ಹೆಣಗಳು ಹೇಗೆ ತೇಲಿ ಬರುತ್ತವೆಂದು.."

 

ಒಡಲುರಿ

 

ಕೇಶವರೆಡ್ಡಿ ಹಂದ್ರಾಳ

 

ಮನುಷ್ಯರ ಹೆಣಗಳನ್ನು

ಕಡಲೆಪುರಿಯಂತೆ ಮುಕ್ಕುವ

ಮಣಿಕರ್ಣಿಕ ಘಾಟ್ !!!

" ತಲ್ಲಣಿಸದಿರು ಕಂಡ್ಯ ತಾಳು ಮನವೆ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ..."

" ಕಾಲವೊಂದಿತ್ತು ಗಂಗೆಯಲ್ಲಿ ಮುಳುಗಿ ಏಳುವಾಗ ಹೆಣಗಳು ತಲೆಗೆ ತಗುಲುತ್ತಿದ್ದವು. ಅಂಥ ಮಾತುಗಳು ಈಗಲೂ ಗಂಗೆಯನ್ನು ಖುದ್ದು ನೋಡದವರು ದೇಶದ ತುಂಬಾ ಮಾತನಾಡಿಕೊಳ್ಳುತ್ತಾರೆ.”

“ಹೌದು, ನಾನು ತೀರಾ ಚಿಕ್ಕ ಹುಡುಗನಾಗಿದ್ದಾಗ ಮಳೆಗಾಲದಲ್ಲಿ ಪ್ರವಾಹ ಬಂದಾಗ ಹೆಣಗಳು ಒಂದರ ಹಿಂದೊಂದು ತೇಲಿಹೋಗುತ್ತಿದ್ದುದ್ದನ್ನು ಕಂಡಿದ್ದೇನೆ. ಎಷ್ಟೋ ಸಾರಿ ನಮ್ಮ ದೋಣಿಗೆ ಡಿಕ್ಕಿ ಹೊಡೆದುಕೊಂಡೇ ಹೆಣಗಳು ಮುಂದಕ್ಕೆ ಹೋಗುತ್ತಿದ್ದವು. ಹಾಯಿ ಹಾಕುತ್ತಿದ್ದ ಅಪ್ಪ ಅಂಥ ಹೆಣಗಳನ್ನು ಮುಟ್ಟಿ ಕೈಯ್ಯನ್ನು ಕಣ್ಣಿಗೆ ಒತ್ತಿಕೊಳ್ಳುತ್ತಿದ್ದ. ನಂತರ ಅದು ನನಗೂ ರೂಢಿಯಾಯಿತು. ಅದನ್ನೇ ಈಗ ನನ್ನ ಮಕ್ಕಳೂ ಮಾಡುತ್ತಿದ್ದಾರೆ.

ಆಗ ವೈದ್ಯಕೀಯ ಸೌಲಭ್ಯಗಳು ಅಷ್ಟಾಗಿ ಅಭಿವೃದ್ಧಿಯಾಗಿರಲಿಲ್ಲ. ಬಹಳ ಹಿಂದೆ ತೀರಾ ವಯಸ್ಸಾದವರನ್ನು, ವಾಸಿಯಾಗಲಾರದ ರೋಗಗಳಿಂದ ನರಳುತ್ತಿದ್ದವರನ್ನು, ಸತ್ತ ಬಸುರಿ ಮತ್ತು ಶಿಶುಗಳನ್ನು ಗಂಗೆಗೆ ಎಸೆದು ಬಿಡುತ್ತಿದ್ದರು ಮುಕ್ತಿ ಸಿಗಲೆಂದು. ರಭಸದಿಂದ ಹರಿಯುವ ನೀರು ಗಂಗೆಯದ್ದಾದರೇನು, ಯಮುನೆಯದ್ದಾದರೇನು ಇಲ್ಲ ಬಹ್ಮಪುತ್ರೆಯದ್ದಾದರೇನು ಬಿದ್ದ ಯಾವುದೇ ವಸ್ತುಗಳನ್ನು ಹೊತ್ತು ಸಾಗುವುದೇ ಅದರ ಕೆಲಸವಲ್ಲವೆ? ಈಗ ಬಿಡಿ ಸತ್ತವರನ್ನೂ ಬದುಕಿಸುವಂಥ ಔಷಧಿಗಳನ್ನು ಕಂಡು ಹಿಡಿದಿದ್ದಾರಂತೆ. ಮೆಡಿಕಲ್ ಫೀಲ್ಡ್ ತುಂಬಾ ಮುಂದುವರಿದಿದೆ. ಮಸ್ತಾಗಿ ಹಣ ಬೇಕಷ್ಟೆ. ಅದಕ್ಕೆ ಈಗ ಗಂಗೆ ಪರಿಶುದ್ಧವಾಗಿದ್ದಾಳೆ.

ಆದರೆ ಈಗಲೂ ಜನಕ್ಕೆ ಈ ಗಂಗೆಯ ತಟದಲ್ಲಿ ಪ್ರಾಣ ಬಿಡುವುದೆಂದರೆ, ಶವ ಸುಡುವುದೆಂದರೆ ತುಂಬಾ ಇಷ್ಟ ಅದೂ ಈ ಬನಾರಸಿನಲ್ಲಿ ಆದರೆ ಮುಕ್ತಿ ಗ್ಯಾರಂಟಿ. ಗಂಗೆಯ ಜಲ ಕರುಳನ್ನು ಮತ್ತು ಹೃದಯವನ್ನು ಶುದ್ಧೀಕರಣ ಮಾಡುತ್ತದೆ. ನಾನೇ ನೋಡಿ ಪ್ರತಿದಿನ ಗಂಗೆಯಲ್ಲಿಯೇ ಸ್ನಾನ ಮಾಡುತ್ತೇನೆ, ಗಂಗೆಯ ನೀರನ್ನೇ ಕುಡಿಯುತ್ತೇನೆ ಮತ್ತು ವಾರದಲ್ಲಿ ನಾಲ್ಕು ದಿನಗಳಾದರೂ ಶ್ರಾದ್ಧದ ಊಟವನ್ನೇ ಮಾಡುತ್ತೆನೆ. ಎಷ್ಟೋ ಸಾರಿ ವಿಸರ್ಜನೆಗಳನ್ನೂ ಗಂಗೆಯಲ್ಲಿ ಮಾಡಿದ್ದೇನೆ. ನನ್ನಂಥ ಎಷ್ಟು ಪಾಪಿಗಳನ್ನು ಗಂಗೆ ಕ್ಷಮಿಸಿರುವಳೋ ಆ ವಿಶ್ವನಾಥನಿಗೆ ಮಾತ್ರವೇ ಗೊತ್ತು. ಒಂದೇ ಒಂದು ಕೆಮ್ಮು, ಒಂದೇ ಒಂದು ಜ್ವರವನ್ನು ಕಂಡವನಲ್ಲ.”

“ನಾನು ಮನೆಗೆ ಹೋಗುವುದೇ ಅಪರೂಪ. ಮರಿಮೊಮ್ಮಕ್ಕಳೂ ಇದ್ದಾರೆ. ನನಗೂ ಸತ್ತ ನಂತರ ಇಲ್ಲೇ ಬೂದಿಯಾಗಿ ಗಂಗೆಯಲ್ಲಿ ಬೆರೆತುಹೋಗುವ ಆಸೆ. ಆದರೆ ಸಾವು ಅಷ್ಟು ಸುಲಭದ್ದಲ್ಲ. ಬದುಕಬೇಕೆಂಬ ಇಚ್ಛೆ ಇಲ್ಲದಿದ್ದರೂ ಬಲವಂತವಾಗಿ ಬದುಕುವುದಿದೆಯಲ್ಲ ಅದಕ್ಕಿಂತಲೂ ದೊಡ್ಡ ಯಾತನೆ ಮತ್ತೊಂದಿಲ್ಲ. ಆದ್ದರಿಂದಲೇ ಲಕ್ಷಾಂತರ ಜನರಿಗೆ ಬದುಕೊಂದು ಅತಿದೊಡ್ಡ ದುರಂತವಾಗಿಯೇ ಪರಿಣಮಿಸಿದೆ. ವಿಜ್ಞಾನ ಇಷ್ಟು ಮುಂದುವರಿದಿದೆಯಲ್ಲ, ಯಾರಾದರೂ ಯಾವ ನೋವೂ ಇಲ್ಲದೆ ಸುಲಭವಾಗಿ ಪ್ರಾಣತೆಗೆಯುವಂಥ ಮಾತ್ರೆಯೊಂದನ್ನು ಕಂಡು ಹಿಡಿಯಬೇಕು. ಸರ್ಕಾರ ಅದನ್ನು ಮಾನ್ಯ ಮಾಡಬೇಕು. ಆಗ ನೋಡಿ ಈ ಗಂಗೆಯಲ್ಲಿ ಹೆಣಗಳು ಹೇಗೆ ತೇಲಿ ಬರುತ್ತವೆಂದು.."

ಸುಮಾರು ಎಂಬತ್ತೈದು ವರ್ಷದ ಆ ವ್ಯಕ್ತಿ ಧ್ಯಾನಸ್ಥ ಸ್ಥಿತಿಯಲ್ಲಿ ಬನಾರಸಿನ ಗಂಗಾ ನದಿಯ ದಡದಲ್ಲಿ ಕುಳಿತು ಹೇಳುವಾಗ ಆತನ ಎದುರಿಗೆ ಕುಳಿತಿದ್ದ ನನಗೆ ಫರ್ಲಾಂಗು ದೂರದಲ್ಲಿ ದಟ್ಟ ಹೊಗೆ ಏಳುತ್ತಿರುವುದು ಕಾಣಿಸಿತು. ಆತ ಬಹುಶಃ ಗಾಂಜಾ ಸೇವಿಸಿದ್ದಿರಬೇಕು ಅನ್ನಿಸಿತು ಆತನ ಕಣ್ಣುಗಳನ್ನು ಕಂಡು.

ಜೇಬಿನಿಂದ ನೂರು ರೂಪಾಯಿ ತೆಗೆದು ಆತನ ಕೈಗೆ ಕೊಟ್ಟಿದ್ದೆ. ಆತ ನಗುತ್ತಾ ಇಸಿದುಕೊಂಡು " ನೋಡಿ, ಅಲ್ಲಿ ಹೊಗೆ ಏಳುತ್ತಿದೆಯಲ್ಲ ಅದು ಮಣಿಕರ್ಣಿಕ ಘಾಟ್. ಅಲ್ಲೇ ಹೆಚ್ಚಾಗಿ ಹೆಣ ಸುಡುವುದು ಮತ್ತು ಶ್ರಾದ್ಧ ಕಾರ್ಯಗಳನ್ನು ಮಾಡುವುದು. ಕಾಶಿಯ ಗಂಗೆಯ ದಡದಲ್ಲಿ ಒಟ್ಟು ಎಂಬತ್ತೆಂಟು ಘಾಟ್ ಗಳಿವೆ. ಇವುಗಳನ್ನು ಹದಿನೆಂಟನೆಯ ಶತಮಾನದಲ್ಲಿ ಕಟ್ಟಿದ್ದಂತೆ. ಅವುಗಳ ಪೈಕಿ ಹೆಣಗಳನ್ನು ಸುಡುವುದು ಹರಿಶ್ಚಂದ್ರ ಘಾಟ್ ಮತ್ತು ಮಣಿಕರ್ಣಿಕ ಘಾಟ್ ಗಳಲ್ಲಿ ಮಾತ್ರ. ಮಣಿಕರ್ಣಿಕ ಘಾಟ್ ನಲ್ಲಿ ಹೆಣ ಸುಡುವುದು ಮತ್ತು ಪಿಂಡ ಬಿಡುವುದು ಅತ್ಯಂತ ಶ್ರೇಷ್ಠ ಎಂಬ ನಂಬಿಕೆ. ಆದರೆ ಗಂಗೆ ಅಲ್ಲಿ ಹರಿಯುವಾಗ ಇದ್ದಕ್ಕಿದ್ದಂತೆ ಹೇಗೆ ಪವಿತ್ರವಾಗುತ್ತಾಳೋ, ಶ್ರೇಷ್ಠಳಾಗುತ್ತಾಳೋ ಗೊತ್ತಿಲ್ಲ. ನೀವು ಅಲ್ಲಿಗೆ ಹೋಗಿ ಮಹದೇವನ ದಿವ್ಯದರ್ಶನವಾಗುತ್ತದೆ..‌." ಎಂದವನ ಮಾತುಗಳನ್ನು ಕಿವಿ ತುಂಬಿಕೊಂಡು ಮಣಿಕರ್ಣಿಕ ಘಾಟ್ ನ ಕಡೆ ಹೆಜ್ಜೆ ಹಾಕತೊಡಗಿದೆ.

ಬೆಂಗಳೂರಿನ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯಲ್ಲಿ ನನ್ನ ಪ್ರೀತಿಯ ಹೆಂಡತಿ ಚಂದ್ರಮಳು ಕಾರ್ಡಿಯಾಕ್ ಅರೆಸ್ಟ್ ಆಗಿ ಉಸಿರು ನಿಲ್ಲಿಸಿ ಅಸುನೀಗಿ ಇಂದಿಗೆ ಎಂಟು ದಿನಗಳು ಕಳೆದಿವೆ. ಮುವತ್ತಾರು ವರ್ಷಗಳ ಕಾಲ ಜೊತೆಗಿದ್ದು ನನ್ನ ಸರ್ವತೋಮುಖ ಏಳಿಗೆಗೆ ಕಾರಣಳಾಗಿದ್ದವಳ ದಿಡೀರ್ ಮತ್ತು ಅನಿರೀಕ್ಷಿತ ಮರಣ ನನ್ನ ಜಂಘಾಬಲವನ್ನೇ ಅಡಗಿಸಿರುವುದಲ್ಲದೆ ಅಖಂಡವಾದ ಏಕಾಂಗಿತನವನ್ನು ಹುಟ್ಟಿಸಿದೆ. ಹಾಗೆ ನೋಡಿದರೆ ನಾನು ಸಾವುಗಳನ್ನು ಬಹಳ ಹತ್ತಿರದಿಂದ ಕಂಡವನು. ಪಿಯುಸಿಯಲ್ಲಿರುವಾಗಲೇ ಗಂಟಲು ಕ್ಯಾನ್ಸರಿನಿಂದ ನರಳುತ್ತಿದ್ದ ನನ್ನ ತಾಯಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ನನ್ನ ತೊಡೆಯ ಮೇಲೆಯೇ ಪ್ರಾಣ ಬಿಟ್ಟಿದ್ದಳು. ಅದಾದ ಹತ್ತು ದಿನಗಳಲ್ಲಿ ನಮಗೆ ಗೆಳೆಯನಂತಿದ್ದ ನಮ್ಮ ದೊಡ್ಡಪ್ಪ ಸತ್ತಿದ್ದು.

ಸಾವಿನ ಅನಿಶ್ಚಿತತೆ ಮತ್ತು ಅನಿವಾರ್ಯತೆಗಳ ಬಗ್ಗೆ ಕಂತೆ ಕಂತೆ ಕಥೆಗಳನ್ನು ಬರೆದವನು. ಆದರೆ ದೇಹ ಮತ್ತು ಬದುಕನ್ನು ಹಂಚಿಕೊಂಡವರು ಸತ್ತಾಗ ಆಗುವ ಸಂಕಟದ ಸಾಕ್ಷಾತ್ಕಾರವೇ ಬೇರೆಯದಾಗಿರುತ್ತದೆ ಎಂಬ ಅನುಭವವಾದಾಗ ದ್ರವಿಸುವ ಸಂವೇದನೆಗಳನ್ನು ವ್ಯಾಖ್ಯಾನಿಸಲು ಜಗತ್ತಿನಲ್ಲಿ ಖಂಡಿತವಾಗಿಯೂ ಯಾರೊಬ್ಬರಿಗೂ ಬಹುಶಃ ಸಾಧ್ಯವಾಗುವುದಿಲ್ಲ.

ಒಂದೇ ಒಂದು ದಿನ ನನಗೆ ನೋವುಣಿಸಿದವಳಲ್ಲ, ಇಂಥದ್ದು ಬೇಕೆಂದು ಪೀಡಿಸಿದವಳಲ್ಲ. ನನ್ನ ಕಥಾನಕದ ವ್ಯಾಕರಣಕ್ಕೆ ಧಾತುವಾಗಿದ್ದವಳು. ನಾಲ್ಕು ವರ್ಷಗಳ ಹಿಂದೆ ಮಗ ಸಿರಿವೆನ್ನೆಲ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾಗಿ ತರಬೇತಿಗೆಂದು ಮೂರು ತಿಂಗಳು ಫರಿದಾಬಾದಿನಲ್ಲಿದ್ದಾಗ ದೆಹಲಿ, ಅಮೃತಸರ, ಆಗ್ರ, ಮಥುರಾ, ಕುರುಕ್ಷೇತ್ರ, ಹೃಷಿಕೇಶ ಮತ್ತು ಹರಿದ್ವಾರಗಳನ್ನು ಒಟ್ಟಿಗೆ ಸುತ್ತುವಾಗ ವಾರಣಾಸಿಗೆ ಹೋಗಬೇಕಿತ್ತೆಂದು ಹಪಹಪಿಸಿದ್ದಳು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಆಗ ಹೋಗಲಿಕ್ಕಾಗಿರಲಿಲ್ಲ. ಈಗ ಅವಳಿಲ್ಲದೆ ವಾರಣಾಸಿಗೆ ಒಬ್ಬಂಟಿಯಾಗಿ ಹೊರಟು ಬಂದಿದ್ದೆ ಕರುಳಲ್ಲಿ ಇನ್ನಿಲ್ಲದ ಸಂಕಟವನ್ನು ತುಂಬಿಕೊಂಡು. ಇದು ಜಗತ್ತಿನ ಪುರಾತನ ನಗರಗಳಲ್ಲಿ ಒಂದಂತೆ. ಕಾಶಿ, ಬನಾರಸ್, ವಾರಣಾಸಿ ಎಂದು ಕರೆಯಲ್ಪಡುವ ಈ ಊರಿನಲ್ಲಿ ಗಂಗಾ ನದಿಯ ದಡದ ಮೇಲೆ ಕಾಶಿ ವಿಶ್ವನಾಥ ನೆಲೆಯೂರಿದ್ದಾನೆ. ಹಿಂದೂ ಬನಾರಸ್ ಯೂನಿವರ್ಸಿಟಿ ಎಂಟು ಕಿಲೋಮೀಟರ್ ಆವರಣದಲ್ಲಿ ಹರಡಿಕೊಂಡಿದೆ. ಹಿಂದೆ ಅತ್ಯಂತ ಗಲೀಜು ನಗರವಾಗಿತ್ತೆಂದು ಹೇಳಲಾಗುತ್ತಿದ್ದ ಕಾಶಿ ಇಂದು ಸ್ವಚ್ಛತೆಯಿಂದ ಕಂಗೊಳಿಸುತ್ತಿದೆ. ಗಿಜಿಗುಡುವ ಜನಸಂಖ್ಯೆ. ಮಾಸ್ಕ್ ಧರಿಸಿದವರು ಎಲ್ಲೋ ಅಪರೂಪ. ಹೋಟೆಲೊಂದರಲ್ಲಿ ಕ್ಯಾಶಿಯರ್ ನನ್ನು ಆ ಬಗ್ಗೆ ವಿಚಾರಿಸಿದಾಗ " ಇಲ್ಲಿ ಕೊರೊನಾನೂ ಇಲ್ಲ, ಒಮಿಕ್ರಾನೂ ಇಲ್ಲ. ನಮ್ಮ ವಿಶ್ವನಾಥ ಮತ್ತು ಗಂಗೆ ಇರುವವರೆಗೂ ಯಾರೂ ಈ ನಗರವನ್ನು ಏನೂ ಮಾಡಲಾರರು.." ಎಂದು ಮಾರ್ಮಿಕವಾಗಿ ನಕ್ಕಿದ್ದ. ಸಣ್ಣಪುಟ್ಟ ಹೋಟೆಲಿನವರು, ರಿಕ್ಷಾದವರು, ಸೈಕಲ್ ರಿಕ್ಷಾದವರು ಮೋಸ ಮಾಡುವುದು ತುಂಬಾ ಕಮ್ಮಿ. ಭಿಕ್ಷುಕರಂತೂ ವಿಪರೀತವೆನಿಸುವಷ್ಟು ಇದ್ದಾರೆ. ಎಪ್ಪತ್ತು ವರ್ಷ ವಯಸ್ಸು ಮೀರಿದವರು ಕೂಡಾ ಸೈಕಲ್ ರಿಕ್ಷಾ ತುಳಿಯುವುದನ್ನು ನೋಡಿದರೆ ಇಲ್ಲಿನ ಬಡತನವನ್ನು ಅಂದಾಜು ಮಾಡಬಹುದು. ಹೋಟೆಲ್ ನವನ ಮಾತುಗಳಿಂದ ನನಗೆ ಬೆಂಗಳೂರಿನ ನಗರ ದೇವತೆ ಅಣ್ಣೆಮ್ಮ ತಾಯಿ ನೆನಪಾದಳು. ನಗರದ ಮಧ್ಯಭಾಗದಲ್ಲಿ ನೆಲೆಸಿರುವ ಅಣ್ಣೆಮ್ಮ ತಾಯಿಯೇಕೆ ಕೊರೊನಾದಿಂದ ಸತ್ತ ಸಾವಿರಾರು ಜನರನ್ನು ಉಳಿಸಲು ಪ್ರಯತ್ನ ಪಡಲಿಲ್ಲವೋ ? ಬಹುಶಃ ಆಕೆಗೆ ಬೆಂಗಳೂರಿನ ಜನರ ಮೇಲೆ ಮುನಿಸು ಬಂದಿತ್ತೇನೋ. ಮುವತ್ತಾರು ವರ್ಷಗಳ ಹಿಂದೆ ನನ್ನ ಹೆಂಡತಿಯೆಂಬ ಪ್ರೇಯಸಿಗೆ ತಾಳಿ ಕಟ್ಟಿದ್ದು ಇದೇ ಅಣ್ಣೆಮ್ಮ ದೇವಿಯ ದೇವಸ್ಥಾನದಲ್ಲೇ ಅದೂ ರಾತ್ರಿ ಒಂಬತ್ತೂವರೆ ಗಂಟೆಯಲ್ಲಿ. ಐದಾರು ಜನ ಸ್ನೇಹಿತರು ಮತ್ತು ಸಹೋದರರ ಜೊತೆ ಮುತ್ತೈದೆಯಾಗಿ ಇದ್ದವರು ನ್ಯಾಶನಲ್ ಟ್ರಾವೆಲ್ಸ್ ಮುಂದೆ ವಡೆ, ಬೊಂಡ ಹಾಕುತ್ತಿದ್ದ ಪಾರ್ವತಮ್ಮನೋ, ಗಿರಿಜಮ್ಮನೋ... ಹೆಸರು ಮರೆತುಹೋಗಿದೆ. ನನ್ನ ಚಂದ್ರಮಳ ಶವವನ್ನು ನಾನು ಹೂಳಲೂ ಇಲ್ಲ, ಸುಡಲೂ ಇಲ್ಲ. ಗೌರ್ಮೆಂಟ್ ಮೆಡಿಕಲ್ ಕಾಲೇಜಿಗೆ ಡೊನೇಟ್ ಮಾಡಿಬಿಟ್ಟೆ. ತಿಥಿಯೂ ಮಾಡಲಿಲ್ಲ. ಅವಳ ಸಾವೆಂದೂ ನನಗೆ ಸೂತಕವಲ್ಲವೇ ಅಲ್ಲ.

ಹಳೆಯ ನೆನಪುಗಳಿಂದಲೋ ಅಥವಾ ಹೊಗೆ ಕಣ್ಣುಗಳಿಗೆ ನುಗ್ಗಿದ್ದರಿಂದಲೋ ಕಣ್ಣುಗಳ ತುಂಬಾ ನೀರು ತುಂಬಿಕೊಂಡು ಹೆಜ್ಜೆಗಳು ಸ್ಥಬ್ಧಗೊಂಡಿದ್ದವು. ನಾನು ಮಣಿಕರ್ಣಿಕ ಘಾಟ್ ನ ತೀರಾ ಹತ್ತಿರಕ್ಕೆ ಬಂದು ನಿಂತಿದ್ದೆ. ಜನವೋ ಜನ. " ಹರಹರ ಮಹದೇವ್.." " ರಾಮ್ ನಾಮ್ ಸತ್ಯ್ ಹೈ.." ಎಂಬ ಘೋಷಣೆಗಳೊಂದಿಗೆ ಐದು ನಿಮಿಷಕ್ಕೊಂದೊಂದು ಹೆಣವನ್ನು ಹೊತ್ತು ತರುತ್ತಿದ್ದ ಜನ. ರಾಶಿ ರಾಶಿ ಸೌದೆಗಳನ್ನು ಗುಡ್ಡೆ ಹಾಕಿಕೊಂಡು ಮಾರುತ್ತಿರುವ ವ್ಯಾಪಾರಿಗಳು, ಶೃಂಗರಿಸಿದ ಹೆಣಗಳನ್ನು ಹೊತ್ತು ತಂದು ಮೊದಲು ಗಂಗೆಯಲ್ಲಿ ಮೂರು ಬಾರಿ ಮುಳುಗಿಸಿ ದಡದಲ್ಲಿ ಇರುವ ಚಿತೆಗಳ ಮೇಲೆ ಮಲಗಿಸಲಾಗುತ್ತಿತ್ತು. ನಂತರ ಹೆಣಕ್ಕೆ ಸಂಬಂಧಪಟ್ಟವರೊಬ್ಬರು ಚಿತೆಗೆ ಅಗ್ನಿ ಸ್ಪರ್ಶ ಮಾಡುತ್ತಿದ್ದರು. ನನ್ನ ಎದುರಿಗೆ ಹತ್ತನ್ನೆರಡು ಶವಗಳು ಪಕ್ಕ ಪಕ್ಕದಲ್ಲೇ ಉರಿಯುತ್ತಿದ್ದವು. ಅಲ್ಲಿ ಅಳುತ್ತಿರುವವರು ಯಾರೂ ನನ್ನ ಕಣ್ಣಿಗೆ ಬಿದ್ದಿರಲಿಲ್ಲ. ಹೆಣಗಳ ಮೇಲೆ ಇರುತ್ತಿದ್ದ ರಾಶಿ ರಾಶಿ ಹೂಗಳನ್ನು ದೋಣಿಗಳಲ್ಲಿ ಸಾಗಿಸುತ್ತಿದ್ದರು ಕೆಲವರು. ಹೆಣಗಳ ಪಕ್ಕದಲ್ಲೇ ನಗು ನಗುತ್ತಾ ಗಂಗೆಯಲ್ಲಿ ಮುಳುಗೇಳುತ್ತಿದ್ದ ಜನಕ್ಕೇನೂ ಕಡಿಮೆಯಿರಲಿಲ್ಲ. ಹೆಣ ಸುಡುವವರು, ಪಂತಲುಗಳು, ಯಾತ್ರಿಗಳು ಒಬ್ಬರೊಂದಿಗೊಬ್ಬರು ಕುಶಲ ಮಾತುಕತೆಯಲ್ಲಿ ತೊಡಗಿರುವ ದೃಶ್ಯಗಳು ಸಾಮಾನ್ಯವಾಗಿದ್ದವು. ಅಲ್ಲೇ ಹೋಟೆಲ್ ಗಳು. ಹೆಣಗಳ ಮುಂದೆಯೇ ತಿಂಡಿ ತಿನ್ನುತ್ತಿದ್ದವರು, ಕಾಪಿ, ಚಹಾ ಕುಡಿಯುತ್ತಿದ್ದವರು, ಹಣ್ಣು ತಿನ್ನುತ್ತಿದ್ದವರು, ಪಾನ್ ಹಾಕುತ್ತಿದ್ದವರು... ಓಹ್ ! ಅಂಥ ದೃಶ್ಯಗಳನ್ನು ನಾನೆಂದೂ ಈ ಹಿಂದೆ ಕಣ್ಣು ತುಂಬಿಸಿಕೊಂಡಿರಲಿಲ್ಲ. ಸಾವು ಮತ್ತು ಬದುಕು ಎಷ್ಟು ಸುಂದರವಾಗಿ ಈ ಮಣಿಕರ್ಣಿಕ ಘಾಟ್ ನಲ್ಲಿ ಅನುಸಂಧಾನಗೊಂಡಿವೆ. ದಡದ ಮೆಟ್ಟಿಲುಗಳ ಮೇಲೆ ಕುಳಿತು ಇಪ್ಪತ್ತು ನಿಮಿಷಗಳ ಕಾಲ ವಿಸ್ಮಯಕಾರಕ ದೃಶ್ಯಗಳನ್ನು ಕಣ್ಣು ತುಂಬಿಸಿಕೊಳ್ಳುತ್ತಿದ್ದೆ. ಹೆಣಗಳನ್ನು ಹೊತ್ತು ಹೊತ್ತು ಸುಸ್ತಾಗಿದ್ದ ಅರವತ್ತು ಆಸುಪಾಸಿನ ಹರೆಯದ ವ್ಯಕ್ತಿಯೊಬ್ಬರು ಬಂದು ನನ್ನ ಪಕ್ಕ ಕುಳಿತು ಚಹ ಕುಡಿಯುತ್ತಿದ್ದರು. " ದಿನಕ್ಕೆ ಎಷ್ಟು ಶವಗಳು ಬರುತ್ತವೆ.." ಕೇಳಿದ್ದೆ. ಆತ ಹನ್ಸ್ ಪಾಕಿಟನ್ನು ಹರಿದು ಬಾಯಿಗೆ ಹಾಕಿಕೊಂಡು " ನಾವಿಲ್ಲಿ ಹೆಣಗಳನ್ನು ಲೆಕ್ಕ ಮಾಡುವುದಿಲ್ಲ ಸಾಬ್. ವಾರದ ಹಿಂದೆ ದಿಲ್ಲಿಯಿಂದ ಶೇಟ್ ಜಿ ಒಬ್ಬರು ತಮ್ಮ ತಂದೆಯನ್ನು ವೆಂಟಿಲೇಟರ್ ನಲ್ಲಿರಿಸಿಕೊಂಡೇ ಡಾಕ್ಟರುಗಳ ಸಮೇತ ಆಂಬ್ಯುಲೆನ್ಸ್ ನಲ್ಲಿ ತಂದಿದ್ದರು. ರಸ್ತೆಯಿಂದ ವೆಂಟಿಲೇಟರ್ ನೊಂದಿಗೆ ಇಲ್ಲಿಗೆ ಸಾಗಿಸಿಕೊಂಡು ಬರಲು ಎಷ್ಟು ಕಷ್ಟ ಆಯ್ತು ಗೊತ್ತಾ. ಇಲ್ಲಿಗೆ ತಂದು ವೆಂಟಿಲೇಟರ್ ತೆಗೆಯಲಾಯಿತು. ವೆಂಟಿಲೇಟರ್ ತೆಗೆದ ಎರಡು ನಿಮಿಷಗಳಲ್ಲಿ ಪ್ರಾಣ ಪಕ್ಷಿ ಹಾರಿಹೋಗಿತ್ತು. ತನ್ನ ಅಪ್ಪ ಗಂಗೆಯ ಮಡಿಲಲ್ಲಿ ಸತ್ತದ್ದಕ್ಕೆ ಆ ಶೇಟ್ ಜಿಯ ಮುಖದಲ್ಲಿ ಖುಷಿ ಮತ್ತು ಸಂತೃಪ್ತಿಯನ್ನು ನೋಡಬೇಕಿತ್ತು. ಹೆಣ ಸಂಸ್ಕಾರದ ನಂತರ ಶೇಟ್ ಜಿ ಹೋಗುವಾಗ ಹೆಣ ಹೊತ್ತವರಿಗೆ ತಲಾ ಹತ್ತತ್ತು ಸಾವಿರ ಕೊಟ್ಟು ಹೋಗಿದ್ದ. ಗಂಗೆ ಹರಿಯುವವರೆಗೂ, ನಮಗೆ ಸಾವು ಬರುವವರೆಗೂ ನಮ್ಮ ಮತ್ತು ನಮ್ಮ ಕುಟುಂಬಗಳ ಬದುಕಿಗೇನೂ ಭಂಗವಿಲ್ಲ. ಗಂಗೆಯ ಸೀಮೆಯಲ್ಲಿ ಹುಟ್ಟಿರುವುದು ನಮ್ಮ ಪುಣ್ಯವೇ ಸರಿ.‌‌.." ಎಂದು ಆತ ಹೇಳುತ್ತಿರುವಾಗಲೇ ಮತ್ತೊಂದು ಹೆಣ ಬಂದಿತ್ತು. ಆತ ಧಡಕ್ಕನೆ ಎದ್ದು " ಹರ ಹರ ಮಹದೇವ್.. " ಎನ್ನುತ್ತಾ ಹೆಣಕ್ಕೆ ಹೆಗಲು ಕೊಟ್ಟಿದ್ದ. ಆ ಕ್ಷಣ ನನ್ನ ಹೆಂಡತಿ ಚಂದ್ರಮಳನ್ನು ಬದುಕಿದ್ದಾಗ ಇಲ್ಲಿಗೆ ಕರೆದು ತರಬೇಕಿತ್ತು ಅನ್ನಿಸಿತ್ತು. ಅವಳು ಇದೆಲ್ಲವನ್ನೂ ನೋಡಿದ್ದರೆ ಏನೂ ಹೇಳುತ್ತಿದ್ದಳೆಂಬುದನ್ನು ನಾನು ಊಹಿಸಿಕೊಳ್ಳಬಲ್ಲವನಾಗಿದ್ದೆ. ಏಕೆಂದರೆ ಈ ಮುವತ್ತಾರು ವರ್ಷಗಳ ಒಡನಾಟದಲ್ಲಿ ಒಬ್ಬರ ಮನಸ್ಸನ್ನೊಬ್ಬರು ಓದುವುದನ್ನು ಕಲಿತಿದ್ದೆವು. " ನಡಿಯಪ್ಪ ಸಾಕು ಈ ವಾರಣಾಸಿಯ ಸಹವಾಸ. ಮುಕ್ತಿನೂ ಬೇಡ, ಪುಣ್ಯಾನೂ ಬೇಡ..." ಎಂದು ಖಂಡಿತವಾಗಿಯೂ ಗಂಗೆಯಲ್ಲಿ ಸ್ನಾನ ಕೂಡಾ ಮಾಡಿಸದೆ ನನ್ನನ್ನು ಕೈ ಹಿಡಿದು ಎಳೆದುಕೊಂಡು ಹೋಗುತ್ತಿದ್ದದ್ದು ಗ್ಯಾರಂಟಿ. ಮೊಣಕಾಲು ಮುಳುಗುವವರೆಗೂ ಗಂಗೆಯಲ್ಲಿ ಇಳಿದವನು ತಲೆಗೊಂದಿಷ್ಟು ನೀರು ಚಿಮುಕಿಸಿಕೊಂಡು ನಡೆದು ಬಂದಿದ್ದೆ. ಹೃದಯ ಮನಸ್ಸುಗಳು ಬಾರವಾಗಿದ್ದವು. ಬನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ಅನಾಟಮಿ ಪ್ರೊಫೆಸರ್ ಒಬ್ಬರು ಮನುಷ್ಯನ ಆತ್ಮಗಳ ಬಗ್ಗೆ ವಿಪರೀತ ಅಧ್ಯಯನ ಮಾಡಿರುವರೆಂದು ಯಾರೋ ಹೇಳಿದ್ದರಿಂದ ಸಾಧ್ಯವಾದಲ್ಲಿ ನಾಳೆ ಅವರನ್ನು ಪತ್ತೆ ಹಚ್ಚಿ ಅವರೊಂದಿಗೆ ಒಂದು ಗಂಟೆ ಕಾಲ ಮಾತನಾಡಿಕೊಂಡು ಮತ್ತೂ ಸಾಧ್ಯವಾದಲ್ಲಿ ನನ್ನ ಹೆಂಡತಿಯ ಆತ್ಮದೊಂದಿಗೆ ಒಂದೆರಡು ಮಾತುಗಳನ್ನು ಆಡಲು ಸಾಧ್ಯವಾಗುವುದಾದರೆ... ಎಂಬ ದೂರದ ಆಸೆಯಿಂದ ಅಲ್ಲಿಂದ ಕಾಲು ತೆಗೆಯತೊಡಗಿದೆ ಗಂಗೆ ಮತ್ತು ಸುಡುವ ಹೆಣಗಳನ್ನು ಹಿಂದಿಕ್ಕಿ. ಅದ್ಭುತ ಹಾಡುಗಾರ್ತಿಯಾಗಿದ್ದ ನನ್ನ ಹೆಂಡತಿ ಆಗಾಗ ಹಾಡುತ್ತಿದ್ದ " ತಲ್ಲಣಿಸದಿರು ಕಂಡ್ಯ ತಾಳು ಮನವೆ ಎಲ್ಲರನು ಸಲುಹುವನು ಇದಕೆ ಸಂಶಯವಿಲ್ಲ... " ಎಂಬ ಹಾಡು ಅಲೆಅಲೆಯಾಗಿ ನನ್ನ ಕಿವಿ, ಎದೆ, ಹೃದಯಗಳನ್ನು ತುಂಬಿಕೊಳ್ಳತೊಡಗಿತ್ತು.

 29 - 01- 2022

ಸರ್ಕ್ಯೂಟ್ ಹೌಸ್

ವಾರಣಾಸಿ