ಮಧುಗಿರಿ ಹೈಸ್ಕೂಲು ಸೇರಿದ ಬಳಿಕ ನಾಗರಹಾವಿನ ಆಶೀರ್ವಾದ !? (ಹಿಂದಿನ ‘ಕಿನ್ನರಿ’ಯಿಂದ)

ಮಧುಗಿರಿ ಹೈಸ್ಕೂಲು ಸೇರಿದ ಬಳಿಕ ನಾಗರಹಾವಿನ  ಆಶೀರ್ವಾದ !?   (ಹಿಂದಿನ ‘ಕಿನ್ನರಿ’ಯಿಂದ)

ನನ್ನ ಕಾಲಪಕ್ಕದಲ್ಲಿ ಸೊರಸೊರ ತದನಂತರ ನನ್ನ ಎರಡೂ ಕಾಲಿನ ಪಾದಗಳ ಮೇಲೆ ಏನೋ ಹರಿದಾಡುವಂತೆ ಬಾಸವಾಯಿತು. ಫಕ್ಕನೆ ಹಾಡು ನಿಲ್ಲಿಸಿ ಕೆಳಕ್ಕೆ ನೋಡೇನೆ ಸುಮಾರು 5 ಅಡಿ ಉದ್ದದ ನಾಗರ ಹಾವು ನನ್ನ ಪಾದಗಳ ಮೇಲೆ ಪ್ರಶಾಂತವಾಗಿ ಹರಿಯುತ್ತಿದೆ. ನನಗೆ ಮೈ ಎಲ್ಲಾ ಬೆವೆತುಹೋಯ್ತು. ಎದೆ ಕಂಪಿಸಿದಂತಾಯ್ತು, ಸಲಿಕೆಯನ್ನು ಅಲ್ಲೇ ಬಿಟ್ಟು ಊರ ಕಡೆ ಫೇರಿ ಕಿತ್ತೆ,


ಮಧುಗಿರಿ ಹೈಸ್ಕೂಲು ಸೇರಿದ ಬಳಿಕ ನಾಗರಹಾವಿನ

ಆಶೀರ್ವಾದ !?


(ಹಿಂದಿನ ‘ಕಿನ್ನರಿ’ಯಿಂದ)


ಬಡವನಹಳ್ಳಿಯ NTM  ಸ್ಕೂಲಿನಿಂದ ಅಂಕಪಟ್ಟಿ ಮತ್ತು ಟಿಸಿ ಎರಡನ್ನೂ ಒಂದು ದಿನ, ಸ್ನೇಹಿತರೆಲ್ಲ ಹೋಗಿ ತಂದೆವು. ಅಂಕಪಟ್ಟಿಯ ಪ್ರಕಾರ ನನಗೆ ಇಂಗ್ಲಿಷ್‌ನಲ್ಲಿ - 78/100, ಕನ್ನಡದಲ್ಲಿ – 75/100, ಚರಿತ್ರೆ, ಭೂಗೋಳ - 68/100, ಸಾಮಾಜಿಕ (social studies) - 65/100, ವಿಜ್ಞಾನ 52/100, ಗಣಿತ 40/100, ಒಟ್ಟು - 378/600 ಬಂದಿದ್ದವು. I First classನಲ್ಲಿ ಪಾಸಾಗಿದ್ದೆ.


ಮನೆಯಲ್ಲಿ ಅಪ್ಪ, ಅಮ್ಮ, ಅಕ್ಕ ಮೂವರೂ ಸೇರಿ ನನ್ನನ್ನು ಮಧುಗಿರಿಯ ಸರ್ಕಾರಿ ಪ್ರೌಢಶಾಲೆಗೆ ಸೇರಿಸಲು ತೀರ್ಮಾನಿಸಿದರು. ಅದರಂತೆ ಒಂದು ದಿನ ಬೆಳಿಗ್ಗೆ ತಂದೆಯವರ ಜತೆ ತಿಪ್ಪನಹಳ್ಳಿಯಿಂದ ಸಿದ್ದೇಶ್ವರ ಬಸ್‌ನಲ್ಲಿ ಮಧುಗಿರಿಗೆ ಪ್ರಯಾಣ ಮಾಡಿ, 10 ಗಂಟೆ ಹೊತ್ತಿಗೆ ಸ್ಕೂಲ್ ಹತ್ತಿರ ಹೋದೆವು. ಪ್ರವೇಶ ಪಡೆಯಲು ಒಂದು ದೊಡ್ಡ ಕ್ಯೂ ಇರುವುದನ್ನು ಕಂಡು, 'ನಾನು ಕ್ಯೂನಲ್ಲಿ ನಿಂತುಕೊಳ್ಳುತ್ತೇನೆ. ನೀನು ನೆರಳಿನಲ್ಲಿ ಎಲ್ಲಾದರೂ ಕೂತಿರು' ಅಂದೆ ಅಪ್ಪನಿಗೆ. ಅವರು 'ಇದು ಲೇಟಾಗಬಹುದು, ನಾನು ಅಡಿಕೆ ಮಂಡಿ ಕೇಶವಯ್ಯನನ್ನು ನೋಡಿಕೊಂಡು ಬರ್ತೇನೆ. ಸ್ವಲ್ಪ ಬಾಕಿ ಇಟ್ಕೊಂಡೌವ್ನೆ, ವಸೂಲು ಮಾಡಿಕೊಂಡು ಬರ್ತೇನೆ' ಎಂದು ಮಂಡಿಪೇಟೆ ಕಡೆ ಹೊರಟರು.


ಬಿಸಿಲಲ್ಲಿ ಕ್ಯೂನಲ್ಲಿ ನಿಂತು ತಲೆ ತಿರುಗುವಂತಾಗಿತ್ತು. ಅಂತೂ ಇಂತೂ ಮಧ್ಯಾಹ್ನ 1 ಗಂಟೆಗೆ ನನ್ನ ಸರತಿ ಬಂತು. ಶಾಲಾ ದಾಖಲೆಗಳನ್ನೆಲ್ಲಾ ಪಡೆದು ಪರಿಶೀಲನೆ ಮಾಡಿದ ನಂತರ 'ನಿಮ್ಮ ತಂದೆ ಏನಾದರೂ ಬಂದಿದ್ದಾರಾ' ಎಂದು ಗುಮಾಸ್ತರು ಕೇಳಿದರು. ಅಷ್ಟರಲ್ಲಿ ಮಂಡಿಯಿAದ ಹಿಂದಿರುಗಿದ್ದ ತಂದೆಯವರು 'ಇದ್ದೀನಿ ಸಾರ್' ಎಂದರು. ಅವರ ಸಹಿಯೊಂದನ್ನು ರಿಜಿಸ್ಪರ್‌ಗೆ ಮಾಡಿಸಿಕೊಂಡು ಒಂದು ವಾರದ ನಂತರ ಕ್ಲಾಸ್ ಆರಂಭವಾಗುತ್ತೆ, ನಿಮಗೆ ಯಾವ optional subject ಬೇಕು ಅಂದರು ನನ್ನ ಕಡೆ ನೋಡಿ, 'ಸೈನ್ಸ್ ಕೊಡಿ' ಎಂದೆ. ನನ್ನ ಅಂಕಪಟ್ಟಿ ಪರೀಕ್ಷಿಸಿದ ಅವರು ನಿನಗೆ ವಿಜ್ಞಾನ ಮತ್ತು ಗಣಿತ ಎರಡರಲ್ಲೂ ಕಡಿಮೆ ಮಾರ್ಕ್ಸ್ ಬಂದಿದೆ. ಅದು ಬಿಟ್ಟು ಬೇರೆ ಆಯ್ಕೆ ಮಾಡಿಕೋ' ಅಂದರು. 'ನೀವೇ ಹೇಳಿ ಸಾರ್' ಎಂದೆ. 'History, Hindi  ತಕ್ಕೋ' ಅಂದರು. Optionalನ ಪ್ರಾಮುಖ್ಯತೆ ನನಗೆ ಗೊತ್ತಿಲ್ಲವಾಗಿ ಅವರು ಕೊಟ್ಟಿದ್ದನ್ನು ನಾನು ತೆಗೆದುಕೊಂಡೆ. ಫೀಸನ್ನು ತಂದೆಯವರು ಪಾವತಿಸಿದ ನಂತರ ಸ್ಕೂಲ್ ಎದುರೇ ಇದ್ದ ಕೃಷ್ಣ ಭವನದಲ್ಲಿ ತಿಂಡಿ ತಿಂದು ಊರ ಬಸ್ ಹತ್ತಿದೆವು.


ಊರಿಗೆ ಬಂದ ಮೇಲೆ ಫಕೃದ್ದೀನ್ ಮನೆಗೆ ಹೋದೆ. ಅವನು ಅಳುತ್ತಾ ಮೂಲೆಯಲ್ಲಿ ಕೂತಿದ್ದ. ಯಾಕೋ, ಹೈಸ್ಕೂಲಿಗೆ ಸೇರಲ್ವಾ?' ಅಂದೆ. 'ನಮ್ಮಪ್ಪ ಬೇಡ ಅಂತಿದ್ದಾರೆ' ಅಂದ. ಅಷ್ಟರಲ್ಲಿ ಅವರ ತಂದೆ ಬಂದು ಏನಪ್ಪ ಮಧುಗಿರಿ ಐಸ್ಕೂಲ್‌ಗೆ ಸೇರಿದ್ಯಂತೆ. ನಾವು ಬಡವರು, ಎಲ್ಲಪ್ಪಾ ಕಳಿಸೋಕಾಗುತ್ತೆ, ಅದೇ ನಿನ್ನೆಯಿಂದ ಊಟ ಬಿಟ್ಟು ಫಕ್ರು ಅಳ್ತಾ ಇದಾನೆ' ಅಂದರು. ಅವನನ್ನು ಸಮಾಧಾನ ಮಾಡಿ ಮನೆಗೆ ಬಂದೆ.


ತಿಪ್ಪನಹಳ್ಳಿಯ ಗದ್ದೆ-ತೋಟಗಳಿಗೆ ರಂಗಾಪುರದ ಕೆರೆಯಿಂದ ಬೇಸಿಗೆಯಲ್ಲಿ ನೀರು ಹರಿಸುತ್ತಿದ್ದರು. ಜತೆಗೆ ಬಾವಿಗಳಲ್ಲಿ ಮೇಲೆಯೇ ನೀರಿದ್ದು ಕಪಿಲೆಗಳ ಮೂಲಕ, ಏತಗಳ ಮೂಲಕ ನೀರೆತ್ತಿ ಭತ್ತದ ಗದ್ದೆಗೆ, ಅಡಿಕೆ ತೋಟಗಳಿಗೆ ಹರಿಸುತ್ತಿದ್ದರು. ನೀರನ್ನು ಎಲ್ಲರಿಗೂ ಕ್ರಮಬದ್ಧವಾಗಿ ಹರಿಸುವಂತೆ ನೋಡಿಕೊಳ್ಳಲು ನಾಯಕರ ಹಳ್ಳೆಪ್ಪನನ್ನು ನೀರಗಂಟಿ ಎಂದು ಸರ್ಕಾರದವರು ನೇಮಿಸಿದ್ದರು. ಅವರು ಊರ ಗೌಡನ ಆಡಳಿತಕ್ಕೆ ಒಳಪಟ್ಟು ಕೆಲಸ ಮಾಡುತ್ತಿದ್ದರು.


ನಾಗರ ಹಾವಿನ ಆಶೀರ್ವಾದ


ಹೈಸ್ಕೂಲಿಗೆ ಪ್ರವೇಶ ತೆಗೆದುಕೊಂಡು ಬಂದ ಮಾರನೇ ದಿನ ನಮ್ಮ ಮುಡುಪಯ್ಯನ ಅಡಿಕೆ ತೋಟದಲ್ಲಿ, ನಮ್ಮ ಪಾಲಿನ ನೀರನ್ನು ಹರಿಸಿ ಪ್ರತೀ ಮಡೆಗೂ ಸಲಿಕೆಯಿಂದ ನೀರು ತಿರುವಿ ಹಾಕುವ ಕೆಲಸ ಮಾಡುತ್ತಿದ್ದೆ. ತೋಟದ ಮಧ್ಯೆ ಒಂದು ಅಂಚಿನಲ್ಲಿ ಎರಡು, ಮೂರು ದೈತ್ಯಾಕಾರದ ಹಲಸಿನ ಗಿಡಗಳಿದ್ದವು. ಬೇಸಿಗೆಯಲ್ಲಿ ಹಲಸಿನ ಮರದಿಂದ, ಎಲೆಗಳೆಲ್ಲಾ ಕೆಳಗೆ ಉದುರಿ ಅಡಿಕೆ ತೋಟದ ತುಂಬ ಹರಡಿಕೊಂಡಿದ್ದರೂ, ಬೇಸಿಗೆಯ ತಾಪಕ್ಕೆ ಭೂಮಿ ತಂಪಾಗಿರಲಿ ಎಂದು ತರಗೆಲೆಗಳನ್ನು ಹಾಗೆಯೇ ಬಿಟ್ಟು ಅವು ಅಲ್ಲಿಯೇ ಕೊಳೆತು ಗೊಬ್ಬರವಾಗುವಂತೆ ನೋಡಿಕೊಳ್ಳುತ್ತಿದ್ದೆ. ಮಧ್ಯಾಹ್ನ ಸುಮಾರು 12 ಗಂಟೆ ಸಮಯ, ಕೆರೆಯ ನೀರು ಅಷ್ಟೇನು ರಭಸವಾಗಿ ಹರಿಯುತ್ತಿರಲಿಲ್ಲವಾದರೂ ನೀರು ಹಲಸಿನ ತರಗೆಲೆಗಳ ಮೂಲಕ ಹರಿಯುತ್ತಿದ್ದುದರಿಂದ ಸೊರಸೊರ ಎಂಬ ಶಬ್ದ ಬರುತ್ತಿತ್ತು. ನಾನು ಪಕ್ಕದ ಬದುವಿನ ಮೇಲೆ ಕುಳಿತುಕೊಂಡು 'ಮನ ಡೋಲೆ ಮೇರೆ ತನ ಡೋಲೆ' ಎಂದು ನಾಗಿನ್ ಚಿತ್ರದ ಹಾಡನ್ನು, ಓಹಿಲೇಶ್ವರ ಚಿತ್ರದಲ್ಲಿ ಘಂಟಸಾಲ ಹಾಡಿದ 'ಈ ದೇಹದಿಂದ ದೂರನಾದೆ ಏಕೆ ಆತ್ಮನೆ' ಎಂಬ ಹಾಡನ್ನು ಸುಶ್ರಾವ್ಯವಾಗಿ ಹಾಡುತ್ತ ಮೈಮರೆತಿದ್ದೆ. ಮತ್ತೆ ನನ್ನ ಕಾಲಪಕ್ಕದಲ್ಲಿ ಸೊರಸೊರ ತದನಂತರ ನನ್ನ ಎರಡೂ ಕಾಲಿನ ಪಾದಗಳ ಮೇಲೆ ಏನೋ ಹರಿದಾಡುವಂತೆ ಬಾಸವಾಯಿತು. ಫಕ್ಕನೆ ಹಾಡು ನಿಲ್ಲಿಸಿ ಕೆಳಕ್ಕೆ ನೋಡೇನೆ ಸುಮಾರು 5 ಅಡಿ ಉದ್ದದ ನಾಗರ ಹಾವು ನನ್ನ ಪಾದಗಳ ಮೇಲೆ ಪ್ರಶಾಂತವಾಗಿ ಹರಿಯುತ್ತಿದೆ. ನನಗೆ ಮೈ ಎಲ್ಲಾ ಬೆವೆತುಹೋಯ್ತು. ಎದೆ ಕಂಪಿಸಿದಂತಾಯ್ತು, ಸಲಿಕೆಯನ್ನು ಅಲ್ಲೇ ಬಿಟ್ಟು ಊರ ಕಡೆ ಫೇರಿ ಕಿತ್ತೆ, ತಿಗಳರ ಸಂಜೀವಣ್ಣನ ಹೂವಿನ ತೋಟ ಹಾದು ಚಿಗರಂಗಪ್ಪನ ಸೊಪ್ಪಿನ ತೋಟದ ಮಧ್ಯೆಯೇ ಓಡಿ ಐದು ನಿಮಿಷದಲ್ಲಿ ಮನೆ ಸೇರಿದೆ. ಮನೆಯ ಹಜಾರದಲ್ಲಿ ತಂದೆಯವರ ಜತೆ ರಂಗನಾಯ್ಕ ಮತ್ತಿತರರು ಸಭೆ ಸೇರಿದ್ದರು. ಓಡಿ ಬಂದ ರಭಸ ನೋಡಿ ತಂದೆಯವರು 'ಏನಾಯ್ರೋ ಯಾಕೆ ಹಿಂಗೆ ಓಡಿ ಬಂದೆ ಎಂದು ಒಂದೇ ಸಮನೆ ಪ್ರಶ್ನಿಸುತ್ತಿದ್ದರು. ರಂಗನಾಯ್ಕ ಅವರು ನನ್ನನ್ನು ಕೂರಿಸಿ ಉಪಚರಿಸಿದರು. ಅಷ್ಟರಲ್ಲಿ ಅಕ್ಕ ಹೊರಗೆ ಬಂದು 'ಏನಾಯ್ತು ಎಂದು ಗಾಬರಿಯಿಂದ ಕೇಳಿದರು. 'ಈಗ ಸ್ವಲ್ಪ ಕುಡಿಯೋಕೆ ನೀರು ಕೊಡ್ರಮ್ಮ' ಅಂದರು ರಂಗನಾಯ್ಕ. ಅಕ್ಕ ನೀರು ತಂದುಕೊಟ್ಟರು. ಕುಡಿದು ದಣಿವಾರಿಸಿಕೊಂಡೆ. ಅಷ್ಟರಲ್ಲಿ ಎದುರು ಮನೆಯಲ್ಲೇ ಇದ್ದ ಬೂದಿ ಚೌಡಪ್ಪನವರೂ ಬಂದು 'ಯಾಕಪ್ಪ ಏನಾಯ್ತು' ಎಂದರು. 'ಮನೆ ಉದ್ದ ನಾಗರ ಹಾವೊಂದು ನನ್ನ ಕಾಲ ಮೇಲೆ ಹರಿದೋಯ್ತು' ಎಂದೆ. 'ಹಾವೇನಾದ್ರೂ 'ಕಚ್ತಾ' ಎಂದು ರಂಗನಾಯ್ಕ ಗಾಬರಿಯಿಂದ ಕೇಳಿದರು. 'ಇಲ್ಲಾ, ನಾನು ಬದುವಿನ ಮೇಲೆ ಕಾಲು ಕೆಳಗೆ ಬಿಟ್ಟುಕೊಂಡು ಕುಂತಿದ್ದೆ. ನನ್ನ ಮುಂಗಾಲ ಮೇಲೆ ಹರಿದು ಹೋಯ್ತು ಅಷ್ಟೇ, ಕಚ್ಚಲಿಲ್ಲ' ಎಂದೆ. 'ದೇವರು ದೊಡ್ಡವನು' ಎಂದು ಹೇಳಿ ನನ್ನ ಕಾಲುಗಳನ್ನು ಮುಟ್ಟಿ ಹಿಂದೆ ಮುಂದೆ ನೋಡಿ ಪರೀಕ್ಷಿಸಿದರು. ಯಾವುದೇ ಗಾಯಗಳಿರಲಿಲ್ಲ. ಬೂದಿಚೌಡಪ್ಪನವರು “ಅಣ್ಣಾ ನಿನ್ನ ಮಗ ತುಂಬಾ ಅದೃಷ್ಟವಂತ. ನಾಗದೇವರ ಆಶೀರ್ವಾದಾನೂ ಆಗಿದೆ. ಮುಂದೆ ಇವನು ತುಂಬಾ ದೊಡ್ಡ ವ್ಯಕ್ತಿಯಾಗ್ತಾನೆ. ನಾಗರ ಪೂಜೆ ಮಾಡಿ, ಎಲ್ಲಾ ಸರಿಹೋಗುತ್ತೆ' ಅಂದರು. ರಂಗನಾಯ್ಕ 'ಹುಡುಗ ಹೆದರಿಕೊಂಡ, ಒಂದು ತಾಯ್ತ ಕಟ್ಟಿಸಿ' ಎಂದರು. ಸಂಜೆ ಒಳಗೆ ಅರಿಸಿನ ದಾರದಲ್ಲಿ ಬಲದ ರೆಟ್ಟೆಗೆ ತಾಯ್ತ ಕಟ್ಟಿದರು ಬೂದಿ ಚೌಡಪ್ಪ.

ಮಧುಗಿರಿ ಶಾಲೆಗೇನೋ ಫೀ ಕಟ್ಟಿ ಪ್ರವೇಶ ಪಡೆದಾಯಿತು. ಆದರೆ ಎಲ್ಲಿರೋದು? ಗೊಂದಲ ಶುರುವಾಯ್ತು. ಅಕ್ಕನ ಅಭಿಪ್ರಾಯ ಭಕ್ತರಹಳ್ಳಿಯಿಂದಲೇ ದಿನಾ ಓಡಾಡಿಕೊಂಡಿರಲಿ ಎಂಬುದೇ ಆಗಿತ್ತು. ಅಮ್ಮನ ಪ್ರಕಾರ ನಿಮ್ಮ ಅಕ್ಕ ಬಾಣಂತನ ಮುಗಿಸಿ ಮಗು ರ‍್ಕೊಂಡು ಭಕ್ತರಹಳ್ಳಿಗೆ ಹೋಗುವುದು ಇನ್ನು 4 ತಿಂಗಳಾಗುತ್ತೆ. ಅಲ್ಲಿ ಅವನನ್ನು ಯಾರು ನೋಡಿಕೋತಾರೆ? ಎಂಬ ಪ್ರಶ್ನೆ. ಇದನ್ನೆಲ್ಲಾ ಕೇಳಿಕೊಂಡ ಅಪ್ಪ, ಏನು ಬೇಡ ಸ್ವಲ್ಪ ದಿನಾ ಬಸ್ಸಿನಲ್ಲಿ ಮಧುಗಿರಿಗೆ ಹೋಗಿ ಶಾಲೆ ಮುಗಿಸಿಕೊಂಡು ಬರಲಿ, ಆಮೇಲೆ ನೋಡಿಕೊಳ್ಳೋಣ' ಎಂದರು. ನನಗೂ ಅದೇ ಬೇಕಿತ್ತು.


ಶಾಲೆಯವರು ನೀಡಿದ್ದ ಗಡುವಿನ ದಿನವೇ ನಾನು ಬಸ್ಸಿನಲ್ಲಿ ಹೋಗಿ ಶಾಲೆಗೆ ಹಾಜರಾದೆ. ನನ್ನನ್ನು 1C  ಸೆಕ್ಷನ್‌ಗೆ ಸೇರಿಸಿ ನೋಟೀಸು ಬೋರ್ಡಿನ ಮೇಲೆ ಅಂಟಿಸಿದ್ದರು.
(ಮುಂದಿನ ‘ಕಿನ್ನರಿ’ಗೆ)