ಸಂಶೋಧನೆಗೊಂದು ಮಾದರಿ-ಡಾ. ಎ. ರಘುರಾಂ ಅವರ `ನವ್ಯೋತ್ತರ ಕಾದಂಬರಿ’

dr-raghuram-navyothara-kadambari

ಸಂಶೋಧನೆಗೊಂದು ಮಾದರಿ-ಡಾ. ಎ. ರಘುರಾಂ ಅವರ `ನವ್ಯೋತ್ತರ ಕಾದಂಬರಿ’

ಓದಿನ ಪ್ರೀತಿಗಾಗಿ
ಎಂ.ಎಚ್.ನಾಗರಾಜು 


ಇಲ್ಲಿ ದೊಡ್ಡ ಪ್ರಮಾಣದಲ್ಲಿ ಅಧ್ಯಯನ ನಡೆಸಲಾಗಿದೆ. ಘಟನಾ ಪ್ರಧಾನ ಕಾದಂಬರಿಗಳು, ಪಾತ್ರ ಪ್ರಧಾನ ಕಾದಂಬರಿಗಳು, ನಾಟಕೀಯ ಕಾದಂಬರಿಗಳು, ಬೃಹತ್ ಕಾದಂಬರಿಗಳು ಎಂದು ವಿಭಾಗಿಸಿಕೊಂಡು ಅಧ್ಯಯನ ನಡೆಸಲಾಗಿದೆ. ಕಾದಂಬರಿ : ಕಲ್ಪನ ಕಥನ, ಕಾದಂಬರಿ; ಪ್ರಗತಿಶೀಲತೆಯ ಹಾದಿ, ಕಾದಂಬರಿ : ಹೊಸಹೆಜ್ಜೆ ಎಂದೆಲ್ಲ ಅಧ್ಯಯನ ಮಾಡಿ ಕಾದಂಬರಿ ಸಾಹಿತ್ಯದ ಪೂರ್ವೋತ್ತರಗಳನ್ನು ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ. ಈ ಅಧ್ಯಾಯದಲ್ಲಿ ಓದುಗರಿಗೆ ಅಚ್ಚರಿ ಎನ್ನುವ ರೀತಿಯಲ್ಲಿ ಹಲವು ಸಂಗತಿಗಳು, ಒಳನೋಟಗಳು ದೊರೆಯುತ್ತವೆ.


ಸಂಶೋಧನೆಗೊಂದು ಮಾದರಿ-ಡಾ. ಎ. ರಘುರಾಂ ಅವರ `ನವ್ಯೋತ್ತರ ಕಾದಂಬರಿ’


-ಎಂ.ಎಚ್. ನಾಗರಾಜು


 ನವೆಂಬರ್ 21, 2021. ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ. ತುಮಕೂರು ನಿವಾಸಿಗಳಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಡಾ. ಎ. ರಘುರಾಂ ಅವರು ತುಮಕೂರಿಗೆ ಬಂದು ಮತ ಚಲಾಯಿಸಿ ಹೊರಡುವ ಮುನ್ನ ತಮ್ಮದೊಂದು ಮಹತ್ವದ ಕೃತಿಯೊಂದನ್ನು ಕೈಗಿತ್ತು ಓದಲು ಮನವಿ ಮಾಡಿ ಬೆಂಗಳೂರು ಬಸ್ಸು ಹತ್ತಿದರು.
 ಅವರ ಮನವಿಯಂತೆ ಸುಮಾರು ಒಂದುಕಾಲು ತಿಂಗಳಲ್ಲಿ ಅವರ ಕೃತಿಯನ್ನು ಓದಿದೆ, ಒಡನಾಡಿದೆ. ಅಲ್ಲಿ ಇಲ್ಲಿ ಗೆಳೆಯರೊಂದಿಗೆ ಚರ್ಚಿಸಿದೆ. ವಿಚಾರ ವಿನಿಮಯ ಮಾಡಿದೆ. ಕೆಲವೊಂದು ಸಂಗತಿಗಳನ್ನು ಅರಿತೆ, ತೀರ್ಮಾನಗಳಿಗೆ ಬಂದೆ. ಹಾಗೇ ನನ್ನವೇ ಆದ ಆ ಸಂಗತಿಗಳು-ತೀರ್ಮಾನಗಳು ಮನದಲ್ಲಿ ಮರೆಯಾಗುವ ಮುನ್ನ ಇಲ್ಲಿ ಅಕ್ಷರ ರೂಪದಲ್ಲಿ ನಿಮ್ಮ ಮುಂದೆ ಇರಿಸುತ್ತಿದ್ದೇನೆ.
 ಆತ್ಮೀಯರಾದ ಡಾ. ಎ. ರಘುರಾಂ ಅಕ್ಕರೆಯಿಂದ ನೀಡಿದ ಕೃತಿ ಅವರೇ ಸಂಶೋಧಿಸಿ, ಅಧ್ಯಯನ ಮಾಡಿ, ಪರಾಮರ್ಶಿಸಿ ಬರೆದ ಕೃತಿ ನವ್ಯೋತ್ತರ ಕಾದಂಬರಿ; ಒಂದು ಅಧ್ಯಯನ. ಮೇಲ್ನೋಟಕ್ಕೆ ಇದು  ಅವರ ಪಿಹೆಚ್.ಡಿ ಪ್ರೌಢಪ್ರಬಂಧ. ಹತ್ತಾರು-ನೂರಾರು ಪ್ರೌಢಪ್ರಬಂಧಗಳನ್ನು ಗಮನಿಸಿರುವ ನನಗೆ ಈ ಕೃತಿ ತುಂಬ ಮಹತ್ವದ್ದಾಗಿ ಕಾಣುತ್ತದೆ. ಕೃತಿ ಓದಿದ ಮೇಲೆ ಇದೇ ನಿಜವಾದ ಸಂಶೋಧನೆ, ಸಂಶೋಧನೆ ಎಂದರೆ ಹೀಗಿರಬೇಕು ಎನ್ನುವ ತೀರ್ಮಾನಕ್ಕೆ ನಾನು ಬಂದಿದ್ದೇನೆ. ಕಾರಣ ಈ ಸಂಶೋಧನಾ ಪ್ರಬಂಧದ ರಚನೆಯಲ್ಲಿ ಅವರು ಅಷ್ಟೊಂದು ಶಿಸ್ತು, ಶ್ರದ್ಧೆ, ತಾಳ್ಮೆ, ಪ್ರೌಢಿಮೆ ಮತ್ತು ಅಕ್ಕರೆಯನ್ನು ತೋರಿದ್ದಾರೆ, ಕೆಲಸವನ್ನು ಮಾಡಿದ್ದಾರೆ. ಈ ಹಿನ್ನೆಲೆ ಮತ್ತು ಕಾರಣದಿಂದ ನಾನು ಅವರನ್ನು ಅಭಿನಂದಿಸುತ್ತೇನೆ.
 ಮೂಲತಃ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ರೇಣುಕಾಪುರದವರಾದ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ, ಮಧ್ಯದಲ್ಲಿ ಹಲವು ವರ್ಷಗಳ ಕಾಲ ತುಮಕೂರಿನಲ್ಲಿ ನೆಲೆಸಿದ್ದು, ಗುಬ್ಬಿ ಮತ್ತು ದಂಡಿನಶಿವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿರುವ ಡಾ. ಎ. ರಘುರಾಂ ಅವರು ಲೇಖಕರಾಗಿ, ವಿಮರ್ಶಕರಾಗಿ, ಅನುವಾದಕರಾಗಿ ಹೆಸರು ಮಾಡಿದ್ದಾರೆ. ಭರವಸೆ (ಕವನ), ಆಕೃತಿ (ವಿಮರ್ಶೆ), ಅಯನ (ವಿಮರ್ಶೆ), ಸಿಂಧೂರ (ಸಂಪಾದನೆ), ವಿಮರ್ಶೆಯ ನೆಲೆ, ನವ್ಯೋತ್ತರ ಮಾರ್ಗ, ಬೀಜ ಬಿತ್ತುವ ಗಳಿಗೆ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲೊಂದು ಛಾಪು ಮೂಡಿಸಿದ್ದಾರೆ. ಪ್ರಸ್ತುತ ಕರ್ನಾಟಕ ಸಾಹಿತ್ಯ ಅಕಾಡೆಮಿಯ `ಅನಿಕೇತನ’ ಸಾಹಿತ್ಯ ಸಂಚಿಕೆಯ ಸಂಪಾದಕರಾಗಿ ಶ್ರಮಿಸುತ್ತಿದ್ದಾರೆ. ಹೀಗೆ ನಿರಂತರವಾಗಿ ಅವರ ಸಾಹಿತ್ಯ ಸೇವೆ, ಸೃಜನಕಾರ್ಯ ನಡೆಯುತ್ತಿದೆ.
 ಇದೀಗ ನನ್ನ ಎದುರಿಸಿರುವ ಅವರ ಕೃತಿ ನವ್ಯೋತ್ತರ ಕಾದಂಬರಿ; ಒಂದು ಅಧ್ಯಯನ 532 ಪುಟಗಳ ಹೆಬ್ಬೊತ್ತಿಗೆ. ಬೆಂಗಳೂರು ಸಿವಿಜಿ ಪಬ್ಲಿಕೇಷನ್ಸ್ ಪ್ರಕಾಶನ ಸಂಸ್ಥೆಯ ಬೆಳ್ಳಿಬೆಳಕು ಮಾಲೆಯ ಏಳನೆಯ ಕೃತಿಯಾಗಿ 2020 ನೇ ಸಾಲಿನಲ್ಲಿ ಪ್ರಕಟವಾಗಿದೆ. ರೂ. 600/- ಮುಖಬೆಲೆಯನ್ನು ಹೊಂದಿದೆ. ಜಿ. ಅರುಣ್‌ಕುಮಾರ್ ಮುಖಪುಟ ವಿನ್ಯಾಸ ಮಾಡಿದ್ದು ಕೃತಿ ಬಲು ಸುಂದರವಾಗಿ ಮೂಡಿಬಂದಿದೆ. ಈಗಾಗಿ ಕೃತಿಯನ್ನು ನೋಡಿದ ಕೂಡಲೇ ಅದರ ಸೊಗಸು, ಸೌಂದರ್ಯ, ಗಾಂಭೀರ್ಯ ಗಮನ ಸೆಳೆಯುತ್ತದೆ. ಗೌರವ ಭಾವ ಮೂಡಿಸುತ್ತದೆ. ಇದು ಕೃತಿಯ ಹೊರಕವಚ.
 ಸಿವಿಜಿ ಪ್ರಕಾಶನ ಸಂಸ್ಥೆಯ ಬೆಳ್ಳಿ ಬೆಳಕು ಮಾಲೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಜಾನಪದ ವಿನ್ಯಾಸ, ಲೇಖಕ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಅವರು ಹದಿನೆಂಟು ಪುಟಗಳ ದೀರ್ಘ ಪ್ರಸ್ತಾವನೆಯನ್ನು ಬರೆದು ಕನ್ನಡ ಸಾಹಿತ್ಯ ಮತ್ತು ವಾಗ್ವಾದಗಳನ್ನು ವಿಶ್ಲೇಷಿಸಿದ್ದಾರೆ. ಹೀಗಾಗಿ ಈ ಬರಹ ಓದುಗರಿಗೆ ವಾಗ್ವಾದಗಳ ಪರಂಪರೆಯನ್ನು ಪರಿಚಯಿಸುತ್ತದೆ. ಹಾಗೇ ಕೃತಿಗೆ ಲೇಖಕ-ಚಿಂತಕ ಡಾ. ಎಸ್. ನಟರಾಜ ಬೂದಾಳು ಅವರು ಮೌಲಿಕವಾದ ಮುನ್ನುಡಿಯನ್ನು ಬರೆದಿದ್ದಾರೆ. `ಪರಿವರ್ತನೆಯ ಸಂಧಿಕಾಲದ ಸಮರ್ಥ ಅಧ್ಯಯನ’ ಎಂದೇ ತಲೆಬರಹಕೊಟ್ಟು ಆರಂಭಿಸಿರುವ ಈ ಮುನ್ನುಡಿಯ ಮಾತುಗಳಲ್ಲಿ ಡಾ. ಎ. ರಘುರಾಂ ಅವರ ಸಂಶೋಧನೆಯ ಸಾಮರ್ಥ್ಯವನ್ನು, ವಿಶ್ಲೇಷಣೆಯ ವಿಧಾನವನ್ನು ಓರೆಗೆ ಹಚ್ಚಿದ್ದಾರೆ/ಸಾಣೆ ಹಿಡಿದಿದ್ದಾರೆ. ನಿಜಕ್ಕೂ ಬೂದಾಳರ ಮುನ್ನುಡಿಯ ಮಾತುಗಳು ಕೃತಿಯ ಶ್ರೇಷ್ಟತೆಗೆ ಸಾಕ್ಷಿಯಾಗಿವೆ.
 ಮುನ್ನುಡಿಯ ನಂತರದಲ್ಲಿ ಸ್ವತಃ ಲೇಖಕರಾದ ಡಾ. ಎ. ರಘುರಾಂ ಅವರು `ಒಂದು ಕ್ಷಣ ನಿಮ್ಮೊಂದಿಗೆ’ ಎಂದು ಎದುರಾಗುತ್ತಾರೆ. ಕೃತಿಯ ಪೂರ್ವೋತ್ತರಗಳನ್ನು ಮೆಲುಕು ಹಾಕುತ್ತಾರೆ. ಹಾಗೆ ದೇಹವೆಂಬ ಜೋಳಿಗೆಗೆ ಅನ್ನ, ನೀರು, ಪ್ರೀತಿ, ಮಮತೆಯನೆರೆದು ಜ್ಞಾನ ಪಥಕ್ಕೊಯ್ದ ಪ್ರೀತಿಯ ಅಪ್ಪ ಆಂಜನಪ್ಪ ಮತ್ತು ಪ್ರೀತಿಯ ಅಮ್ಮ ಲಕ್ಷಿö್ಮÃದೇವಮ್ಮ ಅವರಿಗೆ ಕೃತಿಯನ್ನು ಅರ್ಪಿಸಿದ್ದಾರೆ. ಇದಾದ ನಂತರದಲ್ಲಿ 474 ಪುಟಗಳಲ್ಲಿ ಅವರ ಸಂಶೋಧನೆಯ, ಅಧ್ಯಯನದ, ವಿಶ್ಲೇಷಣೆಯ ಬರಹ ಹರಡಿಕೊಂಡಿದೆ. ಕೊನೆಯಲ್ಲಿ ಮಾರ್ಗದರ್ಶಕರಾದ ವಿಠ್ಠಲರಾವ್ ಗಾಯಕ್ವಾಡ್, ಮೌಲ್ಯಮಾಪಕರಾದ ಡಾ. ಕೆ. ಅಭಯಕುಮಾರ್, ಡಾ. ಶಾಂತಿನಾಥ ದಿಬ್ಬದ ಮತ್ತು ಡಾ. ಶಾಂತಾ ಇಮ್ರಾಪುರ ಅವರ ವರದಿಯ ಮಾತುಗಳನ್ನು ಯಥಾವತ್ತಾಗಿ ನೀಡಿದ್ದಾರೆ. ನಂತರದಲ್ಲಿ ಡಾ. ಮೀರಾಸಾಬಿಹಳ್ಳಿ ಶಿವಣ್ಣನವರ ಸಂಪಾದಕೀಯ ಬರಹದಲ್ಲಿನ ಕೆಲವು ಸಾಲುಗಳು ಬೆನ್ನುಡಿಯಲ್ಲಿ ಪ್ರಕಟವಾಗಿವೆ.
 ಪ್ರಥಮ ದರ್ಜೆ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿ, ಅಲ್ಲಿನ ಭಾಷಾಂತರ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ವಿಠ್ಠಲರಾವ್ ಗಾಯಕ್ವಾಡ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ, `ನವ್ಯೋತ್ತರ ಕಾದಂಬರಿಗಳು-ಒAದು ಅಧ್ಯಯನ’ ಎಂಬ ಪ್ರೌಢಪ್ರಬಂಧಕ್ಕಾಗಿ 2005ರಲ್ಲಿ ಡಾಕ್ಟರೇಟ್ ಪಡೆದು, ಅದನ್ನು ಯಥಾವತ್ತಾಗಿ 2020 ರಲ್ಲಿ (ತಡವಾದರೂ ಪರವಾಗಿಲ್ಲ) ಪ್ರಕಟಿಸಿರುವ ಡಾ. ಎ. ರಘುರಾಂ ಅವರು ಅಧ್ಯಯನದ ಸ್ವರೂಪ ಮತ್ತು ವ್ಯಾಪ್ತಿ, ಅಧ್ಯಯನದ ಹಿನ್ನೆಲೆ ಮತ್ತು ಪರಿಕರಗಳು, ನವ್ಯೋತ್ತರ ಸ್ವರೂಪ ಮತ್ತು ಹಿನ್ನೆಲೆ, ನವ್ಯೋತ್ತರ ಕಾದಂಬರಿಗಳು-ಹಿನ್ನೆಲೆ-ತಾತ್ವಿಕ ಸ್ವರೂಪ ಮತ್ತು ಒಲವು ನಿಲುವು, ನವ್ಯೋತ್ತರ ಕಾದಂಬರಿಗಳು-ಪ್ರಭಾವ-ಪರAಪರೆ-ಪ್ರಯೋಗ, ನವ್ಯೋತ್ತರ ಕಾದಂಬರಿಗಳು-ವಸ್ತು-ಭಾಷೆ-ತAತ್ರ, ಪ್ರಾತಿನಿಧಿಕ ನವ್ಯೋತ್ತರ ಲೇಖಕರು  ಮತ್ತು ಅವರ ಕಾದಂಬರಿಗಳು, ಸಮಾರೋಪ ಎಂದು ಎಂಟು ಅಧ್ಯಾಯಗಳಲ್ಲಿ ತಳಸ್ಪರ್ಶಿ ಸಂಶೋಧನೆ-ಅಧ್ಯಯನ ನಡೆಸಿದ್ದಾರೆ.
 ಮೊದಲ ಅಧ್ಯಾಯದಲ್ಲಿ ಅಧ್ಯಯನದ ಸ್ವರೂಪ ಮತ್ತು ವ್ಯಾಪ್ತಿಯನ್ನು ಚರ್ಚಿಸಲಾಗಿದ್ದು, ಆಧುನಿಕ ಕನ್ನಡ ಸಾಹಿತ್ಯದಲ್ಲಿ ಒಂದು ಪ್ರಕಾರವಾಗಿ ಆರಂಭವಾಗಿ ನಂತರದ ದಿನಗಳಲ್ಲಿ ಓದುಗ ವಲಯದಲ್ಲಿ ಮಹತ್ವದ ಸ್ಥಾನ ಪಡೆದಿರುವ ಕಾದಂಬರಿಗಳ ಹುಟ್ಟು-ಬೆಳವಣಿಗೆ-ವಿಕಾಸ-ಸ್ವರೂಪವನ್ನು ವಿವರಿಸಲಾಗಿದೆ. ಬಂಡಾಯ ಮತ್ತು ದಲಿತ ಸಾಹಿತ್ಯದ ಮೊದಲಿನ ಹಾಗೂ ನವ್ಯದ ನಂತರದ 1965 ರಿಂದ 1979 ರವರೆಗಿನ 15 ವರ್ಷಗಳ ಕಾಲಘಟ್ಟವನ್ನು ಗುರುತಿಸಿ, ಆ ಕಾಲಘಟ್ಟದಲ್ಲಿ ರಚನೆಯಾದ 25 ಕಾದಂಬರಿಗಳನ್ನು ತಮ್ಮ ಅಧ್ಯಯನಕ್ಕೆ ಒಳಪಡಿಸಿಕೊಂಡು ಒಂದು ಅಧ್ಯಯನದ ವ್ಯಾಪ್ತಿಯನ್ನು ನಿಗದಿಪಡಿಸಿಕೊಳ್ಳಲಾಗಿದೆ.
 ಅಧ್ಯಯನದ ಹಿನ್ನೆಲೆ ಮತ್ತು ಪರಿಕರಗಳು ಎರಡನೇ ಅಧ್ಯಾಯ. ಇದು ತುಂಬ ಮಹತ್ವದ ಅಧ್ಯಾಯವಾಗಿದ್ದು ಕಾದಂಬರಿಯ ಸ್ವರೂಪ ಮತ್ತು ಸಾರ್ವತ್ರಿಕತೆಯನ್ನು ವ್ಯಾಪಕವಾಗಿ ಚರ್ಚಿಸಲಾಗಿದೆ. ಕಾದಂಬರಿ ಎಂದರೆ ಏನು? ಅದರ ವ್ಯಾಖ್ಯಾನಗಳು ಮತ್ತು ವಿಶ್ಲೇಷಣೆಗಳು ಏನು ಎಂಬ ಪ್ರಶ್ನೆ ಇಟ್ಟುಕೊಂಡು ಇಲ್ಲಿ ದೊಡ್ಡ ಪ್ರಮಾಣದಲ್ಲಿ ಅಧ್ಯಯನ ನಡೆಸಲಾಗಿದೆ. ಘಟನಾ ಪ್ರಧಾನ ಕಾದಂಬರಿಗಳು, ಪಾತ್ರ ಪ್ರಧಾನ ಕಾದಂಬರಿಗಳು, ನಾಟಕೀಯ ಕಾದಂಬರಿಗಳು, ಬೃಹತ್ ಕಾದಂಬರಿಗಳು ಎಂದು ವಿಭಾಗಿಸಿಕೊಂಡು ಅಧ್ಯಯನ ನಡೆಸಲಾಗಿದೆ. ಕಾದಂಬರಿ : ಕಲ್ಪನ ಕಥನ, ಕಾದಂಬರಿ; ಪ್ರಗತಿಶೀಲತೆಯ ಹಾದಿ, ಕಾದಂಬರಿ : ಹೊಸಹೆಜ್ಜೆ ಎಂದೆಲ್ಲ ಅಧ್ಯಯನ ಮಾಡಿ ಕಾದಂಬರಿ ಸಾಹಿತ್ಯದ ಪೂರ್ವೋತ್ತರಗಳನ್ನು ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ. ಈ ಅಧ್ಯಾಯದಲ್ಲಿ ಓದುಗರಿಗೆ ಅಚ್ಚರಿ ಎನ್ನುವ ರೀತಿಯಲ್ಲಿ ಹಲವು ಸಂಗತಿಗಳು, ಒಳನೋಟಗಳು ದೊರೆಯುತ್ತವೆ. 
 ಮೂರನೇ ಅಧ್ಯಾಯ ನವ್ಯೋತ್ತರದ ಸ್ವರೂಪ ಮತ್ತು ಹಿನ್ನೆಲೆಯಾಗಿದ್ದು ಇದರಲ್ಲಿ ನವ್ಯ : ಅಪರಿಪೂರ್ಣಪ್ರಜ್ಞೆ, ನವ್ಯೋತ್ತರ; ಹೊಸ ಹೆಜ್ಜೆ-ಪರಿವರ್ತನೆ, ನವ್ಯೋತ್ತರ ಲಕ್ಷಣಗಳು, ನವ್ಯೋತ್ತರ-ಪಾಶ್ಚಾತ್ಯ ಸಂದರ್ಭಗಳನ್ನು ಅಧ್ಯಯನ ಮಾಡಿದ್ದಾರೆ. ನವ್ಯೋತ್ತರ ಎಂಬ ಪರಿಕಲ್ಪನೆ ಕೆಲವು ಲೇಖಕರಲ್ಲಿ ಪಲ್ಲಟಗಳನ್ನು ತಂದಿತಾದರೂ ಕನ್ನಡದಲ್ಲಿ ಒಂದು ತತ್ವವಾಗಿ ರೂಪುಗೊಳ್ಳಲಿಲ್ಲ. ಪ್ರಗತಿಶೀಲ ಸಾಹಿತ್ಯವನ್ನು ಆಕ್ಷೇಪಿಸಿ ಹುಟ್ಟಿಕೊಂಡ ನವ್ಯ ಸಾಹಿತ್ಯವೂ ಕೂಡ ಪ್ರಾರಂಭದಲ್ಲಿ ಪ್ರಗತಿಶೀಲವೆಂಬAತೆ ಕಂಡರೂ ಪ್ರಗತಿ ವಿರೋಧಿಯೇ ಆಗಿದೆ ಎಂಬುದು ಸಾಬೀತಾಯಿತು. ಹೀಗಾಗಿ ನವ್ಯವಾದಕ್ಕೆ ಆಂತರಿಕ ಪ್ರತಿಭಟನೆಯಾಗಿ ನವ್ಯೋತ್ತರ ಕಾಣಿಸಿಕೊಂಡಿತು ಎಂಬ ತೀರ್ಮಾನಕ್ಕೆ ಬರಲಾಗಿದೆ.
 ನಾಲ್ಕನೆಯ ಅಧ್ಯಾಯ ನವ್ಯೋತ್ತರ ಕಾದಂಬರಿಗಳು ಶೀರ್ಷಿಕೆಯಲ್ಲಿ ಹಿನ್ನೆಲೆ, ತಾತ್ವಿಕತೆ, ಸ್ವರೂಪ, ಒಲವು-ನಿಲವು ಕುರಿತು ಅಧ್ಯಯನ ಮಾಡಲಾಗಿದೆ. ವಾಸ್ತವಕ್ಕೆ ಅತಿಯಾಗಿ ಅಂಟಿಕೊAಡು ಸಾಮಾಜಿಕತೆಯೆಡೆಗೆ ಸಾಗದೆ ಇರುವ ವಿಲೋಮ ಕ್ರಿಯೆಯನ್ನು ತಟಸ್ಥಗೊಳಿಸಿ ವಾಸ್ತವವಾದಕ್ಕೆ ತೆರೆದುಕೊಂಡ ಕ್ರಮ ಅನನ್ಯವಾದುದ್ದು. ಖಾಸಗಿತನದ ಅಸಂಗತ ಕ್ರಮ ಕಡಿತಗೊಂಡು ಸಾಮೂಹಿಕ ಪ್ರಜ್ಞೆಯನ್ನು ಕೇಂದ್ರ ಮಾಡಿಕೊಂಡವು ಎಂದು ಅಧ್ಯಯನದಲ್ಲಿ ದಾಖಲಿಸಲಾಗಿದೆ.
 ಹಾಗೇ ಪ್ರಭಾವ, ಪರಂಪರೆ, ಪ್ರಯೋಗಗಳು ನವ್ಯೋತ್ತರ ಕಾದಂಬರಿಗಳ ಮೇಲೆ ಹೇಗೆ ಮತ್ತು ಏನು ಪರಿಣಾಮ ಬೀರಿದವು ಎಂಬುದನ್ನು ಐದನೇ ಅಧ್ಯಾಯದಲ್ಲಿ ಅಧ್ಯಯನ ಮಾಡಲಾಗಿದೆ. ಇಲ್ಲಿ ನವ್ಯೋತ್ತರ ಕಾದಂಬರಿ ರಚನೆಗೆ ಕಾರಣವಾದ ಬಾಹ್ಯ ಮತ್ತು ಆಂತರಿಕ ಪ್ರಭಾವಗಳನ್ನು ಸಂಗ್ರಹಿಸಿ ಹೇಳಲಾಗಿದೆ. ಸ್ಥಳೀಯ ಲೇಖಕರ ಜೊತೆಗೆ ಸೋರೆನ್ ಕೀರ್ಕೆಗಾಡ್, ಜೀನ್‌ಪಾಲ್ ಸಾರ್ತ್ರೆ, ಮಾರ್ಟಿನ್ ಹೈಡೆಗರ್ ಮತ್ತಿತರ ಲೇಖಕರನ್ನು ಉಲ್ಲೇಖಿಸಿ ಅಸ್ತಿತ್ವವಾದದ ಬಗ್ಗೆ ವಿವರಿಸಿದ್ದಾರೆ. ಅಲ್ಲದೆ ಲೋಹಿವಾದ, ಮಾರ್ಕ್ಸ್ವಾದ, ಅಂಬೇಡ್ಕರ್‌ವಾದ ಹಿನ್ನೆಲೆಯಲ್ಲಿಯೂ ಇಲ್ಲಿ ಅಧ್ಯಯನ ನಡೆಸಿರುವುದು ವಿಶೇಷವಾಗಿದೆ.
 ನಂತರದಲ್ಲಿ ಆರನೇ ಅಧ್ಯಾಯದಲ್ಲಿ ನವ್ಯೋತ್ತರ ಕಾದಂಬರಿಗಳು-ವಸ್ತು-ಭಾಷೆ-ತAತ್ರವನ್ನೂ,  ಏಳನೇ ಅಧ್ಯಾಯದಲ್ಲಿ ಪ್ರಾತಿನಿಧಿಕ ನವ್ಯೋತ್ತರ ಲೇಖಕರು ಮತ್ತು ಅವರ ಕಾದಂಬರಿಗಳನ್ನು ವ್ಯಾಪಕವಾಗಿ ಅಧ್ಯಯನಕ್ಕೆ ವಿಶ್ಲೇಷಣೆಗೆ ಒಳಗುಮಾಡಿದ್ದಾರೆ. ವಿಶೇಷವಾಗಿ ಪೂರ್ಣಚಂದ್ರ ತೇಜಸ್ವಿ ಅವರ ಸ್ವರೂಪ, ನಿಗೂಢ ಮನುಷ್ಯರು, ಕರ್ವಾಲೋ, ಚಿದಂಬರ ರಹಸ್ಯ, ಜುಗಾರಿಕ್ರಾಸ್ ಕಾದಂಬರಿಗಳನ್ನು ಅಧ್ಯಯನಕ್ಕೆ ಪರಿಗಣಿಸಿದ್ದಾರೆ.
 ಸಂಶೋಧನೆಯ ದಾರಿಯಲ್ಲಿ ಐದು, ಆರು ಮತ್ತು ಏಳನೇ ಅಧ್ಯಾಯಗಳು ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ ಹೊಸ ಆಲೋಚನೆಗಳು, ಹೊಳಹುಗಳು, ಒಳನೋಟಗಳು ಇದ್ದು, ಸಂಶೋಧನೆ ಮತ್ತು ಅಧ್ಯಯನದ ಮಹತ್ವಕ್ಕೆ ಸಾಕ್ಷಿಯಾಗಿವೆ. ಒಟ್ಟಾರೆ ಈ ಅಧ್ಯಯನವು ತನ್ನ ಉದ್ದೇಶಗಳನ್ನು ಈಡೇರಿಸುವಲ್ಲಿ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ನಿಖರವಾಗಿ ಹೇಳಬಹುದು.
 `ಪ್ರಸ್ತುತ ನಿಬಂಧ ಮುಖ್ಯವಾಗಿ ನವ್ಯೋತ್ತರ ಕಾದಂಬರಿಗಳ ಮೂಲಕ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ನೆಲೆಗಳ ಮೂಲಕ ಒಟ್ಟು ಸ್ವರೂಪವನ್ನು ವಿವೇಚಿಸಲು ಪ್ರಯತ್ನಿಸಿದೆ. ಸಮಾಜದಲ್ಲಾದ ಸ್ಥಿತ್ಯಂತರಗಳಿಗೆ ಗಂಭೀರ ಲೇಖಕನೋರ್ವನ ಪ್ರತಿಕ್ರಿಯೆಯಾಗಿ ಕೃತಿಗಳು ಹೇಗೆ ಒಡಮೂಡಿವೆ, ಒಡಮೂಡುವ ಸಂದರ್ಭವನ್ನು ಗ್ರಹಿಸಲು ಸಾಹಿತ್ಯ ಕೃತಿ ಮತ್ತು ಕೃತಿಗೆ ಸಾಹಿತ್ಯೇತರ ಸಂಗತಿಗಳು ಹೇಗೆ ಕಾರಣವಾಗಿವೆ ಎಂಬುದನ್ನು ಪರಿಶೀಲಿಸದೆ ಪರಂಪರೆಯನ್ನು ಪ್ರಶ್ನಿಸುತ್ತಲೇ ಹೊಸ ಪರಂಪರೆಯ ಸೃಷ್ಟಿಕಾರ್ಯಕ್ಕೆ  ಚಾಲನೆ ನೀಡಿದ ಅಂಶಗಳಾವುವು ಎಂಬುದನ್ನು ಲೇಖಕರ ಕಾದಂಬರಿಗಳ ಅನುಕ್ರಮ ಬೆಳವಣಿಗೆಯನ್ನು ಆಧರಿಸಿ ವಸ್ತು, ಸ್ವರೂಪ, ಆಶಯ, ಶೈಲಿ, ತಂತ್ರ ಇವೆಲ್ಲ ಅಂಶಗಳನ್ನು ಪರಿಶೀಲಿಸಿದೆ’ ಎಂದು ಹೇಳುವುದರ ಮೂಲಕ ಎಂಟನೇ ಅಧ್ಯಾಯ ಸಮಾರೋಪ ಮುಕ್ತಾಯವಾಗುತ್ತದೆ.
 ಒಟ್ಟಾರೆ ಈ ಪಿಹೆಚ್.ಡಿ ಪ್ರೌಢಪ್ರಬಂಧವು ಸಂಶೋಧನೆಯ ಎಲ್ಲ ವಿಧಿ-ವಿಧಾನಗಳನ್ನು ಅನುಸರಿಸಿ ಆಳವಾಗಿ ಅಧ್ಯಯನ ನಡೆಸಿ, ಚರ್ಚಿಸಿ, ಪರಾಮರ್ಶಿಸಿ ರಚಿಸಿದ ಕೃತಿಯಾಗಿದೆ. ಪ್ರತಿ ಅಧ್ಯಾಯದ ಕೊನೆಯಲ್ಲಿ ನೀಡಿರುವ ಅಡಿ ಟಿಪ್ಪಣಿಗಳನ್ನು ಗಮನಿಸಿದರೆ ಲೇಖಕರ ಶ್ರಮ, ಸಾಧನೆ, ವಿದ್ವತ್ತುಗಳ ಪರಿಚಯವಾಗುತ್ತದೆ. ವ್ಯಾಪಕವಾದ ಮಾಹಿತಿ ಸಂಗ್ರಹ, ಆಳವಾದ ಅಧ್ಯಯನ, ವರ್ಗೀಕರಣ, ಸಮರ್ಪಕ ಅಧ್ಯಾಯ ವಿಂಗಡಣೆ, ಕ್ರಮಬದ್ದ ವಿಷಯ ನಿರೂಪಣೆ, ಉಲ್ಲೇಖ-ಉಚ್ಚಾರಣೆ-ವಿಶ್ಲೇಷಣೆ, ವಿಷಯ ಮಂಡನೆ ಹೀಗೆ ಎಲ್ಲಾ ಹಂತದಲ್ಲೂ ಎದ್ದು ಕಾಣುತ್ತದೆ.
 ಸಮಾರೋಪದ ನಂತರದಲ್ಲಿ ನೀಡಿರುವ ಗ್ರಂಥಋಣ, ಪರಾಮರ್ಶನ ಗ್ರಂಥಗಳು, ಇಂಗ್ಲೀಷ್ ಕೃತಿಗಳು, ನಿಯತಕಾಲಿಕೆಗಳ ಪಟ್ಟಿಯ ಮೇಲೆ ಕಣ್ಣಾಡಿಸಿದಾಗ ಖುಷಿಯಾಗುತ್ತದೆ. ಲೇಖಕರ ಅಧ್ಯಯನದ ಮಹತ್ವ ಅರಿವಾಗುತ್ತದೆ. ಮೌಲ್ಯಮಾಪಕರ ವರದಿಗಳೂ ಇದೇ ಅಭಿಪ್ರಾಯವನ್ನು ದಾಖಲಿಸುತ್ತವೆ.
ಡಾ. ಎ. ರಘುರಾಂ ಅವರ `ನವ್ಯೋತ್ತರ ಕಾದಂಬರಿ; ಒಂದು ಅಧ್ಯಯನ’ ನಿಜವಾದ ಅರ್ಥದಲ್ಲಿ  ನಿಜವಾದ ಆಶಯಗಳೊಂದಿಗೆ ನಡೆಸಿದ ಅಧ್ಯಯನ. ಪಿಹೆಚ್.ಡಿ ಪ್ರಬಂಧಗಳ ಬಗ್ಗೆ ವಿಶ್ವವಿದ್ಯಾಲಯಗಳ ಒಳ-ಹೊರಗೆ ಒಂದಷ್ಟು ಟೀಕೆಗಳು-ಆರೋಪಗಳು ಇರುವುದು ನಿಜ. ಆದರೆ ಇಲ್ಲಿನ ಈ ಅಧ್ಯಯನ, ಈ ಸಂಶೋಧನೆ ಆ ಎಲ್ಲ ಟೀಕೆಗಳು, ಆರೋಪಗಳಿಗೆ ಹೊರತಾಗಿದೆ. ಪ್ರಬಂಧ ವಿದ್ವತ್ಪೂರ್ಣವಾಗಿದೆ, ಪ್ರೌಢವಾಗಿದೆ. ಒಬ್ಬ ಸಾಹಿತ್ಯದ ಗಂಭೀರ ವಿದ್ಯಾರ್ಥಿಯಾಗಿ ಅಲ್ಲದೇ ಇದ್ದರೂ ಒಬ್ಬ ಸಾಮಾನ್ಯ ಓದುಗನಾಗಿ ನಾನು ಈ ಕೃತಿಯನ್ನು ಓದಿ ಸಂತೃಪ್ತನಾಗಿದ್ದೇನೆ. ಅವರ ವಿದ್ವತ್ತಿಗೆ ಮಾರುಹೋಗಿದ್ದೇನೆ. ಸಂಶೋಧನೆಯ ದಾರಿಯಲ್ಲಿ ನಡೆಯಲಿಚ್ಚಿಸುವ ಸಂಶೋಧನಾ ವಿದ್ಯಾರ್ಥಿಗಳಿಗೆ ಇದೊಂದು ಮಾರ್ಗದರ್ಶಿ ಎಂದು ಹೇಳುತ್ತಾ `ಡಾ. ಎ. ರಘುರಾಂ ಅವರು ಹಲವು ಕೃತಿಗಳ ಮೂಲಕ ಈಗಾಗಲೇ ಕನ್ನಡ ವಿಮರ್ಶಾ ಕ್ಷೇತ್ರದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಗಟ್ಟಿಯಾಗಿ ಮೂಡಿಸಿದ್ದಾರೆ. ಪ್ರಸ್ತುತ ನವ್ಯೋತ್ತರ ಕಾದಂಬರಿ ಕಥನ, ಅವರಿಗೆ ಡಾಕ್ಟೋರೇಟ್ ತಂದ ಕೃತಿಯಾಗಿದ್ದು, ಕನ್ನಡ ವಿಮರ್ಶೆ ಕಂಡ ಮುಖ್ಯ ಅಧ್ಯಯನಗಳಲ್ಲೊಂದು ಎಂಬ ಡಾ. ಮೀರಾಸಾಬಿಹಳ್ಳಿ ಶಿವಣ್ಣನವರ ಮಾತುಗಳೊಂದಿಗೆ ನಾನು ವಿರಮಿಸುತ್ತೇನೆ.