ಪ್ರಬಂಧ ಸಿ.ಎನ್. ಸುಗುಣಾದೇವಿ ಸೀರೆ ಮತ್ತು  ನೀರೆ

sugunadevi-sarry-and-women

ಪ್ರಬಂಧ  ಸಿ.ಎನ್. ಸುಗುಣಾದೇವಿ   ಸೀರೆ ಮತ್ತು  ನೀರೆ

ಪ್ರಬಂಧ

ಸಿ.ಎನ್. ಸುಗುಣಾದೇವಿ


ಸೀರೆ ಮತ್ತು  ನೀರೆ


 ಸೀರೆಗೂ ನೀರೆಗೂ ಅವಿನಾಭಾವ ಸಂಬAಧ . ಸೀರೆಗೂ ಒಂದು ದಿನವಿದೆ. ಅದುವೆ ಡಿಸೆಂಬರ್ 21. ಸೀರೆಗೆ ಸೀರೆಯೆಂದರೆ ಸಿಂಡರಿಸಿಕೊAಡ ಮುಖವೂ ಕ್ರಮೇಣ ಅರಳತೊಡಗುತ್ತೆ. ಖಿನ್ನಗೊಂಡ ಮನಸ್ಸಿಗೆ ಔಷಧಿಯಾಗಬಹುದು. ಎಷ್ಟಿದ್ದರೂ ಸರಿಯಾಗಿ ಸೀರೆಗಳೇ ಇಲ್ಲ. ಹೋಗೋ ಬರೋ ಕಡೆ ಎಷ್ಟಿದ್ದರೂ ಸಾಕಾಗಲ್ಲ ಎಂಬ ಸೊಲ್ಲು ಆಗಾಗ್ಗೆ ಕೇಳಿಬರುತ್ತೆ. ತವರವರ ಸೀರೆ ಎಂದರೆ ಏನೋ ಧನ್ಯತಾಭಾವ, ತನಗೇ ಅರಿಯದ ಯಾವುದೋ ಸ್ಪರ್ಶ ಅವಳನ್ನು ಆವರಿಸಿರುತ್ತೆ.


 ನಾನು ಸೀರೆಯ ಗುಂಗಿಗಿಳಿಯುತ್ತಾ ಇಳಿಯುತ್ತಾ ಅವ್ಯಕ್ತ ಆನಂದವನ್ನು ಅನುಭವಿಸುತ್ತಿರುವೆ. ಕಲಾತ್ಮಕವಾದ ಸೀರೆಯನ್ನು ಉಟ್ಟೊಡನೆ ನಡಿಗೆಯೇ ಬದಲಾಗುತ್ತೆ. ಅಡರ ಬಡರ ನಡೆಯೋರೂ ನಾಜೂಕಾದ ಹೆಜ್ಜೆಯನ್ನು ಹಾಕುವಂತಾಗುತ್ತೆ. ಇದ್ದಕ್ಕಿದ್ದಂತೆ ಸೌಂದರ್ಯಪ್ರಜ್ಞೆ ಆವರಿಸಿ ಮುಖದಲ್ಲಿ ಹಾವ ಭಾವ ನಯ ನಾಜೂಕಿನಿಂದ ಕೂಡಿರುತ್ತೆ. ಸೌಂದರ್ಯಾರಾಧಕರಿಗೆ ಮಾಪನವಿಲ್ಲದೆ ಕಟಿ, ಕುಚ, ನಿತಂಬ ಇಂತಿಷ್ಟೇ ಇವೆ ಎಂದು ಸಾರಿಸಾರಿ ಹೇಳುತ್ತವೆ.


 ಶಿವಕೋಟ್ಯಾಚಾರ್ಯರ ವಡ್ಡಾರಾಧನೆಯಲ್ಲಿ ಚೀರ(ಶಕಟ ರೇಫ) ಪದದ ಉಲ್ಲೇಖವಿದೆ.  ತೆಲುಗಿನಲ್ಲಿ ಚೀರ ಎಂದರೆ ಸೀರೆ. ಸೀರೆ ನಮ್ಮ ದೇಶದ ಸಿಂಧುತ್ವ ಸಂಕೇತದ ಉಡುಪೂ ಹೌದು. ದೇವಾನುದೇವತೆಗಳನ್ನು ಚಿತ್ರಕಾರ ಕಲಾಪತ್ತು ಬೂಟಾಸೀರೆಗಳಲ್ಲಿ ದರ್ಶಿಸಿದ್ದಾನೆ. ಯಾವ ಚಿತ್ರಕಾರನೂ ಆಧುನಿಕ ಉಡುಪಿನಲ್ಲಿ ಚಿತ್ರಗಳನ್ನು ರಚಿಸಿಲ್ಲ. ಗಂಡು ಹೆಣ್ಣು ದೇವತೆಗಳಿಗೆ ಪೀತಾಂಬರವನ್ನೇ ಉಡಿಸಿದ್ದಾರೆ. ನಾವು ಎಷ್ಟೇ ಆಧುನಿಕ ಮನೋಭಾವದವರಾದರೂ ವಿಭಿನ್ನ ವಿನ್ಯಾಸದ ಉಡುಪುಗಳನ್ನು ಧರಿಸಿದರೂ ಶುಭಕಾರ್ಯಗಳಲ್ಲಿ ಸೀರೆಯನ್ನು ಧರಿಸಿಯೇ ತೀರುತ್ತೇವೆ.


 ಸೀರೆಯ ಮಾಪನಕ್ಕೆ ಹೋದರೆ ಹದಿನೆಂಟು ಮೊಳ, ಹದಿನಾರು ಮೊಳ, ಹದಿನಾಲ್ಕು ಮೊಳದ ಸೀರೆಯನ್ನೂ ನೋಡಿರುವೆ. ಮಹಾರಾಷ್ಟçದಲ್ಲಿ ಹದಿನೆಂಟು ಮೊಳದ ಸೀರೆಯನ್ನು ನವ್ವಾರಿ ಎಂದು ಕರೆಯುತ್ತಾರೆಂಬುದು ನನಗೆ ಇತ್ತೀಚೆಗೆ ತಿಳಿಯಿತು. ಸಾಮಾನ್ಯವಾಗಿ ಕಚ್ಚೆಹಾಕಿ ಉಡುವವರು ಹದಿನೆಂಟು ಹದಿನಾರು ಮೊಳದ ಸೀರೆಯನ್ನು ಉಡುತ್ತಾರೆ. ಒಳಗಚ್ಚೆ, ಹೊರಗಚ್ಚೆ ಹಾಕುವವರಲ್ಲಿ ತರತಮ ಭಾವನೆಗಳಿವೆ. ಶ್ರೇಷ್ಟ, ಅಶ್ರೇಷ್ಟ ಎಂಬ ಭಾವನೆಯಿಂದ ನರಳುತ್ತಾರೆ.


 ಈ ಮಾಪನದ ಸೀರೆಗಳಲ್ಲಿ ನಮ್ಮಜ್ಜಿಯಂದಿರನ್ನ ನೆನಪಿಸಿಕೊಂಡರೆ ನಾವೇ ಸುಸ್ತಾಗಿ ಕೂರುವುದು ಖಂಡಿತ. ಹಿಂದೆ 8-9 ವರ್ಷದ ಬಾಲೆಯರು ಮದುವೆಯಾದೊಡೆ ಅಷ್ಟು ಭಾರದ ಸೀರೆಯನ್ನು ಉಡುತ್ತಿದ್ದ ಪರಿ ಊಹಿಸಲಸಾಧ್ಯ. ಆ ಬಾಲೆಯರ ತೂಕಕ್ಕಿಂತ ಸೀರೆಯ ಭಾರವೇ ಅಧಿಕವಾಗಿರುತ್ತಿತ್ತು. ಹೆಜ್ಜೆ ಎತ್ತಿಡಲಾಗದೆ ಎರಡೂ ಕೈಯ್ಯಲ್ಲೂ ಎತ್ತಿಹಿಡಿದು ಓಡಾಡುತ್ತಿದ್ದುದನ್ನು ಊಹಿಸಲಸಾಧ್ಯ. ಗಂಡನ ಮನೆಯಲ್ಲಿ ಕೆಲಸ ಮಾಡುವಾಗ ಅವರ ಪರದಾಟ ಹೇಳತೀರದು. ಶುಭ್ರಗೊಳಿಸುವಲ್ಲಿ ಮಾರ್ಜಕಗಳಿಲ್ಲದೆ ತಿರುವಿದಲ್ಲೇ ನೀರಿಲ್ಲದೆ ಚೌಳುಪ್ಪಲ್ಲಿ ನೆನಸಿ ಕೆರೆಗೋ ಕುಂಟೆಗೋ ನೀರಿರುವಲ್ಲಿ ಒಯ್ದು ಶುಭ್ರಗೊಳಿಸುತ್ತಿದ್ದರು. ಸ್ವಲ್ಪ ಹಣಕಾಸು ಆಧುನಿಕತೆಯ ಪರಿಚಯವಿರುವವರಲ್ಲಿ ಸೋಪಿನ ಬಳಕೆ ಇತ್ತು. ಮದುವೆಯಾಗದ ಬಾಲೆಯರು, ಎಂಟು ವರ್ಷದ ಒಳಗಿನವರು ಸೀರೆ ಮಾದರಿಯ ಕಿರುಗೆ ಧರಿಸುತ್ತಿದ್ದರು. ಈಗಂತೂ ದರ್ಜಿ ಹೊಲಿದ ಆಧುನಿಕ ಸ್ಪರ್ಶ ಕೂಡ ವಿಭಿನ್ನ ಸಿದ್ಧ ಉಡುಪು ಮಾದರಿ ಸೀರೆಗಳೇ ಬಂದಿವೆ. ಸುಮ್ಮನೆ ಸಿಕ್ಕಿಸಿಕೊಂಡರಾಯಿತು. ಆದರೆ ಸ್ವಯಂ ಆಗಿ ನಾವೇ ಉಡುವ ಸೀರೆಯ ಸೊಬಗೇ ಬೇರೆ.


 ಆಧುನಿಕ ಶಿಕ್ಷಣದಲ್ಲಿ ಅನೇಕ ಸುಧಾರಣೆಗಳನ್ನು ಕಂಡAತೆ ಉಡುಪಿನಲ್ಲೂ ಕಂಡೆವು. ಧೋತ್ರದ ಬದಲು ಗಂಡಸರು ಪ್ಯಾಂಟ್ ಶರ್ಟ್ ಧರಿಸಲು ತೊಡಗಿದರು. ಹಾಗೆ ಸೀರೆ ಮಾಪನದಲ್ಲಿ ಕ್ರಮೇಣ ಕಡಿಮೆಯಾಗಿ ಸಾಂಪ್ರದಾಯಿಕ ಕೈಮಗ್ಗದ ಸೀರೆಗಳ ಬದಲಿಗೆ ನೈಲಾನ್, ಪಾಲಿಯೆಸ್ಟರ್ ಸೀರೆಗಳು ತಲೆಎತ್ತಿದವು. ಆದರೂ ಸಂಪ್ರದಾಯಸ್ಥರ ಮನೋಭಾವ ಇಂದಿಗೂ ಪೂರ್ತ ಬದಲಾಗಿಲ್ಲ.


 ಸೀರೆಗಳಲ್ಲಿ ಅನೇಕ ಭಾಗಗಳಿವೆ. ಒಂದು ಉಡುಸೆರಗು: ಪೆಟಿಕೋಟ್ ಅಭ್ಯಾಸವಿಲ್ಲದ ಕಾಲದಲ್ಲಿ ಉಡುಸೆರಗನ್ನು ಒಂದು ಸುತ್ತು ಸುತ್ಕಳೋರು, ಅದನ್ನೇ ನಾವು ಪೆಟಿಕೋಟ್ ಅಂತ ಭ್ರಮಿಸಿಕೊಳ್ಳಬೇಕು. (16-18 ಮೊಳದ ಸೀರೆ ಕಥೆಯಲ್ಲಿ) ಇನ್ನು ತಲೆಮೇಲಿಂದ ಸೆರಗು ಹೊದ್ದು ಉಳಿದ ಭಾಗವನ್ನ ನಿರಿಗೆ ಹೊಯ್ಕೊಂಡು ಹಂಗೆ ನಿರಿಗೆ ಸಿಕ್ಕಿಸಿಕೊಳ್ಳುವಾಗ ನಿರಿಗೆ ಮೇಲ್ತುದಿ ಸೇಫ್ ಡಿಪಾಸಿಟ್ ಲಾಕರ್ ಆಗಿ ಹೊಕ್ಕಳ ಮೇಲ್ಭಾಗದಲ್ಲಿ ವಿರಾಜಮಾನವಾಗಿ ಬಾಳೆಕಾಯಿ ವಿಜೃಂಭಿಸುತ್ತಿತ್ತು. ಇದು ಚಿಲ್ರೆ ಕಾಸು, ನೋಟುಗಳ ಆವಾಸಸ್ಥಾನ. ಪುಟ್ಟದೊಂದು ಚೀಲ ಮಾಡಿ ಅದರಲ್ಲಿ ಅವರ ನಿಧಿಯನ್ನು ಅಡಗಿಸಿ ಇಟ್ಟುಕೊಳ್ಳುತ್ತಿದ್ದರು. ಸ್ನಾನಕ್ಕೋದಾಗ ಬಚ್ಚಲುಕಟ್ಟೆ ಮೇಲೆ ನಿಧಿ ವಿರಮಿಸಿ ವಾಪಸ್ಸಾಗುತ್ತಲೇ ಬಾಳೆಕಾಯೊಳಗೆ ಲಪಕ್ಕಂತ ಸೇರಿಬಿಡ್ತಿತ್ತು. ಗಂಡ ಮಕ್ಕಳ ಕಣ್ಣು ಬಾಳೆಕಾಯಿ ಮೇಲೆ ರ‍್ತಿತ್ತು. ಕಷ್ಟಕಾಲಕ್ಕೆ ಉಳಿಸಿದ್ದು ಗಳಿಸಿದ್ದಾಗರ‍್ತಿತ್ತು.


 ಉಡುಸೆರಗು ಸೀರೆಯ ಮೊದಲ ಭಾಗವಾದರೆ ಮೇಲು ಸೆರಗು ತಲೆಯ ಭಾಗದ್ದು, ಉಳಿದದ್ದು ಎದೆಯ ಮೇಲಿಂದ ಹಾಯ್ದು ಭುಜದ ಮೇಲಿಂದ ಬೆನ್ನ ಹಿಂಭಾಗಕ್ಕೆ ಇಳಿಯುತ್ತೆ. ಸೆರಗು ಉರುಫ್ ಮುಸುಗು ಸೀರೆಯ ರಾಣಿ, ಪ್ರಧಾನಪಾತ್ರ ಇದರದ್ದು. ಮಾವ, ಅಳಿಯ ಅಥವಾ ಅಪರಿಚಿತ ಗಂಡಸರು ಬಂದರೆ ಮರ್ಯಾದೆ ಕೊಡಲೋಸುಗ ಹಾಗೆ ಆಟೋಮ್ಯಾಟಿಕ್ ಆಗಿ ತನಗೇ ಗೊತ್ತಿಲ್ಲದಂತೆ ಬಲಗೈಯಿಂದ ತಲೆಯಾವರಿಸುತ್ತಿತ್ತು. ಯಾವ ಸ್ತಿçà ವಾದಾನೂ ಇಲ್ಲಿ ಕೆಲಸ ಮಾಡುವಂತೆ ಕಾಣುವುದಿಲ್ಲ. ಮರ್ಯಾದೆ ಗೌರವಗಳು ಸಾರ್ವಕಾಲಿಕ ತಮ್ಮ ಅನುಕೂಲಕ್ಕನುಗುಣವಾಗಿ ಎಡಗಡೆ ಬಲಗಡೆ ಸೆರಗು ಹಾಕಿಕೊಳ್ಳುತ್ತಿದ್ದರು. ಇದು ಜಾತಿಸೂಚಕವೂ ಆಗಿರುತ್ತಿತ್ತು. ತಲೆಗೆ ರ‍್ಕೊಬೇಕಾದರೆ ವಾಲೆಗೆ ಎಣ್ಣೆ ಇಳ್ಕಳುತ್ತೆ ಅಂತ ಬಿಚ್ಚಿ ಸೆರಗಿನ ತುದಿಗೆ ಗಂಟಾಕ್ಕAತಿದ್ರು. ಮಕ್ಕಳ ಮೊಮ್ಮಕ್ಕಳ ಮೋರೆ ಮೂಗಿನಿಂದ ಇಳಿಯುತ್ತಿದ್ದ ಸಿಂಬಳ ಸೀಟಾಕೆ ಸೆರಗು ಕರವಸ್ತçವಾದರೆ ಕೈ ಒರೆಸಿಕೊಳ್ಳಲು ಟವೆಲ್ ಆಗಿ ಮಾರ್ಪಡುತ್ತಿತ್ತು. ಒಟ್ಟಿನಲ್ಲಿ ನಮ್ಮ ಆಧುನಿಕರ ಟಿಶ್ಯೂ ಪೇಪರ್ ಇದ್ದ ಹಾಗೆ. ಹೊದಿಕೆ ಇಲ್ಲದಾಗ ಕೈ ಕಾಲು ಮುದುಡಿಕೊಂಡು ಅದನ್ನೆ ಹೊದಿಕೆ ಮಾಡಿಕೊಂಡದ್ದೂ ಇದೆ.


 ಸ್ತ್ರೀಯ ಮಾನಾಪಮಾನಗಳೂ ಸೆರಗಿನಿಂದಲೇ ನಿರ್ಧಾರವಾಗುತ್ತಿದ್ದವು ಕೆಲವೊಮ್ಮೆ, ಯಾವೋನಾದ್ರೂ ಸೆರಗು ಎಳೆದ ಅಂದರೆ ಶೃಂಗಾರಕಾವ್ಯ ಹುಟ್ಟಿಕೊಳ್ತಿತ್ತು. ಅವಳಿಗೆ ಅವ ದಿಲ್‌ಪಸಂದ್ ಆಗ್ದೆ ಇದ್ರೆ ಭದ್ರಕಾಳಿಯಾಗಿ ರುಂಡಮುಂಡಗಳು ಬೇರ್ಪಟ್ಟಿವೆ. ನಾವೇ ಸೃಜಿಸಿದ ಸಿಆರ್‌ಪಿಸಿ ಇದೆ. ಶ್ರೀಕೃಷ್ಣನಿಗೆ ಅನ್ವಯಿಸಲಿಲ್ಲ. ಆತ ಸೀರೆ ಕದಿಯಬಹುದು, ಸೆರಗ ಸೆಳೆಯಬಹುದು. ಅವೆಲ್ಲಾ ಕೃಷ್ಣಲೀಲೆಯಲ್ಲಿ ಲೀನವಾಗುತ್ತವೆ. ಆದರೆ ಮಾನಿನಿಯ ಮಾನಕಾಯುವವ ಸೆರಗ ಸೆಳೆದರೆ ಸ್ತಿçÃಲೋಲವಾಗುತ್ತಾನೆ, ಶಿಕ್ಷೆ ವಿಧಿಸಲ್ಪಡುತ್ತೆ. ಚಿತ್ತಾರದ ಸೆರಗಿಗೆ ಬೆಲೆ ಜಾಸ್ತಿ. ಮಡಿಲಿನ ಭಾಗದಲ್ಲಿ ಚೀಲದ ಬದಲಿಗೆ ಸೊಪ್ಪುಸದೆ ವಸ್ತುಗಳನ್ನು ಇಟ್ಕಂಡು ಬರಬಹುದಿತ್ತು ಚೀಲದ ಬದಲಿಗೆ.


 ಮೊದಲು ಹೊಸ ಸೀರೆ ಬರ್ತಿದ್ದಂಗೆ ಮೊಳ ಹಾಕಿದ್ದೂ ಹಾಕಿದ್ದೇ. ಮೋಟುಗೈಯ್ಯಲ್ಲಿ ಮೊಳಹಾಕಿದ್ರೆ ಸೀರೆ ಜಾಸ್ತಿ ಬರೋದು. ಸ್ವಲ್ಪ ಉದ್ದನೆ ಕೈಯ್ಯಲ್ಲಿ ಹಾಕಿದ್ರೆ ಕಡಿಮೆ ಬರೋದು. ಸೀರೆ ಸುತ್ತ ಏನೆಲ್ಲಾ ಚರ್ಚೆಗಳು ನಡೀತಿದ್ವು ಶಾಲೆ ತಂದುಕೊಟ್ಟ ಮನೆ ಯಜಮಾನ ಗದರಿದಾಗ ಚರ್ಚೆಗಳು ಗಪ್‌ಚುಪ್ ಆಗ್ತಿದ್ವು. ಮೊಳ ಹಾಕಿ ಹಾಕಿ ಪುಂಡಿಸೊಪ್ಪು ಆಗರ‍್ತಿತ್ತು. ಮನೆ ಯಜಮಾನಿ ಸೊಸೆಗೋ ಮಗಳಿಗೋ ಮೊದಲು ಉಡೋಕ್ಕೆ ಕೊಟ್ಟು ಸುಂಕುಮುರಿದಮೇಲೆ ನೀರಿಗೆ ಹಾಕಿ ಉಡುತಿದ್ಲು.


 ಸೀರೆ ಉಡೋದ್ರಲ್ಲೂ ವೈವಿಧ್ಯತೆ ಇದೆ. ಹದಿನೆಂಟು ಮೊಳದ ಸೀರೆ ಕಚ್ಚೆ ಹಾಕಿ ಉಡುವವರು ಉಡುತ್ತಾರೆ. ಹದಿನಾರು ಹದಿನಾಲ್ಕು ಮೊಳದ ಸೀರೆಯನ್ನು ಸಾಮಾನ್ಯವಾಗಿ ಎಲ್ಲರೂ ಉಡುತ್ತಿದರು. 


 ಅಯ್ಯಂಗಾರ್ ಸೀರೆ ಇದೂ ಹದಿನೆಂಟು ಮೊಳದ್ದೇ ಅವರವರ ಅನುಕೂಲಕ್ಕೆ ಇಂಥದ್ದೇ ಕೋಮಿಗೆ ಸೇರಿದವರೆಂಬ ಅಸ್ಮಿತೆಯು ಎದ್ದು ಕಾಣುತ್ತೆ. ಸಾಮಾನ್ಯವಾಗಿ ನಮ್ಮಲ್ಲಿ ದಡಿ ಸೀರೆಗೆ ಆದ್ಯತೆ. ಕಳಶಕ್ಕೆ ಏರಿಸುವಾಗ ದಡ ಮುಸುಗು ನೋಡಿ ತರುತ್ತೇವೆ. ಅದರಲ್ಲಿ ನಮ್ಮ ಹಿರಿಯರನ್ನು ಕಾಣುತ್ತೇವೆ, ಕಲ್ಪಿಸಿಕೊಳ್ಳುತ್ತೇವೆ. ಎಡಗಡೆ, ಬಲಗಡೆ ಸೆರಗು ಇವೆಲ್ಲಾ ಸೀರೆಯಲ್ಲಿ ವೈವಿಧ್ಯಮಯವಾಗಿವೆ. ಆದರೆ ಸೀರೆ ಮಾತ್ರ ಒಂದೇ. ಡಿಸೈನರ್ಸ್ ಬೇರೆ ಬೇರೆ ನಮ್ಮ ಉಡುಪು ಹವಾಮಾನದ ಮೇಲೆಯೂ ನಿರ್ಧರಿತವಾಗಿದೆ. ಅವರವರ ಸಂಪ್ರದಾಯಕ್ಕನುಗುಣವಾಗಿ ಸೀರೆ ಉಡುವವರನ್ನಿಂದಿಗೂ ಕಾಣುತ್ತೇವೆ.


 ಅಬ್ಬಾ! ರ‍್ತಾ ರ‍್ತಾ ಸೀರೆ ತುಂಡಾಗ್ತಾ ಬಂತು. ಕ್ರಮೇಣ 11-12 ಮೊಳಕ್ಕೆ ಇಳೀತು, ಉಸಿರು ಬಿಡುವಂತಾಯಿತು. ಪೆಟಿಕೋಟ್ ಬಂದು ಸೀರೆ ಉಡೋ ಸ್ಟೆöÊಲ್ ಬದಲಾಯಿತು. ಬಲಗಡೆ ನೆರಿಗೆ ತಿರುವಿಕೊಳ್ಳೋರು ಎಡಗಡೆಗೆ ತಿರುವಿಕೊಳ್ಳೋಕೆ ಶುರುವಾದ್ರು. ನಮ್ಮ ಹಳೆ ಫೋಟೋದಲ್ಲಿರೋ ಲಕ್ಷಿö್ಮ, ಸರಸ್ವತಿ, ಪಾರ್ವತಿಯರು ಬಲಗಡೆಗೆ ತಿರುವಿಕೊಂಡಿದ್ದಾರೆ. ದೇವರ ಫೋಟೋ ಮಾರೋ ಅಂಗಡಿಗಳಲ್ಲಿ ಹೊಸ ತರಹದ ಬಣ್ಣದ ಸೀರೆ ಉಟ್ಟಿರೋ ಫೋಟೋಗಳಿಗೆ ಬೇಡಿಕೆಯಂತೆ. ಪೆಟಿಕೋಟ್ ಬಂದು ಸೊಂಟಪಟ್ಟಿ, ಬಾಳೆಕಾಯಿ, ಒಳಸೆರಗು ಹಂಗೆ ಮಾಯವಾದ್ವು. ಮೋಟು ಸೆರಗಿನೋಳು ಉದ್ದಸೆರಗಿನೋಳು ಎಲ್ರೂ ಕ್ಯಾಟ್‌ವಾಕ್ ಮಾಡ್ಕಂಡ್ ಹೋದ್ರು. ದ್ರೌಪದಿಯನ್ನ ದುಶ್ಯಾಸನ ಎಳೆದೊಯ್ಯುವಾಗ ಒಂಟಿ ಬಟ್ಟೆಯಲ್ಲಿರುವೆನೆಂದು ಪರಿಪರಿಯಾಗಿ ಬೇಡುವೊಡೆ ಬಿಡದೆ ಎಳೆದೊಯ್ದ. ಅಕ್ಷಯಾಂಬರವಾದದ್ದು ಬೇರೆ ಕಥೆ.


 ನಾಚಿಕೆ ಸ್ವಭಾವದವರು, ಸಂಕೋಚ ಪ್ರವೃತ್ತಿಯವರು ಪುಕ್ಕಲರು ಅಮ್ಮನ ಸೆರಗಿನಲ್ಲಿ ಮರೆಯಾಗಿ ರಕ್ಷಣೆ ಪಡೆದರೆ ಹೆಂಡತಿ ಸೆರಗು ಹಿಡಿದು ಓಡಾಡೋರು ಅಪಹಾಸ್ಯಕ್ಕೆ ಒಳಗಾಗ್ತಾರೆ. ಒಬ್ಬ ಹೆಂಗಸಿಗೆ ಮರ್ಮಕ್ಕೆ ತಗಲುವಂತೆ ಬೈದಾಡುವಾಗ ಎಷ್ಟು ಜನಕ್ಕೆ ಸೆರಗನ್ನ  ಹಾಸಿದಾಳೋ ಅಂತ ಚುಚ್ಚುಮಾತುಗಳನ್ನು ಆಡ್ತಾರೆ. ಸೆರಗಿನ ಮಹಿಮೆ ಅಂಥದ್ದು.


 ಹಾಲೂಡುವ ತಾಯಿಗೆ, ಬಹಿಷ್ಟೆಗೆ, ಚಳಿ ಮಳೆ ಗಾಳಿ ಬಿಸಿಲ್ಗೆ ಮಕ್ಕಳನ್ನು ರಕ್ಷಿಸಲು ಸೀರೆಯ ಇಂಚಿಂಚು ಉಪಯೋಗಿ. ಕೆಲವು ಮಕ್ಕಳಂತೂ ನಿರಿಗೆಯೊಳಗೇ ಸೇರಿಕೊಂಡು ಬಿಡುತ್ವೆ.


 ಕರ್ನಾಟಕದ ಬ್ರಾಂಡ್ ಅಂಬಾಸಿಡರ್‌ಗಳೆಂದರೆ ಮೈಸೂರ್ ಸಿಲ್ಕ್, ಮೊಳಕಾಲ್ಮೂರಿನ ರೇಷ್ಮೆಸೀರೆಗಳು, ಇಳಕಲ್ಲಿನ ತೋಪುಮುಸುಕು ಸೀರೆಗಳು. ಒಟ್ಟಿನಲ್ಲಿ ಅಮ್ಮನ ಮತ್ತು ಅಜ್ಜಿಯ ಹಳೇಸೀರೆಗಳ ಕೌದಿ ಎಲ್ಲಕ್ಕಿಂತಲೂ ಆಪ್ಯಾಯಮಾನ. ಸೀರೆ ಕುರಿತಂತೆ ಇನ್ನೂ ಸಾಕಷ್ಟು ಸಂಗತಿಗಳಿವೆ. ಸೀರೆಯ ಭವ್ಯತೆ ಬೇರಿನ್ನಾವ ಉಡುಪು ತಂದುಕೊಡಲಾಗದು, ನಮ್ಮ ಉಡುವಿಕೆಯ ಮೇಲೆ ಅದರ ಸೊಬಗು ನಿಂತಿದೆ.