ತುರುವೇಕೆರೆಯಲ್ಲಿ ನ 7 ರಂದು ವಿಜ್ಞಾನ- ಗಣಿತ ಕಮ್ಮಟ
ತುರುವೇಕೆರೆಯಲ್ಲಿ ನ 7 ರಂದು ವಿಜ್ಞಾನ- ಗಣಿತ ಕಮ್ಮಟ
………………………………………………………………………………………………………………………
ತುರುವೇಕೆರೆ, ನ,4. ಇಲ್ಲಿಯ ಶ್ರೀ ಚಿದಂಬರ ಉಚಿತ ಗ್ರಂಥಾಲಯದ ವತಿಯಿಂದ ನವೆಂಬರ್ 7 ರ ಭಾನುವಾರದಂದು ಶ್ರೀ ಗಾಯತ್ರಿ ಭವನದಲ್ಲಿ ವಿಜ್ಞಾನ – ಗಣಿತ ಕಮ್ಮಟವನ್ನು ಏರ್ಪಡಿಸಲಾಗಿದೆ ಎಂದು ಗ್ರಂಥಾಲಯದ ಸ್ಥಾಪಕರಾಗಿರುವ ರೈಲ್ವೆ ರಾಮಚಂದ್ರು ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕಳೆದ ಮೂರು ಬಾರಿ ನಡೆಸಿದ ವಿಜ್ಞಾನ – ಗಣಿತ ಕಮ್ಮಟ ಬಹಳ ಯಶಸ್ವಿಯಾಗಿದೆ. ಇದು ನಾಲ್ಕನೇ ವರ್ಷದ ಕಾರ್ಯಕ್ರಮವಾಗಿದೆ. ಪ್ರತಿ ವರ್ಷ ನಡೆಸಿದ ಕಮ್ಮಟದಿಂದಾಗಿ ನೂರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡಿಸಿಕೊಂಡಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಆಸಕ್ತರಾಗಿರುವ ವಿದ್ಯಾರ್ಥಿಗಳು ಇದ್ದಾರೆ. ಆದರೆ ಅವರಿಗೆ ಸೂಕ್ತ ತರಬೇತಿ ಮತ್ತು ಪ್ರೋತ್ಸಾಹ ಅತ್ಯಗತ್ಯವಾಗಿದೆ. ಇದನ್ನು ಮನಗಂಡು ತಮ್ಮ ಸಂಸ್ಥೆಯ ವತಿಯಿಂದ ವಿಜ್ಞಾನ ಮತ್ತು ಗಣಿತ ಕಮ್ಮಟವನ್ನು ಏರ್ಪಡಿಸಲಾಗುತ್ತಿದೆ ಎಂದು ರಾಮಚಂದ್ರು ತಿಳಿಸಿದರು.
ಪ್ರತಿಯೊಂದು ವಿಷಯವೂ ಸಂಶೋಧನೆಯಿAದ ಬೆಳಕು ಕಾಣಬೇಕಿದೆ. ವಿಜ್ಞಾನಕ್ಕೆ ಮತ್ತೊಂದು ಹೆಸರೇ ಸಂಶೋಧನೆ. ಮಕ್ಕಳಲ್ಲಿ ಸಂಶೋಧನೆ ಆಸೆ ಹುಟ್ಟಿಸಬೇಕೆಂಬ ಕಾರಣಕ್ಕೆ ಪ್ರತಿ ವರ್ಷ ವಿಜ್ಞಾನ ಗಣಿತ ಕಮ್ಮಟವನ್ನು ಏರ್ಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಉಪನ್ಯಾಸಕ ಕೃಷ್ಣ ಚೈತನ್ಯ ಮಾತನಾಡಿ, ನ 7 ರಂದು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬರಹಗಾರರಾದ ಶ್ರೀನಿಧಿಯವರು ಪ್ರಥಮ ಗೋಷ್ಠಿಯಲ್ಲಿ ದಿನನಿತ್ಯದಲ್ಲಿ ತಂತ್ರಜ್ಞಾನ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಎರಡನೇ ಗೋಷ್ಠಿಯಲ್ಲಿ ಇಸ್ರೋದ ವಿಜ್ಞಾನಿ ಶ್ರೀನಾಥ ರತ್ನಾಕುಮಾರ್ ರವರು ಆಕಾಶದಲ್ಲಿ ಮನೆ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಮಧ್ಯಾಹ್ನ ನಡೆಯುವ ಮೂರನೇ ಗೋಷ್ಠಿಯಲ್ಲಿ ಮೈಸೂರಿನ ಸಂಪನ್ಮೂಲ ವ್ಯಕ್ತಿ ಬಿ.ಎಸ್.ಕೃಷ್ಣಮೂರ್ತಿ ಯವರು ಗಣಿತ – ಕುಣಿತ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು. ತಮ್ಮ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರೇರಣೆಗೊಂಡ ಗ್ರಾಮಾಂತರ ಪ್ರತಿಭೆ ಹಿತೈಶಿ ವಿಜ್ಞಾನ ವಿಷಯದಲ್ಲಿ ಹೆಚ್ಚು ಆಸಕ್ತಿ ತೋರಿ ಇಂದು ಪಿಹೆಚ್‌ಡಿ ಪ್ರಶಸ್ತಿ ಪಡೆದುಕೊಂಡು ಕೆಸೆಟ್ ನಲ್ಲಿ ಉತ್ತಮ ಸಾಧನೆ ತೋರಿದ್ದಾನೆ ಎಂದು ಕೃಷ್ಣ ಚೈತನ್ಯ ತಿಳಿಸಿದರು.
145 – ತಮ್ಮ ಸಂಸ್ಥೆಯಿAದ ನಡೆಸಿಕೊಂಡು ಬರುತ್ತಿರುವ ತಿಂಗಳ ಪುಸ್ತಕ ಪರಿಚಯ ಕಾರ್ಯಕ್ರಮ 145 ದಾಟಿದೆ. ಇನ್ನು ಐದು ತಿಂಗಳಲ್ಲಿ 150 ನೇ ತಿಂಗಳ ಪುಸ್ತಕ ಪರಿಚಯ ನಡೆಯಲಿದ್ದು ಅಂದು ವಿಶೇಷ ಬರಹಗಾರರನ್ನು ಆಹ್ವಾನಿಸಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಲಲಿತಾ ರಾಮಚಂದ್ರು ಹೇಳಿದರು.
ಜ್ಞಾನಧಾರ – ತಮ್ಮ ಸಂಸ್ಥೆಯಿAದ ಜನ ಸಾಮಾನ್ಯರಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸುವ ಸಲುವಾಗಿ ಜ್ಞಾನಧಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಮ್ಮಲ್ಲಿರುವ ಪ್ರತಿಭೆಯನ್ನುಕೇವಲ 5 ನಿಮಿಷಗಳ ಅವಧಿಯಲ್ಲಿ ಪ್ರದರ್ಶಿಸುವುದು ಅಲ್ಲದೇ ತಮ್ಮಲ್ಲಿರುವ ಜ್ಞಾನವನ್ನು ಬೇರೆಯವರಿಗೆ ಧಾರೆ ಎರೆಯುವ ಕಾರ್ಯಕ್ರಮವೇ ಜ್ಞಾನಧಾರ. ಇದೂ ಸಹ ಸಾರ್ವಜನಿಕರಿಗೆ ಬಹಳ ಅನುಕೂಲಕರವಾಗಿದೆ ಎಂದು ಉಷಾ ಶ್ರೀನಿವಾಸ್ ಹೇಳಿದರು.