ತುಮಕೂರು ಕನ್ನಡ ಸಾಹಿತ್ಯ ಪರಿಷತ್ತಿನ ಹೊಸ ಜಿಲ್ಲಾಧ್ಯಕ್ಷರು ಯಾರಾಗಬಹುದು?

tumakuru sahitya parishat election

ತುಮಕೂರು ಕನ್ನಡ ಸಾಹಿತ್ಯ ಪರಿಷತ್ತಿನ ಹೊಸ ಜಿಲ್ಲಾಧ್ಯಕ್ಷರು ಯಾರಾಗಬಹುದು?
ತುಮಕೂರು ಕನ್ನಡ ಸಾಹಿತ್ಯ ಪರಿಷತ್ತಿನ ಹೊಸ ಜಿಲ್ಲಾಧ್ಯಕ್ಷರು ಯಾರಾಗಬಹುದು?
ತುಮಕೂರು ಕನ್ನಡ ಸಾಹಿತ್ಯ ಪರಿಷತ್ತಿನ ಹೊಸ ಜಿಲ್ಲಾಧ್ಯಕ್ಷರು ಯಾರಾಗಬಹುದು?
ತುಮಕೂರು ಕನ್ನಡ ಸಾಹಿತ್ಯ ಪರಿಷತ್ತಿನ ಹೊಸ ಜಿಲ್ಲಾಧ್ಯಕ್ಷರು ಯಾರಾಗಬಹುದು?
ತುಮಕೂರು ಕನ್ನಡ ಸಾಹಿತ್ಯ ಪರಿಷತ್ತಿನ ಹೊಸ ಜಿಲ್ಲಾಧ್ಯಕ್ಷರು ಯಾರಾಗಬಹುದು?

21.11.2021, ಭಾನುವಾರ, ತುಮಕೂರು ಜಿಲ್ಲೆಯ ಮತ್ತು ಕರ್ನಾಟಕ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನು ಆಯ್ಕೆ ಮಾಡುವ ದಿನ, ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಯಾರೂ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದ ಮಟ್ಟಿಗೆ ಹೇಳಿಕೊಳ್ಳುವಷ್ಟು ಜನಪ್ರಿಯರಾಗಿಲ್ಲ. ಆದರೆ ತುಮಕೂರು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಭಾರೀ ಪೈಪೋಟಿ ನಡೆದಿದೆ. ಕನ್ನಡ ಭವನದ ಪಕ್ಕದಲ್ಲೇ ಇರುವ ವ್ಯಕ್ತಿಯೂ ಸೇರಿ ಚುನಾವಣಾ ಕಣದಲ್ಲಿರುವ ಆರು ಅಭ್ಯರ್ಥಿಗಳ ಪೈಕಿ ಕೆ.ಎಸ್.ಸಿದ್ಧಲಿಂಗಪ್ಪ, ಬಿ.ಸಿ.ಶೈಲಾ ನಾಗರಾಜ್, ಡಿ.ಚಂದ್ರಪ್ಪ ಹಾಗೂ ಸಾ.ಶಿ.ದೇವರಾಜ್ ಈ ಚುನಾವಣೆಯ ಮತದಾರರಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಗಮನ ಸೆಳೆದಿದ್ದಾರೆ.

ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ, ವಯೋನಿವೃತ್ತಿಗೆ ಮುನ್ನ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿ, ಗುಬ್ಬಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಅಖಿಲ ಭಾರತ ಕನ್ನಡ ಸಮ್ಮೇಳನ ಸಮಿತಿಯ ಕಾರ್ಯದರ್ಶಿಯಾಗಿ ಜೊತೆಗೆ ಜಿಲ್ಲಾ ಸಾಕ್ಷರತಾ ಆಂದೋಲನದಲ್ಲಿ ಸಕ್ರಿಯವಾಗಿದ್ದ ಕೆ.ಎಸ್.ಸಿದ್ದಲಿಂಗಪ್ಪನವರು ಈ ಚುನಾವಣೆಯಲ್ಲಿ ಹೆಚ್ಚು ಸಕ್ರಿಯರಾಗಿ ಪ್ರಚಾರ ನಡೆಸಿರುವುದು ಕಂಡು ಬಂದಿದೆ. ಚುನಾವಣೆ ಘೋಷಣೆಯಾಗಿ, ಕೋವಿಡ್ ಎರಡನೇ ಕಾರಣಕ್ಕೆ ಮುಂದೂಡಿಕೆಯಾದರೂ ಸಿದ್ದಲಿಂಗಪ್ಪನವರು ತಮ್ಮ ಪ್ರತ್ಯಕ್ಷ ಹಾಗೂ ಪರೋಕ್ಷ ಚುನಾವಣಾ ಪ್ರಚಾರವನ್ನು ಮುಂದುವರೆಸಿಕೊಂಡೇ ಬಂದರು. ಜೊತೆಗೆ ಒಂದಷ್ಟು ಉಪನ್ಯಾಸಕರು ಕಂ ಸಾಹಿತಿಗಳ ತಂಡವನ್ನು ಕಟ್ಟಿಕೊಂಡು, ಇಡೀ ಜಿಲ್ಲೆಯ ತಾಲೂಕು ಕೇಂದ್ರಗಳಷ್ಟೇ ಅಲ್ಲದೆ ದೂರದೂರದ ಹಳ್ಳಿಗಳಲ್ಲಿ , ವಾಹನಗಳೇ ತಲುಪದ ತೋಟದ ಮನೆಗಳಲ್ಲಿ ವಾಸವಿರುವ ಆಜೀವ ಸದಸ್ಯರನ್ನೂ ಪ್ರತ್ಯಕ್ಷ ಭೇಟಿ ಮಾಡಿ ಓಟು ಮಾಡುವಂತೆ ವಿನಂತಿಸಿಕೊಂಡಿದ್ದಾರೆಂಬ ವರದಿಗಳು ಬಂದಿವೆ.

ಮತ್ತೊಬ್ಬ ಅಭ್ಯರ್ಥಿ ಡಾ.ಬಿ.ಸಿ.ಶೈಲಾ ನಾಗರಾಜ್ : ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅವರ ಪ್ರತ್ಯಕ್ಷ ಬೆಂಬಲ ಪಡೆದಿರುವ ಶೈಲಾ ಈ ಹಿಂದಿನ ಐದು ವರ್ಷ ರಮಾಕುಮಾರಿ ಅವರಿಂದ ತುಮಕೂರು ತಾಲೂಕು ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದವರು. ಅಲ್ಲದೆ ಅವರೇ ಹತ್ತು ವರ್ಷ ಕಾಲ ಅಧ್ಯಕ್ಷರಾಗಿದ್ದ ಜಿಲ್ಲಾ ಲೇಖಕಿಯರ ಸಂಘಕ್ಕೆ ಹತ್ತು ವರ್ಷಕಾಲ ಅಧ್ಯಕ್ಷೆಯಾಗಿದ್ದವರು. ಈ ಲೇಖಕಿಯರ ಸಂಘ ಕೂಡಾ ಇವರಿಗೆ ಬೆಂಬಲ ನೀಡಿದೆ. ಜೊತೆಗೆ ಬಂಡಾಯ ಸಾಹಿತ್ಯ ಸಂಘಟನೆ ತಮಗೆ ಬೆಂಬಲ ನೀಡಿದೆ ಎಂದು ಹೇಳಿದರು. ಶೈಲಾ ನಾಗರಾಜ್ ತಮ್ಮನ್ನು ಸಾಹಿತಿ ಎಂದೂ ಉಳಿದವರು ಸಾಹಿತ್ಯದ ಗಂಧವಿಲ್ಲದವರು ಎಂದೇ ಬಿಂಬಿಸಿಕೊಳ್ಳುತ್ತಿದ್ದಾರೆ ಜೊತೆಗೆ ಮಹಿಳೆಗೆ ಇನ್ನೊಮ್ಮೆ ಅವಕಾಶ ಕೊಡಿ ಎಂಬ ಅಂಶವನ್ನೂ ಮುಂದಿಟ್ಟು ಓಟು ಕೇಳಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವ ಹೊಂದುವವರು ಸಾಹಿತಿಗಳೇ ಆಗಿರಬೇಕೆಂಬ ನಿಯಮವಿಲ್ಲ ಹಾಗೂ ಸಾಹಿತ್ಯೇತರ ಚಟುವಟಿಕೆಗಳೇ ಹೆಚ್ಚಾಗಿ ನಡೆಯುವ ಕನ್ನಡ ಸಾಹಿತ್ಯ ಪರಿಷತ್ ಅನ್ನು ನಡೆಸಲು ಸಾಹಿತಿಗಳೇ ಬೇಕಾಗಿಲ್ಲ ಎನ್ನುವುದನ್ನು ಈ ಹಿಂದೆ ರಾಜ್ಯ ಅಧ್ಯಕ್ಷರಾಗಿ ಚುನಾಯಿತರಾಗಿದ್ದ ಹರಿಕೃಷ್ಣ ಪುನರೂರು ಹಾಗೂ ಪುಂಡರೀಕ ಹಾಲಂಬಿ ಸಾಬೀತು ಪಡಿಸಿದ್ದಾರೆ. ನಿಕಟಪೂರ್ವ ರಾಜ್ಯ ಅಧ್ಯಕ್ಷರಾಗಿದ್ದ ನಿವೃತ್ತ ಅಧಿಕಾರಿ ಮನು ಬಳಿಗಾರ್ ಕುರ್ಚಿ ಆಸೆಯಿಂದಲೇ ಪರಿಷತ್ತಿನ ಚುನಾಯಿತ ಅಧ್ಯಕ್ಷರ ಅವಧಿಯನ್ನು ಮೂರು ವರ್ಷಗಳಿಂದ ಐದು ವರ್ಷಕ್ಕೆ ಹೆಚ್ಚಿಸಿದ್ದನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಬೇಕು.

ದೈನಂದಿನ ಚಟುವಟಿಕೆಗಳು, ಸಾಹಿತ್ಯ ಸಮ್ಮೇಳನಗಳು ಹಾಗೂ ಇನ್ನಿತರ ಕಾರ್ಯಗಳಿಗೆ ಸ್ವಾತಂತ್ರ್ಯ ಪೂರ್ವದಲ್ಲೇ 106 ವರ್ಷಗಳ ಹಿಂದೆ 1915ರಲ್ಲಿ ಸ್ಥಾಪನೆಯಾದಂದಿನಿಂದಲೂ ಅಂದಿನ ಮೈಸೂರು ಮಹಾರಾಜರು ಮತ್ತು ನಂತರ ರಾಜ್ಯ ಸರ್ಕಾರದ ಅನುದಾನಕ್ಕೆ ಕಾಯುವ ಕಾರಣದಿಂದಾಗಿಯೇ ಅಧಿಕಾರಸ್ಥ ರಾಜಕಾರಣಿಗಳ ಮತ್ತು ಅಧಿಕಾರಿಗಳ ಮರ್ಜಿಯಲ್ಲೇ ಜಿಲ್ಲಾ ಹಾಗೂ ರಾಜ್ಯ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರು ಇರಬೇಕಾಗಿದೆ ಎನ್ನುವುದೂ ಗಮನಿಸಬೇಕಾದ ಸಂಗತಿ. ಹಾಗಾಗಿಯೇ, ತುಮಕೂರಿನಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಸರ್ಕಾರಿ ನೌಕರರು ಕೊಟ್ಟಿದ್ದ ಅವರ ಒಂದು ದಿನದ ವೇತನ ವಂತಿಗೆಯಲ್ಲಿ ಉಳಿದ ಹಣವನ್ನೂ ಕೂಡಿಸಿ ಅಂದಿನ ಜಿಲ್ಲಾಧ್ಯಕ್ಷ ದಿವಂಗತ ಚಿ.ನಾ.ಏಕೇಶ್ವರ ಕನ್ನಡ ಭವನದ ನಿವೇಶನ ಖರೀದಿಸಲು ಸಾಧ್ಯವಾದದ್ದು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಹಾಲಿ ಅಧ್ಯಕ್ಷ ನರಸಿಂಹರಾಜು ಅವರು ಕಳೆದ ವಾರ ಮತ್ತೊಬ್ಬ ಅಭ್ಯರ್ಥಿ ಸಾ.ಶಿ.ದೇವರಾಜ್ ಅವರ ಸುದ್ದಿಗೋಷ್ಟಿಯಲ್ಲಿ ಇದೇ ಅಂಶವನ್ನು ಪ್ರಸ್ತಾಪಿಸಿ, ಒಟ್ಟು 13 ಸಾವಿರ ಚಿಲ್ಲರೆ ಆಜೀವ ಸದಸ್ಯರಲ್ಲಿ ಆರೂಸಾವಿರಕ್ಕೂ ಹೆಚ್ಚು ಶಿಕ್ಷಕರು ಹಾಗೂ ಸರ್ಕಾರಿ ನೌಕರರೇ ಇದ್ದು, ಇವರೆಲ್ಲ ದೇವರಾಜ್ ಅವರಿಗೇ ಓಟು ನೀಡುತ್ತಾರೆ ಮತ್ತು ಅವರೇ ಗೆಲ್ಲುತ್ತಾರೆ ಎಂದು ಹೇಳಿದರು. ಜೊತೆಗೆ ಸರ್ಕಾರಿ ನೌಕರರ ವಿಮಾ ಇಲಾಖೆಯಲ್ಲಿ ನೌಕರರಾಗಿದ್ದು ನಿವೃತ್ತಿ ಹೊಂದಿರುವ ಶೈಲಾ ನಾಗರಾಜ್ ಅವರ ವಿರುದ್ಧವೂ ಹರಿ ಹಾಯ್ದರು. ಹಾಗಾಗಿ ದೇವರಾಜ್ ಅವರು ತೆಗೆದುಕೊಳ್ಳಬಹುದಾದ ಒಟ್ಟು ಮತಗಳು ನರಸಿಂಹರಾಜು ಅವರ ಖಾತೆಗೇ ಸೇರಬೇಕಾಗುತ್ತದೆ.

ಗುಬ್ಬಿ ತಾಲೂಕಿನವರೇ ಅದ ಹಿಂದೊಮ್ಮೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೂ ಆಗಿದ್ದ ನಿವೃತ್ತ ಉಪನ್ಯಾಸಕ ಡಿ.ಚಂದ್ರಪ್ಪನವರು ಅವರ ಖಾಯಂ ಓಟ್ ಬ್ಯಾಂಕ್ ನಂಬಿ ಪ್ರಚಾರ ನಡೆಸಿದ್ದಾರೆ. ಅವರ ಇಳಿ ವಯಸ್ಸು ಅವರಿಗೆ ನೆಗೆಟಿವ್ ಆಗಲಿದೆ. ಪುಟ್ಟಕಾಮಣ್ಣನವರು ಶಿರಾ, ಮಧುಗಿರಿ, ಪಾವಗಡ, ಕೊರಟಗೆರೆ ತಾಲೂಕುಗಳಿಗೆ ಸೀಮಿತರಾಗಿದ್ದಾರೆ. ಇನ್ನು ಕನ್ನಡ ಭವನದ ಪಕ್ಕದಲ್ಲೇ ವಾಸವಿರುವ ನಿವೃತ್ತ ಪೊಲೀಸ್ ಮಹದೇವಪ್ಪನವರ ಕುರಿತು ಹೇಳುವುದೇನೂ ಇಲ್ಲ, ವಯಸ್ಸು ಮತ್ತು ವ್ಯಕ್ತಿತ್ವಗಳೆರಡರ ಮಿತಿಯೂ ಅವರಿಗಿದೆ. ಹಾಗಾಗಿ ಮೇಲ್ನೋಟಕ್ಕೆ ನಾಲ್ವರ ನಡುವೆ ಸ್ಪರ್ಧೆ ಇದೆ ಎನ್ನುವಂತೆ ಕಂಡು ಬಂದಿದೆ.

ಈ ನಾಲ್ವರಲ್ಲಿ ಕೆ.ಎಸ್.ಸಿದ್ದಲಿಂಗಪ್ಪ ಹಾಗೂ ಶೈಲಾ ನಾಗರಾಜ್ ಅವರಿಬ್ಬರೂ ಹೆಚ್ಚು ಮತದಾರರನ್ನು ತಲುಪಿದ್ದಾರೆ ಎನ್ನಬಹುದಾದರೂ, ಶೈಲಾ ನಾಗರಾಜ್ ಅವರು ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರದಲ್ಲಿರುವ ಮತದಾರರನ್ನು ಮಾತ್ರ ಭೇಟಿ ಮಾಡಲು ಸಾಧ್ಯವಾಗಿದೆ, ಉಳಿದವರನ್ನು ದೂರವಾಣಿ, ಮುಖಾಂತರ ಕೋರಿದ್ದೇನೆ ಎನ್ನುತ್ತಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳೂ ಬಳಕೆಯಾಗಿವೆ. ಆದರೆ ನನ್ನ ಸಮೀಪ ಪ್ರತಿಸ್ಪರ್ಧಿ ಯಾರು ಎನ್ನುವುದನ್ನು ಅಂದಾಜು ಮಾಡಲಾಗುತ್ತಿಲ್ಲ ಎನ್ನುತ್ತಾರೆ ಅವರು. ಆದರೆ, ವ್ಯವಸ್ಥಿತ ಪ್ರಚಾರದ ವಿಚಾರದಲ್ಲಿ ಕೆ.ಎಸ್.ಸಿದ್ಧಲಿಂಗಪ್ಪ ಉಳಿದ ಎಲ್ಲರಿಗಿಂತ ಮುಂದಿದ್ದು, ಸಣ್ಣ ಪುಟ್ಟ ಸಭೆಗಳು ಹಾಗೂ ವೈಯಕ್ತಿಕ ಭೇಟಿಗೆ ಹೆಚ್ಚು ಆದ್ಯತೆ ಕೊಟ್ಟಿದ್ದಾರೆ. ತಮಗೆ ಎಲ್ಲರೂ ಸಮಾನ ಪ್ರಮಾಣದ ಸ್ಪರ್ಧಿಗಳೇ ಆಗಿದ್ದಾರೆ ಎನ್ನುತ್ತಾರೆ ಸಿದ್ದಲಿಂಗಪ್ಪ.

ಎಲ್ಲ ಅಭ್ಯರ್ಥಿಗಳೂ ಕನ್ನಡ ನಾಡು ನುಡಿಯ ಉಳಿವು, ಬೆಳವಣಿಗೆಗಾಗಿ ನಮ್ಮನ್ನು ಆಯ್ಕೆ ಮಾಡಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಾಧಾನ್ಯತೆ ದೊರಕುತ್ತಿಲ್ಲ ಎಂಬ ಐತಿಹಾಸಿಕ ಕಾರಣದಿಂದಾಗಿಯೇ ಲೇಖಕಿಯರ ಸಂಘ ಅಸ್ತಿತ್ವಕ್ಕೆ ಬಂತು, ಆದರೆ ಜಿಲ್ಲೆಯಲ್ಲಿ ಆಗಿ ಹೋಗಿರುವ ಇಬ್ಬರು ಮಹಿಳಾ ಅಧ್ಯಕ್ಷರಾದ ಶಾಂತ ಸನ್ಮತಿಕುಮಾರ್ ಹಾಗೂ ಬಾ.ಹ.ರಮಾಕುಮಾರಿ ಮತ್ತು ಅವರ ತಂಡದವರೇ ಆಗಿರುವ ಹಾಲಿ ಅಭ್ಯರ್ಥಿ ಶೈಲಾ ನಾಗಾರಾಜ್ ಕೂಡಾ ತೀರಾ ಅಲ್ಪಸಂಖ್ಯೆ ಸದಸ್ಯರನ್ನು (ಹಾಲಿ ಅಧ್ಯಕ್ಷರೇ ಸುದ್ದಿಗೋಷ್ಟಿಯಲ್ಲಿ ಹೇಳಿಕೊಂಡಂತೆ 82 ಮಂದಿ) ಹೊಂದಿರುವ ಲೇಖಕಿಯರ ಸಂಘದಲ್ಲಿ ಸುದೀರ್ಘ ಅವಧಿಗೆ ಅಧಿಕಾರ ಹಿಡಿದುಕೊಂಡಿದ್ದವರೇ ಆಗಿರುವುದು ಸೋಜಿಗದ ಸಂಗತಿ.

ಈ ಸನ್ನಿವೇಶದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಯೂ ರಾಜಕೀಯ ರಂಗದ ಚುನಾವಣೆಗಳ ಸ್ವರೂಪವನ್ನೇ ಪಡೆದುಕೊಂಡಿದ್ದು ಮತದಾರರನ್ನು ಉಡುಗೊರೆಗಳ ಮುಖಾಂತರ ಓಲೈಸುವ ಕಾರ್ಯವೂ ಕಂಡಂತೆ, ಕಾಣದಂತೆ ಅಲ್ಲಲ್ಲಿ ನಡೆದಿದೆ. ತಮ್ಮ ಪ್ರಣಾಳಿಕೆಗಳಲ್ಲಿನ ಕೆಲವು ಅಂಶಗಳನ್ನು ಈಡೇರಿಸಲು ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಬೇಕಿಲ್ಲ ಎನ್ನುವಂತ ಭರವಸೆಗಳನ್ನೂ ಕೆಲವರು ನೀಡಿದ್ದಾರೆ. ಇಂಡಿಯಾ ಎಂದ ಮೇಲೆ ಜಾತಿ ಹೇಳಿಕೊಳ್ಳದೆ ಏನೂ ಸಾಗುವುದಿಲ್ಲ. ಪುಟ್ಟಕಾಮಣ್ಣ ಬಿಟ್ಟು ಉಳಿದ ಐವರೂ ಒಂದೇ ಜಾತಿಗೆ ಸೇರಿರುವುದರಿಂದ ಪ್ರದೇಶ ಮತ್ತು ಉಪಪಂಗಡದ ಸಂಗತಿಯೂ ಪ್ರಸ್ತಾಪವಾಗುತ್ತಿದೆ.

ಇವೆಲ್ಲವನ್ನು ಒತ್ತಟ್ಟಿಗಿರಿಸಿ, ಮತದಾರರು ಮತಗಟ್ಟೆಗೆ ಬಂದೇ ಓಟು ಮಾಡಬೇಕಿರುವ ಚುನಾವಣೆ ಇದಾಗಿರುವುದರಿಂದ ಅತಿ ಹೆಚ್ಚು ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗುವ ಅಭ್ಯರ್ಥಿಯೇ ಗೆಲ್ಲುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ಕೆ.ಎಸ್.ಸಿದ್ದಲಿಂಗಪ್ಪ ಮತ್ತು ಶೈಲಾ ನಾಗರಾಜ್ ಈ ಇಬ್ಬರೂ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಚಂದ್ರಪ್ಪನವರ ಓಟ್ ಬ್ಯಾಂಕಿನ ಪಾಲು ಇವರಿಬ್ಬರಲ್ಲಿ ಯಾರಿಗೆ ದಕ್ಕುವುದೋ ಅವರು ಗೆಲ್ಲುತ್ತಾರೆ. ಒಂದು ವೇಳೆ ಚಂದ್ರಪ್ಪನವರೇ ಆ ಎಲ್ಲ ಓಟುಗಳನ್ನು ಬಾಚಿಕೊಂಡರೆ ಫಲಿತಾಂಶ ವಿಭಿನ್ನವಾಗಿರಲಿದೆ. ಎಲ್ಲಿ ಎಲ್ಲರೂ ಒಂದು ಸಲ “ಜೈ ಕನ್ನಡಮ್ಮ” ಅಂತ ಜೋರಾಗಿ ಘೋಷಣೆ ಹಾಕಿ, ನೋಡೋಣ!