ಕರುಳಬಳ್ಳಿ  ಪ್ರಸಾದ್ ರಕ್ಷಿದಿ ನಮ್ಮೂರಿನ “ಯೆತ್ನಳ್ಳ” ‘ಎತ್ತಿನ ಹೊಳೆ’ಯಾದದ್ದು

ಕರುಳಬಳ್ಳಿ  ಪ್ರಸಾದ್ ರಕ್ಷಿದಿ ನಮ್ಮೂರಿನ “ಯೆತ್ನಳ್ಳ” ‘ಎತ್ತಿನ ಹೊಳೆ’ಯಾದದ್ದು

ಕರುಳಬಳ್ಳಿ   ಪ್ರಸಾದ್ ರಕ್ಷಿದಿ     ನಮ್ಮೂರಿನ “ಯೆತ್ನಳ್ಳ” ‘ಎತ್ತಿನ ಹೊಳೆ’ಯಾದದ್ದು

ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ರೂ.12,931 ಕೋಟಿ ಅಂದಾಜು ವೆಚ್ಚದಲ್ಲಿ ಆರಂಭವಾಗಿ ಇದೀಗ ಮೊನ್ನೆ ನೀರಾವರಿ ಸಚಿವ ಗೋವಿಂದ ಕಾರಜೋಳ ಅವರ ಬಾಯಲ್ಲಿ ರೂ. 33,000 ಕೋಟಿಗೆ ತಲುಪಿರುವ ಹಾಗೂ ಈವರೆಗೆ ನಮ್ಮ ನಿಮ್ಮ ತೆರಿಗೆ ಹಣದಿಂದ ರೂ. 22,000 ಕೋಟಿ ಖರ್ಚು ಮಾಡಿಸಿರುವ (ಅದರಲ್ಲಿ 40% ರಾಜಕಾರಣಿ-ಇಂಜಿನಿಯರ್‌ಗಳ ಸೇವಿಂಗ್ಸ್ ಖಾತೆಗೆ ಮತ್ತು ಗುತ್ತಿಗೆದಾರರ ಪಾಲು ಕಳೆದು ) ಎತ್ತಿನ ಹೊಳೆ ಮತ್ತು ನೀರು ಪೂರೈಕೆ ಯೋಜನೆ ಹಿನ್ನೆಲೆ ಕುರಿತಂತೆ ಅದೇ ನೆಲದಲ್ಲಿ ಹುಟ್ಟಿ ಬೆಳೆದವರೊಬ್ಬರ ಕರುಳಬಳ್ಳಿ ಸಂಬಂಧದ ಬರಹ ಇಲ್ಲಿದೆ. ‘ ಬೆವರ ಹನಿ ‘ ಓದುಗರಿಗಾಗಿ ಎರಡು ಕಂತುಗಳಲ್ಲಿ ಮಂಡಿಸುತ್ತಿದ್ದೇವೆ -ಸಂಪಾದಕ.

ಕರುಳಬಳ್ಳಿ 

ಪ್ರಸಾದ್ ರಕ್ಷಿದಿ

ನಮ್ಮೂರಿನ “ಯೆತ್ನಳ್ಳ” ‘ಎತ್ತಿನ ಹೊಳೆ’ಯಾದದ್ದು


ನಮ್ಮೂರಿನ ರಂಗ ಚಟುವಟಿಕೆಗಳು ಮತ್ತು ಆ ಮೂಲಕ ನಾವು ಕಟ್ಟಿಕೊಂಡ ಬದುಕು, ಹೋರಾಟಗಳು ದುಖಃ-ಸಂಭ್ರಮಗಳು, ಅದರ ಮೂಲಕ ಹೊರ ಜಗತ್ತಿನೊಡನೆ ನಾವು ನಡೆಸುತ್ತಿರುವ ಸಂವಾದ, ಈ ಎಲ್ಲದರ ಜೊತೆ ಎತ್ತಿನ ಹಳ್ಳದ ಸಂಬAಧವಿದೆ. ಸಂಬAಧ ಅನ್ನುವುದು ಯಾವಾಗಲೂ ದೊಡ್ಡದೇ.


“ಲಕ್ಷಯ್ಯ” ಎಂಬ ಅನಕ್ಷರ ಕೂಲಿಕಾರ್ಮಿಕನೊಬ್ಬ, ಸ್ವಾಭಿಮಾನಿಯಾಗಿ, ಸ್ವಾಧ್ಯಾಯಿಯಾಗಿ ಅಕ್ಷರಕಲಿತು, ತಲೆಯೆತ್ತಿ ನಿಲ್ಲುವ ಘಟನೆ ಮುಂದೆ ನಮ್ಮೂರಿನ ರಾತ್ರಿ ಶಾಲೆಗೆ, ಆ ಶಾಲೆಯ ಅಕ್ಷರದಾಹಿಗಳ ಮೂಲಕ ನಮ್ಮೆಲ್ಲ ಸಾಂಸ್ಕೃತಿಕ ಸಾಹಸಗಳಿಗೆ ಕಾರಣವಾಯಿತು. “ಲಕ್ಷ್ಮಯ್ಯ”ನ ಸ್ವಾಧ್ಯಾಯದ ಹಿನ್ನೆಲೆಯಲ್ಲಿ ಎತ್ತಿನ ಹಳ್ಳದ ಸಂಗೀತವಿದೆ. ಆತ ನನ್ನಿಂದ ಕಾಗುಣಿತವನ್ನು ಹೇಳಿಸಿಕೊಂಡು ಗುಟ್ಟಾಗಿ ಯಾರಿಗೂ ತಿಳಿಯದಂತೆ ರಾಗವಾಗಿ ಹಾಡಿ ಬಾಯಿಪಾಠ ಮಾಡಿಕೊಂಡದ್ದು ಇದೇ ಎತ್ತಿನ ಹಳ್ಳದಲ್ಲಿ ಸ್ನಾನ ಮಾಡುತ್ತ, ಈಜಾಡುತ್ತ. ಎತ್ತಿನ ಹಳ್ಳದ ನೀರಿನಲ್ಲಿ ಗುಣಿತಾಕ್ಷರಗಳು ಅನುರಣಗೊಂಡಿವೆ.


ಸಕಲೇಶಪುರ ತಾಲ್ಲೂಕಿನ ಪಶ್ಚಿಮ ಭಾಗದಲ್ಲಿರುವ ಮೂರ್ಕಣ್ಣು ಗುಡ್ಡ ಬೆಟ್ಟಸಾಲಿನಲ್ಲಿ ಎತ್ತಿನ ಹಳ್ಳ ಹುಟ್ಟುತ್ತದೆ. ಅಲ್ಲಿ ಮೂರು ತೊರೆಗಳು ಹುಟ್ಟುತ್ತವೆ. ಎತ್ತಿನಹಳ್ಳ, ಚಿಟ್ಟನಹಳ್ಳ ಮತ್ತು ಜಪಾವತಿ. ಉಳಿದೆರಡು ತೊರೆಗಳು ಪೂರ್ವಕ್ಕೆ ಹರಿದು ಹೇಮಾವತಿಯ ಮಡಿಲಿಗೆ ಬಿದ್ದರೆ, ಎತ್ತಿನಹಳ್ಳ ಪಶ್ಚಿಮಾಭಿಮುಖಿ. ಇದರ ಹರಿವು, ಎಂಟ್ಹತ್ತು ಕಿಲೋಮೀಟರುಗಳು ಅಷ್ಟೆ. ನಂತರ ಶಿರಾಡಿ ಘಟ್ಟ ಪ್ರದೇಶದ ಕೆಂಪೊಳೆಯಲ್ಲಿ ಲೀನವಾಗುತ್ತದೆ.


ನಾವೆಲ್ಲ ಚಿಕ್ಕವರಿದ್ದಾಗ ಬೇಸಗೆಯ ರಜಾದಿನಗಳಲ್ಲಿ ಕಾಲ ಕಳೆಯುತ್ತಿದ್ದುದು, ಈಜು ಕಲಿತದ್ದು ಎತ್ತಿನ ಹಳ್ಳದಲ್ಲೇ ಆ ಕಾಲದಲ್ಲಿ ಮಧ್ಯಾಹ್ನದ ವೇಳೆಗೆ ನೂರಾರು ದನಕರುಗಳನ್ನು ನೀರಿಗಾಗಿ ಎತ್ತಿನಹಳ್ಳಕ್ಕೆ ತರುತ್ತಿದ್ದರು. ಆಗ ಸುತ್ತಲಿನ ಗ್ರಾಮಗಳಲ್ಲಿ ಸಾವಿರಾರು ಎಕರೆ ಗೋಮಾಳವೂ ಇತ್ತು. ದನ ಕಾಯುವ ಹುಡುಗರ ದಂಡೇ ಅಲ್ಲಿ ನೆರೆಯುತ್ತಿತ್ತು. ಬುಗುರಿ, ಚಿಣ್ಣಿದಾಂಡು ಆಡುತ್ತಾ, ಬೀಡಿ ಸೇದುತ್ತ, ನಿತ್ಯ ಜಲಕ್ರೀಡೆಯ ವೈಭೋಗದಲ್ಲಿದ್ದ ಆ ಹುಡುಗರನ್ನು ಕಂಡಾಗ. ಶಾಲೆಗೆ ಹೋಗಲೇಬೇಕಾದ ಶಿಕ್ಷೆಗೊಳಗಾಗಿದ್ದ ನಮ್ಮಂತವರಿಗೆ, ದನಕಾಯುವವರು ಪರಮ ಸುಖಿಗಳೆಂದು ಅನ್ನಿಸಿ ಬುಗುರಿ, ಚಿಣ್ಣಿ ದಾಂಡಿಗಾಗಿ ಅವರ ಸ್ನೇಹಕ್ಕೆ ಹಾತೊರೆಯುತ್ತಿದ್ದೆವು. ಹರಕು ಬಟ್ಟೆ ತೊಟ್ಟು ಒಪ್ಪೊತ್ತಿನ ಊಟದ ಶ್ರೀಮಂತಿಕೆಯಲ್ಲಿದ್ದ ಆ ದನಗಾಹಿಗಳಿಗೆ, ಸಾಲೆ ಕಲಿಯುತ್ತಿದ್ದ ನಮ್ಮಂತವರ ಬಗ್ಗೆ ವಿಶೇಷ ಗೌರವವೇನೂ ಇರಲಿಲ್ಲ. ಅವರೆಲ್ಲ ನಮ್ಮನ್ನು ಕೈಲಾಗದ ‘ಹೇತ್ಲಾಂಡಿ’ಗಳAತೆ ಕಾಣುತ್ತಿದ್ದರಲ್ಲದೆ, ತಾವುಗಳು ಮಹಾನ್ ವೀರಾಧಿವೀರರಂತೆ ನಡೆದುಕೊಳ್ಳುತ್ತಿದ್ದರು. ಅವರಲ್ಲಿ ಅವರದ್ದೇ ಆದ ಅನೇಕ ತರದ ಸಾಹಸದ ರೋಚಕ ಕತೆಗಳಿರುತ್ತಿದ್ದವು. ಅವುಗಳಲ್ಲಿ ಮಾಮುಬ್ಯಾರಿಯ ಅಂಗಡಿಯಿAದ ಕದ್ದ ಬೀಡಿ ಬಂಡಲಿನ ಕತೆ, ಇನ್ಯಾರದೋ ತೋಟದಲ್ಲಿ ಬೈನೆ ಬಿಚ್ಚಿ ಸೇಂದಿ ಕುಡಿದು ಏಟು ತಿಂದದ್ದು ಮುಂತಾದ ಸಾಹಸಗಳಿರುತ್ತಿದ್ದವು.


ಎತ್ತಿನಹಳ್ಳದ ಎರಡೂ ದಡಗಳ ಉದ್ದಕ್ಕೂ ಸೊಂಪಾಗಿ ಬೆಳೆದ ವಾಟೆ ಮೆಳೆಗಳಿದ್ದವು. ಸುತ್ತಲಿನ ಗ್ರಾಮಗಳ ಸಮಸ್ತ ಕೃಷಿ ಚಟುವಟಿಕೆಗಳಿಗೆ ಪೂರಕ ಸಾಮಗ್ರಿಗಳಾದ ಅಂದರೆ ಕುಕ್ಕೆ, ಮಂಕರಿ, ಪಾತಿ-ಚಪ್ಪರಗಳಿಗೆ , ಮಳೆಗಾಲಕ್ಕೆ ಗೊರಗ, ಗುಡಿಸಲುಗಳ ಮಾಡಿಗೆ ಹುಲ್ಲು ಹೊದೆಸಲು ಅಡ್ಡಗಳು, ಗೋಡೆಗೆ ನೆರಿಕೆ, ತಟ್ಟಿ, ಎಲ್ಲಕ್ಕೂ ಎತ್ತಿನ ಹಳ್ಳದ ವಾಟೆಯೇ ಆಧಾರ. ಎಲ್ಲ ದನಗಾಹಿಗಳ ಕೈಯಲ್ಲೂ ದನಗಳನ್ನು ಅಟ್ಟುವ ಕೋಲಿನೊಂದಿಗೆ ವಾಟೆಯಿಂದ ತಯಾರಿಸಿದ ಕೊಳಲೂ ಇರುತ್ತಿತ್ತು. ದನಗಾಹಿಗಳು ದಾರಿಯುದ್ದಕ್ಕೂ ಯಾವುದಾದರೂ ಸಿನಿಮಾ ಹಾಡಿನ ಅಥವಾ ಜಾನಪದ ಗೀತೆಗಳ ದಾಟಿಯನ್ನು ನುಡಿಸುತ್ತ ಸಾಗುತ್ತಿದ್ದರು, ಇದು ಬಹಳ ದೂರದವರೆಗೆ ಕೇಳುತ್ತಿತ್ತು. ಅವರಲ್ಲೂ ಅನೇಕರು ಸುಶ್ರಾವ್ಯವಾಗಿ ನುಡಿಸುತ್ತಿದ್ದು ಮಾರ್ಗದರ್ಶನ ದೊರೆತಿದ್ದರೆ ಉತ್ತಮ ಕೊಳಲು ವಾದಕರಾಗುವ ಸಾಧ್ಯತೆ ಇತ್ತು. ಎತ್ತಿನ ಹಳ್ಳದ ಬಳಿ ಮೇಳೈಸಿರುತ್ತಿದ್ದ ನೂರಾರು ದನಕರುಗಳ ಹಿಂಡು ವಾಪಸ್ ಹೋಗುವಾಗ ತಮ್ಮ ಒಡೆಯನ ಕೊಳಲಿನ ದನಿಯನ್ನನುಸರಿಸಿ ತಮ್ಮತಮ್ಮ ಗುಂಪನ್ನು ಸೇರಿಕೊಳ್ಳುತ್ತಿದ್ದವು.


ಹಿಂದಿನ ಕಾಲದಲ್ಲಿ ಮಂಗಳೂರಿನತ್ತ ಸಾಗುತ್ತಿದ್ದ ಎತ್ತಿನ ಗಾಡಿಗಳು, ಇದೇ ಎತ್ತಿನ ಹಳ್ಳದ ಬಳಿ ತಂಗುತ್ತಿದ್ದವAತೆ. ಎತ್ತುಗಳನ್ನು ತೊಳೆದು, ನೀರು ಕುಡಿಸಿ ದಣಿವಾರಿಕೊಳ್ಳುತ್ತಿದ್ದ ಈ ಸ್ಥಳವನ್ನು ಎತ್ತಿನ ಹಳ್ಳವೆಂದು ಕರೆದಿರಬೇಕು. ಮುಂದೆ ಇದೇ ಹೆಸರು ರೂಡಿಗೆ ಬಂತು. ಜನರ ಬಾಯಲ್ಲಿ “ಯೆತ್ನಳ್ಳ”ವಾಯಿತು. (ಸಕಲೇಶಪುರ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ಸ್ಥಳಕ್ಕೆ “ಎತ್ತಿನಹಳ್ಳ” ಎಂದೇ ಹೆಸರು. ಇದರ ಮೇಲ್ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ನದಿ ತಿರುವು ಯೋಜನೆಯ ಅಣೆಕಟ್ಟೊಂದು ನಿರ್ಮಾಣವಾಗುತ್ತಿದೆ).


ಹೀಗೆ ಹಾಡುತ್ತ, ಕುಣಿಯುತ್ತ, ಮಳೆಗಾಲದಲ್ಲಿ ಆರ್ಭಟಿಸುತ್ತ, ಭೋರ್ಗರೆಯುತ್ತ, ತಣ್ಣಗೆ ಹರಿಯುತ್ತಿದ್ದ, ಎತ್ತಿನ ಹಳ್ಳಕ್ಕೆ ಶುಕ್ರ, ಶನಿಯೋ ಅಂತೂ ಒಂದು ದೆಸೆ ಪ್ರಾರಂಭವಾದದ್ದು, ಮೂರೂವರೆ ದಶಕಗಳ ಹಿಂದೆ. ಸಕಲೇಶಪುರ ನಗರಕ್ಕೆ ಪೂರೈಕೆಯಾಗುತ್ತಿರುವ ಹೇಮಾವತಿ ನದಿಯ ನೀರು ಕಲುಷಿತವಾಗಿದೆ, ಕುಡಿಯಲು ಯೋಗ್ಯವಾಗಿಲ್ಲ ಎಂದು ಕೆಲವರು ಅದಕ್ಕೆ ಪರಿಹಾರವನ್ನು ಹುಡುಕತೊಡಗಿದರು. ಅಂದಿನ ರಾಜಕಾರಣಿಗಳು, ಸಕಲೇಶಪುರ ಪುರಸಭೆಯ ಹಿರಿಯರೂ ಸೇರಿ ಎತ್ತಿನ ಹಳ್ಳದ ನೀರನ್ನು ಸಕಲೇಶಪುರ ನಗರಕ್ಕೆ ತಂದರೆ ಶುದ್ಧವಾದ ನೀರು ಸಿಗುತ್ತದೆಂದು ಭಾವಿಸಿದರು. ಇದಕ್ಕೆ ಅಂದಿನ ಹಿರಿಯ ರಾಜಕಾರಣಿಗಳಲ್ಲೊಬ್ಬರಾದ ಎನ್.ಕೆ.ಗಣಪಯ್ಯನವರೂ ದನಿಗೂಡಿದರು. ಗಣಪಯ್ಯನವರ “ಹಾರ್ಲೆ ಎಸ್ಟೇಟ್” ಕೂಡಾ ಎತ್ತಿನ ಹಳ್ಳದ ಪಕ್ಕದಲ್ಲೇ ಇತ್ತು. ಹಾರ್ಲೆ ಎಸ್ಟೇಟಿನ ಪಕ್ಕದಲ್ಲಿ ಸಣ್ಣ ಕಟ್ಟೆಯೊಂದನ್ನು ಕಟ್ಟಿ ನೀರನ್ನು ಆರು ಕಿ.ಮೀ ದೂರದ ಸಕಲೇಪುರಕ್ಕೆ ತರುವ ಸಣ್ಣ ಯೋಜನೆ ಇದಾಗಿತ್ತು. ಆದರೆ ಬಹಳ ಬೇಗ ಈ ಯೋಜನೆಯ ಮೇಲೆ ಅಧಿಕಾರಿಗಳ, ರಾಜಕಾರಣಿಗಳ ಗಮನ ಹರಿಯಿತು. ಎತ್ತಿನಹಳ್ಳದ ನೀರನ್ನು ಬರಿಯ ಸಕಲೇಶಪುರ ನಗರಕ್ಕೆ ತರುವುದರೊಂದಿಗೆ, ಸ್ವಲ್ಪ ದೊಡ್ಡ ಯೋಜನೆಯನ್ನಾಗಿ ಮಾಡಿ ಹೇಮಾವತಿ ನದಿಗೆ ಸೇರಿಸಿದರೆ ನೀರಾವರಿಗೂ ಮತ್ತಷ್ಟು ನೀರು ದೊರೆಯುವುದೆಂಬ ಮಾತು ಕೇಳಿಬರತೊಡಗಿತು. ಇದನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿದವರು ಅಂದಿನ ನೀರಾವರಿ ಮಂತ್ರಿಗಳಾಗಿದ್ದ ಹೆಚ್.ಸಿ. ಶ್ರೀಕಂಠಯ್ಯ. ಆಗಲೇ ಮುಂದಾಗಲಿರುವ ಅನಾಹುತವನ್ನು ಗ್ರಹಿಸಿ ಎನ್.ಕೆ.ಗಣಪಯ್ಯ ಈ ಯೋಜನೆಯನ್ನು ವಿರೋಧಿಸತೊಡಗಿದರು. ಆಗ ಕೆಲವರು “ಈಗ ಗಣಪಯ್ಯ ತನ್ನ ಕಾಫಿತೋಟ ಮುಳುಗಡೆ ಆಗುತ್ತೆ ಅಂತ ವಿರೋಧ ಮಾಡ್ತಾರೆ, ಮೊದ್ಲು ಶುರು ಮಾಡಿದ್ದೂ ಇವರೇ” ಎಂದು ದೂರತೊಡಗಿದರು. ವಾಸ್ತವದ ಸಂಗತಿಯೆAದರೆ, ಈ ಯೋಜನೆಯಿಂದ ಗಣಪಯ್ಯನವರ ತೋಟ ಮುಳಗಡೆಯಾಗುತ್ತಿರಲಿಲ್ಲ, ಬದಲಿಗೆ ಅಕ್ಕ ಪಕ್ಕದ ಕೆಲವು ಕಾಫಿ ತೋಟಗಳು ಭಾಗಶಃ ಮುಳುಗಡೆಯಾಗುತ್ತಿದ್ದವು.


ಆ ನಂತರದ ದಿನಗಳಲ್ಲಿ ಇದಕ್ಕಾಗಿ ಸರ್ವೆ ಇತ್ಯಾದಿ ಕಾರ್ಯಗಳು ಪ್ರಾರಂಭವಾದವು. ಪ್ರತಿನಿತ್ಯ ನೀರಿನ ಹರಿವನ್ನು ಅಳೆಯಲು ಒಬ್ಬ ನೌಕರನ ನೇಮಕವೂ ಆಯ್ತು. ಹಾರ್ಲೆ ಎಸ್ಟೇಟಿನ ಬಳಿ ಎತ್ತಿನ ಹಳ್ಳಕ್ಕೆ, ಅಬ್ಬಿ ಹಳ್ಳ ಎನ್ನುವ ಪುಟ್ಟ ತೊರೆಯೊಂದು ಸೇರುವ ಜಾಗವಿದೆ. ಅಲ್ಲಿ ಕಟ್ಟೆಯೊಂದನ್ನು ಕಟ್ಟಿ ನಾಲೆಯಮೂಲಕ, ಹೆಬ್ಬಸಾಲೆ, ಮಾವಿನಕೂಲು, ಗ್ರಾಮಗಳನ್ನು ಹಾದು, ಸಕಲೇಶಪುರ ಮೂಡಿಗೆರೆ ರಸ್ತೆಯನ್ನು ಹಾರ್ಲೆಕೂಡಿಗೆ ಎನ್ನುವ ಸ್ಥಳದಲ್ಲಿ ದಾಟಿ, ಗಾಣದಹೊಳೆ ಗ್ರಾಮವನ್ನು ಸೇರಿ ಅಲ್ಲಿಂದ ಹೇಮಾವತಿ ನದಿಗೆ ನೀರನ್ನು ಸಾಗಿಸುವ ಯೋಜನೆಯೂ ಸುದ್ದಿಯಾಯಿತು. ಯಾರ ಜಮೀನು ಹೋಗಬಹುದು, ಪರಿಹಾರವೆಷ್ಟು ಸಿಕ್ಕೀತು ಎನ್ನುವ ಲೆಕ್ಕಾಚಾರಗಳು ಪ್ರಾರಂಭವಾದವು. ಇದೆಲ್ಲ ಆಗಲು ಇನ್ನೂ ಇಪ್ಪತ್ತು ವರ್ಷವಾದರೂ ಬೇಕು. ಆವಾಗ ನೋಡೋಣ ಎನ್ನುವವರೂ ಇದ್ದರು.


ಆಗಿನ ಅಂದಾಜಿನ ಪ್ರಕಾರ, ಹಾರ್ಲೆ ಎಸ್ಟೇಟಿನ ಬಳಿ ಕಟ್ಟೆಯನ್ನು ಕಟ್ಟಿ ನೀರನ್ನು ತಿರುಗಿಸಿದರೆ,ಎತ್ತಿನ ಹಳ್ಳದಿಂದ ದೊರೆಯುವ ನೀರಿನ ಪ್ರಮಾಣ ಸುಮಾರು ಒಂದೂವರೆ ಟಿ.ಎಮ್.ಸಿ ಎಂದು ನೀರಾವರಿ ಇಲಾಖೆ ಪ್ರಕಟಿಸಿತ್ತು.


ನಂತರದ ವರ್ಷಗಳಲ್ಲಿ ಈ ನೀರು ತಿರುಗಿಸುವ ಯೋಜನೆ ಗುಪ್ತಗಾಮಿನಿಯಾಗಿ ಹರಿಯುತ್ತಲೇಇತ್ತು.


ಎತ್ತಿನ ಹಳ್ಳಕ್ಕೆ ಈ ಕಟ್ಟೆಯನ್ನು ಕಟ್ಟಲು ಯೋಜಿಸಿದ್ದ ಜಾಗ ಪೂರ್ಣ ಚಂದ್ರ ತೇಜಸ್ವಿಯವರ ಮೆಚ್ಚಿನ ತಾಣಗಳಲ್ಲಿ ಒಂದು. ಅವರು ಎಪ್ಪತ್ತರ ದಶಕದಲ್ಲಿ ಹಲವು ಬಾರಿ ಇಲ್ಲಿಗೆ ಮೀನು ಹಿಡಿಯಲು ಬರುತ್ತಿದ್ದರು. ಆಗ ನಮ್ಮ ಸುತ್ತಮುತ್ತಲಿನ ಗ್ರಾಮಗಳ ಕೆಲವರು ಯುವಕರೂ ಅವರೊಂದಿಗೆ ಹೋಗುವುದಿತ್ತು. ಆಗಿನ್ನೂ ಈ ಎತ್ತಿನ ಹಳ್ಳದ ನೀರನ್ನು ಸಕಲೇಶಪುರಕ್ಕೆ ಸಾಗಿಸುವ ಮಾತಷ್ಟೆ ಪ್ರಚಾರದಲ್ಲಿತ್ತು. ನನ್ನ ಗೆಳೆಯರು ಯಾರೋ ತೇಜಸ್ವಿಯವರಿಗೆ. ಈ ವಿಚಾರವನ್ನು ತಿಳಿಸಿದ್ದರು. ಅದಕ್ಕೆ ತೇಜಸ್ವಿ “ಹೇಮಾವತಿ ನೀರು ಕ್ಲೀನಿಲ್ಲ ಅಂದ್ರೆ ಅದನ್ನ ಕೆಡಸಿದವ್ರು ಯಾರು, ನಾವೇ ಅಲ್ವೆ, ಈಗೆಲ್ಲ ಏನೇನೋ ವಿಧಾನಗಳು ಬಂದಿವೆ, ಅದೇ ನೀರನ್ನು ಕ್ಲೀನ್ ಮಾಡಿ ಬಳಸಬೇಕು, ಮನೆಬಾಗಲ ನೀರು ಕೆಡಸಿ ಇನ್ನೊಂದು ಕಡೆಯಿಂದ ನೀರು ತರ್ತೀನಿ ಅನ್ನೋದು ಮೂರ್ಖತನ ಕಣ್ರೀ ನೀವೆಲ್ಲಾ ವಿರೋಧಿಸಬೇಕು” ಎಂದಿದ್ದರಂತೆ. ನಂತರದ ದಿನಗಳಲ್ಲಿ ತೇಜಸ್ವಿಯವರೂ ಇತ್ತ ಬರುವುದನ್ನು ಕಡಿಮೆ ಮಾಡಿದರು. (ಇತ್ತೀಚೆಗೆ ಖಾಸಗಿ ಟಿ.ವಿ ಛಾನಲ್ ಒಂದಕ್ಕೆ ತೇಜಸ್ವಿಯವರ ಬಗ್ಗೆ ನಾವೊಂದಷ್ಟು ಜನ ಗೆಳೆಯರು ಸೇರಿ, ಸಾಕ್ಷ್ಯ ಚಿತ್ರವೊಂದನ್ನು ಮಾಡಿದೆವು, ಆಗ ಇದೇ ಸ್ಥಳದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಎತ್ತಿನ ಹೊಳೆಯೋಜನೆ ಪೂರ್ಣಗೊಂಡರೆ ಈ ಸ್ಥಳಗಳೆಲ್ಲ ನೆನಪು ಮಾತ್ರವಾಗಲಿದೆ)


ಈಗ ನಮ್ಮೆಲ್ಲ ರಂಗ ಚಟುವಟಿಕೆಗಳು ನಡೆಯುತ್ತಿರುವ, ಇನ್ನೂ ನಿರ್ಮಾಣ ಹಂತದಲ್ಲಿರುವ ರಂಗ ಮಂದಿರಕ್ಕೆ ‘ಪೂರ್ಣಚಂದ್ರ ತೇಜಸ್ವಿ ರಂಗಮAದಿರ’ ವೆಂದು ಕರೆದಿದ್ದೇವೆ. ಇಲ್ಲಿ ನಿಂತು ನೋಡಿದರೆ, ಪೂರ್ವ ದಿಕ್ಕಿಗೆ ಸಕಲೇಶಪುರದ ಮಂಜ್ರಾಬಾದ್ ಕೋಟೆಯೂ, ದಕ್ಷಿಣದಲ್ಲಿ ಬಾನಿನಂಚಿಗೆ ಕುಮಾರ ಪರ್ವತವೂ ಪಶ್ಚಿಮದಲ್ಲಿ ಮೂರ್ಕಣ್ಣು ಗುಡ್ಡ ಸಾಲೂ, ವಾಯುವ್ಯದಲ್ಲಿ ದೂರದಲ್ಲಿ ಬಾಬಾಬುಡನ್ ಗಿರಿಶಿಖರಗಳೂ ಗೋಚರಿಸುತ್ತವೆ. ರಂಗಮAದಿರದಲ್ಲಿ ನಿಂತು, ಅಲ್ಲಿಂದಲೇ ಸಂಪೂರ್ಣ ಎತ್ತಿನ ಹಳ್ಳದ ಜಲಾನಯನ ಪ್ರದೇಶವನ್ನು ವೀಕ್ಷಿಸಬಹುದು.


ಘಟ್ಟ ಪ್ರದೇಶದ ಕೆಂಪೊಳೆಯಲ್ಲಿ ಹಾಗೂ ಕಾಡುಮನೆ ಭಾಗದಲ್ಲಿ ಜಲವಿದ್ಯುತ್ ಯೋಜನೆಗಳು ಪ್ರಾರಂಭವಾದ್ದರಿAದ, ಎತ್ತಿನ ಹಳ್ಳವನ್ನು ತಿರುಗಿಸುವ ಯೋಜನೆಯ ಮಾತು ಹಿನ್ನೆಲೆಗೆ ಸರಿಯಿತು. ಈ ನೀರನ್ನು ತಿರುಗಿಸಿದರೆ ಕೆಳಭಾಗದಲ್ಲಿ ಸ್ಥಾಪಿಸಿರುವ ಜಲವಿದ್ಯುತ್ ಯೋಜನೆಗಳಿಗೆ ನೀರಿನ ಕೊರತೆ ಉಂಟಾಗುವುದರಿAದ ಇದನ್ನು ಕೈಬಿಡಲಾಗುವುದೆಂದೇ ಎಲ್ಲರೂ ನಂಬಿದರು. ಈ ವಿದ್ಯುತ್ ಯೋಜನೆಗಳಲ್ಲಿ ಕೆಲವು ಆನೆದಾರಿಯಲ್ಲೇ ಅಡ್ಡವಾಗಿ ಸ್ಥಾಪಿತವಾದವು. ಇದರಿಂದಾಗಿ ಸುತ್ತಲಿನ ಗ್ರಾಮಗಳಲ್ಲಿ ಆನೆ ಮತ್ತಿತರ ಕಾಡುಪ್ರಾಣಿಗಳಿಂದ ತೊಂದರೆಯೂ ಆರಂಭವಾದವು. ಆದರೆ ಈ ಜಲ ವಿದ್ಯುತ್ ಯೋಜನೆಗಳಿಂದ ನಮ್ಮೂರು ಬೆಳಕಾದೀತೆಂತು ಕಾದು ಕುಳಿತವರಿಗೆ ನಿರಾಸೆಯಾದದ್ದು ಈ ವಿದ್ಯುತ್ ಆಂದ್ರದ ಪಾಲಾಗಿದೆಯೆಂದು ತಿಳಿದಾಗ.


ಇದೊಂದಿಗೆ ಮಲೆನಾಡಿನ ಅತ್ಯಂತ ಸೂಕ್ಷ್ಮ ಹಾಗೂ ಸುಂದರ ಅರಣ್ಯಪ್ರದೇಶಗಳಾದ ಬಿಸಲೆ, ಕಾಗಿನಹರೆ, ಹೊಂಗಡಹಳ್ಳ ಪ್ರದೇಶಗಳನ್ನೆಲ್ಲ ಮುಳುಗಿಸಿ ವಿದ್ಯುತ್ ತಯಾರಿಸುವ ‘ಗುಂಡ್ಯಜಲ ವಿದ್ಯುತ್ ಯೋಜನೆ’ಯೂ ಪ್ರಕಟವಾಯ್ತು. ನಂತರ ನಡೆದ ಹೋರಾಟದ ವಿವರಗಳು ಎಲ್ಲರಿಗೂ ತಿಳಿದಿರುವಂತದ್ದೇ ಆಗಿದೆ.


ಗುಂಡ್ಯ ಜಲ ವಿದ್ಯುತ್ ಯೋಜನೆಗೆ ವ್ಯಾಪಕವಾದ ವಿರೋಧ ವ್ಯಕ್ತವಾಯಿತು. ಸುಂದರಲಾಲ ಬಹುಗುಣ ಅವರೂ ಬಂದು ಈ ಹೋರಾಟದಲ್ಲಿ ಭಾಗಿಯಾದರು. ನಮ್ಮೂರಿನಲ್ಲೂ ಒಂದು ರಾತ್ರಿ ಉಳಿದರು. ನಮ್ಮ ರಂಗಮAದಿರದಲ್ಲಿ ಕುಳಿತು ಜನರನ್ನು ಭೇಟಿಯಾದರು ಮಾತನಾಡಿದರು. ಅವರೂ ಕೂಡಾ ರಂಗಕರ್ಮಿಗಳೆAದು ನಮಗೆ ತಿಳಿದ್ದು ಆಗಲೇ. ಪೂರ್ಣಚಂದ್ರ ತೇಜಸ್ವಿ ರಂಗಮAದಿರದ ಅಹ್ಲಾದಕರ ಪರಿಸರದಿಂದ ಖುಷಿಗೊಂಡAತಿದ್ದ ಬಹುಗುಣ ಲಹರಿಬಂದAತೆ ಮಾತನಾಡುತ್ತ ಹೋದರು. ಚಿಪ್ಕೊ ಚಳಿವಳಿಯಿಂದ ಆರಂಭಿಸಿದ ಅಜ್ಜನ ಮಾತು ಹೆಚ್ಚಾಗಿ ರಂಗಭೂಮಿಯ ಸುತ್ತಲೇ ತಿರುಗಿತು. ಬೀದಿ ನಾಟಕ, ಹಾಡುಗಳ ಮೂಲಕ ಜನ ಸಂಘಟನೆ ಮಾಡಿದ ದಿನಗಳನ್ನು ನೆನಪಿಸಿಕೊಂಡು ಉತ್ಸಾಹದಿಂದ ಮಾತನಾಡಿದರು. ‘ಭಾಷಣಕ್ಕೆ ಬಾಯಿ ಮಾತ್ರ ಇದೆ, ಆದರೆ ರಂಗಭೂಮಿಗೆ ಬಾಯಿ, ಕಣ್ಣು, ಕಿವಿ ಎಲ್ಲವೂ ಇವೆ ಹಾಗಾಗಿ ಯಾವುದೇ ಚಳುವಳಿಗೂ ರಂಗಭೂಮಿ ಅತ್ಯಂತ ಶಕ್ತ ಮಾಧ್ಯಮ ನಾಟಕಗಳನ್ನು ನೋಡಲು ಮಕ್ಕಳು ದೊಡ್ಡವರು ಮಹಿಳೆಯರು,ಎಲ್ಲರೂ ಬರುತ್ತಾರೆ ಅದರಲ್ಲೂ ಮಹಿಳೆಯರು ಸ್ವಾಭಾವಿಕವಾಗಿ ಹೆಚ್ಚು ಕರುಣಾಮಯಿಗಳು, ನಾಟಕ ನೇರವಾಗಿ ಹೃದಯಕ್ಕೆ ತಟ್ಟುವುದರಿಂದ ಅದರ ಪರಿಣಾಮ ಮಹಿಳೆಯರಲ್ಲಿ ಹೆಚ್ಚಿನದಾಗಿರುತ್ತದೆ. ಅದರಿಂದ ಚಳುವಳಿಗೂ ಹೆಚ್ಚಿನ ಬಲ ಬರುತ್ತದೆ’ ಎಂದ ಅವರು, ನೀವು ಈ ಪರಿಸರ ಕಾಳಜಿಯ ಯಾತ್ರೆಯನ್ನು ರಂಗಕ್ರಿಯೆಗಳ ಮೂಲಕವೂ ಮುಂದುವರಿಸಿ, ಈ ಕೆಲಸವನ್ನು ಯಾವ ಭಾಷಣಕಾರರಾಗಲೀ ಸರ್ಕಾರವಾಗಲೀ ಮಾಡಲಾಗದು, ಎಂದರು. ಪರಿಸರ ಯಾತ್ರೆಯ ಕಾರ್ಯಕ್ರಮದಬಗ್ಗೆ ಮಾತನಾಡುತ್ತ ನಾವು ಮಾಡುವ ಈ ಕೆಲಸ ಮನುಷ್ಯರಿಗೆ ಮಾತ್ರವಲ್ಲ ಇಡೀ ಭೂಮಂಡಲದ ಉಳಿವಿಗೆ ಆ ಮೂಲಕ ಸಕಲ ಜೀವರಾಶಿಯ ಉಳಿವಿಗೆ ಅಗತ್ಯ ಆದರೆ ನಮಗೆ ಹಿರಿಯರಿಗೆ ಇನ್ನು ಹೆಚ್ಚು ಕಾಲಾವಕಾಶ ಉಳಿದಿಲ್ಲ. ನಮ್ಮ ಮುಂದಿರುವ ಈ ಎಳೆಯರಿಗೆ ಸಾಕಷ್ಟು ಅವಕಾಶವಿದೆ ಆದ್ದರಿಂದ ಮಕ್ಕಳೇ ನಮ್ಮ ಮುಂದಿನ ಭರವಸೆ, ಎಂದ ಅವರು, ನಿಮ್ಮ ಪರಿಸರ ಯಾತ್ರೆಗೆ ನಾನೇನು ಕೊಡಬಲ್ಲೆ ಒಂದು ಧ್ಯೇಯವಾಕ್ಯ ನೀಡುತ್ತೇನೆ, “yes to life no to death” ಇದು ನಿಮ್ಮ ಚಿಂತನೆಯಲ್ಲಿರಲಿ, ಇದೇ ಪರಿಸರದ ಉಳಿವಿಗೆ ದಾರಿ ತೋರುತ್ತದೆ ಎಂದರು. 
ನಿಧಾನವಾಗಿ ಗುಂಡ್ಯ ಜಲವಿದ್ಯುತ್ ಯೋಜನೆ ಹಿನ್ನೆಲೆಗೆ ಸರಿಯಿತು.
( ಮುಂದಿನ ‘ಕಿನ್ನರಿ’ಯಲ್ಲಿ ಉತ್ತರಾರ್ಧ)