ಬಹುಮತದ ಸರ್ಕಾರ -ಬಿಜೆಪಿ ಕನಸು!?(ಭಾಗ-1) - ಮತ್ತೆ ಅಧಿಕಾರಕ್ಕೆ-ಕಾಂಗ್ರೆಸ್ ಕನಸು ಕರ್ನಾಟಕ-2023(ಭಾಗ-2)- ಮತ್ತೆ ಸಿಎಂ ಗಾದಿ: ಜೆಡಿಎಸ್ ಕನಸು ಕರ್ನಾಟಕ-2023(ಭಾಗ-3)
ರಾಜಕೀಯ ವಿಶ್ಲೇಷಣೆ
ಕರ್ನಾಟಕ-2023(ಭಾಗ-1)
ಆರ್.ಹೆಚ್.ನಟರಾಜ್
ಮೇ ಹತ್ತರಂದು ನಡೆಯುತ್ತಿರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ದೇಶದ ಗಮನ ಸೆಳೆದಿದೆ ಈ ಚುನಾವಣೆಯ ಫಲಿತಾಂಶ ದೇಶದ ರಾಜಕೀಯ ವಿದ್ಯಮಾನಗಳ ದಿಕ್ಕು ದಶಗಳನ್ನು ನಿರ್ಧರಿಸಬಲ್ಲ ಚುನಾವಣೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಕಳೆದ ಒಂಬತ್ತು ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ , ಸತತ ಸೋಲಿನಿಂದ ಹೊರಬರಲು ಯತ್ನಿಸುತ್ತಿರುವ ಖರ್ಗೆ ನೇತೃತ್ವದ ಕಾಂಗ್ರೆಸ್ ಮತ್ತು ಮತ್ತೊಮ್ಮೆ ದೇಶದ ರಾಜಕೀಯ ಚರಿತ್ರೆಯಲ್ಲಿ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿರುವ ಪ್ರಾದೇಶಿಕ ಪಕ್ಷಗಳಿಗೆ ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ.
ಮುಂಬರುವ ಲೋಕಸಭಾ ಚುನಾವಣೆಗೆ ಒಂದು ರೀತಿಯಲ್ಲಿ ರಿಹರ್ಸಲ್ ಈ ಚುನಾವಣೆ ಎಂದು ಪರಿಗಣಿಸಲಾಗಿದೆ.
ಕಳೆದ ಒಂಬತ್ತು ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದರೂ ಉತ್ತರ ಪ್ರದೇಶ ಮತ್ತು ಗುಜರಾತ್ ಹೊರತುಪಡಿಸಿ ಬೇರೆ ಯಾವುದೇ ರಾಜ್ಯದಲ್ಲೂ ತನ್ನ ಸ್ವಂತ ಕಾಲ ಬಲದ ಮೇಲೆ ಸರ್ಕಾರ ಇಲ್ಲ.
ದೇಶದ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರಬಲ್ಲ ಮೆಟ್ರೋ ನಗರಗಳಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿಲ್ಲ ಇಂತಹ ಪ್ರಾಬಲ್ಯ ಸಾಧಿಸಲು ಇರುವ ಅವಕಾಶ ಕರ್ನಾಟಕದ ಬೆಂಗಳೂರು ಮಾತ್ರ ಹೀಗಾಗಿ ಬಿಜೆಪಿಗೆ ಇಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.
ಉತ್ತರ ಪ್ರದೇಶ ಗೆಲುವು ಯೋಗಿ ಆದಿತ್ಯನಾಥ್ ಅವರ ಗೆಲುವು ಎಂದು ಬಣ್ಣಿಸಿದರೆ , ಗುಜರಾತ್ ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿದೆ, ಜೊತೆಗೆ ಭಾರತದ ದಕ್ಷಿಣ ರಾಜ್ಯಗಳ ಪೈಕಿ ನೇರ ಬಹುಮತ ಇಲ್ಲದಿರುವಾಗಲೂ ಆಪರೇಶನ್ ಕಮಲದ ಮೂಲಕ ಅಧಿಕಾರ ಹಿಡಿಯುತ್ತ ಬಂದಿರುವ ಬಿಜೆಪಿಗೆ ಈ ಸಲವಾದರೂ ಕರ್ನಾಟಕದಲ್ಲಿ ಬಹುಮತ ಪಡೆದು ಸ್ವಂತ ಶಕ್ತಿಯಲ್ಲಿ ಸರ್ಕಾರ ರಚಿಸುವ ಕನಸು. ಇಂತದ್ದೊಂದು ಗೆಲುವು ದಕ್ಕಿದ್ದೇ ಆದಲ್ಲಿ ಈ ಗೆಲುವು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಗೆಲುವು ಎಂಬುದನ್ನು ತೋರಿಸಿಕೊಡುವ ಮಹತ್ವಾಕಾಂಕ್ಷೆಯೂ ಇದೆ.
ಹೀಗಾಗಿ ಕರ್ನಾಟಕ ವಿಧಾನಸಭೆ ಚುನಾವಣೆಯ ಗೆಲುವು ಬಿಜೆಪಿಯ ಪಾಲಿಗೆ ಮುಂಬರುವ ಲೋಕಸಭಾ ಚುನಾವಣೆಗೆ ವಿಜಯದ ಹೆಬ್ಬಾಗಿಲಾಗಬೇಕು ಎಂದು ಪರಿಗಣಿಸಿ ಎಲ್ಲ ರೀತಿಯ ತಂತ್ರ ರೂಪಿಸುತ್ತಿದೆ. ಇದಕ್ಕಾಗಿ ಪ್ರಧಾನಿ ಮೋದಿ ಅತ್ಯಂತ ಹೆಚ್ಚು ಬಾರಿ ಕರ್ನಾಟಕ ಭೇಟಿ ನೀಡುವ ಮೂಲಕ ಈ ಚುನಾವಣೆ ಸಂಪೂರ್ಣ ತಮ್ಮ ವರ್ಚಸ್ಸಿನ ಮೇಲೆ ನಡೆಯುತ್ತಿರುವ ಚುನಾವಣೆ ಎಂಬುದು ಎಂದು ಸಾಬೀತುಪಡಿಸಲು ಹೊರಟಿದ್ದಾರೆ.
ಇದರ ಜೊತೆಗೆ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆಗೆ ಒಂದು ರೀತಿಯಲ್ಲಿ ಪ್ರಯೋಗ ಶಾಲೆಯನ್ನಾಗಿ ಮಾಡಿದೆ .ಈ ಚುನಾವಣೆಯಲ್ಲಿ ಗೆಲುವು ಸಾಧಿಸುವ ದೃಷ್ಟಿಯಿಂದ ಹಿಜಾಬ್- ಕೇಸರಿ ಶಾಲು, ಗೋ ಹತ್ಯೆ, ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಮುಸ್ಲಿಂ ವ್ಯಾಪಾರಿಗಳ ನಿಷೇಧ ಟಿಪ್ಪು ಸುಲ್ತಾನ್, ಸಾವರ್ಕರ್, ಮಹಾತ್ಮ ಗಾಂಧಿ, ಶಿವಾಜಿ ಸೇರಿದಂತೆ ಹಲವಾರು ಭಾವನಾತ್ಮಕ ವಿಷಯಗಳ ಮೂಲಕ ಬಹು ಸಂಖ್ಯಾತ ಹಿಂದೂ ಮತ ಬ್ಯಾಂಕ್ ಸೃಷ್ಟಿಸುವ ಬಿಜೆಪಿ ಪ್ರಯತ್ನ ಫಲ ಕೊಟ್ಟೀತೇ ಎಂದು ನೋಡಬೇಕಿದೆ.
ಉತ್ತರದ ಕೆಲವು ರಾಜ್ಯಗಳಲ್ಲಿ ಇಂತಹ ಭಾವನಾತ್ಮಕ ವಿಷಯ ಬಿಜೆಪಿಗೆ ಅನುಕೂಲಕರವಾಗಿತ್ತು ಇದನ್ನೇ ಕರ್ನಾಟಕದಲ್ಲಿ ಪ್ರಯೋಗಿಸುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಗೆ ದೊಡ್ಡ ಬಂಡವಾಳದ ಇಡಿಗಂಟನ್ನು ಸಂಪಾದಿಸಲು ಪ್ರಯತ್ನ ನಡೆಸಿತು. ಆದರೆ ಕರ್ನಾಟಕದ ಪ್ರಜ್ಞಾವಂತ ಮತದಾರ ಇದಕ್ಕೆ ಅವಕಾಶ ನೀಡಲಿಲ್ಲ ಆರಂಭದಲ್ಲಿ ಇಂತಹ ಭಾವನಾತ್ಮಕ ವಿಷಯ ಸಾಕಷ್ಟು ಸುದ್ದಿ ಮಾಡಿತಾದರೂ ನಂತರದಲ್ಲಿ ಅದಕ್ಕೆ ಅಂತಹ ಬೆಂಬಲ ವ್ಯಕ್ತವಾಗಲಿಲ್ಲ.
ಅಭಿವೃದ್ಧಿ ಕಾರ್ಯಸೂಚಿ:
ಭಾವನಾತ್ಮಕ ವಿಷಯಗಳ ಬಗ್ಗೆ ರಾಜ್ಯದ ಮತದಾರರಿಂದ ನಿರೀಕ್ಷಿತ ಪ್ರತಿಕ್ರಿಯೆ ವ್ಯರ್ಥವಾಗದ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಕಾರ್ಯತಂತ್ರವನ್ನ ಬದಲಾಯಿಸಿತು, ಭಾವನಾತ್ಮಕ ವಿಷಯಗಳನ್ನು ಬಿಟ್ಟು ಅಭಿವೃದ್ಧಿ ಕಾರ್ಯಸೂಚಿಯನ್ನು ಮುಂದಿಟ್ಟು ಮತಯಾಚಿಸಲು ತೊಡಗಿದೆ ಇದಕ್ಕಾಗಿ ಪ್ರಧಾನಿ ಮೋದಿ ಗೃಹ ಸಚಿವ ಅಮಿತ್ ಶಾ ಅವರಿಂದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಸಿಗುವಂತೆ ಮಾಡಿದೆ.
ಕಿತ್ತೂರು ಕರ್ನಾಟಕಕ್ಕೆ ಕಳಸಾ ಬಂಡೂರಿ ಮಧ್ಯ ಕರ್ನಾಟಕಕ್ಕೆ ಭದ್ರಾ ಮೇಲ್ದಂಡೆ, ಕಲ್ಯಾಣ ಕರ್ನಾಟಕಕ್ಕೆ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಗಳ ಆರಂಭ ಹಾಗೂ ಬಾಕಿ ಇರುವ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಹಳೆ ಮೈಸೂರು ಪ್ರಾಂತ್ಯಕ್ಕೆ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಯೋಜನೆ, ಬೆಂಗಳೂರಿಗೆ ಮೆಟ್ರೋ ಯೋಜನೆ ವಿಸ್ತರಣೆ ಹಾಗೂ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಈ ಮೂಲಕ ಎಂಜಿನ್ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಸಾಧ್ಯ ಕರ್ನಾಟಕವನ್ನು ದೇಶದ ಅತ್ಯಂತ ಪ್ರಮುಖ ರಾಜ್ಯವನ್ನಾಗಿಸಲು ಬಿಜೆಪಿ ಪ್ರಣತೊಟ್ಟಿದೆ ಇದಕ್ಕಾಗಿ ಬಿಜೆಪಿಯನ್ನು ಮತ್ತೊಮ್ಮೆ ಗೆಲ್ಲಿಸುವಂತೆ ಮನವಿ ಮಾಡುತ್ತಿದೆ.
ಮೀಸಲಾತಿ ಪ್ರಯೋಗ:
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಒಕ್ಕಲಿಗ ಮತ್ತು ಲಿಂಗಾಯತ ಪಂಚಮಸಾಲಿ ಸಮುದಾಯದ ಮೀಸಲಾತಿ ಬೇಡಿಕೆ ಬಗ್ಗೆ ಬಿಜೆಪಿ ನೇತೃತ್ವದ ಸರ್ಕಾರ ಸವಾಲೆನಿಸುವ ತೀರ್ಮಾನ ತೆಗೆದುಕೊಂಡಿದೆ. ಪರಿಶಿಷ್ಟ ಜಾತಿ ಮತ್ತು ವರ್ಗದ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ ಹಾಗೆ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಬೇಡಿಕೆ ಈಡೇರಿಸಿದೆ.
ಮುಸ್ಲಿಂ ಸಮುದಾಯ ಎಂದಿಗೂ ಬಿಜೆಪಿ ಜೊತೆ ನಿಲ್ಲುವುದಿಲ್ಲ ಎಂಬ ಸತ್ಯದ ಅರಿವಿರುವ ಬಿಜೆಪಿ ಒಂದು ಕಠಿಣ ತೀರ್ಮಾನವನ್ನು ತೆಗೆದುಕೊಂಡು ಈ ಸಮುದಾಯಕ್ಕೆ ರಾಜ್ಯದಲ್ಲಿ ನೀಡಲಾಗಿದ್ದ ಶೇಕಡ ನಾಲ್ಕರಷ್ಟು ಮೀಸಲಾತಿಯನ್ನು ರದ್ದುಪಡಿಸಿ ಅವರನ್ನು ಆರ್ಥಿಕವಾಗಿ ಹಿಂದುಳಿದ ಮೀಸಲಾತಿ ಖೋಟಾಕ್ಕೆ ಸೇರಿಸಿದೆ ಹಾಗೆಯೇ ಇವರಿಂದ ಪಡೆದ ನಾಲ್ಕರ ಮೀಸಲಾತಿಯನ್ನು ರಾಜ್ಯದ ಪ್ರಬಲ ಸಮುದಾಯವಾದ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ಹಂಚಿಕೆ ಮಾಡಿದೆ ಈ ಮೂಲಕ ಬಹುಸಂಖ್ಯಾತ ಸಮುದಾಯಗಳನ್ನು ಪರಿವರ್ತಿಸಿ ಅವುಗಳನ್ನು ಮತ ಬ್ಯಾಂಕ್ ಆಗಿ ಪರಿವರ್ತಿಸುವ ಕ್ರಮಕ್ಕೆ ಮುಂದಾಗಿದೆ.
ಯಡಿಯೂರಪ್ಪ ಗುಣಗಾನ:
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂಬ ಆರೋಪವನ್ನು ದೂರ ಮಾಡುವ ಪ್ರಯತ್ನ ನಡೆಸಿದ್ದು ಅವರಿಗೆ ಪ್ರಚಾರದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಅಲ್ಲದೆ ಈ ಚುನಾವಣೆ ಯಡಿಯೂರಪ್ಪ ಮತ್ತು ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಎದುರಿಸಲಾಗುತ್ತಿದೆ ಎಂಬ ಘೋಷಣೆ ಮಾಡಿದೆ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೂ ಪಕ್ಷದಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ಲಿಂಗಾಯತ ಸಮುದಾಯಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ.
ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯ ವಿಧಾನಸಭಾ ಚುನಾವಣೆಯ ಸಂಚಾಲಕ ಹುದ್ದೆ ನೀಡುವ ಮೂಲಕ ಯಡಿಯೂರಪ್ಪ ಅವರನ್ನು ಸಮಾಧಾನ ಪಡಿಸುವ ಕೆಲಸ ಮಾಡಿದೆ ಟಿಕೆಟ್ ಹಂಚಿಕೆ ಪ್ರಕ್ರಿಯೆಯಲ್ಲಿ ಯಡಿಯೂರಪ್ಪ ಸಕ್ರಿಯವಾಗಿ ತೊಡಗುವಂತೆ ಮಾಡುವ ಮೂಲಕ ತಮ್ಮ ಸಮುದಾಯದ ನಾಯಕನಿಗೆ ಬಿಜೆಪಿ ಅಪಮಾನ ಮಾಡಿದೆ ಎಂಬ ಲಿಂಗಾಯತ ಸಮುದಾಯದ ಆರೋಪವನ್ನು ದೂರ ಮಾಡುವ ಪ್ರಯತ್ನ ನಡೆಸಿದೆ ಈ ಮೂಲಕ ಬಿಜೆಪಿ ತನ್ನ ಸಾಂಪ್ರದಾಯಿಕ ಮತ ಬ್ಯಾಂಕ್ ಆದ ಲಿಂಗಾಯತ ಸಮುದಾಯಕ್ಕೆ ಮನ್ನಣೆ ನೀಡಿದೆ.
ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಾಲ್ಮೀಕಿ ಸಮುದಾಯ ಮತ್ತು ಪರಿಶಿಷ್ಟ ಜಾತಿ ಎಡಗೈ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಿದೆ ಈ ಸಮುದಾಯದ ನಾಯಕರಿಗೆ ಪಕ್ಷದ ಪ್ರಮುಖ ತೀರ್ಮಾನ ಕೈಗೊಳ್ಳುವ ಸಭೆಯಲ್ಲಿ ಪಾಲ್ಗೊಳ್ಳುವ ಅವಕಾಶ ನೀಡುವ ಮೂಲಕ ಈ ಪ್ರದೇಶದಲ್ಲಿ ಕಳೆದ ಚುನಾವಣೆಯಲ್ಲಿ ಕಳೆದುಕೊಂಡಿದ್ದನ್ನು ಗಳಿಸುವ ತಂತ್ರ ರೂಪಿಸಿದೆ.
ಅದೇ ರೀತಿಯಲ್ಲಿ ಹಳೆ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗಿದೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಸರಣಿ ಸಭೆಗಳನ್ನು ಆಯಸ್ಸುವ ಮೂಲಕ ಆಯೋಜಿಸುವ ಮೂಲಕ ಅವರ ಅಲೆಯ ಮೇಲೆ ಬಿಜೆಪಿ ಆರಿಸಿ ಬರುವಂತೆ ಪ್ರಯತ್ನ ನಡೆಸಿದೆ.
ಬಿಜೆಪಿ ಮುಂದಿರುವ ಸವಾಲುಗಳು
ಇಷ್ಟೆಲ್ಲಾ ತಂತ್ರಗಾರಿಕೆಯನ್ನು ಮಾಡಿ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ಕಸರತ್ತು ನಡೆಸುತ್ತಿರುವ ಬಿಜೆಪಿಯ ಹಾದಿಯಲ್ಲಿ ಹಲವು ಕಠಿಣ ಸವಾಲುಗಳಿವೆ.
- ಸರ್ಕಾರದ ವಿರುದ್ಧ ಕೇಳಿ ಬರುತ್ತಿರುವ ಶೇಕಡ 40ರಷ್ಟು ಕಮಿಷನ್ ಮತ್ತು ಭ್ರಷ್ಟಾಚಾರದ ಆರೋಪ ಚುನಾವಣೆಯಲ್ಲಿ ದೊಡ್ಡ ಹೊಡೆತ ಕೊಡುವ ಸಾಧ್ಯತೆ ಇದೆ.
- ಲಂಚ ಪ್ರಕರಣದಲ್ಲಿ ಶಾಸಕರು ಜೈಲು ಸೇರಿದ್ದು, ಪೊಲೀಸ್, ಶಿಕ್ಷಕರು ಮತ್ತು ಕೆಪಿಟಿಸಿಎಲ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ನಡೆದ ಕರ್ಮಕಾಂಡ ಆರೋಪಗಳು ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಉಂಟುಮಾಡುವ ಸಾಧ್ಯತೆ ಇದೆ .
- ತನ್ನ ಅಧಿಕಾರ ಅವಧಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳು ಬದಲಾದರೂ ಸರ್ಕಾರದ ವರ್ಚಸ್ಸು ಹೆಚ್ಚಿಸುವಂತಹ ಯಾವುದೇ ಕೆಲಸ ನಡೆಯಲಿಲ್ಲ ಜನರ ಮನಸ್ಸಿನಲ್ಲಿ ಉಳಿಯುವಂತಹ ಯಾವುದೇ ಯೋಜನೆಗಳು ಜಾರಿಗೆ ಬರಲಿಲ್ಲ
- ರಾಜಕೀಯವಾಗಿಯೂ ಬಿಜೆಪಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಬದಲಾಯಿಸಿದ್ದು ಯಾಕೆ ಆನಂತರದಲ್ಲಿ ಅವರ ಪುತ್ರನಿಗೆ ಸರ್ಕಾರದಲ್ಲಿ ಯಾವುದೇ ಅವಕಾಶ ಯಾಕೆ ನೀಡಲಿಲ್ಲ ಎಂದು ಲಿಂಗಾಯತ ಸಮುದಾಯ ಪ್ರಶ್ನಿಸುತ್ತಿದೆ.
- ಆಂತರಿಕ ಭಿನ್ನಮತ ಬಿಜೆಪಿಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಜಾರಕಿಹೊಳಿ- ಸವದಿ ಬಣ್ಣದ ಘರ್ಷಣೆ ಧಾರವಾಡದಲ್ಲಿ ಜಗದೀಶ್ ಶೆಟ್ಟರ್ -ಸಿಎಂ ನಡುವಿನ ಭಿನ್ನಮತ ಶಿವಮೊಗ್ಗದಲ್ಲಿ ಈಶ್ವರಪ್ಪ -ಆಯನೂರು ಮಂಜುನಾಥ್, ಮೈಸೂರಿನಲ್ಲಿ ರಾಮದಾಸ್- ಪ್ರತಾಪ ಸಿಂಹ ಹೀಗೆ ಭಿನ್ನಮತದ ಪಟ್ಟಿ ಬೆಳೆಯುತ್ತಾ ಸಾಗುತ್ತಿದೆ ಇವೆಲ್ಲವೂ ಚುನಾವಣೆಯಲ್ಲಿ ಪ್ರಮುಖ ಪರಿಣಾಮ ಬೀರಲಿದೆ.
- ಬಹುಸಂಖ್ಯಾತರನ್ನು ಓಲೈಸುವ ದೃಷ್ಟಿಯಿಂದ ಮೀಸಲಾತಿ ಕುರಿತಂತೆ ತೆಗೆದುಕೊಂಡಿರುವ ನಿಲುವು ಮುಸ್ಲಿಂ ಲಂಬಾಣಿ ಬೋವಿ ಮತ್ತು ಕೊರಚ ಸಮುದಾಯವನ್ನು ಕೆರಳಿಸಿದೆ. ಮುಸ್ಲಿಂ ಮತ್ತು ಲಂಬಾಣಿ ಸಮುದಾಯ ಬೀದಿಗಿಳಿದು ಹೋರಾಟ ನಡೆಸುತ್ತಿದ್ದು ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ತನ್ನ ಸಮುದಾಯಕ್ಕೆ ಕಾರ್ಯ ನೀಡಿದೆ
ಮತ್ತೆ ಅಧಿಕಾರಕ್ಕೆ-ಕಾಂಗ್ರೆಸ್ ಕನಸು
ಕರ್ನಾಟಕ-2023(ಭಾಗ-2)
ಆರ್.ಹೆಚ್.ನಟರಾಜ್
ಆಡಳಿತ ವಿರೋಧಿ ಅಲೆಯಿಂದ ಸರ್ಕಾರ ಕಳೆದುಕೊಂಡ ಕಾಂಗ್ರೆಸ್ ಈ ಬಾರಿ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಎಲ್ಲ ರೀತಿಯ ಪ್ರಯತ್ನ ನಡೆಸಿದೆ ನಾಯಕರು ತಮ್ಮ ನಡುವಿನ ವೈಮನಸ್ಯ ಮರೆತು ಒಗ್ಗಟ್ಟಿನ ಮಂತ್ರ ಪಠಣದೊಂದಿಗೆ ಅಧಿಕಾರ ಗದ್ದುಗೆ ಹಿಡಿಯುವ ಕನಸು ಕಾಣುತ್ತಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಈ ಚುನಾವಣೆಯನ್ನು ಅತ್ಯಂತ ಸವಾಲಾಗಿ ಪರಿಗಣಿಸಿದ್ದಾರೆ ತಮ್ಮ ತವರು ರಾಜ್ಯದಲ್ಲಿ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಸಂದೇಶ ರವಾನಿಸಬೇಕು ಎಂದು ಸಂಕಲ್ಪ ಮಾಡಿದ್ದಾರೆ
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಎಂಬ ಬಣ ರಾಜಕಾರಣದ ವಿಷಯವನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತೆಗೆದುಕೊಂಡು ಇಡೀ ಪಕ್ಷದ ಚಟುವಟಿಕೆಯನ್ನು ತಮ್ಮ ಹತೋಟಿಗೆ ತೆಗೆದುಕೊಂಡಿದ್ದಾರೆ ಹಲವು ಕಾರಣಗಳಿಂದ ಪಕ್ಷ ಬಿಟ್ಟು ಹೋದವರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ ಸ್ಥಳೀಯವಾಗಿ ಇದ್ದ ಗುಂಪುಗಾರಿಕೆಯನ್ನು ತಾವೇ ಸ್ವತಃ ಮಧ್ಯಪ್ರವೇಶಿಸಿ ಇತ್ಯರ್ಥ ಪಡಿಸಿದ್ದಾರೆ.
ಅಭ್ಯರ್ಥಿಗಳ ಆಯ್ಕೆ ಬಿಜೆಪಿ ವಿರುದ್ಧ ಹೋರಾಟ ಚುನಾವಣೆಯ ಪ್ರಚಾರ ಚುನಾವಣೆಯಲ್ಲಿ ಪ್ರಸ್ತಾಪಿಸಬೇಕಾದ ಅಂಶಗಳು ಜನರಿಗೆ ನೀಡಿರುವ ಭರವಸೆ ಹೀಗೆ ಎಲ್ಲಾ ವಿಷಯದಲ್ಲೂ ಖರ್ಗೆ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ ಚೋಡ ಯಾತ್ರೆ, ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಹಾದು ಹೋಗಿದ್ದು ಇದರ ಪರಿಣಾಮ ಚುನಾವಣೆಯಲ್ಲಿ ಕೆಲಸ ಮಾಡುವ ಸಾಧ್ಯತೆ ಇದೆ.
ಸಂಘಟಿತ ಹೋರಾಟ:
ಚುನಾವಣೆಗೆ ಮುನ್ನ ಬಿಜೆಪಿ ಪ್ರಸ್ತಾಪಿಸಿದ ಎಲ್ಲಾ ಭಾವನಾತ್ಮಕ ವಿಷಯಗಳನ್ನು ಅತ್ಯಂತ ನಾಜೂಕಾಗಿ ನಿರ್ವಹಿಸಿದ ಕಾಂಗ್ರೆಸ್ ಆನಂತರದಲ್ಲಿ ಸರ್ಕಾರದ ವಿರುದ್ಧ ಅತ್ಯಂತ ಯಶಸ್ವಿ ಹೋರಾಟಗಳನ್ನು ಸಂಘಟಿಸಿದೆ ಬಿಜೆಪಿ ನೇತೃತ್ವದ ಸರ್ಕಾರ ಅತ್ಯಂತ ಸರ್ಕಾರ ಎಂದು ಜನರಿಗೆ ಮನದಟ್ಟು ಮಾಡುವ ನಿಟ್ಟಿನಲ್ಲಿ ಕೈಗೊಂಡ ಪೇ ಸಿಎಂ ಅಭಿಯಾನ ಮತ್ತು 40% ಕಮಿಷನ್ ಸರ್ಕಾರ ಎಂಬ ಘೋಷಣೆ ಕಾಂಗ್ರೆಸ್ ಗೆ ಲಾಭ ತಂದುಕೊಡುವ ಸಾಧ್ಯತೆ ಇದೆ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನರ ನಡುವೆ ಚರ್ಚೆಯಾಗುವಂತೆ ಮಾಡುವಲ್ಲಿ ಕಾಂಗ್ರೆಸ್ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದೆ.
ನೆನೆಗುದಿಗೆ ಬಿದ್ದಿರುವ ಕೃಷ್ಣ ಮೇಲ್ದಂಡೆ ಯೋಜನೆ ಕಾಮಗಾರಿ, ಕಳಸ ಬಂಡೂರಿ ಯೋಜನೆಗೆ ಅನುಮತಿ ಸಿಕ್ಕರೂ ಆರಂಭವಾಗದ ಕಾಮಗಾರಿ ಕುಂಟುತ್ತಾ ಸಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಪ್ರವಾಹ ಸಂತ್ರಸ್ತರಿಗೆ ಸಕಾಲದಲ್ಲಿ ಸಿಗದ ನೆರವು ಕರಾವಳಿಯಲ್ಲಿ ಉಂಟಾಗಿರುವ ಅಸಹಿಷ್ಣುತೆ, ಮೊದಲದ ವಿಷಯಗಳನ್ನು ಅತ್ಯಂತ ವ್ಯವಸ್ಥಿತವಾಗಿ ಪ್ರಚಾರ ಮಾಡುವ ಮೂಲಕ ಕಾಂಗ್ರೆಸ್ ಚುನಾವಣೆಯನ್ನು ನಡೆಸುತ್ತಿದೆ.
ಲಿಂಗಾಯತ ಪ್ರತ್ಯೇಕ ಧರ್ಮ ವಿವಾದದಲ್ಲಿ ಹೊಡೆತ ಅನುಭವಿಸಿ ಎಚ್ಚೆತ್ತಿರುವ ಕಾಂಗ್ರೆಸ್ ಇದೀಗ ಮೀಸಲಾತಿ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ತೀರ್ಮಾನ ಅವೈಜ್ಞಾನಿಕವಾಗಿದೆ ಎಂದು ಪಂಚಮಸಾಲಿ ಲಿಂಗಾಯತ ಸಮುದಾಯದಲ್ಲಿ ಅರಿವು ಮೂಡಿಸುವ ಪ್ರಯತ್ನದ ಜೊತೆಗೆ ಮುಸ್ಲಿಂ, ಲಂಬಾಣಿ, ಬೋವಿ ಮೊದಲಾದ ಸಮುದಾಯಗಳಿಗೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಸಂಘಟಿತ ಪ್ರಚಾರ ಮಾಡುವ ಮೂಲಕ ಈ ಸಮುದಾಯದ ಮತಗಳನ್ನು ಸೆಳೆಯುವ ಪ್ರಯತ್ನ ನಡೆಸಿದೆ.
ಎರಡು ವರ್ಷಗಳಿಗೂ ಮೊದಲೇ ಚುನಾವಣೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ಇದೆ ಮೊದಲ ಬಾರಿಗೆ ವೇಳಾಪಟ್ಟಿ ಪ್ರಕಟಣೆಗೊ ಮುನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿ ರಣಕಹಳೆ ಮುಳುಗಿಸಿದೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ ಎಲ್ಲವೂ ಕಾಂಗ್ರೆಸ್ ಪರವಾದ ವಾತಾವರಣ ಸೃಷ್ಟಿಸಿದೆ
ಕಲ್ಯಾಣ ಕರ್ನಾಟಕದಲ್ಲಿ ಕಳೆದ ಬಾರಿ ಕಳಿಸಿದ ಸ್ಥಾನಕ್ಕಿಂತ ಈ ಬಾರಿ ಹೆಚ್ಚು ಸ್ಥಾನ ಗಳಿಸುವ ನಿರೀಕ್ಷೆ ಇಟ್ಟುಕೊಂಡಿದೆ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವ ಹಾಗೂ ಸರ್ಕಾರ ಈ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿಲ್ಲ ಎಂಬ ಆರೋಪ ಮಾಡುವ ಮೂಲಕ ಕಲಬುರ್ಗಿ ಬಳ್ಳಾರಿ, ಕೊಪ್ಪಳ ಯಾದಗಿರಿ ಜಿಲ್ಲೆಗಳಲ್ಲಿ ಹೆಚ್ಚು ಸ್ಥಾನ ಗಳಿಸಲು ತಂತ್ರ ರೂಪಿಸಿದೆ.
ಕಳೆದ ಚುನಾವಣೆಯಲ್ಲಿ ಕಿತ್ತೂರು ಕರ್ನಾಟಕದಲ್ಲಿ ಕಾಂಗ್ರೆಸ್ ಅತ್ಯಂತ ಕಳಪೆ ಸಾಧನೆ ಮಾಡಿತ್ತು ಈ ಬಾರಿ ಸುಧಾರಿಸುವ ಲಕ್ಷಣಗಳು ಗೋಚರಿಸಿದೆ. ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ಅವರಿಗೆ ಪಕ್ಷದಲ್ಲಿ ಉನ್ನತ ಹುದ್ದೆ ನೀಡಲಾಗಿದೆ ವಿಜಯಪುರ, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಈ ಹಿಂದೆ ಇದ್ದ ಗೊಂದಲಗಳನ್ನು ಬಗೆಹರಿಸಿ ಒಮ್ಮತದ ತೀರ್ಮಾನಗಳನ್ನ ಕೈಗೊಳ್ಳಲಾಗಿದೆ ಹೀಗಾಗಿ ಇಲ್ಲಿ ಹೆಚ್ಚಿನ ಲಾಭ ವಾಗುವ ನಿರೀಕ್ಷೆ ಇದೆ.
ಮಧ್ಯ ಕರ್ನಾಟಕ ಮತ್ತು ಹಳೆ ಮೈಸೂರು ಪ್ರದೇಶದಲ್ಲಿ ಜೆಡಿಎಸ್ ಜೊತೆಗೆ ನೇರ ಪೈಪೋಟಿ ಎದುರಿಸುತ್ತಿತ್ತು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅತ್ಯಂತ ಹೆಚ್ಚು ಸಕ್ರಿಯವಾಗಿ ಈ ಪ್ರದೇಶದಲ್ಲಿ ಹೋರಾಟ ನಡೆಸಿದ್ದು ಎಲ್ಲರ ವಿಶ್ವಾಸದೊಂದಿಗೆ ಮುನ್ನಡೆಯುತ್ತಿರುವುದು ಕಾಂಗ್ರೆಸ್ ಗೆ ವರದಾನವಾಗಿದೆ.
ಮುಖ್ಯಮಂತ್ರಿ ಸ್ಥಾನ ಯಾರಿಗೆ
ಗದ್ದುಗೆ ಹಿಡಿಯುತ್ತೇನೆ ಎಂಬ ವಿಶ್ವಾಸದಲ್ಲಿರುವ ಕಾಂಗ್ರೆಸ್ ಗೆ ಮುಖ್ಯಮಂತ್ರಿ ಹುದ್ದೆ ಯಾರು ಅಲಂಕರಿಸುತ್ತಾರೆ ಎಂಬ ವಿಷಯ ದೊಡ್ಡ ಸವಾಲಾಗಿದೆ ಅಭ್ಯರ್ಥಿಯ ಆಯ್ಕೆ ಸೇರಿದಂತೆ ಹಲವಾರು ವಿಷಯಗಳಲ್ಲಿ ಈ ಅಂಶ ಪ್ರಧಾನವಾಗಿ ಪ್ರಸ್ತಾಪಿಸುವ ಮೂಲಕ ಕಾಂಗ್ರೆಸ್ ಒಡೆದ ಮನೆ ಎಂಬುದನ್ನು ಹಲವಾರು ಬಾರಿ ಪ್ರಸ್ತಾಪಿಸಿದೆ ಇದನ್ನೇ ಬಿಜೆಪಿ ಮತ್ತು ಜೆಡಿಎಸ್ ಗಳು ಪ್ರಮುಖ ಬಂಡವಾಳ ವನ್ನಾಗಿಸಿಕೊಂಡು ಕಾಂಗ್ರೆಸ್ ಅನ್ನು ಹಿಮ್ಮೆಟ್ಟಿಸುವ ಪ್ರಯತ್ನ ನಡೆಸಿವೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣ ರಾಜಕಾರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಅದು ಕಾರ್ಯಕರ್ತರ ಮೇಲೂ ಪರಿಣಾಮ ಬೀರಿದೆ. ಮೂಲ ಮತ್ತು ವಲಸಿಗ ಎಂಬ ವಿಭಜನೆ ಇನ್ನೂ ದೂರವಾಗಿಲ್ಲ ಚುನಾವಣಾ ಸಮಯದಲ್ಲಿ ಪಕ್ಷಕ್ಕೆ ಬಂದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂಬ ಆರೋಪಗಳು ಕಾಂಗ್ರೆಸ್ ಗೆ ನೀಡುವ ಸಾಧ್ಯತೆ ಇದೆ.
ಮತ್ತೆ ಸಿಎಂ ಗಾದಿ: ಜೆಡಿಎಸ್ ಕನಸು
ಕರ್ನಾಟಕ-2023(ಭಾಗ-3)
ಆರ್.ಹೆಚ್.ನಟರಾಜ್
ಕೇವಲ ಹಳೆ ಮೈಸೂರು ಪ್ರಾಂತ್ಯದಲ್ಲಿ ಮಾತ್ರ ಪ್ರಾಬಲ್ಯ ಸಾಧಿಸಿರುವ ಜೆಡಿಎಸ್ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುತ್ತಿದ್ದು ತಾನು ಕಿಂಗ್ ಮೇಕರ್ ಅಲ್ಲ ತಾನೇ ಕಿಂಗ್ ಎಂದು ಬಿಂಬಿಸುತ್ತಿದೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪಂಚರತ್ನ ಯಾತ್ರೆ ಮೂಲಕ ಇಡೀ ರಾಜ್ಯದಲ್ಲಿ ಸಂಚಾರ ಮಾಡಿದ್ದು ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಅಲ್ಲದೆ ತಾವು ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಅತ್ಯಂತ ವಿಶ್ವಾಸದಿಂದ ಹೇಳುತ್ತಿದ್ದಾರೆ ಎಲ್ಲರಿಗಿಂತ ಮೊದಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ರಣಕಹಳೆ ಮೊಳಗಿಸಿದ ಕುಮಾರಸ್ವಾಮಿ, ಜೆಡಿಎಸ್ ಪ್ರಾದೇಶಿಕ ಹಿತಾಸಕ್ತಿಯನ್ನು ಕಾಪಾಡುವ ಪಕ್ಷವಾಗಿದೆ ಕಾಂಗ್ರೆಸ್ ಮತ್ತು ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಹಿತಾಸಕ್ತಿ ಕಾಪಾಡಲು ಸಾಧ್ಯವಿಲ್ಲ ಎಂದು ಭಾವನಾತ್ಮಕವಾಗಿ ಪ್ರಚಾರ ಮಾಡ್ತಾ ಗಮನ ಸೆಳೆದಿದ್ದಾರೆ.
ಹಳೆ ಮೈಸೂರು ಪ್ರದೇಶಕ್ಕೆ ಸೇರಿದ ಹಾಸನ, ಮಂಡ್ಯ, ರಾಮನಗರ, ಮೈಸೂರು, ತುಮಕೂರು ಜೆಡಿಎಸ್ ಭದ್ರಕೋಟೆಯಾಗಿದ್ದರೆ ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಾಮರಾಜನಗರ, ಬೆಂಗಳೂರು ನಗರ ಮತ್ತು ಚಿತ್ರದುರ್ಗದಲ್ಲಿ ಸಾಕಷ್ಟು ಪ್ರಾಬಲ್ಯ ಹೊಂದಿದೆ ಇದನ್ನು ಹೊರತುಪಡಿಸಿ ಬೀದರ್ ರಾಯಚೂರು ಕಲಬುರಗಿ ಮತ್ತು ಧಾರವಾಡದಲ್ಲೂ ಕೂಡ ಜೆಡಿಎಸ್ ಕೊಂಚಮಟ್ಟಿನ ಸಾಧಿಸಿದೆ ಈ ಚುನಾವಣೆಯಲ್ಲಿ 50 ಸ್ಥಾನ ಗೆಲ್ಲುವ ಮೂಲಕ ಎರಡು ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ತಮ್ಮ ಬಳಿ ಬರಬೇಕೆಂದು ಯೋಚಿಸಿ ಯೋಜನೆ ರೂಪಿಸಿದ್ದಾರೆ ಇಂತಹ ಸಮಯದಲ್ಲಿ ತಾವು ಹೊಸದಾಗಿ ಅಸ್ತಿತ್ವಕ್ಕೆ ಬರುವ ಸರ್ಕಾರಕ್ಕೆ ಬೆಂಬಲ ನೀಡುವ ಬದಲಿಗೆ ಈ ಹಿಂದೆ ಮಾಡಿದಂತೆ ತಮ್ಮ ನೇತೃತ್ವದ ಸರ್ಕಾರಕ್ಕೆ ಆ ಪಕ್ಷದ ಬೆಂಬಲ ಪಡೆಯುವ ಲೆಕ್ಕಾಚಾರ ಹಾಕಿದ್ದಾರೆ.
ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಬಿಜೆಪಿ ಮತ್ತು ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರೊಂದಿಗೆ ಮಾತುಕತೆ ನಡೆಸುವ ಮೂಲಕ ಉತ್ತಮ ಒಡನಾಟ ಮುಂದುವರಿಸಿರುವುದು ಇದೀಗ ಗುಟ್ಟಾಗಿ ಉಳಿದಿಲ್ಲ.
ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ಕುಮಾರಸ್ವಾಮಿ ಅತ್ಯಂತ ವ್ಯವಸ್ಥಿತವಾಗಿ ಯೋಜನೆ ರೂಪಿಸಿದ್ದರು ಕೂಡ ಹಿಂಬಾಗಿಲ ಮೂಲಕ ಅಧಿಕಾರ ಚುಕ್ಕಾಣಿ ಹಿಡಿಯಲು ಜೆಡಿಎಸ್ ಪ್ರಯತ್ನ ನಡೆಸುತ್ತಿದೆ ಅದಕ್ಕೆ ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಜೆಡಿಎಸ್ ಪ್ರಾಬಲ್ಯ ವಿರುವ ಪ್ರದೇಶದಲ್ಲಿ ವಿನೂತನ ತಂತ್ರಗಾರಿಕೆಯೊಂದಿಗೆ ಮುನ್ನಡೆಯುತ್ತಿರುವುದು ಜೆಡಿಎಸ್ ನ ದೊಡ್ಡ ಕುಟುಂಬ ದೇವೇಗೌಡರ ಮನೆಯಲ್ಲಿ ಉಂಟಾಗಿರುವ ಕಲಹ ಹಾಸನದಲ್ಲಿನ ಭಿನ್ನಮತ ಸೇರಿದಂತೆ ಹಲವು ಅಂಶಗಳು ಕುಮಾರಸ್ವಾಮಿ ಅವರ ಸಿಎಂ ಹುದ್ದೆಯ ಕನಸಿಗೆ ಅಡ್ಡಿಯನ್ನುಂಟು ಮಾಡಿದೆ.
ಈ ಎಲ್ಲಾ ವಿಷಯಗಳು ಚುನಾವಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತಿವೆಯಾದರೂ ಈ ಚುನಾವಣೆಯ ಫಲಿತಾಂಶ ಹಲವಾರು ಕಾರಣಗಳಿಂದ ರಾಷ್ಟ್ರ ರಾಜಕಾರಣದ ಗಮನ ಸೆಳೆದಿದೆ ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿಯುತಿದ್ದಂತೆ ನೆರೆಯ ತೆಲಂಗಾಣ ಉತ್ತರ ಭಾರತದ ಮಧ್ಯಪ್ರದೇಶ ರಾಜಸ್ತಾನ ವಿಧಾನಸಭೆ ಚುನಾವಣೆಗಳು ನಡೆಯಲಿವೆ ಈ ಚುನಾವಣೆಗಳ ಮೇಲೆ ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ನೇರ ಪರಿಣಾಮ ಬೀರಲಿದೆ ಇದು ಮುಂಬರುವ ಲೋಕಸಭಾ ಚುನಾವಣೆಗೂ ದಿಕ್ಸೂಚಿ ಆಗಲಿದೆ.
ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಹೊಸ ನಾಯಕತ್ವ ಮತ್ತು ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆ ಮೂಲಕ ಪುಟಿದೇಳುವ ಪ್ರಯತ್ನ ನಡೆಸಿದ್ದು ಈ ಚುನಾವಣೆ ಫಲಿತಾಂಶ ಅದಕ್ಕೆ ಉತ್ತರವಾಗಲಿದೆ.
ಮೂರನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜೋಡಿ. ಈ ಚುನಾವಣೆಯನ್ನು ಗೆಲ್ಲುವ ಮೂಲಕ ಕರ್ನಾಟಕವನ್ನು ದಕ್ಷಿಣ ಭಾರತದ ಬಿಜೆಪಿಯ ಹೆಬ್ಬಾಗಿಲಾಗಿ ಪರಿವರ್ತಿಸಲು ಮುಂದಾಗಿದೆ.
ಕಳೆದ 9 ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಹಲವು ಅಭಿವೃದ್ಧಿ ಯೋಜನೆಗಳು ಜನರ ಮೇಲೆ ಯಾವ ಪರಿಣಾಮ ಬೀರಿದೆ ಎಂಬ ಪ್ರಶ್ನೆಗೆ ಈ ಚುನಾವಣೆಯ ಫಲಿತಾಂಶ ಉತ್ತರವಾಗಲಿದೆ
ಜಿಎಸ್ ಟಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಬೆಲೆ ಹೆಚ್ಚಳ ಅದಾನಿ ಅಂಬಾನಿ ಪರವಾದ ಸರ್ಕಾರ ಎಂಬ ಆರೋಪಗಳಿಗೆ ಜನರ ಉತ್ತರವೇನು ಎಂಬುದು ಈ ಫಲಿತಾಂಶದಿಂದ ತಿಳಿಯಲಿದೆ.
ದಕ್ಷಿಣದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಪ್ರಪಲ್ಯ ತಮಿಳುನಾಡು ತೆಲಂಗಾಣ ಆಂಧ್ರ ಮಹಾರಾಷ್ಟ್ರದಲ್ಲಿ ಪ್ರಾದೇಶಿಕ ಶಕ್ತಿಗಳು ನಿರ್ಣಾಯಕ ಅದೇ ರೀತಿ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಸಾಕಷ್ಟು ಪ್ರಬಲವಾಗಿದೆ ಹೀಗಾಗಿ ಈ ಚುನಾವಣೆಯಲ್ಲಿ ಮತದಾರ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಪ್ರಾದೇಶಿಕ ಪಕ್ಷಗಳಿಗೆ ಮನ್ನಣೆ ಹಾಕುತ್ತಾನೆ ಎಂಬ ಪ್ರಶ್ನೆಗೆ ಉತ್ತರ ಈ ಚುನಾವಣೆಯ ಫಲಿತಾಂಶದಿಂದ ಲಭ್ಯವಾಗಲಿದೆ ಹೀಗಾಗಿ ಕರ್ನಾಟಕ ವಿಧಾನಸಭೆಯ ಒಂದು ಚುನಾವಣೆ ರಾಷ್ಟ್ರ ರಾಜಕಾರಣದ 100 ಪ್ರಶ್ನೆಗಳಿಗೆ ಉತ್ತರವಾಗಲಿದೆ.