ಬೆಂಬಲ ಬೆಲೆ ಖರೀದಿ ಎಂಬ ಹಗಲು ದರೋಡೆ

   ಬೆಂಬಲ ಬೆಲೆ ಖರೀದಿ ಎಂಬ ಹಗಲು ದರೋಡೆ

ವರ್ತಮಾನ

ಚಂಸು ಪಾಟೀಲ

 

      ಕೇಂದ್ರ ಸರ್ಕಾರ ಇತ್ತೀಚೆಗೆ ಒಮ್ಮೆಲೆ ಜ್ಞಾನೋದಯವಾದಂತೆ ಕೃಷಿ ಉತ್ಪನ್ನಗಳ ಬೆಂಬಲ ಬೆಲೆಯನ್ನು ಏರಿಸಿದೆ. ಈ ಬೆಂಬಲ ಬೆಲೆ ಘೋಷಣೆಯಿಂದ ರೈತರಿಗೆ ಏನಾದರೂ ಬಿಡಿಗಾಸಿನ ಉಪಯೋಗ ಇದೆಯೇ ಎಂದು ಕೇಳಿದರೆ, ಇಲ್ಲ ಎಂಬುದೇ ಸರಿಯಾದ ಉತ್ತರವೆನ್ನಿಸುತ್ತದೆ. ಈ ನಮ್ಮ ಸರ್ಕಾರಗಳು ಎಲ್ಲಿ ಮೂಗು ತೂರಿಸುತ್ತದೋ ಅಲ್ಲೆಲ್ಲ ವ್ವವಸ್ಥೆ ಗಬ್ಬೆದ್ದು ಹೋಗುತ್ತದೆ. ಕೈಯಿಟ್ಟಲ್ಲಿ ಕುಲಗೆಟ್ಟು ಹೋಗುತ್ತದೆ. ಬಾಯಿ ಬಿಟ್ಟಲ್ಲಿ ಭ್ರಷ್ಟಾಚಾರವೇ ತಾಂಡವವಾಡತೊಡಗುತ್ತದೆ. ಇದು ಸುಮ್ಮನೆ ಹೇಳುತ್ತಿರುವುದಲ್ಲ. ನಾನು ಕಣ್ಣಾರೆ ಕಂಡಿದ್ದು. ಇಂಥ ವ್ಯವಸ್ಥೆಯಲ್ಲಿ ಸುಧಾರಣೆ ಎಂಬ ಹಗಲುಗನಸು ಕೂಡ ಕರಾಳವಾಗಿಯೇ ಕಾಣಿಸುತ್ತದೆ.

   2012/13ರಲ್ಲಿ ಗೋವಿನಜೋಳದ ಬೆಲೆ ಪ್ರತಿ ಕ್ವಿಂಟಾಲ್‍ಗೆ 1500 ರೂ. ತಲುಪಿತ್ತು. ನಮ್ಮ ರಾಣೇಬೆನ್ನೂರಿನಲ್ಲಿ ವ್ಯಾಪಾರಸ್ಥರು ರೈತರಿಂದ ನೇರವಾಗಿ ಖರೀದಿಸಿ ರೇಲ್ವೆ ವ್ಯಾಗನ್‌ ಗಳಿಗೆ ತುಂಬಿಸುತಿದ್ದರು. ಆಗ ಸರ್ಕಾರ ಗೋವಿನಜೋಳಕ್ಕೆ 1336 ರೂ. ಬೆಂಬಲ ಬೆಲೆ ಘೋಷಿಸಿತು. ವ್ಯಾಪಾರಸ್ಥರು 1200/1300 ರ ಮಧ್ಯೆ ಗೋವಿನಜೋಳ ಖರೀದಿಸತೊಡಗಿದರು. ಆಗ ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ರಾಜ್ಯಸರ್ಕಾರ ಮಧ್ಯೆ ಪ್ರವೇಶಿಸಬೇಕೆಂಬ ಕೂಗೆದ್ದಿತು. ಪರಿಣಾಮ ಸರ್ಕಾರ ತಾಲೂಕಾ ಕೇಂದ್ರಗಳಲ್ಲಿ ಗೋವಿನಜೋಳ ಖರೀದಿ ಕೇಂದ್ರಗಳನ್ನು ತೆರೆದು ರೈತರಿಂದ ನೇರ ಖರೀದಿ ಆರಂಭಿಸಿತು.

    ಈ ಖರೀದಿ ಪ್ರಕ್ರಿಯೆ ಸಹಜವಾಗಿ ಕೆಲವು ನೀತಿನಿಯಮಗಳನ್ನು ಒಳಗೊಂಡಿತ್ತು. ಅವೇನೆಂದರೆ, ರೈತ ತಾನು ಬೆಳೆದ ಹೊಲದ ಪಹಣಿ ಜೊತೆಗೆ ಬೆಳೆಯ ಸ್ಯಾಂಪಲ್ ಕೊಡಬೇಕಿತ್ತು. ಇದರಲ್ಲಿ ಮೊದಲ ಗ್ರೇಡ್ ಸಿಕ್ಕರೆ ಮಾತ್ರ ಬೆಂಬಲ ಬೆಲೆಯ ಧಾರಣಿ ಸಿಗುತಿತ್ತು. ಮೊದಲ ಗ್ರೇಡ್ ಸಿಗದಿದ್ದರೆ ಅಂಥ ರೈತ ಮತ್ತೂ ತನ್ನ ಮಾಲನ್ನು ದಲಾಲರ ಅಂಗಡಿಗೆ ಬಿಟ್ಟು ಅಲ್ಲಿ ಆದ ಬೆಲೆಗೆ ಮಾರಬೇಕಿತ್ತು. ಅಲ್ಲದೇ, ಎಲ್ಲ ರೈತರು ಈ ಖರೀದಿ ಕೇಂದ್ರಕ್ಕೇ ಮುಗಿಬಿದ್ದಿದ್ದರಿಂದ ಸಿಬ್ಬಂದಿ ಕೊರತೆ ಇತ್ಯಾದಿಯಿಂದಾಗಿ ತೂಕ ಮಾಡಿಕೊಡುವ ಕೆಲಸ ನಿಧಾನವಾಗತೊಡಗಿತು. ಮೊದಲ ಗ್ರೇಡ್ ಸಿಕ್ಕರೂ ರೈತರು ತಮ್ಮ ಮಾಲನ್ನು ತೂಕ ಮಾಡಿಸಿ ಬಿಲ್ ಪಡೆಯಲು ಪಾಳಿ ಹಚ್ಚಬೇಕಾಯಿತು.

    ಈ ಪಾಳೀ ಕಥೆ ಎಲ್ಲಿಗೆ ಬಂತೆಂದರೆ, ಅತ್ತ ಬೇಗ ಪಾಳಿಯೂ ಬಾರದೇ ಇತ್ತ ಮರಳಿ ಮನೆಗೂ ಬಾರದೆ ರೈತರು ತಿಂಗಳುಗಟ್ಟಲೆ ಎಪಿಎಂಸಿ ಯಾರ್ಡ‍ನಲ್ಲೆ ಠಿಕಾಣಿ ಹೂಡಿದರು. ಹೀಗೆ ಕೆಲಸಬಗಸಿ ಬಿಟ್ಟು ತಿಂಗಳುಗಟ್ಟಲೇ ಕಾಯುವುದಕ್ಕೆ ರೋಸಿದ ರೈತರು, ಬೆಂಬಲಬೆಲೆಯ ಸಹವಾಸವೇ ಬೇಡವೆಂದು ಗೋವಿನಜೋಳವನ್ನು ದಲ್ಲಾಲರ ಅಂಗಡಿಗಳಿಗೇ ಬಿಟ್ಟು ಸಿಕ್ಕ ಬೆಲೆಗೆ ಮಾರತೊಡಗಿದರು. ಇದೇ ಸಂದರ್ಭದಲ್ಲಿ ಎಪಿಎಂಸಿ ಅಧಿಕಾರಿಗಳೊಂದಿಗೆ ಶಾಮೀಲಾದ ವ್ಯಾಪಾರಸ್ಥರು ದಲ್ಲಾಲಿ ಅಂಗಡಿಗಳಲ್ಲಿ ಗೋವಿನಜೋಳವನ್ನು 1100/1200ರೊಳಗೆ ಖರೀದಿಸಿ ಅದೇ ಖರೀದಿ ಕೇಂದ್ರಕ್ಕೆ ರೈತರ ಖೊಟ್ಟಿ ಹೆಸರಿನಲ್ಲಿ ಮಾರತೊಡಗಿದರು.

    ಈ ಎಲ್ಲ ಅವ್ಯವಸ್ಥೆಯ ಪರಿಣಾಮ ಹೊರರಾಜ್ಯಕ್ಕೆ ಸಾಗಾಟವಾಗುತಿದ್ದ ಗೋವಿನಜೋಳ ಸ್ಥಳೀಯ ಗೋಡೌನುಗಳಲ್ಲೇ ದಾಸ್ತಾನು ಆಯ್ತು. ಅದು ಮುಂದೆ ಅಲ್ಲೇ ಕೊಳೆಯಿತೋ ಬೇರೆಡೆಗೆ ರವಾನೆಯಾಯಿತೋ ತಿಳಿಯದು. ಆಗ 1500 ರೂ. ವರೆಗೂ ಏರಿಕೆ ಕಂಡಿದ್ದ ಗೋವಿನಜೋಳದ ಬೆಲೆ, ಸರ್ಕಾರದ ಬೆಂಬಲಬೆಲೆಯ ಘೋಷಣೆ ಮತ್ತು ಖರೀದಿಗೆ ಇಳಿದ ಪರಿಣಾಮ 1100/1200ಕ್ಕೆ ಕುಸಿದಿತ್ತು! ಇದೆಂಥ ವಿಪರ್ಯಾಸ? ಗೋವಿನ ಜೋಳದ ಈ ಕಥೆ ಇಲ್ಲಿ ಉದಾಹರಣೆ ಅಷ್ಟೇ. ಬೇರೆಲ್ಲ ದವಸಧಾನ್ಯಗಳ ಕಥೆಯೂ ಇದೇ!

    ನಮ್ಮ ರೈತಸಂಘಗಳು ಕೂಡ ಬೆಂಬಲಬೆಲೆ ನಿಗದಿಗೆ ಒತ್ತಾಯಿಸುವುದನ್ನು ನೋಡಿದರೆ ನಗಬೇಕೋ ಅಳಬೇಕೋ ಒಂದೂ ಗೊತ್ತಾಗುವುದಿಲ್ಲ. ಇದೆಲ್ಲ ಗೊತ್ತಿದ್ದೊ ಗೊತ್ತಿಲ್ಲದೆಯೋ ಬೆಂಬಲಬೆಲೆಗೆ ಒತ್ತಾಯಿಸುವುದು ಕೂಡ ಇತ್ತೀಚೆಗೆ ರೈತಸಂಘಗಳ ಹೋರಾಟದ ಭಾಗವಾಗಿಯೆ ಹೋಗಿರುವುದನ್ನು ವಿಷಾದದಿಂದಲೇ ಹೇಳಬೇಕಾಗಿದೆ.

    ಬೆಂಬಲಬೆಲೆ ಎಂದರೆ ಏನು? ಸರ್ಕಾರ ಅದನ್ನು ಯಾಕೆ ಘೋಷಿಸಬೇಕು. ರೈತನಿಗೆ ತನ್ನ ಉತ್ಪನ್ನಕ್ಕೆ ಮಾಡಿದ ಖರ್ಚಾದರೂ ವಾಪಾಸಾಗಲಿ ಅನ್ನುವ ಉದ್ದೇಶ ಈ ಕನಿಷ್ಠ ಬೆಂಬಲ ಬೆಲೆಯ ಘೋಷಣೆಯ ಹಿಂದೆ ಇರುವುದಾದರೆ ಇದರಿಂದ ಅವನಿಗಾದ ಲಾಭವಾದರೂ ಏನು? ಪ್ರತಿವರ್ಷ ಬೆಲೆ ಪರಿಷ್ಕರಿಸದೆ ಐದಾರು ವರುಷಕ್ಕೊಮ್ಮೆ ಬೆಂಬಲ ಬೆಲೆ ಘೋಷಿಸಿದರೆ ಹಿಂದೆ ಬಿದ್ದ ಬೆಲೆಯನ್ನು ಸ್ವಲ್ಪ ಮುಂದೆ ತಂದಂತಾಗುತ್ತದೆ ಅಷ್ಟೆ. ಆದಕಾರಣ ಇದು ಬೆಂಬಲಬೆಲೆ ಹೇಗೆ ಆಗಲು ಸಾಧ್ಯ?

    ಈಗ ನಮ್ಮ ರೈತರಿಗೆ ಬೇಕಿರುವುದು ಅವನ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ. ಇದರಲ್ಲಿ ಅವನ ಹಾಗೂ ಕುಟುಂಬ ಸದಸ್ಯರ ಕೂಲಿ ಮತ್ತು ಒಂದು ವೇಳೆ ಆ ಉತ್ಪನ್ನ ಸಿದ್ಧವಸ್ತುವಾಗಿ ಹೆಚ್ಚಿನ ಬೆಲೆಗೆ ಮಾರಾಟವಾದರೆ ಅದರಲ್ಲೂ ಅವನಿಗೆ ಸಿಗಬೇಕಾದ ಪಾಲನ್ನು ಸೇರಿಸಿ ನೀಡುವಂತಹ ವೈಜ್ಞಾನಿಕ ಬೆಲೆ.

    ಉದಾಹರಣೆಗೆ ಒಬ್ಬ ರೈತ 3ರೂ. ಗೆ ಕೇಜಿ ಕಬ್ಬು ಮಾರುತ್ತಾನೆ ಎಂದಿಟ್ಟುಕೊಂಡರೆ. ಅದೇ ಸಕ್ಕರೆಯಾದಾಗ ಅದರ ಬೆಲೆ ಕೇಜಿಗೆ 40 ರೂ. ಆಗುತ್ತದೆ. ಫೇಡಾ ಆದಾಗ ಅದು 400ರೂ. ಗೆ ಮಾರಲ್ಪಡುತ್ತದೆ. ಇಲ್ಲಿ ಒಂದು ಕೆಜಿ ಪೇಡಾ ತಯ್ಯಾರಿಕೆಯಲ್ಲಿ ಅಂದಾಜು 400 ಗ್ರಾಂ ಸಕ್ಕರೆ ಬಳಕೆ ಆಗಿದೆ ಎಂದಿಟ್ಟುಕೊಂಡರೆ ಅದರ ವಾಸ್ತವ ಬೆಲೆ ಕೇವಲ 16 ರೂ. ಅದೇ ಪೇಡಾ ಆಗಿ ಮಾರಾಟವಾದಾಗ ಅದೇ 400 ಗ್ರಾಂ ಸಕ್ಕರೆಯ ಬೆಲೆ ಸುಮಾರು 160 ರೂ.! ಅಂದರೆ, ಇಲ್ಲಿ ನಮ್ಮ ಕಬ್ಬು ಬೆಳೆಗಾರನಿಗೆ ಏನಿಲ್ಲವೆಂದರೂ 140 ರೂ. ವಂಚನೆ ಆದಂತೆ ಅಲ್ಲವೆ? ಅಲ್ಲದೇ ಇಲ್ಲಿನ್ನೂ ಕಬ್ಬಿನಿಂದ ತಯಾರಾಗುವ ಎಥೆನಾಲ್, ಎರೆಗೊಬ್ಬರ ಇತ್ಯಾದಿ ಉತ್ಪನ್ನಗಳ ಲಾಭಾಂಶವನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂಬುದು ಗಮನಾರ್ಹ.

   ಒಬ್ಬ ಗ್ರಾಹಕ ಒಂದು ಖಾದ್ಯ ಪದಾರ್ಥಕ್ಕೆ ತೆರುವ ಹಣ ಮೂಲತಃ ಕೃಷಿಕನಿಗೆ ತಲುಪುವುದಿಲ್ಲ ಎನ್ನುವುದಾದರೆ ಸರ್ಕಾರ ಅಂಥ ಖಾದ್ಯ ಪದಾರ್ಥಗಳ ಬೆಲೆಯನ್ನಾದರೂ ನಿಯಂತ್ರಿಸಿ, ಗ್ರಾಹಕಸ್ನೇಹಿಯಾಗಿ ವರ್ತಿಸಬೇಕಲ್ಲವೇ? ಸಕ್ಕರೆ ಮತ್ತು ಫೇಡಾದಂತಹ ಸಿದ್ಧ ಪದಾರ್ಥಗಳ ಮಾರಾಟದಲ್ಲಿನ ಲಾಭಾಂಶದಲ್ಲಿ ರೈತನ ಪಾಲೂ ಇದೆ. ಅದು ಕೂಡ ಅವನಿಗೆ ಸಿಗುವಂತಾದರೆ ಮಾತ್ರ ಅದು ನಿಜವಾದ ವೈಜ್ಞಾನಿಕ ಬೆಲೆ ಎನಿಸಿಕೊಳ್ಳುತ್ತದೆ. ಮತ್ತು ಇಂಥ ಬೆಲೆ ರೈತರು ಮತ್ತು ಗ್ರಾಹಕರ ಹಿತರಕ್ಷಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಪ್ರತಿವರ್ಷವೂ ಪರಿಷ್ಕೃತಗೊಳ್ಳುತ್ತಲೇ ಇರಬೇಕಾಗುತ್ತದೆ. ಅಂದಾಗ ಮಾತ್ರ ನಮ್ಮ ರೈತರ ಶ್ರಮಕ್ಕೆ ನ್ಯಾಯಬೆಲೆ ಸಿಕ್ಕಂತಾಗುತ್ತದೆ.

   ನಮ್ಮ ಸರ್ಕಾರಗಳು ರೈತರ ಬಗ್ಗೆ ಬದ್ಧತೆಯಿಂದ ಕೂಡಿದ ನಿಜವಾದ ಕಾಳಜಿ ತೋರಲೇಬೇಕೆಂದರೆ ಅವು ಈ ನಿಟ್ಟಿನಲ್ಲಿ ಯೋಚಿಸಿ ಕಾರ್ಯಪ್ರವೃತ್ತವಾಗಬೇಕಿದೆ. ಇದನ್ನು ಬಿಟ್ಟು ಐದಾರು ವರುಷಕ್ಕೊಮ್ಮೆ ದಿಢೀರನೆ ಬೆಂಬಲಬೆಲೆ ಘೋಷಿಸುವುದೆಂದರೆ ಅದು ಹೆಣದ ಮೇಲಿನ ನೊಣ ಹೊಡೆಯುತ್ತ ಕೂತಂತೆ ಅಷ್ಟೇ!