ತಾಯ್ನಾಡನ್ನು ಹಂಬಲಿಸುವ ಪ್ರತಿಭಟನಾ ಕಾವ್ಯ 

ಜೀವನ್ಮರಣಗಳ ಅಭಿವ್ಯಕ್ತಿ

ತಾಯ್ನಾಡನ್ನು ಹಂಬಲಿಸುವ ಪ್ರತಿಭಟನಾ ಕಾವ್ಯ 


ವರ‍್ತಮಾನ


ಕೇಶವ ಮಳಗಿ


* ಘಸನ್ ಕನಫಾನಿ (Ghassan Kanafani) 


    ಫೆಲೆಸ್ತೀನ್ 1948ರಲ್ಲಿ ಯಹೂದ್ಯರ ಆಕ್ರಮಣಕ್ಕೆ ಒಳಗಾದ ಮೇಲೆ ಅಲ್ಲಿ ವಾಸಿಸುವ ಅರಬ್ ಸಮುದಾಯದ ಸಂಖ್ಯೆಯ ಮೇಲೆ, ಹಾಗೂ ಅಲ್ಲಿ ವಾಸಿಸುವ ಸಮುದಾಯಗಳ ಒಟ್ಟಾರೆ ಸಾಮಾಜಿಕ ಜೀವನದ ಮೇಲೆ ಆಘಾತಕಾರಿ ಎನ್ನುವಂಥ ಪರಿಣಾಮ ಬೀರಿತು. ಫೆಲೆಸ್ತೀನ್‌ನಲ್ಲಿ ವಾಸಿಸುವ ಬಹುಪಾಲು ಜನ ರೈತಾಪಿಗಳಾಗಿದ್ದರು. ನಗರ ಪ್ರದೇಶಗಳ ಜನರನ್ನು ಯುದ್ಧದ ಮೊದಲು ಅಥವ ಆನಂತರ ಒಕ್ಕಲೆಬ್ಬಿಸಲಾಯಿತು. ಈ ಒಕ್ಕಲೆಬ್ಬಿಸುವಿಕೆಯಿಂದ ಅರಬ್ ಸಮುದಾಯಗಳ ಸಾಂಸ್ಕೃತಿಕ ಮತ್ತು ರಾಜಕೀಯ ಕೇಂದ್ರಗಳಾಗಿದ್ದ ನಗರಗಳಲ್ಲಿ ವಾಸಿಸುತ್ತಿದ್ದವರು ದಿಕ್ಕೆಟ್ಟು ಮಹಾವಲಸೆಯನ್ನು ಕೈಗೊಂಡರು. 
ಹತ್ತೊಂಬತ್ತನೆಯ ಶತಮಾನದ ಅರೆಭಾಗದವರೆಗೆ ಅರಬ್ ಸಾಹಿತ್ಯದ ಮುಖ್ಯವಾಹಿನಿಯಲ್ಲಿ ಅರ್ಥಪೂರ್ಣವಾಗಿ ಅರಳುತ್ತಿದ್ದ ಫೆಲೆಸ್ತೀನಿ ಸಾಹಿತ್ಯವು ಈ ದುರಂತದಿAದಾಗಿ ಅನಾಥ ಮಗುವಿನಂತಾಯಿತು. ಇಲ್ಲಿನ ಲೇಖಕರು ಐಗುಪ್ತ, ಸಿರಿಯ, ಲೆಬನಾನ್ ಬರಹಗಾರರಿಂದ ಪ್ರೇರಣೆ ಪಡೆದು ತಮ್ಮದೇ ದನಿಯನ್ನು ಕಂಡುಕೊಳ್ಳುವಲ್ಲಿ ಲೀನರಾಗಿದ್ದರು. ಆದರೆ, ಯಹೂದ್ಯರ ಆಕ್ರಮಣದಿಂದ ಇಂತಹ ಅವಕಾಶ ನೆಲಗಚ್ಚಿತು.

 
ಇದ್ದರೂ, ಇಲ್ಲಿನ ಬರಹಗಾರರು ತಮ್ಮ ಕೆಚ್ಚನ್ನು ಸಂಪೂರ್ಣ ಕಳೆದುಕೊಳ್ಳಲಿಲ್ಲ. ಈ ಹತಾಶೆಯ ಸನ್ನಿವೇಶ ಹೊಸ ಸಾಹಿತ್ಯ ಚಳವಳಿ ರೂಪುಗೊಳ್ಳಲು ಅನುವು ಮಾಡಿಕೊಟ್ಟಿತು. ಇದನ್ನು ʻದೇಶಭ್ರಷ್ಟಗೊಂಡ ಲೇಖಕರ ಸಾಹಿತ್ಯ ಇಲ್ಲವೇ ನೆಲೆಯಿಲ್ಲದವರ ಹೊಸ ಅಭಿವ್ಯಕ್ತಿʼ ಎಂದು ಕರೆಯಬಹುದು. ಇಲ್ಲಿ ಕಾವ್ಯವೇ ಪ್ರಮುಖ ಅಭಿವ್ಯಕ್ತಿಯಾಗಿ ಕಾಣಿಸಿಕೊಂಡಿತು. ಕಾವ್ಯದ ಗುಣಾತ್ಮಕತೆ ಮತ್ತು ತಂತ್ರ-ಶೈಲಿಗಳಿAದ ಈ ಸಾಹಿತ್ಯ ಘನವಾದುದನ್ನೇ ಸಾಧಿಸಿದೆ. 1948ರ ಬಳಿಕ ಕೊಂಚ ಕಾಲ ಮೌನವಾಗಿದ್ದಂತೆ ಕಂಡ ಕವಿಗಳು ಇದ್ದಕ್ಕಿದ್ದಂತೆ ರಾಷ್ಟ್ರೀಯ ಪ್ರಜ್ಞೆಯ ಕಾವ್ಯವನ್ನು ಕಟ್ಟತೊಡಗಿದರು. ಫೆಲೆಸ್ತೀನ್‌ನ ಹೊರಗೆ ರಚನೆಯಾಗುತ್ತಿದ್ದ ಅರಬ್ ಸಾಹಿತ್ಯದ ಯುಗಧರ್ಮವನ್ನು ಈ ಕವಿಗಳು ಮನನ ಮಾಡಿಕೊಳ್ಳತೊಡಗಿದರು. ನಿಧಾನಕ್ಕೆ ಸಾಂಪ್ರದಾಯಿಕ ಕಾವ್ಯದ ನಂಬಿಕೆ, ಸ್ವರೂಪಗಳನ್ನು ಕಳಚಿಕೊಂಡು, ಹೊಸ ದನಿಗಳು ಹೊಮ್ಮತೊಡಗಿದವು. ಭಾವೋದ್ವೇಗದ, ನಿರಾಶೆ-ವಿಷಾದಗಳನ್ನೇ ಪ್ರಮುಖ ಸ್ವಭಾವವನ್ನಾಗಿಸಿಕೊಂಡಿದ್ದ ಕಾವ್ಯ ʻಸಮಕಾಲೀನ ವಾಸ್ತವʼಗಳನ್ನು ಹಾಡತೊಡಗಿತು. 


ಆಕ್ರಮಿತ ಫೆಲೆಸ್ತೀನ್‌ನ ಪ್ರತಿಭಟನಾ ಕಾವ್ಯವು ತನ್ನ ಛಂದಸ್ಸು-ಮೀಮಾAಸೆಯಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಿಕೊಂಡಿತು. ಇಲ್ಲಿನ ಸಮುದಾಯ ಮತ್ತು ಬರಹಗಾರರು ಬಹುತೇಕ ಗ್ರಾಮೀಣ ವಾಸಿಗಳು. ಹಾಗೂ, ಆಕ್ರಮಿತ ಪ್ರದೇಶದಲ್ಲಿ ದೇಶವನ್ನು ಕನಸಿಕೊಂಡು ಬದುಕುತ್ತಿದ್ದ ನಾಗರಿಕರಾಗಿದ್ದರು. ಇಂತಹ ಸಮುದಾಯವೊಂದು ವಿಶ್ವದಲ್ಲಿ ಬೇರೆಲ್ಲೂ ಇರಲಾರದು. ಆಕ್ರಮಿತ ಫೆಲೆಸ್ತೀನ್‌ನಲ್ಲಿ ವಾಸಿಸುವ ಅರಬ್ ಸಮುದಾಯಗಳು ಎದುರಿಸುತ್ತಿರುವ ಕೆಲವು ಸಂಗತಿಗಳು ಹೀಗಿವೆ:


• ಇಲ್ಲಿಯೇ ಉಳಿದುಕೊಂಡ ಬಹುಪಾಲು ಫೆಲೆಸ್ತೀನಿಯರು ಹೊಸ ಕಲೆ ಮತ್ತು ಸಾಹಿತ್ಯವನ್ನು ಸೃಷ್ಟಿಸಲು ಅಗತ್ಯವಾದ ಸಾಮಾಜಿಕ ಸನ್ನಿವೇಶವನ್ನು ತಾವೇ ನಿಯಂತ್ರಿಸದಷ್ಟು ಪರಾವಲಂಬಿಗಳಾಗಿದ್ದರು. 
• ಇಂಥ ಹಳ್ಳಿಗಾಡಿನ ಪ್ರತಿಭೆಗಳನ್ನು ಗುರುತಿಸಿ, ಉತ್ತೇಜನ ನೀಡುತ್ತಿದ್ದ ಅರಬ್ ನಗರಗಳು ಈಗ ನಿಷೇಧಿತವಾಗಿದ್ದರಿಂದ ಆ ಅರ್ಥದಲ್ಲೂ ಇವರು ಬಹಿಷ್ಕೃತರಾಗಿದ್ದರು.ಈಗವು ವೈರಿಗಳ ನೆಲೆಯಾಗಿ ಬದಲಾಗಿದ್ದವು. 
• ಇಲ್ಲಿ ವಾಸಿಸುವ ಅರಬ್ ಸಮುದಾಯವು ಉಳಿದ ಅರಬ್ ರಾಷ್ಟ್ರಗಳೊಂದಿಗೆ ಸಂಪೂರ್ಣ ಸಂಬಂಧ ಕಡಿದುಕೊಂಡು ದ್ವೀಪದಂತಾಗಿತ್ತು. 
• ಯಹೂದ್ಯ ರಾಜ್ಯಾಡಳಿತವು ಅರಬ್ ಸಮುದಾಯ ಸೃಷ್ಟಿಸುವ ಸಾಹಿತ್ಯ ಪ್ರಕಟಣೆ ಮತ್ತು ವಿತರಣೆಯ ಮೇಲೆ ರಾಕ್ಷಸ ನಿರ್ಬಂಧ ಹೇರಿದ್ದರಿಂದ ಪರಿಸ್ಥಿತಿ ವಿಷಮವಾಗಿತ್ತು. 
• ಒಂದೋ ಪ್ರಕಟಣೆಗೆ ವಿಪರೀತ ಹೇರಿಕೆಗಳಿದ್ದವು. ಪ್ರಕಟಿಸಿದರೂ ವಿತರಿಸಲು ಅದಕ್ಕಿಂತಲೂ ಭಯಾನಕ ನಿಯಮಗಳನ್ನು ರೂಪಿಸಲಾಗಿತ್ತು. 
• ಎಲ್ಲೋ ಕೆಲವರಿಗೆ ಮಾತ್ರ ಹೈಸ್ಕೂಲು ಶಿಕ್ಷಣ ಮುಗಿಸಲು ಅವಕಾಶ ಒದಗಿಸಲಾಗುತ್ತಿತ್ತು. ವಿಶ್ವವಿದ್ಯಾಲಯಗಳ ಪ್ರವೇಶ ಇಲ್ಲವೇ ಇಲ್ಲ ಎಂಬಂತಿತ್ತು. 


ಇಷ್ಟೆಲ್ಲ ಇದ್ದರೂ ಇಲ್ಲಿನ ಸಾಹಿತ್ಯ ಹೊಸ ದನಿಯನ್ನು ಹರಳುಗಟ್ಟಿಸಿ ಪ್ರತಿಭಟನಾ ಸಾಹಿತ್ಯ ರಚಿಸುವಲ್ಲಿ ಯಶಸ್ವಿಯಾಗಿದೆ. ಕಠಿಣವಾದ ನಿರ್ಬಂಧಗಳ ನಡುವೆ ಹುಟ್ಟುವ ಕವಿತೆ ಮೊದಲು ಬಾಯಿಂದ ಬಾಯಿಗೆ ಪ್ರಚುರಗೊಳ್ಳುತ್ತ ಜನಮಾನಸದಲ್ಲಿ ಬೇರೂರುತ್ತದೆ. ಪ್ರಕಟಗೊಳ್ಳದೆಯೂ ಬದುಕುಳಿಯುತ್ತದೆ. ಇಲ್ಲಿ ಅಭಿವ್ಯಕ್ತಿಸುವ ಪ್ರೀತಿಯಲ್ಲಿ ಒಂಟಿತನ ಮತ್ತು ಪ್ರತಿಭಟನೆಗಳು ಹಾಸುಹೊಕ್ಕಾಗಿವೆ. ಬಂಡಾಯ ಹಾದಿ ಸುಲಭದ ಆಯ್ಕೆಯಲ್ಲ; ವಿಷಪೂರಿತ ವೈರಿಯ ಎದುರು ಅದು ಜೀವನ್ಮರಣದ ಪ್ರಶ್ನೆಯಾಗಿದೆ. ಇಲ್ಲಿ ಪ್ರೀತಿ ಮತ್ತು ಹೆಣ್ಣಿನ ಪ್ರೇಮಕ್ಕಾಗಿ ಹಾತೊರೆವ ಕವಿ ಮನಸ್ಸು ತಾಯಿನೆಲಕ್ಕಾಗಿ ಮರಗುವ ದನಿಯೊಂದಿಗೆ ಮಿಳಿತಗೊಂಡಿದೆ. ಹೆಣ್ಣು ಮತ್ತು ತಾಯಿನಾಡು ಪ್ರತಿಭಟನಾ ಸಾಹಿತ್ಯದ ಮುಖ್ಯ ಸೊಲ್ಲಾಗಿದ್ದು, ಅದು ಬಿಡುಗಡೆಯ ಸಂಕೇತವೂ ಆಗಿದೆ.


(ಘಸನ್ ಕನಫಾನಿ : ಫೆಲೆಸ್ತೀನ್ ವಿಮೋಚನಾ ಹೋರಾಟಗಾರ, ಗದ್ಯಲೇಖಕ ಹಾಗೂ ಹೊಸಯುಗದ ರಾಜಕೀಯ ಕಾರ್ಯಕರ್ತ. ಬೀರೂತ್‌ನಲ್ಲಿ ರಾಜಕೀಯ ಸಭೆಗಳನ್ನು ಸಂಘಟಿಸುತ್ತಿದ್ದಾಗ 1972ರಲ್ಲಿ, ಇಸ್ರೇಲಿ ಗುಪ್ತಚರ ದಳ ʻಮೊಸಾದ್ʼ ಕನಫಾನಿಯವರನ್ನು ಹತ್ಯೆ ಮಾಡಿತು. ಕನಫಾನಿ ಅವರ ಹೋರಾಟದ ಕಿಚ್ಚು ಮತ್ತು ಬರಹಗಳಲ್ಲಿನ ಅಪ್ಪಟ ಪ್ರಾಮಾಣಿಕತೆ ಇಂದಿಗೂ ವಿಶ್ವಸಾಹಿತ್ಯ ಮತ್ತು ಹೊಸ ಬಗೆಯ ರಾಜಕಾರಣದಲ್ಲಿ ಮಾನ್ಯ, ಜನಜನಿತ. ಮೇಲಿನ ಲೇಖನ 1968ರಲ್ಲಿ ಪ್ರಕಟಗೊಂಡ, ʻಪೊಯೆಟ್ರಿ ಆಫ್ ರೆಸಿಸ್ಟೆನ್ಸ್ ಇನ್ ಆಕ್ಯುಪೈಡ್ ಫೆಲೆಸ್ತೀನ್ʼ, ಆವೃತ್ತಿಗೆ ಬರೆದ ಆರಂಭಿಕ ಮಾತುಗಳಾಗಿವೆ.)


ಕವಿತೆಗಳು


***** 1
ಇರುಳೇ..., 


ಇರುಳೇ, 
ಇನ್ನೂ ರವಷ್ಟು ತಡೆದುಕೋ. 
ಸೆರೆಯಾಳು ತನ್ನ ಹಾಡನು
ಮುಗಿಸಲಿ, 
ಆತನ ರೆಕ್ಕೆಗಳು 
ನಸುಕಿಗೆ ಫಡಫಡಿಸುವವು,
ಆಮೇಲೆ ಹಗ್ಗ ಬಿಗಿಸಿಕೊಂಡವನು 
ಗಾಳಿಯಲಿ ತೇಲುವನು.


ಇರುಳೇ, 
ನಿನ್ನ ನಡಿಗೆಯನು ನಿಧಾನಿಸು
ನನ್ನ ಎದೆಯನು ನಿನ್ನೊಳಗೆ ಸುರಿಯಗೊಡು
ನಾನಾರು, ನನ್ನ ನೋವುಗಳೇನೆಂದು
ನೀನು ಮರೆತಿರಬಹುದು.


ಮರುಕ,
ನನ್ನ ಗಳಿಗೆಗಳು ಹೇಗೆ
ನಿನ್ನ ಕೈಯೊಳಗಿಂದ ಜಾರಿ ಹೋಗಿವೆ ನೋಡು.
ನಾನು ರೋಧಿಸುತಿರುವುದು 
ಭಯದಿಂದ ಎಂದು ಭಾವಿಸಬೇಡ
ನನ್ನ ಕಣ್ಣೀರು ತಾಯ್ನಾಡಿಗಾಗಿ,
ಅಪ್ಪನಿಲ್ಲದ ಮನೆಯೊಳಗೆ 
ಹಸಿವೆಯಿಂದ ಕಾದಿರುವ


ಮರಿಹಕ್ಕಿಗಳಿಗಾಗಿ,
ನನ್ನ ಬಳಿಕ ಗುಟುಕು ನೀಡುವುವರಾರು,
ನನಗಿಂತ ಮೊದಲು 
ನೇಣುಗಂಬದಲಿ ಜೋತಾಡಿದ ಸೋದರರ
ಮನೆಯನು ಕಾಯುವವರಾರು,
ನನ್ನ ಮಡದಿಯನು ಸಂತೈಸುವವರಾರು? 
ನನ್ನ ತಾಯಿನೆಲವು 
ಕಣ್ಣೀರು ಹನಿಸಿ
ಬಾಹುಗಳನು ಬಿಗಿದಪ್ಪಲು


ಕರೆದಾಗ
ಮಡದಿಯ ಕೈಗಳಿಗೆ
ಬಂಗಾರದ ಬಳೆಗಳನು 
ನಾನು ತೊಡಸಿ ಬರಲಿಲ್ಲ . .
(1936ರಲ್ಲಿ ಪ್ರಚಲಿತವಿದ್ದ ಅನಾಮಿಕ ಕವಿಯ ಹಾಡು)


******* 2
ಆಲೀವ ಮರ


- ತೌಫೀಕ್ ಜûಯ್ಯಾದ್
ನನ್ನ ಬೆನ್ನು ಹತ್ತಿರುವರು ಅವರು
ಮನೆಯ ಮೇಲೆ ಸದಾ ದಾಳಿ ಮಾಡುವರು
ನನ್ನ ಬಳಿ ತುಣುಕು ಕಾಗದವೂ ಇಲ್ಲ
ನನ್ನ ನೆನಪುಗಳನು ನಾನು
ಮನೆಯಂಗಳದ ಆಲೀವ್ ಮರದಲಿ ಕೆತ್ತುವೆ
ನನ್ನ ಕಟು ಭಾವನೆಗಳನು
ಪ್ರಣಯದ ಉತ್ಕಟತೆ, ಯಾತನೆ, ಹಂಬಲಗಳನು
ಕಳುವಾದ ನನ್ನ ಕಿತ್ತಳೆಯ ತೋಟ,
ಕಣ್ಮರೆಯಾದವರ ಕಳೆದುಹೋದ
ನನ್ನವರ ಗೋರಿಗಳ ಕುರಿತು ಕೆತ್ತಬೇಕು.
ದುರ್ವಿಧಿಯು ಕೊಚ್ಚಿ ಒಯ್ದ
ನನ್ನ ಸೆಣೆಸಾಟದ ನೆನಪುಗಳನಲ್ಲಿ ಎರಕ ಹೊಯ್ಯಬೇಕು
ಕೊಳ್ಳೆ ಹೊಡೆದ ಭೂಮಿಯ ಪ್ರತಿ ತುಣುಕು,
ಮರೆಯಾದ ನನ್ನ ಹಳ್ಳಿಯ ನಕಾಶೆ
ಸ್ಫೋಟಿಸಿದ ಮನೆಗಳ ಆಕ್ರಂದನ 
ನೆಲಗಚ್ಚಿದ ಮರಗಳು
ಹಿಂಸೆಯಲಿ ಪರಿಣತರ ಹೆಸರು
ಸೆರೆಮನೆಯ ನಾಮ
ಎಲ್ಲ, ಎಲ್ಲವನೂ ನಾನು ಕೆತ್ತಬೇಕು.
ನನ್ನೆಲ್ಲ ದುರಂತಗಳನು, 
ತಾಯ್ನೆಲದ ಪತನವನು 
ನನ್ನ ನೆನಪಿಗಾದರೂ
ಅಂಗಳದ ಆಲೀವ್ ಮರದಲಿ
ನಾನು ಎರಕ ಹೊಯ್ಯಲೇಬೇಕು.


*****3
ಸೆರೆಮನೆಯ ಪತ್ರ
-ಸಮೀಹ್ ಅಲ್ ಖಾಸೀಮ್


ಅವ್ವ, 
ಗೆಳೆಯರು ನನ್ನನು ಕೇಳಿಕೊಂಡು ಬಂದಾಗ
ನೀನು ಕಣ್ಣಿರಾಗುವುದು
ನನಗೆ ಯಾತನೆಯೇ!
ನನ್ನ ಬದುಕಿನ ಬೆಳಗು
ಹುಟ್ಟುವುದು ಸೆರೆಮನೆಯಲ್ಲಿಯೇ.
ನಡುರಾತ್ರಿಯ ಕಣ್ಣೀರದ ಬಾವಲಿ
ನನ್ನ ಕೊನೆಯ ಭೇಟಿಗಾರನಲ್ಲವೆಂದು ನಾನು ಬಲ್ಲೆ,
ನಾನು ಕೊನೆಗೆ ಸಂಧಿಸುವುದು
ಬೆಳಕಿನ ಮೊದಲ ಕಿರಣವನ್ನು.