ಅನನ್ಯ ಮಹಿಳಾವಾದಿ ಅಂಬೇಡ್ಕರ್

    ಹೆಣ್ಣನ್ನು ಸಮಾಜದ ಪ್ರಮುಖ ಘಟಕವಾಗಿ ಪರಿಗಣಿಸಿದ ಅಂಬೇಡ್ಕರರ ವಿಚಾರಗಳಿಂದ ಪ್ರಭಾವಿತರಾದ ದಲಿತ ಮಹಿಳೆಯರು ತಮ್ಮ ಆಚಾರ ವಿಚಾರಗಳಲ್ಲಿ ಕ್ರಾಂತಿಕಾರಿಕ ಬದಲಾವಣೆಯನ್ನು ತಂದುಕೊಂಡರಲ್ಲದೆ ಆ ವಿಚಾರವನ್ನು ಸಮಾಜದ ಇತರ ಮಹಿಳೆಯರಿಗೂ ತಲುಪಿಸಲು ಸಂಘಟನಾತ್ಮಕವಾಗಿ ದುಡಿದರು.

ಅನನ್ಯ ಮಹಿಳಾವಾದಿ ಅಂಬೇಡ್ಕರ್

ಡಾ. ಆಶಾ ಬಗ್ಗನಡು

 
    ಇಂದು ಬಾಬಾ ಸಾಹೇಬ ಡಾ. ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನ. ಭಾರತದ ಪ್ರಜಾತಂತ್ರ ಅನೇಕ ಬಗೆಯ ಆತಂಕಗಳನ್ನು ಎದುರಿಸುತ್ತಿರುವ, ಸಂವಿಧಾನ ಬದಲಿಸುವ ಸಾಮರಸ್ಯ ಕದಡುವ ಮಾತುಗಳು ಏಕಮುಖವಾಗುತ್ತಿರುವ, ಜಟಿಲ ಸಿಕ್ಕುಗಳ ಬಿಕ್ಕಟ್ಟಿನ ಕಾಲದಲ್ಲಿ ಮತ್ತೊಂದು ಚಾರಿತ್ರಿಕ ದಿನ ಆಚರಿಸುತ್ತಿದ್ದೇವೆ.


      ತಾನು ಬದುಕಿದ್ದ ಕಾಲದ ಎಲ್ಲಾ ವಿರೋಧಾಭಾಸ ಪ್ರತಿಕೂಲ ಸನ್ನಿವೇಶ, ಸಂದಿಗ್ದತೆ, ಹಿಂಸೆ, ಎಲ್ಲವನ್ನೂ ಮೀರಿ ಕೇವಲ ಒಂದು ವರ್ಗ ಮಾತ್ರವಲ್ಲ ನೊಂದ ಎಲ್ಲಾ ವರ್ಗಗಳ ಬದುಕನ್ನು ಹಸನು ಮಾಡಿದ. ಕೇವಲ ಮನುಷ್ಯ ಕುಲವಷ್ಟೇ ಅಲ್ಲ ಜಗತ್ತಿನ ಚರಾಚರಗಳ ಲೇಸನ್ನು ಬಯಸಿದ ಬುದ್ಧ ಕಾರುಣ್ಯದ ಸರ್ವಹಿತ ಭಾವ ಕೋಶದ, ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಈ ಶತಮಾನವಷ್ಟೇ ಅಲ್ಲ ಮುಂದಿನ ಕೆಲ ಶತಮಾನಗಳಿಗೂ ಮಾದರಿಯಾಗಿ ನಿಲ್ಲುವ ಮಹಾನ್ ಮಾನವತಾವಾದಿ.


     ಅಂಬೇಡ್ಕರ್ ಸ್ಮರಣೆ ಕೇವಲ ಆರಾಧನೆಯಾಗದೆ, ಅವರ ಚಿಂತನೆಗಳನ್ನು ಅರಿಯುವ, ಹಾದಿಯಾದಾಗ ಮಾತ್ರ ಅರ್ಥಪೂರ್ಣವಾಗುತ್ತದೆ. ಸಮಾನತೆಯ ಕನಸನ್ನು ಎಲ್ಲರೆದೆಗೂ ಬಿತ್ತಲು ಪ್ರಯತ್ನಿಸಿದ ಮಹಾನ್ ಮಾನವತಾವಾದಿಯನ್ನು ಅರಿಯಲಾರದ ಜಾತಿಗ್ರಸ್ತತೆ, ಆರಾಧನೆ, ಅವಕಾಶವಾದಿತನಗಳ ನಡುವೆ ಅಂಬೇಡ್ಕರ್ ಅವರನ್ನು ತಮ್ಮೆದೆಯಲ್ಲಿ ಕಾಪಿಟ್ಟುಕೊಂಡಿರುವ ಪ್ರಜ್ಞಾವಂತ ಮನಸ್ಸುಗಳು ಅವರ ಚಿಂತನೆಗಳನ್ನು ಜಾತ್ಯತೀತವಾಗಿ ದಾಟಿಸುತ್ತಾ ಹೊಸ ತಲೆಮಾರು ಅವರ ಅಭಿಪ್ರಾಯಗಳನ್ನು ವಿಶ್ಲೇಷಿಸುವ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಅಂಬೇಡ್ಕರರು ಜೀವಂತವಾಗುಳಿದಿದ್ದು. ಇಂತಹ ನಡೆಗಳಷ್ಟೇ ಭಾರತವನ್ನು ಭಾರತವಾಗುಳಿಸುವ ಏಕೈಕ ದಾರಿಯಾಗಿದೆ.


      ಮಹಿಳಾ ಲೋಕವನ್ನು ಗ್ರಹಿಸುವ ಪೂರ್ವಗ್ರಹ ಚಿಂತನೆಗಳು ಒಂದೆಡೆ ಬದಲಾಗುತ್ತಾ ಮಹಿಳಾ ಹಕ್ಕಿನ ಪರವಾದ ಸಾಮಾಜಿಕ ವಾತಾವರಣ ಮೂಡುತ್ತಿದ್ದರೆ, ಮತ್ತೊಂದೆಡೆ ಆಧುನಿಕ ಮಹಿಳೆಯ ಸಮಸ್ಯೆಗಳು ಬೇರೆಯ ರೂಪ ಹೊದ್ದು ನಿಲ್ಲುತ್ತಿವೆ. ಶ್ರೇಣಿಕೃತ ಸಮಾಜ ವ್ಯವಸ್ಥೆಯಲ್ಲಿ ಮಹಿಳೆಯರು ಶೋಷಣೆ ಮತ್ತು ಅವಮಾನಗಳನ್ನು ಧಿಕ್ಕರಿಸಿದಷ್ಟು ರೂಪಾಂತರ ಹೊಂದಿ ಹೊಸ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿರುವ, ಧರ್ಮ, ಸಂಸ್ಕೃತಿ ಹೆಸರಿನಲ್ಲಿ ಅವಳ ಪ್ರಜ್ಞೆಯನ್ನು ವಿಸ್ಮೃತಿಗೆ ತಳ್ಳಲಾಗುತ್ತಿರುವ, ಹೋರಾಟ ಚಳುವಳಿಯ ಕಾರಣಕ್ಕಾಗಿ ದೊರೆತಿದ್ದ ಕೆಲವಾದರೂ ಹಕ್ಕುಗಳನ್ನು ಹಿಂದಕ್ಕೆ ಸರಿಸುತ್ತಿರುವ ಹಾಗೂ ರಾಜಕೀಯದ ಕಾರಣಕ್ಕಾಗಿ ಕಟ್ಟಲಾಗುತ್ತಿರುವ ಸಂಕಥನಗಳು ಮಹಿಳೆಯರ ಹಿಮ್ಮುಖ ಚಲನೆಗೆ ಕಾರಣವಾಗಿರುವ ಈ ದುರಿತ ಕಾಲದಲ್ಲಿ ಅಂಬೇಡ್ಕರರ ಮಹಿಳಾಪರ ಚಿಂತನೆಗಳು ವರ್ತಮಾನದ ಭಾರತಕ್ಕೆ ಹೆಚ್ಚು ಪ್ರಸ್ತುತವೆನಿಸುತ್ತವೆ. 

     ಕೇವಲ ದಲಿತ ಮಹಿಳೆಯರಷ್ಟೇ ಅಲ್ಲದೆ ಒಟ್ಟಾರೆ ಭಾರತೀಯ ಮಹಿಳೆಯರನ್ನು ಶೈಕ್ಷಣಿಕವಾಗಿ, ಬೌದ್ಧಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲೀಕರಣಗೊಳಿಸಿ, ಭಾರತದ ಅಭಿವೃದ್ಧಿ ಕೇಂದ್ರಕ್ಕೆ ತರಲು ಅಂಬೇಡ್ಕರ್ ಅವರು ಯಾವ ರೀತಿಯ ಹೋರಾಟಗಳನ್ನು ನಡೆಸಿದರು. ಮಹಿಳಾ ವಿಮೋಚನೆಗಾಗಿ ಸಾಮಾಜಿಕ ಕಾನೂನು ಚೌಕಟ್ಟನ್ನು ಸ್ಥಾಪಿಸಲು ಹೆಣಗಿದರು, ಹೆಣ್ತನದ ಘನತೆಯನ್ನು ಎತ್ತರಿಸಲು, ದಣಿವರಿಯದೆ ದುಡಿದ ಪರಿಯನ್ನ ಅರಿಯುವುದು ಮಹಿಳಾ ಹೋರಾಟ, ಚಳವಳಿಗಳು ನಿತ್ರಾಣಗೊಳಿಸುತ್ತಿರುವ ಮಹಿಳಾ ಮನಸುಗಳು ಬಿಕ್ಕಳಿಸುತ್ತಿರುವ ಈ ಬಿಕ್ಕಟ್ಟಿನ ಕಾಲದ ತುರ್ತಾಗಿದೆ.


    ಭಾರತದ ಮಹಿಳಾ ವಿಮೋಚನೆ ಅಂಬೇಡ್ಕರ್ ಪ್ರಕಾರ ಅದೊಂದು ಬೌದ್ಧಿಕ ವಿಮೋಚನೆಯಾಗಿತ್ತು. ಪಿತೃತ್ವ ರೂಪಿತ ಪಾತ್ರಗಳೊಳಗೆ ಗಂಡಸಿನ ನೆರಳಾಗಿ ಜೀವಿಸುತ್ತಿರುವ ಮಹಿಳೆಯರು ಆ ಪಾತ್ರಗಳಿಂದ ಹೊರಬಂದು ತಮ್ಮದೇ ಆದ ಒಂದು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ವಾಸ್ತವ ನೆಲೆಯಲ್ಲಿ ಪ್ರಯತ್ನಿಸುತ್ತಾರೆ.


    ಮಹಿಳೆಯರನ್ನು ಅವರ ವ್ಯಕ್ತಿತ್ವದ ಮೂಲಕವೇ ಗುರುತಿಸಲು ಪ್ರಯತ್ನಿಸಿದ ಅಂಬೇಡ್ಕರರ ಮಹಿಳಾ ಆಧುನಿಕ ಭಾರತದಲ್ಲಿ ವಸಾಹತುಶಾಹಿ ಕಾಲಘಟ್ಟದಲ್ಲಿ ಆರಂಭವಾದ ಸುಧಾರಣಾವಾದಿ ಚಿಂತನೆಗಳಿಗಿಂತ ಭಿನ್ನವಾದದ್ದು. ಸಾಂಪ್ರದಾಯಿಕವಾದ ಹೆಣ್ಣಿನ ತಾಯ್ತನದ ಆದರ್ಶ ಮಾದರಿಗಳನ್ನು ಪ್ರಶ್ನಿಸುವ ಅಂಬೇಡ್ಕರರು ಸಾಂಪ್ರದಾಯಿಕ ತಾಯ್ತನದ ಕಣ್ಕಟ್ಟನ್ನು ಸರಿಸಿ ಹೆಣ್ಣಿಗೆ ಇರಬಹುದಾದ ಅನಂತ ಸಾಧ್ಯತೆಗಳತ್ತ ಕಣ್ಣು ತೆರೆದು ನೋಡುವಂತೆ ಒತ್ತಾಯಿಸುತ್ತಾರೆ. ಆ ಮೂಲಕ ಹೆಣ್ಣಿನಿಂದ ಕಸಿಯಲಾಗಿರುವ ಅವಳ ದೇಹದ ಮೇಲಿನ ಸಾಮ್ಯವನ್ನು ಹಿಂದಿರುಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾರೆ. ದೇಶದ ಮಹಿಳಾಶಕ್ತಿ ಕೇವಲ ಮಕ್ಕಳನ್ನು ಹೆರುವುದರಲ್ಲಿಯೇ ಕಳೆದುಹೋಗುತ್ತಿದ್ದು, ತನ್ನದೇ ಆದ ವ್ಯಕ್ತಿತ್ವ ನಿರ್ಮಾಣ ಮಾಡಿಕ್ಕೊಳ್ಳುವ ನಿಟ್ಟಿನಲ್ಲಿ ಆಕೆಗೆ ಸ್ವಂತದ ಸಮಯ ಬೇಕಿರುವುದರಿಂದ ಕುಟುಂಬ ಯೋಜನೆಯ ಅಗತ್ಯವಿದ್ದು, ಗರ್ಭಧಾರಣೆಯ ಸಂಪೂರ್ಣ ಆಯ್ಕೆಯು ಮಹಿಳೆಯ ಮೇಲೆ ಅವಲಂಬಿತವಾಗಿರಬೇಕು ಎಂದು ಪ್ರತಿಪಾದಿಸುತ್ತಾರೆ ಅಂಬೇಡ್ಕರ್. 


    ದೇಶ ಪ್ರೇಮಿಗಳು, ಕ್ರಾಂತಿಕಾರಿಗಳು, ಮತ್ತು ಖ್ಯಾತ ಬರಹಗಾರರು, ಭಾರತವನ್ನು ತಾಯಿ ಎಂಬ ಕಲ್ಪನೆಯಿಂದ ಪ್ರೇರೇಪಿಸುತ್ತಿದ್ದ ಸಮಯದಲ್ಲಿ ಮಾತೃತ್ವವನ್ನು ರಾಷ್ಟç ನಿರ್ಮಾಣದ ಸಾಧನವಾಗಿ ವೈಭವೀಕರಿಸುತ್ತಿದ್ದ ರಾಜಕೀಯ ಅಸ್ಥಿರತೆ ನಡುವೆ ಅಂಬೇಡ್ಕರರು ಸ್ತ್ರೀ ದೇಹದ ಸ್ವಾಯತ್ತತೆಯ ಬಗೆಗೆ ಮಾತನಾಡುತ್ತಾರೆ. ಆ ನೆಲೆಯಲ್ಲಿಯೇ ಹೆರಿಗೆ ಭತ್ಯೆ, ಹೆರಿಗೆ ಅವಧಿಯಲ್ಲಿ ರಜೆ ಸಹಿತ ಸಂಬಳ ನೀಡುವುದು ದೇಶಕ್ಕೆ ಹೊರೆ ಆಗಬಾರದು ಎನ್ನುತ್ತಾ, ನಮ್ಮನ್ನೆಲ್ಲಾ ಹೊತ್ತು ಹೆತ್ತು ಸಾಕಿದ ಆ ತಾಯಿಗೆ ನಾವು ಕೊಡುವ ಕನಿಷ್ಟ ಗೌರವ ಅದು ಎಂದು ಭಾವಿಸಬೇಕೆನ್ನುತ್ತಾರೆ. ಹೆಣ್ಣಿನ ಶ್ರಮವನ್ನು ಅಪಾರವಾಗಿ ಗೌರವಿಸುವ ಅಂಬೇಡ್ಕರರು ಗಂಡು, ಹೆಣ್ಣಿನ ನಡುವಿನ ಅಸಮಾನ ವೇತನದ ಹಂಚಿಕೆಯನ್ನು ನಿವಾರಿಸಿ ಸಮಾನ ವೇತನಕ್ಕಾಗಿ ಹಕ್ಕೊತ್ತಾಯ ಮಾಡುತ್ತಾರೆ. ತಮ್ಮ ಬದುಕಿನಲ್ಲಿ ಎದುರಾದ ಆಪ್ತ ಹೆಣ್ಣು ಜೀವಗಳ ಸಾವು, ನೋವುಗಳನ್ನು ಹತ್ತಿರದಿಂದ ಕಂಡಿದ್ದ ಅಂಬೇಡ್ಕರರಿಗೆ ಮಹಿಳಾ ಪರವಾದ ವಿಚಾರಗಳು ಕೇವಲ ಪಾಶ್ಚಾತ್ಯ ಚಿಂತನೆಗಳ ಅನುರಣೆಯಾಗಿರದೆ. ತನ್ನ ಸುತ್ತಲಿನ ಸಮಾಜವನ್ನು ಸೂಕ್ಷö್ಮವಾಗಿ ಗ್ರಹಿಸುವ ನೆಲೆಯಾದಾಗಿದ್ದು ವಿಶೇಷ. 


    ಗಂಡು ಹೆಣ್ಣಿನ ಸಾಂಗತ್ಯವು ಬೌದ್ಧಿಕವಾದರೆ ಮಾತ್ರ ಎಷ್ಟೇ ತೊಡರುಗಳು ಸಮೀಪಿಸಿದರೂ ಆದ್ದರಿಂದ ಬಿಡಿಸಿಕೊಳ್ಳಬಹುದು. ಎಂದು ನಂಬಿದ್ದ ಅಂಬೇಡ್ಕರರು ಅಸಮಾನಪಾತಳಿಯ ಮೇಲೆ ನಿಂತಿರುವ ಪಿತೃ ಪ್ರಧಾನ ಸಮಾಜದ ಮೌಲ್ಯಗಳನ್ನು ಗಾಳಿಗೆ ತೂರಿ ದಾಂಪತ್ಯದ ಪರಿಕಲ್ಪನೆಯನ್ನು ಬೇರೊಂದು ಎತ್ತರಕ್ಕೆ ಒಯ್ಯುತ್ತಾರೆ. ಆ ಮೂಲಕ, ಹೆಣ್ಣು ಮಕ್ಕಳು ಗಂಡನ ಪಕ್ಕದಲ್ಲಿ ದಾಸಿಯಾಗಿ ಆಳಿನ ರೂಪದಲ್ಲಿ ದುಡಿಯುವ ಯಂತ್ರವಾಗಬಾರದು, ಗಂಡ ಹೆಂಡತಿ ಸ್ನೇಹಿತರಂತಿರಬೇಕು ಎನ್ನುತ್ತಾ, ವಿವಾಹ ಸಂಸ್ಥೆಯೊಳಗಿನ ಗಂಡು ಹೆಣ್ಣಿನ ಸಂಬಂಧಕ್ಕೆ ಬೇರೆಯದ್ದೇ ಆಯಾಮವನ್ನು ನೀಡಲು ಪ್ರಯತ್ನಿಸುತ್ತಾರೆ.


    ವಿವಾಹ ಮತ್ತು ಕುಟುಂಬ ಸಾಮಾಜಿಕ ರಚನೆಗಳನ್ನು ಚಲನಶೀಲಗೊಳಿಸುವ ಅಂಬೇಡ್ಕರರ ಪ್ರಯತ್ನ ಪೂರ್ಣ ಪ್ರಮಾಣದಲ್ಲಿ ಸಾಕಾರಗೊಳ್ಳದ ಕಟು ವಾಸ್ತವದ ನಡುವೆ ಅವರ ಶ್ರಮವನ್ನು ಸಾರ್ಥಕಗೊಳಿಸಬೇಕಾದ ಗುರುತರ ಜವಾಬ್ದಾರಿ ಭಾರತೀಯ ಹೆಣ್ಣುಮಕ್ಕಳ ಮೇಲಿದ್ದು ಆ ನಿಟ್ಟಿನಲ್ಲಿ ಭಾರತೀಯ ಹೆಣ್ಣುಮಕ್ಕಳು ಕೈಗೆ ಕೈ ಜೋಡಿಸಿ ವಿವಾಹ ಮತ್ತು ಕುಟುಂಬ ಸಂಸ್ಥೆಗಳನ್ನು ಮಹಿಳಾ ಪರವಾಗಿ ವ್ಯಾಖ್ಯಾನಿಸಿಕೊಳ್ಳಬೇಕಿದೆ. ಭಾರತದಲ್ಲಿ ಸ್ತ್ರೀವಾದ ಇನ್ನೂ ಕಣ್ಣು ಬಿಡದ ಹೊತ್ತಿನಲ್ಲಿ ಆರಂಭಿಕ ಹೆಜ್ಜೆ ಗುರುತಿನಂತಿರುವ ಅಂಬೇಡ್ಕರವರ ಈ ಮಹಿಳಾ ಪರ ಚಿಂತನೆಗಳು, ಭಾರತೀಯ ಸ್ತ್ರೀವಾದಕ್ಕೆ ಒಂದು ತಾತ್ವಿಕ ಚೌಕಟ್ಟನ್ನು ಒದಗಿಸುತ್ತಾ, ಅಂಬೇಡ್ಕರ್ ಅವರನ್ನು ಆಧುನಿಕ ಭಾರತದ ಮೊದಲ ಸ್ತ್ರೀವಾದಿ ಚಿಂತಕರಾಗಿ ಗುರುತಿಸುವಂತೆ ಒತ್ತಾಯಿಸುತ್ತವೆ.


    ಮಹಿಳಾ ಬದುಕನ್ನು ಬಹಳಷ್ಟು ಸೂಕ್ಷ್ಮವಾಗಿ ಗ್ರಹಿಸಿದ ಅಂಬೇಡ್ಕರ್‌ರವರು ಭಾರತೀಯ ಸ್ತ್ರೀವಾದ ಪಾಶ್ಚಾತ್ಯ ಸಮಾಜದಲ್ಲಿ ಪ್ರಚಲಿತದಲ್ಲಿಲ್ಲದ ಕೆಲವು ಅಡೆತಡೆಗಳನ್ನು ಎದುರಿಸುತ್ತಿರುವುದನ್ನು ಗುರುತಿಸಿಕೊಳ್ಳುತ್ತಾರೆ. ಆ ಮೂಲಕ ಪಾಶ್ಚಾತ್ಯವಾದಕ್ಕಿಂತ ಭಿನ್ನವಾದ ನೆಲೆಯಲ್ಲಿ ಭಾರತೀಯ ಸ್ತ್ರೀವಾದಕ್ಕೆ ತಾತ್ವಿಕವಾದ ತಳಹದಿಯನ್ನು ಕಟ್ಟಿಕೊಡುತ್ತಾರೆ. ಭಾರತೀಯ ಸಂದರ್ಭದಲ್ಲಿ ಪಿತೃ ಪ್ರಧಾನತೆಯ ಜೊತೆಗೆ ಜಾತಿ ವ್ಯವಸ್ಥೆಯೂ ಸ್ತ್ರೀ ಸಮಾನತೆಗೆ ಇರುವ ಬಹು ದೊಡ್ಡ ತಡೆಗೋಡೆಯಾಗಿದ್ದು, ಜಾತಿ ವ್ಯವಸ್ಥೆಯನ್ನು ಮೀರಿ ಮುರಿಯದ ಹೊರತು ಸ್ತ್ರೀ ಸಮಾನತೆ ಸಾಧ್ಯವಿಲ್ಲವೆನ್ನುತ್ತಾರೆ. ಈ ನೆಲೆಯಲ್ಲಿ ಶಿಕ್ಷಣ, ಹೋರಾಟ, ಸಂಘಟನೆಗಳನ್ನು ಮಹಿಳಾ ವಿಮೋಚನೆಯ ಬೀಜಮಂತ್ರವಾಗಿಸುತ್ತಾರೆ.


    ಹೆಣ್ಣಿನ ಶಕ್ತಿಯ ಅನನ್ಯತೆಯ ಅರಿವಿದ್ದ ಅಂಬೇಡ್ಕರರು ಹೆಣ್ಣು ಮಕ್ಕಳು ಸಮಾಜದ ಮುಂಚೂಣಿಗೆ ಬಂದರೆ ಸಮಾಜ ಬಹುಬೇಗ ಸುಧಾರಿಸುತ್ತದೆ ಎಂದು ನಂಬಿದ್ದವರು. ಹಾಗಾಗಿಯೇ ತಮ್ಮೆಲ್ಲ ಜಾತಿ ವಿನಾಶ ಚಳುವಳಿಗಳನ್ನು ಮಹಿಳೆಯರನ್ನು ಒಳಗೊಂಡಂತೆ ರೂಪಿಸುತ್ತಾರೆ. ಗಾಂಧೀಜಿಯವರ ನೇತೃತ್ವದಲ್ಲಿ ಹೋರಾಟಗಳಲ್ಲಿ ಮಹಿಳೆ ಸಾರ್ವಜನಿಕವಾಗಿ ಬಂದದ್ದು, ಪರಿವರ್ತನಾಶೀಲ, ಕ್ರಾಂತಿಕಾರಿ ಹೋರಾಟಗಳು ಎಂದು ಕರೆಯಬಹುದಾದ ಹೋರಾಟಗಳಲ್ಲಿ ಮಹಿಳೆಯರು ಬೀದಿಗಿಳಿದದ್ದು ಅಂಬೇಡ್ಕರ್ ಅವರ ಚಳವಳಿಗಳಲ್ಲಿ ಗಾಂಧಿಯಷ್ಟೇ ಪ್ರಭಾವಶಾಲಿಯಾಗಿ ಮಹಿಳೆಯರನ್ನು ಚಳವಳಿಗೆ ಸೆಳೆದ ಅಂಬೇಡ್ಕರರು ಸಮಾಜದ ಬಹುಭಾಗವಾದ. ಹೆಣ್ಣು ಮಕ್ಕಳನ್ನು ಸಂಘಟಿಸಿ ಭಾರತದ ಚಳವಳಿಯ ಕೇಂದ್ರಕ್ಕೆ ಕರೆತರುತ್ತಾರೆ. 


     ಸಾಮಾಜಿಕ ರಾಜಕೀಯ ಅಂಚಿನಲ್ಲಿರುವ ದಲಿತ ಮಹಿಳೆಯರನ್ನು ಸಮಾಜದ ಮುನ್ನಲೆಗೆ ತಂದ ದಾರ್ಶನಿಕ ಕಾಣ್ಕೆ ಅಂಬೇಡ್ಕರ್ ಅವರÀದ್ದಾಗಿದೆ. ಶ್ರೇಣಿಕೃತ ವ್ಯವಸ್ಥೆಯಲ್ಲಿ ಮಹಿಳೆಯರ ಸ್ಥಾನವು ಕೆಳಗಿಳಿದಷ್ಟೂ ಆಕೆಯ ಶೋಷಣೆ ಹೆಚ್ಚು ತೀವ್ರವಾಗುವುದನ್ನು ಗಮನಿಸಿದ ಅಂಬೇಡ್ಕರ್ ಅಸಮಾನತೆಯ ಸಮಾಜದಲ್ಲಿ ಎಲ್ಲರೂ ಸಮಾನವೆನ್ನುವುದು ಅಪರಾಧವೆನ್ನುತ್ತಾರೆ. ಆ ನೆಲೆಯಲ್ಲಿ ವ್ಯವಸ್ಥೆಯಲ್ಲಿ ಹೆಚ್ಚು ದಬ್ಬಾಳಿಕೆ ಅನ್ಯಾಯವನ್ನು ಅನುಭವಿಸುತ್ತಿರುವ ಭಾರತದ ದಲಿತ ಮಹಿಳಾ ಸಮುದಾಯವನ್ನು ಗೌರವ ಪೂರ್ಣ ಬದುಕಿಗಾಗಿ ಹಕ್ಕೊತ್ತಾಯ ಮಾಡಿ ಅವರಿಗಾಗಿ ಹಲವಾರು ಸಮಾವೇಶಗಳನ್ನು, ರಾಜಕೀಯ ಸಭೆಗಳನ್ನು ಏರ್ಪಡಿಸುತ್ತಾರೆ. 


    ಹೆಣ್ಣನ್ನು ಸಮಾಜದ ಪ್ರಮುಖ ಘಟಕವಾಗಿ ಪರಿಗಣಿಸಿದ ಅಂಬೇಡ್ಕರರ ವಿಚಾರಗಳಿಂದ ಪ್ರಭಾವಿತರಾದ ದಲಿತ ಮಹಿಳೆಯರು ತಮ್ಮ ಆಚಾರ ವಿಚಾರಗಳಲ್ಲಿ ಕ್ರಾಂತಿಕಾರಿಕ ಬದಲಾವಣೆಯನ್ನು ತಂದುಕೊಂಡರಲ್ಲದೆ ಆ ವಿಚಾರವನ್ನು ಸಮಾಜದ ಇತರ ಮಹಿಳೆಯರಿಗೂ ತಲುಪಿಸಲು ಸಂಘಟನಾತ್ಮಕವಾಗಿ ದುಡಿದರು.


   ಮಹಿಳಾ ಸಂಘಟನೆಗಳನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ ಹೊತ್ತಲ್ಲಿ ಮಹಿಳಾ ಸಂಘಟನೆಗಳಿಗೆ ಬೀಜರೂಪದ ನಾಂದಿಯಾಡುವ ಅಂಬೇಡ್ಕರ್ ಅವರ ಪ್ರಸ್ತಾಪ ನಿಜಕ್ಕೂ ಚಾರಿತ್ರಿಕವಾದದ್ದು. ಹೀಗೆ ಅಂಬೇಡ್ಕರರ ಸಂಘಟನೆಯ ಬಲ ಮತ್ತು ತಾತ್ವಿಕವಾದ ಬೆಂಬಲದೊಂಂದಿಗೆ ಮಹಿಳಾ ಜಾಗೃತಿಯ ಹೊಸ ಅಧ್ಯಾಯ ಆರಂಭವಾಯಿತು.


   ಇಷ್ಟೊಂದು ವಿವರವಾಗಿ ಮಹಿಳೆಯರ ಸಶಕ್ತತೆಗೆ ವಿಮೋಚನೆಗಾಗಿ ಕಾರ್ಯಕ್ರಮ ರೂಪಿಸಿರುವುದು ಭಾರತದಲ್ಲಿ ಅಂಬೇಡ್ಕರವರ ಪ್ರಯತ್ನವೇ ಮೊದಲನೆಯದಾಗಿದೆ. ಇತರ ದೇಶಗಳಲ್ಲಿ ಮಹಿಳೆಯರು ಅನೇಕ ಹಕ್ಕುಗಳನ್ನು ಪ್ರತಿಭಟನೆ, ಮನವಿ ಮತ್ತು ಹಿಂಸೆಯ ಮೂಲಕ ಗೆದ್ದಿದ್ದಾರೆ. ಭಾರತದಲ್ಲಿ ಇಂತಹ ಹೋರಾಟಗಳು ನಡೆದಿವೆಯಾದರೂ ಬಾಬಾ ಸಾಹೇಬರು ಭಾರತೀಯ ಮಹಿಳೆಯರ ಅಸ್ತಿತ್ವಕ್ಕಾಗಿ ಸಾಂವಿಧಾನಿಕ ಭದ್ರತೆಯನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದಾರೆ. 


   ಲಿಂಗಾಧಾರಿತ ದೌರ್ಜನ್ಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ತಾರತಮ್ಯದ ಪದರುಗಳನ್ನು ಬಹಿರಂಗ ಪಡಿಸಲು ಅಂಬೇಡ್ಕರರು ಹೆಚ್ಚು ಪ್ರಸ್ತುತವಾಗಿದ್ದು. ಅವರ ಮೂಲ ಆಶಯಗಳನ್ನು ತಲುಪದಿರುವುದಕ್ಕೆ ಭಾರತೀಯ ಮಹಿಳೆಯರಿಗೆ ಸಾಧ್ಯವಾಗಲಿಲ್ಲವೇಕೆ ಎಂಬ ಜಿಜ್ಞಾಸೆಯೊಂದು ಭಾರತೀಯ ಮಹಿಳೆಯರಲ್ಲಿ ವ್ಯಾಪಕವಾಗಿ ಮೂಡಿನಿಂತು ಪ್ರಸ್ತುತ ಸವಾಲು ಸಮಸ್ಯೆಗಳೊಟ್ಟಿಗೆ ಅಂಬೇಡ್ಕರ್ ಚಿಂತನೆಗಳು ಭಾರತೀಯ ಮಹಿಳೆಯರ ಎದೆಯೊಳಗೆ ಮರುಹುಟ್ಟು ಪಡೆಯಬೇಕು. ಎಲ್ಲಾ ಚಳವಳಿಗಳು ಮಹಿಳೆಯರನ್ನೊಳಗೊಳ್ಳುವುದು. ಮಹಿಳೆಯರು ಎಲ್ಲಾ ಹೋರಾಟಗಳಲ್ಲಿ ಭಾಗಿಯಾಗುವುದು ಈ ಕಾಲದ ಅವಶ್ಯಕತೆಯಾಗಿದ್ದು. ಆ ಮೂಲಕ ಭಾರತೀಯ ಮಹಿಳೆಯರ ವಿಮೋಚನೆಯ ಹಾದಿ ಸಶಕ್ತವಾಗಿ ರೂಪುಗೊಳ್ಳ್ಳಬೇಕಿದೆ.


     ಸಾಮಾಜಿಕ ಪ್ರಜಾಪ್ರಭುತ್ವವಿದ್ದರೆ, ರಾಜಕೀಯ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ ಎಂದು ನಂಬಿದ್ದ ಅಂಬೇಡ್ಕರರಿಗೆ ಪ್ರಜಾಪ್ರಭುತ್ವ ಕೇವಲ ಆಡಳಿತ ಮಾದರಿಯಾಗಿರಲಿಲ್ಲ. ಮನುಷ್ಯ ಮನುಷ್ಯರು ಬದುಕುವ ಪರಿಯಾಗಿದ್ದು, ಗಂಡು ಹೆಣ್ಣಿನ ನಡುವಿನ ಸಮಾನತೆಯ ನೆಲೆಯದಾಗಿತ್ತು. ಅಂಬೇಡ್ಕರ್ ಕನಸಿನ ಸಾಮಾಜಿಕ, ಆರ್ಥಿಕ ಪ್ರಜಾಪ್ರಭುತ್ವ ಧರ್ಮವು ಬಂಡವಾಳಶಾಹಿ ರಾಜಕಾರಣದ ಹಸ್ತಕ್ಷೇಪದಿಂದ ದುರ್ಬಲಗೊಳ್ಳುತ್ತ ಸಾಂಕೇತಿಕಗೊಳ್ಳುತ್ತಾ ಸಾಗುತ್ತಿದ್ದು. ಧರ್ಮ ಮತ್ತು ರಾಷ್ಟ್ರೀಯತೆ ಬಂಡವಾಳಶಾಹಿ ವ್ಯವಸ್ಥೆಯನ್ನು ಪ್ರಶ್ನಿಸುವ ಮೂಲಕ ಅವುಗಳನ್ನು ಅರ್ಥಪೂರ್ಣಗೊಳಿಸಬೇಕಾದ ಗುರುತರ ಜವಾಬ್ದಾರಿ ಹೆಣ್ಣು ಮಕ್ಕಳ ಮೇಲಿದೆ. ಮಹಿಳೆಯರು ಜಾತ್ಯತೀತವಾಗಿ ಭಾರತದ ಸಂವಿಧಾನವನ್ನು ಎದೆಗವಚಿಕೊಂಡು ಅಂಬೇಡ್ಕರ್ ಅವರ ಪೋಟೋ ಕೈಲಿಡಿದು ಹೊರಡುವ ಮೂಲಕ ಚಲನೆಯೊಂದು ಆರಂಭವಾಗಿದ್ದು ಅದು ವ್ಯಾಪಕತೆಯನ್ನು ಪಡೆಯುವ ಮೂಲಕ ಈ ನೆಲದ ಹೆಣ್ಣುಮಕ್ಕಳ ಸಂಕಟ ಕೊನೆಗೊಳ್ಳಬೇಕಿದೆ.


 ( ಲೇಖಕರು ತುಮಕೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕಿಯಾಗಿದ್ದು, ಜನಪರ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿದ್ದಾರೆ, ದೂರವಾಣಿ ಸಂ. 8296171380)