ಕಳಚುತ್ತಿರುವ ಕೃಷಿ ಸಂಸ್ಕೃತಿಯ ಕೊಂಡಿ -1
ನಗರವಾಸಿಗಳ ಸಂಖ್ಯೆಗಣನೀಯವಾಗಿ ಹೆಚ್ಚುತ್ತಿದೆ, ಹಳ್ಳಿಗಳು ವೃದ್ಧಾಶ್ರಮಗಳಂತೆ ಕಾಣುತ್ತವೆ, ಉಳುಮೆ ಕಾಣದ ಹೊಲ, ಗದ್ದೆಗಳು ತಕ್ಕಲು ಬಿದ್ದಿವೆ. ತೀರಾ ವ್ಯವಸಾಯ ಮಾಡುತ್ತಿದ್ದೇವೆಅಂದರೂ ಕಾಸು ಬರುವಅಡಿಕೆ ಸಸಿ ನೆಡುವ ಗೀಳಿಗೆ ಎಲ್ಲರೂ ಬಿದ್ದಿದ್ದಾರೆ. ಭಾರತೀಯ ಕೃಷಿ ಎಂದರೆಕಾಲದಕುಲುಮೆಯಲ್ಲಿಕಾದುಕಾದುಕರಗಿ ಉಳಿದ ಗಟ್ಟಿ ವಿಧಾನವಾಗಿತ್ತು. ಹಸಿರು ಕ್ರಾಂತಿಯ ಹೆಸರಲ್ಲಿ ರಸಗೊಬ್ಬರಗಳ ವಿವೇಚನೆಯಿಲ್ಲದ ವಿಪರೀತ ಬಳಕೆ, ಯಂತ್ರಗಳ ಅತಿ ಅವಲಂಬನೆ, ಇಂಥ ಹೊತ್ತಿನಲ್ಲಿಅಕ್ಕಡಿ ಬೆಳೆಯ ಮಹತ್ವಕುರಿತ ಲೇಖನವನ್ನು ‘ಕಿನ್ನರಿ’ ಓದುಗರಿಗೆ ಮೂರು ಕಂತುಗಳಲ್ಲಿ ನೀಡಿದೆ. -ಸಂಪಾದಕ
ಬೇಸಾಯ
ಮಲ್ಲಿಕಾರ್ಜುನ ಹೊಸಪಾಳ್ಯ
ಅಕ್ಕಡಿ
ಮಿಶ್ರ ಬೆಳೆ ಪದ್ಧತಿಗೆ ನಮ್ಮ ರೈತಾಪಿಗಳು ಕರೆಯುವ ಸ್ಥಳೀಯ ಹೆಸರು ಅಕ್ಕಡಿ ಬೇಸಾಯ. ಕಾಲಾಂತರದಲ್ಲಿ ಕೃಷಿಕ ಸಮುದಾಯವು ರೂಪಿಸಿಕೊಂಡ ವಿಶಿಷ್ಟ ಮತ್ತು ವೈಜ್ಞಾನಿಕ ಪದ್ಧತಿ. ಇಲ್ಲಿ ಕುಟುಂಬದ ಪೌಷ್ಟಿಕ ಆಹಾರ ಭದ್ರತೆ, ಜಾನುವಾರುಗಳ ಮೇವು, ಮಣ್ಣಿನ ಫಲವತ್ತತೆ, ಸೂರ್ಯನ ಬೆಳಕಿನ ಬಳಕೆ, ಹವಾಮಾನ ವೈಪರೀತ್ಯಗಳನ್ನು ಎದುರಿಸುವ ಮುಂಗಾಣಿಕೆ, ಕೀಟ-ರೋಗ ನಿಯಂತ್ರಣ, ಬೀಜ ಸಾರ್ವಭೌಮತೆ, ನಿರಂತರಉದ್ಯೋಗ, ಆರ್ಥಿಕ ಭದ್ರತೆ ಮುಂತಾದಎಲ್ಲ ಅಂಶಗಳ ಸಮ್ಮಿಳನವಿತ್ತು.
ಒಂದು ಮುಖ್ಯ ಬೆಳೆ ಜೊತೆಗೆ ಹತ್ತಾರು ಉಪಬೆಳೆಗಳನ್ನು ಬಿತ್ತುವುದು ಈ ಪದ್ಧತಿಯ ವೈಶಿಷ್ಟ್ಯ. ಇದೊಂದು ರೀತಿ ವಿಮೆ ಇದ್ದಂತೆ. ಮಳೆ ಕಡಿಮೆಯಾಗಿ ಮುಖ್ಯ ಬೆಳೆ ನಷ್ಟವಾದರೆ ಉಪಬೆಳೆಗಳು ಕಾಯುತ್ತಿದ್ದವು. ಅಂಚಿನ ಬೆಳೆಗಳು ಕೀಟ-ರೋಗಾದಿಗಳನ್ನು ತಡೆಯುತ್ತಿದ್ದವು. ಏಕದಳ, ದ್ವಿದಳ, ಎಣ್ಣೆಕಾಳು, ತರಕಾರಿಗಳ ಮಿಶ್ರಣವಾಗಿದ್ದ ಇಲ್ಲಿ ಸಂಸಾರಕ್ಕೆ ಬೇಕಾದ ಬಹುತೇಕ ಆಹಾರಹಾಗೂ ಜಾನುವಾರುಗಳಿಗೆ ಪೌಷ್ಟಿಕ ಮೇವೂ ಲಭ್ಯ.
ಇದು ಅಪ್ಪಟ ಕೃಷಿಕ ಸಮುದಾಯದ ಅನುಶೋಧನೆ. ಬೇಟೆಯಿಂದ ಬೇಸಾಯಕ್ಕೆ ಒಗ್ಗಿಕೊಂಡ ಮನುಷ್ಯ ತನ್ನ ಪ್ರಯೋಗಶೀಲ ಗುಣದಿಂದ ರೂಢಿಸಿಕೊಂಡಿರುವಂತಹುದು. ಕಾಲದ ಪರೀಕ್ಷೆಯಲ್ಲಿ ಗೆದ್ದು ಬಂದಿರುವಂತಹುದು. ಭಾರತದ ಎಲ್ಲ ಕಡೆಯೂ ಕಂಡುಬರುತ್ತದೆ.
ಅಕ್ಕಡಿ ಬೇಸಾಯಕ್ಕೆಭಾರತದ ಒಂದೊಂದು ಭಾಗದಲ್ಲಿ ವಿಭಿನ್ನ ಹೆಸರುಗಳಿವೆ. ಮಿಶ್ರ ಬೆಳೆ, ಸಾಲು ಬೆಳೆ, ಅಂಚಿನ ಬೆಳೆ, ಕಡ ಹಿಡಿಯುವುದು ಇತ್ಯಾದಿ. ಎಲ್ಲವೂ ಬಹುತೇಕ ಒಂದೇ ಅರ್ಥಕೊಡುತ್ತವೆ. ಅಳವಡಿಸುವಾಗ ಅಲ್ಪ-ಸ್ವಲ್ಪ ವ್ಯತ್ಯಾಸವಾಗುತ್ತದೆ ಅಷ್ಟೇ. ಒಟ್ಟಾರೆ ಒಂದೇತಾಕಿನಲ್ಲಿ ಒಂದಕ್ಕಿಂತ ಹೆಚ್ಚು ಬೆಳೆಗಳನ್ನು ಹಾಕುವುದಕ್ಕೆ ಅಕ್ಕಡಿ ಬೇಸಾಯ ಎನ್ನಬಹುದು.
ಅಕ್ಕಡಿ ಎಂಬ ಹೆಸರು ಬರಲು ನಿರ್ದಿಷ್ಟ ಕಾರಣಗಳು ತಿಳಿದಿಲ್ಲ. ಕೆಲವು ಭಾಗಗಳಲ್ಲಿ ದ್ವಿದಳ ಧಾನ್ಯಗಳನ್ನು ಅಕ್ಕಡಿ ಕಾಳು ಎನ್ನುತ್ತಾರೆ. ‘ಕಾಳು-ಕಡಿ’ ಎಂಬ ಪದವೂ ಸಹ ಧಾನ್ಯಗಳಿಗೆ ಬಳಸಲಾಗುತ್ತದೆ. ಇದೇಕಾರಣದಿಂದ ‘ಅಕ್ಕಡಿ’ ಪದ ಬಂದಿರಬಹುದು. ದೇಶದ ವಿವಿಧ ಭಾಗಗಳಲ್ಲಿ ಅಕ್ಕಡಿಬೇಸಾಯಕ್ಕೆ ಬಾರನಾಜ್, ಪಟ್ಟೆ, ಸಾತ್‌ದಾನ್, ಪಂಡೆಂಟು ಪಂಟಲು, ಬೇವಾರ್, ನವಧಾನ್ಯಇತ್ಯಾದಿ ಹಲವು ಅರ್ಥಪೂರ್ಣ ಹೆಸರುಗಳಿವೆ.
ಸಾಹಿತ್ಯಗಳಲ್ಲಿ ಅಕ್ಕಡಿ ಪ್ರಸ್ತಾಪ
ಅಕ್ಕಡಿ ಬೇಸಾಯದ ಬಗ್ಗೆ ಜನಪದರು ಹಾಗೂ ತತ್ವಪದಕಾರರು ಗಮನಹರಿಸಿದ್ದಾರೆ. ಭಾರತೀಯ ಪ್ರಾಚೀನ ಗ್ರಂಥಗಳಾದ ವೇದಗಳಲ್ಲಿ ಕೃಷಿಕರು ಮೊದಲನೇ ಮತ್ತು ಎರಡನೇ ಬೆಳೆಗಳನ್ನು ಹಾಕುವ ಬಗ್ಗೆ ಉಲ್ಲೇಖವಿದ್ದು, ಇದು ಆ ಕಾಲದಲ್ಲಿಯೇಒಂದಕ್ಕಿಂತ ಹೆಚ್ಚು ಬೆಳೆಗಳನ್ನು ಹಾಕುವ ಪದ್ಧತಿ ಅಸ್ತಿತ್ವದಲ್ಲಿ ಇತ್ತೆಂಬುದನ್ನು ಸೂಚಿಸುತ್ತದೆ. ಕನಕದಾಸರ ‘ರಾಮಧಾನ್ಯಚರಿತೆ’ ಗ್ರಂಥದಲ್ಲಿ ಹಲವಾರು ಸಿರಿಧಾನ್ಯಗಳು ಹಾಗೂ ಇತರೆ ಬೆಳೆಗಳ ಪ್ರಸ್ಥಾಪ ಬರುತ್ತದೆ. ಇನ್ನು ನಮ್ಮ ಜನಪದರ ಉದಾಹರಣೆ ನೋಡಿ;
ಬಿತ್ತಾಟ ಬಂದೋ ಬೆಳ್ಳಿಕೂರಿಗೆ ಬಂದೋ
ಕಂದಯ್ನ ಕೈಲಿ ಕುಸುಮೆ ಹೂವಿನ ಕೋಲು
ರಾಗಿ ಬಿಡುವವನು ರಾಜಪುತ್ರ
ಸಡ್ಡೆಯ ಕೋಲು ಸರಸೋತಿ
ಮುಳ್ಳಿನ ಕೋಲೆಸರು ಗಿಳಿರಾಮ
ರಾಜಾಣ ಬಿತ್ತಿ ನಮರಾಯ ದಂಡಿಗೋಗಿ
ರಾಜಾಣವೆಲ್ಲ ಕುಯಿಲಾದೋ
ಎಂಬ ಆರೇಳು ಸಾಲಿನ ಈ ಪದದಲ್ಲಿ ಕುಸುಮೆ, ರಾಗಿ, ರಾಜಾಣ, ಉದ್ದು, ಕಡಲೆ-ಹೀಗೆ ಐದು ಬೆಳೆಗಳ ಪ್ರಸ್ಥಾಪ ಬರುತ್ತದೆ. ಜೊತೆಗೆ ರಾಗಿ ಮತ್ತು ಅಕ್ಕಡಿ ಬಿತ್ತುವ ಸಲಕರಣೆಗಳಾದ ಕೂರಿಗೆ ಮತ್ತು ಸಡ್ಡೆಯನ್ನೂ ಹೆಸರಿಸಲಾಗಿದೆ.
ಮಹಾಭಾರತದಲ್ಲಿ ಅರ್ಜುನನು ವಿವಿಧ ಬೆಳೆಗಳನ್ನು ಬಿತ್ತಲು ಹೋಗಿದ್ದ ಎಂಬ ಅರ್ಥ ಬರುವ ಸೊಗಸಾದ ಹಾಡು ಚಾಮರಾಜನಗರ ಭಾಗದಲ್ಲಿ ಪ್ರಚಲಿತದಲ್ಲಿದೆ.
ಬೆಳದಿಂಗಳ ಬೆಳಕಲ್ಲಿ ಅರ್ಜುನರಾಯ ಅವರೆ ಬಿತ್ತಾಕೆ ಹೋಗಿ
ಅವರೆಯ ಸಾಲೆಲ್ಲ ಸರಮುತ್ತು ಕಿರುಗೆಜ್ಜೆ
ಮೂಡಪ್ಪ ಬೆಳದಿಂಗಳೇ
ಬೆಳದಿಂಗಳ ಬೆಳಕಲ್ಲಿ ಅರ್ಜುನರಾಯ ಕಳ್ಳೆ ಬಿತ್ತಾಕೆ ಹೋಗಿ
ಕಳ್ಳೆೆಯ ಸಾಲೆಲ್ಲ ಸರಮುತ್ತು ಕಿರುಗೆಜ್ಜೆ
ಮೂಡಪ್ಪ ಬೆಳದಿಂಗಳೇ
ಬೆಳದಿಂಗಳ ಬೆಳಕಲ್ಲಿ ಅರ್ಜುನರಾಯ ಉದ್ದು ಬಿತ್ತಾಕೆ ಹೋಗಿ
ಉದ್ದಿನ ಸಾಲೆಲ್ಲ ಸರಮುತ್ತು ಕಿರುಗೆಜ್ಜೆ
ಮೂಡಪ್ಪ ಬೆಳದಿಂಗಳೇ
ಬೆಳದಿಂಗಳ ಬೆಳಕಲ್ಲಿ ಅರ್ಜುನರಾಯ ಹೆಸರು ಬಿತ್ತಾಕೆ ಹೋಗಿ
ಹೆಸರಿನ ಹೊಲವೆಲ್ಲ್ಲ ಸರಮುತ್ತು ಕಿರುಗೆಜ್ಜೆ
ಮೂಡಪ್ಪ ಬೆಳದಿಂಗಳೇ
ಶಿಶುನಾಳ ಷರೀಫರ ಸುಗ್ಗಿ ಮಾಡೋಣು ಬಾರವ್ವಾ, ಗೆಳತಿ ಹಾಡಿನಲ್ಲಿ
. . . ಏಳೆಂಟು ಅಕ್ಕಡಿಯ ಏಣಿಸಿ ನಮ್ಮ
ಬಾಳನು ಅದರೊಳು ದಣಿಸಿ
ಕಾಳಕೂಟ ವಿಷ ಎಣಿಸಿ ನಂಟಿನ
ಸೋಲಗಳೆಲ್ಲವ ಗಣಿಸಿ
ಬಾಳಿನ ರಾಗಿ ನವಣೆ ಸಜ್ಜೆಯ
ಓಲ್ಯಾಡುತ ಬಹುರಾಗದಿ ಕೊಯ್ಯುತ . . .
ಎಂದು ಅಕ್ಕಡಿ ಬೆಳೆಗಳನ್ನು ಬದುಕಿಗೆ ಸಮೀಕರಿಸುವ ವಿವರಣೆಯಿದೆ.
ಭಾರತದ ವಿವಿಧ ಭಾಗಗಳಲ್ಲಿ ಅಕ್ಕಡಿ ಬೇಸಾಯ
ಭಾರತದ ಬಹುತೇಕ ರಾಜ್ಯಗಳಲ್ಲಿ ಅಕ್ಕಡಿ ಬೇಸಾಯದ ಅಸ್ತಿತ್ವವನ್ನು ಕಾಣಬಹುದು. ಹೆಸರುಗಳಲ್ಲಿ ಭಿನ್ನತೆ ಇರಬಹುದು, ವಿನ್ಯಾಸ ಹಾಗೂ ಬೆಳೆ ವೈವಿಧ್ಯತೆಯಲ್ಲಿ ವ್ಯತ್ಯಾಸ ಇರಬಹುದು. ಆದರೆ ಮೂಲ ತತ್ವ ಒಂದೇ ಆಗಿದೆ. ಆಯ್ದ ಕೆಲವು ಪದ್ಧತಿಗಳನ್ನು ಇಲ್ಲಿ ಪರಿಚಯಿಸಲಾಗಿದೆ.
ಬೇವಾರ್ ಪದ್ಧತಿ
ಮಧ್ಯಪ್ರದೇಶದಲ್ಲಿ ವಾಸಿಸುವ ಬೈಗಾ ಸಮುದಾಯವು ಬೇವಾರ್ ಪದ್ಧತಿಯಲ್ಲಿ 8ರಿಂದ 10 ಬೆಳೆಗಳನ್ನು ಬಿತ್ತುತ್ತಾರೆ. ಇವುಗಳಲ್ಲಿ ಹಲವಾರು ವಿಧದ ಸಾಮೆ, ಎರಡು ತಳಿ ನವಣೆ, ಸಜ್ಜೆ, ಜೋಳ, ರಾಗಿ ಮತ್ತು ಊದಲು, ರಾಜಗೀರ (ಅಮರಾಂಥಸ್), ಪುಂಡಿ, ಅಲಸಂದೆ, ಹೆಸರುಕಾಳು, ಉದ್ದು, ಹುರುಳಿ, ಮತ್ತು ಅವರೆ ಸೇರಿವೆ. ಅಲ್ಲದೆ ಸೌತೆಕಾಯಿ, ಬೀನ್ಸ್, ಸ್ಥಳೀಯ ಟೊಮ್ಯಾಟೊ ಮತ್ತು ಬದನೆ ಸೇರಿದಂತೆ ವಿವಿಧ ತರಕಾರಿಗಳನ್ನು ಸಹ ಬಿತ್ತಲಾಗುತ್ತದೆ.
ಬೈಗಾ ಆದಿವಾಸಿಗಳು ಮಳೆಯ ಏರುಪೇರಿಗೆ ಅನುಗುಣವಾಗಿ ಬೆಳೆಗಳ ಮಿಶ್ರಣವನ್ನು ಬದಲಾಯಿಸುತ್ತಾರೆ. ಹೆಚ್ಚು ಮಳೆ ಬರುವ ಸಂಭವವಿದ್ದಾಗ ನವಣೆಯನ್ನು ಮುಖ್ಯ ಬೆಳೆಯಾಗಿ ಹಾಕಲಾಗುತ್ತದೆ. ಮಳೆ ಪ್ರಮಾಣ ಕಡಿಮೆಯಾಗುತ್ತದೆ ಎಂಬ ಮುನ್ಸೂಚನೆ ಸಿಕ್ಕರೆ ರಾಗಿ, ಸಜ್ಜೆ ಮತ್ತು ಜೋಳ ಮುಖ್ಯ ಬೆಳೆಯಾಗುತ್ತವೆ.
ಮಡಿಯಾ ಆದಿವಾಸಿ ಸಮುದಾಯವು ಮೂರರಿಂದ ನಾಲ್ಕು ವಿಧದ ದ್ವಿದಳ ಧಾನ್ಯಗಳನ್ನು ಹಾಗೂ ಐದರಿಂದ ಆರು ಸಿರಿಧಾನ್ಯಗಳನ್ನು ಒಟ್ಟಿಗೆ ಬೆಳೆಯುತ್ತಾರೆ. ಸೊಪ್ಪು ಮತ್ತು ಎಣ್ಣೆಕಾಳುಗಳನ್ನು ಹಾಗೂ ಹಲವಾರು ತರಕಾರಿಗಳನ್ನು ಸಹ ಮಿಶ್ರ ಮಾಡಿ ಬೆಳೆಯಲಾಗುತ್ತದೆ. ಈ ಮಿಶ್ರ ಬೇಸಾಯವು ಕೀಟಗಳ ದಾಳಿಯನ್ನು ತಡೆಯುವುದಲ್ಲದೆ, ಸಂಪೂರ್ಣ ಬೆಳೆ ನಷ್ಟದಿಂದ ರೈತರನ್ನು ರಕ್ಷಿಸುತ್ತದೆ. ಮುಖ್ಯವಾಗಿ ಕೀಳು ಭೂಮಿ ಎಂದು ಪರಿಗಣಿಸಲಾದ ಅಥವಾ ಕಡಿಮೆ ಫಲವತ್ತತೆಯ ಮಣ್ಣಿನಲ್ಲೂ ಖಚಿತವಾದ ಇಳುವರಿಯನ್ನು ನೀಡುತ್ತವೆ ಮತ್ತು ಕುಟುಂಬಕ್ಕೆ ಹೆಚ್ಚು ಪೌಷ್ಟಿಕ ಮತ್ತು ವೈವಿಧ್ಯಮಯ ಆಹಾರವನ್ನು ನೀಡುತ್ತವೆ.
ಬಾರಾ ಅನಾಜ್
ಬಾರಾ ಎಂದರೆ ಹಿಂದಿಯಲ್ಲಿ ಹನ್ನೆರಡು ಎಂದರ್ಥ, ಆನಾಜ್ ಎಂದರೆ ಬೆಳೆಗಳು. ಹನ್ನೆರಡು ರೀತಿಯ ಬೆಳೆಗಳನ್ನು ಮಿಶ್ರ ಮಾಡಿ ಹಾಕುವುದೇ ಈ ಪದ್ಧತಿ. ಹಿಮಾಲಯದ ವ್ಯಾಪ್ತಿಯಲ್ಲಿ, ಅದರಲ್ಲಿಯೂ ಉತ್ತರಾಖಂಡ, ಘರವಾಲ್ ಪ್ರದೇಶದಲ್ಲಿ ಜನಪ್ರಿಯ.
ಈ 12 ಬೆಳೆಗಳಲ್ಲಿ ರಾಮ್ ದಾನ (ಅಮರಾಂತಸ್, ರಾಜಗೀರ), ರಾಜ್ಮಾ (ಕಿಡ್ನಿ ಬೀನ್), ರಾಗಿ, ಮಾಂಗ್ಜೀರ್, ಹೆಸರು, ಗೋಧಿ, ಲೋಬಿಯಾ (ಕಪ್ಪು ಕಣ್ಣಿನ ಬಟಾಣಿ), ಹುರುಳಿ, ಸಾವೆ, ನವಣೆ, ಮೆಕ್ಕೆ ಜೋಳ, ಸಾಂಪ್ರದಾಯಿಕ ತಳಿ ಸೋಯಾ ಮತ್ತು ಇತರ ಕೆಲವು ಬೆಳೆಗಳು ಸೇರಿವೆ. ಬೀಜಗಳನ್ನು ಮಿಶ್ರ ಮಾಡಿ ಹದ ಮಾಡಿದ ಜಮೀನುಗಳಿಗೆ ಎರಚುತ್ತಾರೆ.
ಸಾಮಾನ್ಯವಾಗಿ ಮುಂಗಾರು ಋತುವಿನಲ್ಲಿ ಬಾರಾ ಅನಾಜ್ ಅನುಸರಿಸಲಾಗುತ್ತದೆ, ಏಕೆಂದರೆ ಹಿಂಗಾರು ಋತುವಿನ ಹವಾಮಾನವು ಸಾಮಾನ್ಯವಾಗಿ ತಂಪಾಗಿರುತ್ತದೆ ಮತ್ತು ತಾಪಮಾನವು ತುಂಬಾ ಕಡಿಮೆ ಇರುತ್ತದೆ. ಆಗ ಬೆಳೆ ಇಡಲು ಸಾಧ್ಯವಾಗದು. ಬೀಜ ಬಿತ್ತನೆಯು ಮೇ ಮಧ್ಯ ಭಾಗದಿಂದ ಜೂನ್ ಮಧ್ಯದಲ್ಲಿ ಪ್ರಾರಂಭವಾಗುತ್ತದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲ್ಲಿ ಕೊಯ್ಲು ಮಾಡಲಾಗುತ್ತದೆ.
ಝಮ್ ವಿಧಾನ
ಬೆಟ್ಟಗುಡ್ಡಗಳೇ ಹೆಚ್ಚಾಗಿರುವ ಪ್ರದೇಶ, ಅದರಲ್ಲಿಯೂ ಈಶಾನ್ಯ ಭಾರತದ ರಾಜ್ಯಗಳಲ್ಲಿ ಝಮ್ ವಿಧಾನ ಹೆಚ್ಚು ಪ್ರಚಲಿತ. ಕಾಡನ್ನು ಕಡಿದು ಸುಟ್ಟು ಅಲ್ಲಿ ಒಂದೆರಡು ವರ್ಷ ಬೆಳೆ ಇಟ್ಟು ಮತ್ತೆ ಕೆಲವು ವರ್ಷ ಅಲ್ಲಿ ಕಾಡು ಅಭಿವೃದ್ಧಿಯಾಗಲು ಬಿಟ್ಟು ಬೇರೆ ಕಡೆಗೆ ಹೋಗುವ ವಿಧಾನವಿದು. ಕಾಡು ಕಡಿದ ಸ್ಥಳದಲ್ಲಿ ಕೆಲವು ಚಿಗುರುವ ಗುಣವುಳ್ಳ ಮರಗಳನ್ನು ಹಾಗೇ ಬಿಟ್ಟಿರುತ್ತಾರೆ. ಈ ವಿಧಾನದಲ್ಲಿ 15ರಿಂದ 60 ವಿಧದ ಬಿತ್ತನೆ ಬೀಜಗಳನ್ನು ವರ್ಷದ ಎರಡು ಹಂಗಾಮುಗಳಲ್ಲಿ ಬೆಳೆಯಲಾಗುತ್ತದೆ.
ಒಂದೇ ತಾಕಿನಲ್ಲಿ ಸಿರಿಧಾನ್ಯಗಳು, ದ್ವಿದಳ ಧಾನ್ಯಗಳು, ಗೆಡ್ಡೆಗಳು, ಎಣ್ನೆಕಾಳುಗಳು, ತರಕಾರಿಗಳು ಹಾಗೂ ಹಬ್ಬುವ ಗುಣವುಳ್ಳ ಬೆಳೆಗಳನ್ನು ಇಡುತ್ತಾರೆ. ಎಲ್ಲಾ ಬೀಜಗಳನ್ನು ಮಿಶ್ರ ಮಾಡಿ ಎರಚಲಾಗುತ್ತದೆ, ಹಾಗೂ ಕೆಲವು ಗೆಡ್ಡೆ ಇತ್ಯಾದಿಗಳನ್ನು ಕೈಯಿಂದ ಊರಲಾಗುತ್ತದೆ. ಝಮ್ ಕೃಷಿ ವಿಧಾನವು ಈಶಾನ್ಯ ರಾಜ್ಯಗಳಲ್ಲಿ ಜೀವನ ವಿಧಾನ, ಸಂಸ್ಕೃತಿಯ ಭಾಗ ಹಾಗೂ ಆಚರಣೆಯೇ ಆಗಿದೆ. ಮಹಿಳೆಯರು ಈ ಕೃಷಿ ವಿಧಾನದಲ್ಲಿ ಪ್ರಧಾನ ವಹಿಸ್ಮತ್ತಾರೆ.
ಸಾತ್ ಧಾನ್
ಹೆಸರೇ ಹೇಳುವಂತೆ ಏಳು ಬೆಳೆಗಳನ್ನು ಮಿಶ್ರ ಮಾಡಿ ಹಾಕುವ ಪದ್ಧತಿ. ರಾಜಸ್ಥಾನದಲ್ಲಿ ಬಳಕೆಯಲ್ಲಿದೆ. ಇಲ್ಲಿ ಸಜ್ಜೆಯು ಮುಖ್ಯ ಬೆಳೆಯಾಗಿದ್ದು ಅದರೊಂದಿಗೆ ಹಲವು ರೀತಿಯ ದ್ವಿದಳ ಧಾನ್ಯ ಹಾಗೂ ಎಣ್ಣೆ ಕಾಳುಗಳನ್ನು ಮಿಶ್ರಣ ಮಾಡಿ ಬಿತ್ತಲಾಗುತ್ತದೆ.
ಪಂಡೆಂಟು ಪಂಟಲು
ಆಂಧ್ರ ಹಾಗೂ ತೆಲಂಗಾಣದಲ್ಲಿ ಬಳಕೆಯಲ್ಲಿರುವ ಮಿಶ್ರ ಬೇಸಾಯ ಪದ್ಧತಿ. ಹೆಸರೇ ಹೇಳುವಂತೆ ಪಂಡೆಂಟು-ಹನ್ನೆರಡು ಪಂಟಲು-ಬೆಳೆಗಳ ಮಿಶ್ರಣ. ರಾಗಿ ಅಥವಾ ಜೋಳ ಮುಖ್ಯ ಬೆಳೆಯಾಗಿದ್ದು ಅವರೆ, ತೊಗರಿ, ಅಲಸಂದೆ ಇತ್ಯಾದಿ ದ್ವಿದಳ ಧಾನ್ಯಗಳು ಹಾಗೂ ಸಾಸಿವೆ, ಹುಚ್ಚಳ್ಳು, ಹರಳು ಇತ್ಯಾದಿ ಎಣ್ಣೆ ಕಾಳುಗಳನ್ನು ಸಾಲುಗಳಲ್ಲಿ ಬಿತ್ತಲಾಗುತ್ತದೆ. ಆಂಧ್ರದ ಕೆಲವೆಡೆ 9 ಬೆಳೆಗಳ ಸಂಯೋಜನೆ ಪದ್ಧತಿ ಚಾಲ್ತಿಯಲ್ಲಿದ್ದು ಇದಕ್ಕೆ ನವಧಾನ್ಯ ಪದ್ಧತಿ ಎನ್ನುತ್ತಾರೆ.
( ಮುಂದಿನ ‘ಕಿನ್ನರಿ’ಗೆ)