ಪರಿಸರವಾದಿ ಹುತಾತ್ಮ 

ಪರಿಸರವಾದಿ ಹುತಾತ್ಮ 

ವ್ಯಕ್ತಿ-ವ್ಯಕ್ತಿತ್ವ

ಕೇಶವ ಮಳಗಿ

 


ಕೆನ್ ಸಾರೊ-ವಿವ

KEN-SARO-WIWA   (1941-1995)


ನೈಜೀರಿಯಾದ ಕವಿ, ಕಾದಂಬರಿಕಾರ, ಬಹುರಾಷ್ಟ್ರೀಯ ಬಲಾಢ್ಯ ತೈಲ ಕಂಪನಿ ಡಚ್ ರಾಯಲ್ ಷೆಲ್ (Shell) ವಿರುದ್ಧ ಪ್ರಬಲ ಪರಿಸರ ಹೋರಾಟಗಾರ ಕಟ್ಟಿದ ಕಟ್ಟಾಳು, ಅದಕ್ಕಾಗಿಯೇ ಜೀವ ತೆತ್ತ ಹುತಾತ್ಮ. 


ನೈಜೀರಿಯದ ಸೇನಾಡಳಿತ ಮತ್ತು ಆಂಗ್ಲೋ - ಡಚ್ ದೈತ್ಯ ತೈಲ ಸಂಸ್ಥೆ ರಾಯಲ್ ಷೆಲ್ ಕಂಪನಿಗಳು ಶಾಮೀಲಾಗಿ ನೈಜೀರಿಯದ ಭೂಮಿ, ಜೀವ ಸಂಕುಲ, ನದ-ನದಿಗಳನ್ನು ಕಲುಷಿತಗೊಳಿಸುತ್ತ, ಸಮುದಾಯಗಳ ಬದುಕನ್ನು ದುರ್ಭರಗೊಳಿಸತೊಡಗಿದಾಗ ಅಲ್ಲಿನ ಸ್ಥಾನಿಕ 'ಒಗೋನಿ' ಬುಡಕಟ್ಟು ಪ್ರತಿರೋಧ ಒಡ್ಡತೊಡಗಿತು. 


ಆಗಷ್ಟೇ ಶಿಕ್ಷಣ ಮುಗಿಸಿ, ಇಬಾದನ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದ ತರುಣ ಕೆನುಲೆ ಬೀಸನ್ ಸಾರೊ-ವಿವ ಬೇರೆ ಬೇರೆ ಕೆಲಸ ಮಾಡುತ್ತ ಪೂರ್ಣಾವಧಿ ಬರಹಗಾರರಾಗಲು ಕೊನೆಗೆ ಎಲ್ಲ ವೃತ್ತಿಗಳಿಗೂ ನಮಸ್ಕಾರ ಹೇಳಿದರು. ಆಗ ಬರೆದ ' ಸಾಂಗ್ಸ್ ಇನ್ ದ ಟೈಮ್ ಆಫ್ ವಾರ್', 'ಸೋಷ ಬಾಯ್' ಹೆಸರು ತಂದುಕೊಟ್ಟವು.


ಲೇಖಕ ಮತ್ತು ಪತ್ರಕರ್ತರಾಗಿ ಸಮಾಜದಲ್ಲಿ ಕಂಡ ಲೋಪದೋಷಗಳು ಹಾಗೂ ತಮ್ಮ ಅಲ್ಪಸಂಖ್ಯಾತ ಬುಡಕಟ್ಟು 'ಒಗೋನಿ' (ಅಂದಿಗೆ ಐದು ಲಕ್ಷ ಜನಸಂಖ್ಯೆಯ) ಸಮುದಾಯದ ಮೇಲೆ ನಡೆಯುತ್ತಿದ್ದ ನಿರಂತರ ದಬ್ಬಾಳಿಕೆಗಳು ಕೆನ್‌ರನ್ನು ಹೋರಾಟ-ಚಳವಳಿಗಳ ಬದುಕಿಗೆ ದೂಡಿದವು.


ಷೆಲ್ ಕಂಪನಿ ವಿರುದ್ಧ ರೂಪಿಸಿದ ಸ್ಥಳೀಯ ಹೋರಾಟವು ಅಂತಾರಾಷ್ಟ್ರೀಯ ಪರಿಸರ ಆಂದೋಲನವಾಗಿ ಬದಲಾಯಿತು. ಷೆಲ್ ಅಂತಾರಾಷ್ಟ್ರೀಯ ನೆಲೆಯಲ್ಲಿ ಛೀಮಾರಿ ಹಾಕಿಸಿಕೊಂಡು ತಲೆ ತಗ್ಗಿಸಿತು. ಆದರೆ ಸೇನಾಡಳಿತ ರಚಿಸಿದ ಷಡ್ಯಂತ್ರದಲ್ಲಿ ಕೆನ್‌ರನ್ನು ಸಿಲುಕಿಸಿ 1994ರಲ್ಲಿ ಬಂಧಿಸಲಾಯಿತು. ಸರ್ವಾಧಿಕಾರಿಯ ಒಕ್ಕಣ್ಣಿನ ನ್ಯಾಯ ವ್ಯವಸ್ಥೆಯಲ್ಲಿ ಏಕಪಕ್ಷೀಯ ವಿಚಾರಣೆ ನಡೆಸಿ ಅವರಿಗೆ ಮತ್ತು ಅವರ ಸಂಗಾತಿಗಳಿಗೆ ಮರಣದಂಡನೆ ವಿಧಿಸಲಾಯಿತು. 


ಕೆನುಲೆ ಅವರ ಮರಣದ ಬಳಿಕ ತಮ್ಮ ಹೋರಾಟ, ಸಾಹಿತ್ಯ ಮತ್ತು ವಿಚಾರಗಳಿಂದಾಗಿ ದಿನೇ ದಿನೇ ಜನ ಮಾನಸವನ್ನು ಇನ್ನಷ್ಟು, ಮತ್ತಷ್ಟು ವ್ಯಾಪಿಸುತ್ತಿದ್ದಾರೆ. ಕೆನ್ ಹೆಸರಿನಲ್ಲಿ ಅಂತಾರಾಷ್ಟ್ರೀಯ ಸಾಹಿತ್ಯ ಮತ್ತು ಪರಿಸರ ಪ್ರಶಸ್ತಿಗಳನ್ನು ಕೂಡ ಸ್ಥಾಪಿಸಲಾಗಿದೆ. ಇಪ್ಪತ್ತನೆಯ ಶತಮಾನದ ಎರಡನೆಯ ಭಾಗದಲ್ಲಿ ಆಫ್ರಿಕನ್ ಸಾಹಿತ್ಯ, ಜೀವಸಂಕುಲಗಳ ಉಳಿವಿನ ಹೋರಾಟದ ಮಾತುಕತೆಯಲ್ಲಿ ಕೆನುಲೆ ಬೀಸನ್ ಸಾರೊ-ವಿವ ಹೆಸರು ಮೊದಲ ಸ್ಥಾನದಲ್ಲಿರುತ್ತದೆ. ವಂಗಾರಿ ಮಥಾಯಿ ಇನ್ನೊಂದು ಹೆಸರು.


ಕೆನ್ ಸಾರೊ-ವಿವ ಕವಿತೆಗಳು 


1)


ನನಗೊಂದು ದನಿ ಇದ್ದಿದ್ದರೆ
ಹಾಡುತಲಿದ್ದೆ ನಿನ್ನ ಪದಗಳನೆ.
ನನಗೊಂದು ನಾಲಿಗೆ ಇದ್ದಿದ್ದರೆ
ಬಳಸುತಿದ್ದೆ ಹೊಗಳಲು ನಿನ್ನನೇ.
ನನಗೊಮ್ಮೆ ಕಾಲಾವಕಾಶ ಇದ್ದಿದ್ದರೆ
ಚೆಂದವಾಗಿ ಬದುಕುತಿದ್ದೆ ನಿನಗಾಗಿಯೆ.
ಆದರೀಗ, ನೋಡು ಏನಾಗಿದೆ: 
ನೆಲಕ್ಕಂಟಿ, ಅನ್ಯಾಯಕೆ ಒತ್ತೆಯಾಳಾಗಿ 
ಸಾವ ಕಾವುತಲಿರುವೆ.
ನಾವು: ಒಬ್ಬರಿಗೊಬ್ಬರು ಹಿತ-ಸುಖವ ಬಯಸುತಲಿ,
ಇರುವಿಕೆಗೊಂದು ಅರ್ಥವನು ಕೊಟ್ಟು-ಕೊಳುತಲಿ.
ನಿಟ್ಟುಸಿರನು ಬಿಡುತ ನೀನು ಹೇಗೆ ಬದುಕನು ನೂಕಿದೆ
ಎನ್ನುವುದೇ ಇಂದಿಗೂ ಬಲು ಸೋಜಿಗವು ನನಗೆ.


*
2)


ಇಳಿಸಂಜೆಯ ಆಗಸದಲಿ ಬಿಳಿ ಬೆಂಕಿಯ ಉಂಡೆಗಳನು 
ನೋಡಲು, ಬಳಿಕ, ತಾರುಣ್ಯದ ವೈರಿ ಮಲಗಿರುವ
ಕುರುಚಲು ಕಾಡಿನಲ್ಲಿ ಚರಚರನೆ ಸುಡುತ 
ನೆಲಕ್ಕಪ್ಪಳಿಸುವುದನು ಕಾಣಲು ನೀವು ಅಲ್ಲಿದ್ದಿರ?
ಸೈನಿಕನ ತುಂಡರಿಸಿದ ಕಾಲನು ಅಪಾರ ಕರ್ತವ್ಯಪರತೆಯಲಿ 
ಯುವ ವೈದ್ಯನ ಖೋಲಿಗೆ ಸಾಗಿಸಿದ್ದು ಕಾಣಲು ನೀವು ಅಲ್ಲಿದ್ದಿರ?
ಸಡಿಲ ಮರುಳು ತುಂಬಿದ ಮಸಣದಲಿ
ಬಾಂಬು ದಾಳಿಗೆ ಒಳಗಾದ ಸೈನಿಕ 
ಪ್ರಾರ್ಥಿಸಲೆಂಬAತೆ ಹೊರಚಾಚಿದ
ನರಪೇತಲ ಕರಗಳನು ದಿಟ್ಟಿಸಲು ನೀವು ಅಲ್ಲಿದ್ದಿರ?
ರೇಡಿಯೋ ಬಿತ್ತರಿಸುವ ವಿಜಯೋತ್ಸವದ ಸುದ್ದಿ-ಸಮಾಚಾರಕ್ಕೆ
ನುಚ್ಚುನೂರಾದ ತುಕಡಿಗಳ ವಾರ್ತೆಗಳಿಗೆ ನೀವೆಂದೂ ನಗಲಾರಿರಿ.


*
3) 


ನಿನ್ನ ಕೆಂಡಾಮಂಡಲ ಕೋಪಕೆ,
ಸುಖ - ಸಂತೋಷಗಳಿಗೆ ಕುಣಿ.
ಸೇನಾ ಬಂದೂಕಿನ ಕಾಡತೂಸುಗಳ
ಮೌನವಾಗಿಸಲು ಕುಣಿ.
ತೈಲಾಗಾರಗಳ ದಶಕಗಳ ಅಟ್ಟಹಾಸದ
ಹುಟ್ಟಡಗಿಸಲು ಮೈದಣಿಯೆ ಕುಣಿ.
ನಾಳೆಗಳನು ಕಂಡಿರುವ
ಖುಷಿಯಲಿ ಕುಣಿಯಿರಿ ಜನಗಳೇ
ಅಗೋ! ಅಲ್ಲಿದೆ ಬೆಳಗಿನ ಬೆಳ್ಳಿ ಚುಕ್ಕಿ.


*
4)


ನಾವೀಗ ಮರಳಿ ಬಂದಿದ್ದೇವೆ:
ಸಿಡಿಲು-ಗುಡುಗು ನೆತ್ತರಿನ ಮಳೆ ಸುರಿಸುವ;
ಕಣ್ಸನ್ನೆಗೆ ಮುಸಲಧಾರೆಯ ಹರಿಸುವ
ಸರ್ವಶಕ್ತನ ಲೋಕದಿಂದ,
ಖಾಲಿ ಕೈ, ಬರಿದಾದ ಮನದಿಂದ
ನಾವೀಗ ಮರಳಿ ಬಂದಿದ್ದೇವೆ.
ಯುದ್ಧ ಬೇಕೆಂದು ನಾವು ಬಿನ್ನಹವ ಮಾಡಿರಲಿಲ್ಲ.
ಕದನಗಳ ಕಲೆಯನು ಅಳಿಸಿ ಹಾಕು-
ನಾವೇನೂ ಮಾತನಾಡುವುದಿಲ್ಲ;
ನಮ್ಮ ನೆಲದ, ವಸಾಹತುಗಳ ಕ್ಷಿಪ್ರಕ್ರಾಂತಿಯ ಕುರಿತು,
ರಾತ್ರಿಗಳಲಿ ನಡೆಸುವ ದಾಳಿಗಳ ಕುರಿತು
ನಾವೇನೂ ಉಸಿರೆತ್ತುವುದಿಲ್ಲ.
ಬಾಂಬಿನ ದಾಳಿಗಳು ಹುಟ್ಟಿಸಿದ,
ಶವಗಳನು ಹೂತ ಮಸಣದ
ಗೋರಿಕಲ್ಲುಗಳನೂ ಮರೆತು ಬಿಡುವೆವು.
ಬರಮಾಡಿಕೋ ಸರ್ವಶಕ್ತನೇ ನಮ್ಮೆಲ್ಲರನು 
ನಿನ್ನ ಜಲಧಾರೆಯಿಂದ ನಮ್ಮನು ತೊಳೆದು 


5)


ಆತ ಸೌಮ್ಯ ನಗೆ ನಕ್ಕ
ನಾನು ನಿರಾಳವಾದೆ.
ಕೈಯಲಿ ಬಂದೂಕಿನ
ಹೊರತಾಗಿಯೂ ಕಂಡ ಹಾಸ
ಆತನಿನ್ನೂ ಮನುಷ್ಯನೆಂದಿತು.
ದಟ್ಟ ರಾತ್ರಿ ಕತ್ತಲಿನಲಿ ಚಿಮ್ಮಿದ
ಆ ಸೌಮ್ಯ ನಗು ಮಿಂಬೆಳಕಿನಂತಿತ್ತು.
ನೋಡಿದರೆ, ಅದೊಂದು ಪೇಲವ ನಗೆಯೇ 
ಬಲು ಬೇಗನೆ ಕಂದಿ ಹೋಗಲಿತ್ತು.