ಸ್ವಯಂ ಸಾಕ್ಷಾತ್ಕಾರದ ಹಾದಿ ತೋರಿಸುವ ಪ್ರವಾದಿ
dostoyevski
ವ್ಯಕ್ತಿ-ವ್ಯಕ್ತಿತ್ವ
ಕೇಶವ ಮಳಗಿ
". . ನಾವು ಕನಸಿನಲ್ಲಿ ಕಾಣುವ ಪ್ರೇಮಕ್ಕಿಂತ ವಾಸ್ತವದಲ್ಲಿ ತೊಡಗುವ ಕ್ರಿಯಾಶೀಲ ಪ್ರೀತಿ ಭಯಾನಕ ಮತ್ತು ರೂಕ್ಷ. ಕನಸಿನಲ್ಲಿ ಕಾಣುವ ಪ್ರೇಮವು ತಕ್ಷಣದ ಕ್ರಿಯೆಗಾಗಿ ಹಾತೊರೆಯುತ್ತದೆ. ಎಲ್ಲರೂ ಸಾಕ್ಷಿಗಳಾಗಿರುವಾಗಲೇ ತ್ವರಿತವಾಗಿ ಮುಗಿದುಹೋಗುತ್ತದೆ. ಜೀವವೇ ಕುದಿಗೆ ಬಂದಂತೆ ಕರಗಿ ಹೋಗುತ್ತದೆ. ಮಾತ್ರವಲ್ಲ, ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ ಬೇರೆ! ಆದರೆ, ವಾಸ್ತವದ ಸಕ್ರಿಯ ಪ್ರೀತಿಯಾದರೂ ಅಪಾರ ಶ್ರಮ, ಸಾತತ್ಯ ಬಯಸುತ್ತದೆ. ಕೆಲವರಿಗಂತೂ ಇದು ಇಡೀ ಬದುಕನ್ನೇ ಬಯಸುವ ಲೋಕಜಾಣ್ಮೆಯಾಗಿರುತ್ತದೆ." * (ದಿ ಬ್ರದರ್ಸ್ ಕರ್ಮಜೋವ್ )
ಸ್ವಯಂ ಸಾಕ್ಷಾತ್ಕಾರದ ಹಾದಿ ತೋರಿಸುವ ಪ್ರವಾದಿ
* ಫ್ಯುದೋರ್ ದಸ್ತಯೇವಸ್ಕಿ
(ಹುಟ್ಟು: ನವೆಂಬರ್ 11, 1821)
ಹತ್ಯೆ, ಆತ್ಮಹತ್ಯೆ, ಆಡಂಬರದ ದೈವನಿಂದನೆ, ಆಳದ ಧರ್ಮಶ್ರದ್ಧೆ, ನೈಜ ಕ್ರಾಂತಿ-ಪೊಳ್ಳು ಪ್ರತಿಕ್ರಾಂತಿ, ಭಾವೋತ್ಕಟ ಪ್ರೇಮ-ಅಸಹನೀಯ ದ್ವೇಷಾಸೂಯೆ, ಹಾಲುಗಲ್ಲದ ಮಗುವಿನ ಮುಗ್ದತೆ, ಹಾಲಾಹಲ ತುಂಬಿಕೊಂಡ ರಾಕ್ಷಸತೆ ಇವು ಇಂಥವೇ ಹತ್ತಾರು ಮನುಷ್ಯನ ಆದಿಮ ಸ್ವಭಾವವನ್ನು ಒಂದೇ ಪುಸ್ತಕದ ಐವತ್ತು ಪುಟಗಳೊಳಗೆ ಕಂಡು ಉದ್ವಿಗ್ನರಾದರೆ ಅದು ದಸ್ತಯೇವಸ್ಕಿಯ ಪುಸ್ತಕವೇ ಆಗಿರುತ್ತದೆ!
ಈತನನ್ನು ಹೊಸ ಕಾಲಮಾನದ ಸಾಹಿತ್ಯದ ಪ್ರವಾದಿ ಎನ್ನಲಾಗುತ್ತದೆ. ಆದರೆ, ಇನ್ನೊಬ್ಬ ವಿಭೂತಿಪುರುಷ ಟಾಲ್‌ಸ್ಟಾಯ್ ಮಾತ್ರ 'ಅಂವ ಕಳಪೆ ಲೇಖಕ', ಎಂದು ಕರುಬುತ್ತಿದ್ದ. ಅದು ಪ್ರವೃತ್ತಿ ಮತ್ಸರವಷ್ಟೇ. ದಸ್ತಯೇವಸ್ಕಿ ಎಲ್ಲಿ ತನಗಿಂತ ಹೆಚ್ಚು ಅಜೇಯನಾಗಿಬಿಡುತ್ತಾನೋ ಎಂಬ ಆತಂಕದಿಂದ ಹುಟ್ಟಿದ್ದು. ಹಿರಿಯನ ಹೊಟ್ಟೆಕಿಚ್ಚಿನ ಹೊರತಾಗಿಯೂ ಈತನೊಬ್ಬ ಸಾರ್ವಕಾಲಿಕ ಮಹಾನ್ ಲೇಖಕನೇ ಸರಿ. ಹೀಗೆ ಒಂದೇ ಕೃತಿಯಲ್ಲಿ ಅಡಗಿರುವ ಹಲವು ಬಗೆಯ ಪ್ರಜ್ಞೆಯ ಒಳಹೊರ ಹರಿವುಗಳನ್ನು ಪ್ರಸಿದ್ಧ ಭಾಷಾತಜ್ಞ, ವಿಮರ್ಶಕ ಮಿಖಾಯಿಲ್ ಬಖ್ತಿನ್,
'ಬಹುಧ್ವನಿಗಳ ಪ್ರಸ್ತುತಿ' ಎಂದು ಕರೆದರು. 'ದಸ್ತಯೇವಸ್ಕಿ ಬಹುಪ್ರಜ್ಞಾಪ್ರವಾಹದ, ಅನೇಕ ದನಿಗಳನ್ನು ಹೊಮ್ಮಿಸುವ ಕಾದಂಬರಿಗಳ ಸೃಷ್ಟಿಕರ್ತ. ಆತ ಸಂಪೂರ್ಣ ಹೊಸತೇ ಆದ ಕಾದಂಬರಿ ಪ್ರಕಾರವೊಂದನ್ನು ಆವಿಷ್ಕರಿಸಿದ. ಹೀಗಾಗಿ, ರೂಢಿಗತ ಮಾದರಿಗಳ ವ್ಯಾಖ್ಯಾನಕ್ಕೆ ಅಥವ ವಿಶ್ಲೇಷಣೆಗೆ ಆತನ ಕೃತಿಗಳನ್ನು ಒಳಪಡಿಸಲಾಗದು. ದಸ್ತಯೇವಸ್ಕಿ ಕಾದಂಬರಿಗಳಲ್ಲಿನ ನಾಯಕನ ದನಿಯು ಕೃತಿಯೊಳಗಿನ ಸ್ವರೂಪದಿಂದ ಅಭೂತಪೂರ್ವ ಎನ್ನುವಂತೆ ಸಂಪೂರ್ಣ ಪ್ರತ್ಯೇಕವಾಗಿ ನಿಲ್ಲುತ್ತದೆ. ಉಳಿದ ಪಾತ್ರಗಳ ದನಿಗಳೊಂದಿಗೆ ಸೋಜಿಗದ ರೀತಿಯಲ್ಲಿ ಬೆಸುಗೆಗೊಳ್ಳುತ್ತದೆ,' ಎಂದರು. ದಸ್ತಯೇವಸ್ಕಿ ಕುರಿತ ಬಖ್ತಿನ್‌ರ ಬರಹಗಳು ಆತನ ಕೃತಿಗಳನ್ನು ನೋಡುವ ವಿಧಾನವನ್ನು ಬದಲಾಯಿಸಿಬಿಟ್ಟವು.
ಈತ ಸೃಷ್ಟಿಸುವ ಲೋಕವಾದರೂ ಓದುಗನನ್ನು ಒಂದು ಕ್ಷಣಕ್ಕೆ ಭಯಗ್ರಸ್ತಗೊಳಿಸಿದರೆ, ಮರುಗಳಿಗೆಯೇ ಅನುಕಂಪ-ಕಾರುಣ್ಯ ತುಂಬಿ ಪಾಪಪ್ರಜ್ಞೆಯಿಂದಲೋ, ಕ್ರಾಂತಿಯ ಕೆಚ್ಚಿನಿಂದಲೋ ಕೊಳೆವ-ಹೊಳೆಯುವ ಪಾತ್ರಗಳನ್ನು ತಬ್ಬಿಕೊಳ್ಳುವಷ್ಟು ಭಾವುಕವಾಗಿಸುವಂಥವು. 'ಡೆವಿಲ್ಸ್' ('ಡೆಮೊನ್ಸ್': ಇನ್ನೊಂದು ಆವೃತ್ತಿಯ ಹೆಸರು) ಕಾದಂಬರಿಯ ಮುಖ್ಯಪಾತ್ರ ಕಿರಿಲೊವ್‌ನನ್ನೇ ತೆಗೆದುಕೊಳ್ಳಿ. ಕಥೆಯ ಶೃಂಗದಲ್ಲಿ ಆತ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುವ ಕ್ಷಣ ಮತ್ತು ಪರಿಣಾಮಗಳು ರುದ್ರಭಯಾನಕ. ಕ್ಷಿಪ್ರಕ್ರಾಂತಿ, ರಾಜಕೀಯ ಹತ್ಯೆಗಳ ಸಂಚನ್ನು ರೂಪಿಸಿದ ತರುಣ ಕ್ರಾಂತಿಕಾರಿಗಳ ಗುಂಪಿನ ಪ್ರಮುಖನಾದ ಈತ ಕಡು ನಾಸ್ತಿಕ. ದೇವರ ಮತ್ತು ಕಂದಚಾರದ ಇಗರ್ಜಿಯ ಸಾಂಸ್ಥಿಕ ಮತಧರ್ಮದ ಅಸ್ತಿತ್ವವನ್ನು ನಿರಾಕರಿಸುವವನು.
'ದೇವರು ಅಸ್ತಿತ್ವದಲ್ಲಿ ಇಲ್ಲ. ಹೀಗಾಗಿ, ಆತ್ಮಹತ್ಯೆಯ ಆಯ್ಕೆ ಸಾಕ್ಷಾತ್ಕಾರಕ್ಕಾಗಿ ಇರುವ ಏಕೈಕ ಅತ್ಯುನ್ನತ ಮಾರ್ಗ. ಆತ್ಮಹತ್ಯೆ ಮಾಡಿಕೊಂಡವರು ದೇವರ ಹಂತಕ್ಕೆ ಏರಬಹುದಾಗಿದೆ. ಸಂತೋಷವೆನ್ನುವುದು 'ಮನುಷ್ಯನ ಮಾನಸಿಕ ಸ್ಥಿತಿ’. ಒಳಗಿನಿಂದ ಚಿಮ್ಮಬೇಕಲ್ಲದೆ ಹೊರಗಿನಿಂದಲ್ಲ. ಹೀಗಿರುವಾಗ ನನ್ನ ಉತ್ಕಟ ಸಂತಸವನ್ನು ಸ್ವಯಂಹತ್ಯೆಯ ಮೂಲಕ ಸಾಧಿಸಿಕೊಳ್ಳುವುದರಲ್ಲಿ ತಪ್ಪೇನಿದೆ? ಅದೂ ಅಲ್ಲದೆ, ನಾವು ಹೊರಗಿನಿಂದ ನೋವು ಮತ್ತು ದುಃಖವನ್ನಲ್ಲದೆ ಬೇರೇನೂ ಪಡೆಯಲಾರೆವು. ಆದ್ದರಿಂದ ಸಾವಿನ ಆಯ್ಕೆ ಎಂದರೆ, ದೇವ ಅಸ್ತಿತ್ವವನ್ನು ನಿರಾಕರಿಸುತ್ತ ದೇವರೇ ಆಗುವುದಾಗಿದೆ', ಎನ್ನುವುದು ಕಿರಿಲೊವ್‌ನ ನಿಲುವು. ತಾನು ಸತ್ತಮೇಲೆ ಸಮಾಜವು ತನ್ನ ಗೆಳೆಯರ ಮೇಲೆ ಹೊರೆಸಬಹುದಾದ ಆಪಾದನೆಗಳಿಂದ ಅವರನ್ನು ಮುಕ್ತವಾಗಿಸಲು ಸಂಪೂರ್ಣ ಅರಿವಿನ ಸ್ಥಿತಿಯಲ್ಲಿ ಅಂತಿಮ ಪತ್ರವನ್ನು ಓದಿ ಹಸ್ತಾಕ್ಷರ ಹಾಕುತ್ತಾನೆ. ಆ ಮೂಲಕ ಅನ್ಯರು ಮಾಡಿದ ಪಾಪಕ್ಕಾಗಿ ತಾನು ಪಶ್ಚಾತ್ತಾಪವನ್ನು ಪಡುವ ಕ್ರಿಸ್ತನಾಗುತ್ತಾನೆ!
ದಸ್ತಯೇವಸ್ಕಿ ಕಾದಂಬರಿಗಳಲ್ಲಿ ವ್ಯವಸ್ಥೆಯಿಂದ ಸಿಡಿದೆದ್ದ, ಉದ್ವಿಗ್ನಗೊಂಡ ಪಾತ್ರಗಳ ಅರಾಜಕತೆಯ ಸಿದ್ಧಾಂತಿಗಳ (ನಿಹಿಲಿಸ್ಟ್) ದಂಡೇ ಇರುತ್ತದೆ. 'ಡೆವಿಲ್ಸ್'ನಲ್ಲಿ ಈ ಮಾತು ಇನ್ನೂ ನಿಜ. ಅಲ್ಲಿ ಪ್ರಕಟಗೊಳ್ಳುವ ಹಸಿಬಿಸಿಹಬೆಯ ವಾತಾವರಣ, ಷಡ್ಯಂತ್ರ, ಗೋಡೆಗೆ ಅಚ್ಚು ಮೂಡಿಸಿದಂತೆ ಕಾಣಿಸಿಕೊಳ್ಳುವ ಸಾಮಾನ್ಯ ಬದುಕಿನ ಅಸಾಮಾನ್ಯ ವಿವರಗಳು, ಕ್ರಾಂತಿಕಾರಿಗಳ ನಿಗೂಢ ಲೋಕ, ಬುದ್ಧಿಭ್ರಮಣೆಗೆ ಒಳಗಾದಂತೆ ಕಾಣುವ ಪಾತ್ರಗಳ, ಹೆದರಿಕೆ ಹುಟ್ಟಿಸುವ ಒಳತೋಟಿಗಳು. ಮತ್ತು "ವಿಚಾರಣೆ ನಡೆಸುವ ಅಧಿಕಾರವುಳ್ಳ ಮಹಾ ವಿಚಾರಣೆಯ ಘನವ್ಯಕ್ತಿ"ಗಳು . . .
ಲೇಖಕ ವೈಯಕ್ತಿಕವಾಗಿ ಅರಾಜಕತಾವಾದಿಯಾಗಿದ್ದರೂ ಆತನಿಗೆ ಆತ್ಮಹತ್ಯಾತ್ಮಕ ಅರಾಜಕ ರಾಜಕೀಯ ಸರಿಬರುತ್ತಿರಲಿಲ್ಲ. ಆತ ಅರೆ-ಅರಾಜಕ, ಅರೆ-ಉದಾರಿವಾದಿ, ಅರೆ-ಬಂಡುಕೋರ ಮನೋಭಾವ ಹೊಂದಿದವನಾಗಿರಬಹುದೆಂದು ವಿಮರ್ಶಕರು ಹೇಳುತ್ತಾರೆ. ಕಾದಂಬರಿಯಲ್ಲಿ ರಶ್ಯನ್ ಪರಂಪರೆಯನ್ನು ಕಡೆಗಣಿಸುತ್ತ ಪಾಶ್ಚಾತ್ಯ ತೀವ್ರಗಾಮಿ ವಿಚಾರಗಳಿಗೆ ಜೋತುಬಿದ್ದ ದಾರಿ ತಪ್ಪಿದ ತರುಣರ ಉಧ್ವಸ್ಥ ಜೀವನವನ್ನು ದಸ್ತಯೇವಸ್ಕಿ ಹೇಳುತ್ತಿದ್ದಾನೆಂದೂ ಪಂಡಿತರ ಅನ್ನಿಸಿಕೆ. 'ಮನುಷ್ಯನೊಳಗಿನ ಮತಧರ್ಮದ ನಂಬಿಕೆಯನ್ನು ಸಂಪೂರ್ಣ ಪಲ್ಲಟಗೊಳಗಿಸಿದರೆ ಏನಾಗಬಹುದು?'ಎಂದು ಬಗೆದು ನೋಡುವುದು ವ್ಯಸನವೆನ್ನುವಷ್ಟರ ಮಟ್ಟಿಗೆ ಆತನನ್ನು ಆವರಿಸಿತ್ತು. ತನ್ನ ಕಾಲವನ್ನು ಕಬಳಿಸುತ್ತಿರುವ ಮನುಷ್ಯರ ಕರಾಳತೆ ಆತನನ್ನು ಬಹುವಾಗಿ ಕಾಡಿತ್ತು. ಮನುಷ್ಯರ ಅಂತರಂಗದಲ್ಲಿರುವ ಶ್ರದ್ಧೆ-ನಂಬಿಕೆಗಳನ್ನು ಬರಿದು ಮಾಡಿದಾಗ ಉಳಿಯುವುದಾದರೂ ಏನು? ಎನ್ನುವುದು ಆತ ಎತ್ತುತ್ತಿರುವ ಬದುಕಿನ ಮತ್ತು ಕಾಲಮಾನದ ಪ್ರಶ್ನೆಯಾಗಿತ್ತು. 'ಸತ್ಯ ಮತ್ತು ಕ್ರಿಸ್ತ ಎರಡರಲ್ಲಿ ಒಂದನ್ನು ಆಯ್ಕೆ ಮಾಡುವ ಪ್ರಸಂಗ ಬಂದಿದ್ದರೆ ದಸ್ತಯೇವಸ್ಕಿ ಬಹುಶಃ ಕ್ರಿಸ್ತನನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ. ಕ್ರಿಸ್ತನ ನಿರಾಕರಣೆಗಾಗಿಯೇ ಸತ್ಯವನ್ನು ಆಯ್ಕೆ ಮಾಡಿಕೊಂಡವರು ಹೆಚ್ಚು ಗೌರವಾನ್ವಿತರೆಂದು ಪರಿಗಣಿತರಾಗಬಹುದು. ಹಾಗೆ ಮಾಡುವವರು ತಮ್ಮದೇ ಕಲ್ಪನಾ ವಿಲಾಸದಲ್ಲಿ ತೇಲಾಡುತ್ತ, ತಮ್ಮದೇ ಪ್ರತಿಮೆಗಳನ್ನು ಸಾಕಾರಗೊಳಿಸಿಕೊಳ್ಳುವ ಭ್ರಮೆಯಿಂದಲಾದರೂ ಹೊರಗಿದ್ದಾರೆ,' ಎಂದು ಶೇಷಾ ಮಿಯೋಶ್ ಹೇಳುತ್ತಾರೆ.
ದಸ್ತಯೇವಸ್ಕಿ ಕೃತಿಗಳಲ್ಲಿ ಯಾವುದೂ ಸಂಘಟಿತವಾಗಿ, ಒಂದಾದಮೇಲೊಂದರಂತೆ ಲಂಬರೇಖೆಯಲ್ಲಿ ನಡೆಯುವುದಿಲ್ಲ. ಅಸ್ತವ್ಯಸ್ತಗೊಂಡ ಬದುಕು, ಸಮಾಜ ಇನ್ನಷ್ಟು ಅಸ್ತವ್ಯಸ್ತಗೊಳ್ಳುವುದೇ ಇಲ್ಲಿನ ಕ್ರಿಯೆ. 'ನೋಟ್ಸ್ ಫ್ರಂ ಅಂಡರ್‌ಗ್ರೌಂಡ್'ನಲ್ಲಿನ ಮುಖ್ಯ ಪಾತ್ರಧಾರಿಯು ತನ್ನ ಪತನವನ್ನು ತಾನೇ ಅತ್ಯಾನಂದದಿಂದ ಅನುಭವಿಸುವವನು. ದಸ್ತಯೇವಸ್ಕಿ ತನ್ನ ಬದುಕಿನ ವೈಫಲ್ಯದಿಂದ ನರಳುತ್ತ, ಹೆಂಡತಿಯ ಅನಾರೋಗ್ಯದಿಂದ ತಪ್ಪಿಸಿಕೊಳ್ಳುವುದು ಹೇಗೆಂದು ಚಿಂತಿಸುತ್ತ, ತೀವ್ರ ಅಸಂತೋಷದ ಭಾವದಲ್ಲಿ ಯುರೋಪ್ ಪ್ರವಾಸ ಕೈಗೊಂಡಾಗ ಹರಳುಗಟ್ಟಿದ್ದು. ಇಲ್ಲಿಯೂ ಆತ ವಿಮರ್ಶಾತ್ಮಕವಾಗಿ ನೋಡುತ್ತಿರುವುದು ಕೈ ಕೈ ಬದಲಾಯಿಸುತ್ತ ತನ್ನ ನೆಲಕ್ಕೆ ಬಂದ ಎರವಲು ಪಾಶ್ಚಾತ್ಯ ಸಿದ್ಧಾಂತವನ್ನು. ಆತನ ಆಕ್ರೋಶ ಇದ್ದುದು ಆ ಕಾಲದ ತರುಣರ ಮೇಲಲ್ಲ. ಬದಲಿಗೆ, 'ಸುಲಭ ಯಶಸ್ಸಿನ ಗಾಳಿ' ಸೃಷ್ಟಿಸಿದ ರಶಿಯಾದ ಕಳಪೆ ಬುದ್ಧಿಜೀವಿಗಳ ವಿರುದ್ಧ. ಈ ದೀರ್ಘ ನಿರೂಪಣೆಯ ಮುಖ್ಯಪಾತ್ರಧಾರಿ ಇವೆಲ್ಲವನ್ನು ಸ್ಪಷ್ಟವಾಗಿ ಹೇಳುತ್ತಾನೆ.
ನಮ್ಮೊಳಗೆ "ದಸ್ತಯೇವಸ್ಕಿಯನ್ನು ಕಂಡುಕೊಳ್ಳುವುದೆಂದರೆ ಮೊದಲ ಸಲ ಪ್ರೇಮವನ್ನು ಹುಡುಕಿಕೊಂಡಂತೆ. ಅಥವ ಮೊದಲ ಸಲ ಸಮುದ್ರವನ್ನು ನೋಡಿದಂತೆ. ಅದು ನಮ್ಮ ಬದುಕಿನ ಪ್ರಯಾಣವನ್ನು ನಿರ್ಧರಿಸಬಲ್ಲುದು", ಎಂದು ಹೊರ್ಹೆ ಲೂಯಿ ಬೊರ್‍ಹೇಸ್ ಹೇಳುತ್ತಾರೆ.
ಈತನ ಪುಸ್ತಕವನ್ನು ಓದಲು ಕೈಗೆತ್ತಿಕೊಂಡವರು ಆವರೆಗೆ ತಮ್ಮಲ್ಲಿದ್ದ ಕನ್ಯೆತನವನ್ನೋ ಅಥವ ಕನಸಿನಲ್ಲಿಯೂ ಸ್ಖಲಿಸದೆ ಹಿಡಿದಿಟ್ಟ ರೇತುವನ್ನೋ ಕಳೆದುಕೊಳ್ಳುವುದು ಖಂಡಿತ. ಆಮೇಲಿನ ಕನಸು-ಕನವರಿಕೆ, ದುಸ್ವಪ್ನ, ಹಗಲುಭ್ರಮೆ, ನಿದ್ರಾಹೀನತೆ, ಆತ್ಮಹತ್ಯಾತ್ಮಕ ಆಲೋಚನೆಗಳೇ ಸಂಗಾತಿಗಳಾಗುತ್ತವೆ.
ಸತ್ಯವನ್ನು ಆಯ್ದುಕೊಳ್ಳುವ ದಾರಿ ಸುಲಭ-ಸುಗಮವಲ್ಲ. ಅಲ್ಲಿ ಓದುಗನೊಬ್ಬ ಪಡೆಯುವ ಸಾಕ್ಷಾತ್ಕಾರದ ಬಗೆ ಅನುಭಾವದ್ದು. ಭಾಷೆಯನ್ನು ಮೀರಿದ್ದು.
ಹಾಗೆಂದೇ, ಈತನ ಅಕ್ಷರಗಳು ನಿರ್ಮಿಸಿದ ಪಾತ್ರಗಳು ಹೊರನೋಟಕ್ಕೆ ಪಾಪಿಗಳ ಲೋಕದ ದುರುಳರು, ಮತಿಗೆಟ್ಟ ವಿಕಲ್ಪಿಗಳಂತೆ ಕಂಡರೂ ಶುದ್ಧಮನಸ್ಸಿನ ಪುಣ್ಯಜೀವಿಗಳು!ದೈವವನು ನಿರಾಕರಿಸುತ್ತಲೇ ದೈವಸಾಕ್ಷಾತ್ಕಾರವನ್ನು ಪಡೆದವರು.