ಹಿಂದೂ-ಮುಸಲ್ಮಾನರನ್ನು ಕುರಿತು ಮಹಾತ್ಮ ಗಾಂಧಿ ನಿಲುವು
ಈ ದೇಶವನ್ನು ತಮ್ಮದಾಗಿ ಮಾಡಿಕೊಂಡ ಹಿಂದೂ, ಮುಸಲ್ಮಾನ, ಈಸಾಯಿ ಎಲ್ಲರೂ ದೇಶ ಭ್ರಾತೃಗಳು. ತಮ್ಮ ಹಿತಕ್ಕಾಗಿಯಾದರೂ ಅವರು ಐಕಮತ್ಯದಿಂದ ಬಾಳಬೇಕು. ಒಂದೇ ಧರ್ಮವಿದ್ದರೇನೇ ಒಂದು ರಾಷ್ಟ್ರ ಎಂಬುದು ಲೋಕದಲ್ಲಿ ಎಲ್ಲಿಯೂ ಇಲ್ಲ. ಹಿಂದೂಸ್ಥಾನದಲ್ಲಿಯಂತೂ ಎಂದೂ ಹಾಗೆ ತಿಳಿದಿಲ್ಲ.
ಹಿಂದೂ-ಮುಸಲ್ಮಾನರನ್ನು ಕುರಿತು ಮಹಾತ್ಮ ಗಾಂಧಿ ನಿಲುವು
ಓದುಗ : …, ನನ್ನ ಪ್ರಶ್ನೆಗೆ ಉತ್ತರ ಕೇಳಲು ನನಗೆ ಆತುರವಾಗಿದೆ. ಮುಸಲ್ಮಾನರು ಇಲ್ಲಿಗೆ ಬಂದುದರಿಂದ ನಮ್ಮ ರಾಷ್ಟ್ರೀಯತೆಯ ಭಂಗವಾಗಲಿಲ್ಲವೇ?
ಸಂಪಾದಕ : ಬೇರೆ ಬೇರೆ ಧರ್ಮದ ಜನರು ಇದ್ದರೆ ಹಿಂದೂಸ್ಥಾನ ಒಂದು ರಾಷ್ಟ್ರವಾಗದೇ ಹೋದೀತೆ? ಬೇರೆ ದೇಶಗಳಿಂದ ಹೊಸಬರು ಬಂದರೆ ರಾಷ್ಟ್ರೀಯತೆ ನಷ್ಟವಾಗದು; ಬಂದವರು ಇದರಲ್ಲಿ ಬೆರೆತು ಹೋಗುತ್ತಾರೆ. ಆ ಸ್ಥಿತಿ ಬಂದಾಗಲೇ ಒಂದು ದೇಶ ರಾಷ್ಟ್ರವಾಗುತ್ತದೆ. ಆ ದೇಶಕ್ಕೆ ಹೊರಗಿನದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಬೇಕು. ಹಿಂದೂಸ್ಥಾನ ಯಾವಾಗಲೂ ಹೀಗೆಯ ಇದೆ. ನಿಜವಾಗಿ, ಎಷ್ಟು ಜನ ಮನುಷ್ಯರೋ ಅಷ್ಟು ಧರ್ಮ, ಆದರೆ ರಾಷ್ಟ್ರೀಯತೆಯ ಭಾವನೆಯುಳ್ಳವರು ಪರಸ್ಪರ ಧರ್ಮದಲ್ಲಿ ಕೈಹಾಕರು. ಹಾಗಲ್ಲದಿದ್ದರೆ ಅವರು ಒಂದು ರಾಷ್ಟ್ರವಾಗಲು ಅರ್ಹರಲ್ಲ. ಹಿಂದೂಸ್ಥಾನದಲ್ಲಿ ಬರೀ ಹಿಂದೂಗಳೇ ಇರಬೇಕು ಎಂದು ಯೋಚಿಸುವ ಹಿಂದೂಗಳು ಕನಸು ಕಾಣುತ್ತಿದ್ದಾರೆ. ಈ ದೇಶವನ್ನು ತಮ್ಮದಾಗಿ ಮಾಡಿಕೊಂಡ ಹಿಂದೂ, ಮುಸಲ್ಮಾನ, ಈಸಾಯಿ ಎಲ್ಲರೂ ದೇಶ ಭ್ರಾತೃಗಳು. ತಮ್ಮ ಹಿತಕ್ಕಾಗಿಯಾದರೂ ಅವರು ಐಕಮತ್ಯದಿಂದ ಬಾಳಬೇಕು. ಒಂದೇ ಧರ್ಮವಿದ್ದರೇನೇ ಒಂದು ರಾಷ್ಟ್ರ ಎಂಬುದು ಲೋಕದಲ್ಲಿ ಎಲ್ಲಿಯೂ ಇಲ್ಲ. ಹಿಂದೂಸ್ಥಾನದಲ್ಲಿಯಂತೂ ಎಂದೂ ಹಾಗೆ ತಿಳಿದಿಲ್ಲ.
ಓದುಗ: ಆದರೆ ಹಿಂದೂ ಮುಸಲ್ಮಾನರಲ್ಲಿರುವ ಜನ್ಮವೈರಕ್ಕೆ ಏನು ಹೇಳುತ್ತೀರಿ?
ಸಂಪಾದಕ: 'ಜನ್ಮವೈರ' ಎಂಬ ಶಬ್ದವನ್ನು ಹುಟ್ಟಿಸಿದವರು ನಮ್ಮಿಬ್ಬರ ಶತ್ರುಗಳು. ಹಿಂದೂಗಳು ಮುಸಲ್ಮಾನರು ಹೊಡೆದಾಡಿದಾಗ ಹಾಗೆ ಮಾತಾಡಿಕೊಂಡರು. ಅವರು ಹೊಡೆದಾಡುವುದನ್ನು ಬಿಟ್ಟು ಎಷ್ಟೋ ದಿನವಾಯಿತು. ಈಗಿನ್ನೇನು ಜನ್ಮವೈರ? ಬ್ರಿಟಿಷರು ಬಂದು ನೆಲೆಸಿದ ಮೇಲೆಯೇ ನಮ್ಮ ಹೊಡೆದಾಟ ನಿಲ್ಲಲಿಲ್ಲ; ನೆನಪಿರಲಿ, ಮುಸ್ಲಿಮ್ ಸಾಮ್ರಾಟರ ಕೆಳಗೆ ಹಿಂದೂಗಳೂ, ಹಿಂದೂ ಚಕ್ರವರ್ತಿಗಳ ಕೆಳಗೆ ಮುಸಲ್ಮಾನರೂ ಏಳಿಗೆಯಾದರು. ಪರಸ್ಪರ ಕಲಹ ಆತ್ಮಘಾತಕವೆಂಬುದನ್ನು ಎರಡೂ ಪಕ್ಷದವರು ಅರಿತುಕೊಂಡರು. ಯುದ್ಧಕ್ಕೆ ಅಂಜಿ ಯಾರೂ ತಮ್ಮ ಧರ್ಮವನ್ನು ಬಿಡರು ಎಂಬುದನ್ನು ತಿಳಿದುಕೊಂಡರು. ಆದುದರಿಂದ ಇಬ್ಬರೂ ಕಲೆತು ಮಲೆತು ಶಾಂತಿಯಿಂದಿರಲು ನಿರ್ಧರಿಸಿದರು. ಇಂಗ್ಲಿಷರು ಬಂದರೋ ಇಲ್ಲವೋ ಈ ಜಗಳಗಳು ಮತ್ತೆ ಚಿಗುರಿದವು.
ನೀವು ಹೇಳುವ ಗಾದೆಗಳಲ್ಲ ಆ ಯುದ್ಧಗಳಲ್ಲಿ ಹುಟ್ಟಿದಂಥವು, ಅವನ್ನು ಈಗ ಹೇಳುವುದು ನಿಸ್ಸಂದೇಹವಾಗಿ ಹಾನಿಕಾರಕ, ಹಿಂದೂ ಮುಸಲ್ಮಾನರಲ್ಲಿ ಅನೇಕರಿಗೆ ಒಬ್ಬನೇ ಮೂಲಪುರುಷ, ಇಬ್ಬರೂ ಒಂದೇ ವಂಶದವರು, ಇಬ್ಬರೊಳಗೂ ಒಂದೇ ರಕ್ತ ಹರಿಯುತ್ತಿದೆ ಎಂಬುದನ್ನು ನಾವು ನೆನೆಯ ಬೇಡವೆ? ತಮ್ಮ ಧರ್ಮವನ್ನು ಬದಲಿಸಿದ ಮಾತ್ರಕ್ಕೆ ಜನ ವೈರಿಗಳಾಗುತ್ತಾರೆಯೇ? ಹಿಂದೂಗಳ ದೇವರು ಬೇರೆ, ಮುಸಲ್ಮಾನರ ದೇವರು ಬೇರೆಯೆ? ಬೇರೆ ಬೇರೆ ಧರ್ಮಗಳು ಬೇರೆ ಬೇರೆ ದಾರಿ; ಹೋಗುವುದು ಒಂದೇ ಕಡೆಗೆ ಹೋಗುವುದು ಒಂದೇ ಕಡೆಗೆ ಎಂದ ಮೇಲೆ ಯಾವ ದಾರಿ ನಡೆದರೇನು? ಏಕೆ ಈ ಜಗಳ ?
ಶೈವ-ವೈಷ್ಣವರಲ್ಲಿ ಎಂಥ ಘೋರವಾದ ಗಾದೆಗಳಿವೆ. ಗೊತ್ತೆ? ಆದರೂ ಇವರಿಬ್ಬರೂ ಬೇರೆ ಬೇರೆ ರಾಷ್ಟ್ರ ಎಂದು ಯಾರೂ ಹೇಳರು. ವೈದಿಕ ಧರ್ಮಕ್ಕೂ ಜೈನಮತಕ್ಕೂ ಬಹಳ ಅಂತರವಂತೆ, ಅದರಿಂದ ಜೈನರೂ ಸನಾತನಿಗಳೂ ಬೇರೆ ಬೇರೆ ರಾಷ್ಟ್ರಗಳಾದರೆ? ನಮ್ಮೊಳಗೆ ಜ್ಞಾನ ಹೆಚ್ಚಾದಂತೆಲ್ಲ ಬೇರೆ ಧರ್ಮಗಳನ್ನು ಅನುಸರಿಸುವವರೊಡನೆ ನಾವು ಕಾದಾಡಬೇಕಾಗಿಲ್ಲವೆಂಬುದು ನಮಗೆ ತಿಳಿಯುತ್ತದೆ.
(ಮಹಾತ್ಮ ಗಾಂಧಿಯವರ ‘ ಹಿಂದ್ ಸ್ವರಾಜ್’ ಪುಸ್ತಕದ 10ನೇ ಅಧ್ಯಾಯದ ಸುಸಂಬದ್ಧ ಆಯ್ದ ಭಾಗ)