ಕೃಷ್ಣಮಾಚಾರ್ಯ ಪೂರ್ಣಯ್ಯ @ ಮೀರ್ ಮಿರಾನ್ ಪೂರ್ಣಯ್ಯ!

ದಿವಾನ್‌ ಪೂರ್ಣಯ್ಯರವರ ಪರಿಚಯ

ಕೃಷ್ಣಮಾಚಾರ್ಯ ಪೂರ್ಣಯ್ಯ @ ಮೀರ್ ಮಿರಾನ್ ಪೂರ್ಣಯ್ಯ!

ಒಂದು ಗಳಿಗೆ

ಕುಚ್ಚಂಗಿ ಪ್ರಸನ್ನ

ಕೃಷ್ಣಮಾಚಾರ್ಯ ಪೂರ್ಣಯ್ಯ @ ಮೀರ್ ಮಿರಾನ್ ಪೂರ್ಣಯ್ಯ!

“ ಬಿಟ್ಟಿ ಕೊಡೋಕೆ ಅದೇನ್‌ ಗುಬ್ಬಿ ತೋಟದಪ್ಪನ ಛತ್ರ ಕೆಟ್ಟೋಯ್ತಾ,” ಅನ್ನೋ ಮಾತನ್ನು ಚಿಕ್ಕಂದಿನಲ್ಲಿ ಹೆಚ್ಚು ಕೇಳುತ್ತಿದ್ದೆ. ಏನಾದರೂ ಉಚಿತವಾಗಿ ದೊರಕುತ್ತದೆ ಎನ್ನುವುದಾದಲ್ಲಿ ಅದು ಗುಬ್ಬಿ ತೋಟದಪ್ಪನವರ ಛತ್ರವೇ ಆಗಬೇಕುʼ ಎನ್ನುವ ನೋಶನ್‌ ಆಗಿನ ಜನರ ನಾಲಿಗೆ ತುದಿಯಲ್ಲಿ ಜೋತಾಡುತ್ತಿತ್ತು.

1838ರಲ್ಲಿ ಗುಬ್ಬಿಯ ಲಿಂಗಾಯಿತ ಕುಟುಂಬದಲ್ಲಿ ತೋಟದಪ್ಪನವರು ಬೆಂಗಳೂರಿನ ಮಾಮೂಲು ಪೇಟೆಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಅವರಿಗೆ ಮಕ್ಕಳಿರಲಿಲ್ಲವಾಗಿ  ಬೆಂಗಳೂರಿಗೆ ಬರುವ ಸಾಮಾನ್ಯ ಪ್ರವಾಸಿಗರು ಹಾಗೂ ಹೆಚ್ಚಿನ ಓದಿಗೆ ಬರುವ ವಿದ್ಯಾರ್ಥಿಗಳಿಗೆಂದು ಮೆಜೆಸ್ಟಿಕ್ ಪ್ರದೇಶದಲ್ಲಿ ರೈಲ್ವೆ ನಿಲ್ದಾಣದ ಪಕ್ಕದಲ್ಲಿ 1897ರಲ್ಲಿ ನಿವೇಶನವೊಂದನ್ನು ಖರೀದಿಸಿ, ತಮ್ಮ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ, ಹಾಸ್ಟೆಲ್ ಹಾಗೂ ಧರ್ಮ ಛತ್ರವೊಂದನ್ನು 1903ರಲ್ಲಿ ಆರಂಭಿಸುತ್ತಾರೆ, ಇವರ ದಾನ ಗುಣ ಕಂಡ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ತೋಟದಪ್ಪನವರಿಗೆ ರಾವ್ ಬಹಾದ್ದೂರ್ ಎಂಬ ಬಿರುದು ಕೊಡುತ್ತಾರೆ.

ತೋಟದಪ್ಪನವರ ಛತ್ರ ಬೆಂಗಳೂರಿನಲ್ಲಿ ಹೆಚ್ಚು ಜನರಿಗೆ ಆಶ್ರಯ ನೀಡಿದರೆ, ಮೈಸೂರು ರಾಜ್ಯದ ಹಲವು ಕಡೆ ದಿವಾನ್ ಪೂರ್ಣಯ್ಯನವರ ಹೆಸರಿನಲ್ಲಿ ಧರ್ಮ ಛತ್ರಗಳು ಇದ್ದವು ಮತ್ತು ಅವುಗಳಲ್ಲಿ ಈಗಲೂ ಕೆಲವು ಉಳಿದುಕೊಂಡಿವೆ.

ಪೂರ್ಣಯ್ಯನವರು ಶ್ರೀರಂಗಪಟ್ಟಣದ ಅರಸು ಟಿಪ್ಪು ಸುಲ್ತಾನ್ ಬಳಿ 1782ರಿಂದ ಟಿಪ್ಪು ಮರಣದವರೆಗೆ 17 ವರ್ಷ ದಿವಾನ್ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದವರು, ಟಿಪ್ಪು ಸಾವಿನ ಬಳಿಕ ಮೈಸೂರು ಅರಸರೊಂದಿಗೆ 12 ವರ್ಷ ಅದೇ ಹುದ್ದೆಯಲ್ಲಿ ಮುಂದುವರೆದವರು. ತುಮಕೂರೂ ಆಗ ಮೈಸೂರು ರಾಜ್ಯದ ಆಡಳಿತ ವ್ಯಾಪ್ತಿಯಲ್ಲಿತ್ತು ಹಾಗೂ  ಇಂಥ ದಿವಾನರು ವರ್ಷದಲ್ಲಿ ಆಗಾಗ ತೆರಿಗೆ ಸಂಗ್ರಹಕ್ಕೋ ಇನ್ನಿತರ ಆಡಳಿತಾತ್ಮಕ ವಿಚಾರಗಳಿಗೋ ತುಮಕೂರಿಗೂ ಬಂದು ಉಳಿದುಕೊಳ್ಳುತ್ತಿದ್ದರಂತೆ, ಹಾಗೆ ಉಳಿದಿಕೊಳ್ಳಲು ಅವರಿಗೆಂದು ಒಂದು ಪ್ರತ್ಯೇಕ ವಾಸದ ವ್ಯವಸ್ಥೆಯನ್ನು ಮಾಡಬೇಕಿತ್ತಲ್ಲವೇ. ಪೂರ್ಣಯ್ಯನವರಂತೆಯೇ ಮೈಸೂರು ದಿವಾನರಾಗಿದ್ದ  ಮಿರ್ಜಾ ಇಸ್ಮಾಯಿಲ್ ಅವರಿಗೆ ಸಂಬಂಧಿಸಿದ ಖಾಸಗಿ ನಿವಾಸವೂ ಇದೇ ಚಿಕ್ಕಪೇಟೆಯಲ್ಲಿತ್ತಂತೆ.

ದಿವಾನ್ ಪೂರ್ಣಯ್ಯನವರ ಕುಟುಂಬದ ಒಬ್ಬರಿಗೆ ಆರ್ಯನ್‍ ಹೈಸ್ಕೂಲಿನಲ್ಲಿ ಆಟೆಂಡರ್ ಕೆಲಸವನ್ನೂ ಕೊಟ್ಟಿದ್ದರಂತೆ, ಅವರು ಈಗ ಇನ್ನೂ ಇದ್ದಾರೋ ಇಲ್ಲವೋ ತಿಳಿಯದು. ಮಿರ್ಜಾ ಇಸ್ಮಾಯಿಲ್ ಅವರ ತುಮಕೂರಿನವರ ಮನೆಯವರ ಕುರಿತೂ ಯಾರಾದರೂ ಕುತೂಹಲಿಗಳು ಹುಡುಕಬಹುದು.

ದಿವಾನ್ ಪೂರ್ಣಯ್ಯ ಹುಟ್ಟಿದ್ದು 1746ರಲ್ಲಿ , ಇವರ ಪೂರ್ತಾ ಹೆಸರು ಕೃಷ್ಣಮಾಚಾರ್ಯ ಪೂರ್ಣಯ್ಯ ನಂತರ ಮೀರ್ ಮಿರಾನ್ ಪೂರ್ಣಯ್ಯ ಅಂತ ಹೆಸರಾದರು, ಅದೆಷ್ಟೇ ದೊಡ್ಡ ಲೆಕ್ಕಾಚಾರವನ್ನಾದರೂ ನೆನಪಿನಲ್ಲಿರಿಸಿಕೊಂಡು ಮರು ಮಂಡಿಸುವ ವಿಶಿಷ್ಟ ಬುದ್ದಿಮತ್ತೆ, ಹಲವಾರು ಭಾಷೆಗಳಲ್ಲಿ ಪ್ರೌಡಿಮೆ, ಗದ್ದುಗೆ ನಿಷ್ಟೆ, ಅತ್ಯುತ್ತಮ ಆಡಳಿತ ಶೈಲಿ, ಜೊತೆಗೆ ಸೇನಾಧಿಪತಿ ಕೂಡಾ ಆಗಿದ್ದ ಪೂರ್ಣಯ್ಯ ಟಿಪ್ಪು ತಂದೆ ಹೈದರ್ ಆಲಿಯ ಶೋಧ.

ಉತ್ತರಾದಿ ಮಠಕ್ಕೆ ನಡೆದುಕೊಳ್ಳುವ ದೇಶಸ್ಥ ಮಾಧ‍್ವ ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದ ಕೃಷ್ಣಮಾಚಾರ್ಯ ಪೂರ್ಣಯ್ಯ ಹನ್ನೊಂದನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡು, ಜೀವನೋಪಾಯಕ್ಕಾಗಿ ದಿನಸಿ ವರ್ತಕನೊಬ್ಬನ ಬಳಿ ಕೆಲಕ್ಕೆ ಹೋಗುತ್ತಾರೆ, ಈ ವರ್ತಕ ಬಾಲಕ ಪೂರ್ಣಯ್ಯನನ್ನ ಶ್ರೀರಂಗಪಟ್ಟಣದ ಅನ್ನದಾನ ಶೆಟ್ಟಿ ಎಂಬ ದೊಡ್ಡ ವರ್ತಕರ ಬಳಿ ಲೆಕ್ಕ ಬರೆಯುವ ಕೆಲಸಕ್ಕೆ ಸೇರಿಸುತ್ತಾರೆ.

ದೊರೆ ಹೈದರ್ ಆಲಿಯ ಅರಮನೆಗೆ ದಿನಸಿ ಸೇರಿದಂತೆ ಎಲ್ಲ ಸಾಮಾನು ಸರಂಜಾಮುಗಳನ್ನು ಪೂರೈಸುತ್ತಿದ್ದ ಅನ್ನದಾನಶೆಟ್ಟಿಯ ಪರವಾಗಿ ಒಂದು ಸಲ ಲೆಕ್ಕ ಕೊಡಲು ಅರಮನೆಗೆ ಪೂರ್ಣಯ್ಯ  ಹೋಗಿದ್ದಾಗ, ಇಡೀ ಲೆಕ್ಕವನ್ನು ಬಾಯಲ್ಲಿ ಒಪ್ಪಿಸಿದ್ದನ್ನುಕಂಡ ಹೈದರ್ ಆಲಿ ಈತ ನಮ್ಮಅರಮನೆಯಲ್ಲಿ ಇರಬೇಕಾದ ಆಸಾಮಿ ಅಂತ ತಕ್ಷಣ ಕರೆದುಕೊಂಡು ಬಿಟ್ಟ ಎಂಬ ದಂತ ಕತೆ ಇದೆ.

ಕನ್ನಡದ ಜೊತೆಗೆ ಆಳುವ ದೊರೆ ಬಳಸುತ್ತಿದ್ದ ಪರ್ಶಿಯನ್, ಇಂಗ್ಲಿಷ್ ಜೊತೆಗೆ ಮರಾಠಿ ಭಾಷೆಯಲ್ಲೂ ಮಾತಾಡಲಷ್ಟೇ ಅಲ್ಲದೇ ಓದಲು, ಬರೆಯುವಲ್ಲೂ ಪರಿಣಿತಿ ಸಾಧಿಸಿದ್ದ ಪೂರ್ಣಯ್ಯ,

1782ರಲ್ಲಿ ಹೈದರ್ ಆಲಿ ಚಿತ್ತೂರಿನಲ್ಲಿ ಮರಣಿಸಿದಾಗ, ಟಿಪ್ಪು ಸುಲ್ತಾನ್ ದೂರದ ಮಲಬಾರ್ ಕಡಲ ತೀರದಲ್ಲಿರುತ್ತಾನೆ. ಆತ ಶ್ರೀರಂಗಪಟ್ಟಣಕ್ಕೆ ಬಂದು ತಲುಪಿ ಸಿಂಹಾಸನ ಭದ್ರ ಪಡಿಸಿಕೊಳ್ಳುವವರೆಗೂ ಹೈದರ್ ಮರಣದ ಸುದ್ದಿಯನ್ನು ಗುಟ್ಟಾಗಿ ಇರಿಸಿದ ಜಾಣ್ಮೆ ಪೂರ್ಣಯ್ಯನವರದು. ಇಲ್ಲದೇ ಹೋಗಿದ್ದರೆ ಕೇರಳದ ಕರಾವಳಿಯಿಂದ ಟಿಪ್ಪು ಬರುವ ಹೊತ್ತಿಗೆ ರಾಜ್ಯ ಯಾರ ಪಾಲಾಗಿಬಿಡುತ್ತಿತ್ತೋ ಹೇಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಪೂರ್ಣಯ್ಯ ಟಿಪ್ಪು ಅಂತರಂಗದ ಸಂಪುಟದ ಖಾಸಾ ಸಹವರ್ತಿ ಆಗಿಬಿಡುತ್ತಾರೆ.

1792ರಲ್ಲಿ ಮೂರನೇ ಆಂಗ್ಲೋ ಮೈಸೂರು ಯುದ್ದದಲ್ಲಿ ಪೂರ್ಣಯ್ಯ ಟಿಪ್ಪು ಜೊತೆ ಭಾಗವಹಿಸುತ್ತಾರೆ. 131 ಯೋಧರ ತುಕಡಿಗೆ ಪೂರ್ಣಯ್ಯನವರದೇ ನೇತೃತ್ವ. ಬ್ರಾಹ್ಮಣರೂ ಕ್ಷತ್ರಿಯರಂತೆ ಕತ್ತಿ, ಬಂದೂಕು ಹಿಡಿದು ಯುದ್ದ ಮಾಡಿದರಾ ಅಂತ ಕೇಳಬೇಡಿ. ಅದಾದ ಆರು ವರ್ಷಕ್ಕೆ 1799ರಲ್ಲಿ ನಡೆದ ನಾಲ್ಕನೇ ಆಂಗ್ಲೋ ಮೈಸೂರು ಯುದ್ದದ ಸಮಯದಲ್ಲಿ ಟಿಪ್ಪು ತನ್ನ ಹಿರಿಯ ಮಗನ ರಕ್ಷಣೆಯನ್ನು ಪೂರ್ಣಯ್ಯನವರಿಗೆ ವಹಿಸಿ, ಶ್ರೀರಂಗಪಟ್ಟಣದಿಂದ ದೂರ ಕಳಿಸಿದ್ದರೆಂದೂ, ಟಿಪ್ಪು ಮರಣದ ಬಳಿಕವೇ ಪೂರ್ಣಯ್ಯ ಹಿಂದಿರುಗಿದರೆಂದೂ ಹೀಗಾಗಿ ಪೂರ್ಣಯ್ಯನವರ ಕೂದಲು ಕೊಂಕದಂತೆ ಜೀವಂತ ಉಳಿದದ್ದೆಂದೂ ಹೇಳಲಾಗುತ್ತದೆ.

ಬ್ರಿಟಿಷರ ಕೈ ವಶವಾಗಿ, ಸ್ಮಶಾನದಂತಿದ್ದ ಶ್ರೀರಂಗಪಟ್ಟಣ ಕೋಟೆಗೆ ಟಿಪ್ಪು ಹಿರಿಯ ಮಗನೊಂದಿಗೆ ಬಂದು ಲಾರ್ಡ್ ಜಾರ್ಜ್ ಹ್ಯಾರಿಸ್ ಜೊತೆ ನಡೆಸಿದ ಸಂಧಾನ ಪ್ರಯತ್ನ ಫಲಕೊಡಲಿಲ್ಲ. ಅಷ್ಟು ಹೊತ್ತಿಗೆ ಮೈಸೂರು ಒಡೆಯರ್ ಮನೆತನದ ರಾಜಮಾತೆ ಲಕ್ಷ್ಮಿ ಅಮ್ಮಣ್ಣಿ  ಆಡಳಿತ ವಹಿಸಿಕೊಳ್ಳಲು ಸಜ್ಜಾಗಿರುತ್ತಾರೆ. ಪೂರ್ಣಯ್ಯನ ವಿದ್ವತ್, ಜಾಣ್ಮೆ, ವಿನೀತ ನಡವಳಿಕೆ ಕಂಡ ಬ್ರಿಟಿಷ್ ಅಧಿಕಾರಿ, ಕುಸಿದ ಆಡಳಿತ ವ್ಯವಸ್ಥೆಯನ್ನು ನೇರ್ಪು ಮಾಡಲು ಈತನೇ ಸರಿ, ಹಾಗಾಗಿ ಈತನನ್ನೇ ದಿವಾನ ಹುದ್ದೆಯಲ್ಲಿ ಮುಂದುವರೆಸಿ ಎಂದು ತಾಕೀತು ಮಾಡುತ್ತಾನಂತೆ.

ಹೀಗೆ,  ಮೈಸೂರು ಒಡೆಯರ್ ಮನೆತನ ರಾಜ್ಯ ಬ್ರಿಟಿಷರ ಸಾಮಂತರಾಗಿ ಮೈಸೂರು ರಾಜ್ಯವನ್ನು ಆಳತೊಡಗುತ್ತಾರೆ. ಬಾಲಕ ಮೂರನೇ ಕೃಷ್ಣರಾಜ ಒಡೆಯರ್ ಅವರನ್ನು ಸಿಂಹಾಸನದ ಮೇಲೆ ಕೂರಿಸಿ, ದಿವಾನರು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಂತೆ ಸುಮಾರು 12 ವರ್ಷ ಆಡಳಿತ ಮಾಡತೊಡಗುತ್ತಾರೆ.

1807ರಲ್ಲಿ ವಿಶೇಷ ದರ್ಬಾರಿನಲ್ಲಿ ಮೈಸೂರು ಮಹಾರಾಜರು ಅಂದಿಗೇ ವರ್ಷಕ್ಕೆ 10000 ಪಗೋಡಗಳಷ್ಟು ವರಮಾನವಿದ್ದ ಯಳಂದೂರನ್ನು ದಿವಾನ್ ಪೂರ್ಣಯ್ಯನವರಿಗೆ ಜಾಗೀರು ರೂಪದಲ್ಲಿ ಮಹಾರಾಜರು ಬರೆದುಕೊಡುತ್ತಾರೆ. ಮಹಾರಾಜರು ಮಾತ್ರವಲ್ಲದೇ 1811ರಲ್ಲಿ ಪೂರ್ಣಯ್ಯ ನಿವೃತ್ತಿ ಹೊಂದುವ ಹೊತ್ತಿನಲ್ಲಿ ಮೈಸೂರಿ ನಲ್ಲಿದ್ದ ಬ್ರಿಟಿಷ್ ರೆಸಿಡೆಂಟ್ ಜಾನ್ ಮ್ಯಾಲ್ಕಮ್ ಹಾಗೂ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಗಳು ಪೂರ್ಣಯ್ಯನವರಿಗೆ ಕುದುರೆ, ಆನೆ ಮತ್ತು ಬೆಲೆ ಬಾಳುವ ಕಾಣಿಕೆಗಳನ್ನು ಕೊಡುತ್ತಾರೆ.

1810ರ ಹೊತ್ತಿಗೆ ಮಹಾರಾಜ ಮೂರನೇ ಕೃಷ್ಣ ರಾಜ ಒಡೆಯರ್ 16 ವರ್ಷಕ್ಕೆ ಕಾಲಿಡುತ್ತಾರೆ. ಪೂರ್ಣಯ್ಯ ತಮ್ಮ ಕೈಯಲ್ಲಿದ್ದ ಎಲ್ಲ ಆಡಳಿತ ಸೂತ್ರಗಳನ್ನು ಬಿಟ್ಟು ಕೊಟ್ಟು ನಿವೃತ್ತರಾಗುತ್ತಾರೆ.

ಯಳಂದೂರು, ಬೆಂಗಳೂರು ಹಾಗೂ ಮೈಸೂರಿನಲ್ಲೂ ಇವರ ಹೆಸರಿನಲ್ಲಿ ಬಂಗಲೆಗಳಿದ್ದರೂ ನಿವೃತ್ತಿಯ ಬಳಿಕ ಶ್ರೀರಂಗಪಟ್ಟಣದ ಬಂಗಲೆಯಲ್ಲಿ ಪೂರ್ಣಯ್ಯ ನೆಲೆಸುತ್ತಾರೆ. 1812ರ ಮಾರ್ಚಿ 28ರಂದು ಪೂರ್ಣಯ್ಯ ಕೊನೆಯುಸಿರೆಳೆಯುತ್ತಾರೆ.

ಬೆಂಗಳೂರಿನ ಬಂಗಲೆ 1900ರ ಬಳಿಕ ಮೈಸೂರಿನ ದಿವಾನರೂ ಆಗಿದ್ದ ಪೂರ್ಣಯ್ಯನವರ ಮಗ ಪಿ.ಎನ್.ಕೃಷ್ಣಮೂರ್ತಿ ಪಾಲಿಗೆ ಬಂದಿದೆ, ಈಗಿನ ಚಾಮರಾಜನಗರ ಜಿಲ್ಲೆಯ ತಾಲೂಕು ಕೇಂದ್ರವಾಗಿರುವ ಯಳಂದೂರಿನ ಬಂಗಲೆ ಅವರ ಹೆಸರಿನಲ್ಲೇ ಮ್ಯೂಸಿಯಂ ಆಗಿದೆ. ತುಮಕೂರು ನಗರದ ಚಿಕ್ಕಪೇಟೆ ವೃತ್ತದಲ್ಲೂ ದಿವಾನ್ ಪೂರ್ಣಯ್ಯನವರ ಹೆಸರಿನಲ್ಲಿ ದೊಡ್ಡದೊಂದು ಬಿಳಿ ಬಣ್ಣದ ದಪ್ಪ ಕಂಬಗಳ ಕಟ್ಟಡವೊಂದಿದ್ದು, ಹಾಲಿ ಅದನ್ನು ರಾತ್ರಿ ನಿರಾಶ್ರಿತರ ವಾಸ್ತವ್ಯಕ್ಕೆಂದು ಮಹಾನಗರ ಪಾಲಿಕೆ ಬಳಸುತ್ತಿದೆ.

ಬ್ರಿಟಿಷರಂತೆಯೇ ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಆದ್ಯತೆ ನೀಡುತ್ತಿದ್ದ ಪೂರ್ಣಯ್ಯ ಮೈಸೂರು ರಾಜ್ಯದಲ್ಲಿ ಪಾಳೇಗಾರರ ಬಂಡಾಯವನ್ನು ಸೇನೆ ಬಳಸಿ ಹತ್ತಿಕ್ಕುತ್ತಾರೆ. ಟಿಪ್ಪು ಮಠಗಳಿಗೆ , ದೇವಾಲಯಗಳಿಗೆ ಮತ್ತು ದರ್ಗಾಗಳಿಗೆ ನೀಡುತ್ತಿದ್ದ ನಗದು ಅನುದಾನವನ್ನು ಆತನ ಮರಣಾನಂತರ ಬ್ರಿಟಿಷರು ನಿಲ್ಲಿಸಿಬಿಟ್ಟಿದ್ದರು, ಬ್ರಿಟಿಷರ ಮನವೊಲಿಸಿ ಈ ಅನುದಾನವನ್ನು ಮುಂದುವರೆಸುವಂತೆ ಮಾಡಿದ್ದು ಪೂರ್ಣಯ್ಯನವರ ಮುತ್ಸದ್ದಿತನಕ್ಕೆ ಸಾಕ್ಷಿ. ಜನರ ಅಹವಾಲುಗಳನ್ನು ಆಲಿಸಲೆಂದೇ ನ್ಯಾಯಾಂಗ ವಿಭಾಗವನ್ನು ಇವರು ತೆರೆಯುತ್ತಾರೆ. ರಸ್ತೆ, ಸೇತುವೆ , ನೀರಾವರಿ ಕಾಲುವೆಗಳ ಜೊತೆಗೆ ಎಲ್ಲೆಡೆ ಮಹಾರಾಜರ ಹೆಸರಿನಲ್ಲಿ ಧರ್ಮ ಚತ್ರಗಳನ್ನು ನಿರ್ಮಿಸುತ್ತಾರೆ. ತಂದು ಶೇಕ್‍ ದಾರ್, ಅಮಲ್‍ದಾರ್ ಹಾಗೂ ತೆಹಸೀಲ್ದಾರ್ ಹುದ್ದೆಗಳನ್ನುಸೃಜಿಸಿ ಕಂದಾಯ ಇಲಾಖೆಯನ್ನು ಬಲಗೊಳಿಸುತ್ತಾರೆ. ಹೀಗಾಗಿ ಆಡಳಿತ ವ್ಯವಸ್ಥೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಿದ ರಾಜ್ಯ ಎಂದು ಮೈಸೂರು ಹೆಸರಾಗುತ್ತದೆ.

ಇದೆಲ್ಲ ಪೂರ್ಣಯ್ಯನವರ ಕುರಿತು ನಮಗೆ ದೊರಕುವ ಸಾಮಾನ್ಯ ಮಾಹಿತಿ, ಆದರೆ ನನಗೆ ಅಚ್ಚರಿ ಹುಟ್ಟಿಸಿದ ಸಂಗತಿ ಎಂದರೆ, ಏಕಕಾಲಕ್ಕೆ ಟಿಪ್ಪು ಸುಲ್ತಾನ್ ಮತ್ತು ಟಿಪ್ಪು ಮರಣಾನಂತರ ಮೈಸೂರನ್ನು ಆಳಿದ ಒಡೆಯರ್ ಮನೆತನ ಹಾಗೂ ಇವರಿಬ್ಬರನ್ನೂ ನಿಯಂತ್ರಿಸಿದ ಬ್ರಿಟಿಷ್ ಹಾಗೂ ಈಸ್ಟ್ ಇಂಡಿಯಾ ಕಂಪನಿಗಳೆಲ್ಲರ ಜೊತೆಗೂ ಸಾಮರಸ್ಯ ಸಾಧಿಸಿ, ಎಲ್ಲರಿಗೂ ಒಳ್ಳೆಯವನಾಗಿ, ಎಲ್ಲರಿಂದಲೂ ಮೆಚ್ಚುಗೆ ಮಾತ್ರವಲ್ಲದೇ ಹಣ, ಒಡವೆ, ಆಸ್ತಿಯನ್ನು ಪಡೆಯುವುದು ಕೃಷ್ಣಮಾಚಾರ್ಯ ಪೂರ್ಣಯ್ಯ ಅಲಿಯಾಸ್ ಮೀರ್ ಮಿರಾನ್ ಪೂರ್ಣಯ್ಯನಂಥವರಿಗೆ ಮಾತ್ರ ಸಾಧ‍್ಯವಾಗುತ್ತಲ್ಲ ಅದು ಹೇಗೆ ಅಂತ.

ಬ್ರಿಟಿಷರ ವಿರುದ್ಧ ಹೋರಾಡಿ ಜೀವ ತೆತ್ತು, ತನ್ನ ಮಕ್ಕಳನ್ನೂ ಒತ್ತೆ ಇಟ್ಟ ಟಿಪ್ಪು ಸುಲ್ತಾನ್ ಇವತ್ತು ದೇಶ ದ್ರೋಹಿ ಆಗಿಬಿಟ್ಟಿದ್ದಾನೆ, ಇಂಥಾ ಟಿಪ್ಪುವನ್ನು ಕೊಂದ ಬ್ರಿಟಿಷರು ಟಿಪ್ಪು ಜೊತೆಯಲ್ಲೇ 12 ವರ್ಷ ಆಡಳಿತ ನಡೆಸಿದ ಹಾಗೂ ಸೇನಾಧಿಪತಿಯೂ ಆಗಿದ್ದ ಪೂರ್ಣಯ್ಯನವರನ್ನು ಟಚ್ ಮಾಡುವುದೇ ಇಲ್ಲ, ಬದಲಿಗೆ ಆತನನ್ನೇ ಮುಂದುವರೆಸುತ್ತಾರೆ, ಈ ನೆಲದ ಸಾಮಾಜಿಕ ನ್ಯಾಯವೇ ಎಷ್ಟು ವಿಲಕ್ಷಣ ನೋಡಿ.