ನುಗ್ಗೆ ನುಗ್ಗೆ ...-ಕೃಷ್ಣಮೂರ್ತಿ ಬಿಳಿಗೆರೆ

ನುಗ್ಗೆಯ ಉಪಯೋಗಗಳು

ನುಗ್ಗೆ ನುಗ್ಗೆ ...-ಕೃಷ್ಣಮೂರ್ತಿ ಬಿಳಿಗೆರೆ

ನುಗ್ಗೆ ನುಗ್ಗೆ ...


ಪ್ರಬಂಧ


ಬಿಳಿಗೆರೆ ಕೃಷ್ಣಮೂರ್ತಿ


‘ನುಗ್ಗೆ ಮರ ಹತ್ತಿಸು' ಎಂಬ ಇನ್ನೂ ಒಂದು ಮಾತಿದೆ. ತಮಗೆ ತಾವೇ ಬಲು ಹೆಚ್ಚೆಂದು ಉಬ್ಬಾಡುವವರನ್ನು ಇನ್ನೂ ಇನ್ನೂ ಪುಸಲಾಯಿಸಿ ಹಳ್ಳಕ್ಕೆ ಕೆಡವುವುದಕ್ಕೆ ನುಗ್ಗೆ ಮರ ಹತ್ತಿಸುವುದು ಎಂಬ ಈ ಮಾತು ಅನ್ವಯವಾಗುತ್ತದೆ. ಇಂತವರನ್ನು ಹೊಗಳಿ ನುಗ್ಗೆ ಮರ ಹತ್ತಿಸಿದರೆ ಅವರಷ್ಟಕ್ಕವರೆ ನುಗ್ಗೆ ಮರದ ಅತಿಸುಲಭ ಕೊಂಬೆಗಳು ಮುರಿದು, ಬಿದ್ದು ಕೈಕಾಲು ಮುರಿದುಕೊಳ್ಳುತ್ತಾರೆ” ಎನ್ನುತ್ತಾರೆ ಲೇಖಕ ಕೃಷ್ಣಮೂರ್ತಿ ಬಿಳಿಗೆರೆ. 


ನುಗ್ಗೆ ನುಗ್ಗೆ ...


ನಾವು ಕಾಲೇಜಿನ ಎನ್.ಎಸ್.ಎಸ್. ಕ್ಯಾಂಪ್ ಹಾಕಿದ ಊರುಗಳಲ್ಲಿ ಚಿಗುರು ಕಡ್ಡಿ ಆಂದೋಲನ ಎಂಬ ದೊಡ್ಡ ಹೆಸರಿನಲ್ಲಿ ದಾಸವಾಳ, ನುಗ್ಗೆಯ ಚಿಕ್ಕ ಚಿಕ್ಕ ಚಿಗುರು ಕಡ್ಡಿಗಳನ್ನು ಆ ಊರಿನ ಮನೆಮನೆಗಳ ಹಿಂದೆ ಮುಂದೆ ಜಾಗವಿದ್ದ ಕಡೆಗಳಲ್ಲಿ ಊರುತ್ತಿದ್ದೆವು. ಜೊತೆಗೆ ಬಾಳೆಮರಿ, ಮಲ್ಲಿಗೆ ಅಂಟು, ಕರಿಬೇವಿನ ಸಸಿಗಳನ್ನು ಕೊಡುತ್ತಿದ್ದೆವು. ಹಿತ್ತಲಿಗೆ ಕತ್ತಲು ಕವಿದ ಕಾರಣ ಇದನ್ನು ಹಳ್ಳಿಗರಿಗೇ ನಾವು ಹೇಳಿಕೊಡಬೇಕಾದ ಸ್ಥಿತಿ ಅಷ್ಟೇನು ಒಳ್ಳೆಯ ಬೆಳವಣಿಯಲ್ಲವೆಂಬುದು ನಮಗೆ ಗೊತ್ತಿತ್ತು. 


ಆ ಸಂದರ್ಭಗಳಲ್ಲಿ ಒಂದು ಸಮಸ್ಯೆ ನಮಗೆದುರಾಗುತ್ತಿತ್ತು. ಸಾಮಾನ್ಯವಾಗಿ ಎಲ್ಲರೂ ನುಗ್ಗೆ ಕಡ್ಡಿ ನೆಡಹೋದಾಗ ತಕರಾರು ತೆಗೆಯುತ್ತಿದ್ದರು. ಮನೆ  ಮುಂದೆ ನುಗ್ಗೆಮರ ಇರಬಾರದು ಎಂಬ ಲೋಕಾರೂಢಿ ಮಾತನ್ನು ಅವರೆಲ್ಲ ನಂಬಿದ್ದರು. ಹಾಗೆಂದು ಅವರು ನುಗ್ಗೆ ವಿರೋಧಿಗಳೇನು ಆಗಿರಲಿಲ್ಲ. ಮನೆಯ ಹಿಂದೆ ಅವರು ತೋರಿಸಿದ ಜಾಗದಲ್ಲಿ ನುಗ್ಗೆ ನೆಟ್ಟು ಬರುತ್ತಿದ್ದೆವು. ಅದಕ್ಕಿಂತ ಜೋರಾಗಿ ಭಾಷಣ ಮಾಡುತ್ತಿದ್ದೆವು. ಮನೆಗೊಂದು ನುಗ್ಗೆ ಮರ ಇದ್ದರೆ ಡಾಕ್ಟರ್ ಯಾಕೆ ಬೇಕು, ನುಗ್ಗೆ ಮರ ಅನ್ನದ ಮರ, ನುಗ್ಗೆ ಸೊಪ್ಪು ತಿನ್ನಿ, ಅನೀಮಿಯ ಹೊಡೆದೋಡಿಸಿ, ‘ನುಗ್ಗೆ ಹೂವಿನ ಪಲ್ಯ ಕೋಳಿ ಮೊಟ್ಟೆ ಪಲ್ಯ ಇದ್ದಂಗೆ', ‘ನುಗ್ಗೆ ಕಾಯಿ ಪುಷ್ಠಿ ಮಾತ್ರೆ ಇದ್ದಂಗೆ' ಮುಂತಾದ ಘೋಷಣೆಗಳನ್ನು ವಿದ್ಯಾರ್ಥಿಗಳು ಕೂಗುತ್ತಿದ್ದರೆ ಕೆಲವರು ನಗುತ್ತಿದ್ದರು, ಇನ್ನೂ ಕೆಲವರು ಕುತೂಹಲದಿಂದ ಹತ್ತಿರ ಬರುತ್ತಿದ್ದರು, ಹಳೆ ತಲೆಮಾರಿನ ಜನ ಮಾತ್ರ ನಗುಮೊಗದಿಂದ ನಮ್ಮ ನುಗ್ಗೆ ಪ್ರೀತಿಗೆ ನೀರೆರೆಯುತ್ತಿದ್ದರು. 


‘ನುಗ್ಗೆ ಮರ ಹತ್ತಿಸು' ಎಂಬ ಇನ್ನೂ ಒಂದು ಮಾತಿದೆ. ತಮಗೆ ತಾವೇ ಬಲು ಹೆಚ್ಚೆಂದು ಉಬ್ಬಾಡುವವರನ್ನು ಇನ್ನೂ ಇನ್ನೂ ಪುಸಲಾಯಿಸಿ ಹಳ್ಳಕ್ಕೆ ಕೆಡವುವುದಕ್ಕೆ ನುಗ್ಗೆಮರ ಹತ್ತಿಸುವುದು ಎಂಬ ಈ ಮಾತು ಅನ್ವಯವಾಗುತ್ತದೆ. ಇಂತವರನ್ನು ಹೊಗಳಿ ನುಗ್ಗೆ ಮರ ಹತ್ತಿಸಿದರೆ ಅವರಷ್ಟಕ್ಕವರೆ ನುಗ್ಗೆಮರದ ಅತಿಸುಲಭ ಕೊಂಬೆಗಳು ಮುರಿದು, ಬಿದ್ದು ಕೈಕಾಲು ಮುರಿದುಕೊಳ್ಳುತ್ತಾರೆ ಎಂಬುದು ಜನಪದರ ಈ ನುಡಿಗಟ್ಟಿನ ಹುನ್ನಾರ. 


ನುಗ್ಗೆಮರ ಮೆದು  ಕೊಂಬೆಗಳು ಸುಲಭವಾಗಿ ಮುರಿದುಬಿಡಬಹುದಾದ ರೆಂಬೆ ಕೊಂಬೆಗಳ ಮರ.  ಮರದ ಮಹಿಮೆ ಅರಿಯದ ಮಕ್ಕಳು ಆಟವಾಡುತ್ತ ಈ ಮರ ಹತ್ತಿ ಅಪಾಯಕ್ಕೆ ತುತ್ತಾಗಬಹುದಾದ ಕಾರಣ  ಮನೆ ಮುಂದೆ ಈ ಮರವನ್ನು ಹಿರಿಯರು ಬೆಳೆಸುತ್ತಿರಲಿಲ್ಲವೆಂದು ಕಾಣುತ್ತದೆ. ಈ ಮರಕ್ಕೆ ಸಾಮಾನ್ಯವಾಗಿ ಹತ್ತುವ ಕಂಬಳಿ ಹುಳದ ಕಾಟವೂ ಇದಕ್ಕೆ ಇನ್ನೊಂದು ಕಾರಣವಾಗಿರಬಹುದು. ಆದರೆ ನಮ್ಮ ಪೂರ್ವಿಕರು ನುಗ್ಗೆಮರ ಹೆಚ್ಚುಗಾರಿಕೆ ಬಲ್ಲವರಾಗಿದ್ದುದರಿಂದ ಮನೆಗೊಂದು ನುಗ್ಗೆಮರವನ್ನು ಎಲ್ಲಾದರೂ ಬೆಳೆಸಿಯೇ ಇರುತ್ತಿದ್ದರು.ಈಗಲೂ ಕೆಲವು ವಿವೇಕಶಾಲಿ ಹಳ್ಳಿಗಳಲ್ಲಿ ನುಗ್ಗೆ ವನವನ್ನೇ ಕಾಣಬಹುದು, ಆದರೆ ಬಹುತೇಕ ಹಳ್ಳಿಗಳಲ್ಲಿ ನುಗ್ಗೆ ಅಪರೂಪವಾಗುತ್ತಿರುವುದು ವಿಚಿತ್ರ ಬೆಳವಣಿಗೆಯಾಗಿದೆ. ಆಧುನಿಕತೆ ಎಂದರೆ ನಮ್ಮ ಅಮೂಲ್ಯ ಗಿಡ ಮರ ಸೊಪ್ಪು ಸೆದೆ ಹಣ್ಣು ಹಂಪಲು ಬೀಜ ಹೂವುಗಳನ್ನು ಹೀಗಳೆದು ನಾಮಾವಶೇಷ ಮಾಡುವುದೆ? ಹಾಗೆಂದೇ ತೋರುತ್ತಿದೆ. ನಮ್ಮ ಹಳ್ಳಿಗಳಲ್ಲಿ  ಸುಲಭವಾಗಿ ಸಿಕ್ಕುವ ಆದರೆ ಅಪಾರ ಮೌಲಿಕ ಜೀವಬೆಲೆಯುಳ್ಳವುಗಳನ್ನು  ಉಳಿಸಿಕೊಳ್ಳುವುದನ್ನು ಯಾರು ಹೇಳಿಕೊಡಬೇಕೋ ಕಾಣೆ. ಉದಾಹರಣೆಗೆ ಹಲಸು, ಮಾವು, ಸೀಬೆ, ನುಗ್ಗೆ, ಬೇಲಿ ಸೊಪ್ಪುಗಳು, ಕೆಸವೆ, ಲೋಳೇಸರ, ಚಕ್ರಮುನಿ, ದೊಡ್ಡ ಪತ್ರೆ, ಚಳ್ಳೆ ಹಣ್ಣು ಒಂದೇ ಎರಡೇ...


ಹಿಡಿ ಗಾತ್ರದ ನುಗ್ಗೆಯ ತುಂಡೊಂದನ್ನು ನೀವು ನೆಡಬೇಕಾದ ಜಾಗಕ್ಕೆ ನೆಟ್ಟು ಹದಿನೈದು ಒಂದೊಂದು ಗುಕ್ಕು ನೀರು ಹಾಕಿದರೆ  ಸಾಕು ಅದು ಚಿಮ್ಮಿ ಚಿಗುರುತ್ತದೆ. ಅಗೋ ಇಗೋ ಎನ್ನುವ ಹೊತ್ತಿಗೆ ಹೂವು ಬಿಟ್ಟುಕೊಂಡು ಕುಣಿಯತೊಡಗುತ್ತದೆ.


ನಮ್ಮದೊಂದು ನುಗ್ಗೆಮರವಿದೆ. ಅದು ರ‍್ಷವೆಲ್ಲ ಕಾಯಿ ಬಿಡುವುದನ್ನು ರೂಢಿ ಮಾಡಿಕೊಂಡಿತ್ತು. ಇದೊಂದು ಹೂವಿನ ಮರವೇನೋ ಎನ್ನುವಂತೆ  ಹೂಗೊಂಚಲಿನಿಂದ ತುಂಬಿತುಳುಕುತ್ತಿರುತ್ತದೆ. ಒಮ್ಮೆ ಸೊಪ್ಪಿನ ಮಡಿಯಂತೆ ಕಂಗೊಳಿಸಿದರೆ, ಇನ್ನೊಮ್ಮೆ ಕಾಯಿಗಳು ಆಕಾಶದಿಂದ ಜೋತೇ ಬಿದ್ದಿರುವಂತೆ ಕಂಡು ನಮ್ಮನ್ನು ಬೆರಗುಗೊಳಿಸುತ್ತದೆ. ಮನೆಯೊಳಗಿನಿಂದಲೇ ಚಿಗುರೊಡೆದಂತಿರುವು ಈ ಮರ ನಮ್ಮ ಅವಿಭಾಜ್ಯ ಅಂಗದಂತಿದೆ. ಮನೆಯ ತುದಿ ಮರದ ತುದಿಗಳೆರಡೂ ಬೆಸೆದುಕೊಂಡಿವ ವಾಸ್ತವ ಏನೆಂದರೆ ಇದು ಕೇವಲ ನಮ್ಮ ಮರವಾಗಿ ಉಳಿದಿಲ್ಲ. ಹೂವು ಮುರಿಯುವ, ಸೊಪ್ಪು ಕೀಳುವ, ಕಾಯಿ ಬಡಚುವ ಇತರ ಮನುಷ್ಯರನ್ನು ಸಹಿಸುವ ಶಕ್ತಿಶಾಲಿ ಹಸಿರು ಮಂತ್ರ ಜಪಿಸುತ್ತಲೇ ಇದೆ. 


ಅಂದು ಬೋಂಡಕ್ಕೆಂದು ನುಗ್ಗೆ ಸೊಪ್ಪು ಕೀಳಲು ಅದರ ನಡುವನ್ನು ಸಮೀಪಿಸಿದಾಗ ಕಂಡ ದೃಶ್ಯ ಗೊಂದಲಗೊಳಿಸುವಂತಿತ್ತು. ಇಡೀ ಮರಕ್ಕೆ ಜೇನು  ಕಟ್ಟಿದೆಯೇನೊ ಎನ್ನುವಂತೆ  ಹುಳುಗಳು ಮುತ್ತಿದ್ದವು. ಅದು ಹೂವಿ ತೊಂಪಲು ಜೋತಾಡುತ್ತಿದ್ದ ಕಾಲ ಸರಿಯಾಗಿ ಗಮನಿಸಿದರೆ ಅಲ್ಲಿ ಚಿಟ್ ಜೇನು ತೊಡವೆ ಜೇನು ಹೆಜ್ಜೇನು ಹೀಗೆ ಹಲವು ಜಾತಿಯ ಜೇನು ಹುಳುಗಳು ಅವಸರವಸರವಾಗಿ ನುಗ್ಗೆ ಹೂವಿನ ಮಕರಂದ ಹೀರುತ್ತಿದ್ದ ಸಿಹಿಯಾದ ದೃಶ್ಯ ಕಾಣಬಹುದಿತ್ತು. ನುಗ್ಗೆಮರ ಹೂವಿನ ಭಾರಕ್ಕೆ ಹಿತವಾಗಿ ನರಳುತ್ತಿರುವಂತೆ ತೋರುತ್ತಿತ್ತು. ಇದರ ಮಧ್ಯೆ ಹೆಬ್ಬೆಟ್ಟು ಗಾತ್ರದ  ಎರಡು ಬೀ ಹಂಟರ್ ಹಕ್ಕಿಗಳು ಕೊಂಬೆ ಮೇಲೆ ಕುಂತು ಸಿಕ್ಕಸಿಕ್ಕ ಜೇನುಹುಳುಗಳನ್ನು ಒಮ್ಮೆ ಕಚ್ಚಿ ಆಮೇಲೆ ನುಂಗುತ್ತಿದ್ದರೆ, ನಾಲ್ಕೆöದು ಸಿಂಪಿಗ ಹಕ್ಕಿಗಳು ರೆಕ್ಕೆ ಬಡಿಯುತ್ತಾ ಗಾಳಿಯಲ್ಲಿ ನಿಂತು  ನುಗ್ಗೆಹೂವಿನೊಳಗೆ ಕೊಕ್ಕು ಹಾಕಿ ಮಕರಂದದ ಊಟ ಸವಿಯುತ್ತಿದ್ದವು. ನಾನು ಅವುಗಳ ಹತ್ತಿರ ಹೋದದ್ದ ಗೇನಿಸಿ ಹಾರಿ ಹೋಗಿ ವಿದ್ಯುತ್ ತಂತಿ ಮೇಲೆ ಹೋಗಿ  ಕುಂತು ತಾತ್ಕಾಲಿ ಬಿಡುವು ಪಡೆದವು. ಮಾಮೂಲಿಯಾಗಿ ಈ ಮರದ ಪ್ರೀತಿಯ ತೆಕ್ಕೆಗೆ ಗುಬ್ಬಚ್ಚಿ, ಮೈನಾ, ಸೋಬಾನೆ ಹಕ್ಕಿ, ಕೋಗಿಲಿ, ಕಾಗೆ ಇತ್ಯಾದಿ ಪಕ್ಷಿಗಳು ಬಂದು ಬೀಳುವುದು ಸಾಮಾನ್ಯ. ರಾತ್ರಿ ವೇಳೆಯಲ್ಲಿ ಎರಡು ಬಗೆಯ ಪಕ್ಷಿಗಳ ಕೂಗನ್ನು ಈ ಮರದ ಒಳಗಿನಿಂದ ಕೇಳಿಸಿಕೊಳ್ಳಬಹುದು. 


ನಮ್ಮ ಕಣ್ಣು ತಪ್ಪಿಸಿ ಈ ಮರ ಕೆಲವಾದರೂ ಕಾಯಿಗಳು ಬಲಿಯುವಂತೆ ನೋಡಿಕೊಂಡು ಮನುಷ್ಯ ಮಾತ್ರದವರು ತಿನ್ನದಂತೆ ಹುನ್ನಾರ ಹೂಡುತ್ತದೆ. ಅಂತ ಬಲಿತ ಕಾಯಿಗಳು ನಮ್ಮ ಪಾಲು ಎಂದು  ಸೀಳಿ ಬೀಜಗಳನ್ನು ಆನಂದದಿಂದ ತಿನ್ನುವ ಗಿಳಿಗಳು ನುಗ್ಗೆಮರದ ಹಸಿರು ಅತಿಥಿಗಳು. ನುಗ್ಗೆ ಬೀಜಗಳು ಇವಕ್ಕೆ ಆಪ್ಯಾಯಮಾನ. ಇವು ಹಸಿರು ಮೆಣಸಿನಕಾಯಿಯ ಬೀಜಗಳನ್ನುಹೇಗೆ ಸಿರಿಯಾಡಿಕೊಂಡು ತಿನ್ನುತ್ತವೋ ಹಾಗೆ ಈ ನುಗ್ಗೆ ಬೀಜಗಳನ್ನು ನೊಣೆಯುತ್ತವೆ.

ಇಷ್ಟೆಲ್ಲದರ ನಡುವೆ ಚಳಿಗಾಲದಲ್ಲೊಂದಷ್ಟು ದಿನ ಕಂಬಳಿಹುಳುಗಳು ನುಗ್ಗೆಮರದ ಕಾಂಡವನ್ನು ತಮ್ಮ ಆವಾಸ ಸ್ಥಾನವನ್ನಾಗಿ ಮಾಡಿಕೊಳ್ಳುತ್ತವೆ. ಇವು ಕೆಲವೇ ದಿನಗಳಲ್ಲಿ ನಾವು ಇರಲೇ ಇಲ್ಲ ಎಂಬಂತೆ ಮಾಯವಾಗುತ್ತವೆ. ಇವುಗಳಿಗೆ ಹೆದರಿ ನುಗ್ಗೆಯ ವರ್ಷ ಸಂಭ್ರಮವೇ ಬೇಡ ಎಂದರೆ ಯಾರು ತಾನೆ ಏನು ಮಾಡಲು ಸಾಧ್ಯ.