“ ತುಮ್ ಕೂ ಊರ್ ಹಮ್ ಕು ಸ್ಮಶಾನ್ ಹೈ” ಅಂತ ಅಂದಿದ್ರಂತೆ ಟಿ.ಪಿ.ಕೈಲಾಸಂ!?

ಪತ್ರಕರ್ತರು ಬಹುಬೇಗ ಸಿನಿಕರಾಗಿ ಬಿಡುತ್ತಾರೆ ಎಂಬ ಮಾತಿದೆ,

“ ತುಮ್ ಕೂ ಊರ್ ಹಮ್ ಕು ಸ್ಮಶಾನ್ ಹೈ” ಅಂತ ಅಂದಿದ್ರಂತೆ ಟಿ.ಪಿ.ಕೈಲಾಸಂ!?

 


ಒಂದು ಗಳಿಗೆ


ಕುಚ್ಚಂಗಿ ಪ್ರಸನ್ನ


“ ತುಮ್ ಕೂ ಊರ್ ಹಮ್ ಕು ಸ್ಮಶಾನ್ ಹೈ” ಅಂತ ಅಂದಿದ್ರಂತೆ ಟಿ.ಪಿ.ಕೈಲಾಸಂ!?

       ಹೆಸರಾಂತ ನಾಟಕಕಾರ ಟಿ.ಪಿ.ಕೈಲಾಸಂ ಬಹಳ ಹಿಂದೆ ತುಮಕೂರಿನಲ್ಲಿ ಒಂದು ಇರುಳು ಉಳಿದುಕೊಳ್ಳಬೇಕಾಗಿ ಬಂತಂತೆ, ಇವತ್ತಿನ ಮಹಾತ್ಮ ಗಾಂಧಿ ರಸ್ತೆಯ ಬಾಲ ಭವನದ ಮಗ್ಗುಲಲ್ಲಿದ್ದ ಮುಸಾಫಿರ್ ಖಾನಾ( ಪ್ರವಾಸಿ ಮಂದಿರ)ದಲ್ಲಿ ರೂಮು ಕೊಟ್ಟರಂತೆ, ಮೊದಲೇ ಹಳ್ಳಿಯಂತಿದ್ದ ಊರು, ಸುತ್ತಲೂ ಬಯಲು, ಸೊಳ್ಳೆ ಕಾಟ, ಕಡಿತ ಬೇರೆ, ನಿದ್ದೆ ಮಾಡಲಾಗಲೇ ಇಲ್ಲವಂತೆ, ಬೆಳಗ್ಗೆ, ಸಮಾರಂಭಕ್ಕೆ ಕರೆದುಕೊಂಡು ಹೋಗಲು ಜಟಕಾ ತಂದ ಸಾಬರಿಗೆ ಕೈಲಾಸಂ ಉರ್ದು ಭಾಷೆಯಲ್ಲಿ ತುಮಕೂರು ಎಂಬ ಪದವನ್ನು ಒಡೆದು ಪನ್ ಮಾಡಿ ಹೇಳಿದರಂತೆ, “ ತುಮ್ ಕೂ ಊರ್ ಹಮ್ ಕು ಸ್ಮಶಾನ್ ಹೈ” !? 


      ಪತ್ರಕರ್ತರು ಬಹುಬೇಗ ಸಿನಿಕರಾಗಿ ಬಿಡುತ್ತಾರೆ ಎಂಬ ಮಾತಿದೆ, ಹಾಗೆ ಹೇಳುವಾಗ ಸಿನಿಕ ಎಂದರೆ ಏನು ಅಂತಲೂ ಹೇಳಬೇಕಲ್ಲ, ಸಿನಿಕ್(Cynic) ಸಿನಿಕಲ್, ಸಿನಿಸಿಸಮ್ ಎಂದೂ ಈ ಪದ ಬಳಕೆಯಾಗುತ್ತದೆ. ಜನರೆಲ್ಲರೂ ಸ್ವಾರ್ಥಿಗಳು, ಎಲ್ಲರೂ ತಂತಮ್ಮ ಸ್ವಂತದ ಲಾಭ ಅಥವಾ ಅನುಕೂಲಕ್ಕಾಗಿಯೇ ಎಲ್ಲವನ್ನೂ ಮಾಡುತ್ತಾರೆ ಎಂಬ ತೀವ್ರವಾದ ಭಾವನೆ ಹೊಂದಿ, ಎಲ್ಲರನ್ನೂ ಅದೇ ದೃಷ್ಟಿಕೋನದಲ್ಲಿ ಪ್ರಶ್ನಿಸುತ್ತಾ ಹೋಗುವವರನ್ನು ಸಿನಿಕರು ಎಂದು ವಿವರಿಸಬಹುದು.


     ಪತ್ರಕರ್ತರ ವೃತ್ತಿಯೂ ಹಾಗೇ ಅಲ್ವಾ, ಸುದ್ದಿಗೋಷ್ಟಿಗೆ ಕರೆದವರು “ ನಾವು ಅದನ್ನು ಮಾಡಲು ಹೊರಟಿದ್ದೇವೆ, ಇಂಥಾ ಇದನ್ನು ಮಾಡುತ್ತಿದ್ದೇವೆ “ ಅಂತ ಹೇಳುತ್ತಿದ್ದಂತೆ, ಓ ಇವನು ಅದೇನಕ್ಕೋ ಗೇಣು ಹಾಕಿಕೊಂಡು ಬಂದವನೆ, ಸುಮ್ಮನೆ ನೆಪಕ್ಕೆ ಸಮಾಜ ಸೇವೆ ಅಂತ ಓಳು ಬಿಡ್ತಾ ಅವನೆ ಅಂತಾನೇ ಭಾವಿಸಿಕೊಂಡು ಮರು ಪ್ರಶ್ನೆಗಳನ್ನ ಹಾಕ್ತಾ ಹೋಗ್ತೀವಿ.


    ಹತ್ತಾರು ವರ್ಷ ಪತ್ರಕರ್ತನಾಗಿ ಕೆಲಸ ಮಾಡುವ ಹೊತ್ತಿಗೆ ಇಡೀ ಊರಿನಲ್ಲಿ ಯಾರು ಕಳ್ಳರು , ಯಾರು ಸುಳ್ಳರು, ಯಾರು ಆಷಾಡಭೂತಿಗಳು ಅಂತೆಲ್ಲ ಗೊತ್ತಾಗಿ ಬಿಟ್ಟಿರುತ್ತದೆಯಾದ್ದರಿಂದ ಎದುರು ಸಿಕ್ಕಾಗ ಸುಮ್ಮನೆ ನಕ್ಕು ವಿಶ್ ಮಾಡಿದರೆ ನಾವೂ ನಕ್ಕು ಸುಮ್ಮನಾಗುತ್ತೇವೆ, ಅವನೇನಾದರೂ ಮೊನ್ನೆ ಅದು ಮಾಡಿದೆ, ಅಷ್ಟು ಜನಕ್ಕೆ ಇದು ಕೊಟ್ಟೆ ಅಂತ ಹೇಳಕ್ಕೆ ಶುರು ಮಾಡ್ತಿದ್ದಂಗೆ ಅವರ ಇನ್ಯಾವುದೋ ವೀಕ್ ನೆಸ್ ಹಿಡಿದು ಈಚೆಗೆ ಎಳೆದು ಮಕ ಪರಚಕ್ಕೆ ಶುರು ಮಾಡಿಬಿಡುತ್ತೇವೆ. ಆದರೆ ಎಲ್ಲ ಪತ್ರಕರ್ತರೂ ಒಂದೇ ತರ ಇರಲ್ಲ, 


      1988ರಲ್ಲಿ ನಾನು ಪತ್ರಿಕಾ ವೃತ್ತಿ ಶುರು ಮಾಡಿದಾಗ, ಎಸ್ .ಎಸ್. ಬಾಗಲೋಡಿ ಅಂತ ಆರಡಿಗಿಂತ ಎತ್ತರವಿದ್ದ ದಕ್ಷಿಣ ಕನ್ನಡದ ಕಡೆಯವರು ಕನ್ನಡ ಪ್ರಭ- ಇಂಡಿಯನ್ ಎಕ್ಸ್ ಪ್ರೆಸ್ ದಿನಪತ್ರಿಕೆಗಳ ವರದಿಗಾರರಾಗಿದ್ದರು, ಅವರ ಜೊತೆಗೆ ಅವರಷ್ಟು ಎತ್ತರ, ದಪ್ಪವಿಲ್ಲದಿದ್ದರೂ ಕಪ್ಪಗೆ , ನೀಳವಾಗಿ ಸದಾ ಟಕ್ ಇನ್ ಮಾಡಿದ ಫುಲ್ ಶರ್ಟ್ ಧರಿಸಿದ ಪಾವಗಡ ಶ್ರೀನಿವಾಸಲು ಅಂತ ಟೈಮ್ಸ್ ಆಫ್ ಇಂಡಿಯಾ ವರದಿಗಾರ ಇವರಿಬ್ಬರ ಜೊತೆಗೆ ಕುಳ್ಳಗೆ ಬೆಳ್ಳಗೆ ಅಂತ ಪಿಟಿಐ ಗಂಗಪ್ಪ ಅಂತಲೇ ಫೇಮಸ್ ಆಗಿದ್ದವರು ಆಗಾಗ ಇರುತ್ತಿದ್ದರು. ಪ್ರೆಸ್ ಮೀಟ್ ಶುರುವಾಗುವ ಮುಂಚೆ ಅಥವಾ ಪ್ರೆಸ್ ವ್ಯಾನಲ್ಲಿ ಕುಳಿತು ಹತ್ತಿರದ ಊರುಗಳಿಗೆ ಹೋಗುವಾಗ ಈ ಮೂರೂ ಜನ ಅಥವಾ ಮೊದಲ ಇಬ್ಬರೂ ಸೇರಿ ಟಕಾ ಟಕ್ ಅಂತ ಇಂಗ್ಲಿಷ್‌ನಲ್ಲೇ ಮಾತು ಕುಟ್ಟಿಕೊಳ್ಳುತ್ತಿದ್ದರು. 


       ತುಮಕೂರಿನಲ್ಲಿ ಬೆಳೆದರೂ, ಎಂಟನೇ ಕ್ಲಾಸಿನ ನಂತರ ಇಂಗ್ಲಿಷ್ ಮೀಡಿಯಂನಲ್ಲಿ ಓದಿದ್ದರೂ, ನಾವೆಲ್ಲ ಓದಿದ್ದು ಸರಕಾರಿ ಶಾಲೆ,ನಂತರ ಸರಕಾರಿ ಶಾಲೆಯಂತೇ ಇದ್ದ ಸಿದ್ದಗಂಗಾ ಹೈಸ್ಕೂಲ್ ಆಗಿದ್ದರಿಂದ ಎದುರಿಗಿದ್ದವರು ಮಾತನಾಡಿದ್ದು ಅರ್ಥ ಆದರೂ ಸ್ವತಃ ಮಾತನಾಡುವಷ್ಟು ಇಂಗ್ಲಿಷ್ ಬರುತ್ತಿರಲಿಲ್ಲ. ಐತೆ, ಹಂಗೈತೆ  ಎನ್ನುವ ತುಮಕೂರಿನಲ್ಲಿ ಇಂಗ್ಲಿಷಿನಲ್ಲಿ ಮಾತನಾಡುವ ಅವಶ್ಯಕತೆಯೂ ಬಂದಿರಲಿಲ್ಲವೆನ್ನಿ.


     ಆಗ ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ವರದಿಗಾರರಾಗಿದ್ದ ಶಿವಾಜಿ ಗಣೇಶನ್ ಅವರು ಈ ಮೂವರ ತರ ಇಂಗ್ಲಿಷಿನಲ್ಲಿ ಮಾತನಾಡುವ ಬಿಂಕವನ್ನೇನೂ ಮಾಡುತ್ತಿರಲಿಲ್ಲ. ಉಳಿದಂತೆ, ನಾವೆಲ್ಲ ಲೋಕಲ್ ಪೇಪರ್ ರಿಪೋಟರ‍್ರುಗಳು ಸೀದಾ ಹಳ್ಳಿಗಳಿಂದಲೇ ಯಾವ ಯಾವ ಕಾರಣಕ್ಕೋ ತುಮಕೂರು ನಗರ ಸೇರಿಕೊಂಡಿದ್ದ ಅಚ್ಚ ಕನ್ನಡಿಗರು. ಮೂರು ಸಂಜೆ ಪತ್ರಿಕೆಗಳು , ಮೂರೋ ನಾಲ್ಕೋ ಬೆಳಗಿನ ದಿನಪತ್ರಿಕೆಗಳು. ಅವರಲ್ಲಿ ಒಂದು ದಿನಪತ್ರಿಕೆಯ ಸಂಪಾದಕರು ಮಾತ್ರ ದಿಬ್ಬೂರು ಹೊಸಳ್ಳಿ ಕನ್ನಡದ ಜೊತೆಗೆ ಸಂಸ್ಕೃತವನ್ನೂ ಆಗಾಗ ಮಿಕ್ಸ್ ಮಾಡಿಬಿಡುತ್ತಿದ್ದರು.


     ಟಿವಿಗಳಾಗಲೀ ಇತ್ತೀಚಿನ ಯೂ ಟ್ಯೂಬ್ ಆಗಲೀ, ವೆಬ್ ಪೋರ್ಟಲ್ ಆಗಲೀ ಇರಲಿಲ್ಲವಾಗಿ, ಎಲ್ಲರೂ ಮುದ್ರಣ ಮಾಧ್ಯಮದವರೇ ಆಗಿದ್ದರಿಂದ ದೊಡ್ಡ ಪತ್ರಿಕೆಯವರು, ರಾಜ್ಯ ಪತ್ರಿಕೆಯವರು, ಲೋಕಲ್ ಪತ್ರಿಕೆಯವರು, ಮಾಲೀಕ ಕಂ ಸಂಪಾದಕ, ಸಂಬಳಕ್ಕಿರುವ ವರದಿಗಾರ ಎಂಬ ಕಂಡೂ ಕಾಣದ ತಾರತಮ್ಯ ಧೋರಣೆ ಬಿಟ್ಟರೆ ಮತ್ತೇನೂ ತೊಂದರೆ ಇರಲಿಲ್ಲ. 


      ತುಮಕೂರು ಜಿಲ್ಲೆಯಲ್ಲಿ ಆಗ 13 ವಿಧಾನ ಸಭಾ ಕ್ಷೇತ್ರಗಳಿದ್ದವು, ಮೂರು ಎಂಪಿ ಕ್ಷೇತ್ರಗಳ ಚುನಾವಣೆ ಜೊತೆಗೆ ಒಂದೆರಡು ವಿಧಾನ ಪರಿಷತ್ ಕ್ಷೇತ್ರದ ಚುನಾವಣೆಗಳು ಬರುತ್ತಿದ್ದವು. ವಿಶೇಷವೆಂದರೆ ಅವತ್ತಿನ ರಾಜಕಾರಣಿಗಳು ಈಗಿನ ಜನಪ್ರತಿನಿಧಿಗಳಂತೆ ಕೈಗೆ ಸಿಕ್ಕದೇ ಕಣ್ಣಿಗೆ ಕಾಣಿಸದೇ ಮಾಯಾವಿಗಳಂತೆ ಕಪ್ಪು ಗಾಜನ್ನೇರಿಸಿದ ಕಾರುಗಳಲ್ಲೇ ಹಾರಿ ಹೋಗುತ್ತಿರಲಿಲ್ಲ .  


     ಕೆ.ಲಕ್ಕಪ್ಪ, ವೈ.ಕೆ.ರಾಮಯ್ಯ, ಸಿ.ಎನ್.ಭಾಸ್ಕರಪ್ಪ, ಲಚ್ಚಣ್ಣ ಎಂದು ಜನಪ್ರಿಯರಾಗಿದ್ದ ಲಕ್ಷ್ಮೀನರಸಿಂಹಯ್ಯ, 1978ರಲ್ಲೇ ಮಧುಗಿರಿ ಶಾಸಕರಾಗಿ ಮಾಜಿಯಾಗಿದ್ದ ಗಂಗಹನುಮಯ್ಯ, ಜಿ.ಎಸ್.ಬಸವರಾಜು, ಎಸ್.ಮಲ್ಲಿಕಾರ್ಜುನಯ್ಯ, ಡಿ.ನಾಗರಾಜಯ್ಯ, ಬಿ.ಸತ್ಯನಾರಾಯಣ, ಜೆ.ಸಿ.ಮಾಧುಸ್ವಾಮಿ, ಡಾ. ಜಿ.ಪರಮೇಶ್ವರ, ಟಿ.ಎಂ.ಮಂಜುನಾಥ್ ಹೀಗೆ ಬಹುಪಾಲು ಎಲ್ಲರೂ ಜನ ಸಾಮಾನ್ಯರಂತೆಯೇ ಜೀವಿಸುತ್ತಿದ್ದರು. ಮಂತ್ರಿ ಪದವಿಯಲ್ಲಿದ್ದಾಗಲೂ ಜನರಿಂದ ಬಹಳ ಅಂತರವನ್ನೇನೂ ಕಾಪಾಡಿಕೊಳ್ಳುತ್ತಿರಲಿಲ್ಲ. 


     ಲ್ಯಾಂಡ್ ಲೈನಿಗೇ ಜೋತು ಬಿದ್ದ ಕಾಲವಾಗಿದ್ದರಿಂದ , ಟ್ರಂಕ್ ಕಾಲ್ ಬುಕ್ ಮಾಡಿ, ಪಿಪಿ ಕಾಲ್‌ನಲ್ಲಿ ಕರೆದು ಮಾತನಾಡಿಸಬೇಕಿತ್ತು. ನಾನು ಕೆಲಸ ಮಾಡುತ್ತಿದ್ದ ದಿನಪತ್ರಿಕೆಯ 8198 ನಂಬರಿಗೇ ನೇರ ಅವರವರೇ ಕರೆ ಮಾಡಿ ಪ್ರೆಸ್ ಮೀಟ್ ಇದೆ ಬನ್ನಿ ಅಂತ ಕರೆಯುತ್ತಿದ್ದರು. 


     ಲೋಕ ಸಭೆಯ ಡೆಪ್ಯುಟಿ ಸ್ಪೀಕರ್ ಪದವಿ ಇಡೀ ದೇಶದಲ್ಲಿ ಮೊದಲ ಐದನೇ ಮಹತ್ವದ ಸ್ಥಾನ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ಸ್ಪೀಕರ್ ನಂತರದ ಪದವಿ, ಆದರೆ ಮಲ್ಲಿಕ್ ಎಂದೇ ಜನಪ್ರಿಯರಾಗಿದ್ದ ಎಸ್.ಮಲ್ಲಿಕಾರ್ಜುನ ಯ್ಯನವರು ಪತ್ರಕರ್ತರಿರಲಿ ಸಾಮಾನ್ಯ ಜನರ ಎದುರಿಗೂ ಅಧಿಕಾರದ ಮದ ತೋರಲಿಲ್ಲ. ಅವತ್ತಿನ ಕಾಲವೇ ಹಂಗಿತ್ತೋ, ಅಥವಾ ಅವತ್ತಿನ ತಲೆಮಾರು ಅಂದರೆ ಪೀಳಿಗೆಯೇ ನಡವಳಿಕೆಯೇ ಹಾಗಿತ್ತೋ ಬಗೆ ಮಾಡಿ ಹೇಳಲಾಗುವುದಿಲ್ಲ.


    ಲಚ್ಚಣ್ಣನವರು ಶಾಸಕರೋ, ಸಚಿವರೋ ಆಗಿದ್ದ ದಿನಗಳವು, ನಮ್ಮೂರಿನಿಂದ ನಮ್ಮ ಮಾವ ಮೂರ್ನಾಲ್ಕು ಜನರೊಂದಿಗೆ ಬೆಳಗಿನಜಾವವೇ ನಮ್ಮ ಮನೆಗೆ ಬಂದು ನನ್ನನ್ನ ಎಬ್ಬಿಸಿಕೊಂಡು, ನಾಲ್ಕೈದು ಖಾಲಿ ಹಾಳೆ ಮತ್ತು ಪೆನ್ನಿನೊಂದಿಗೆ ಸಿದ್ದಗಂಗಾ ಬಡಾವಣೆ ಮೂರನೇ ಕ್ರಾಸಿನಲ್ಲಿದ್ದ ಲಚ್ಚಣ್ಣನವರ ಮನೆಗೆ ಕರೆದುಕೊಂಡು ಹೋದರು. ಇನ್ನೂ ಸರಿಯಾಗಿ ಬೆಳಕೂ ಹರಿದಿರಲಿಲ್ಲ, ಬಂದಿದ್ದವರಲ್ಲಿ ಯಾರದೋ ಮಗನೋ,ಮಗಳಿಗೋ ಬೆಂಗಳೂರಿನಲ್ಲಿ ಅವತ್ತು ಯಾವುದೋ ಕೆಲಸಕ್ಕೋ ಏನೋ ಇಂಟರ್‌ವ್ಯೂ ಇತ್ತಂತೆ, ಇವರು ಮಿನಿಟ್ ಬರಕೊಟ್ರೆ ಕೆಲಸ ಆಗುತ್ತೆ ಅಂತಲೂ, ಬಾ ನಾನ್ ಮಾಡಿಸಿಕೊಡ್ತೀನಿ, ಲಚ್ಚಣ್ಣೋರೇನ್ ನಂಗೊತ್ತಿಲ್ವಾ, ನಮ್ಮೂರಿನ ಪಂಪ್ ಸೆಟ್‌ಗಳಿಗೆಲ್ಲ ಅವರೇ ತಾನೇ ವೈರಿಂಗ್ ಮಾಡಿ ಕರೆಂಟ್ ಸರ್ವೀಸ್ ಕೊಡ್ಸಿದ್ದು ಅಂತ ನಮ್ಮ ಮಾವ ದೊಡ್ಡಯ್ಯ ಅವರನ್ನ ಕರಕೊಂಡು ಬಂದಿತ್ತು.


       ಮನೆ ಬಾಗಿಲು ತಟ್ಟಿತು, ಲಚ್ಚಣ್ಣನವರ ಪತ್ನಿ ಚೌಡಮ್ಮನವರು ಒಳಗೆ ಕರೆದು ಕೂರಿಸಿದರು, ಅವರಿನ್ನೂ ಎದ್ದಂಗಿಲ್ಲ ತಡೀರಿ ನೋಡ್ತೀನಿ ಅಂತ ಹಾಲ್ ಎದುರಿನ ರೂಮಿಗೆ ಹೋದರು,” ರೀ, ನೋಡಿ ಜನ ಬಂದವ್ರೆ, ಎದ್ದೇಳು” ಅಂತ ಚೌಡಮ್ಮನವರು ಗಟ್ಟಿ ದನಿಯಲ್ಲಿ ಹೇಳುತ್ತಿದ್ದುದೂ, “ ಅತ್ತಿಂದಿತ್ತ ಒಂದು ಹೊರಳು ಹೊರಳಿದ ಲಚ್ಚಣ್ಣನವರು,” ಅಯ್ಯೋ, ರಾತ್ರಿ ಮಲಗಿದಾಗ ಎರಡು ಗಂಟೆ ದಾಟಿತ್ತು, ಇನ್ನು ಸ್ವಲ್ಪ ಮಲಗಬೇಕು ಕಣ್ರೀ ” ಅಂತ ಗೊಣಗುಟ್ಟುವಂತೆ ಹೇಳತೊಡಗಿದ್ದುದೂ ಕೇಳಿಸಿತು. ಆಗ ಚೌಡಮ್ಮನವರು ಸಡನ್ನಾಗಿ ದನಿ ಎತ್ತರಿಸಿ,” ನೋಡ್ರೀ ಅದೆಲ್ಲ ಗೊತ್ತಿಲ್ಲ, ಜನ ಬಂದವರೆ, ಅವರ ಕಷ್ಟ ಸುಖ ಅದೇನು ಕೇಳಿ, ಆಮೇಲೆ ಬೇಕಿದ್ದರೆ ಮತ್ತೆ ಮಲಗುವಂತೆ” ಅಂತ ಗದರಿಸಿ, ಕೈ ಹಾಕಿ ಎಬ್ಬಿಸೇ ಬಿಟ್ಟರು. ಇನ್ನೇನು ಮಾಡುವುದು ಲಚ್ಚಣ್ಣನವರು ಕಣ್ಣುಜ್ಜಿಕೊಳ್ಳುತ್ತಾ ಪಂಚೆ, ಬನೀನಿನಲ್ಲೇ ಬಂದು ಸೋಫಾ ಮೇಲೆ ಕೂತರು.


     ಬೆಳ್ಳಾವಿ ಶಾಸಕರಾಗಿ ಒಂದು ಸಲ, ತುಮಕೂರು ಸಂಸದರಾಗಿ ಒಂದು ಸಲ ಚುನಾಯಿತರಾಗಿದ್ದ ಪತ್ರಕರ್ತರೂ ಆಗಿದ್ದ ಸಿ.ಎನ್.ಭಾಸ್ಕರಪ್ಪನವರಂತೂ ವಯೋಮಾನ ಲೆಕ್ಕಿಸದೇ ಎಲ್ಲರ ಹೆಗಲ ಮೇಲೆ ಕೈ ಹಾಕಿ, “ ಏನ್ ಮರೀ, ತಿಂಡಿ ತಿಂದಾ, ಊಟ ಮಾಡಿದಾ, ಬಾ ಕಾಫಿ ಕುಡಿ, ಏನಾಗಬೇಕು ಹೇಳು” ಎಂದು ಪರಿಭಾವಿಸುತ್ತಿದ್ದರು.


ಜನಪ್ರತಿನಿಧಿಗಳ ಇಂತಾ ಸೌಜನ್ಯದ ನಡವಳಿಕೆ, “ಓಟು ಕೊಟ್ಟ ಜನರಿಗೆ “ ಕೊಡುತ್ತಿದ್ದ ಗೌರವವಾಗಿತ್ತು ಎಂಬುದು ನನ್ನ ಭಾವನೆ. ಆಗ ನಮ್ಮ ನಿಮ್ಮಂತೆ ಸಣ್ಣ ಪುಟ್ಟ ಮನೆಗಳಲ್ಲಿ, ಕೆಲವೊಮ್ಮೆ ಬಾಡಿಗೆ ಮನೆಗಳಲ್ಲೂ ವಾಸವಿರುತ್ತಿದ್ದ ಈ ಜನಪ್ರತಿನಿಧಿಗಳು ಕ್ರಮೇಣ ಬಂಗಲೆಯಂಥ ದೊಡ್ಡ ಮನೆಗಳನ್ನು ಕಟ್ಟಿಕೊಂಡು ಶಿಫ್ಟ್ ಆದರು, ಅವರ ನಡವಳಿಕೆಯಲ್ಲೂ ದೊಡ್ಡಸ್ತಿಕೆಯ ಧೋರಣೆ ಎದ್ದುಕಾಣತೊಡಗಿತು.


   ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಜನತಾ ಪಕ್ಷ ಸರ್ಕಾರ ಎರಡೇ ವರ್ಷಕ್ಕೆ ವಿಧಾನ ಸಭೆ ವಿಸರ್ಜನೆಗೆ ಶಿಫಾರಸು ಮಾಡಿ 1985ರಲ್ಲಿ ಮಧ್ಯಂತರ ಚುನಾವಣೆಗೆ ಹೋದಾಗ, ‘ನೇಗಿಲು ಹೊತ್ತ ರೈತ’ನ ಗುರುತಿನೊಂದಿಗೆ ಭಾವನಾತ್ಮಕವಾಗಿ ಗುರುತಿಸಿಕೊಂಡಿದ್ದ ನಾವೆಲ್ಲರೂ ಬೈಸಿಕಲ್ ಗಳಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಎರಡು ವೀಳೇದೆಲೆ, ಮೂರು ಒಪ್ಪು ಅಡಿಕೆ ಕೊಟ್ಟು ಓಟು ಕೇಳಿದ್ದೆವು.


     1975-78ರ ಅವಧಿಯ ತುರ್ತು ಪರಿಸ್ಥಿತಿಯೇ ಕಾರಣವಾಗಿ ಕಾಂಗ್ರೆಸ್ ಎಂದರೆ ಸಾಕು ಸೆಟೆದು ಮೂರು ಮಾರು ದೂರ ನಿಲ್ಲುತ್ತಿದ್ದವರೇ ಹೆಚ್ಚು, ಬಹುಪಾಲು ಅವತ್ತಿನ ರಾಜಕೀಯ ವಾತಾವರಣವೇ ಹಾಗೆ ಕಾಂಗ್ರೆಸ್ ವಿರೋಧಿಯಾಗಿ ರೂಪುಗೊಂಡಿತ್ತು. ಜನತಾಪಕ್ಷ ಅಧಿಕಾರದಲ್ಲಿತ್ತು ಮತ್ತು ಆಗ ತಾನೇ ಜನಸಂಘದ ಹೆಸರನ್ನು ಭಾರತೀಯ ಜನತಾ ಪಾರ್ಟಿ ಎಂದು ಬದಲಿಸಿಕೊಂಡಿದ್ದ ಬಿಜೆಪಿ ಒಂದೋ ಎರಡೋ ಕ್ಷೇತ್ರಗಳಲ್ಲಿ ಗೆಲ್ಲುವ ಆಸೆ ಇರಿಸಿಕೊಳ್ಳುತ್ತಿತ್ತು. ಕಾ.ಬೋರಪ್ಪ ಎಂಬ ತುರುವೇಕೆರೆಯ ಬಿಜೆಪಿ ಲೀಡರ್ ಒಬ್ಬರೇ ಡಿಸಿ ಕಚೇರಿ ಮುಂದೆ ಇಡೀ ದಿನ ಧರಣಿ ಕೂತು ಭಾಷಣ ಮಾಡುತ್ತಿದ್ದುದನ್ನು ಕಂಡಿದ್ದೆವು.


    1990ರ ಮಂಡಲ್ ವರದಿ ಅನುಷ್ಟಾನ ವಿರೋಧಿ ಚಳವಳಿ ಜೊತೆಗೆ 1992ರಲ್ಲಿ ಬಾಬರಿ ಮಸೀದಿ ಕೆಡವಿದ ಪ್ರಕರಣ, ಜೊತೆಗೆ ಜನತಾ ಪರಿವಾರದಲ್ಲಿ ಉಂಟಾದ ವಿಘಟನೆಗಳು ಬಿಜೆಪಿ ನೆಲೆ ಕಂಡುಕೊಳ್ಳಲು ಕಾರಣವಾಯಿತು.


     ಹೀಗಾಗಿ, 1994ರಲ್ಲಿ ತುಮಕೂರು ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಸೊಗಡು ಶಿವಣ್ಣ ಶಾಸಕರಾಗಿ ಚುನಾಯಿತರಾದರು. ಸೊಗಡು ದಿನಪತ್ರಿಕೆಯ ಸಂಪಾದಕರಾಗಿದ್ದ ಶಿವಣ್ಣನವರು ನಿರಂತರ ನಾಲ್ಕು ಅವಧಿಗೆ ತುಮಕೂರು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದರು, ಶಾಸಕರಿರಲಿ, ಸಚಿವರಾದಾಗಲೂ ಅಧಿಕಾರದ ಮದ ಅವರ ತಲೆಗೆ ಹೋಗಲಿಲ್ಲ, ಅಧಿಕಾರ ಬಳಸಿ ಬೇಕಾದವರಿಗೆ ಕೆಲಸ ಮಾಡಿಸಿಕೊಡುತ್ತಿದ್ದರು, ಅಧಿಕಾರಿಗಳ ವರ್ಗಾವಣೆಯಲ್ಲೂ ಸಾದಾ ಸೀದಾ ಇರುತ್ತಿದ್ದರು ಎಂದು ಈಗಲೂ ಜನ ನೆನಪಿಸಿಕೊಳ್ಳುತ್ತಾರೆ. 


    2008ರವರೆಗೆ ತುಮಕೂರು ಶಾಸಕರಾಗಿದ್ದ ಸೊಗಡು ಶಿವಣ್ಣನವರು 2013ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ರೆಬೆಲ್ ಯಡಿಯೂರಪ್ಪನವರ ಕೆಜೆಪಿ ಕಾರಣವಾಗಿ ಓಟು ಗಳಿಗೆ ಪ್ರಮಾಣದಲ್ಲಿ ನಾಲ್ಕನೇ ಸ್ಥಾನಕ್ಕಿಳಿದು ಸೋತು ಬಿಟ್ಟರು. 2018ರ ವಿಧಾನ ಸಭಾ ಚುನಾವಣೆ ಹೊತ್ತಿಗಾಗಲೇ ಕೆಜೆಪಿ ಬಿಜೆಪಿಯೊಳಗೆ ವಿಲೀನವಾಗಿ ಬಿಟ್ಟಿತ್ತು. ಕೆಜೆಪಿ ಕಟ್ಟಿ ಬಿಜೆಪಿಯನ್ನು ಕುಗ್ಗಿಸಿದ್ದ ಯಡಿಯೂರಪ್ಪನವರ ಕೈ ಮೇಲಾಗಿ, ಕೆಜೆಪಿ ಸೇರಿ 2013ರಲ್ಲಿ ಕಣಕ್ಕಿಳಿದು ಶಿವಣ್ಣನವರ ಸೋಲಿಗೆ ಕಾರಣರಾಗಿದ್ದ ಎಂಪಿ ಜಿ.ಎಸ್.ಬಸವರಾಜು ಮಗ ಜಿ.ಬಿ.ಜ್ಯೋತಿಗಣೇಶ್ ಬಿ ಮತ್ತು ಸಿ ಫಾರಂ ಸಿಕ್ಕಿತು. ಕೆಜೆಪಿಯತ್ತ ವಾಲದೇ ಪಕ್ಷ ನಿಷ್ಟೆ ತೋರಿದ ಸೊಗಡು ಶಿವಣ್ಣನವರಿಗೆ ಟಿಕೆಟ್ ದಕ್ಕಲಿಲ್ಲ. ಜ್ಯೋತಿ ಗಣೇಶ್ ಶಾಸಕರಾಗಿಬಿಟ್ಟರು. 


   ಅಗೋ ಇಗೋ ಎನ್ನುವಷ್ಟರಲ್ಲಿ ಐದು ವರ್ಷ ಕಳೆದು 2023ರ ಚುನಾವಣೆಗೆ ದಿನಗಣನೆ ಶುರುವಾಗಿ ಬಿಟ್ಟಿದೆ. ಎಲ್ಲ ಪಕ್ಷಗಳಲ್ಲೂ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಸಾಕಷ್ಟು ಸಂಖ್ಯೆಯಲ್ಲಿ ಕಂಡು ಬರುತ್ತಿದ್ದಾರೆ. ಜೊತೆಗೆ ಪಕ್ಷಗಳು ಕೇವಲ ಅಭ್ಯರ್ಥಿಗಳ ಬಲವನ್ನು ನೆಚ್ಚಿಕೊಳ್ಳದೇ ಖಾಸಗಿ ಏಜೆನ್ಸಿಗಳ ಮೂಲಕ ಸಮೀಕ್ಷೆ ಮಾಡಿಸತೊಡಗಿವೆ.


     ಇಲ್ಲಿ ಮತ್ತು ದಿಲ್ಲಿಯಲ್ಲೂ ಆಡಳಿತದಲ್ಲಿರುವ ಬಿಜೆಪಿ ತುಮಕೂರು ನಗರ ಕ್ಷೇತ್ರದಲ್ಲೂ ಮೂರು ಸಲ ಬೇರೆ ಬೇರೆ ಏಜೆನ್ಸಿಗಳ ಮೂಲಕ ಸಮೀಕ್ಷೆ ಮಾಡಿಸಿದೆಯಂತೆ, ವರದಿ ಏನು ಎಂಬುದು ಊಹಾಪೋಹವೇ ಹೊರತು ಯಾವ ವರದಿಯೂ ಬಹಿರಂಗಗೊಂಡಿಲ್ಲ.


ಕಾಂಗ್ರೆಸ್‌ನಲ್ಲಿ ಈ ಕ್ಷೇತ್ರದಿಂದ 2013ರಲ್ಲಿ ಗೆದ್ದಿದ್ದ ಮಾಜಿ ಶಾಸಕ ಎಸ್ .ಷಫಿ ಅಹ್ಮದ್ ಅಳಿಯ ಡಾ.ಎಸ್. ರಫೀಕ್ ಅಹ್ಮದ್ ಜೊತೆಗೆ ಇಕ್ಬಾಲ್ ಅಹ್ಮದ್ ಹೆಸರೂ ಕೆಪಿಸಿಸಿಗೆ ಶಿಫಾರಸಾಗಿದೆಯಂತೆ, ಜೊತೆಗೆ ಕಾಂಗ್ರೆಸ್ ತನ್ನ ಸತ್ಸಂಪ್ರದಾಯದಂತೆ ಮುಸ್ಲಿಮರನ್ನು ಬಿಟ್ಟು ಅನ್ಯರಿಗೆ ಟಿಕೆಟ್ ಕೊಡುವುದಾದರೆ ಇರಲಿ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆಮಠ್ ಕೂಡಾ ಎರಡು ಲಕ್ಷ ರೂಪಾಯಿ ಡಿಡಿ ಕೊಟ್ಟು ಸಲ್ಲಿಸಿರುವ ಅರ್ಜಿಯೂ ರವಾನೆಯಾಗಿದೆ ಎನ್ನಲಾಗಿದೆ.


ಜೆಡಿಎಸ್‌ನಿಂದ ಹಿಂದಿನ ಎರಡು ಚುನಾವಣೆಯಲ್ಲಿ ಕ್ರಮವಾಗಿ ಮೂರು ಮತ್ತು ಎರಡನೇ ಸ್ಥಾನಕ್ಕೆ ಬಂದು ನಿಂತಿರುವ ಉದ್ಯಮಿ ಎನ್.ಗೋವಿಂದರಾಜು ಎದುರು ಚಿನ್ನದ ವರ್ತಕ ಅಟ್ಟಿಕಾ ಬಾಬು ಅಲಿಯಾಸ್ ಬೊಮ್ಮನಹಳ್ಳಿ ಬಾಬು ಅಲ್ಲಿ ಇಲ್ಲಿ ಮಿಣುಕುತ್ತ ಮಿಂಚುತ್ತ, ಇಲ್ಲೇ ಈ ನಗರದಲ್ಲಿ ವಾಸಕ್ಕೆ ಮನೆ ಹುಡುಕುತ್ತ ಗಲ್ಲಿಗಳಲ್ಲಿ ಅಡ್ಡಾಡುತ್ತಿದ್ದಾರೆಂಬ ಸುದ್ದಿ ಖಚಿತವಾಗಿದೆ. ಜೆಡಿಎಸ್ ಕೂಡಾ ಒಂದು ವೇಳೆ ಕಾಂಗ್ರೆಸ್ ಮುಸ್ಲಿಮರ ಬದಲಿಗೆ ಅನ್ಯರಿಗೆ ಟಿಕೆಟ್ ಕೊಟ್ಟುಬಿಟ್ಟರೆ, ತುಮಕೂರು ಕ್ಷೇತ್ರದಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿರುವ ಮುಸ್ಲಿಮ್ ಮತದಾರರಿಗಾಗಿ ಅಂತಲೇ ಅಟ್ಟಿಕಾ ಬಾಬು ಅವರನ್ನು ರಿಸರ್ವ್ ಇಟ್ಟುಕೊಂಡಿದೆ ಎಂಬ ನಂಬಬಹುದಾದ ಸುದ್ದಿ ಚಾಲ್ತಿಯಲ್ಲಿದೆ. ಆದರೆ ಜೆಡಿಎಸ್ ದಂಡ ನಾಯಕರು ತಮ್ಮ ಖಾಯಂ ಓಟುಗಳು ಎಂದು ನಂಬಿಕೊಂಡಿರುವ ತುಮಕೂರು ನಗರದ ಒಕ್ಕಲಿಗ ಬಾಂಧವರಿಗೆ ಈ ಇಬ್ಬರೂ ತಮ್ಮ ಪಕ್ಷಕ್ಕೆ ಸೂಕ್ತ ಅಭ್ಯರ್ಥಿಗಳು ಅಂತ ಅನ್ನಿಸಿಲ್ಲವಂತೆ.


ಈ ಎರಡೂ ಪ್ರಮುಖ ರಾಜಕೀಯ ಪಕ್ಷಗಳ ಜೊತೆಗೆ ನಮಗೂ ಒಂದು ಸಲ ಅವಕಾಶ ಕೊಡಿ ಎಂದು ಕೇಳುತ್ತಿರುವ ಪೊರಕೆ ಗುರುತಿನ ಆಮ್ ಆದ್ಮಿ ಪಾರ್ಟಿ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪೊರಕೆ ಮೀಸೆ ತೀಡುತ್ತಿರುವ ಕೆಆರ್ ಎಸ್ ಪಾರ್ಟಿಯೂ ಅಭ್ಯರ್ಥಿಗಳನ್ನು ಈ ಸಲ ಇಲ್ಲಿಂದ ಕಣಕ್ಕಿಳಿಸುವುದು ಖಚಿತವಾಗಿದೆ.


ಈಗ ವಾಪಸ್ ಬಿಜೆಪಿಯತ್ತ ಬನ್ನಿ, ಇಲ್ಲಿ 1994ರಿಂದ 2018ರವರೆಗಿನ ಆರು ಚುನಾವಣೆಗಳಲ್ಲಿ ಒಂದು ಸಲ ಪಕ್ಷದ ಒಡಕಿನ ಕಾರಣವಾಗಿ ಸೋತದ್ದು ಬಿಟ್ಟರೆ ನಿರಂತರ ಗೆಲ್ಲುತ್ತ ಬಂದಿರುವ ಈ ಪಕ್ಷಕ್ಕೆ ಕ್ಷೇತ್ರ ಉಳಿಸಿಕೊಳ್ಳುವುದು ಪ್ರತಿಷ್ಟೆ ಮತ್ತು ಸವಾಲೇ ಆಗಿದೆ.


ಬಿಜೆಪಿಯ ಮೆದುಳು ಮತ್ತು ದೇಹ ಎರಡೂ ಆಗಿರುವ ಆರ್ ಎಸ್ ಎಸ್ ಕೂಡಾ ತುಮಕೂರು ನಗರದಲ್ಲಿ ಪ್ರಬಲ ನೆಲೆ ಹೊಂದಿದೆಯಾದರೂ ಈ ಪಕ್ಷದ ಮುಖ್ಯ ಮತದಾರರು ಹಾಗೂ ಅಭ್ಯರ್ಥಿಗಳು ಲಿಂಗಾಯತರೇ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಿದೆ. 1994ರ ಚುನಾವಣೆವರೆಗೂ ಮುಸ್ಲಿಮರು ಹಾಗೂ ಹಿಂದುಳಿದ ಜಾತಿಗೆ ಸೇರಿದವರು ಗೆಲ್ಲುತ್ತಾ ಬಂದಿದ್ದ ಮತ್ತು ಲಿಂಗಾಯತರು ರಾಜಕೀಯ ಪ್ರಾಬಲ್ಯ ಸಾಧಿಸದೇ ಇದ್ದ ಕ್ಷೇತ್ರವಿದು. 


ಪಕ್ಷ ಟಿಕೆಟ್ ಕೊಡಲಿ ಬಿಡಲಿ 2023ರ ಚುನಾವಣೆಯ ಬ್ಯಾಲೆಟ್ ಪೇಪರ್ ನಲ್ಲಿ ನನ್ನ ಹೆಸರು ಇದ್ದೇ ಇರುತ್ತದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಇತ್ತೀಚಿನ ಸುದ್ದಿ ಗೋಷ್ಟಿಗಳಲ್ಲಿ ಗಟ್ಟಿ ದನಿಯಲ್ಲಿ ಹೇಳುತ್ತಲೇ ಇದ್ದಾರೆ. ಹಾಲಿ ಶಾಸಕ ಜ್ಯೋತಿ ಗಣೇಶ್ ತಮ್ಮ ತಂದೆ ಲೋಕಸಭಾ ಸದಸ್ಯ ಹಾಗೂ ಅರ್ಧ ಶತಮಾನದಿಂದ ತುಮಕೂರು ಜಿಲ್ಲೆಯ ಮೇಲೆ ಹಿಡಿತ ಸಾಧಿಸಿರುವ ಜಿ.ಎಸ್.ಬಸವರಾಜು ಅವರ ಪ್ರಭಾವಳಿಯಿಂದ ಹೊರಬಂದು ಸ್ವಂತ ಅಸ್ತಿತ್ವ ತೋರಿಸಿಕೊಳ್ಳಲು ಸಾಧ್ಯವಾಗಿಲ್ಲ. 


ಜಿ.ಎಸ್.ಬಸವರಾಜು ಅವರು ತನಗೆ ವಯಸ್ಸಾಯಿತು, ಇನ್ನುನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ, ಜೊತೆಗೆ ಅವರ ಪಕ್ಷವೂ 75 ದಾಟಿದವರಿಗೆ ಟಿಕೆಟ್ ನೀಡಲ್ಲ ಎಂಬ ಮಾತೂ ಇದೆ. ಹೀಗಾಗಿ ಅವರ ಉತ್ತರಾಧಿಕಾರಿಯಾಗಿ ಅವರ ಮಗ ಜ್ಯೋತಿ ಗಣೇಶ್ ಅವರನ್ನು 2024ರ ಲೋಕಸಭೆಗೆ ಕಳಿಸಬಾರದೇಕೆ ಎಂಬ ಮಾತೂ ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ, ಜೊತೆಗೆ ಅಯ್ಯೋ ಈಗಾಗಲೇ ಲೋಕಸಭೆಗೆ ಏಳು ಆಕಾಂಕ್ಷಿಗಳ ಪಟ್ಟಿ ಸಿದ್ಧವಾಗಿದೆ ಎನ್ನಲಾಗಿದೆ.


ಸಿಟ್ಟಿಂಗ್ ಎಂಎಲ್‌ಎಗಳಿಗೆ ಟಿಕೆಟ್ ಕೊಡಬೇಕು ಎನ್ನುವುದು ಪಕ್ಷದ ಪಾಲಿಸಿ ಆದಲ್ಲಿ ಜ್ಯೋತಿ ಗಣೇಶ್ ಶಾಸಕ ಸ್ಥಾನದ ಪುನರಾಯ್ಕೆ ಬಯಸುವುದು ಅನಿವಾರ್ಯವಾಗುತ್ತದೆ. ಸಾಂಪ್ರದಾಯಿಕ ಎದುರಾಳಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಜೊತೆಗೆ ಸೊಗಡು ಶಿವಣ್ಣನವರನ್ನೂ ಫೇಸ್ ಮಾಡಬೇಕಾಗಿ ಬರುತ್ತದೆ. 


ನಗರದಲ್ಲಿ ಅಭಿವೃದ್ಧಿ ಕಾರ್ಯಗಳಿಗೇನೂ ಕೊರತೆಯಿಲ್ಲ, ಸ್ಮಾರ್ಟ್ ಸಿಟಿಯ ಸರಿಸುಮಾರು 1000 ಕೋಟಿ ರೂ ಮೊತ್ತದ ಕಾಮಗಾರಿಗಳು ಬೇರೆ ಇಡಿಯಾಗಿ ಇವರಿಗೇ ದಕ್ಕಿತಲ್ಲ, ಜೊತೆಗೆ ನಗರೋತ್ಥಾನ, ಶಾಸಕರ ಪ್ರದೇಶಾಭಿವೃದ್ಧಿ ನಿಧಿ, ಮಹಾನಗರಪಾಲಿಕೆ ಕಾಮಗಾರಿಗಳು, ಲೋಕೋಪಯೋಗಿ ಇಲಾಖೆಯ ಪ್ರತ್ಯೇಕ ಉಪವಿಭಾಗ ಬೇರೆ ರೂಪುಗೊಂಡಿತಲ್ಲ, ಜಿಲ್ಲಾ ಕೇಂದ್ರ ಬೇರೆ. ಸ್ಟೇಡಿಯಂ, ಲೈಬ್ರರಿ, ಬಸ್ ನಿಲ್ದಾಣ, ಆಟದ ಅಂಕಣಗಳನ್ನೆಲ್ಲ ಕಟ್ಟಿಲ್ಲವಾ, ಇಷ್ಟೆಲ್ಲ ಇರುವಾಗ ಜನಪ್ರಿಯತೆಗೇನು ಕೊರತೆ , ಜ್ಯೋತಿ ಗಣೇಶ್ ಮತ್ತೊಮ್ಮೆ ಇಲ್ಲಿಂದ ಗೆದ್ದು ಶಾಸಕರು ತೊಂದರೆ ಏನು ಎನ್ನಬಹುದು ನೀವು, 


 ಆದರೆ, ನಾನು ಮೊದಲಿಗೇ ಹೇಳಿದ ಹಳೇ ಕಾಲದ ಜನಪ್ರತಿನಿಧಿಗಳ ರೀತಿ ರಿವಾಜುಗಳನ್ನು ತುಮಕೂರಿನ ಹಾಲಿ ಶಾಸಕರು ಎಂದಿಗೂ ಅನುಸರಿಸಲಿಲ್ಲ, ಇಂಜಿನಿಯರಿಂಗ್ ಜೊತೆಗೆ ಎಂಬಿಎ ಅಂದರೆ ಬಿಸಿನೆಸ್ ಮ್ಯಾನೇಜ್ ಮೆಂಟ್ ಪದವೀಧರ ಬೇರೆ, ಒಂದು ಅವರ ಅಧಿಕೃತ ನಿವಾಸಕ್ಕೆ ಪರಮಾಪ್ತರಾದ ಒಂದಿಬ್ಬರನ್ನು ಬಿಟ್ಟು ಪಕ್ಷದ ಕಾರ್ಯಕರ್ತರಾಗಲೀ, ಅಭಿಮಾನಿಗಳಾಗಲೀ, ಜನಸಾಮಾನ್ಯರಿಗಾಗಲೀ ಪ್ರವೇಶವಿಲ್ಲ ಎಂಬುದು ಇಡೀ ಕ್ಷೇತ್ರಕ್ಕೆ ಗೊತ್ತಿರುವ ಸಂಗತಿ. ಮನೆ ಬಾಗಿಲಲ್ಲಿ ಸದಾ ಕುಳಿತಿರುವ ಖಾಸಗಿ ಸೆಕ್ಯುರಿಟಿಗೂ ಒಳಗೆ ಯಾರಿದ್ದಾರೆ, ಯಾರಿಲ್ಲ ಎಂಬ ಸಂಗತಿ ಗೊತ್ತಿರುವುದಿಲ್ಲ. ಅದಿರಲಿ ಮನೆ ಅವರ ಖಾಸಗಿ, ಅಲ್ಲಿಗೇಕೆ ಜನ ಹೋಗಬೇಕು, ಪುರಭವನದಲ್ಲಿರುವ ಕಚೇರಿಯಲ್ಲಾದರೂ ಸದಾ ಶಾಸಕರನ್ನು ಭೇಟಿ ಮಾಡಬಹುದೇ ಎಂದರೆ ಅದೂ ಇಲ್ಲ, ಒಬ್ಬ ಡಿಟಿಪಿ ಆಪರೇಟರ್, ಇಬ್ಬರು ಆಪ್ತ ಸಹಾಯಕರು ಮತ್ತು ಇಬ್ಬರೋ ಮೂವರೋ ಹಿಂಬಾಲಕರನ್ನು ಸದಾ ಕಾಣಬಹುದು ಎನ್ನುತ್ತಾರೆ ಜನ.


ಯಾವುದೇ ಸಭೆ, ಸಮಾರಂಭಗಳಿಗೂ ಅಷ್ಟೇ, ಮಾನ್ಯ ಶಾಸಕರು ತಮ್ಮದೇ ಆದ ವಿಶಿಷ್ಟ ಶೈಲಿಯೊಂದನ್ನು ರೂಡಿಸಿಕೊಂಡಿದ್ದಾರೆ, ಒಂದೋ ಕಾರ್ಯಕ್ರಮ ಶುರುವಾದ ಮೇಲೆ ಬಂದು ಸೇರಿಕೊಳ್ಳುತ್ತಾರೆ, ಎರಡೋ ಎಲ್ಲರಿಗಿಂತ ಮೊದಲ ಭಾಷಣ ಕೇಳಿ ಪಡೆದು ಮಾತನಾಡಿ ತಕ್ಷಣ ತುರ್ತು ಕೆಲಸವೋ ಸಭೆಯೋ ಇತ್ಯಾದಿ ನೆಪ ಹೇಳಿ ಸಮಾರಂಭದ ನಡುವೆಯೇ ಹೊರಟುಬಿಡುತ್ತಾರೆ. ಅವರ ಮೊಬೈಲ್ ಫೋನ್ ರಿಂಗ್ ಆಗುತ್ತದೆಯೇ ಹೊರತು ಸಾಮಾನ್ಯವಾಗಿ ಜನ ಸಾಮಾನ್ಯರ ಕರೆಗಳನ್ನು ಅವರ ಆಪ್ತ ಸಹಾಯಕರೂ ಸ್ವೀಕರಿಸುವುದಿಲ್ಲ ಎಂದು ಜನರು ಗೊಣಗುತ್ತಾರೆ. ಅವರ ಜೊತೆಯಲ್ಲೂ ಯಾವ ಪಾಲೋಯರ್ ಗಳನ್ನೂ ಕರೆದುಕೊಂಡು ಹೋಗುವುದಿಲ್ಲ, ಒಂದು ವೇಳೆ ಬೇರೆ ಕಾರಿನಲ್ಲಿ ಅವರನ್ನು ಫಾಲೋ ಮಾಡಿದರೂ, ಅರ್ಧಕ್ಕೇ ವಾಪಸ್ ಕಳಿಸಿಬಿಡುತ್ತಾರಂತೆ. ಆದರೆ ಮಾಜಿ ಶಾಸಕ , ಮಾಜಿ ಸಚಿವ ಸೊಗಡು ಶಿವಣ್ಣನವರು ಹಾಲಿ ಶಾಸಕರಿಗೆ ತದ್ವಿರುದ್ಧ , ಅವರ ಮನೆ, ಕಚೇರಿ ಬಾಗಿಲುಗಳು ಜನರಿಗೆ ಸದಾ ಮುಕ್ತ, 24 ಗಂಟೆ ಯಾವಾಗ ಯಾರು ಎಲ್ಲಿಗೆ ಕರೆದರೂ ಅವರೇ ಕಾರ್ ಚಾಲನೆ ಮಾಡಿಕೊಂಡು , ಗನ್‌ಮೆನ್ ಅನ್ನೂ ಕರೆದುಕೊಳ್ಳದೇ ಬಂದು ಬಿಡುತ್ತಾರೆ. ಆದರೆ ಚುನಾವಣೆ ಗೆಲ್ಲಲು ಇದಿಷ್ಟೇ ಸಾಕಾಗಲ್ಲ ಅಂತ 1985ರಿಂದ ಸ್ಪರ್ಧಿಸುತ್ತಿರುವ, ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ಸರ್ವಾಧಿಕಾರ ವಿರೋಧಿಸಿ ಜೈಲಿನಲ್ಲಿ ಒಂದೂವರೆ ವರ್ಷ ಇದ್ದು ಬಂದ ಅವರಿಗೂ ಅರಿವಾಗಿರಬಹುದು. 


ಅಯ್ಯೋ ಇದೆಲ್ಲ, ಇದ್ದದ್ದೇ, ಮೊದಲು ಚುನಾವಣೆ ಬರಲಿ, ಟಿಕೆಟ್ ಯಾರು ಗಿಟ್ಟಿಸಿಕೊಳ್ಳುತ್ತಾರೆ ಎಂಬುದು ಅಂತಿಮವಾಗಲಿ, ಕಣದಲ್ಲಿ ಉಳಿದವರ ನಡುವೆ ತಾನೇ ಸ್ಪರ್ಧೆ ಎನ್ನಬಹುದು ನೀವು. 


ಚುನಾವಣೆಗಳು ಬಂದಾಗ, ಮತದಾನಕ್ಕೆ ಇನ್ನೊಂದೋ ಎರಡೋ ದಿನಗಳು ಉಳಿದಿವೆ ಎನ್ನುವಾಗ ನಡೆಸುವ ಕಾಂಚಾಣದ ಕರಾಮತ್ತಿನ ಮುಂದೆ ಹಿಂದಿನ ಐದು ವರ್ಷದ ಲೆಕ್ಕಾಚಾರಗಳೆಲ್ಲ ಮಟಾಮಾಯವಾಗಿಬಿಡುತ್ತವೆ ಎನ್ನುವವರಿಗೂ ಕೊರತೆ ಇಲ್ಲ. 


ನೋಡಿ ಇಷ್ಟೆಲ್ಲ ಸವಿವರವಾಗಿ ಹೇಳಿದ, 1988ರಿಂದಲೂ ಪತ್ರಕರ್ತನಾಗಿರುವ ನಾನು ಸಿನಿಕನಾ ಅಲ್ಲವಾ ಎಂಬುದನ್ನು ನೀವೇ ತೀರ್ಮಾನ ಮಾಡಿಕೊಳ್ಳಿ.


ಲಿಂಗಾಯತರಲ್ಲೇ ವಿರೋಧವೇಕೆ? 


ಡಾ.ಎನ್.ಎಸ್.ಜಯಕುಮಾರ್


ತುಮಕೂರು ನಗರದ ಲಿಂಗಾಯತರಲ್ಲಿ ಎರಡು ವಿಧ, ಒಂದು ನೊಳಂಬ(ನೊಣಬ)ರು, ಮತ್ತೊಂದು ರಂಭಾಪುರಿ ಮಠಗಳಿಗೆ ನಡೆದುಕೊಳ್ಳುವ ವೀರಶೈವರು. ನಗರದಲ್ಲಿ ನಾವೂ ಗಣನೀಯ ಸಂಖ್ಯೆಯಲ್ಲಿದ್ದೇವೆ, ನಮ್ಮಲ್ಲೇ ಯಾರಿಗಾದರೂ ಯಾಕೆ ಟಿಕೆಟ್ ಕೊಡಬಾರದು ಎಂದು ವೀರಶೈವರು ಗಟ್ಟಿ ದನಿಯಲ್ಲಿ ಮಾತನಾಡಿಕೊಳ್ಳತೊಡಗಿದ್ದಾರೆ, ಜೊತೆಗೆ ಇಷ್ಟರಲ್ಲೇ ಈ ಬಣದ ಪ್ರಮುಖರ ಸಭೆಯನ್ನೂ ಕರೆಯಲಾಗಿದ್ದು, ತಮ್ಮ ಒಳ ದನಿಯನ್ನು ಪಕ್ಷದ ಪ್ರಮುಖರಿಗೆ ಮುಟ್ಟಿಸಲಿದ್ದಾರೆ ಎಂದು ತಿಳಿದು ಬಂದಿದೆ. 


ಎಲ್ಲ ಚುನಾವಣೆಗಳಲ್ಲೂ ಅಭ್ಯರ್ಥಿಗಳ ಆಪತ್ಬಾಂಧವರೆನಿಸಿಕೊAಡಿರುವ ಜಿಲ್ಲೆಯ ಆರ್ ಎಸ್ ಎಸ್ ಅಧ್ಯಕ್ಷರ ಹಿರಿಯಣ್ಣ ಯಶಸ್ವಿ ಸಹಕಾರಿ, ಉದ್ಯಮಿ ಡಾ.ಎನ್.ಎಸ್.ಜಯಕುಮಾರ್ ಕೂಡಾ ಮೊನ್ನೆ ದಿಲ್ಲಿಗೆ ಹೋಗಿ ರಾಜ್ಯದಲ್ಲಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಮೇಲೆ ಹಿಡಿತ ಹೊಂದಿರುವ ಬಿ.ಎಲ್ .ಸಂತೋಷ್ ಜೀ ಅವರನ್ನೂ ಭೇಟಿ ಮಾಡಿ ಬಂದಿರುವುದೂ ಈ ಬಣದಲ್ಲಿ ಶಕ್ತಿ ತುಂಬಿದೆ ಎನ್ನಲಾಗಿದೆ. ನಗರದಲ್ಲಿ ಅತ್ಯಂತ ಪ್ರಭಾವಿಗಳಾಗಿರುವ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದ ಎನ್.ಎಸ್. ಜಯಕುಮಾರ್ ಅವರಿಗೆ ಟಿಕೆಟ್ ಕೊಟ್ಟರೂ ತಪ್ಪೇನಿಲ್ಲ ಎನ್ನುತ್ತಾರೆ ಇವರಲ್ಲಿ ಕೆಲವರು. 



ಇನ್ನಿತರ ಆಕಾಂಕ್ಷಿಗಳು ಯಾರು 


ಬಿಜೆಪಿಯಲ್ಲಿ ಹಾಲಿ ಶಾಸಕರಾದ ಜ್ಯೋತಿ ಗಣೇಶ್ ಅಲ್ಲದೇ ಸೊಗಡು ಶಿವಣ್ಣನವರ ಜೊತೆಗೆ ಟೂಡಾ ಮಾಜಿ ಅಧ್ಯಕ್ಷ ಬಾವಿ ಕಟ್ಟೆ ನಾಗಣ್ಣ, ಕಾಂಪೋಸ್ಟ್ ನಿಗಮದ ನಿರ್ದೇಶಕ ಟಿ.ಆರ್.ಸದಾಶಿವಯ್ಯ ಕೂಡಾ ಆಕಾಂಕ್ಷಿ ಎಂದು ಹೇಳಲಾಗುತ್ತಿದೆ. 

ಯಡಿಯೂರಪ್ಪ ಪ್ರಭಾವ ಕ್ಷೀಣ


ಮೊನ್ನೆ ಹುಬ್ಬಳ್ಳಿಯಲ್ಲಿ ಪ್ರಧಾನ ಮಂತ್ರಿಯವರ ಬೃಹತ್ ಯುವ ಜನೋತ್ಸವದಲ್ಲಿ ಇಳಿ ವಯಸ್ಸಿನ ಬಿ.ಎಸ್.ಯಡಿಯೂರಪ್ಪನವರು ಕಾಣಲೇ ಇಲ್ಲ, ಮೂರು ತಿಂಗಳಲ್ಲಿ ಎದುರಿಸಬೇಕಿರುವ ವಿಧಾನ ಸಭಾ ಚುನಾವಣೆಯ ತಾಲೀಮು ಎಂದು ಬಣ್ಣಿಸಲಾದ ಈ ಬೃಹತ್ ಕಾರ್ಯಕ್ರಮಕ್ಕೆ ರಾಜ್ಯದಲ್ಲಿ ಬಿಜೆಪಿಯನ್ನು ಎರಡು ಚುನಾವಣೆಗಳಲ್ಲಿ ಗೆಲುವಿನ ಹತ್ತಿರ ಕರೆತಂದ ಲಿಂಗಾಯತರ ಪ್ರಶ್ನಾತೀತ ನಾಯಕ ಬಿ.ಎಸ್.ಯಡಿಯೂರಪ್ಪನವರನ್ನು ಆಹ್ವಾನಿಸಲೇ ಇಲ್ಲ ಎಂದರೆ, ಅವರ ಪ್ರಭಾವ ಹಾಗೂ ಶಕ್ತಿ ಕ್ಷೀಣಿಸುತ್ತಿದೆ ಎಂದೇ ಅರ್ಥ. ಹಾಗಾಗಿ, ಯಡಿಯೂರಪ್ಪನವರ ಕೆಜೆಪಿ ಮೂಲಕ ಬಿಜೆಪಿಗೆ ಬಂದ ಜಿಎಸ್‌ಬಿ ಮತ್ತು  ಜಿಬಿಜೆ ಶಕ್ತಿಯೂ ಸಹಜವಾಗೇ ಕುಂದುತ್ತದೆ ಎಂದೇ ಭಾವಿಸಬೇಕಾಗುತ್ತದೆ.‌

ಜಿಎಸ್‍ಬಿ ನಿವೃತ್ತಿ ಘೋಷಣೆ

ಶನಿವಾರ ತಿಪಟೂರಿನ ಸಿದ್ದರಾಮ ಜಯಂತಿಯಲ್ಲಿ ತುಮಕೂರು ಶಾಸಕರ ತಂದೆಯೂ ಆಗಿರುವ ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ರಾಜಕೀಯ ನಿವೃತ್ತಿ ಘೋಷಿಸಿದರು. ಇನ್ನು ಯಾವ ಚುನಾವಣೆಗೂ ಸ್ಪರ್ಧಿಸುವುದಿಲ್ಲ ಎಂದು ವೇದಿಕೆಯಲ್ಲಿದ್ದ ಯಡಿಯೂರಪ್ಪನವರ ಎದುರೇ ಘೋಷಿಸಿದ್ದು ಅರ್ಥಪೂರ್ಣವಾಗಿತ್ತು.