ನಿಮ್ಮ ಔದಾರ್ಯದ ಉರುಳಲ್ಲಿ ನಾನು ಸಿಲುಕುವುದಿಲ್ಲ."

(ಗಾಂಧಿಯವರೊಂದಿಗಿನ ಸರಣಿ ಮಾತುಕತೆಗಳಲ್ಲಿ)

ನಿಮ್ಮ ಔದಾರ್ಯದ ಉರುಳಲ್ಲಿ ನಾನು ಸಿಲುಕುವುದಿಲ್ಲ."

ಅಂಬೇಡ್ಕರ್ ನಿಜ ದನಿ

ಕೇಶವ ಮಳಗಿ

 

ನಿಮ್ಮ ಔದಾರ್ಯದ ಉರುಳಲ್ಲಿ ನಾನು ಸಿಲುಕುವುದಿಲ್ಲ."

 

ಬಲಹೀನನೋ, ಬಲಶಾಲಿಯೊ ಸದೃಢನೋ,

ಗೋಚರನೊ, ಅಗೋಚರನೋ, ಸನಿಹದಲಿರುವವರೊ,

ದೂರ ವಾಸಿಯೊ, ಹುಟ್ಟಿರುವವನೋ,

ಇನ್ನೂ ಹುಟ್ಟಲಿರುವವನೋ-

ತಾಯಿ ತನ್ನ ಮಗುವನ್ನು ಏಕೈಕ ಒಡಲ ಕುಡಿಯೆಂದು ಸಲಹುವಂತೆ

ಸಕಲ ಜೀವರಾಶಿಯೂ ಅಪರಿಮಿತ ಆನಂದ ಪಡೆಯಲಿ

(* ಕರಣೀಯ ಮೆತ್ತ ಸುತ್ತ)

"ನನಗೆ ತಾಯಿನಾಡು ಇದೆ ಎಂದು ನೀವೇನೋ ಹೇಳುತ್ತಿದ್ದೀರಿ. ಆದರೆ, ನಾನು ಅದಿಲ್ಲದೆ ಬದುಕುತ್ತಿದ್ದೇನೆ ಎಂದು ಪುನರುಚ್ಚರಿಸುತ್ತಿದ್ದೇನೆ. ಕುಡಿಯಲು ನೀರು ದೊರಕದ, ನಾಯಿಬೆಕ್ಕುಗಳಿಗಿಂತ ಕಡೆಯಾಗಿ ನೋಡುವ ಈ ನೆಲವನ್ನು, ಈ ಧರ್ಮವನ್ನು ನಮ್ಮದೆಂದು ಒಪ್ಪಿಕೊಳ್ಳಲು ಹೇಗೆ ಸಾಧ್ಯ? ಸ್ವಾಭಿಮಾನವಿರುವ ಯಾವುದೇ ಅಸ್ಪೃಶ್ಯನೂ ಈ ನೆಲದ ಕುರಿತು ಹೆಮ್ಮೆಪಡಲಾರ. ಈ ನೆಲವು ನಮ್ಮ ಮೇಲೆಸಗಿರುವ ಅನ್ಯಾಯ ಮತ್ತು ಯಾತನೆಗಳನ್ನು ಗಮನಿಸಿದರೆ, ತಿಳಿದೊ-ತಿಳಿಯದೆಯೋ ನಾವು ಈ ನೆಲಕ್ಕೆ ನಿಷ್ಠೆ ತೋರದಿದ್ದರೆ ಅದರ ಸಂಪೂರ್ಣ ಹೊಣೆಗಾರಿಕೆಯನ್ನು ಈ ನೆಲವೇ ಹೊರಬೇಕಾಗುತ್ತದೆ. ನನ್ನನ್ನು ದ್ರೋಹಿ ಎಂದು ಕರೆದುದ್ದಕ್ಕೆ ನನಗೇನೂ ದುಃಖವಾಗುತ್ತಿಲ್ಲ. ಆದರೆ, ನಮ್ಮೆಲ್ಲ ಕ್ರಿಯೆಗಳಿಗೆ ದ್ರೋಹಿ ಎಂದು ಬಣ್ಣಿಸಿದ ನೆಲವೇ ಕಾರಣಕರ್ತವಾಗುವುದು. ನೀವು ಹೇಳಿದಂತೆ, ದೇಶಪ್ರೇಮ ಸೂಚಿಸುವ ಫಲಪ್ರದವಾದ ಅಥವಾ ಪ್ರಯೋಜನಕಾರಿಯಾದ ಕೆಲಸವನ್ನು ನಾನು ಮಾಡಿದ್ದರೆ, ಅದಕ್ಕೆ ಕಾರಣ ನನ್ನ ಪರಿಶುದ್ಧವಾದ ಅಂತಃಕರಣವೇ ಹೊರತು ನನ್ನ ದೇಶಪ್ರೇಮವಲ್ಲ. ಈ ದೇಶದಲ್ಲಿ ಶತಮಾನಗಳಿಂದ ತುಳಿತಕ್ಕೆ ಒಳಗಾದ ನನ್ನ ಜನಗಳಿಗೆ ಮಾನವ ಹಕ್ಕುಗಳನ್ನು ಒದಗಿಸಿಕೊಡಲು ನಾನು ಯಾವ ನಿಲುವನ್ನು ತೆಗೆದುಕೊಂಡರೂ ಅದೊಂದು ಪಾಪವಾಗಲಾರದು. ಮಾತ್ರವಲ್ಲ, ಈ ದೇಶಕ್ಕೆ ಯಾವುದೇ ರೀತಿಯ ಹಾನಿಯೂ ಆಗಿಲ್ಲದಿದ್ದರೆ ಅದಕ್ಕೆ ನನ್ನ ಪರಿಶುದ್ಧವಾದ ಒಳದನಿಯೇ ಕಾರಣವಾಗಿದೆ. ನನ್ನ ಅಂತರಂಗದ ಕರೆಗೆ ಬದ್ಧನಾಗಿ ಈ ದೇಶಕ್ಕೆ ಯಾವುದೇ ಧಕ್ಕೆಯನ್ನೂ ಮಾಡದೆ ನನ್ನ ಸಮುದಾಯಗಳಿಗೆ ಮಾನವ ಹಕ್ಕುಗಳನ್ನು ದೊರಕಿಸಿಕೊಡುವುದಕ್ಕೆ ನಾನು ಬದ್ಧನಾಗಿದ್ದೇನೆ."

"ಒಂದೊಮ್ಮೆ ನಾನು ಹಿಂದೂ ಎಂದು ಕರೆದುಕೊಂಡರೆ ಹುಟ್ಟಿನಿಂದ ನಾನು ಕೆಳಜಾತಿಗೆ ಸೇರಿದವನು ಎಂದು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ಆದ್ದರಿಂದಲೇ, ನಮ್ಮ ಕೀಳರಿಮೆಯನ್ನು ಹೋಗಲಾಡಿಸುವಂಥ ಪರಿಶುದ್ಧ ಪ್ರಮಾಣವನ್ನು ತೋರಿಸಿ ಎಂದು ನಾನು ಹಿಂದೂಗಳನ್ನು ಕೇಳಲೇಬೇಕಾಗುತ್ತದೆ. ಹಾಗಾಗದಿದ್ದರೆ, ಹಿಂದೂಧರ್ಮಕ್ಕೆ ವಿದಾಯ ಹೇಳುತ್ತೇನೆ . . . ಒಂದಿಷ್ಟು ನೆರವಿನ ಕ್ರಮಗಳಿಂದ ಏನೂ ಆಗದು . . . ನಿಮ್ಮ ಔದಾರ್ಯದ ಉರುಳಲ್ಲಿ ನಾನು ಸಿಲುಕುವುದಿಲ್ಲ."

* ಡಾ. ಬಿ.ಆರ್‌. ಅಂಬೇಡ್ಕರ್‌,

(ಗಾಂಧಿಯವರೊಂದಿಗಿನ ಸರಣಿ ಮಾತುಕತೆಗಳಲ್ಲಿ)

 

 

ಸಂಪಾದಕನ ಟಿಪ್ಪಣಿ:

ಎರಡೂವರೆ ಸಾವಿರ ವರ್ಷಗಳ ಹಿಂದೆ ನಮ್ಮ ನಿಮ್ಮಂತೆ ಮನುಷ್ಯನಾಗಿ ಜೀವಿಸಿದ್ದ ಗೌತಮ ಬುದ್ಧ ಕರುಣೆ-ಮೈತ್ರಿಯ ಕುರಿತ ವಚನವಿದು, ಬುದ್ಧನ ವಚನಗಳನ್ನು ಸಂಗ್ರಹಿಸಿರುವ ಸುತ್ತ ಪಿಟಕದ ಖುದ್ದಕನಿಕಾಯದ 9ನೇ ವಚನವಿದು. ಈ ವಚನವನ್ನು ಕರಣೀಯ ಮೆತ್ತ ಸುತ್ತ (ಕರುಣೆ-ಮೈತ್ರಿಯ ಸೂತ್ರ) ಎಂದು ಪಾಳಿ ಭಾಷೆಯಲ್ಲಿ ವಿವರಿಸಲಾಗಿದೆ.ಸಕಲ ಜೀವಿಗಳೂ ಸುಖ ಸಂತಸದಿಂದ ಜೀವಿಸಲಿ ಎಂದು ಆಶಿಸುವ ವಚನವಿದು.

ಏ ಕೇಚಿ ಪಾನಾ ಭೂತತ್ತಿ ತಸಾ ವಾ ತಾವರಾ ವಾ ಅನವ ಸೇಸಾ

ದಿಟ್ಟಿತಾ ಯೇವ ಅದಿಟ್ಟಿತಾ ಏತ ದೂರೆ ವಸಂತಿ ಅವದೂರೆ

ಭೂತಾ ವಾ ಸಂಭವೇಸಿ ವಾ ಸಬ್ಬೆ-ಸತ್ತ ಭವಂತು ಸುಕಿ- ತತ್ತಾ

ಮಾತಾ ಯಥಾ ನಿಯಂ ಪುತ್ತಂ ಆಯುಸಾ ಏಕಪುತ್ತಮಾನುರಕ್ಖೆ

ಏವಾಂಪಿ ಸಬ್ಬಭೂತೇಸು ಮಾನಸಂ ಭಾವಯೇ ಅಪರಿಮಿತಂ

*