ವಿಶ್ವರೂಪಿಣಿ ಕನ್ಯಕಾಪರಮೇಶ್ವರಿ

ಕನ್ನಿಕಾ-ಪರಮೇಶ್ವರಿ

ವಿಶ್ವರೂಪಿಣಿ ಕನ್ಯಕಾಪರಮೇಶ್ವರಿ


ಕೆ.ಪಿ.ಲಕ್ಷ್ಮೀಕಾಂತ ರಾಜೇ ಅರಸ್

ಆರ್ಯವೈಶ್ಯ ಸಮುದಾಯದ ಕುಲ-ಕಸುಬಾದ ವ್ಯಾಪಾರವನ್ನು ನಡೆಸುತ್ತಾ, ತಮ್ಮ ದುಡಿಮೆಯ ಸ್ವಲ್ಪ ಪ್ರಮಾಣವಾದರೂ ದಾನ-ಧರ್ಮ ಮಾಡುವ ಪ್ರವೃತ್ತಿಯನ್ನು ಹೊಂದಿದ್ದಾರೆ. ಹಾಗೂ ಸಮಾಜದ ಆಗು-ಹೋಗುಗಳಿಗೆ ಸ್ಪಂದಿಸುವ ಮನೋಭಾವನೆಯನ್ನು ಹೊಂದಿದ್ದಾರೆ. ಆರ್ಯವೈಶ್ಯ ಸಮುದಾಯ ನಾಡಿನ ಆರ್ಥಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಇದರ ಜೊತೆಗೆ ಸಾಮಾಜಿಕ, ಆಧ್ಯಾತ್ಮಿಕ, ಧಾರ್ಮಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ನಗರದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರೂ ಈ ಸಮುದಾಯದ ಪಾಲು ಪ್ರಮುಖವಾಗಿರುತ್ತದೆ. ರಾಜ್ಯಲ್ಲೇ ಪ್ರಪ್ರಥಮ ಎಂಬಂತೆ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುವ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಉಚಿತವಾಗಿ ನೀಡುವುದರಲ್ಲಿ ಆರ್ಯವೈಶ್ಯ ಸಮಾಜದ ದಾನಿಗಳ ಪಾತ್ರ ಅಮೂಲ್ಯವಾಗಿದೆ. 

ಆರ್ಯವೈಶ್ಯ ಜನಾಂಗದ ಕುಲದೇವತೆ ವಾಸವಿ. ವಾಸವಿಯ ನೆಲೆಬೀಡು ಆಂಧ್ರದ ಪಶ್ಚಿಮ ಗೋದಾವರಿ ಭಾಗದ ಪೆನುಗೊಂಡ, ಈ ಪುಣ್ಯ ಕ್ಷೇತ್ರ ದೇಶದ ವಿವಿಧ ಭಾಗಗಳಲ್ಲಿರುವ ವೈಶ್ಯ ಸಮುದಾಯದ ಶ್ರೀಕ್ಷೇತ್ರವಾಗಿದೆ.

ವೈಶ್ಯರು ಪ್ರತಿ ವರ್ಷವೂ ವಾಸವಿ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ದೇಶಾದ್ಯಂತ ಆಚರಿಸುತ್ತಾ ಬಂದಿದ್ದಾರೆ. ಇಲ್ಲಿ ವಾಸವಿ ಜಯಂತಿಯ ಆಚರಣೆಯ ಸಂದರ್ಭದಲ್ಲಿ ಯಾವುದೇ ಬಡವ-ಶ್ರೀಮಂತ ಎಂಬ ಬೇದ-ಭಾವವಿಲ್ಲದೆ ವಾಸವಿ ಮಾತೆಯ ಪೂಜಾ ಕೈಂಕರ್ಯದಲ್ಲಿ ಸಾಮೂಹಿಕವಾಗಿ ಭಾಗವಹಿಸುತ್ತಾರೆ. ವಾಸವಿ ಜಯಂತಿಯ ವಿಶೇಷವೆಂದರೆ ಮನೆಗಳಲ್ಲಿ ಹಬ್ಬವನ್ನು ಆಚರಿಸದೇ ದೇವಸ್ಥಾನಗಳಲ್ಲಿ ಸಾಮೂಹಿಕವಾಗಿ ಭಾಗವಹಿಸುವುದರ ಮೂಲಕ ಆಚರಿಸಲಾಗುತ್ತದೆ. ವಾಸವಿ ಜಯಂತಿಯ ಹಿಂದಿನ ದಿನ ಅಮ್ಮನವರಿಗೆ ಕ್ಷೀರಾಭಿಷೇಕ ನಡೆಯುತ್ತದೆ. ಜಯಂತಿಯ ಬೆಳಿಗ್ಗೆ ಫಲಾಮೃತ ಅಭಿಷೇಕ, ಅಲಂಕೃತ ಅಮ್ಮನವರ ದರ್ಶನದ ನಂತರ ಅಕ್ಕಿ ಹಿಟ್ಟಿನಿಂದ ತಯಾರಿಸಲ್ಪಟ್ಟ ತಂಬಿಟ್ಟಿನ ಆರತಿಯನ್ನು ವಾಸವಿ ಮಾತೆಗೆ ಅರ್ಪಿಸುತ್ತಾರೆ. ನಂತರ ವಾಸವಿ ಮೂಲ ಮಂತ್ರ ಹೋಮ, ತುಲಾಭಾರ ಸೇವೆ, ಪೂರ್ಣಾಹುತಿಯ ನಂತರ ಮಹಾಮಂಗಳಾರತಿ ನಂತರ ಸಾಮೂಹಿಕ ಊಟದ ವ್ಯವಸ್ಥೆ ಇರುತ್ತದೆ. ಇದರಲ್ಲಿ ಎಲ್ಲರೂ ಭಾಗವಹಿಸುವುದು ವಿಶೇಷ. ಸಂಜೆ ರಾಜ ಬೀದಿಗಳಲ್ಲಿ ಅಮ್ಮನವರ ಉತ್ಸವ ನಡೆಯುತ್ತದೆ. ಹೀಗೆ ವಾಸವಿ ಜಯಂತಿಯನ್ನು ಆರ್ಯವೈಶ್ಯ ಸಮಾಜ ಶ್ರದ್ಧಾ-ಭಕ್ತಿ ಯಿಂದ ಆಚರಿಸುತ್ತದೆ. 

ಹಿನ್ನೆಲೆ: ಪಾರ್ವತಿಯ ಪ್ರತಿರೂಪವಾದ ವಾಸವಿಯ ಹಿನ್ನೆಲೆ ಅತ್ಯಂತ ಸ್ವಾರಸ್ಯಕರವಾಗಿದೆ. ಪುರಾಣ ಕಾಲದಲ್ಲಿ ವಿಷ್ಣುವರ್ಧನ ಎಂಬ ರಾಜ ನಾಡನ್ನು ಆಳುತ್ತಿದ್ದನು. ಈ ರಾಜನ ಅಡಿಯಲ್ಲಿ ವೈಶ್ಯ ಸಮುದಾಯಕ್ಕೆ ಸೇರಿದ ಕುಸುಮ ಶ್ರೇಷ್ಠಿ ಸಾಮಂತನಾಗಿ ಆಳ್ವಿಕೆ ಮಾಡುತ್ತಿದ್ದನು. ಕುಸುಮ ಶ್ರೇಷ್ಠಿ ಮತ್ತು ಈತನ ಪತ್ನಿ ಕುಸುಮಾಂಭಾಗೆ ಅವಳಿ ಮಕ್ಕಳು. ಅವರಲ್ಲಿ ಒಬ್ಬಳು ವಾಸವಿ ಮತ್ತು ಸಹೋದರ ವಿರೂಪಾಕ್ಷ.

ಹುಟ್ಟಿನಿಂದಲೂ ಅತ್ಯಂತ ಸುಂದರಿಯೂ ಹಾಗೂ ಕೌಶಲ್ಯವತಿಯೂ ಆಗಿ ಬೆಳೆದ ವಾಸವಿ ತಾರುಣ್ಯಕ್ಕೆ ಕಾಲಿಡುವ ವೇಳೆ ನೃತ್ಯ, ಗಾಯನ ಸೇರಿದಂತೆ ಹಲವು ವಿದ್ಯೆಗಳಲ್ಲಿ ಪಾರಂಗತಳಾಗಿದ್ದಳು. ಇದಕ್ಕೆ ಮುಕುಟವಿಟ್ಟಂತೆ ಅನುಪಮ ಸುಂದರಿಯಾಗಿದ್ದಳು.

ಒಂದು ದಿನ ವಾಸವಿಯ ನೃತ್ಯ ಏರ್ಪಾಟಾಗಿತ್ತು. ನೆರೆದಿದ್ದ ಜನಸ್ತೋಮ ಮೈಯೆಲ್ಲಾ ಕಿವಿಯಾಗಿ ನೃತ್ಯವನ್ನು ನೋಡುತ್ತಿದ್ದರು. ಆ ಚಲುವೆಗೆ ನೃತ್ಯ - ಗಾಯನವೂ ಬೆರೆತು ಹೊಸತೊಂದು ದೇವೆತೆ ಸೃಷ್ಠಿಯಾಗಿದೆ ಎಂಬ ಸೊಗಸು ಅಲ್ಲಿ ಮೇಳೈಸುತ್ತಿತ್ತು. ಈ ವೇಳೆಗೆ ಸರಿಯಾಗಿ ಕಾಮಾಂಧನಾದ ರಾಜ ವಿಷ್ಣುವರ್ಧನ ಆ ಸ್ಥಳಕ್ಕೆ ಆಗಮಿಸಿ ವಾಸವಿಯ ನೃತ್ಯ - ಗಾಯನ ಎಲ್ಲಕ್ಕಿಂತ ಮಿಗಿಲಾಗಿ ಆಕೆಯ ಚೆಲುವು ಆತನನ್ನು ದಿಗ್ಮೂಢರನ್ನಾಗಿಸಿತು. ವಾಸವಿಯ ಚೆಲುವು ಮತ್ತು ಪ್ರತಿಭೆಗೆ ಮಾರುಹೋದ ವಿಷ್ಣುವರ್ಧನ ಅತ್ಯಂತ ವಿನಯದಿಂದಲೇ ತನ್ನ ಸಾಮಂತರಾಗಿದ್ದ ಕುಸುಮ ಶ್ರೇಷ್ಠಿ ದಂಪತಿಗಳನ್ನು ಕುರಿತು ತಮ್ಮ ಮಗಳನ್ನು ನೋಡಿ ನಾನು ಮೋಹಿತನಾಗಿದ್ದೇನೆ. ತಮ್ಮ ಮಗಳನ್ನು ವಿವಾಹ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತಾನೆ.

ರಾಜ ವಿಷ್ಣುವರ್ಧನನ ಮಾತಿನಿಂದ ಕಂಗಾಲಾದ ವಾಸವಿಯ ಪೋಷಕರು ತಮ್ಮ ಮಗಳನ್ನು ರಾಜನಿಗೆ ಕೊಟ್ಟು ವಿವಾಹ ಮಾಡಲಾಗದೆ ಮತ್ತೊಂದೆಡೆ ರಾಜನ ಕೋರಿಕೆಯನ್ನು ಒಂದೇ ಮಾತಿಗೆ ತಿರಸ್ಕರಿಸಲಾಗದೆ ಪೇಚಿಗೆ ಸಿಲುಕುತ್ತಾರೆ. ಈ ವೇಳೆಗಾಗಲೇ ಮೋಹಿತನಾಗಿದ್ದ ರಾಜನಿಗೆ ತಮ್ಮ ಮಗಳನ್ನು ಕೊಟ್ಟು ವಿವಾಹ ಮಾಡುವುದು ಪೋಷಕರಿಗೆ ಇಷ್ಟವಿರಲಿಲ್ಲ. ಅಲ್ಲದೆ, ರಾಜ ಮತ್ತು ತಮ್ಮ ಮಗಳ ನಡುವಿನ ವಯಸ್ಸಿನ ಅಂತರವೂ ಹೆಚ್ಚಾಗಿತ್ತು. ಇಂತಹ ಹಲವು ವಿರೋಧಾಭಾಸದ ಸಂಗತಿಗಳು ಪೋಷಕರ ತಳಮಳಕ್ಕೆ ಕಾರಣವಾಗಿದ್ದವು. ಹೀಗೆ ರಾಜಾ ವಿಷ್ಣುವರ್ಧನನನ್ನು ವಿವಾಹವಾಗಲು ಒಪ್ಪಿಗೆ ನೀಡದ ವಾಸವಿ ಮತ್ತು ಆಕೆಯ ಪೋಷಕರು ವಿಷ್ಣುವರ್ಧನನ ಅವಕೃಪೆಗೆ ಒಳಗಾಗುತ್ತಾರೆ.

ತಂದೆ-ತಾಯಿಯರ ಈ ತೊಳಲಾಟವನ್ನು ನೋಡಲಾರದೆ ವಾಸವಿ ತಂದೆ-ತಾಯಿಯರನ್ನು ಸಂತೈಸುತ್ತಾಳೆ. ನಾನು ಒಂದು ನಿರ್ಧಾರವನ್ನು ಕೈಗೊಳ್ಳಲಿದ್ದು, ಈ ನಿರ್ಧಾರದಿಂದ ನಾನು ರಾಜನನ್ನು ವಿವಾಹವಾಗುವ ಪ್ರಮೇಯವೇ ಬಾರದು ಹಾಗೂ ನಿಮ್ಮ ಭಾವನೆಗೂ ಧಕ್ಕೆಯಾಗಲಾರದೆಂದು ತಿಳಿಸುತ್ತಾಳೆ. ವಾಸವಿ ಮತ್ತು ಆಕೆಯ ಪೋಷಕರು ರಾಜನಿಗೆ ಮಗಳನ್ನು ಕೊಟ್ಟು ವಿವಾಹ ಮಾಡಲು ನಿರಾಕಾರ ಭಾವ ಹೊಂದಿದ್ದಾರೆ ಎಂಬ ಕಾರಣದಿಂದ ವೈಶ್ಯ ಕುಲದ 714 ಗೋತ್ರದವರ ಪೈಕಿ 612 ಗೋತ್ರದವರು ಕೂಡ ವಾಸವಿಯ ಪೋಷಕರಿಂದ ದೂರ ಸರಿದು ರಾಜ ವಿಷ್ಣುವರ್ಧನನ ಕಡೆ ಸೇರುತ್ತಾರೆ. ಉಳಿದು 102 ಗೋತ್ರದವರು ವೈಶ್ಯ ಕುಲ ಗುರುಗಳಾದ ಭಾಸ್ಕರಾಚಾರ್ಯರೊಡನೆ ಸಮಾಲೋಚಿಸಿ ಅವರ ಮಾರ್ಗದರ್ಶನದಲ್ಲಿ ಒಂದುಗೂಡುತ್ತಾರೆ.

ಈ ಸಂದರ್ಭದಲ್ಲಿ ಕುಲಗುರುಗಳ ಮಾರ್ಗದರ್ಶನದಲ್ಲಿ ನಡೆದ ಯಾಗದಲ್ಲಿ 102+1 ಅಗ್ನಿಕುಂಡಗಳ ಪ್ರತಿಷ್ಠಾಪನೆ ಯಾಗಿರುತ್ತದೆ. ರಾಜನ ನಿರೀಕ್ಷೆ ಮತ್ತು ಮನೋಪೇಕ್ಷೆಗಳಿಗೆ ಸ್ವಾಭಿಮಾನ ತೊರೆದು ಅರ್ಪಿಸಿಕೊಳ್ಳಲಾಗದೇ ತಂದೆ-ತಾಯಿಯರ ಭಾವನೆಗೂ ಧಕ್ಕೆಯಾಗಲು ಬಯಸದ ವಾಸವಿ ಅಗ್ನಿಕುಂಡ ಪ್ರವೇಶಿಸಿ ಆತ್ಮಾರ್ಪಣೆ ಮಾಡಿಕೊಳ್ಳುತ್ತಾಳೆ. ಹೀಗೆ ಅಗ್ನಿ ಪ್ರವೇಶಿಸಿ ಆತ್ಮಾರ್ಪಣೆ ಮಾಡಿಕೊಂಡ ವಾಸವಿಯನ್ನು ತಮ್ಮ ಕುಲದೇವಿಯಾಗಿ ಕನ್ನಿಕಾ ಪರಮೇಶ್ವರಿ ಎಂಬ ಹೆಸರಿನಿಂದ ಪೂಜಿಸುತ್ತಾ ಬಂದಿದ್ದಾರೆ.