ಕವಿ, ಕತೆಗಾರ ಗುರುಪ್ರಸಾದ್ ಕಂಟಲಗೆರೆಯ ‘ಟ್ರಂಕು ತಟ್ಟೆ’

ಅಪ್ಪನ ಕಾಲುಗಳು ಭಾರವಾಗಿದ್ದವು. ನಾವಿಬ್ಬರೂ ಅಪ್ಪನ ಕೈಗಳನ್ನು ಬಿಟ್ಟಿರಲಿಲ್ಲ. ಹಾಸ್ಟೆಲ್‌ನಿಂದ ಸ್ವಲ್ಪ ದೂರದವರೆಗೆ ಅಪ್ಪನ ಜೊತೆ ಹೆಜ್ಜೆ ಹಾಕಿದ ನಾವು ಈಗ ಅಪ್ಪನ ಬೆರಳುಗಳನ್ನು ಬಿಡಬೇಕಾಗಿ ಬಂತು. ನಾವು ಅಲ್ಲೇ ನಿಂತೆವು. ಅಪ್ಪನ ಹೆಜ್ಜೆಗಳು ಮುಂದುವರಿದವು. ಆಡಲು ನಮಗೆ ಸ್ನೇಹಿತರು ಸಿಕ್ಕಿದ್ದರಿಂದ ಅಪ್ಪ ಬಿಟ್ಟು ಹೋದದ್ದರ ಘಾಸಿ ಸ್ವಲ್ಪ ಕಡಿಮೆಯಾದಂತಿತ್ತು. ಅಪ್ಪ ಹಿಂದೆ ತಿರುಗಿ ತಿರುಗಿ ನೋಡುತ್ತಾ ಹೆಜ್ಜೆ ಕಿತ್ತಿಡುತ್ತಿತ್ತು. ಅಪ್ಪನ ಕಣ್ಣಿನಲ್ಲಿ ಕಣ್ಣೀರು ಜಿನುಗುತ್ತಿರುವಂತೆ ಭಾಸವಾಗುತಿತ್ತು.

ಕವಿ, ಕತೆಗಾರ ಗುರುಪ್ರಸಾದ್ ಕಂಟಲಗೆರೆಯ ‘ಟ್ರಂಕು ತಟ್ಟೆ’


ನಾನು ಮತ್ತು ನನ್ನ ತಮ್ಮ ನಮ್ಮೂರಿನ ಸರ್ಕಾರಿ ಶಾಲೆಯಲ್ಲಿ ಐದನೇ ಕ್ಲಾಸ್ ಮುಗಿಸಿದ ತಕ್ಷಣವೇ ಮಿಡ್ಲಿಸ್ಕೂಲ್ ಓದಲು ತಿಪಟೂರಿನ ಎಸ್.ಸಿ.ಎಸ್.ಟಿ. ಹಾಸ್ಟೆಲ್‌ಗೆ ಹೋಗಬೇಕಾಗಿ ಬಂತು. ಅದಕ್ಕೆ ಒಂದು ಬಲವಾದ ಕಾರಣವೂ ಇತ್ತು. ನಮ್ಮ ಚಿಕ್ಕಮ್ಮನ(ಅಮ್ಮನ ತಂಗಿ) ಮೂರು ಜನ ಮಕ್ಕಳೂ ಅಲ್ಲೇ ಓದುತ್ತಿದ್ದರು. ಚಿಕ್ಕಪ್ಪನೆಂದರೆ ಅಂತಿಂಥ ಚಿಕ್ಕಪ್ಪನಲ್ಲ! ನಮ್ಮ ಕುಟುಂಬದ ಪ್ರಥಮ ಸರ್ಕಾರಿ ನೌಕರರಾಗಿದ್ದವರು. ತಿಪಟೂರಿನ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು ಇಲಾಖೆ ಹಾಗೂ ಕುಟುಂಬದೊಳಗೆ ಗೌರವಾನ್ವಿತರೆನಿಸಿದ್ದು, ಅದರಂತೆ ನಡೆದುಕೊಳ್ಳುತ್ತಿದ್ದರು. ಅಂಥವರ ಮೂರು ಜನ ಗಂಡು ಮಕ್ಕಳು ಹಾಸ್ಟೆಲ್‌ನಲ್ಲಿ ಓದುತ್ತಿದ್ದುದರ ಜೊತೆಗೆ ಓದಿನಲ್ಲೂ ಮುಂದಿದ್ದರು. ಇದು ಸಾಮಾನ್ಯವಾಗೇ ಕುಟುಂಬದ ಇತರೆ ಸದಸ್ಯರಿಗೂ ತಮ್ಮ ಮಕ್ಕಳನ್ನು ಹಾಸ್ಟೆಲ್‌ನಲ್ಲಿ ಬಿಟ್ಟು ಓದಿಸುವುದರ ಕಡೆಗೆ ಆಸಕ್ತಿ ತರಿಸಿತ್ತು. ಆ ದಿನಗಳಲ್ಲಿ ತುಮಕೂರು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾಗಿದ್ದ ನಮ್ಮ ಅಮ್ಮನ ಅಣ್ಣ(ಮಾವ) ಕುಂದೂರು ತಿಮ್ಮಯ್ಯ ತಮ್ಮ ಮಕ್ಕಳಿಬ್ಬರನ್ನೂ ಹಾಸ್ಟೆಲ್‌ಗೇ ಸೇರಿಸಿದ್ದರು. ಇನ್ನು ಮೂರನೆಯದಾಗಿ ಆರ್ಥಿಕವಾಗಿ ಅಷ್ಟೇನು ಸುಸ್ಥಿತಿಯಲ್ಲಿಲ್ಲದ ರೈತಾಪಿ ಹಿನ್ನೆಲೆಯ ನಮ್ಮ ಅಪ್ಪ-ಅಮ್ಮನಿಗೆ ಕುಟುಂಬದೊಳಗೆ ವಿದ್ಯಾವಂತರೆನಿಸಿದ್ದ ಮಾವ ಮತ್ತು ಚಿಕ್ಕಪ್ಪನವರನ್ನು ಅನುಸರಿಸುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ.


ಅಪ್ಪ ಒಂದು ದಿನ ನನ್ನನ್ನೂ ಮತ್ತು ನನ್ನ ತಮ್ಮ ಜೇಪಿಯನ್ನು ಎಡಕ್ಕೆ-ಬಲಕ್ಕೆ ಹಾಕಿಕೊಂಡು, ತಂದಿದ್ದ ಬಟ್ಟೆ ಬರೆಯ ಲಗೇಜನ್ನು ಹೊತ್ತುಕೊಂಡು ತಿಪಟೂರು ಬಸ್‌ಸ್ಟಾಂಡ್‌ನಲ್ಲಿ ಇಳಿದು, ರೈಲ್ವೆ ಸ್ಟೇಷನ್ ರೋಡಿನಲ್ಲಿದ್ದ ಹಾಸ್ಟೆಲ್ ಕಡೆಗೆ ಮುಖ ಮಾಡಿತು. ರೈಲ್ವೆ ಸ್ಟೇಷನ್ ರೋಡಿನ ಎಡಗಡೆಗಿದ್ದ ತಿಪಟೂರಿನ ಸರ್ಕಾರಿ ಶಾಲೆಗೆ ಊರ ಶಾಲೆಯಿಂದ ಪಡೆದು ತಂದಿದ್ದ ಟೀಸಿಯನ್ನು ಕೊಟ್ಟು ನನ್ನನ್ನು ಏಳನೇ ತರಗತಿಗೆ, ತಮ್ಮನನ್ನು ಐದನೇ ತರಗತಿಗೆ ಅಡ್ಮಿಷನ್ ಮಾಡಿಸಿತು. ನಂತರ ಹಾಸ್ಟೆಲ್‌ಗೆ ಸೇರಿಸಿ ಬರುವುದಾಗಿ ತರಗತಿ ಶಿಕ್ಷಕರಿಗೆ ಹೇಳಿ ಮಾವಿನ ತೋಪಿನಲ್ಲಿದ್ದ ಹಾಸ್ಟೆಲ್ ದಿಕ್ಕಿಗೆ ಕರೆದುಕೊಂಡು ಹೊರಟಿತು. ದಾರಿಯ ಎರಡೂ ಪಕ್ಕೆಯಲ್ಲಿ ಶೇಟುಗಳ ಭವ್ಯವಾದ ಬಂಗಲೆಗಳಿದ್ದವು. ಅವುಗಳನ್ನು ದಾಟಿದಾಗ ಮಾವಿನತೋಪು ಸಿಗುತ್ತಿತ್ತು. ಮಾವಿನತೋಪು ಎಂಬ ಹೆಸರು ಏಕೆ ಬಂತೋ? ಆಗಂತೂ ಅಲ್ಲಿ ಯಾವ ಮಾವು ಇರಲಿಲ್ಲ, ಮಾಜಿ ಎಮ್.ಎಲ್.ಎ. ಗಂಗಾಧರಪ್ಪನವರ ಹಳೆಯ ದನದ ಕೊಟ್ಟಿಗೆಯನ್ನು ಸಮಾಜ ಕಲ್ಯಾಣ ಇಲಾಖೆಯವರು ಬಾಡಿಗೆ ಪಡೆದು ಅದರಲ್ಲಿ ಸುಮಾರು ಐವತ್ತು ಮೆಟ್ರಿಕ್ ಪೂರ್ವ ಎಸ್.ಸಿ.ಎಸ್.ಟಿ ಮಕ್ಕಳನ್ನು ಸಾಕುತ್ತಿದ್ದರು. ಇದನ್ನು ಸೋಸಿಯಲ್ ಹಾಸ್ಟೆಲ್ ಎಂದೂ ಪಕ್ಕದ ಇನ್ನೊಂದು ಗೋಡೌನಿನಲ್ಲಿದ್ದವರನ್ನ ಬಿ.ಸಿ.ಎಂ. ಹಾಸ್ಟೆಲ್‌ನವರೆಂದು ಕರೆಯುತ್ತಿದ್ದರು.


ಹೈಸ್ಕೂಲ್ ಹಾಸ್ಟೆಲ್‌ಗಳು ಸಿಗುವ ಮುನ್ನವೆ ಬಿಸಿಎಂ ಕಾಲೇಜ್ ಹಾಸ್ಟೆಲ್ ಹುಡುಗರ ರೂಮುಗಳು ಸಿಗುತ್ತಿದ್ದವು. ಎದುರು ಬದುರಿಗಿದ್ದ ಹತ್ತಾರು ರೂಮುಗಳಿಂದಾಗಿ ಮಧ್ಯದಲ್ಲಿ ಸೊಂಪಲು ಉಂಟಾಗಿತ್ತು. ಆ ಸೊಂಪಲ ಹಾದಿಯಲ್ಲಿ ಮುಂದೆ ಸಾಗಿದರೆ ಅಲ್ಲಿ ಮೊದಲು ಸಿಗುತ್ತಿದುದ್ದೇ ಸೋಸಿಯಲ್ ಹಾಸ್ಟೆಲ್. ಹಳೆಯ ಸಿನಿಮಾ ಟೆಂಟಿನAತೆ ಉದ್ದವಾಗಿದ್ದ ಮಾಜಿ ದನದ ಕೊಟ್ಟಿಗೆಯ ಬೃಹತ್ ಬಾಗಿಲಿನ ಮೇಲೆ ಅರೆ ಬರೆ ಅಳಿಸಿಹೋದ ಅಕ್ಷರಗಳಿಂದ ವಕ್ರವಾಗಿ ಸಮಾಜ ಕಲ್ಯಾಣ ಇಲಾಖೆಯ ಬೋರ್ಡ್ ನೇತಾಡುತ್ತಿತ್ತು. ಅದನ್ನು ನೋಡಿ ಇದೇ ಇರಬೇಕೆಂದು ಅಪ್ಪ ನಮ್ಮನ್ನು ಮೆಟ್ಟಿಲು ಹತ್ತಿಸಿಕೊಂಡು ಒಳಗೆ ಕರೆದುಕೊಂಡು ಹೋಯಿತು.


ಒಳಗಡೆ ಪ್ರವೇಶ ಪಡೆಯುತ್ತಿದ್ದಂತೆ ಸುಮಾರು ಐವತ್ತು ಅಡಿ ದೂರದಷ್ಟು ವ್ಯಾಪಿಸಿದ್ದ ಕೋಣೆಯ ಒಳಗೆ ಗವ್‌ಗತ್ತಲು ಕವಿದಿತ್ತು. ಎರಡು ಕಡೆ ಗೋಡೆಗೆ ಆತುಕೊಂಡಂತೆ ಇದ್ದ ಒಂದೇ ಅಳತೆಯ ಸಿಲ್ವರ್ ಟ್ರಂಕ್‌ಗಳು ತಮ್ಮ ಬಣ್ಣದ ಕಾರಣಕ್ಕೆ ಅಸ್ಪಷ್ಟವಾಗಿ ಕಾಣುತ್ತಿದ್ದವು. ಆಕಡೆ ಈ-ಕಡೆ ನೋಡಿಕೊಂಡು ಮುಂದೆ ಸಾಗಲಾಗಿ ಕೊಠಡಿ ಅಂತ್ಯಗೊಂಡಂತಿದ್ದ ಉದ್ದನೆಯ ಗೋಡೆಯಲ್ಲಿದ್ದ ಪುಟ್ಟ ಬಾಗಿಲು ತೆರೆದಿತ್ತು. ಆ ಬಾಗಿಲ ಒಳಗೊಂದು ರೂಮು, ಆ ರೂಮಿನ ಆಚೆಬದಿಗಿದ್ದ ಕಿಟಕಿಯಿಂದ ಬರುತ್ತಿದ್ದ ಬೆಳಕು ಬಾಗಿಲಿನಿಂದ ಹೊರಕ್ಕೆ ಬಿದ್ದಿತ್ತು. ರೂಮಿನ ತುಂಬ ಹೊಗೆ ಕವಿದುಕೊಂಡು ಬುಸುಗುಡುತ್ತಿತ್ತು. ಕಿಟಕಿಯಿಂದ ಬರುತ್ತಿದ್ದ ಬೆಳಕಿನೊಳಗೆ ಬೆರೆತಿದ್ದ ಹೊಗೆ ಸುರುಳಿಯಂತೆ ಮೇಲೇರುತ್ತಿತ್ತು. ಅಪ್ಪನು ಆ ಹೊಗೆ ಕವಿದಿದ್ದ ಆಫೀಸು ರೂಮಿನೊಳಗೆ ಹೋಗುವ ಮುಂಚೆ ಎತ್ತಿ ಕಟ್ಟಿದ್ದ ಬಿಳಿಲುಂಗಿಯನ್ನು ಕೆಳಗಿಳಿಸಿಕೊಂಡು ಒಳನಡೆಯಿತು. ನಾವು ಅಪ್ಪನ ಕೈ ಬೆರಳನ್ನು ಹಿಡಿದುಕೊಂಡೇ ಅಳುಕಿನಿಂದ ಹಿಂಬಾಲಿಸಿ ಲುಂಗಿ ಸಂದಿಯಲ್ಲಿ ಮುಖ ಇಟ್ಟು ಹೊಗೆ ಬಿಡುತ್ತಿದ್ದ ವ್ಯಕ್ತಿಯನ್ನು ನೋಡಿದೆವು.


ಅಲ್ಲಿ ಎಣ್ಣೆಗೆಂಪು ಬಣ್ಣದ ದುಂಡು ಮುಖದ ವ್ಯಕ್ತಿಯೊಂದು ಕೂತಿದ್ದು ಅದು ಕೂದಲುದುರಿರುವ ತಲೆಗೆ ಕ್ರಾಪ್ ತೆಗೆದಿತ್ತು. ತನ್ನ ಅಜಾನುಬಾಹು ದೇಹ ತೋರಲೇನೋ ಎಂಬAತ ಸಫಾರಿ ಅಂಗಿಯ ಮೊದಲೆರೆಡು ಗುಂಡಿ ಬಿಚ್ಚಿಕೊಂಡು ತೀಕ್ಷ÷್ಣ ಕಣ್ಣಿನಿಂದಲೂ ತಿವಿಯುವ ಮೂಗಿನಿಂದಲೂ ಬೀಡಿ ಹೊಗೆ ಬಿಡುತ್ತಿತ್ತು. ವೈರಿನ ಕುರ್ಚಿಯ ಮೇಲೆ ಕೂತು ನಮ್ಮನ್ನು ಸೀರಿಯಸ್ಸಾಗಿ ನೋಡಿದ ಆ ವ್ಯಕ್ತಿ ರಿಟೈರ್ಡ್ಮೆಂಟ್‌ಗೆ ಇನ್ನ ನಾಲೈದು ವರ್ಷ ಬಾಕಿ ಉಳಿಸಿಕೊಂಡಿದ್ದ ವಾರ್ಡನ್ ನಾಗರಾಜಪ್ಪನವರಾಗಿದ್ದರು.


ಆ ದಿನಗಳಲ್ಲಿ ಈಗಿನಂತೆ ಹಾಸ್ಟೆಲ್ ಸೀಟ್‌ಗಾಗಿ ಅರ್ಜಿ ಹಾಕುವುದು ಸೀಟ್ ಅನೌನ್ಸ್ ಮಾಡುವುದು ಇನ್ನಿತರ ಪದ್ಧತಿಗಳು ಇರಲಿಲ್ಲ. ವಾರ್ಡನ್ ಇಲಾಖೆ ನಿಗದಿಪಡಿಸಿದ ಸಂಖ್ಯೆಯನ್ನು ತಮ್ಮ ವಿವೇಚನೆಯನುಸಾರ ಭರ್ತಿ ಮಾಡಿಕೊಂಡು ಅದಕ್ಕೆ ಸ್ಕಾಲರ್ ಸ್ಯಾಂಕ್ಷನ್ ಮಾಡಿಸಿಕೊಳ್ಳುತ್ತಿದ್ದರು. ಅಪ್ಪ ತನ್ನ ಪರಂಪರೆಯನ್ನೆಲ್ಲ ಬಿಚ್ಚಿಟ್ಟ ನಂತರದಲ್ಲಿ ನಾಗರಾಜಪ್ಪನವರಿಗೆ ನಮಗೆ ನಿರಾಕರಿಸಲು ಸೀಟು ಸ್ಕೂಲಿನಲ್ಲಿ ದಾಖಲಾಗಿರುವುದನ್ನು ಕಾರಣವಿರಲಿಲ್ಲ. ಖಾತ್ರಿ ಮಾಡಿಕೊಂಡ ನಂತರ ನಮ್ಮ ಹೆಸರುಗಳನ್ನು ದಾಖಲಾತಿ ಪುಸ್ತಕದಲ್ಲಿ ನಮೂದಿಸಿಕೊಂಡರು.


ಆಫೀಸ್ ರೂಮಿನ ಒಂದು ಮೂಲೆಯಲ್ಲಿ ನಜ್ಜುಗುಜ್ಜಾಗಿ ಹೋಗಿದ್ದ ಟ್ರಂಕ್‌ಗಳು ಒಂದರ ಮೇಲೊಂದು ಸಾಕಾದವರಂತೆ ಬಿದ್ದುಕೊಂಡಿದ್ದವು. ಅದರ ಪಕ್ಕದಲ್ಲಿ ಮಾಸಿ ಚುಮ್ಟ್ಬವಾಗಿದ್ದ ಕಾರ್ಪೆಟ್, ಬೆಡ್‌ಶೀಟ್‌ಗಳು ಮುದುಡಿಕೊಂಡು ಮಲಗಿದ್ದವು. ಅವು ಎಸ್.ಎಸ್.ಎಲ್.ಸಿ. ಪಾಸಾಗಿಯೋ ಅಥವಾ ಫೇಲಾಗಿಯೋ ಹಾಸ್ಟೆಲ್ ತ್ಯಜಿಸಿ ಹೋಗಿದ್ದ ಸೀನಿಯರ್ ವಿದ್ಯಾರ್ಥಿಗಳು ತಾವು ಬಳಸಿದ ನಂತರ ವಾರ್ಡನ್‌ಗೆ ಸರೆಂಡರ್ ಮಾಡಿದ್ದ ಟ್ರಂಕು, ಕಾರ್ಪೆಟ್‌ಗಳು, ಅವುಗಳಲ್ಲಿ ಉತ್ತಮವಾದವುಗಳನ್ನು ಹಾಲಿ ಸೀನಿಯರ್ ವಿದ್ಯಾರ್ಥಿಗಳು ವರ್ಗಾಯಿಸಿಕೊಂಡು, ಯಾತಕ್ಕೂ ಬಾರದ ಕಟ್ಟ ಕಡೆಯವುಗಳನ್ನು ಹೊಸಬರಿಗಾಗಿ ಮೂಲೆಯಲ್ಲಿ ಜೋಡಿಸಿದ್ದರು.


ವಾರ್ಡನ್ ನಾಗರಾಜಪ್ಪನವರು ಅಪ್ಪನನ್ನು ಕುರಿತು ಅಲ್ಲಿರುವ ಎರಡು ಟ್ರಂಕ್‌ಗಳನ್ನು ಎಳೆದುಕೊಳ್ಳಯ್ಯ ಎಂದರು. ಅಪ್ಪ ಅದರಲ್ಲಿ ಪರವಾಗಿಲ್ಲ ಎನ್ನಬಹುದಾದ ಎರಡು ಟ್ರಂಕ್‌ಗಳನ್ನು ಹುಡುಕಿ ತೆಗೆದು ನಾಗರಾಜಪ್ಪನವರ ಮುಂದಿಟ್ಟಿತು. ಅವುಗಳಿಗೆ ಒದಗಿದ್ದ ದಯನೀಯ ಪರಿಸ್ಥಿತಿಯನ್ನು ಕಂಡ ನಾಗರಾಜಪ್ಪನವರು “ನೋಡಯ್ಯಾ ಟ್ರಂಕ್‌ಗಳು ಹಾಳಾಗಿ ಹೋಗಿವೆ, ಅರಳಿಕಟ್ಟೆತಕೆ ಹೋಗಿ ಎರಡನ್ನೂ ರಿಪೇರಿ ಮಾಡಿಸಿಕೊಂಡು ಬರಬೇಕು. ಬೆಡ್‌ಶೀಟ್‌ಗಳನ್ನು ಚೆನ್ನಾಗಿ ಒಗೆಸಿ ಕೊಡಬೇಕು” ಎಂದು ಅಪ್ಪನಿಗೆ ತಾಕೀತು ಮಾಡಿ, ಈಗ ಹುಡುಗರು ಶಾಲೆಗೆ ಹೋಗ್ಲಿ, ಸಂಜೆ ಬಂದಾಗ ಊಟಕ್ಕೆ ತಟ್ಟೆ ಕೊಡುವುದಾಗಿ ಹೇಳಿ ಕಳುಹಿಸಿದರು. ಅಪ್ಪ ಕೊಳೆತಂತಿದ್ದ ಎರಡು ಜೊತೆ ಬೆಡ್‌ಶೀಟ್ ಮತ್ತು ಕಾರ್ಪೆಟ್‌ಗಳನ್ನು ಟ್ರಂಕಿನ ಬಾಯಿ ತೆಗೆದು ಅದರೊಳಗಾಕಿಕೊಂಡು, ಒಂದರ ಮೇಲೊಂದರAತೆ ಎರಡೂ ಟ್ರಂಕುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಅರಳಿಕಟ್ಟೆಯ ದಾರಿ ಹಿಡಿಯಿತು. ನಾವು ಅಪ್ಪನನ್ನು ಹಿಂಬಾಲಿಸಿದೆವು.


ಅರಳಿಕಟ್ಟೆಯ ಬೀಗ ರಿಪೇರಿ ಮಾಡುವ ಬೀದಿಯಲ್ಲಿ ಅಪ್ಪ ಚೌಕಾಸಿ ಮಾಡಿ - ಎರಡೂ ಟ್ರಂಕುಗಳನ್ನು ರಿಪೇರಿ ಮಾಡಿಕೊಡಲು ಒಬ್ಬನನ್ನು ಒಪ್ಪಿಸಿತು. ಆತ ತಗ್ಗಿ ಹೋಗಿದ್ದ. ಟ್ರಂಕನ್ನು ಕೆಚ್ಚಿ ಬಡಿದು, ನೆಟ್ಟಗೆ ಮಾಡುವಾಗ ನಾವು ಬಿಟ್ಟ ಕಣ್ಣು ಬಿಟ್ಟಂತೆಯೇ ನೋಡುತ್ತಿದ್ದೆವು, ಅಪ್ಪ ಅದಕ್ಕೊಂದು ಚಿಲಕವನ್ನೂ ಹಾಕಿಸಿತು. ತಮ್ಮನದು ಹೊಸ ಚಿಲಕ, ನನಗೆ ಹಳೆಯದನ್ನೆ ರಿಪೇರಿ ಮಾಡಿಸಿತು, ಕೊನೆಗೆ ಸುಣ್ಣ ಕಾಯಿ ಡಬ್ಬಿಯಂತಹ ಎರಡು ಸಣ್ಣ ಬೀಗಗಳನ್ನು ಕೊಡಿಸಿತು. ಎರಡೂ ಟ್ರಂಕಿನ ಬೀಗವನ್ನು ಹಾಕಿ, ನೋಡಲು ಆನಂದವಾಗುತ್ತಿದ್ದ ಬೀಗದ ಸಿಬಿರುಗಳನ್ನು ಕೆಂಪು ದಾರದಿಂದ ಏರಿಸಿ ನಮ್ಮ ಕರಿ ಉಡುದಾರಕ್ಕೆ ಕಟ್ಟಿ ಚಡ್ಡಿಯ ಮುಂಭಾಗಕ್ಕೆ ಇಳಿ ಬಿಟ್ಟಿತು. ಪುನಃ ಅಪ್ಪ ಎರಡೂ ಟ್ರಂಕುಗಳನ್ನು ತಲೆ ಮೇಲೆ ಹೊತ್ತುಕೊಂಡು ಹಾಸ್ಟೆಲ್ ದಾರಿಯಲ್ಲಿ ಹೋಗುವಾಗ ನಾವು ನಮ್ಮ ಚಡ್ಡಿಯ ಮುಂದೆ ಬೀಗದ ಸಿಬಿರು ಆ ಕಡೆ ಈ ಕಡೆ ಲೋಲಾಕಿನಂತೆ ಅಲ್ಲಾಡುವುದನ್ನು ನೋಡಿಕೊಂಡು ಅಪ್ಪನನ್ನು ಹಿಂಬಾಲಿಸಿದವು. ಹಾಸ್ಟೆಲ್ ದಾರಿಯಲ್ಲೇ ಸ್ಕೂಲ್ ಸಿಕ್ಕಾಗ, ಗಂಟೆ ಅದಾಗಲೇ ಮೂರು ದಾಟಿತ್ತು. ಅಪ್ಪ ನಮ್ಮನ್ನು ಸ್ಕೂಲ್ ಮುಗಿಸಿಕೊಂಡು ಬರಲು ತಿಳಿಸಿ ಹಾಸ್ಟೆಲ್ ದಾರಿ ಹಿಡಿಯಿತು.

ನಾಲ್ಕೂವರೆಗೆ ಸ್ಕೂಲ್ ಬೆಲ್ ಹೊಡೆಯಿತು. ನಾವು ಇತರೆ ಮಕ್ಕಳೊಂದಿಗೆ ಬ್ಯಾಗ್ ನೇತಾಕಿಕೊಂಡು ಹೊರಬಂದಾಗ ಅಪ್ಪ ಸ್ಕೂಲ್ ಕಾಂಪೌಂಡಿನಲ್ಲೇ ನಮಗಾಗಿ ಕಾಯುತ್ತ ನಿಂತಿತ್ತು. ನಾವು ಅಪ್ಪನ ಬಳಿ ಹೋದವು, ಬೆಳಗ್ಗೆ ಮನೆಯಿಂದ ಬರುವಾಗ ಇದ್ದ ಹರ್ಷ ಈಗ ಇಲ್ಲದಾಗಿತ್ತು. ಮತ್ತೆ ಅಪ್ಪನ ಕೈಹಿಡಿದುಕೊಂಡು ಹಾಸ್ಟೆಲ್‌ಗೆ ಹೋದೆವು. ಹಾಸ್ಟೆಲ್ ಬಾಗಿಲು ತೆರೆದೇ ಇತ್ತು. ಆಗ ತಾನೆ ಎಲ್ಲ ವಿದ್ಯಾರ್ಥಿಗಳು ಅವರವರ ಸ್ಕೂಲು ಮುಗಿಸಿಕೊಂಡು ಪುಸ್ತಕದ ಚೀಲ ನೇತಾಕಿಕೊಂಡು ಒಳಬರುತ್ತಿದ್ದರು. ವಿಧವಿಧವಾದ ಯೂನಿಫಾರ್ಮ್ ಹಾಕಿಕೊಂಡು ಆಡುತ್ತ, ಕುಣಿಯುತ್ತ ಬರುತ್ತಿರುವುದನ್ನು ಕಂಡು ಅವರೆಲ್ಲಾ ಜಾಲಿಯಾಗಿದ್ದಾರೆ ಎನಿಸಿತು. ಬಂದವರೇ ಆ ಕಡೆ ಈ ಕಡೆ ಗೋಡೆ ಪಕ್ಕದಲ್ಲಿ ಸಾಲಾಗಿ ಅಲುಗಾಡದಂತೆ ಜೋಡಿಸಿದ್ದ ಟ್ರಂಕುಗಳ ಮುಂದೆ ಕುಳಿತುಕೊಳ್ಳುತ್ತಿದ್ದರು. ನಮ್ಮನ್ನು ಕಂಡವರೇ ಅಲ್ಲೇ ಎಲ್ಲೋ ಇದ್ದ ನಮ್ಮ ಚಿಕ್ಕಪ್ಪನ ಮಕ್ಕಳಾದ ಕಿರಣ್, ರೋಹಿತ್ ಮಾವನ ಮಕ್ಕಳಾದ ಭಗತ್‌ಸಿಂಗ್, ಮುರಳಿ ಓಡಿ ಬಂದರು. ಊರಿನ ಹಬ್ಬ, ಜಾತ್ರೆಗಳಲ್ಲಿ ಮಾತ್ರ ಭೇಟಿಯಾಗಿ ಸ್ವಚ್ಛಂದವಾಗಿ ಆಡಿಕೊಳ್ಳುತ್ತಿದ್ದ ನಾವು ಈಗ ಹಾಸ್ಟೆಲ್‌ನಲ್ಲಿ ಸಂಧಿಸಿದ್ದರಿಂದಾಗಿ ನಮಗೆ ಒಳಗೊಳಗೆ ಖುಷಿಯಾಗುತ್ತಿತ್ತು. ಪರಸ್ಪರ ಮುಟ್ಟಿಕೊಂಡು ರಮಿಸಿಕೊಂಡೆವು. ನನ್ನ ಮತ್ತು ತಮ್ಮನ ಟ್ರಂಕುಗಳಿಗೆ ಅವರ ಮಧ್ಯದಲ್ಲೇ ಜಾಗ ಮಾಡಿಕೊಟ್ಟರು. ನಾವು ನಮ್ಮ ನೆಂಟರ ಹುಡುಗರ ಜೊತೆ ಹೊಂದಿಕೊಂಡದ್ದನ್ನು ಕಂಡು ಅಪ್ಪನಿಗೆ ಸಮಾಧಾನವಾಯಿತೇನೋ! ಇನ್ನು ಮುಂದೆ ನಿರಾಳವಾಗಿ ಊರ ದಾರಿ ಹಿಡಿಯಬಹುದೆಂದುಕೊಂಡಂತಿತ್ತು. ಶನಿವಾರ ಮಾರ್ನಿಂಗ್ ಕ್ಲಾಸ್ ಮುಗಿಸಿಕೊಂಡು ಊರಿಗೆ ಬರುವಾಗ ಬೆಡ್ ಶೀಟ್ ಕಾರ್ಪೆಟ್‌ಗಳನ್ನು ತಪ್ಪದೆ ತನ್ನಿ, ಅಲ್ಲಿ ಒಗೆಸಿಕೊಡುತ್ತೇನೆ. ಮಾಸಿರುವ ಅವುಗಳನ್ನ ಸದ್ಯಕ್ಕೆ ಹೊದ್ದುಕೊಂಡು ಬೆಚ್ಚಗೆ ಮಲಗಿರೆಂದು ತಿಳಿಸಿತು. ನಮ್ಮ ಸಂಬAಧಿ ಹುಡುಗರಿಗೆ ಕ್ಯಾತೆ ಆಡದಂತೆ ಚೆನ್ನಾಗಿ ನೋಡಿಕೊಳ್ಳಲು ಹೇಳಿ ಇಬ್ಬರಿಗೂ ತಲಾ ಐದೈದು ರೂಪಾಯಿ ಕೊಟ್ಟು ಬಸ್ ಚಾರ್ಜ್ ಮಾಡಿಕೊಂಡು ಬರಲು ಹೇಳಿ ಹೊರಟಿತು. ನಾವೆಲ್ಲರೂ ಅಪ್ಪನನ್ನು ಕಳಿಸಿ ಬರಲು ಹಿಂದಿಂದೆಹೊರಟೆವು.


***
ಮದುವೆಯಾಗಿ ಮಕ್ಕಳಿಲ್ಲದ ಹನ್ನೆರಡು ವರ್ಷಗಳ ನಂತರ ಹುಟ್ಟಿದ್ದ ನಮ್ಮನ್ನು, ಅಪರೂಪಕ್ಕೆ ದೂರದ ಬಸ್ಸು-ಲಾರಿಗಳು ಓಡಾಡುವ ನಗರದಲ್ಲಿ ಬಿಟ್ಟು ಹೋಗುತ್ತಿರುವುದನ್ನು ಜೀರ್ಣಿಸಿಕೊಳ್ಳಲು ಅಪ್ಪನಿಗೆ ಕಷ್ಟವಾಗಿತ್ತು. ಅಪ್ಪನ ಕಾಲುಗಳು ಭಾರವಾಗಿದ್ದವು. ನಾವಿಬ್ಬರೂ ಅಪ್ಪನ ಕೈಗಳನ್ನು ಬಿಟ್ಟಿರಲಿಲ್ಲ. ಹಾಸ್ಟೆಲ್‌ನಿಂದ ಸ್ವಲ್ಪ ದೂರದವರೆಗೆ ಅಪ್ಪನ ಜೊತೆ ಹೆಜ್ಜೆ ಹಾಕಿದ ನಾವು ಈಗ ಅಪ್ಪನ ಬೆರಳುಗಳನ್ನು ಬಿಡಬೇಕಾಗಿ ಬಂತು. ನಾವು ಅಲ್ಲೇ ನಿಂತೆವು. ಅಪ್ಪನ ಹೆಜ್ಜೆಗಳು ಮುಂದುವರಿದವು. ಆಡಲು ನಮಗೆ ಸ್ನೇಹಿತರು ಸಿಕ್ಕಿದ್ದರಿಂದ ಅಪ್ಪ ಬಿಟ್ಟು ಹೋದದ್ದರ ಘಾಸಿ ಸ್ವಲ್ಪ ಕಡಿಮೆಯಾದಂತಿತ್ತು. ಅಪ್ಪ ಹಿಂದೆ ತಿರುಗಿ ತಿರುಗಿ ನೋಡುತ್ತಾ ಹೆಜ್ಜೆ ಕಿತ್ತಿಡುತ್ತಿತ್ತು. ಅಪ್ಪನ ಕಣ್ಣಿನಲ್ಲಿ ಕಣ್ಣೀರು ಜಿನುಗುತ್ತಿರುವಂತೆ ಭಾಸವಾಗುತಿತ್ತು. ಜನ, ಆಟೋ, ಬಸ್ಸು, ಲಾರಿಗಳ ಮಧ್ಯದಲ್ಲಿ ಪರಸ್ಪರರು ಮರೆಯಾಗುತ್ತಿದ್ದೆವು, ಅಪ್ಪ ಕಾಣದಾಯಿತು. ನಾವು ಹಾಸ್ಟೆಲ್ ದಾರಿ ಹಿಡಿದೆವು.



ಇಂದು ನಗರದಲ್ಲಿ ಸಂವಾದ


ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ನೆಲೆಸಿರುವ ಶಿಕ್ಷಕ, ಕವಿ, ಕತೆಗಾರ ಗುರುಪ್ರಸಾದ್ಕಂಟಲಗೆರೆ ಅವರ ಇತ್ತೀಚೆಗೆ ಬಿಡುಗಡೆಯಾದ ‘ಟ್ರಂಕು-ತಟ್ಟೆ ಹೆಸರಿನ ವಿದ್ಯಾರ‍್ಥಿ ಜೀವನದ ಹಾಸ್ಟೆಲ್ಅನುಭವ ಕಥನ ಪುಸ್ತಕ ಕುರಿತು ಜೂನ್ 25ರ ಭಾನುವಾರ ಬೆಳಗ್ಗೆ ತುಮಕೂರಿನ ಟೌನ್ ಹಾಲ್ ಬಳಿ ಇರುವ ಐಎಂಎ ಹಾಲ್ ನಲ್ಲಿ ಸಂವಾದ ಏರ‍್ಪಡಿಸಲಾಗಿದೆ. ಡಾ.ಬಂಜಗೆರೆ ಜಯಪ್ರಕಾಶ್ , ಡಾ.ಬಸವರಾಜು, ಡಾ.ನಿತ್ಯಾನಂದ ಶೆಟ್ಟಿ, ಡಾ.ರವಿಕುಮಾರ್ ನೀಹ, ಕೃಷ್ಣಪ್ಪ, ಮಲ್ಲಿಕಾ ಬಸವರಾಜು, ನಾಗರಾಜಪ್ಪ, ವಿರೂಪಾಕ್ಷ ಡ್ಯಾಗೇರಹಳ್ಳಿ, ಎಚ್.ವಿ. ವೆಂಕಟಾಚಲ, ಕಾಂತರಾಜು ಗೊಲ್ಲರಹಟ್ಟಿ, ಡಾ.ಮರ‍್ತಿ ತಿಮ್ಮನಹಳ್ಳಿ, ಕೊಟ್ಟ ಶಂಕರ್, ಡಾ.ಆಶಾ ಬಗ್ಗನಡು, ಬಿದಲೋಟಿ ರಂಗನಾಥ್, ಭಗತ್ ಸಿಂಗ್ ಕುಂದೂರು ಭಾಗಿಯಾಗುವರು .