ತಿರು ಶ್ರೀಧರ ವ್ಯಕ್ತಿ-ವ್ಯಕ್ತಿತ್ವ ಹೆಗ್ಗೋಡು- ನೀನಾಸಂ ಮತ್ತು ಕೆ. ವಿ. ಸುಬ್ಬಣ್ಣ 

ತಿರು ಶ್ರೀಧರ ವ್ಯಕ್ತಿ-ವ್ಯಕ್ತಿತ್ವ ಹೆಗ್ಗೋಡು- ನೀನಾಸಂ ಮತ್ತು ಕೆ. ವಿ. ಸುಬ್ಬಣ್ಣ 

ತಿರು ಶ್ರೀಧರ   ವ್ಯಕ್ತಿ-ವ್ಯಕ್ತಿತ್ವ     ಹೆಗ್ಗೋಡು- ನೀನಾಸಂ ಮತ್ತು ಕೆ. ವಿ. ಸುಬ್ಬಣ್ಣ 

ಶಾಂತವೇರಿ ಗೋಪಾಲಗೌಡರು ಮತ್ತು ಲೋಹಿಯಾರವರ ವಿಚಾರಗಳಿಂದ ಪ್ರಭಾವಿತರಾದ ಸುಬ್ಬಣ್ಣ ಹೆಗ್ಗೋಡಿನಲ್ಲಿ ಜಯಪ್ರಕಾಶ್ ನಾರಾಯಣರು ಹೇಳಿದಂಥ ‘ಸಮಗ್ರ ಕ್ರಾಂತಿ’ ತರುವುದರಲ್ಲಿ ಬಹಳ ಮಟ್ಟಿಗೆ ಕಾರಣರು.


ಕರ್ನಾಟಕ ನಾಟಕ ಚಳವಳಿಗೆ ಹೆಗ್ಗೋಡಿನ ನೀನಾಸಂ ಚುಕ್ಕಾಣಿಯಾಯಿತು. ರಂಗಭೂಮಿಯ ಬೆಳವಣಿಗೆಗಾಗಿ, ಸೃಜನಶೀಲತೆಗಾಗಿ ಏನೆಲ್ಲಾ ಮಾಡಬೇಕೋ ಅದಕ್ಕೆ ಈ ಗ್ರಾಮ ಮಾದರಿ. ಸುಬ್ಬಣ್ಣ ಅದರ ಸೂತ್ರಧಾರ.


ತಿರು ಶ್ರೀಧರ


ವ್ಯಕ್ತಿ-ವ್ಯಕ್ತಿತ್ವ

ಹೆಗ್ಗೋಡು- ನೀನಾಸಂ ಮತ್ತು ಕೆ. ವಿ. ಸುಬ್ಬಣ್ಣ 


ಜುಲೈ 16 - ಹೆಗ್ಗೋಡಿನ ‘ನೀನಾಸಂ’ನ ಕೆ.ವಿ. ಸುಬ್ಬಣ್ಣ ಅವರ ಸಂಸ್ಮರಣೆ ದಿನ. ನನ್ನ ಜೀವಮಾನದಲ್ಲಿ ಭೇಟಿ ಮಾಡಿದ ವ್ಯಕ್ತಿಗಳಲ್ಲಿ ನನ್ನನ್ನು ಅತ್ಯಂತ ಆದರದಿಂದ ಕಂಡ ಭಾವವನ್ನು ಹುಟ್ಟಿಸಿದವರು ಸುಬ್ಬಣ್ಣ. ನಮ್ಮ ಕನ್ನಡ ಸಂಪದಕ್ಕಾಗಿ ನೀನಾಸಂ ನಡೆಸಿಕೊಟ್ಟ ‘ನೀನಾಸಂ ಸಾಹಿತ್ಯ ಶಿಬಿರ’ ಮತ್ತು ನಾವು ಹೆಗ್ಗೋಡಿಗೆ ಭೇಟಿ ನೀಡಿದ ಸಂದರ್ಭಗಳಲ್ಲಿ ಅವರ ಸಾನ್ನಿಧ್ಯ ದೊರೆತ ಭಾಗ್ಯಶಾಲಿಗಳು ನಾವು. ಅವರನ್ನು ಭೇಟಿ ಮಾಡಿದ ಯಾರಿಗೇ ಆಗಲಿ ಅಂತಹ ಸೌಭಾಗ್ಯ ಖಂಡಿತ ಒದಗಿರುತ್ತದೆ. ಅಂತಹ ಸಾಧಕರಾದ ಸುಬ್ಬಣ್ಣ ಲೋಕದ ಜೊತೆಗೆ ಹೊಂದಿದ್ದ ಅಸಾಮಾನ್ಯ ಬಾಂಧವ್ಯ, ಅಂತಃಕರಣ, ಈ ಲೋಕದಲ್ಲೂ ಮನುಷ್ಯ ಪ್ರಯತ್ನಪಟ್ಟರೆ ಎಂತಹ ಶ್ರೇಷ್ಠ ಬಾಳನ್ನು ಬದುಕಬಹುದೆಂಬುದಕ್ಕೆ ಒಂದು ಅತ್ಯ್ತುತ್ತಮ ನಿದರ್ಶನ. 


ಹೆಗ್ಗೋಡು ಅಂದರೆ ನಮ್ಮ ಸುಬ್ಬಣ್ಣ. ಸುಬ್ಬಣ್ಣ ಎಂದರೆ ಹೆಗ್ಗೋಡು ಎಂಬಷ್ಟರವರೆಗೆ ನಂಟು. ಸುಬ್ಬಣ್ಣನವರು 1932ರ ಫೆಬ್ರವರಿ 20ರಂದು ಜನಿಸಿದರು. ಸುಮಾರು ಐದು ದಶಕಗಳ ಕಾಲ ಈ ಪುಟ್ಟ ಗ್ರಾಮದಲ್ಲಿ ಸುಬಣ್ಣನವರು ನಡೆಸಿದ ನಾಟಕ, ಸಿನಿಮಾ ಮತ್ತು ಸಾಹಿತ್ಯ ಚಟುವಟಿಕೆಗಳ ಕ್ರಾಂತಿಯಿAದ ಅದು ಜಗತ್ತಿನ ಕಲಾ ನಕ್ಷೆಯಲ್ಲಿ ಸ್ಪಷ್ಟವಾಗಿ ಗುರುತು ಹಿಡಿಯುವಷ್ಟು ಮಹತ್ವದ ಕಲಾ ಕೇಂದ್ರವಾಗಿ ಬೆಳೆದಿದೆ. ಸುಮಾರು 600 ಜನಗಳಿದ್ದ ಈ ಚಿಕ್ಕ ಗ್ರಾಮ ಅತ್ಯಂತ ಪ್ರಬುದ್ಧ ಅಭಿರುಚಿ, ರಸಿಕತೆಗೆ ಹೆಸರಾಗಿದೆ. ಇಂತಹ ದೊಡ್ಡ ಬದಲಾವಣೆಯನ್ನು ತಂದವರು ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ, ಎಲ್ಲರಿಗೂ ಆತ್ಮೀಯರಾದ ಕೆ.ವಿ. ಸುಬ್ಬಣ್ಣ.


ಕೆಲವರಿಗೆ ಪ್ರಶಸ್ತಿ ದೊರೆತಾಗ ಅದು ನಮಗೇ ದೊರೆತಷ್ಟು ಖುಷಿಯಾಗುತ್ತದೆ. ಸುಬ್ಬಣ್ಣನವರಿಗೆ ಮ್ಯಾಗ್ಸೇಸೆ ಪ್ರಶಸ್ತಿ ಬಂದಾಗ ಅವರ ಭಾರೀ ದೊಡ್ಡದಾದ ಸ್ನೇಹಿತ ಬಳಗಕ್ಕೆ ಹಾಗೆಯೇ ಅನಿಸಿತು. ಇದಕ್ಕೆ ಮುಖ್ಯ ಕಾರಣ ಸುಬ್ಬಣ್ಣನವರು ಮೌನವಾಗಿ, ಶಾಂತಿಯಿಂದ ನಗು ನಗುತ್ತ ಮಾಡಿದ ಕಲಾಕ್ರಾಂತಿ. ಅವರ ಸರಳತೆ ಸಹೃದಯತೆ, ವಿನಯ ಮತ್ತು ಸೌಜನ್ಯ.


ನಮ್ಮ ಪ್ರತಿಯೊಂದು ಹಳ್ಳಿಯಲ್ಲೂ ಜಮೀನುದಾರರು ಇದ್ದಾರೆ. ಆದರೆ ಸುಬ್ಬಣ್ಣನವರಂತೆ ನಾಟಕ, ಸಿನಿಮಾ, ಸಾಹಿತ್ಯಗಳ ಬಗ್ಗೆ ಪ್ರಾಮಾಣಿಕವಾಗಿ ಕಳಕಳಿ ಇಟ್ಟುಕೊಂಡು, ಅದನ್ನು ಉಸಿರಾಗಿ ಮಾಡಿಕೊಂಡು, ಚಳವಳಿಯಾಗಿ ಬೆಳೆಸಿದವರು ಅವರೊಬ್ಬರೇ. ಸುಬ್ಬಣ್ಣನವರ ಆ ಚಿಕ್ಕ ಮೂರ್ತಿಯಲ್ಲಿ ಅಷ್ಟೊಂದು ಚೈತನ್ಯ ತುಂಬಿತ್ತು ಎಂಬುದೇ ಒಂದು ಪವಾಡ. ಅವರು ಹೋದ ಹೋದೆಡೆಗಳಲ್ಲಿ ಈ ಚೈತನ್ಯರಾಶಿ ಕೊಂಡೊಯ್ದು ಹಂಚುತ್ತಿದ್ದರು. ಶಾಂತವೇರಿ ಗೋಪಾಲಗೌಡರು ಮತ್ತು ಲೋಹಿಯಾರವರ ವಿಚಾರಗಳಿಂದ ಪ್ರಭಾವಿತರಾದ ಸುಬ್ಬಣ್ಣ ಹೆಗ್ಗೋಡಿನಲ್ಲಿ ಜಯಪ್ರಕಾಶ್ ನಾರಾಯಣರು ಹೇಳಿದಂಥ ‘ಸಮಗ್ರ ಕ್ರಾಂತಿ’ ತರುವುದರಲ್ಲಿ ಬಹಳ ಮಟ್ಟಿಗೆ ಕಾರಣರು.


ಗ್ರಾಮೀಣ ಪ್ರದೇಶಗಳಲ್ಲಿ ಜನರ ಅಭಿರುಚಿಯನ್ನು ಎತ್ತರಿಸಬೇಕು ಎಂಬ ಮಾತುಗಳನ್ನು ಎಲ್ಲರೂ ಹೇಳುತ್ತಾರೆ. ಆದರೆ ಅದಕ್ಕಾಗಿ ರಾತ್ರಿ-ಹಗಲು ದುಡಿದು, ತನ್ನದೆಲ್ಲವನ್ನೂ ಸಮರ್ಪಿಸಿ, ಶ್ರದ್ಧೆಯಿಂದ, ಸ್ವಸಂತೋಷದಿAದ ಪರಿಶ್ರಮ ಮಾಡಿದ ಸಾಹಸಿ ನಮ್ಮ ಸುಬ್ಬಣ್ಣ. ಎಲೆಅಡಿಕೆ ಮೆಲುಕಾಡುವ ಬಾಯಿಯಲ್ಲಿ ಯಾವಾಗಲೂ ಮುಗುಳುನಗು. ತಲೆ ತುಂಬ ವಿಚಾರಗಳು. ತೆಳ್ಳಗಿನ ಈ ಕುಳ್ಳ ವ್ಯಕ್ತಿ ಯಾವಾಗಲೂ ಚುರುಕು. ಕನ್ನಡ ನಾಡಿನಲ್ಲಿ ಸ್ವಂತಿಕೆಯಿAದ ನಾಟಕ ಚಳವಳಿ ಮಾಡಿದವರು, ಒಳ್ಳೊಳ್ಳೆಯ ಸಿನಿಮಾ ಆಂದೋಲನ ಮಾಡಿದವರು, ಉತ್ತಮ ಸಾಹಿತ್ಯ ಪ್ರಕಾಶನ (ಸಾಕ್ಷಿ, ಅಕ್ಷರ ಪ್ರಕಾಶನ) ನಡೆಸಿದ ಏಕಾಂಗ ವೀರ, ಬೆಂಗಳೂರಲ್ಲಿ ಕೂತು ಸರ್ಕಾರದಿಂದ ಕೋಟಿಗಟ್ಟಲೆ ರೂಪಾಯಿ ಅನುದಾನ ಪಡೆದ ನಾಟಕ ಅಕಾಡೆಮಿ ಕೂಡಾ ಮಾಡದ ಮಹತ್ವದ ಕೆಲಸವನ್ನು ಸುಬ್ಬಣ್ಣ ಹೆಗ್ಗೋಡಿನಂಥ ಹಳ್ಳಿಯಲ್ಲಿ ನಿಂತು ಮಾಡಿದರು.
ಹೆಗ್ಗೋಡು ಇಂದು ಕಲಾವಿದರಿಗೆಲ್ಲಾ ಕಾಶಿ. ಸುಬ್ಬಣ್ಣನವರ ತಂದೆ 1949ರಲ್ಲಿ ಆರಂಭಿಸಿದ ‘ನೀನಾಸಂ’ ಗೆ ಹೊಸ ಆಯಾಮ, ಹೊಸ ಗರಿ, ಮೊದಲು ತೆಂಗಿನಗರಿಗಳ ರಂಗಮAದಿರ, 1971ರಲ್ಲಿ 750 ಆಸನಗಳ ಅಂತರರಾಷ್ಟ್ರೀಯ ಖ್ಯಾತಿಯ ರಂಗಮAಟಪವಾಗಿ (ಶಿವರಾಮ ಕಾರಂತ ರಂಗಮAದಿರ) ರೂಪುಗೊಂಡಿತು. ಕರ್ನಾಟಕ ನಾಟಕ ಚಳವಳಿಗೆ ಹೆಗ್ಗೋಡಿನ ನೀನಾಸಂ ಚುಕ್ಕಾಣಿಯಾಯಿತು. ರಂಗಭೂಮಿಯ ಬೆಳವಣಿಗೆಗಾಗಿ, ಸೃಜನಶೀಲತೆಗಾಗಿ ಏನೆಲ್ಲಾ ಮಾಡಬೇಕೋ ಅದಕ್ಕೆ ಈ ಗ್ರಾಮ ಮಾದರಿ. ಸುಬ್ಬಣ್ಣ ಅದರ ಸೂತ್ರಧಾರ.


ನಾಟಕ ಮಾತ್ರವಲ್ಲ. ಹೆಗ್ಗೋಡಿನ ಸಿನಿಮಾ ರಸಗ್ರಹಣ ಶಿಬಿರಗಳು, ಸಿನಿಮಾ ಉತ್ಸವಗಳು ಅದ್ವಿತೀಯವೆನಿಸಿದವು. ಸುಬ್ಬಣ್ಣನವರು 1974ರಲ್ಲಿ ಕಟ್ಟಿದ ನೀನಾಸಂ ಚಿತ್ರ ಸಮಾಜ ಭಾರತದ ಮೊತ್ತಮೊದಲ ಗ್ರಾಮೀಣ ಸಿನಿಮಾ ಸೊಸೈಟಿ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಹೆಗ್ಗೋಡು ಹಳ್ಳಿಯ ಸುಬ್ಬಣ್ಣ ದೆಹಲಿಯ ಸಿನಿಮಾ ಉತ್ಸವ ಕಾಲಕ್ಕೆ ಅಲ್ಲಿಯ ಗೋಷ್ಠಿಗಳಲ್ಲಿ ಭಾಗವಹಿಸಲೂ ಆಹ್ವಾನಿತರಾದರು. ಸುಬ್ಬಣ್ಣ ಏರ್ಪಡಿಸಿದ್ದ ನೂರಾರು ಚಲಚ್ಚಿತ್ರ ರಸಗ್ರಹಣ ಶಿಬಿರಗಳು ಉತ್ತಮ ಚಿತ್ರಗಳನ್ನು ಅರಿಯುವಲ್ಲಿ ಹೊಸ ತಲೆಮಾರಿನವರಿಗೆ ಮಾರ್ಗದರ್ಶಕವಾದವು. ಹೆಗ್ಗೋಡಿನ ಜನರು ಸತ್ಯಜಿತ್ ರಾಯ್, ಪೋಲಾನ್ಸ್ಕಿ, ಕುರಸೋವಾ ಮೊದಲಾದವರ ಚಿತ್ರಗಳನ್ನು ತಿಳಿದುಕೊಂಡು, ವಿಶ್ಲೇಷಿಸಬಲ್ಲಷ್ಟು ನಿಪುಣರಾದರು. ಬಹುಶಃ ಭಾರತದ ಗ್ರಾಮೀಣ ಪ್ರದೇಶದಲ್ಲಿ ಸಿನಿಮಾ ಉತ್ಸವ ನಡೆದುದು ಇದ್ದರೆ ಅದು ಹೆಗ್ಗೋಡಿನಲ್ಲಿ 1977ರಲ್ಲಿ. ಅಂಥ ಪ್ರಜ್ಞಾವಂತ ಗ್ರಾಮವಾಗಿ ಬೆಳೆಸುವಲ್ಲಿ ಸುಬ್ಬಣ್ಣ ಮುಖ್ಯ ಹರಿಕಾರರು. ಸುಬ್ಬಣ್ಣನವರ ದೂರದರ್ಶಿತ್ವ ನಿಜಕ್ಕೂ ಮೆಚ್ಚುವಂಥದ್ದು. ರಂಗಭೂಮಿಯ ಶಿಕ್ಷಣ, ರಂಗ ಕಮ್ಮಟಗಳು, ನೀನಾಸಂ ತಿರುಗಾಟ, ರಾಜ್ಯದೆಲ್ಲೆಡೆ ನೀನಾಸಂ ಸಾಹಿತ್ಯ ಶಿಬಿರಗಳು, ಸಿದ್ದಿ ಜನರನ್ನು ಬಳಸಿಕೊಂಡ ಪ್ರಯೋಗ ಎಲ್ಲವೂ ಇದಕ್ಕೆ ಸಾಕ್ಷಿ.


ಸಿನಿಮಾ ಕುರಿತು ಕನ್ನಡದಲ್ಲಿ ಅಂದಿದ್ದ ಸುಮಾರು 20 ಪುಸ್ತಕಗಳಲ್ಲಿ 15ರಷ್ಟನ್ನು ಸುಬ್ಬಣ್ಣನವರೇ ಬರೆದಿದ್ದರು. ರಂಗ ಶಿಕ್ಷಣದ ಕುರಿತೂ ಸುಬ್ಬಣ್ಣ ಬಹಳಷ್ಟು ಪುಸ್ತಕ ಬರೆದಿದ್ದಾರೆ. ಅವರ ‘ರೋಶೋಮನ್’ ಕುರಿತ ಬರಹ, ‘ಲೋಕ ಶಾಕುಂತಲಾ’, ರಾಮ ಮನೋಹರ ಲೋಹಿಯ ಕುರಿತಾದ ‘ರಾಜಕೀಯದ ಮಧ್ಯೆಬಿಡುವು’ ಯಾವುದೇ ಭಾಷೆಯಲ್ಲಿನ ಅತ್ಯುತ್ತಮ ಬರಹಗಳೆಂದು ಪ್ರಶಂಸಿಸಲ್ಪಟ್ಟಿವೆ. ಕೈಯಿಂದ ದುಡ್ಡು ಖರ್ಚು ಮಾಡಿ, ಅಕ್ಷರ ಪ್ರಕಾಶನದಲ್ಲಿ ಬಹಳಷ್ಟು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ‘ಅಕ್ಷರ ಹೊಸ ಕಾವ್ಯ’ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕಾವ್ಯದ ಬಳುವಳಿ ಅಪಾರವಾದದ್ದು. ಸುಬ್ಬಣ್ಣನವರು ರಂಗಭೂಮಿ, ಸಿನಿಮಾ ಮತ್ತು ಸಾಹಿತ್ಯದಲ್ಲಿರುವ ಒಳ್ಳೆಯದೆಲ್ಲವನ್ನೂ ಹೆಗ್ಗೋಡಿನಲ್ಲಿ ಭಟ್ಟಿ ಇಳಿಸಿದರು. ಅವರ ಕೆಲಸದಲ್ಲಿ ಫೋರ್ಡ್ ಫೌಂಡೇಶನ್ ನೆರವಾಯಿತು. ಮತ್ತೊಮ್ಮೆ ಫೋರ್ಡ್ ಫೌಂಡೇಶನ್ ನೆರವು ನೀಡಲು ಬಂದಾಗ ಅದನ್ನು ನಯವಾಗಿ ನಿರಾಕರಿಸಿದಂತಹ ಸಜ್ಜನ ಸಂಸ್ಥೆ ಎಂದು ಕೂಡಾ ನೀನಾಸಂ ಪ್ರಖ್ಯಾತವಾಯಿತು. ತಮ್ಮ ಕೆಲಸವನ್ನು ಮುಂದುವರೆಸಿಕೊಂಡು ಹೋಗಲು ಮಗ ಅಕ್ಷರ ಸಹಿತ ಹಲವಾರು ಪ್ರತಿಭಾವಂತರನ್ನು ಸುಬ್ಬಣ್ಣ ರೂಪಿಸಿದರು. ಒಬ್ಬ ವ್ಯಕ್ತಿ ಅದಮ್ಯ ಶಕ್ತಿಯಾಗಿ, ಒಂದು ಸಂಸ್ಥೆಯೇ ಆಗಿ ಬೆಳೆದ ರೀತಿ ನಿಜಕ್ಕೂ ಪವಾಡಸದೃಶ. ಇದರ ಹಿಂದೆ ಸುಬ್ಬಣ್ಣನವರ ಸಂಪೂರ್ಣ ನಿಷ್ಠೆ, ಶ್ರದ್ಧೆ, ತ್ಯಾಗ, ಸಮರ್ಪಣಾಭಾವಗಳಿವೆ. ಅವರ ಪ್ರೀತಿಯ ವಲಯ ಬಲು ದೊಡ್ಡದು.


ನೀನಾಸಂ ಕಲೆಯೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ತನ್ನ ಮಿತಿಯಲ್ಲಿ ಮತ್ತು ಪ್ರದರ್ಶಕ ಕಲೆಗಳ ಚೌಕಟ್ಟಿನ ಮಿತಿಯಲ್ಲಿ ಅದು ಶ್ರೇಷ್ಠತೆಯನ್ನು ಸಾಧಿಸಲು ಸದಾ ಹೆಣಗುತ್ತಿತ್ತು. ಆದರೆ ಶ್ರೇಷ್ಟತೆಯನ್ನು ಒಂದು ವ್ಯಸನವಾಗಿ ಮಾಡಿಕೊಳ್ಳಲಿಲ್ಲ. ಶ್ರೇಷ್ಟ  ತೆ ಮತ್ತು ಸಮಾನತೆ ಎರಡೂ ಒಟ್ಟೊಟ್ಟಿಗೆ ಹೋಗಬೇಕೆಂಬುದು ಸುಬ್ಬಣ್ಣನವರ ಯಾವತ್ತೂ ಅಪೇಕ್ಷೆಯಾಗಿತ್ತು. ಒಂದನ್ನು ಮತ್ತೊಂದಕ್ಕೆ ಬಲಿ ಕೊಡಬಾರದು. ಆದರಿಂದಲೇ ಗಣ್ಯರು, ಜನಸಾಮಾನ್ಯರು ಎನ್ನುವಂಥ ಸರಳೀಕೃತ ವಿಂಗಡಣೆಗಳನ್ನು ಸುಬ್ಬಣ್ಣ ಒಪ್ಪುತ್ತಿರಲಿಲ್ಲ. ಶ್ರೇಷ್ಟತೆಯ ಆದರ್ಶವನ್ನೇ ಅವರು ನಿರಾಕರಿಸುತ್ತಿರಲಿಲ್ಲ. ಆದರೆ ಕೇವಲ ಶ್ರೇಷ್ಟತೆಯ ಬೆನ್ನು ಹತ್ತಿ ಗಣ್ಯ ಅಲ್ಪ ಸಂಖ್ಯೆಯ ವರ್ಗವೊಂದನ್ನು ಸೃಷ್ಟಿಸಿಕೊಂಡು ಸುತ್ತಲ ಜನರಿಂದ ದೂರವಾಗಿ ದಂತ ಗೋಪುರದಲ್ಲಿ ಕುಳಿತುಕೊಳ್ಳುವುದನ್ನು ಅವರು ವಿರೋಧಿಸುತ್ತಿದ್ದರು. ಜನಸಾಮಾನ್ಯರು ಒಳ್ಳೆಯ ಕಲೆಯನ್ನು ಅರ್ಥ ಮಾಡಿಕೊಳ್ಳಲಾರರು, ಅನುಭವಿಸಲಾರರು ಎಂಬ ಹುಸಿ ವಾದಗಳನ್ನು ಅವರು ಕಟುವಾಗಿ ಟೀಕಿಸುತ್ತಿದ್ದರು. ಎಲ್ಲ ಮನುಷ್ಯರೂ ಸಮಾನರು. ಆದರೆ ಎಲ್ಲ ಮನುಷ್ಯರೂ ಸಮಾನ ಸ್ತರದಲ್ಲಿ ವ್ಯವಹರಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಅದಕ್ಕೆ ಮನುಷ್ಯ ನಡುವಣ ಕೃತಕ ಅಡೆತಡೆಗಳು, ಭೌತಿಕ ಅಡಚಣೆಗಳಷ್ಟೇ ಕಾರಣ. ಈ ಮನುಷ್ಯ ನಿರ್ಮಿತ ಗೋಡೆಗಳನ್ನು ಕೆಡವಿದರೆ ಎಲ್ಲರೂ ಅರಳಲು ಸಾಧ್ಯ ಎಂಬುದು ಸುಬ್ಬಣ್ಣನವರ ಗಾಢ ನಂಬಿಕೆಯಾಗಿತ್ತು. ಉದಾಹರಣೆಗೆ ಸತ್ಯಜಿತ್ ರಾಯ್ ಅವರ ಚಿತ್ರಗಳು ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ ಎಂಬ ಕಲ್ಪನೆಯೇ ಹುಸಿಯಾದದ್ದು. ಈ ಚಿತ್ರಗಳು ಎಲ್ಲರಿಗೂ ಸಿಕ್ಕುತ್ತಿಲ್ಲ ಎಂಬುದಷ್ಟೇ ನಿಜ. ಆದರಿಂದ ನಮಗೆ ಸತ್ಯಜಿತ್ ರಾಯ್ ಚಿತ್ರಗಳು ನಿಜಕ್ಕೂ ಅರ್ಥಪೂರ್ಣವೆನ್ನಿಸಿದರೆ ಅವುಗಳು ಇತರರಿಗೂ ಸಿಗುವಂತೆ ಮಾಡಬೇಕು. ಪರೋಪಕಾರ, ಸಮಾಜೋದ್ಧಾರ, ಕಲಾ ಸೇವೆ ಮುಂತಾದ ಠಕ್ಕಿನ ಮಾತುಗಳಿಗೆ ಇಲ್ಲಿ ಅವಕಾಶವೇ ಇಲ್ಲ. ನಮಗೆ ಪ್ರಿಯವಾದುದನ್ನು ಇತರರೊಂದಿಗೆ ಹಂಚಿಕೊಳ್ಳುವ ಸಹಜ ಮನುಷ್ಯ ಪ್ರವೃತ್ತಿ ಒಂದು ಚಳುವಳಿಯನ್ನು ಕಟ್ಟುವುದು ಹೀಗೆ. ವಿನಯ, ಸಜ್ಜನಿಕೆ ತಾವಾಗಿ ಇಂಥ ಚಳುವಳಿಗೆ ಬಂದು ಬಿಡುತ್ತವೆ. ಇತರರಿಗೆ ಕಲಿಸುತ್ತಿದ್ದೇನೆ ಎಂಬ ಅಹಂಕಾರಕ್ಕೆ ಇಲ್ಲಿ ಸ್ಥಾನವಿಲ್ಲ. ಸುಬ್ಬಣ್ಣನವರ ನೇತೃತ್ವದ ನೀನಾಸಂ ಸಾಂಸ್ಕೃತಿಕ ಚಳುವಳಿಗಳ ನೈತಿಕ ಸಮರ್ಥನೆ ಕೂಡಾ ಇದೇ ಆಗಿತ್ತು. ಹುಸಿ ಪ್ರಗತಿಪರ ಸಂಘಟನೆಗಳಿಗೂ ನೀನಾಸಂಗೂ ಇರುವ ಮುಖ್ಯ ವ್ಯತ್ಯಾಸವೂ ಇದೇ ಆಗಿತ್ತು. 


ಒಮ್ಮೆ ಬಾಳಪ್ಪ ಹುಕ್ಕೇರಿ ಅವರು ಹೆಗ್ಗೋಡಿಗೆ ಬಂದು ನೀನಾಸಂ ಆಶ್ರಯದಲ್ಲಿ ಹಾಡಿನ ಕಾರ್ಯಕ್ರಮವೊಂದನ್ನು ನೀಡಿದರು. ಅವರು ಉತ್ತರ ಕರ್ನಾಟಕದ ಸೊಗಡಿನ ಧ್ವನಿಯಲ್ಲಿ ಹೇಳಿದರು: “ನೀನಾಸಮ ಅಂದ್ರೆ ಏನಪಾ? ನೀನಾಸಮ ಅಂದ್ರೆ ಏನಪಾ? ನೀನಾಸಮ ಅಂದ್ರೆ ನೀ ನಾ ಸಮ. ಅರ್ಥಾತ್ ನೀನು ನಾನು ಸಮಾನರು. ಅದಾ ನೀನಾಸಮ ಸತ್ವ, ಅದಾ ನೀನಾಸಮ ತತ್ವ”. ಇದು ನೀನಾಸಂ ಚಟುವಟಿಕೆಗಳ ಹಿಂದಿನ ಸಿದ್ಧಾಂತದAತಿದೆ. ಇದೇ ರೀತಿಯಲ್ಲಿ ಖ್ಯಾತ ರಂಗ ತಜ್ಞ ಡಾ. ರುಸ್ತುಂ ಭರೋಚ ಅವರು ಪಕಟಿಸಿದ ‘ಖಿheಚಿಣಡಿe ಚಿಟಿಜ Woಡಿಟಜ’ ಪುಸ್ತಕದಲ್ಲಿ ಓiಟಿಚಿsಚಿm: ಚಿ ಛಿuಟಣuಡಿಚಿಟ ಚಿಟಣeಡಿಟಿಚಿಣive ಎಂಬ ಸುದೀರ್ಘ ಲೇಖನವನ್ನು ಬರೆದಿದ್ದಾರೆ. ಆ ಲೇಖನದಲ್ಲಿ ಭರೋಚ ಹೇಳುತ್ತಾರೆ: “ಸುಬ್ಬಣ್ಣನವರ ಕಾರ್ಯ ಸ್ವರೂಪವನ್ನು ಗಾಂಧಿವಾದಿ ಕ್ರಮವೆಂದು ಬಣ್ಣಿಸಲು ಆಸೆಯಾಗುತ್ತದೆ. ವಿಕೇಂದ್ರೀಕರಣಕ್ಕೆ ಬದ್ಧತೆ, ಆರ್ಥಿಕ ಶಿಸ್ತು, ಸರಳತೆ-ಎಲ್ಲಕ್ಕಿಂತ ಹೆಚ್ಚಾಗಿ ಗ್ರಾಮವೊಂದನ್ನು ಮೂಲಭೂತ ಸಾಮಾಜಿಕ ಘಟಕವೆಂದು ಭಾವಿಸುವ ದೃಷ್ಟಿ-ಇವೆಲ್ಲ ಗಾಂಧಿಗೆ ಪ್ರಿಯವಾದ ಗುಣಗಳೇ. ಧರ್ಮ ನಿರಪೇಕ್ಷ ಸಮಾಜವೊಂದರಲ್ಲಿ ನೀನಾಸಂ ಆಶ್ರಮವೆಂದು ಕರೆಯುವುದು ಅಭಾಸ ವಾಗಬಹುದು. ಆದರೆ ಇಲ್ಲಿನ ಶಿಸ್ತು, ಬದ್ಧತೆ, ಸರಳ ಜೀವನ ಶೈಲಿ, ಸತತ ದುಡಿಮೆ ಇವುಗಳಿಂದಾಗಿ ನೀನಾಸಂ ಅನ್ನು ಒಂದು ‘ರಂಗಭೂಮಿ-ಆಶ್ರಮ’ ಎಂದು ಕರೆಯುವುದು ಅಷ್ಟೇನೂ ಅನುಚಿತವಾಗಲಾರದು” 


ಹಳ್ಳಿಗೇ ದಿಲ್ಲಿಯನ್ನು ಕರೆಸಿಕೊಂಡ ಮನಷಾ ಎಂದು ಬಾಳಪ್ಪ ಹುಕ್ಕೇರಿ ಅವರಿಂದ, ವಿನಯಶೀಲ ದಾರ್ಶನಿಕ ಎಂದು ರುಸ್ತುಂ ಭರೋಚ ಅವರಿಂದ ಮೂಡಿ ಬಂದ ಹೇಳಿಕೆಗಳು ಎರಡು ತುತ್ತ ತುದಿಯಲ್ಲಿ ನೀನಾಸಂ ಮತ್ತು ಕೆ.ವಿ. ಸುಬ್ಬಣ್ಣ ಬಗ್ಗೆ ಒಂದೇ ಸತ್ಯವನ್ನು ಮೂಡಿಸುತ್ತವೆ.
ಒಬ್ಬ ವ್ಯಕ್ತಿಯ ಬದುಕಿನ ಔನ್ನತ್ಯದ ದೃಷ್ಟಿಯಿಂದ ಯೋಚಿಸಿದಾಗ ಕೆ.ವಿ. ಸುಬ್ಬಣ್ಣನವರ ಆತ್ಮೀಯ ಗೆಳೆಯರಾದ ಡಾ. ಯು. ಆರ್. ಅನಂತಮೂರ್ತಿಯವರ ಮಾತು ಇಲ್ಲಿ ಅತ್ಯಂತ ಪ್ರಸ್ತುತವೆನಿಸುತ್ತದೆ. “ಉತ್ಕಟ ಸಾಹಿತ್ಯ-ಕಲಾ ರಸಿಕನಾಗಿ ಪ್ರಾರಂಭಿಸಿ, ಪ್ರಯೋಗಶೀಲ ಕಾರ್ಯದಕ್ಷನಾಗಿ ಬೆಳೆದು, ಸಮಕಾಲೀನ ದೃಷ್ಟಾರನಾಗಿ ಸುಬ್ಬಣ್ಣ ಬೆಳೆದಿದ್ದಾನೆ. ಯಶಸ್ಸು ಮತ್ತು ಕೀರ್ತಿ ಅವನನ್ನು ಕಂಗೆಡಿಸಲಾರವು. ಯಾಕೆಂದರೆ ಅವನು ಬೆಳೆದ ನೆಲ ಮತ್ತು ಅವನು ತನ್ನ ಕನಸನ್ನು ಬೆಳೆಸುತ್ತಿರುವ ನೆಲ – ಅದರ ಗುಣವೇ ಅಂಥದ್ದಾಗಿದೆ. ಈಗಿನ ಮಹತ್ವಾಕಾಂಕ್ಷೆಯ ಪೈಪೋಟಿಯ ಕಾಲದಲ್ಲೂ ತನ್ನ ಒಬ್ಬನೇ ಮಗನನ್ನು ಕೂಡ ಈ ತನ್ನ ಕನಸಿನಲ್ಲಿ ಸುಬ್ಬಣ್ಣ ತೊಡಗಿಸಿದ್ದಾನೆ. ನನ್ನ ಗೆಳೆಯರಲ್ಲಿ ಎಲ್ಲ ದೃಷ್ಟಿಯಿಂದಲೂ ನಿಜವಾದ ಪುಣ್ಯವಂತನೆAದರೆ ಸುಬ್ಬಣ್ಣನೇ”


ಸುಬ್ಬಣ್ಣನವರು 2005ರ ಜುಲೈ 16ರಂದು ಈ ಲೋಕವನ್ನಗಲಿದರು. ನಮ್ಮ ಹೃದಯರಂಗಮAದಿರಗಳಲ್ಲಿ ಅವರ ತೇಜಸ್ಸು ಚಿರಶಾಶ್ವತವಾಗಿದೆ. ನಮ್ಮ ನಾಡಿನಲ್ಲಿ ಹಳ್ಳಿಹಳ್ಳಿಯಲ್ಲೂ, ನಮ್ಮೆಲ್ಲರ ನಡುವಿನಲ್ಲಿ ಸುಬ್ಬಣ್ಣನಂತಹ ತೇಜೋವಂತರು ಉದಯಿಸಲಿ ಎಂದು ಆಶಿಸುತ್ತಾ, ಅವರು ತೋರಿದ ಹಾದಿಯಲ್ಲಿ ನಡೆಯುವುದೇ ನಾವು ಸುಬ್ಬಣ್ಣನಂತವರಿಗೆ ತೋರಬಹುದಾದ ಶ್ರೇಷ್ಠ ಗೌರವ ಎಂದು ಭಾವಿಸಿ ಸುಬ್ಬಣ್ಣನವರನ್ನು ಆತ್ಮೀಯವಾಗಿ ಸ್ಮರಿಸೋಣ.


(ಆಧಾರ: ಈ ಲೇಖನದಲ್ಲಿ ನಮೂದಿಸಲಾಗಿರುವ ಹಲವಾರು ವಿಷಯಗಳಿಗೆ 'ನಮ್ಮ ಸುಬ್ಬಣ್ಣ' ಕೃತಿಯಲ್ಲಿನ ಸಂತೋಷ್ ಕುಮಾರ್ ಗುಲ್ವಾಡಿ, ಟಿ ಪಿ ಅಶೋಕ ಮತ್ತು ಡಾ. ಯು. ಆರ್ ಅನಂತಮೂರ್ತಿಗಳ ಸುಬ್ಬಣ್ಣ ಅವರ ಕುರಿತ ಬರಹಗಳನ್ನು ಆಧರಿಸಿದ್ದೇನೆ)