ಇಂದು ವಿಶ್ವ ವಿಟಲಿಗೋ ದಿನ ಬಿಳಿ ತೊನ್ನು ಕಳಂಕವಲ್ಲ, ಸಣ್ಣ ರೋಗವಷ್ಟೆ- ಚಿಕಿತ್ಸೆ ಸುಲಲಿತ
ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯ
-ಡಾ. ಸುಷ್ಮಾ ಜೆ.ಬಿ, ಚರ್ಮ ರೋಗ ತಜ್ಞರು
ಸಿದ್ದಗಂಗಾ ಆಸ್ಪತ್ರೆ , ತುಮಕೂರು
‘ವಿಟಲಿಗೋ ಅಥವಾ ತೊನ್ನು ’ ಎಂಬ ಒಂದು ಚರ್ಮದ ಕಾಯಿಲೆ ರೋಗಿಯ ಬಾಹ್ಯ ಸೌಂದರ್ಯ ಮಾತ್ರವಲ್ಲ ಆತ್ಮಸ್ಥೆ‘ರ್ಯವನ್ನೂ ಕುಗ್ಗಿಸುತ್ತಿರುವುದು ಶೋಚನೀಯ. ಇದರ ನಿವಾರಣೆಗೆ ರೋಗಿಗೆ ಚಿಕಿತ್ಸೆ ಕೊಡಿಸುವುದರೊಂದಿಗೆ ಸಮಾಜದಲ್ಲಿ ಬೇರೂರಿರುವ ತೊನ್ನು ರೋಗದ ಬಗೆಗಿನ ಮೂಢನಂಬಿಕೆಗಳನ್ನು ತೊಡೆದುಹಾಕುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಜನಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ 25 ರಂದು ‘ವಿಶ್ವ ವಿಟಲಿಗೋ ದಿನವನ್ನು ’ ಆಚರಿಸಲಾಗುತ್ತದೆ.
ಭಾರತದಲ್ಲಿ ಪ್ರತಿ ವರ್ಷ 1 ಲಕ್ಷಕ್ಕೂ ಹೆಚ್ಚು ವಿಟಲಿಗೋ ಪ್ರಕರಣಗಳು ವರದಿಯಾಗುತ್ತವೆ. ಅಂದರೆ ಜನಸಂಖ್ಯೆಯ ಸುಮಾರು ಶೇ 1-2 ರಷ್ಟು ಮಂದಿ ತೊನ್ನುಪೀಡಿತರಿದ್ದಾರೆ. 2000 ವರ್ಷಗಳ ಇತಿಹಾಸ ಹೊಂದಿರುವ ಈ ಕಾಯಿಲೆಯು ಭಾರತದ ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಸಾಮಾನ್ಯವಾಗಿ ನಮ್ಮ ಚರ್ಮದ ಬಣ್ಣಕ್ಕೆ ಮೆಲನಿನ್ ಅಂಶ ಕಾರಣ. ಮೆಲನೋಸೈಟ್ ಕೋಶದಿಂದ ಈ ಮೆಲನಿನ್ ಉತ್ಪತ್ತಿಯಾಗುತ್ತದೆ. ಚರ್ಮದೊಳಗಿನ ಮೆಲನೊಸೈಟ್‌ಗಳ ನಾಶದಿಂದಾಗಿ ದೇಹದ ಮೇಲೆ ಬಿಳಿಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಇದನ್ನೇ ವಿಟಲಿಗೋ ಎನ್ನುತ್ತೇವೆ. ಈ ಬಿಳಿಚುಕ್ಕೆಗಳು ದೇಹದ ಒಂದು ಭಾಗದಲ್ಲಿ ಕಾಣಿಸಿಕೊಂಡರೆ ಅದನ್ನು ಸೆಗ್ನೆಂಟಲ್ ವಿಟಲಿಗೋ ಎನ್ನುತ್ತೇವೆ. ಒಂದೇ ಒಂದು ಪ್ಯಾಚ್ ಇದ್ದರೆ ಫೋಕಲ್ ವಿಟಲಿಗೋ, ಒಂದಕ್ಕಿಂತ ಹೆಚ್ಚು ಭಾಗಗಳಲ್ಲಿ ಕಾಣಿಸಿಕೊಂಡರೆ ಜನರಲೈಸ್ಡ್ ವಿಟಲಿಗೋ ಎಂದು ವಿಂಗಡಿಸುತ್ತೇವೆ. ತುಟಿಗಳಲ್ಲಿ ಮತ್ತು ಬೆರಳುಗಳ ತುದಿಯಲ್ಲಿ ಕಾಣಿಸಿಕೊಳ್ಳುವುದನ್ನು ಆಕ್ರೋಫೇಶಿಯಲ್ ವಿಟಲಿಗೋ ಎನ್ನುತ್ತೇವೆ. ಕೇವಲ ಶೇ.2 ರಷ್ಟು ತೊನ್ನು ರೋಗಿಗಳಲ್ಲಿ ಮಾತ್ರ ತೊನ್ನಿಗೂ ವಂಶವಾಹಿಗಳಿಗೂ ಸಂಬಂಧ ಕಂಡುಬರುತ್ತದೆ.
ತೊನ್ನು ಶಾಪವಲ್ಲ
ತೊನ್ನು ಬಾಧಿತರನ್ನು ಸಮಾಜವು ತೀವ್ರ ನಿಕೃಷ್ಟವಾಗಿ ಕಾಣುವುದರಿಂದ ರೋಗಿಗಳ ಆತ್ಮಸ್ಥೈರ್ಯ ಕುಗ್ಗುತ್ತಿದೆ. ಈ ಕಾಯಿಲೆ ಬಗ್ಗೆ ಜನರ ತಪ್ಪು ತಿಳಿವಳಿಕೆಯೇ ಇದಕ್ಕೆ ಕಾರಣ. ತೊನ್ನು ದೇವರು ಕೊಟ್ಟಿರುವ ಶಾಪ, ಇದು ಒಂದು ಬಗೆಯ ಕುಷ್ಠ ರೋಗ, ಅವರನ್ನು ಮುಟ್ಟಿದರೆ ಸಾಕು ನಮಗೂ ಆ ರೋಗ ತಗುಲಿದೆ ಎಂಬಿತ್ಯಾದಿ ಮೂಢನಂಬಿಕೆಗಳು ಜನರ ಮನಸ್ಸಲ್ಲಿ ಬೇರೂರಿದೆ. ಪ್ರಾಣಿಗಳ ಚರ್ಮದ ಬಣ್ಣ ಬದಲಾದರೆ ಹರ್ಷಿಸುತ್ತಾರೆ. ಆದರೆ, ಮನುಷ್ಯರ ಚರ್ಮದ ಬಣ್ಣ ಬದಲಾದರೆ ಅದೊಂದು ಮಹಾಪಿಡುಗು, ಅವರೆಲ್ಲಾ ಅಸ್ಪೃಶ್ಯ ರು ಎಂದೆಲ್ಲಾ ಬಿಂಬಿಸುತ್ತಾರೆ. ಈ ತಪ್ಪು ತಿಳಿವಳಿಕೆಗಳು ಜನರ ಮನಸ್ಸಿನಿಂದ ಮೊದಲು ದೂರಗೊಳ್ಳಬೇಕು. ಅವರನ್ನೂ ಮನುಷ್ಯರಂತೆ ಕಾಣಬೇಕಿದೆ. ವಿಟಲಿಗೋ ಪೀಡಿತ ರೋಗಿಗಳನ್ನು ಸ್ಪರ್ಶಿಸುವುದು, ಅವರ ಜೊತೆ ಕುಳಿತು ತಿನ್ನುವುದು, ಕುಡಿಯುವುದು, ರಕ್ತದಾನ ಮಾಡುವುದು ಅಥವಾ ಲೈಂಗಿಕತೆಯಿಂದ ಹರಡುವುದಿಲ್ಲ. ತೊನ್ನು ರೋಗ ಶಾಪವಲ್ಲ. ಅಂಟು ರೋಗವೂ ಅಲ್ಲ. ಈ ಕಾಯಿಲೆ ಇದ್ದವರೂ ಮದುವೆ ಆಗಬಹುದು. ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಸಂಪೂರ್ಣವಾಗಿ ಗುಣಮುಖರಾಗಬಹುದು, ಹರಡುವುದನ್ನೂ ಕೂಡಾ ನಿಲ್ಲಿಸಬಹುದು. ಮಕ್ಕಳಲ್ಲಿ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಕೊಡಿಸುವುದರಿಂದ ದೇಹದೆಲ್ಲೆಡೆ ಹರಡುವುದನ್ನು ನಿಲ್ಲಿಸಬಹದು ಎಂಬಿತ್ಯಾದಿ ಅಂಶಗಳನ್ನು ಜನರಿಗೆ ತಿಳಿಸಿ ಅರಿವು ಮೂಡಿಸುವುದು ಅವಶ್ಯಕವಾಗಿದೆ. ಈ ಕೆಲಸವನ್ನು ಕೇವಲ ಸೇವಾಸಂಸ್ಥೆಗಳು ಮಾಡಲಿ ಎಂದು ಕೈಚೆಲ್ಲಿ ಕುಳಿತುಕೊಳ್ಳದೆ ಈ ಕಾಯಿಲೆ ಬಗ್ಗೆ ತಿಳಿವಳಿಕೆಯುಳ್ಳವರು ಸುತ್ತಮುತ್ತಲಿನವರಿಗೆ ತಿಳಿಹೇಳಬೇಕಿದೆ.
ತೊನ್ನು ಬಾಧಿತರನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸಬೇಕು. ಅವರನ್ನೂ ಸಾಮಾನ್ಯ ಮನುಷ್ಯರಂತೆ ಕಾಣಬೇಕು. ಅವರಿಗೆ ಆತ್ಮಸ್ಥೈರ್ಯ ತುಂಬಿಸುವಂತೆ ವರ್ತಿಸಬೇಕು. ಇದರಿಂದ ಆ ರೋಗಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ ಬದುಕಿನ ಬಗ್ಗೆ ಒಲವು ಮೂಡುತ್ತದೆ.
ತೊನ್ನು ರೋಗ ಪೀಡಿತರನ್ನು ನಮ್ಮೊಳಗೆ ಒಬ್ಬರು ಎಂದು ಭಾವಿಸೋಣ. ಸುತ್ತಮುತ್ತಲಿನವರಲ್ಲಿ ಈ ರೋಗದ ಬಗ್ಗೆ ಸರಿಯಾದ ಮಾಹಿತಿ ತಿಳಿಸುವ ಮೂಲಕ ಇದೇ ಜೂನ್ 26 ರಂದು ‘ವಿಶ್ವ ವಿಟಲಿಗೋ ದಿನವನ್ನು ’ ಅರ್ಥಪೂರ್ಣವಾಗಿ ಆಚರಿಸೋಣ.
ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯ
ವಿಶ್ವ ವಿಟಲಿಗೋ ದಿನದ ಅಂಗವಾಗಿ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಜೂನ್ 26 ರಿಂದ ಒಂದು ತಿಂಗಳ ಕಾಲ ತೊನ್ನು ಬಾಧಿತರಿಗೆ (ಸ್ಟೇಬಲ್ ವಿಟಲಿಗೋ ರೋಗಿಗಳಿಗೆ) ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ.
ಅಲ್ಪ ಪ್ರಮಾಣದ ತೊನ್ನು ಇರುವ ರೋಗಿಗಳು ವೈದ್ಯರ ಸಲಹೆಯಂತೆ ಕೆಲವು ಮುಲಾಮುಗಳನ್ನು ಲೇಪಿಸಿದರೆ ರೋಗ ವಾಸಿಯಾಗುತ್ತದೆ. ನಿಯಂತ್ರಣದಲ್ಲಿರುವ ವಿಟಲಿಗೋ ರೋಗಿಗಳಿಗೆ (ಸ್ಟೇಬಲ್ ವಿಟಲಿಗೋ ರೋಗಿಗಳಿಗೆ) ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ. ಮಿನಿ ಪಂಚ್ ಗ್ರಾಫ್ಟೀಂಗ್ ಅಂದರೆ ರೋಗಿಯ ದೇಹದಿಂದಲೇ ಒಂದು ಬದಿಯ ಆರೋಗ್ಯವಂತ ಚರ್ಮವನ್ನು ತೊನ್ನುಪೀಡಿತ ಭಾಗಕ್ಕೆ ಕಸಿ ಮಾಡಲಾಗುತ್ತದೆ.
ಆಟೋಲೊಗೋಸ್ ಮೆಲನೋಸೈಟ್ ಗ್ರಾಫ್ಟೀಂಗ್, ಸಕ್ಷನ್ ಗ್ರಾಫ್ಟೀಂಗ್, ಟ್ಯಾಟೋಯಿಂಗ್ ಮುಂತಾದ ಚಿಕಿತ್ಸೆಗಳು ಸ್ಟೇಬಲ್ ವಿಟಲಿಗೋ ರೋಗಿಗಳಿಗೆ ಲಭ್ಯವಿದೆ. ಟೇಲರ್‌ಮೇಡ್ ವಿಧಾನದ ಮೂಲಕ ಯಾವ ರೋಗಿಗೆ ಯಾವ ಚಿಕಿತ್ಸೆ ಎಂಬುದನ್ನು ಪರೀಕ್ಷಿಸಿ ಚಿಕಿತ್ಸೆ ನೀಡುತ್ತೇವೆ.