ನನ್ನನ್ನು ಮಲೆನಾಡು ತಲುಪಿಸಿದ  ಮೆರಿಟ್ ಪರೀಕ್ಷೆಯ 3ನೇ ರ‍್ಯಾಂಕ್ 

60 (11)-ಅರವತ್ತರ ಹಿನ್ನೋಟ

ನನ್ನನ್ನು ಮಲೆನಾಡು ತಲುಪಿಸಿದ  ಮೆರಿಟ್ ಪರೀಕ್ಷೆಯ 3ನೇ ರ‍್ಯಾಂಕ್ 


ಡಾ.ರಂಗಸ್ವಾಮಿ.ಹೆಚ್.ವಿ


ಚಿಕ್ಕಮಗಳೂರಿನಲ್ಲಿ ಬರೆದ ಮೆರಿಟ್ ಪರೀಕ್ಷೆಯಲ್ಲಿ ಮೂರನೆ ರ‍್ಯಾಂಕ್ ಪಡೆದು ಉತ್ತೀರ್ಣನಾದದ್ದರ ಬಗ್ಗೆ ಈಗಾಗಲೇ ಬರೆದಿದ್ದೇನೆ. ಈ ಸುದ್ದಿ ತಲುಪಿದ ಸ್ವಲ್ಪ ದಿನಗಳಲ್ಲೇ ನನಗೆ ಮೂಡಿಗೆರೆ ತಾಲ್ಲೂಕಿನ ಜಾವಳಿಯ ಶ್ರೀ ಲಕ್ಷ್ಮಣರಾವ್‌ ಗುರ್ಜರ್ ಹೈಸ್ಕೂಲ್‌ನಿಂದ ಪತ್ರವೊಂದು ಸ್ವೀಕೃತವಾಯ್ತು. ಆ ಪತ್ರದ ಒಕ್ಕಣೆಯ ಸಾರಾಂಶವೆಂದರೆ ʼಜಿಲ್ಲೆಯಲ್ಲಿ ಮೂರನೇ ಶ್ರೇಯಾಂಕದಲ್ಲಿ ಮೆರಿಟ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರಲಾಗಿ ಸರ್ಕಾರದ ಮೆರಿಟ್ ಸ್ಕಾಲರ್ ಶಿಪ್‌ನೊಂದಿಗೆ ಈ ಶಾಲೆಯಲ್ಲಿ ಉಚಿತ ವಿದ್ಯಾಭಾಸಕ್ಕೆ ಅವಕಾಶವಿದ್ದು ಅದರ ಸದುಪಯೋಗ ಪಡಿಸಿಕೊಳ್ಳುವುದು.ʼ ಅಂತ. 


 ಈ ಮಾಹಿತಿ ತಿಳಿಯುತ್ತಿದ್ದಂತೆ ಶಾಲೆಯಲ್ಲಿ ಅಭಿನಂದನೆಯ ಮಹಾಪೂರವೇ ವ್ಯಕ್ತವಾಯ್ತು. ಆದರೆ ಪಂಚನಹಳ್ಳಿಯ ಈ ಶಾಲೆಯಿಂದ ಈ ವಿದ್ಯಾರ್ಥಿಯನ್ನು ಕಳಿಸಿಕೊಡಲಾಗುವುದಿಲ್ಲವೆಂದು ಅಲ್ಲಿನ ಶಿಕ್ಷಕರು ಮಹಾಬಲೇಶ್ವರರವರ ನೇತೃತ್ವದಲ್ಲಿ ತೀರ್ಮಾನಿಸಿಬಿಟ್ಟಿದ್ದರು. ನನಗೂ ಒಂದು ರೀತಿಯ ದ್ವಂದ್ವದ ಮನಸ್ಥಿತಿ ಶುರುವಾಯ್ತು. ನನಗೂ ಅಷ್ಟು ದೂರ ಹೋಗಲು ಅವ್ಯಕ್ತ ಭಯ. ಅದು ಮಲೆನಾಡು ಯಾವಾಗಲೂ ಜಿಟಿ ಜಿಟಿ ಮಳೆ ಹನಿಯುತ್ತಲೇ ಇರುತ್ತೆ. ಊಟ ತಿಂಡಿಯೂ ಬೇರೇನೆ ಅನ್ನುವ ವಿವರಗಳನ್ನು ಆ ಭಾಗದ ಬಗ್ಗೆ ಪರಿಚಯವಿದ್ದವರು ಹೇಳತೊಡಗಿದರು. ಬಹಶ: ಆ ಸಂದರ್ಭದಲ್ಲಿ ನಾನು ಮತ್ತೆ ಕೆಂಚಮಾರಯ್ಯ ಮತ್ತು ಫಣಿಯಾಚಾರ್‌ರವರ ಮೊರೆ ಹೋದೆ. ಈ ಅವಕಾಶವನ್ನು ಯಾವುದೇ ಕಾರಣಕ್ಕೆ ಬಿಡಬಾರದೆಂದು ಈ ಇಬ್ಬರೂ ಶಿಕ್ಷಕರು ತಾಕೀತು ಮಾಡಿದರು. ಬಹುಶ: ಅವರೂ ಮಹಾಬಲೇಶ್ವರರೊಂದಿಗೆ ಮಾತನಾಡಿದ್ದರು ಅಂದುಕೊಂಡಿದ್ದೇನೆ. 


 ನಾನು ಟಿಸಿ ಕೇಳಲು ಹೋದಾಗ ಮಹಾಬಲೇಶ್ವರರವರು ನನ್ನ ಅಪ್ಪನನ್ನು ಕರೆದುಕೊಂಡು ಬರಲು ತಿಳಿಸಿದರು. ಈ ಸುದ್ಧಿ ಆಗಲೇ ನಾನು ಮನೆಯಲ್ಲಿ ತಿಳಿಸಿದ್ದೆನಾಗಿ ಅಪರಿಮಿತ ಸಂತೋಷದ ಜೊತೆಗೆ ನನ್ನನ್ನು ದೂರದ ಊರಿಗೆ ಕಳಿಸುವ ಆತಂಕದಲ್ಲಿದ್ದರು. ಇದು ಉತ್ತಮ ಅವಕಾಶವೆಂದು ಎಲ್ಲರೂ ಹೇಳಲಾಗಿ ಕಳಿಸಿಕೊಡಲು ಮಾನಸಿಕವಾಗಿ ಆಗಲೇ ಅಪ್ಪ ಅಮ್ಮ ಸಿದ್ದರಿದ್ದರು. 


 ಅಪ್ಪನನ್ನು ಕರೆದುಕೊಂಡು ಹೋದಾಗ ಮಹಬಲೇಶ್ವರರವರು “ನಮ್ಮ ಸ್ಕೂಲ್ ನಲ್ಲೇ ಇರಲಿ ನಾವೇ ಮೆರಿಟ್ ಸ್ಕಾಲರ್ ಶಿಪ್ ತರಿಸಿ ವ್ಯವಸ್ಥೆ ಮಾಡುತ್ತೇವೆ” ಅಂದು ಬಿಟ್ಟರು. ಅಪ್ಪ ಮಾತ್ರ ಸ್ವಲ್ಪವೂ ವಿಚಲಿತನಾಗದೆ “ಅದೇನೋ ಬರೀ ರ‍್ಯಾಂಕ್ ಬಂದವರೆ ಓದೋ ಸ್ಕೂಲಂತೆ, ಹೋಗಿ ಓದಿಕೊಳ್ಳಲಿ ಬಿಡಿ ಸ್ವಾಮಿ, ನಿಮ್ದು ಬರೀ ಮಾಮೂಲಿ ಸ್ಕೂಲು” ಅಂದಾಗ ಇದ್ದ ಎಲ್ಲಾ ಶಿಕ್ಷಕರು ನಗತೊಡಗಿದರು.


 ಟಿಸಿ ಪಡೆದು ಪಂಚನಹಳ್ಳಿಯಿಂದ ಕಡೂರನ್ನು ತಲುಪಲಾಯ್ತು. ಕಡೂರಿನಿಂದ ಮುಲ್ಕಿ ಎಕ್ಸಪ್ರೆಸ್ ನಲ್ಲಿ ಚಿಕ್ಕಮಗಳೂರು ತಲುಪಿ, ಅಲ್ಲಿಂದ ಮತ್ತೊಂದು ಖಾಸಗಿ ಬಸ್ ನಲ್ಲಿ ಜಾವಳಿ ತಲುಪಬೇಕಿತ್ತು. ಚಿಕ್ಕಮಗಳೂರು ಬಸ್ ನಿಲ್ದಾಣ ದಾಟುವಾಗ ಬಸ್‌ನ ಕಿಟಕಿ ಮೂಲಕ ಇಣುಕಿದಾಗ ʼಸೆಂಟ್ರಲ್ ಜೈಲುʼ ಅನ್ನುವ ಬೋರ್ಡು ಕಣ್ಣಿಗೆ ಬಿತ್ತು. ಥಟ್ಟನೆ ನನಗೆ ನೆನಪಾದ್ದು ಅಪ್ಪ ಒಂದೊಂದು ಬಾರಿ ಸಿಟ್ಟಿನಿಂದ ಯಾರಿಗಾದರೂ ಬಯ್ಯವಾಗ “ ಸೆಂಟ್ರಲ್ ಜೇಲಿಗೆ ಹಾಕಿಸಿಬಿಡ್ತೀನಿ ನೋಡು!” ಅಂತ ಬೆದರಿಸುತ್ತಿದ್ದುದು. 


 ಮಲೆನಾಡು ದಟ್ಟವಾಗುತ್ತ, ದಾರಿಗಳು ಇನ್ನೂ ಅಂಕುಡೊಂಕಾಗಿ ಒಂದೊಂದು ಬಾರಿ ಬಸ್ಸು ತೇಜಸ್ವಿಯ ಡಕೋಟಾ ಎಕ್ಸಪ್ರೆಸ್ ನಂತೆ ಏದುಸಿರು ಬಿಡಲು ಶುರುವಾಯ್ತು. ನಿದಾನಕ್ಕೆ ಕತ್ತಲೂ ಆವರಿಸುತ್ತಾ ಕಾಡಿನ ಕೀಟಗಳ ಕಿರ್ ಅನ್ನುವ ಸದ್ದು ನಿರಂತರವಾಗಿ ಗಾಢವಾಗುತ್ತಲೇ ಇತ್ತು. ಮೊದಲ ಬಾರಿಗೆ ಕಾಫಿ ತೋಟಗಳು, ಟೀ ತೋಟಗಳನ್ನು ಕಣ್ಣು ತುಂಬಿಕೊಂಡದ್ದಾಯ್ತು. ಗುಡ್ಡದ ಇಳಿಜಾರಿಗೆ ತಬ್ಬಿಕೊಂಡಂತೆ ಸಿಲ್ವರ್ ಮರಗಳ ಮಧ್ಯೆ ಇಣುಕುವ ಕಾಫಿ ಗಿಡಗಳು ಇಂತಹ ದುರ್ಗಮ ಕಾಡುಗಳಲ್ಲಿ ಮನುಷ್ಯರು ಹೇಗೆ ವಾಸಿಸಿಯಾರು ಅನ್ನುವ ಅನುಮಾನ ಕಾಡತೊಡಗಿತು. ಮೂಡಿಗೆರೆ ಹತ್ತಿರವಾಗುತ್ತಿದ್ದಂತೆ ಮಿಂಚುಳಗಳು ಬಸ್ಸನ್ನೇ ಆವರಿಸುವಂತೆ ಮುತ್ತತೊಡಗಿದವು. ನಿಧಾನಕ್ಕೆ ಅವ್ಯಕ್ತ ಭಯವೂ ಕಾಡತೊಡಗಿತು. ಕೊಟ್ಟಿಗೆಹಾರ ದಾಟಿ ಕಳಸಾ ಮಾರ್ಗವಾಗಿ ಬಸ್ಸು ಏರಿಳಿತದ ಕವಲುದಾರಿಯನ್ನು ಹತ್ತುವಾಗ ಎಲ್ಲಿ ಪ್ರಪಾತಕ್ಕೆ ಉರುಳುವುದೋ ಅಂತ ಎದೆ ಢವ ಢವ ಹೊಡೆದುಕೊಳ್ಳತೊಡಗಿತು.


 ಈ ಪರಿಸ್ಥಿತಿಯಲ್ಲಿ ಅಂತೂ ಇಂತು ಬಸ್ಸು ಜಾವಳಿಯನ್ನು ತಲುಪಿ “ಜಾವಳಿ ಯರ‍್ರೀ, ಜಾವಳಿ?” ಅಂತ ಕಂಡಕ್ಟರ್ ಕೂಗು ಕೇಳಿ ತಡ ಬಡಾಯಿಸಿ ಬಸ್ಸಿನಿಂದ ಇಳಿದದ್ದಾಯ್ತು. 


ನನಗೆ ಚಿಕ್ಕಮಗಳೂರನ್ನು ನೋಡಿದಾಗ್ಯೂ ಪೂರ್ತಿ ಮಲೆನಾಡಿನ ಚಿತ್ರಣ ದಕ್ಕಿರಲಿಲ್ಲ. ಚಿಕ್ಕಮಗಳೂರು ದಾಟಿ ಮೂಡಿಗೆರೆ ಮಾರ್ಗವಾಗಿ ಬಸ್ಸಿನಲ್ಲಿ ಹೋಗುವಾಗ ಮಲೆನಾಡಿನ ಅಗಾಧತೆ ಅರ್ಥವಾಯ್ತು. ಒಂದು ಸಣ್ಣ ಕಣ ಮಾಡುವಷ್ಟು ಜಾಗವೂ ಸಮತಟ್ಟಾಗಿ ಇದ್ದುದು ಕಂಡುಬರಲಿಲ್ಲ. ಒಂದು ಕಡೆ ಬೆಟ್ಟವನ್ನು ಕತ್ತರಿಸಿ ಎತ್ತರದ ಬಾಗದಲ್ಲಿ ಮನೆ, ತೋಟಗಳನ್ನು ಮಾಡಿದ್ದರೆ, ಮತ್ತೊಂದೆಡೆ ತಗ್ಗು ಪ್ರದೇಶದಲ್ಲಿಯೇ ಮನೆಗಳು, ಯಾಲಕ್ಕಿ, ಮೆಣಸಿನ ತೋಟಗಳನ್ನು ಮಾಡಲಾಗಿರುತ್ತಿತ್ತು.


 ಜಾವಳಿ ದಟ್ಟ ಮಲೆನಾಡಿನ ಸುಂದರವಾದ ಊರು. ಕೊಟ್ಟಿಗೆಹಾರದಿಂದ ಹೊರನಾಡಿಗೆ ಹೋಗುವ ಮಾರ್ಗದಲ್ಲಿ ಕೊಟ್ಟಿಗೆಹಾರಕ್ಕೆ ಸ್ವಲ್ಪ ಹತ್ತಿರ, ಕಳಸಕ್ಕೆ ಸ್ವಲ್ಪ ದೂರ. ಈ ಊರನ್ನ ರಸ್ತೆ ಇಬ್ಬಾಗವಾಗಿ ಸೀಳಿಕೊಂಡು ಮುಂದುವರೆಯುತ್ತದೆ. ಕೊಟ್ಟಿಗೆಹಾರದಿಂದ ಕಳಸಾ ಮಾರ್ಗವಾಗಿ ಹೋಗುತ್ತಾ ರಸ್ತೆಯ ಬಲಭಾಗಕ್ಕೆ ಎತ್ತರದಲ್ಲಿ ಮೊದಲು ಲಕ್ಷ್ಮಣ್ ರಾವ್ ಗುರ್ಜರರ ಮನೆ ಮತ್ತು ಎಸ್ಟೇಟ್, ಆಮೇಲೆ ಅಂಚೆ ಕಚೇರಿ, ನಮ್ಮ ಹಾಸ್ಟಲ್ ಮೆಸ್, ಸರ್ಕಾರಿ ಆಸ್ಪತ್ರೆ. ಹಾಗೇ ಮುಕ್ಕಾಲು ಕಿ.ಮೀ.ಮುಂದುವರೆದರೆ ಒಂದು ಗುಡ್ಡವನ್ನೆ ಬಳಸಿಕೊಂಡು ನೆತ್ತಿಯ ಮೇಲೆ ನಿರ್ಮಿಸಿದ ಲಕ್ಷಣ್ ರಾವ್ ಗುರ್ಜರ್ ಪ್ರೌಢಶಾಲೆ. ನಾನು ಬಸ್ಸಿನಿಂದ ಇಳಿದ ರಸ್ತೆಯ ಭಾಗವೇ ಬಸ್ ನಿಲ್ದಾಣ. ಈ ಬಸ್ ನಿಲ್ದಾಣದ ಭಾಗದಿಂದ ಗುರ್ಜರರ ಮನೆ ಮತ್ತು ನಮ್ಮ ಶಾಲೆ ರಸ್ತೆ ಬಲ ಭಾಗದಲ್ಲಿ ವಿರುದ್ಧ ದಿಕ್ಕಿನಲ್ಲಿ ಸಮಾನಾಂತರ ದೂರದಲ್ಲಿವೆ. ರಸ್ತೆ ಭಾಗದಿಂದ ಶಾಲೆಗೆ ಸುಮಾರು ಮೆಟ್ಟಿಲುಗಳನ್ನು ಹತ್ತಿಯೇ ಸಾಗಬೇಕು. ಈ ಶಾಲೆಯ ಹಿಂಭಾಗದ ತಗ್ಗಿನಲ್ಲಿ ಒಂದು ಚರ್ಚು. 


 ಇಲ್ಲಿಂದ ಕಳಸಾ ಮಾರ್ಗದಲ್ಲಿ ಹಾಗೇ ಮುಂದುವರೆದರೆ ತಗ್ಗಿನಲ್ಲಿ ಸಿಕ್ಕುವುದು ಕೆಳಗೂರು. ಇಲ್ಲಿ ಟೀ ಸಂಸ್ಕರಣೆ ಮಾಡುವ ದೊಡ್ಡ ಕಾರ್ಖಾನೆಯೇ ಇದೆ. ನಾವು ಕೆಳಗೂರು ಟೀ ಎಂದು ಕರೆಯುವುದು ಈ ಟೀಯನ್ನೇ. ಈಗಲೂ ಇಲ್ಲಿ ಉತ್ತಮ ಗುಣಮಟ್ಟದ ಟೀ ಮತ್ತು ಕಾಫಿ ಪುಡಿಗಳು ದೊರೆಯುತ್ತವೆ. ಮಲೆನಾಡಿನ ಕೃಷಿಯ ಸಾಂಬಾರು ಪದಾರ್ಥಗಳೂ ಗುಣಮಟ್ಟದಲ್ಲೇ ದೊರೆಯುತ್ತವೆ.


 ನಮ್ಮ ಶಾಲೆಯ ಅಧ್ಯಕ್ಷರಾದ ಲಕ್ಷ್ಮಣ್ ರಾವ್ ಗುರ್ಜರ್ ಮನೆಯು ನಮ್ಮ ಶಾಲೆಗಿಂತ ದೊಡ್ಡದಾದ ಗುಡ್ಡದ ಮೇಲು ತಿಟ್ಟಿನಲ್ಲಿ ಕಟ್ಟಲಾದ ವಿಶಾಲ ಬಂಗಲೆ. ರಾಸು, ಎಮ್ಮೆ ಮತ್ತು ದನಗಳಿಗಾಗಿಯೇ ದೊಡ್ಡ ಕೊಟ್ಟಿಗೆ. ಇವರ ಎಸ್ಟೇಟ್ ನಲ್ಲಿ ಕೆಲಸ ಮಾಡಲು ಮತ್ತು ಈ ರಾಸುಗಳನ್ನು ಕಾಯಲೆಂದೇ ನೂರಾರು ಕೆಲಸಗಾರರು. ಯಾವಾಗಲೂ ಮಳೆ ಹನಿ ಹನಿಯುತ್ತಿರಲಾಗಿ ಇವರೆಲ್ಲಾ ಅಡಿಕೆ ಪಟ್ಟಿಯ ಟೊಪ್ಪಿಗೆಯೊಂದಿಗೆ, ಬೆನ್ನಿಗೆ ಬುಟ್ಟಿಯೊಂದನ್ನು ಸಿಕ್ಕಿಸಿಕೊಂಡು ಸದಾ ಧ್ಯಾನಸ್ತರಂತೆ ಟೀ ಎಲೆ ಕತ್ತರಿಸುವ ಮತ್ತು ಕಾಫಿ ಬೀಜಗಳನ್ನು ಬಿಡಿಸುವ ಕೆಲಸಗಳಲ್ಲಿ ಮಗ್ನರಾಗಿರುತ್ತಿದ್ದರು. 


 ನಮಗೆ ಇಷ್ಟು ದೊಡ್ಡ ಶ್ರೀಮಂತ ವ್ಯಕ್ತಿ ಹೇಗಿರಬಹುದು ಅಂತ ನೋಡುವ ತವಕ. ಆದರೆ ಈ ಮನುಷ್ಯ ಎಂದೂ ಹೊರಗೆ ಕಾಣಿಸಿಕೊಂಡದ್ದೇ ಇಲ್ಲ. ನಮ್ಮ ಹಾಸ್ಟೆಲ್‌ಗೆ ದಿನವೂ ಹಾಲನ್ನ ಇಲ್ಲಿಂದಲೇ ಕಾಫಿ, ಟೀಗಾಗಿ ಒದಗಿಸಲಾಗುತ್ತಿತ್ತು. ನಾವು ಸರತಿಯ ಮೇಲೆ ಒಂದು ದೊಡ್ಡ ಕ್ಯಾನನ್ನು ಹಿಡಿದು ಇಲ್ಲಿಗೆ ಬಂದು ಹಾಲನ್ನು ತುಂಬಿಕೊಂಡು ಮೆಸ್ ಗೆ ತಂದುಕೊಡುತ್ತಿದ್ದೆವು. ಆಮೇಲೆ ನಮಗೆ ತಿಳಿದದ್ದೆಂದರೆ ಈ ರೀತಿ ಶ್ರೀಮಂತರೆಲ್ಲಾ ತಮ್ಮ ಆಸ್ತಿಯ ಉಸ್ತ್ತುವಾರಿಗೆಂದು ಒಬ್ಬ ಮ್ಯಾನೇಜರ್ ಅನ್ನು ನೇಮಿಸಿ ದೊಡ್ಡ ದೊಡ್ಡ ನಗರಗಳಲ್ಲಿ ಇರುತ್ತಾರೆಂದು. ನಮಗೆ ಅವರ ದರ್ಶನ ಭಾಗ್ಯ ಲಭ್ಯವಾಗುತ್ತಿದ್ದುದೇ ವರ್ಷಕ್ಕೆ ಒಂದು ಬಾರಿ. ಅದೂ ಶಾಲಾ ವಾರ್ಷಿಕೋತ್ಸವದ ದಿನ ಅವರನ್ನು ಸಮಾರಂಭದ ಅಧ್ಯಕ್ಷತೆ ವಹಿಸಲು ಗೌರವದಿಂದ ಆಹ್ವಾನಿಸಲಾಗುತ್ತಿತ್ತು. ಇವರ ಈ ಬಂಗಲೆಗೆ ಹೋಗಬೇಕೆಂದರೆ ರಸ್ತೆಯ ಭಾಗದಿಂದ ಸುಮಾರು ಒಂದು ಫರ್ಲಾಂಗು ಚಿಕ್ಕ ರಸ್ತೆಯನ್ನು ಹತ್ತಿ ಹೋಗಬೇಕಿತ್ತು. ನಾವು ಈ ರೀತಿ ಮೇಲ್ಮುಖ ರಸ್ತೆಯಲ್ಲಿ ಜೀಪು ಕಾರುಗಳು ಹತ್ತುವುದನ್ನು ವಿಸ್ಮಯದಿಂದ ನೋಡುತಿದ್ದೆವು. ಇವುಗಳನ್ನು ಹತ್ತಿಸುವ ಚಾಲಕರನ್ನು ನಾವು ಮಹಾಶೂರರು ಅಂತಲೇ ಪರಿಗಣಿಸಿದ್ದೆವು.


 ಈ ಗುರ್ಜರರ ಮನೆ ಬಲಭಾಗದ ಎತ್ತರದ ಭಾಗದಲ್ಲಿದ್ದರೆ, ಇದೇ ರಸ್ತೆ ಎಡಭಾಗದ ತಗ್ಗಿನಲ್ಲಿ ದೋಬಿ ರಾಮಯ್ಯನ ಮನೆ. ನಮ್ಮ ಟೀಚರ್ ಗಳು ಮತ್ತು ನಮ್ಮ ಶಾಲೆಯ ಶ್ರೀಮಂತ ಹುಡುಗರ ಬಟ್ಟೆಗಳನ್ನು ಒಂದು ಕತ್ತೆಯ ಮೇಲೆ ಹೇರಿಕೊಂಡು ಹೋಗಿ ಒಗೆದು, ಇಸ್ತ್ರಿ ಮಾಡಿಕೊಡುವುದು ಈತನ ನಿತ್ಯದ ಕರ್ಮ. ನಮ್ಮ ರವೀಂದ್ರ ಮಾಸ್ತರರ ಅಭಿಪ್ರಾಯದಂತೆ ಈ ದೋಬಿ ಅತ್ಯಂತ ಶ್ರೀಮಂತ. ಆದರೆ ಅವನನ್ನ ಕಂಡರೆ ದರಿದ್ರ ನಾರಾಣನಂತೆ ಕಂಡುಬರುತ್ತಿದ್ದ. ನಮಗೆ ನಂಬುವುದು ಕಷ್ಟವಾಗುತ್ತಿತ್ತು.


 ಜಾವಳಿಯ ಮತ್ತೊಂದು ಮಹತ್ವವೆಂದರೆ ಹೇಮಾವತಿ ನದಿಯ ಮೂಲಕ ನಮ್ಮ ಬಯಲು ಸೀಮೆಗೆ ಸಂಪರ್ಕ ಕಲ್ಪಿಸುವುದು. ನಾನು ಜಾವಳಿ ತಲುಪುವವರೆಗೂ ಇದು ಹೇಮಾವತಿ ಉಗಮಸ್ಥಾನವೆಂದು ತಿಳಿದೇ ಇರಲಿಲ್ಲ. ನಮ್ಮ ಹಾಸ್ಟಲ್ ಮೆಸ್ ರಸ್ತೆಯ ಬಲಭಾಗಕ್ಕೆ ಆಸ್ಪತ್ರೆಯ ಹಿಂಭಾಗದ ದಿಬ್ಬವೊಂದರ ಮೇಲಿದೆ. ಈ ದಿಬ್ಬ ಹಾಗೆಯೇ ಸುಮಾರು ಬಲಕ್ಕೆ ಮೂರು ಕಿ.ಮೀ. ಮುಂದುವರೆಯುತ್ತದೆ, ಈ ಗುಡ್ಡ ಬಳಸುವ ಕಚ್ಚಾ ಮಾರ್ಗದಲ್ಲಿ ಮುಂದುವರಿದರೆ ಅಲ್ಲೊಂದು ಸಣ್ಣ ಜರಿ ಗುಡ್ಡದ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಜರಿ ನೀರನ್ನು ಆತುಕೊಳ್ಳುವಂತೆ ಒಂದು ಚಿಕ್ಕ  ಕೊಳವೊಂದನ್ನು ನಿರ್ಮಿಸಲಾಗಿದೆ.


ಇನ್ನು ರಸ್ತೆಯ ಎಡಭಾಗದ ತಗ್ಗಿನಲ್ಲಿ ಕೆಪಿಟಿಸಿಎಲ್ ಹಾಗೂ ಟೆಲಿಗ್ರಾಫ್ ಕಚೇರಿ. ಆ ನಂತರ ಅಂಗಡಿ, ಹೋಟೆಲ್ ಗಳ ಸಾಲು. ಈ ಅಂಗಡಿ ಸಾಲುಗಳು ಮುಗಿಯುತ್ತಿದ್ದಂತೆಯೇ ನಮ್ಮ ಹಾಸ್ಟಲ್ ಕಟ್ಟಡ, ರಸ್ತೆಗೆ ಸಮಾನಾಂತರವಾಗಿ ರಸ್ತೆ ಭಾಗದಿಂದ ಹಾಸ್ಟಲ್ ಬಾಗಿಲಿಗೆ ಒಂದು ಸಣ್ಣ ಸೇತುವೆಯೋಪಾದಿಯಲ್ಲಿ ನಿರ್ಮಿಸಿದ ಒಂದು ಹತ್ತು ಅಡಿ ಉದ್ದದ ದಾರಿ. ಇದು ಹುಡುಗರ ಹಾಸ್ಟಲ್ ಭಾಗವಾದರೆ, ಇದರ ಕೆಳಗೆ ಹುಡುಗಿಯರ ಹಾಸ್ಟಲ್. ಅಂದರೆ ಎರಡು ಅಂತಸ್ತಿನ ಕಟ್ಟಡವನ್ನು ಕಲ್ಪಿಸಿಕೊಂಡರೆ ತಗ್ಗಿನ ನೆಲಭಾಗದ ಕಟ್ಟಡದ ಭಾಗ ಹುಡುಗಿಯರದ್ದು, ಇದರ ಮೇಲು ಭಾಗದ ಕಟ್ಟಡ ನಮ್ಮದು. ಇದಕ್ಕೆ ಹೊಂದಿಕೊಂಡಂತೆ ನಮ್ಮ ಶಾಲೆಯ ಮುಖ್ಯೋಪಾಧ್ಯಾರ ವಸತಿ ಗೃಹ. ನಮ್ಮ ಹುಡುಗರ ಹಾಸ್ಟಲ್ ನ ಪಕ್ಕದಲ್ಲಿಯೇ ಸುಮಾರು ಐವತ್ತು ಮೆಟ್ಟಿಲುಗಳನ್ನು ಇಳಿದು ಬಲಕ್ಕೆ ತಿರುಗಿದರೆ ಮುಂಡಪ್ಪ ಬೋಳೂರರ ವಸತಿ ಗೃಹ, ಎಡಕ್ಕೆ ಹುಡುಗಿಯರ ಹಾಸ್ಟಲ್.