ಓದು ಮುಗಿಸಿ, ಹೈಸ್ಕೂಲ್ ಉಪಾಧ್ಯಾಯನಾಗಿ, ಅಮ್ಮ ಹೆಣ್ಣು ಹುಡುಕಲು ಆರಂಭಿಸಿದಾಗ..,
ಅಮ್ಮ ಹೆಣ್ಣು ಹುಡುಕಲು ಆರಂಭಿಸಿದಾಗ..,
ಹಳ್ಳಿ ಹೈದನ ನೂರೆಂಟು ನೆನಪು
ಸಿ.ಚಿಕ್ಕಣ್ಣ , ನಿವೃತ್ತ ಐಎಎಸ್
ಓದು ಮುಗಿಸಿ, ಹೈಸ್ಕೂಲ್ ಉಪಾಧ್ಯಾಯನಾಗಿ,
ಅಮ್ಮ ಹೆಣ್ಣು ಹುಡುಕಲು ಆರಂಭಿಸಿದಾಗ..,
ಎಂ.ಕಾಂ ಮುಗಿಸಿಕೊಂಡು ಊರಿಗೆ ಹಿಂದಿರುಗಿದೆ. ಇದು ಅಮ್ಮನಿಗೂ ಅಪ್ಪನಿಗೂ ಸಮಾಧಾನ ತಂದಿತ್ತು. ಮನೆಯ ಜವಾಬ್ದಾರಿಯ ಒಂದೊಂದೇ ಮಜಲನ್ನು ನನ್ನ ಕಡೆ ದೂಡುತ್ತಿದ್ದರು. ವ್ಯವಸಾಯ, ಮನೆಯ ಖರ್ಚು ವೆಚ್ಚ ಇತ್ಯಾದಿಗಳನ್ನು ನಾನೇ ನೋಡಿಕೊಳ್ಳುತ್ತಿದ್ದೆ. ಒಂದು ಅರ್ಥದಲ್ಲಿ ಸಂಸಾರಿಕ ಜವಾಬ್ದಾರಿ ನನ್ನ ಮೇಲೆ ಬಿದ್ದಿತ್ತು.
ನಮ್ಮ ಮೊದಲನೆ ಚಿಕ್ಕಪ್ಪ, ದೊಡ್ಡಚಿಕ್ಕಪ್ಪನವರಿಗೂ ನಮ್ಮ ತಂದೆಯವರಿಗೂ ಮೊದಲಿನಿಂದಲೂ ಆಗುತ್ತಿರಲಿಲ್ಲ. ಈ ಮಧ್ಯೆ ನಮ್ಮ ದೊಡ್ಡ ಮನೆಯ ಅರ್ಧ ಭಾಗದಲ್ಲಿ ವಾಸಿಸುತ್ತಿದ್ದ ಚಿಕ್ಕಪ್ಪ ಶಂಕರಪ್ಪ ಅವರ ಜಂಟಿ ಖಾತೆಯಲ್ಲಿ ಹೊಸ ಮನೆಯೊಂದನ್ನು ಕಟ್ಟಿಕೊಂಡು, ಅಲ್ಲಿಗೆ ತಮ್ಮ ಸಂಸಾರವನ್ನು ವರ್ಗಾಯಿಸಿಕೊಂಡಿದ್ದರು. ಹೀಗಾಗಿ ಮನೆಯಲ್ಲಿ ನಿತ್ಯ ನಡೆಯುತ್ತಿದ್ದ ಕುರುಕ್ಷೇತ್ರಕ್ಕೆ ವಿರಾಮ ಬಿದ್ದಿತ್ತು.
ಒಂದು ಬೆಳಿಗ್ಗೆ ನಾನು ತಂದೆಯವರು ತಿಂಡಿ ತಿನ್ನುತ್ತ ಕುಳಿತಿದ್ದೆವು. ಗಿರೇಗೊಂಡನ ಹಳ್ಳಿಯ ದೊಡ್ಡಕರಿಯಪ್ಪ, ದೊಡ್ಡಚಿಕ್ಕಪ್ಪ, ಕಾಕ, ಶಂಕರಪ್ಪ ಕಾಕ ಮೂವರೂ ಒಟ್ಟಾಗಿ ಮನೆಗೆ ಬಂದರು. ದೊಡ್ಡಕರಿಯಪ್ಪನವರಿಗೂ ನಮ್ಮ ತಂದೆಯವರಿಗೂ ಸಂಬಂಧ ಕಡಿದು ಸುಮಾರು 12 ವರ್ಷಗಳಾಗಿದ್ದವು. ನಮ್ಮ ಅಕ್ಕನವರನ್ನು ಅವರ ತಮ್ಮ ಬಾಣಯ್ಯನವರಿಗೆ ಕೊಟ್ಟು ಮದುವೆ ಮಾಡುವ ಮಾತನ್ನು ಅವರೇ ನೀಡಿ, ನಂತರ ಅವರೇ ಮುರಿದಿದ್ದರು. ಇದರಿಂದಾಗಿ ನಮ್ಮ ಅವರ ಮಧ್ಯೆ ಒಡನಾಟ ನಿಂತುಹೋಗಿತ್ತು. ಅವರು ಊರಿಗೆ ಬಂದರೂ ನಮ್ಮ ಮನೆಗೆ ಬರುತ್ತಿರಲಿಲ್ಲ. ಅಪರೂಪಕ್ಕೆ ಅತ್ತೆ ಚೌಡಮ್ಮ ಬಂದರೆ, ಮನೆಗೆ ಬಂದು ಊಟ ಮಾಡಿಹೋಗುತ್ತಿದ್ದರು. ಹೀಗಿರುವಾಗ ದಿಢೀರನೆ ಮನೆಗೆ ಪ್ರತ್ಯಕ್ಷರಾದ ಕರಿಯಪ್ಪನವರನ್ನು ಕಂಡು ನನಗೂ ಆಶ್ಚರ್ಯವಾಯಿತು. ಎದ್ದು ಹೋಗಿ 'ಬನ್ನಿ ಮಾವ' ಎಂದೆ. ಅಪ್ಪ ಸುಮ್ಮನೆ ಕುಳಿತಿದ್ದರು. ಅವರ ಕಡೆ ನೋಡಲೂ ಇಲ್ಲ, ಮಾತೂ ಆಡಲಿಲ್ಲ.
'ನನ್ನ ಮೇಲಿನ ಸಿಟ್ಟು ಇನ್ನು ಹೋಗಿಲ್ವೇನಪ್ಪ' ಅಂದರು ಕರಿಯಪ್ಪ ಮಾವ ನಮ್ಮ ತಂದೆಯ ಪಕ್ಕಕ್ಕೆ ಹೋಗಿ ಕುಳಿತು. 'ಮೋಸಗಾರರ ಹತ್ತಿರ ಏನು ಮಾತು' ಎಂದು ಟವಲ್ ಕೊಡವಿಕೊಂಡು ಎದ್ದರು ಅಪ್ಪ. ಶಂಕರಪ್ಪ, ದೊಡ್ಡಚಿಕ್ಕಪ್ಪ ಇಬ್ಬರೂ ತಂದೆಯವರನ್ನು ತಡೆದು 'ಅಣ್ಣ, ಆಗಿದ್ದೆಲ್ಲಾ ಆಗಿಹೋಗಿದೆ, ಚೌಡಮ್ಮನ ಹಣೇಲಿ ಯಾರನ್ನು ಮದುವೆ ಆಗಬೇಕೆಂದು ಬರೆದಿತ್ತೋ ಅದು ಆಗಿದೆ. ಆ ವಿಷಯನ ಕೆದಕಿ ಸಂಬಂಧ ಏಕೆ ಹಾಳುಮಾಡಿಕೊಳ್ಳಬೇಕು, ಬಿಟ್ಟು ಬಿಡಣ್ಣ' ಎಂದು ಸಮಾಧಾನ ಮಾಡಿ, ಮತ್ತೆ ಕೂರಿಸಿದರು. ಅಮ್ಮ ತಿಂಡಿಯನ್ನು ಮೂರು ಜನರಿಗೂ ಕೊಟ್ಟು ನಂತರ ಕಾಫಿ ಮಾಡಿಕೊಟ್ಟರು.
ದೊಡ್ಡಚಿಕ್ಕಪ್ಪನವರು ಅಪ್ಪಟ ವ್ಯಾಪಾರಿ ಮನೋಧರ್ಮದವರು. ಅವರಿಗೆ ಅನುಕೂಲ ಸಿಂಧುವಾದ ಕೆಲಸವಾದರೆ ಮಾತ್ರ ನಮ್ಮ ಅಪ್ಪನ ಹತ್ತಿರ ಬಂದು ಬೆಣ್ಣೆ ಹಚ್ಚುವರು. ಇಲ್ಲವೆಂದರೆ ಸದಾ ತಂದೆಯವರ ಮೇಲೆ ವಿಷವನ್ನೇ ಉಗುಳುತ್ತಿದ್ದುದು ನನಗೆ ಗೊತ್ತಿತ್ತು. ಹೀಗಾಗಿ ಈವತ್ತು ತಂದೆಯವರ ಹತ್ತಿರ ಯಾವುದೋ ಮಹತ್ತರವಾದ ಸ್ವಾರ್ಥ ಸಾಧನೆಗಾಗಿಯೇ ಬಂದಿದ್ದಾರೆ ಎಂದು ನನಗನ್ನಿಸಿತ್ತು.
ಕಾಫಿ ಎಲ್ಲಾ ಆದ ಮೇಲೆ ಶಂಕರಪ್ಪನವರು ತಂದೆಯವರ ಮುಂದೆ ಒಂದು ಪ್ರಸ್ತಾಪ ಇಟ್ಟರು. ಅದೇನೆಂದರೆ ಅವರಿಬ್ಬರ ಭಾಗಕ್ಕೆ ಬಂದಿದ್ದ ಅರ್ಧ ಭಾಗದ ಮನೆಯನ್ನು ನಮಗೇ ಬಿಟ್ಟುಕೊಡುವುದು. ಅದಕ್ಕೆ ಅಪ್ಪ-ಬೇಡ, ನಮಗೆ ಈಗ ಇರೋದನ್ನೇ ಒಪ್ಪ ಮಾಡ್ಕೊಳ್ಳಾಕೆ ಆಗ್ತಿಲ್ಲ. ದೊಡ್ಡ ಮನೆ ಕಸ ಗುಡಿಸೋರು ಯಾರು? ಮೇಲಾಗಿ ಮನೆ ಜಂತೆಗಳೆಲ್ಲಾ ಹಾಳಾಗಿ ಮಳೆಗಾಲದಲ್ಲಿ ನೀರು ಎಲ್ಲೆಂದರಲ್ಲಿ ಸೋರುತ್ತಿದೆ. ಅದನ್ನು ರಿಪೇರಿ ಮಾಡೋರು ಯಾರು?' ಎಂದರು. 'ಇರಲಿ ಬಿಡಣ್ಣ, ಈಗಿರೋ ಮನೇನಾ ಬೇರೆ ಯಾರಿಗೂ ಕೊಟ್ಟರೆ ಅವರಿಗೂ ನಿಮಗೂ ಹೊಂದಾಣಿಕೆಯಾಗೋದಿಲ್ಲ. ಅದನ್ನು ಮಾರಬೇಕು ಅಂತ ಅಣ್ಣ ಹೇಳಿದ್ರೂ ನಾನೇ ಬೇಡ, ನಮ್ಮ ಕುಟುಂಬದಲ್ಲೇ ಇರಲಿ ಅಂತ ಕರೆದುಕೊಂಡು ಬಂದೆ' ಎಂದು ಶಂಕಪ್ಪ ಸಮಾಧಾನ ಮಾಡಿದರು. ಮಾತುಕತೆ ಮುಂದುವರಿಯಿತು. ತಂದೆಯವರು 'ನೋಡಪ್ಪ, ನನ್ನ ಹತ್ರ ದುಡ್ಡಿಲ್ಲ, ಈ ಮನೇನ ದುಡ್ಡುಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲ' ಅಂದರು. ನನಗೆ ದುಡ್ಡು ಬೇಡಣ್ಣ ನೀನು ತೋಟದ ಹತ್ತಿರ ಇಟ್ಟಿಗೆ ಗೂಡು ಹಾಕಿ ಹಂಗೇ ಬಿಡ್ಕೊಂಡಿದ್ದೀಯಲ್ಲಾ ಅದನ್ನು ನಂಗೆ ಕೊಡು ಸಾಕು' ಅಂದರು, 'ಒಪ್ಪಿಕೊಳ್ಳಣ್ಣ' ಅಂದರು ಶಂಕರಪ್ಪನವರು. 'ಆಗಲೇಳಪ್ಪ' ಅಂದರು ಅಪ್ಪ, ಕೊನೆಗೆ ಮನೆ ವಿಷಯ ಸೆಟ್ಟಾಯ್ತು.
ಶಂಕರಪ್ಪನವರು ನನ್ನ ಕಡೆ ತಿರುಗಿ, 'ಎಂಕಾಂ ಮುಗಿಸಿಕೊಂಡು ಬಂದಿದ್ದೀಯಾ, ಮನೇಲಿ ಕೂತು ಏನ್ಮಾಡ್ತೀಯಾ? ನಮ್ಮ ಸ್ಕೂಲಿಗೆ ಬಂದು ಪಾಠ ಮಾಡು' ಎಂದರು. “ನಾನು ಓದಿದ್ದು ಕಾಮರ್ಸ್, ನಿಮ್ಮಲ್ಲಿ ಆ ಸಬ್ಜೆಕ್ಟ್ ಇಲ್ಲವಲ್ಲ' ಅಂದೆ. 'ನಿನ್ನ SSLC ಮಾರ್ಕ್ಸ್ ಕಾರ್ಡ್ ನೋಡಿದ್ದೇನೆ. ನೀನು ಕನ್ನಡ - ಇಂಗ್ಲೀಷ್‌ನಲ್ಲಿ ಹೆಚ್ಚು ಮಾರ್ಕ್ಸ್ ತೆಗೆದಿದ್ದೀಯ. ಸದ್ಯಕ್ಕೆ ನಮ್ಮ ಶಾಲೇಲಿ ಇಂಗ್ಲಿಷ್, ಕನ್ನಡ ಮಾಡೋರು ಒಬ್ಬರೇ ಇದ್ದಾರೆ. strength ಬೇರೆ ಜಾಸ್ತಿ ಆಯ್ತು. ಈ ವರ್ಷ SSLC ಪರೀಕ್ಷೆಗೆ ಹುಡುಗರನ್ನು ತಯಾರಿ ಮಾಡೇಕು. Teacher ಕೊರತೆಯಿಂದ ತಲೆಕೆಟ್ಟು ಹೋಗಿದೆ. ನೀನು ಬಂದರೆ ನನಗೆ ಭೀಮಬಲ ಬಂದಂತಾಗುತ್ತದೆ' ಅಂದರು. ಅಮ್ಮ ಮಧ್ಯೆ ಬಾಯಿ ಹಾಕಿ, 'ಅವನು ಇಲ್ಲೇ ರ‍್ಲಪ್ಪ, ಎಲ್ಲೂ ಹೋಗೋದು ಬೇಡ. ನಿಮ್ಮ ಸ್ಕೂಲ್ನಾಗೆ ಕೆಲಸ ಕೊಡು, ಈ ವರ್ಷ ಮದುವೇನೂ ಮಾಡಬೇಕು. ಈ ಮನೇನ ಸಂಬಾಳಿಸೋಕೆ ನನ್ನ ಕೈಲಾಗಲ್ಲ' ಎಂದರು, ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತ. 'ಆಗಲಿ ಈ ವರ್ಷ ಇರ್ತೀನಿ, ಮುಂದೆ ಏನಾಗುತ್ತೋ ನೋಡೋಣ” ಅಂದೆ. ಶಂಕರಪ್ಪನವರಿಗೆ ಖುಷಿಯಾಯಿತು. ನಾಳೆ ಸೋಮವಾರ ಬೆಳಿಗ್ಗೆ 9 ಗಂಟೆಗೆ ರೆಡಿಯಾಗು ಎಂದರು.
ಕಂಗ್ಲೀಷ್ ಮೇಷ್ಟ್ರು
ಶಂಕರಪ್ಪ ಕಾಕ ಅವರು ಒಂದು II Hand Royal Enfiled ಮೋಟಾರ್ ಸೈಕಲ್, ಓಡಿಸುತ್ತಿದ್ದರು. ಅದರ ಶಬ್ಬ 3 ಕಿಮೀ ದೂರದ ಊರಿಗೆ ಕೇಳಿಸುತ್ತಿತ್ತು. ಘಟಪಟ ಎಂಬ ಶಬ್ದದ ಮೂಲಕ ಮೇಷ್ಟ್ರು ಊರಿಗೆ ಬಂದದ್ದು - ಹೋದದ್ದು ಎಲ್ಲರಿಗೂ ತಿಳಿಯುತ್ತಿತ್ತು. ಸೋಮವಾರ ಬೆಳಿಗ್ಗೆ ತಿಂಡಿ ತಿಂದು ಅವರ ಜತೆ ಮೋಟಾರ್ ಸೈಕಲಲ್ಲಿ ಗುರುದೇವ ರೂರಲ್ ಹೈಸ್ಕೂಲ್, ದಂಡಿನ ದಿಬ್ಬಕ್ಕೆ ಹೋದೆ. ಸುಮಾರು 3 ಎಕರೆ ಪ್ರದೇಶದಲ್ಲಿ 8 ರಿಂದ 10 ಕೊಠಡಿಗಳು ಇದ್ದವು, Lab, Teacher, ರೂಂ ಇವುಗಳನ್ನು ಶಂಕ್ರಪ್ಪನವರ ನೇತೃತ್ವದಲ್ಲಿಯೇ, ಸ್ಥಳೀಯವಾಗಿ ಕಟ್ಟಡ ಸಾಮಗ್ರಿ, ದೇಣಿಗೆ ಸಂಗ್ರಹಿಸಿ ಕಷ್ಟಪಟ್ಟು ಕಟ್ಟಿಸಿದ್ದರು. ಪ್ರಾರ್ಥನೆಗೂ ಮುನ್ನ ಹಾಲಿ ಇದ್ದ ಉಪಾಧ್ಯಾಯರ ಸಭೆ ನಡೆದು ಅಲ್ಲಿ ನನ್ನನ್ನು ಪರಿಚಯಿಸಲಾಯಿತು, ಸಿ.ಚಿಕ್ಕಣ್ಣ ಎಂಕಾಂ ಎಂದು ಹೇಳಿದ ಶಂಕರಪನವರು 'ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಒಳ್ಳೆಯ ಹಿಡಿತವಿದೆ. ಹಾಗಾಗಿ ಈ ಎರಡು Subject ಗೂ ಹೆಚ್ಚುವರಿಯಾಗಿ ಇವರು ಪಾಠ ಮಾಡುವರು ಎಂದರು. ಉಪಾಧ್ಯಾಯರಾದ ಶ್ರೀ ಎಸ್‌ಹೆಚ್ ಹೊನ್ನಪ್ಪ, ಜಿಸಿ ಚನ್ನಿಗರಾಯಪ್ಪ, BL ಲಕ್ಷ್ಮೀ ನಾರಾಯಣ, ರಂಗನಾಥ, ದೊಡ್ಡಮಲ್ಲಯ್ಯ ಅವರುಗಳು ಚಪ್ಪಾಳೆ ತಟ್ಟಿ ನನ್ನನ್ನು ಬರಮಾಡಿಕೊಂಡರು. ಪ್ರಾರ್ಥನೆ ಸಮಯದಲ್ಲಿ HM ಶಂಕರಪ್ಪನವರು ಮಾತನಾಡಿ, 'ಇವರು ಇಂದಿನಿಂದ ಇಂಗ್ಲಿಷ್ ಮತ್ತು ಕನ್ನಡ ತೆಗೆದುಕೊಳ್ಳುವರು' ಎಂದು ಹೇಳಿ ಹರ್ಷೋದ್ಗಾರದ ಮಧ್ಯೆ ಪರಿಚಯ ಮಾಡಿಕೊಟ್ಟರು, ಹುಡುಗರು ಚಪ್ಪಾಳೆ ತಟ್ಟಿದರು.
ಕನ್ನಡ ಮತ್ತು ಇಂಗ್ಲಿಷ್ (ಕಂಗ್ಲೀಷ್) ಪಂಡಿತನಾಗಿ ಶಾಲೆಯಲ್ಲಿ ನನ್ನ ವೃತ್ತಿಯನ್ನು ಆರಂಭಿಸಿದೆ. ಊರಲ್ಲಿ ಶಂಕ್ರಪ್ಪನವರಿದ್ದ ದಿನ ಅವರ ಜತೆ ಮೋಟರ್ ಸೈಕಲ್ ಮೇಲೆ ಬಂದು ಹೋಗುತ್ತಿದ್ದೆ. ಅವರು ತುಮಕೂರು, ಬೆಂಗಳೂರು ಕಡೆ ಶಾಲೆಯನ್ನು Grant in Aid ಗೆ ಸೇರಿಸುವ ನಿಮಿತ್ತ ಹೋದ ದಿನ, ಗಂಗೋತ್ರಿಯ ಕಾಲೇಜಿಗೆ ಹೋಗಲು ತೆಗೆದುಕೊಂಡಿದ್ದ ಹಳೆ ಸೈಕಲ್ ತುಳಿದುಕೊಂಡು, ನಾಗೇನಹಳ್ಳಿ ಮೂಲಕ ಬಂದು ಹೋಗುತ್ತಿದ್ದೆ. ಅಮ್ಮ ತಿಂಡಿಕೊಟ್ಟು ಮಧ್ಯಾಹ್ನಕ್ಕೆಂದು ಅದನ್ನೇ ಕ್ಯಾರಿಯರ್‌ನಲ್ಲಿ ಹಾಕಿ ಕೊಡುತ್ತಿದ್ದರು. ಉಪಾಧ್ಯಾಯನಾಗಿ ನನಗೆ ಯಾವ ಅನುಭವವಿಲ್ಲದಿದ್ದರೂ, ಕನ್ನಡ - ಇಂಗ್ಲೀಷ್ Grammer Text books ಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಓದಿ ಅರ್ಥ ಮಾಡಿಕೊಂಡು, Point ಗುರುತು ಮಾಡಿಕೊಂಡು ಶಾಲೆಯಲ್ಲಿ ಪಾಠ ಮಾಡುತ್ತಿದ್ದೆ. 3 ತಿಂಗಳ ನನ್ನ Performance ಹೇಗಿದೆ ಎಂದು ಉಪಾಧ್ಯಾಯರ ಮಾಸಿಕ ಸಭೆಯಲ್ಲಿ Feedback ಕೇಳಿದೆ. `Students ನ ಚೆನ್ನಾಗಿ Impress ಮಾಡಿದ್ದೀರಿ' ಎಂದರು ಹೊನ್ನಪ್ಪನವರು. ಇಂಗ್ಲಿಷ್ ಪಾಠಗಳನ್ನು ತುಂಬ ಮನದಟ್ಟಾಗುವಂತೆ ಮಾಡ್ತಾರೆ' ಎಂಬ Feedback ಇದೆ ಎಂದರು ದೊಡ್ಡಮಲ್ಲಯ್ಯ, ಮನಸ್ಸಿಗೆ ಸ್ವಲ್ಪ ಸಮಾಧಾನ ಎನಿಸಿತು.
ಈ ಮಧ್ಯೆ ಊರಲ್ಲಿ ಎರಡು ಭಾಗವಾಗಿ ಕಟ್ಟಿದ್ದ ಗೋಡೆಯನ್ನು ಕೆಡವಿಸಿ ಹಾಲ್, ಅಡುಗೆ ಮನೆ ದೊಡ್ಡದಾಗುವಂತೆ ಮಾಡಿಸಿದೆ. ಭಕ್ತರಹಳ್ಳಿಯಿಂದ ಭೋಜಪ್ಪ, ಅವರ ಜತೆ ಇನ್ನೊಬ್ಬರು ಬಂದು ಈ ಕೆಲಸ ಮಾಡಿದರು. ನಂತರ ಕೆಡವಿದ ಗೋಡೆಯಿಂದ ಆಯ್ದು ಇಟ್ಟಿಗೆಗಳಿಂದ, ಹಜಾರದ ಎಡಗಡೆ ಇದ್ದ ದೊಡ್ಡ ಜಾಗದಲ್ಲಿ ನಮಗೆ ಸೇರಿದ ಹದ್ದುಬಸ್ತಿನಲ್ಲಿ, ಒಂದು ರೂಂ ಮತ್ತು ಅದರ ಮುಂದೆ ಒಂದು ಸ್ನಾನದ ಮನೆ, ನೀರಿನ ತೊಟ್ಟಿ ಕಟ್ಟಿಸಿದೆ. ಮನೆ ವಿಶಾಲವಾಯಿತು. ಬಡವನಹಳ್ಳಿಯಿಂದ ಎಲೆಕ್ಟಿಶಿಯನ್ ಕರೆಸಿ, ಮನೆಯಲ್ಲಿ ವಿದ್ಯುತ್ ದೀಪಗಳನ್ನ ಅಳವಡಿಸಿದೆವು. ಇವೆಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ಅಮ್ಮ ಖುಷಿಯಿಂದ ಬೀಗಿದರು. ಒಂದು ದಿನ ತಿಂಡಿ ತಿನ್ನುವಾಗ 'ಮನೆಯನ್ನೇನೋ ಅಚ್ಚುಕಟ್ಟು ಮಾಡಿಸಿದೆ. ನಿಮ್ಮ ತಾತ ಹೆಂಗೆ ಕಟ್ಟಿಸಿದ್ದರೋ ಹಂಗೇ ಕಾಣ್ತದೆ ಮನೆ. ಇದರ ಕಸ ಗುಡಿಸಿ, ಸಾರಿಸಿ, ಬಳಿದು ಒಪ್ಪ ಮಾಡೋರು ಯಾರಪ್ಪ? ನನ್ನ ಕೈಲಿ ಆಗುತ್ತಾ? ನನಗೆ ಆಗಾಗ ಕಳ್ಳುಬಿದ್ದು ಸಾಯೋ ಅಂತ ನೋವಾಗ್ತಿದೆ. ನೀನೇ ನೋಡಿದ್ದೀಯಲ್ಲ?' ಅಂದರು. ಅಮ್ಮ ಈ ಪೀಠಿಕೆ ಯಾಕೆ ಹಾಕುತ್ತಿದ್ದಾರೆಂದು ನನಗೆ ಅರ್ಥವಾಯಿತು. 'ಮನೆಗೆ ಸೊಸೆ ಬೇಕು ಅಂತಾ ಹೇಳ್ತಾ ಇದ್ದೀಯಾ?' ಅಂದೆ. 'ಅದೊಂದು ಆಸೆ ಐತೆ, ನೆರವೇರಿಸಪ್ಪ' ಎಂದು ನನ್ನ ಎರಡೂ ಕೈ ಹಿಡಿದರು. `ಆಗಲಮ್ಮ, ಯಾವುದಾದರೂ ಹೆಣ್ಣು ನೋಡು' ಅಂದೆ. 'ಸಂಬಂಧದಾಗೆ ಬೇಕಾದಷ್ಟು ಅವೆರ' ಅಂದರು. 'ಸಂಬಂಧದಲ್ಲಿ ಬೇಡ' ಅಂದೆ. 'ನೋಡೋಣ' ಇರು ಎಂದರು.