ಬರಗೂರರ  ಅನುಭವ ಕಥನ  -'ಕಾಗೆ ಕಾರುಣ್ಯದ ಕಣ್ಣು’

ಪ್ರಿಯ ಓದುಗರೇ, ಯಾರು ಒಪ್ಪಲಿ, ಬಿಡಲಿ ಬರಗೂರು ರಾಮಚಂದ್ರಪ್ಪನವರು ಕನ್ನಡನಾಡಿನ ಕಳೆದ ನಾಲ್ಕು ದಶಕಗಳನ್ನು ಪ್ರಭಾವಿಸಿದವರು, ಅವರ ಶಿಷ್ಯ ಕೋಟಿ, ಅಭಿಮಾನಿ ಬಳಗ ಈ ನೆಲದಲ್ಲಿದೆ. ಅವರು ಕೇವಲ ಮೇಷ್ಟ್ರಾಗಿ ಶಿಷ್ಯರನ್ನು ಗಳಿಸಿಕೊಂಡವರಲ್ಲ, ಅವರ ಚಿಂತನೆಗಳು ಕ್ರಿಯೆಗಳ ಜೊತೆಗೇ ರೂಪುಗೊಂಡಂತವು. ಒಟ್ಟು ಸಾಹಿತ್ಯದ ಇತಿಹಾಸದಲ್ಲಿ ಬಂಡಾಯ ಸಾಹಿತ್ಯವು ಉಳಿದು ಬೆಳೆಯದೇ ಹೋದರೂ ʼ ಬಂಡಾಯ ಸಾಹಿತ್ಯ ಸಂಘಟನೆ”ಯನ್ನು ಕಟ್ಟಿ ಬೆಳೆಸಿ ಜೀವಂತವಾಗಿ ಉಳಿದುಕೊಳ್ಳಲು ಬರಗೂರರೇ ಮೂಲ ಕಾರಣ. ಇವರ ಜೀವನ ಪಯಣದ ಆಯ್ದ ಅನುಭವ ಕಥನಗಳ ಚಿತ್ರಣ” ಕಾಗೆ ಕಾರುಣ್ಯದ ಕಣ್ಣು” ಅವರ ಅಚ್ಚುಮೆಚ್ಚಿನ ನಮ್ಮ ತುಮಕೂರಿನ ಕನ್ನಡ ಭವನದಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಮತ್ತೊಮ್ಮೆ ಬಿಡುಗಡೆಯಾಗುತ್ತಿದೆ. ಬನ್ನಿ ಪಾಲ್ಗೊಳ್ಳಿ. -ಸಂಪಾದಕ

ಬರಗೂರರ  ಅನುಭವ ಕಥನ  -'ಕಾಗೆ ಕಾರುಣ್ಯದ ಕಣ್ಣು’

ನಾನು ಆತ್ಮಕತೆಯನ್ನು ಬರೆಯಬೇಕೆಂಬ ಒತ್ತಾಯವನ್ನು ನನ್ನ ಹಳೆಯ ವಿದ್ಯಾರ್ಥಿಗಳಾದಿಯಾಗಿ ಸ್ನೇಹಿತರು, ಹಿತೈಷಿಗಳು ಮಾಡುತ್ತಲೇ ಇದ್ದರು. ನಾನು ಮನಸ್ಸು ಮಾಡಿರಲಿಲ್ಲ. ಆತ್ಮಕತೆಯೆಂಬುದು ಪೂರ್ಣ ಸತ್ಯದ ಕತೆಯಾಗಿರುತ್ತದೆಯೇ ಎಂಬ ಬಗ್ಗೆ ನನ್ನಲ್ಲಿ ಜಿಜ್ಞಾಸೆಯಿತ್ತು. ಆತ್ಮಕತೆಯ ರಚನಕಾರರು ಸತ್ಯವನ್ನೇ ಹೇಳಿರುತ್ತಾರೆಂದುಕೊಂಡರೂ ತಮ್ಮ ಜೀವನದ ಸಮಸ್ತ ಸತ್ಯಗಳನ್ನೂ ಬರೆದಿರುವುದಿಲ್ಲ. ಓದುಗರೊಂದಿಗೆ ಹಂಚಿಕೊಳ್ಳಬಹುದಾದ ಸಂಗತಿಗಳು ಇರುವಂತೆಯೇ ಹಂಚಿಕೊಳ್ಳಲಾಗದ ಸಂಗತಿಗಳೂ ಇರುತ್ತವೆ. ಯಾರೂ ಎಲ್ಲವನ್ನೂ ಹೇಳಿಕೊಳ್ಳುವುದಿಲ್ಲ ಅಥವಾ ಹೇಳಿಕೊಳ್ಳಲಾಗುವುದಿಲ್ಲ. ಹೀಗಾಗಿ ಆತ್ಮಕತೆಗಳು ಆಯ್ದ ಸತ್ಯದ ಕತೆಗಳಾಗಿರುತ್ತವೆ.

ನಮ್ಮ ಸಾಮಾಜಿಕ ಸನ್ನಿವೇಶದಲ್ಲಿ ಇದು ಸಹಜವೂ ಹೌದು. ಆತ್ಮಕತೆಗಳು ಆಯ್ದ ಸತ್ಯದ ಕತೆಗಳಾದರೆ ತಪ್ಪೇನೂ ಇಲ್ಲ. ಆದರೆ ಅರ್ಧ ಸತ್ಯದ ಕತೆಗಳಾದರೆ ತಪ್ಪು. ಇಷ್ಟಕ್ಕೂ ನಮ್ಮ ಬದುಕಿನ ಸತ್ಯಗಳನ್ನು ಬಹಿರಂಗಪಡಿಸುವುದರಿಂದ ಸಮಾಜಕ್ಕೇನು ಪ್ರಯೋಜನವೆಂಬ ಪ್ರಶ್ನೆಯೂ ನನ್ನಲ್ಲಿತ್ತು. ಅದೇ ಸಂದರ್ಭದಲ್ಲಿ ರವೀಂದ್ರನಾಥ ಟಾಗೋರರ ಆತ್ಮಕತೆಯ ಭಾಗವಾದ 'ನನ್ನ ಬಾಲ್ಯ' ಎಂಬ ಪುಸ್ತಕವನ್ನು ಓದಿ ನಾನು ಸಾಹಿತಿಯಾಗಬೇಕೆಂಬ ಪ್ರೇರಣೆಯನ್ನು ಪಡೆದ ಸತ್ಯವೂ ನನ್ನೊಳಗೆ ಇತ್ತು. ಒಟ್ಟಾರೆ ಆತ್ಮಕತೆ ಬರೆಯುವುದರ ಬಗ್ಗೆ ನನ್ನೊಳಗಿನ ಜಿಜ್ಞಾಸೆ ಜಾಗೃತವಾಗಿಯೇ ಇತ್ತು.

-ಬರಗೂರು ರಾಮಚಂದ್ರಪ್ಪ

 

 

ಪುಟ್ಟದೊಂದು ಪರಿಚಯ

ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಕತೆ-ಕಾದಂಬರಿ-ಕಾವ್ಯಗಳಂತಹ ಸೃಜನಶೀಲ ಕೃತಿಗಳ ಜೊತೆಗೆ ಚಿಂತನ ಪರ ಬರಹ, ವಿಮರ್ಶೆಗಳ ಮೂಲಕ ಹೆಸರಾದವರು. ರಾಮಚಂದ್ರಪ್ಪ ಅವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ, ನಿರ್ದೇಶಕ ಆಗಿದ್ದರು. ಸಾಹಿತ್ಯದಷ್ಟೇ ಸಿನಿಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನಿಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ವಿಭಿನ್ನ ಹಾದಿ ಹಿಡಿದವರು. ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷತೆ ಇವುಗಳಲ್ಲಿ ಬರಗೂರರು ದಕ್ಷರಾಗಿ ಕೆಲಸಮಾಡಿದ್ದಾರೆ. ಸಾಹಿತ್ಯ ಅಕಾಡೆಮಿಯಲ್ಲಿದ್ದಾಗ ಅಲೆಮಾರಿ ಮತ್ತು ಅರೆ ಅಲೆಮಾರಿ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿ, 40೦ಕ್ಕೂ ಅಧಿಕ ಕೃತಿಗಳು ಪ್ರಕಟವಾಗಲು ಕಾರಣರಾಗಿದ್ದಾರೆ.   ಪ್ರಸಕ್ತದಲ್ಲಿ ಅವರು ಪ್ರಾಥಮಿಕ ಪ್ರೌಢಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.   ಕನ್ನಡ ಪರ ಹೋರಾಟ ಮತ್ತು ಚಿಂತನೆಗಳಲ್ಲಿ ಅವರು ಎಂದೂ ಹಿಂದೆ ಬೀಳದವರು.

ಬರಗೂರರ ಸಾಹಿತ್ಯದ ಹಾದಿಯಲ್ಲಿನ ಕೆಲವು ಕೃತಿಗಳನ್ನು ನೆನೆಸಿಕೊಳ್ಳುವುದಾದರೆ ‘ಒಂದು ಊರಿನ ಕತೆಗಳು’, ‘ಕನ್ನಡಾಭಿಮಾನ’, ‘ಕಪ್ಪು ನೆಲದ ಕೆಂಪು ಕಾಲು’, ‘ಮರಕುಟಿಗ’, ‘ರಾಜಕಾರಣಿ’, ‘ಸಾಹಿತ್ಯ’, ‘ಸುಂಟರಗಾಳಿ’, ‘ಸೂತ್ರ’, ‘ಕಾಂಟೆಸ್ಸಾ ಕಾವ್ಯ’, ‘ಸಂಸ್ಕೃತಿ, ಶ್ರಮ ಮತ್ತು ಸೃಜನಶೀಲತೆ’, ‘ನೆತ್ತರಲ್ಲಿ ನೆಂದ ಹೂ’, ‘ಗುಲಾಮನ ಗೀತೆ’, `ಸಿನಿಮಾ : ಒಂದು ಜನಪದ ಕಲೆ`, ‘ಮರ್ಯಾದಸ್ಥ ಮನುಷ್ಯರಾಗೋಣ’ ಮುಂತಾದವು ತಕ್ಷಣ ನೆನಪಿಗೆ ಬರುತ್ತವೆ. ಬರಗೂರರ ‘ಸುಂಟರಗಾಳಿ’ ಕಥಾಸಂಕಲನಕ್ಕೆ  ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.

ಒಂದೇ ಪಾತ್ರವನ್ನು ಒಳಗೊಂಡ ವಿಶಿಷ್ಟ ಚಿತ್ರ ‘ಶಾಂತಿ’ ಗಿನ್ನೆಸ್ ಸಾಧನೆಗಳಲ್ಲಿ ದಾಖಲೆ ಮಾಡಿದೆ. ಬರಗೂರರ ಕಥೆ ಮತ್ತು ಹಾಡುಗಳು ಇತರ ನಿರ್ದೇಶಕರ ಚಲನಚಿತ್ರಗಳಲ್ಲಿ ಖ್ಯಾತಿಗಳಿಸಿವೆ. ‘ತಾಯಿ’ ಚಿತ್ರದ ಗೀತರಚನೆಗೆ  ರಾಷ್ಟ್ರಪ್ರಶಸ್ತಿ ದೊರೆತಿದ್ದು  ಚಿತ್ರ ಸಂಭಾಷಣೆಗೂ  ರಾಜ್ಯಪ್ರಶಸ್ತಿ ಗಳಿಸಿರುವ  ಹೆಗ್ಗಳಿಕೆ  ಇವರದ್ದಾಗಿದೆ.

‘ಪಂಪ ಪ್ರಶಸ್ತಿ’, ‘ನಾಡೋಜ’ ಪ್ರಶಸ್ತಿ,  ಕನ್ನಡ  ಸಾಹಿತ್ಯ ಪರಿಷತ್ತಿನ  ‘ನೃಪತುಂಗ ಪ್ರಶಸ್ತಿ’  ಹಾಗೂ ಹಲವಾರು ರಾಜ್ಯಮಟ್ಟದ, ಸಂಘ ಸಂಸ್ಥೆಗಳ  ಗೌರವಗಳು ಬರಗೂರು  ರಾಮಚಂದ್ರಪ್ಪನವರಿಗೆ ಸಂದಿವೆ.  ರಾಯಚೂರಿನಲ್ಲಿ  ನಡೆದ 82ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

 

 

ಬರಗೂರು ರಾಮಚಂದ್ರಪ್ಪ ಅವರ “ಕಾಗೆ ಕಾರುಣ್ಯದ ಕಣ್ಣು”

ಆಯ್ದ ಅನುಭವಗಳ ಕಥನದ ಒಂದು ಬರಹದ ಆಯ್ದ ಭಾಗ

ನಿಮ್ಮ ಕುತೂಹಲ ತಣಿಸುವ ಸಲುವಾಗಿ

ಸಾಹಿತ್ಯ ಮತ್ತು ಸಿನಿಮಾ : ಜೋಡಿ ಪಯಣ

ನಾನು ಮೊದಲೇ ತಿಳಿಸಿದಂತೆ ನನ್ನ ಮೊದಲ ಕೃತಿ ‘‘ಮುಳ್ಳುಹಾದಿ’’ (ನಾಟಕ). ನನ್ನ ಪದವಿ ವ್ಯಾಸಂಗ ಮುಗಿಸಿದ ನಂತರ ಒಂದು ಚಿಕ್ಕ ಕವನ ಸಂಕಲನವನ್ನು ಪ್ರಕಟಿಸಿದೆ. ಅದರ ಹೆಸರು ‘ಕನಸಿನ ಕನ್ನಿಕೆ’. ಕವಿತೆಯೇ ನನ್ನ ಕನಸಿನ ಕನ್ನಿಕೆಯಾಗಿದ್ದರೂ ನಿಜ ಕನ್ನಿಕೆಯನ್ನು ಕುರಿತದ್ದೆಂದು ಓದುಗರು ಭಾವಿಸಿರುವ ಸಾಧ್ಯತೆಯಿದೆ. ಅದು ತಪ್ಪೇನೂ ಅಲ್ಲ. ಅವಿವಾಹಿತ ಯುವ ಮನಸ್ಸಿನಲ್ಲಿ ಕನ್ನಿಕೆಯು ನಿಜವೂ ಆಗಿರಬಹುದು; ಕವಿತೆಯ ಸಂಕೇತವೂ ಆಗಿರಬಹುದು. ಆಗಿನ್ನೂ ನಾನು ನವ್ಯಕಾವ್ಯವನ್ನು ಅಷ್ಟಾಗಿ ಅಭ್ಯಾಸ ಮಾಡಿರಲಿಲ್ಲ. ನವೋದಯ ಕಾವ್ಯವನ್ನು ಅಷ್ಟಿಷ್ಟು ಓದಿಕೊಂಡಿದ್ದೆ. ಕುವೆಂಪು ಅವರ ಕವಿತೆಗಳನ್ನೂ, ವೈಚಾರಿಕ ಬರಹಗಳನ್ನೂ ಹೆಚ್ಚು ಓದಿದ್ದೆ. ಕುವೆಂಪು ಅವರ ಕನ್ನಡ ಪ್ರೇಮ ಮತ್ತು ವೈಚಾರಿಕ ಚಿಂತನೆಗಳಿಂದ ಪ್ರಭಾವಿತನಾಗಿದ್ದೆ. ಕುವೆಂಪು ಅವರ ತಲ್ಲೀನತೆಯ ಬಗ್ಗೆ ಅಧ್ಯಾಪಕರಿಂದ ತಿಳಿದಿದ್ದ ನಾನು ತಲ್ಲೀನ ಭಾವಕ್ಕೆ ಪ್ರಜ್ಞಾಪೂರ್ವಕವಾಗಿ ತೆರಳಿ, ತಂಗಿ, ‘ಓ ನಾನೂ ಕವಿ’ ಎಂದುಕೊಂಡು ಸಂಭ್ರಮಿಸಿದ್ದುಂಟು. ಕುವೆಂಪು ಅವರ ‘ಗೊಬ್ಬರ’ ಕವನವನ್ನು ಓದಿದಾಗ ನಾನೂ ಹೀಗೆ ‘ನಿರ್ಲಕ್ಷಿತ’ ವಸ್ತುಗಳ ಮೇಲೆ ಬರೆಯಬೇಕು ಎನ್ನಿಸಿತು. ಆಗ ಮನೆ ಗುಡಿಸುವ ಪೊರಕೆಯ ಮೇಲೆ ಒಂದು ಪದ್ಯವನ್ನು ಬರೆದು ‘ಪೊರಕೆ ವೀರ’ ಎಂದು ಹೆಸರು ಕೊಟ್ಟಿದ್ದೆ. ಈ ಪದ್ಯವೂ ‘ಕನಸಿನ ಕನ್ನಿಕೆ’ಯಲ್ಲಿ ಇತ್ತು. ಇದು ನನ್ನ ಮೊದಲ ಕವನ ಸಂಕಲನ. ಮುನ್ನುಡಿ ಬರೆಸಬೇಕೆಂದು ಪ್ರೊ. ಎಚ್.ಜಿ. ಸಣ್ಣಗುಡ್ಡಯ್ಯನವರ ಬಳಿಗೆ ಹೋಗಿ ವಿನಂತಿ ಮಾಡಿದೆ. ಸಣ್ಣಗುಡ್ಡಯ್ಯನವರು ಮುಖಸ್ತುತಿಗಾಗಿ ಮಾತನಾಡುವವರಲ್ಲ. ತಮಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ವಿಮರ್ಶಕರು. ಆದರೆ ವಿಮರ್ಶೆಯ ಲೇಖನಗಳನ್ನು ಬರೆದದ್ದು ಕಡಿಮೆ. ಲಲಿತ ಪ್ರಬಂಧ ಮತ್ತು ಕಾವ್ಯ ಅವರ ಪ್ರಮುಖ ಪ್ರಕಾರವಾಗಿದ್ದವು. ಅವರಲ್ಲಿ ಮುನ್ನುಡಿಗಾಗಿ ಅಳುಕಿನಿಂದಲೇ ಕೇಳಿಕೊಂಡಾಗ ‘ಆಗಲಿ’ ಎಂದರು. ಕೂಡಲೇ ಒಪ್ಪಿದ್ದು ಅನೇಕರಿಗೆ ಅಚ್ಚರಿಯ ವಿಷಯವಾಗಿತ್ತು. ‘ಇಬ್ಬರೂ ಒಂದೇ ತಾಲ್ಲೂಕಿನವರು. ಅದಕ್ಕೇ ಪ್ರೀತಿಯಿಂದ ಒಪ್ಪಿದ್ದಾರೆ’ ಎಂದು ಸ್ನೇಹಿತರು ನಸುನಕ್ಕಿದ್ದರು. ಅದೇನೇ ಇರಲಿ, ಅವರು ಮುನ್ನುಡಿ ಬರೆಯುವುದು ನನಗೆ ಮುಖ್ಯವಾಗಿತ್ತು.

ಪ್ರೊ. ಸಣ್ಣಗುಡ್ಡಯ್ಯನವರು ‘ಮುನ್ನುಡಿ’ ಬರೆದುಕೊಟ್ಟರು. ಅದರಲ್ಲಿ ಸ್ಪಷ್ಟವಾಗಿ ಒಂದು ಮಾತು ಹೇಳಿದ್ದರು : ‘ಪಳಗದ ಹಸುವನ್ನು ಬೀದಿಗೆ ಬಿಡಬಾರದು’ – ಈ ಸಾಲು ನನ್ನ ಪದ್ಯಗಳ ವಿಮರ್ಶೆಯಾಗಿತ್ತು. ನನ್ನ ಸಂಕಲನದ ಎರಡು ಪದ್ಯಗಳನ್ನು ಮಾತ್ರ ಅವರು ಮೆಚ್ಚಿ, ಉಲ್ಲೇಖಿಸಿ ‘ಹೃದ್ಯವಾಗಿವೆ’ ಎಂದಿದ್ದರು. ಆ ಎರಡು ಪದ್ಯಗಳಲ್ಲಿ ನನ್ನ ಮೆಚ್ಚಿನ ‘ಪೊರಕೆ ವೀರ’ನೂ ಸೇರಿದ್ದ. ಅದೊಂದು ಸಂತೋಷ! ಉಳಿದಂತೆ ಅಷ್ಟೇನೂ ಸಂತೋಷದಾಯಕವಾಗಿರಲಿಲ್ಲ. ಹಾಗಾದರೆ ಸಂತೋಷ ಎಂದರೇನು? ನನಗೆ ಇಷ್ಟವಾಗುವಂತೆ ಬರೆದರೆ ಮಾತ್ರ ಸಂತೋಷವೆ? ಕೊರತೆಗಳನ್ನು ಗುರುತಿಸಿ ಮಾರ್ಗದರ್ಶನ ಮಾಡಿದ್ದೂ ಸಂತೋಷದ ವಿಷಯವಲ್ಲವೆ? ಈ ಪ್ರಶ್ನೆಗಳ ಮೂಲಕ ನಾನಾಗ ‘ಸಾಹಿತ್ಯ ಸಂತೋಷ’ದ ವ್ಯಾಖ್ಯಾನ ಬದಲಿಸಿಕೊಂಡೆ. ನಾನೇ ಬದಲಾಗ ಬೇಕೆಂದುಕೊಂಡೆ. ಸಣ್ಣಗುಡ್ಡಯ್ಯನವರ ಮುನ್ನುಡಿಯನ್ನು ಯಥಾವತ್ತಾಗಿ ಅಚ್ಚು ಮಾಡಿಸಿದೆ.

‘ಕನಸಿನ ಕನ್ನಿಕೆ’ ಕೃತಿಯನ್ನು ಅಚ್ಚು ಮಾಡಿಸಲು ನನ್ನ ಹಿರಿಯಣ್ಣ, ಶ್ರೀ ಬಿ.ಆರ್. ಚಿಕ್ಕರಂಗಪ್ಪನವರು ಆಸಕ್ತಿ ವಹಿಸಿದರು. ತುಮಕೂರಲ್ಲಿದ್ದ ಜನತಾ ಮುದ್ರಣಾಲಯಕ್ಕೆ ಕರೆದುಕೊಂಡು ಹೋದರು. ಈ ಮುದ್ರಣಾಲಯವು ತುಮಕೂರು ಕೆರೆ ಬಳಿಯ ಪ್ರಧಾನ ಅಂಚೆ ಕಚೇರಿಗೆ ಸಮೀಪದ ಒಂದು ಅಡ್ಡರಸ್ತೆಯಲ್ಲಿತ್ತು. ಅದರ ಮಾಲೀಕರು ಪ್ರಗತಿಪರ ವಿಚಾರಧಾರೆಯವರೆಂದು ಅವರೊಂದಿಗಿನ ಮಾತುಕತೆಯಲ್ಲಿ ಅರಿವಾಯಿತು. ಅಣ್ಣ, ಹಣ ಹಾಕಿ ‘ಕನಸಿನ ಕನ್ನಿಕೆ’ಯನ್ನು ಮುದ್ರಣ ಮಾಡಿಸಿಕೊಟ್ಟರು. ಬಹುಪಾಲು ಪ್ರತಿಗಳನ್ನು ಸಾಹಿತ್ಯಾಸಕ್ತರಿಗೆ ಹಂಚಿಬಿಟ್ಟೆ. ಸ್ವಲ್ಪ ಕಾಲ ಮುನ್ನುಡಿಯನ್ನು ಮರೆತು ‘ಕವಿ’ ಎಂದುಕೊಂಡು ಸಂಭ್ರಮಿಸಿದೆ!

ನಾನು ಪಾವಗಡ ತಾಲ್ಲೂಕಿನ ಕೊಂಡೆತಿಮ್ಮನಹಳ್ಳಿಯಲ್ಲಿ ಪ್ರೌಢಶಾಲೆ ಅಧ್ಯಾಪಕ ನಾಗಿದ್ದಾಗ ಹೊರತಂದ ‘ಕನಸಿನ ಕನ್ನಿಕೆ’ಯ ಕೆಲವು ಪದ್ಯಗಳನ್ನು ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಓದಿ ಹೇಳುತ್ತಿದ್ದೆ. ‘ನೀವೂ ಬರೆಯಬೇಕು; ಬರೆಯಲು ಸಾಧ್ಯ’ ಎಂದು ಪ್ರೋತ್ಸಾಹಿಸಿದೆ. ಅನೇಕರು ಬರೆದರು. ಅವುಗಳನ್ನು ಓದಿ, ಕೆಲವೊಮ್ಮೆ ತಿದ್ದಿ ವಿದ್ಯಾರ್ಥಿಗಳ ಒಂದು ಕೃತಿಯನ್ನು ಹೊರತಂದೆ. ಅದರ ಹೆಸರು ‘ಸುಧಾಸಿಂಧು’. ಶಾಲೆಯ ಸ್ಮರಣ ಸಂಚಿಕೆಯಾಗಿ ‘ಸುಧಾಸಿಂಧು’ ಎರಡು ಪ್ರತ್ಯೇಕ ಕೃತಿಗಳಾಗಿ ಪ್ರಕಟ ವಾಗಿ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿಸಿತ್ತು. ಮುಂದೆ ಹೆಸರು ಮಾಡಿದ ರಂಗಾರೆಡ್ಡಿ ಕೋಡಿರಾಂಪುರ ಮತ್ತು ಜಿ.ಆರ್. ತಿಪ್ಪೇಸ್ವಾಮಿಯವರ ಮೊದಲ ರಚನೆ ಗಳನ್ನು ಪ್ರಕಟಿಸಿದ ಹೆಮ್ಮೆ ಈ ‘ಸುಧಾಸಿಂಧು’ವಿಗಿದೆ. ಅಲ್ಲಿಂದ ಆರಂಭವಾದ ಅವರ ಸಾಹಿತ್ಯ ಪಯಣ ಮುಂದೆ ದೊಡ್ಡ ದಾರಿ ಹಿಡಿಯಿತು. ಅವರಿಬ್ಬರೂ ನನ್ನ ಹೆಮ್ಮೆಯ ವಿದ್ಯಾರ್ಥಿಗಳೆಂದು ಹೇಳಲು ನನಗೂ ಹೆಮ್ಮೆ.

ಕೊಂಡೆತಿಮ್ಮನಹಳ್ಳಿಯಲ್ಲಿ ನಾನೊಂದು ಚಿಕ್ಕ ಬಾಡಿಗೆ ಮನೆ ಮಾಡಿಕೊಂಡಿದ್ದೆ. ಬೇರೆ ಊರಿನಿಂದ ಶಾಲೆಗೆ ಬರುತ್ತಿದ್ದ ರಂಗಾರೆಡ್ಡಿಯಾದಿಯಾಗಿ ಕೆಲ ವಿದ್ಯಾರ್ಥಿಗಳು ಒಮ್ಮೊಮ್ಮೆ ನನ್ನ ಮನೆಯಲ್ಲೇ ಮಲಗುತ್ತಿದ್ದರು. ಬೆಳಗ್ಗೆ ಎದ್ದಕೂಡಲೇ ಕಾಣುವ ಜಾಗದಲ್ಲಿರುವಂತೆ ನಾನು ಪೊರಕೆಯನ್ನು ಇಟ್ಟಿರುತ್ತಿದ್ದೆ. ಆರಂಭದ ದಿನಗಳಲ್ಲಿ ರಾತ್ರಿ ಮಲಗುವ ಮುಂಚೆ ಪೊರಕೆಯ ಮಹತ್ವ ಹೇಳುತ್ತಿದ್ದೆ. ಪೊರಕೆಯನ್ನು ಸಾಮಾನ್ಯವಾಗಿ ಅಪಶಕುನವೆಂದು ಭಾವಿಸಿ, ಬೆಳಗ್ಗೆ ಎದ್ದಕೂಡಲೇ ನೋಡಬಾರದೆಂಬ ನಂಬಿಕೆ ಪ್ರಚಲಿತ ವಾಗಿತ್ತು. ನಾನು ‘‘ಈ ಪೊರಕೆ ಮನೆಯನ್ನು ಸ್ವಚ್ಛ ಮಾಡುತ್ತೆ. ನಾವು ಮನವನ್ನೂ ಸ್ವಚ್ಛ ಮಾಡಿಕೊಂಡು ಬೆಳಗ್ಗೆ ಎದ್ದಕೂಡಲೇ ಮನೆ, ಮನೆ ಹೊರಗೆಲ್ಲವನ್ನೂ ಸ್ವಚ್ಛ ಮಾಡುವ ಪೊರಕೆಯ ‘ದರ್ಶನ’ ಮಾಡಿ ಕೈಮುಗಿಯಬೇಕು. ಇದು ಅಂತರಂಗ ಮತ್ತು ಬಹಿರಂಗ ಸ್ವಚ್ಛತೆಗೆ ಕೊಡುವ ಗೌರವ’’ ಎಂದು ವಿವರಿಸಿ ಮನವರಿಕೆ ಮಾಡಿಕೊಟ್ಟಿದ್ದೆ. ನಾನೇ ಮೊದಲು ಪೊರಕೆಗೆ ಕೈಮುಗಿಯುತ್ತಿದ್ದೆ. ಮೇಷ್ಟುç ಕೈಮುಗಿದಾಗ ವಿದ್ಯಾರ್ಥಿಗಳು ಕೂಡ ಮುಗಿಯಲೇಬೇಕಲ್ಲ! ಮುಗಿದರು! ಬರಬರುತ್ತ ಮೂಢನಂಬಿಕೆ ಹೋಗಿ, ನನ್ನ ಮೇಲಿನ ನಂಬಿಕೆ ಬಲವಾಗಿ ಪೊರಕೆಗೆ ಕೈಮುಗಿಯುವುದನ್ನು ಸಹಜ ವೆಂಬಂತೆ ಪಾಲಿಸತೊಡಗಿದರು.

ಹೀಗೆ ಆರಂಭವಾದ ನನ್ನ ಪರ್ಯಾಯ ಚಿಂತನೆ ಮುಂದೆ ಬೆಳೆಯುತ್ತ ಹೋದಂತೆ ಅದಕ್ಕೊಂದು ತಾತ್ವಿಕ ರೂಪ ಲಭ್ಯವಾಗತೊಡಗಿತು. ಒಬ್ಬೊಬ್ಬ ಸಾಹಿತಿಯೂ ತನ್ನ ಪರಿಸರದಿಂದ ಪ್ರೇರಣೆ ಪಡೆಯುವುದು ಸಹಜ. ಹಸಿರು ನಿಸರ್ಗ, ಹರಿವ ನದಿ, ತುಂಬಿದ ಕಡಲು, ಶ್ರೀಗಂಧ, ಪಕ್ಷಿಗಳ ಕಲರವ – ಮುಂತಾದ ಪರಿಸರದ ಮಧ್ಯೆ ಬೆಳೆದವರು ಅವುಗಳನ್ನು ಒಳಗೊಳ್ಳುತ್ತ, ಹೊಗಳುತ್ತ, ರೂಪಕವಾಗಿಸುತ್ತ ಬರೆಯುವುದು ಸ್ವಾಭಾವಿಕ ಕ್ರಿಯೆ. ಅಂಥ ಅಭಿವ್ಯಕ್ತಿ ರೂಪಗಳನ್ನು ಓದಿದ ನನಗೆ ನಮ್ಮೂರಲ್ಲಿ ಅಂಥ ಪರಿಸರ ಇಲ್ಲವಲ್ಲವೆಂಬ ಕೊರಗು ಇತ್ತು. ನಮ್ಮೂರಲ್ಲಿ ಶ್ರೀಗಂಧದ ಮರಗಳಿಲ್ಲ. ಅವುಗಳ ಗಂಧಗಾಳಿಯೂ ಗೊತ್ತಿಲ್ಲ. ಹೆಚ್ಚು ಇರುವುದು ಜಾಲಿಯ ಮರ. ಜೊತೆಗೆ ಒಂದಿಷ್ಟು ಹೊಂಗೆಮರ. ಕೋಗಿಲೆಯನ್ನಂತೂ ನೋಡಿಲ್ಲ; ಅದರ ಕಂಠ ಕೇಳಿಲ್ಲ. ಇಲ್ಲಿರುವುದು ಕಾಗೆಗಳ ಗುಂಪು. ಒಂದಷ್ಟು ಗುಬ್ಬಚ್ಚಿ. ನದಿಯಂತೂ ಇಲ್ಲವೇ ಇಲ್ಲ; ಇರುವ ಹಳ್ಳದಲ್ಲಿ ನೀರು ಹರಿದು ಎಷ್ಟೋ ಕಾಲವಾಗಿದೆ. ಕಡಲಂತೂ ದೂರ; ಇರುವ ಕೆರೆ ತುಂಬುವುದೇ ಕಡಿಮೆ. ಬಿರುಕು ಬಿಟ್ಟ ಕೆರೆ ನೆಲವೇ ಹೆಚ್ಚು. ‘ಇಲ್ಲ’ ಎಂದು ಕೊರಗುವ ಬದಲು ‘ಇದೆ’ ಎನ್ನುವುದೇ ಸಾಹಿತ್ಯದ ವಸ್ತು ಯಾಕಾಗಬಾರದು? ನಿಸರ್ಗ ರಮ್ಯ ಕವಿತೆಗಳ ಜೊತೆಗೇ ಕುವೆಂಪು ಅವರು ‘ಗೊಬ್ಬರ’ ಕುರಿತು ಬರೆಯಲಿಲ್ಲವೆ? ‘ಸೃಷ್ಟಿಯಲ್ಲಿ ಯಾವುದೂ ವಿಫಲವಲ್ಲ’ ಎಂದು ಬೇಂದ್ರೆಯವರು ಹೇಳಿಲ್ಲವೆ? ಹೌದು. ನನಗೆ ನಮ್ಮಲ್ಲಿ ‘ಇಲ್ಲದ್ದು’ ಮುಖ್ಯವಾಗದೆ ‘ಇದ್ದದ್ದು’ ಮುಖ್ಯವಾಗಬೇಕು. ‘ನಮ್ಮಲ್ಲಿ ಇರುವ ಜಾಲಿಯಮರ, ಕಾಗೆ, ಕೆರೆ, ಹಳ್ಳಗಳೂ ಮಹತ್ವಪೂರ್ಣವೆಂದು ನಾನು ಭಾವಿಸಬೇಕು. ಈ ಭಾವನೆಯನ್ನು ಬಿತ್ತಿ ಬೆಳೆಯಬೇಕು’ – ಎಂದು ನಿರ್ಧರಿಸಿದೆ.

ನನ್ನ ದೃಢ ನಿರ್ಧಾರಕ್ಕೆ ತಾತ್ವಿಕ ನೆಲೆಯ ನುಡಿಗಟ್ಟು ಕೊಡತೊಡಗಿದೆ. ಇದು ಮೇಲರಿಮೆ – ಕೀಳರಿಮೆಗಳನ್ನು ಮೀರಿದ ಸೃಷ್ಟಿ ಸಮತೆಯ ಸಿದ್ಧಾಂತವೂ ಹೌದು. ಸಮ ಸಮಾಜದ ರೂಪಕ ಧ್ವನಿಯೂ ಹೌದು. ಸಂದರ್ಭಾನುಸಾರ ಉಚಿತ ಸಮಯ ಸಿಕ್ಕಾಗಲೆಲ್ಲ ದೃಢವಾಗಿ ಹೀಗೆ ಹೇಳತೊಡಗಿದೆ : ‘‘ನಮ್ಮದು ಶ್ರೀಗಂಧದ ಕರ್ನಾಟಕ ಮಾತ್ರವಲ್ಲ; ಜಾಲೀಮರಗಳ ಕರ್ನಾಟಕವೂ ಹೌದು, ಕೋಗಿಲೆಗಳ ಕರ್ನಾಟಕ ಮಾತ್ರವಲ್ಲ, ಕಾಗೆಗಳ ಕರ್ನಾಟಕವೂ ಹೌದು; ಕಾವೇರಿ ಕೃಷ್ಣೆಯರ ಕರ್ನಾಟಕ ಮಾತ್ರವಲ್ಲ, ನೀರು ಹರಿಯದ ಹಳ್ಳ ಕೊಳ್ಳಗಳ ಕರ್ನಾಟಕವೂ ಹೌದು; ಕಡಲಿನ ಕರ್ನಾಟಕ ಮಾತ್ರವಲ್ಲ; ಬಿರುಕು ಬಿಟ್ಟ ಬತ್ತಿದ ಕೆರೆಗಳ ಕರ್ನಾಟಕವೂ ಹೌದು’’.

ನನ್ನ ಈ ಮಾತುಗಳು ಕರ್ನಾಟಕವಷ್ಟೇ ಅಲ್ಲ ಒಟ್ಟು ಸಮಾಜದ ಸಾಮಾಜಿಕ- ಆರ್ಥಿಕ ಸನ್ನಿವೇಶದ ರೂಪಕವಾಗುತ್ತ, ನಿರ್ಲಕ್ಷಿತ ವಲಯಕ್ಕೆ ಸಮತೆ, ಘನತೆಗಳನ್ನು ಒದಗಿಸುವ ತಾತ್ವಿಕರೂಪವಾಗಿದ್ದವು. ವಾಚ್ಯಾರ್ಥವನ್ನು ಮೀರಿ ಬೆಳೆಯತೊಡಗಿದವು. ಮುಂದೆ ಕನ್ನಡದಲ್ಲಿ ಕಾಗೆಗಳನ್ನು ಕುರಿತ ಅನೇಕ ಕವಿತೆಗಳು ರಚನೆಯಾದವು.

ಶ್ರೀಗಂಧ, ಕೋಗಿಲೆ, ಕಾವೇರಿ, ಕೃಷ್ಣೆ, ಕಡಲುಗಳನ್ನು ನಾನು ಗೌಣಗೊಳಿಸುತ್ತಿಲ್ಲ. ಇವೆಲ್ಲವೂ ನಮ್ಮ ನಾಡಿನ ಹೆಮ್ಮೆಯ ರೂಪಗಳು. ಇವುಗಳ ಜೊತೆಗೆ ಬೇರೆ ರೂಪಿಕೆ ಗಳೂ ಇವೆಯೆಂಬುದನ್ನು ಮರೆಯಬಾರದು; ಅವುಗಳನ್ನು ನಿರ್ಲಕ್ಷಿಸಬಾರದು.

ಮುಂದುವರೆದು ನಾನು ‘ಕಾಗೆಯ ಕಾರುಣ್ಯ’ದ ಬಗ್ಗೆ ಮಾತಾಡತೊಡಗಿದೆ. ನಮ್ಮ ಸಾಮಾಜಿಕ ಸೌಹಾರ್ದಕ್ಕೆ ‘ಕಾಗೆಯ ಕಾರುಣ್ಯ’ ಎಷ್ಟು ಮುಖ್ಯ ಎಂದು ಪ್ರತಿಪಾದಿಸ ತೊಡಗಿದೆ. ಯಾವುದೀ ಕಾಗೆಯ ಕಾರುಣ್ಯ? ನೋಡಿ; ಕೋಗಿಲೆಯು ಮೊಟ್ಟೆ ಇಡುತ್ತದೆಯೇ ಹೊರತು, ತಾನೇ ಕಾವಿಗೆ ಕೂತು ಮರಿ ಮಾಡುವುದಿಲ್ಲ. ಕೋಗಿಲೆ ಇಟ್ಟ ಮೊಟ್ಟೆಯ ಮೇಲೆ ಕಾವಿಗೆ ಕೂತು ಮರಿ ಮಾಡುವುದು ಕಾಗೆ. ಕಾಗೆಯು ಮೊಟ್ಟೆ ಮೇಲೆ ಕಾವಿಗೆ ಕೂರದಿದ್ದರೆ ಮರಿ ಹೊರಬರುವುದಿಲ್ಲ. ಆದ್ದರಿಂದ ಕಾಗೆಯೇ ಕೋಗಿಲೆಯ ಸಂತತಿಯನ್ನು ಬೆಳೆಸುವ ಚಾಲಕ ಶಕ್ತಿ. ಅಲ್ಲದೆ ಹಂಚಿಕೊಂಡು ತಿನ್ನುವ ಕಾಗೆಯದು ಬಳಗ ಬಂಧುತ್ವ. ಇದು ಕಾಗೆಯ ಕಾರುಣ್ಯ. ನಮ್ಮ ಸಮಾಜಕ್ಕೆ ಕಾಗೆಯ ಕಾರುಣ್ಯವು ಒಂದು ಆದರ್ಶ ಮಾದರಿಯಾದರೆ, ಅದು ಸಮತೆ ಮಮತೆಗಳ ಮನಸ್ಸನ್ನು ರೂಪಿಸುತ್ತದೆ. ಜಾತಿ ಭೇದ ಮತ್ತು ಧರ್ಮದ್ವೇಷದ ವಾತಾವರಣವನ್ನು ತಿಳಿಗೊಳಿಸಲು ಮನುಷ್ಯರ ಮನಸ್ಸಿನಲ್ಲಿ ಕಾಗೆಯ ಕಾರುಣ್ಯ ಬೆಳಗಬೇಕು. ಆಗ ಮೇಲು-ಕೀಳುಗಳನ್ನು ಮೀರಿದ ಸೌಹಾರ್ದ ಸಮಾಜ ರೂಪುಗೊಳ್ಳುತ್ತದೆ.

(ಕೃತಿ: ಕಾಗೆ ಕಾರುಣ್ಯದ ಕಣ್ಣು (ಆಯ್ದ ಅನುಭವಗಳ ಕಥನ),

ಲೇಖಕರು: ಬರಗೂರು ರಾಮಚಂದ್ರಪ್ಪ,

ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು (90191 90502),

ಬೆಲೆ : ರೂ. 395/-)