ಸಹಜ ಬೇಸಾಯಕ್ಕೆ ಅಕ್ಷರ ರೂಪ

pustaka-parichaya

ಸಹಜ ಬೇಸಾಯಕ್ಕೆ ಅಕ್ಷರ ರೂಪ

ಪುಸ್ತಕ ಪರಿಚಯ

ಮಲ್ಲಿಕಾರ್ಜುನ ಹೊಸಪಾಳ್ಯ

ಸಹಜ ಬೇಸಾಯಕ್ಕೆ ಅಕ್ಷರ ರೂಪ

 

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಕೃಷಿಯಪಟ್ಟುಗಳನ್ನು ಕಲಿತು ಹಾಸನ ಜಿಲ್ಲೆ ಸಂತೇಶಿವರದಲ್ಲಿ ನೆಲೆಗೊಂಡು, ತಾವು ಕಲಿತಿದ್ದನ್ನೆಲ್ಲಾ ಅಲ್ಲಿ ಪ್ರಯೋಗಕ್ಕಿಳಿಸಿ ಯಶಸ್ವಿಯಾದವರು ಸಹಜ ಕೃಷಿಕ ಬಸವರಾಜು.  ಅವರ ನಾಲ್ಕು ದಶಕಗಳ ಕೃಷಿ ಅನುಭವಗಳನ್ನು ಬೆಂಗಳೂರಿನ ಇಕ್ರಾ(ಇನ್ಸ್ಟಿಟ್ಯೂಟ್‌ ಫಾರ್‌ ಕಲ್ಚರಲ್‌ ರಿಸರ್ಚ್‌ ಅಂಡ್‌ ಆಕ್ಷನ್)‌ ಸಂಸ್ಥೆ ಪುಸ್ತಕ ರೂಪದಲ್ಲಿ ಹೊರ ತಂದಿದೆ.ವಿ.ಗಾಯತ್ರಿ ಅವರು ನಿರೂಪಣೆ ಮಾಡಿದ್ದಾರೆ.ಕಳೆದ ಭಾನುವಾರ, ದಿನಾಂಕ 12.03.2023 ರಂದು ಅವರ ತೋಟದಲ್ಲಿ ನಡೆದ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಯಾಯಿತು. 

1952 ರಲ್ಲಿ ಜನಿಸಿ, 1974 ರಲ್ಲಿ ತುಮಕೂರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿಯನ್ನು ಪಡೆಯುವ ಇವರು, ಹಲವು ಉನ್ನತ ಸರ್ಕಾರಿ ನೌಕರಿ ಹುಡುಕಿ ಬಂದರೂ ತಂದೆಯ ಮಾತಿಗೆ ಬೆಲೆ ಕೊಟ್ಟು, ಅಣ್ಣನ ಮಾರ್ಗದರ್ಶನದಲ್ಲಿ ಹಳ್ಳಿಯಲ್ಲೇ ಕೃಷಿ ಬದುಕು ಕಟ್ಟಿಕೊಳ್ಳುವ ನಿರ್ಧಾರ ಮಾಡುತ್ತಾರೆ.

ಕಳೆದ ನಾಲ್ಕು ದಶಕಗಳಿಂದ ಸಹಜ ಬೇಸಾಯ ಮಾಡುತ್ತಿರುವ ಬಸವರಾಜು ಅವರು ನಮ್ಮ ನಾಡು ಕಂಡ ಶ್ರೇಷ್ಠ, ಯಶಸ್ವೀ ಸಹಜ ಕೃಷಿಕರಲ್ಲಿ ಒಬ್ಬರು. ಸಣ್ಣ  ರೈತ ಕುಟುಂಬದಿಂದ ಬಂದ ಇವರು ಕೃಷಿಯಲ್ಲಿ ರಾಸಾಯನಿಕವನ್ನು ಸೋಕಿಸದವರು. ತಮ್ಮ ಪರಂಪರಾಗತ ಕೃಷಿ ಜ್ಞಾನವನ್ನು ನಿರಂತರ ಸಂಶೋಧನೆಗಳೊಂದಿಗೆ ಹದವಾಗಿ ಬೆಸೆಯುತ್ತಾ ಸಹಜ ಕೃಷಿಯ ವಿಶಿಷ್ಟ ಲೋಕವನ್ನೇ ಸೃಷ್ಟಿಸಿದವರು.

೧೯೭೦ರಿಂದ ೮೦ರವರೆಗೆ ತನ್ನ ಅಣ್ಣನ ಮಾರ್ಗದರ್ಶನದಲ್ಲಿ ಮಾಡಿದ ಈ ಕೃಷಿ ಅನುಭವಗಳು ಪುಸ್ತಕದ ಮೊದಲ ಭಾಗದ ೬೫ ಪುಟಗಳಲ್ಲಿ ಅತ್ಯಂತ ಸಹಜವಾಗಿ ನಿರೂಪಿತವಾಗಿದೆ. ಆ ಕಾಲದ ತುಮಕೂರು ಜಿಲ್ಲೆಯ ಕೃಷಿ, ಬೀಜ ವೈವಿಧ್ಯ, ಅಕ್ಕಡಿ ಬೆಳೆ, ಅಪರೂಪಕ್ಕೆ ಉಣ್ಣುತ್ತಿದ್ದ ನೆಲ್ಲಕ್ಕಿ ಅನ್ನ, ನಿತ್ಯದ ಊಟವಾಗಿದ್ದ ಹಾರಕ, ಸಾವೆ ಅಕ್ಕಿಗಳ ಆಹಾರ ವೈವಿಧ್ಯ ಮುಂತಾದ ಮಾಹಿತಿಗಳ ನಿರೂಪಣೆಯನ್ನು ಓದುವುದೇ ಚೇತೋಹಾರಿ ಅನುಭವ.

ಭಾಗ ೨ರಲ್ಲಿ ೧೯೮೦ರಿಂದ ತನ್ನ ಅಕ್ಕನ ಮಗಳನ್ನು ಮದುವೆಯಾಗಿ ಸಂತೆಶಿವರದಲ್ಲಿ ನೆಲೆಸಿ ೬ ಎಕರೆ ಮಳೆಯಾಶ್ರಿತ ಜಮೀನಿನ ಸಾಗುವಳಿ ಆರಂಭಿಸಿದ ವಿವರಗಳು, ವಿನೂತನ ಪ್ರಯೋಗಗಳು, ಅನುಶೋಧನೆಗಳು, ಜಾನುವಾರು ನಿರ್ವಹಣೆ, ಕೃಷಿಕರಿಗೆ ಸಾಲದ ಅಗತ್ಯವಿಲ್ಲ ಇತ್ಯಾದಿ ವಿಚಾರಗಳು ಕಂಡುಬರುತ್ತವೆ.

ಮೂರನೇ ಭಾಗದಲ್ಲಿ ಬಸವರಾಜು ಅವರ ಅಣ್ಣನವರಾದ ಶಿವಣ್ಣನವರ ಬಗೆಗೆ ಒಂದು ಅಧ್ಯಾಯವಿದೆ. ಅಲ್ಲದೆ ಬಸವರಾಜು ಅವರ ಬಗೆಗೆ ಅವರ ಸ್ನೇಹಿತರ ಅನಿಸಿಕೆಗಳನ್ನು ನೀಡಲಾಗಿದೆ. ಗೂಬೆ ಸಾಕಾಣಿಕೆ, ಇಬ್ಬನಿಯ ಉಪಯೋಗ, ಬಹು ಬೆಳ ಉಪಯೋಗ ಇತ್ಯಾದಿ ಮಾಹಿತಿಯನ್ನು ಬಾಕ್ಸ್‌ಗಳಲ್ಲಿ ನೀಡಿರುವುದು ಉಪಯುಕ್ತ.

ಒಟ್ಟಾರೆ ಬಸವರಾಜು. ಬಿ.ಸಂತೇಶಿವರ ಅವರ ‘ಸಹಜ ಬೇಸಾಯ – ಹೆಜ್ಜೆ ಗುರುತುಗಳು’ಪುಸ್ತಕವು ಒಣಬೇಸಾಯ, ತೋಟ ಕಟ್ಟುವ ಹೊಸಬರಿಗೆ ಕೈಪಿಡಿಯಾಗಿದೆ.  ಸಹಜ ಕೃಷಿ, ಆಂದೋಲನವನ್ನು ಹರಡುವ ನಿಟ್ಟಿನಲ್ಲಿ ದಿಟ್ಟ ಪ್ರಯತ್ನವಾಗಿದೆ. ‘ಇವರ ತೋಟದಲ್ಲಿ ಒಂದೊಂದು ಮರಕ್ಕೂ ಒಂದೊಂದು ಸಂಶೋಧನೆ ಮಾಡಿದ್ದಾರಲ್ಲಾ, ಇವರಿಗೆಷ್ಟು ಪಿಎಚ್‌ಡಿ ಕೊಡಬೇಕು’ಎನ್ನುವ ಗದುಗಿನ ಧೀಮಂತ ಸಾವಯವ ಕೃಷಿಕದಿ| ಡಿ.ಡಿ. ಭರಮಗೌಡ್ರ ಅವರ ಒಂದೇ ಮಾತು ಇವರ ಇಡೀ ಸಾಧನೆಯನ್ನು ಸಮರ್ಥವಾಗಿ ಹಿಡಿದಿಡಬಲ್ಲುದು.

ಪ್ರಕಾಶಕರಾದ ಬಾಬುಪಿ. ಅವರು ತಮ್ಮ ನುಡಿಗಳಲ್ಲಿ  “ತಮ್ಮ ಸಣ್ಣ ಜಮೀನನ್ನೇ ಪ್ರಯೋಗಾಲಯ, ತಪೋಭೂಮಿ ಎಲ್ಲವನ್ನೂ ಆಗಿಸಿ ನಿಜ ಆನಂದ ಕಂಡುಕೊAಡಿರುವ ಬಸವರಾಜು ಅವರು ಇಂದು ಸಹಜ ಕೃಷಿಗೆ ಹೊರಳಲು ತುಡಿಯುತ್ತಿರುವ ಪ್ರತಿ ರೈತರಿಗೂ ಸ್ಫೂರ್ತಿಯ ಸೆಲೆಯಾಗಿದ್ದಾರೆ, ಮಾರ್ಗದರ್ಶಿಯಾಗಿದ್ದಾರೆ,ಈ ಪುಸ್ತಕ ಅವರ ಸಹಜ ಕೃಷಿ-ಬದುಕನ್ನುಅಕ್ಷರಗಳಲ್ಲಿ ಹಿಡಿದಿಡುವ ಮೂಲಕ ನಾಲ್ಕು ದಶಕಗಳ ಸಹಜ ಕೃಷಿ-ಬದುಕುಗಳ ಏಳು ಬೀಳುಗಳನ್ನು ದಾಟಿ, ಪರಿಸರ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುತ್ತಿರುವ ಅವರ ಧೀಮಂತತೆಗೆ ಕೃತಜ್ಞತೆ ಸಲ್ಲಿಸುವ ವಿನಮ್ರ ಪ್ರಯತ್ನವಾಗಿದೆ” ಎಂದು ಹೇಳಿರುವುದು ಬಸವರಾಜು ಅವರ ಹಿರಿಮೆಗೆ ಹಿಡಿದ ಕನ್ನಡಿ.

ಅ.ನ.ಯಲ್ಲಪ್ಪರೆಡ್ಡಿಯವರ ಚಿಕ್ಕ ಹಾಗೂ ಚೊಕ್ಕ ಬೆನ್ನುಡಿ ಇದೆ.೧೫೮ ಪುಟಗಳ ಪುಸ್ತಕದ ಬೆಲೆರೂ 150. ಉತ್ತಮವಿ ನ್ಯಾಸವಿದೆ, ಬಳಸಿರುವ ಚಿತ್ರಗಳು ಪೂರಕವಾಗಿವೆ. ಬಸವರಾಜು ಅವರ ಸಂಪರ್ಕ 9482008587 , ಇಕ್ರಾ ಸಂಪರ್ಕ 080-41626254