ಕೊನೆಗೂ ನಿಮ್ಮನ್ನು ನೀವು ಬಯಸಿದ ನಮ್ಮೂರಿಗೆ ಕರೆಸಿಕೊಳ್ಳಲಾಗಲಿಲ್ಲ! ನುಡಿ ನಮನ ಮಲ್ಲಿಕಾರ್ಜುನ ಹೊಸಪಾಳ್ಯ

ಕೊನೆಗೂ ನಿಮ್ಮನ್ನು ನೀವು ಬಯಸಿದ ನಮ್ಮೂರಿಗೆ ಕರೆಸಿಕೊಳ್ಳಲಾಗಲಿಲ್ಲ! ನುಡಿ ನಮನ ಮಲ್ಲಿಕಾರ್ಜುನ ಹೊಸಪಾಳ್ಯ

ಕೊನೆಗೂ ನಿಮ್ಮನ್ನು ನೀವು ಬಯಸಿದ ನಮ್ಮೂರಿಗೆ  ಕರೆಸಿಕೊಳ್ಳಲಾಗಲಿಲ್ಲ!   ನುಡಿ ನಮನ   ಮಲ್ಲಿಕಾರ್ಜುನ ಹೊಸಪಾಳ್ಯ

ಸ್ವಲ್ಪ ಅನಾರೋಗ್ಯವಿದ್ದರೂ, ಚೂರು ಬೀಪಿ, ಶುಗರ್ ಕಂಡರೂ ಅದನ್ನೇ ನೆಪ ಮಾಡಿ ಸಮಾಜಮುಖಿ ಕೆಲಸಗಳಿಂದ ದೂರವಾಗುವವರ ನಡುವೆ ಡಿಎಸ್ಸೆನ್ ಒಂದು ಅಚ್ಚರಿಯಾಗಿಯೇ ನನಗೆ ಕಂಡಿದ್ದಾರೆ. ತಮಗೆ ನಡೆಯಲು ಅನಾನುಕೂಲವಿದ್ದರೂ ಅಧ್ಯಯನ ಶಿಬಿರಗಳನ್ನು ಆಯೋಜಿಸುತ್ತಿದ್ದರು, ಈಶಾನ್ಯ ಭಾರತ ಮುಂತಾದ ಕಡೆ ಪ್ರವಾಸಕ್ಕೆ ಹೋಗುತ್ತಿದ್ದರು, ರಮಣ ಮಹರ್ಷಿಗಳ ಆಶ್ರಮಕ್ಕೆ ಭೇಟಿ ನೀಡುತ್ತಿದ್ದರು. ಪಟ್ಟಾಗಿ ಕಂಪ್ಯೂಟರ್ ಮುಂದೆ ಕುಳಿತು ಹೊಸ ಮನುಷ್ಯ ಸಿದ್ಧಪಡಿಸುತ್ತಿದ್ದರು.


ಕೊನೆಗೂ ನಿಮ್ಮನ್ನು ನೀವು ಬಯಸಿದ ನಮ್ಮೂರಿಗೆ

ಕರೆಸಿಕೊಳ್ಳಲಾಗಲಿಲ್ಲ!


ನುಡಿ ನಮನ


ಮಲ್ಲಿಕಾರ್ಜುನ ಹೊಸಪಾಳ್ಯ

“ಒಂದ್ಸಲ ನಮ್ಮನೆಗೆ ಬಂದಿದ್ರು, ಏನೋ ನೆನಪಿಸಿಕೊಂಡವರAಗೆ ಏ ನಡಿಯಯ್ಯ ನಮ್ಮೂರಿಗೆ ಹೋಗನ ಅಂತ ಕೇಬಿನೂ ನಮ್ಮನ್ನೂ ಕರಕೊಂಡು ಹೊರಟೇಬಿಟ್ರು. ಇಲ್ಲೇ ಡಾಬಸ್ ಪೇಟೆ ಹತ್ರ ತ್ಯಾಮಗೊಂಡ್ಲು ಅವರ ಊರು. ಅಲ್ಲಿಗೆ ಹೋಗುತ್ತಿದ್ದಂತೆ ಚಿಕ್ಕ ಮಕ್ಕಳಂಗೆ ಅದೇ ನಮ್ ಸ್ಕೂಲು, ಇಲ್ಲೇ ನಾವ್ ಮರಕೋತಿ ಆಡಿದ್ದು, ಇದೇ ನಮ್ಮೂರ್ ಕೆರೆ ಅಂತಾ ಖುಷಿಯಾಗಿ ಓಡಾಡ್ತಿದ್ರು. ಅವರ ಸಂಭ್ರಮ ನೋಡಿ ನನಗೂ ನನ್ ತವರು ಮನೆ ನೆನಪಾಗೋಯ್ತು . . .” ಗಂಗರಾಜಮ್ಮನವರ ನೆನಪಿನ ಕೋಶ ಹೀಗೆ ಬಿಚ್ಚಿಕೊಳ್ಳುತ್ತಿತ್ತು. ಆ ಕೋಶದಲ್ಲಿ ಇದ್ದಿದ್ದು ಡಿ.ಎಸ್. ನಾಗಭೂಷಣ (ಡಿಎಸ್ಸೆನ್) ಸರ್ ಅವರೊಂದಿಗಿನ ಬಹುಕಾಲದ ಒಡನಾಟ. 


ಹೌದು, ಡಿಎಸ್ಸೆನ್ ಅವರು ತಮ್ಮ ಹುಟ್ಟೂರಿನ ಕಡು ವ್ಯಾಮೋಹಿ. ಆ ಊರು, ಅಲ್ಲಿನ ಪರಿಸರ, ಬಾಲ್ಯದಲ್ಲಿ ಜತೆಗೂಡಿದವರು, ಆಡಿದವರು, ಒಡಹುಟ್ಟಿದವರು, ಹಿರಿಯರು, ವಾರಿಗೆಯವರು, ಬಿದ್ದು ಏಟು ಮಾಡಿಕೊಂಡಿದ್ದು, ಊಟ ಮಾಡಿದ್ದು  . . ಎಲ್ಲವನ್ನೂ ಆಗಾಗ ನೆನಪಿಸಿಕೊಳ್ಳುತ್ತಲೇ ಇದ್ದರು. ಅದರಲ್ಲಿಯೂ ತುಮಕೂರಿನವರಾದ ನಾನು, ದೇವರಹೊಸಳ್ಳಿ ಸುರೇಶ್ ಅಥವಾ ಇನ್ಯಾರೇ ಸಿಕ್ಕಾಗಲೆಲ್ಲಾ ತ್ಯಾಮಗೊಂಡ್ಲುವಿನ ಪ್ರಸ್ತಾಪವಾಗದೆ ಮಾತು ಮುಗಿಯುತ್ತಿರಲಿಲ್ಲ. 


ಒಮ್ಮೆ ಮನೆಗೆ ಊಟಕ್ಕೆ ಕರೆದಾಗ ಅವರದ್ದು ಒಂದೇ ಕಂಡಿಶನ್. ‘ಚಿತ್ರಾನ್ನ ಮಾಡಿದ್ರೆ ಬರ್ತೀನಿ’. ನಮಗೋ ಆಶ್ಚರ್ಯ, ಆನಂದ ಎರಡೂ. ಅಂಥಾ ಸರಳ ಕಂಡಿಶನ್ ಅದು. ಅದನ್ನು ಊಟ ಮಾಡುವಾಗಲೂ ಬಾಲ್ಯದಲ್ಲಿ ತಿಂದ ಚಿತ್ರಾನ್ನ, ಮೆಣಸಿನಕಾಯಿ ಬಜ್ಜಿಯದೇ ಮಾತು.  


2018ರ ಫೆಬ್ರವರಿಯಲ್ಲಿ ನೆಲಮಂಗಲ ತಾಲ್ಲೂಕು ಸಾಹಿತ್ಯ ಸಮ್ಮೇಳವನ್ನು ತ್ಯಾಮಗೊಂಡ್ಲುವಿನಲ್ಲಿ ಆಯೋಜಿಸಿದಾಗ ಡಿಎಸ್ಸೆನ್ ಅವರದೇ ಅಧ್ಯಕ್ಷತೆ. ಅದಕ್ಕೆ ಒಪ್ಪಿಕೊಳ್ಳಲು ಒಂದು ಮುಖ್ಯ ಕಾರಣ ಅವರ ಹುಟ್ಟೂರು ಎಂಬುದನ್ನು ಅವರೇ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. “ಆ ಊರಿನ ಒಂದು ಸಾಮಾನ್ಯ ಕುಟುಂಬದ ಹುಡುಗ ಸಾಹಿತ್ಯ ಸಮ್ಮೇಳನದ ನೆಪದಲ್ಲಿ ತಾಲ್ಲೂಕಿನ ಗಣ್ಯರ ಮುಂದೆ ಗಣ್ಯ ಅತಿಥಿಯಾಗಿ ನಿಲ್ಲುವುದು ನಿಜವಾಗಿಯೂ ರೋಮಾಂಚನದ ಅನುಭವವೇ” ಎಂದು ಆ ಸಂದರ್ಭದ ಸಂದರ್ಶನವೊAದರಲ್ಲಿ ನುಡಿದಿದ್ದರು. ಅವರಿಗೆ ಅತ್ಯಂತ ಸಂತೋಷ ಕೊಟ್ಟಿದ್ದ ಸಂದರ್ಭವದು. 


ನನ್ನ ‘ತೇಜಸ್ವಿ ನೆನಪಲ್ಲಿ . . . ಪ್ರಬಂಧ ಸಂಕಲನಕ್ಕೆ ಮುನ್ನುಡಿ ಬರೆದಿದ್ದರು. ನನ್ನಂಥಾ ಕಿರಿಯನಿಗೆ ಅವರಿಂದ ದೊರೆತ ಬಹುದೊಡ್ಡ ಆಶೀರ್ವಾದ ಅದು. ಪುಸ್ತಕದಲ್ಲಿದ್ದ ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಸೀಮೆಯ ಭಾಷಾ ಸೊಗಡನ್ನು ಬಾಯ್ತುಂಬಾ ಮೆಚ್ಚಿಕೊಂಡಿದ್ದರು.


ಈ ಹುಟ್ಟೂರ ಪ್ರೀತಿ ಎಲ್ಲಿಗೆ ತಲುಪಿತು ಎಂದರೆ ಆರೇಳು ವರ್ಷಗಳ ಹಿಂದೆ ಶಿವಮೊಗ್ಗದಿಂದ ತುಮಕೂರಿಗೆ ಮನೆ ಬದಲಾಯಿಸಬೇಕೆಂದು ತೀರ್ಮಾನಿಸಿದ್ದರು. ಆದರೆ ಸವಿತಾ ಮೇಡಂ ಅವರ ಬಂಧು-ಬಳಗವೆಲ್ಲಾ ಶಿವಮೊಗ್ಗದಲ್ಲೇ ಇದ್ದುದರಿಂದ ತೀವ್ರ ಮಧುಮೇಹದಿಂದಾಗಿ ಪದೇ ಪದೇ ಅಸ್ವಸ್ಥರಾಗುತ್ತಿದ್ದ ಡಿಎಸ್ಸೆನ್ ಅವರ ಆರೋಗ್ಯ ನೋಡಿಕೊಳ್ಳಲು ಅಲ್ಲಿದ್ದರೇ ಅನುಕೂಲವಾಗುತ್ತದೆ ಎಂದು ಮನಗಂಡು ತುಮಕೂರಿಗೆ ಬರುವುದಕ್ಕೆ ಹಿಂದೇಟು ಹಾಕಿದ್ದರು.


ಆದರೆ ಕಳೆದ ನವಂಬರ್ 2021ರಲ್ಲಿ ಕುಪ್ಪಳಿಯಲ್ಲಿ ಸಮಾಜವಾದಿ ಅಧ್ಯಯನ ಶಿಬಿರ ನಡೆಯುವಾಗ ನನ್ನಲ್ಲಿ ಸವಿತಾ ಮೇಡಂ ಅವರೇ ಡಿಎಸ್ಸೆನ್ ತುಮಕೂರನ್ನು ತುಂಬಾ ಹಂಬಲಿಸುತ್ತಿರುವುದಾಗಿ ಹೇಳಿ ಒಂದು ಮನೆ ನೋಡಲು ತಿಳಿಸಿದ್ದರು. ಒಡನೆಯೇ ನಾನು ಹಲವಾರು ಮನೆಗಳನ್ನು ನೋಡಿದ್ದೆ ಸಹ. ಶಿವಮೊಗ್ಗದಿಂದ ಬಂದು ಅವುಗಳನ್ನು ಪರಿಶೀಲಿಸಿ ಅಂತಿಮಗೊಳಿಸುವ ಹೊತ್ತಿಗೆ ಅವರಿಗೆ ಹುಷಾರು ತಪ್ಪಿತು. ಮೇ 15ರ ಹೊತ್ತಿಗೆ ವೈದ್ಯರು ಓಡಾಡಲು ತಿಳಿಸಿದ್ದಾರೆ, ಆನಂತರ ಬರುತ್ತೇವೆ ಎಂದು ಫೋನಿನಲ್ಲಿ ತಿಳಿಸಿದ್ದರು. ಜೊತೆಗೆ ನೋಡಿರುವ ಮನೆಗಳ ಬಗ್ಗೆ ವಿವರಗಳನ್ನೆಲ್ಲಾ ಕೇಳಿದ್ದರು.  ಆದರೆ ಮೇ 19ಕ್ಕೆ ಅವರೇ ದೂರವಾದರು. 


ಆರೋಗ್ಯ ನೇರ್ಪಾಗಿದ್ದರೆ ತುಮಕೂರಿನ ಬಾಡಿಗೆ ಮನೆಗೆ ಬಂದು ಹಾಲುಕ್ಕಿಸಿ ಸಂಭ್ರಮಿಸಬೇಕಿದ್ದ, ಆ ಸಂಭ್ರಮದ ಗಳಿಗೆಯಲ್ಲಿ ಪಾಲುದಾರರಾಗಬೇಕಿದ್ದ ನಾವು ತುಮಕೂರಿನ ಒಡನಾಡಿಗಳು ಅವರಿಗೆ ನುಡಿ ನಮನ ಸಲ್ಲಿಸಬೇಕಾದ ಸಂದರ್ಭ ಬಂದುಬಿಟ್ಟಿತು. ನುಡಿನಮನದಲ್ಲೂ ಅವರ ತುಮಕೂರು ಪ್ರೀತಿಯನ್ನು ಬಹುತೇಕರು ಮೆಲುಕು ಹಾಕಿದರು. ಅದರಲ್ಲಿ ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿದಂತೆ ಗಂಗರಾಜಮ್ಮನವರ ಮಾತುಗಳಂತೂ ಎಲ್ಲರ ಎದೆಯನ್ನು ತೇವಗೊಳಿಸಿದವು. ಅಲ್ಲಿದ್ದವರ ಮಾತುಗಳಲ್ಲಿ ಡಿಎಸ್ಸೆನ್ ಅವರ ಮಗುತನ, ಹಠ, ವಿದ್ವತ್ , ಸಂಘಟನಾ ಸಾಮರ್ಥ್ಯ, ಖಚಿತ ನಿಲುವುಗಳು, ಆಕಾಶವಾಣಿಯಲ್ಲಿ ಮೂಡಿಬರುತ್ತಿದ್ದ ಅವರ ಗಡುಸು ಧ್ವನಿ, ವಾಗ್ವಾದಗಳ ನಡುವೆಯೂ ಅವರಲ್ಲಿದ್ದ ಮನುಷ್ಯ ಪ್ರೀತಿ, ಮೀಸಲಾತಿ ಬಗೆಗಿನ ಅವರ ಆಲೋಚನೆ ಇತ್ಯಾದಿಗಳೆಲ್ಲಾ ಪ್ರಸ್ತಾಪವಾದವು. 


ನನಗನ್ನಿಸಿದ್ದು ಒಂದೇ, ಕೊನೆಗೂ ಅವರನ್ನು ತುಮಕೂರಿಗೆ ಕರೆಸಿಕೊಳ್ಳಲು ಆಗಲಿಲ್ಲ. ಆ ಕೊರಗು ಬಹುಕಾಲ ನನ್ನಲ್ಲಿ ಉಳಿಯಲಿದೆ. ಆದರೆ ಒಂದು ತೃಪ್ತಿ ಇದೆ. ನಾನು ಶಿವಮೊಗ್ಗದಲ್ಲಿದ್ದಾಗ 2-3 ವರ್ಷ ಅವರ ಒಡನಾಟವನ್ನು ತೀವ್ರವಾಗಿ ಅನುಭವಿಸಿದ್ದೇನೆ. ಅವರ ಮನೆಗೆ ಸಾಕಷ್ಟು ಬಾರಿ ಹೋಗಿದ್ದೇನೆ. ಸವಿತಾ ಮೇಡಂ ಅವರ ಆತಿಥ್ಯ ಉಂಡಿದ್ದೇನೆ. ಅವರ ಶಿವಮೊಗ್ಗ ಗೆಳೆಯರ ಬಳಗ ಈಗ ನನ್ನದೂ ಆಗಿದೆ. ಸ್ನೇಹಿತರ ಮನೆಗಳಿಗೆ ಊಟಕ್ಕೆ ಹೋದಾಗಲೆಲ್ಲಾ ನನ್ನನ್ನೂ ಆಹ್ವಾನಿಸಿದ್ದು ಅವರ ಪ್ರೀತಿಯ ಕುರುಹು. 


ಹೊಸ ಮನುಷ್ಯ ಪತ್ರಿಕೆಯಲ್ಲಿ ನನ್ನ ಹಲವು ಬರಹಗಳಿಗೆ ಅವಕಾಶ ಸಿಕ್ಕಿದೆ. ಸತತ ಎರಡು ವರ್ಷ ಕುಪ್ಪಳಿಯ ಸಮಾಜವಾದಿ ಅಧ್ಯಯನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಡಿಎಸ್ಸೆನ್ ಅವರ ಸಂಘಟನಾ ಶಿಸ್ತನ್ನು ಕಂಡಿದ್ದೇನೆ, ಕಲಿತಿದ್ದೇನೆ. ಅವರ ವಯಸ್ಸಿನ ಬೇರಾವ ಸಾಹಿತಿ, ಲೇಖಕರೂ ಸಹ ನೂರಾರು ಯುವಕರ ಜೊತೆ ಸತತ ಹತ್ತು ವರ್ಷ ಹೀಗೆ ಸಂವಾದ ಮಾಡಿದ್ದನ್ನು ನಾನು ನೋಡಿಲ್ಲ. ಅದೊಂದು ಮೇಲ್ಪಂಕ್ತಿ. 


ಸ್ವಲ್ಪ ಅನಾರೋಗ್ಯವಿದ್ದರೂ, ಚೂರು ಬೀಪಿ, ಶುಗರ್ ಕಂಡರೂ ಅದನ್ನೇ ನೆಪ ಮಾಡಿ ಸಮಾಜಮುಖಿ ಕೆಲಸಗಳಿಂದ ದೂರವಾಗುವವರ ನಡುವೆ ಡಿಎಸ್ಸೆನ್ ಒಂದು ಅಚ್ಚರಿಯಾಗಿಯೇ ನನಗೆ ಕಂಡಿದ್ದಾರೆ. ತಮಗೆ ನಡೆಯಲು ಅನಾನುಕೂಲವಿದ್ದರೂ ಅಧ್ಯಯನ ಶಿಬಿರಗಳನ್ನು ಆಯೋಜಿಸುತ್ತಿದ್ದರು, ಈಶಾನ್ಯ ಭಾರತ ಮುಂತಾದ ಕಡೆ ಪ್ರವಾಸಕ್ಕೆ ಹೋಗುತ್ತಿದ್ದರು, ರಮಣ ಮಹರ್ಷಿಗಳ ಆಶ್ರಮಕ್ಕೆ ಭೇಟಿ ನೀಡುತ್ತಿದ್ದರು. ಪಟ್ಟಾಗಿ ಕಂಪ್ಯೂಟರ್ ಮುಂದೆ ಕುಳಿತು ಹೊಸ ಮನುಷ್ಯ ಸಿದ್ಧಪಡಿಸುತ್ತಿದ್ದರು. ಕೆಲ ಕಾಲ ಫೇಸ್ ಬುಕ್ಕಿನಲ್ಲಿಯೂ ಸಕ್ರಿಯರಾಗಿದ್ದರು. ಪುಸ್ತಕಗಳನ್ನು ಪ್ರಕಟಿಸುತ್ತಿದ್ದರು. ಅಷ್ಟೇ ಅಲ್ಲ ಪ್ರಜಾವಾಣಿಯ ವಾಚಕರ ವಾಣಿಗೆ ಅಗತ್ಯವಾದಾಗಲೆಲ್ಲಾ ಪ್ರತಿಕ್ರಿಯಿಸುತ್ತಿದ್ದರು.


ತಮ್ಮ ನೋವನ್ನು ಮರೆಯಲೋಸುಗವೇ ಇಷ್ಟೆಲ್ಲಾ ಚಟುವಟಿಕೆಗಳಲ್ಲಿ ತಲ್ಲೀನರಾಗುತ್ತ್ತಿದ್ದರಾ ಎಂಬ ಸಂಶಯವೂ ನನಗೆ ಬಂದಿದ್ದಿದೆ. ಏಕೆಂದರೆ ಒಮ್ಮೆ ಹೊಸ ಮನುಷ್ಯ ಪ್ರಕಟಣೆ ನಿಲ್ಲಿಸಿ ಕೆಲವೇ ತಿಂಗಳಲ್ಲಿ ಮತ್ತೆ ಆರಂಭಿಸಿದರು. ಅದಕ್ಕೆ ಕಾರಣ ಒಂದಲ್ಲಾ ಒಂದು ಕೆಲಸದಲ್ಲಿ ತಾವು ತೊಡಗಿಸಿಕೊಳ್ಳಬೇಕೆಂಬುದೇ ಆಗಿತ್ತು. 


ಅವರ ಬಹುಮುಖ, ಕಾಲಕ್ರಮ, ನೀರೆಲ್ಲವೂ ತೀರ್ಥ ಪುಸ್ತಕಗಳಲ್ಲಿ ಒಂದು ವಿಶೇಷ ಗಮನಿಸಿದ್ದೇನೆ. ಅವರು ಪತ್ರಿಕೆಗಳಿಗೆ ಬರೆದ ಹಲವು ಅಭಿಪ್ರಾಯಗಳು, ಲೇಖನಗಳು ಹಾಗೂ ಪ್ರತಿಕ್ರಿಯೆ ಮತ್ತು ಪತ್ರಗಳು ಪ್ರಕಟವಾಗದೆ ತಿರಸ್ಕರಿಸಲ್ಪಟ್ಟಿದ್ದವು. ಅವುಗಳನ್ನೆಲ್ಲಾ ದಿನಾಂಕ ಸಹಿತ ಇಂತಹ ಪತ್ರಿಕೆಯಿಂದ ಅಪ್ರಕಟಿತ ಅಥವಾ ತಿರಸ್ಕರಿಸಿದ್ದು ಎಂದು ನಮೂದಿಸಿಯೇ ಪ್ರಕಟಿಸಿದ್ದಾರೆ. ನನಗೆ ಅಚ್ಚರಿ ತರಿಸಿದ ನಡೆ ಇದು, ಮತ್ತು ಇಂತಹುದು ಆಗಬೇಕು ಎನಿಸಿದೆ.


‘ಗಾಂಧಿ ಕಥನ’ ಕೃತಿಗೆ ಕನ್ನಡ ಜನತೆ ತೋರಿಸಿದ ಪ್ರೀತಿಗೆ ಅವರು ತುಂಬಾ ಸಂತೋಷಪಟ್ಟಿದ್ದರು. ಗಾಂಧಿಯನ್ನು ಅಪ್ರಸ್ತುತಗೊಳಿಸಲು ಸಾಧ್ಯವಿಲ್ಲ ಎಂಬುದು ಇದರಿಂದ ಅವರಿಗೆ ಮನವರಿಕೆಯಾಗಿತ್ತು. ತುಂಬಾ ಕಡೆ ಈ ಮಾತನ್ನು ಉಚ್ಚರಿಸಿದ್ದರು. ಅದನ್ನು ಹೇಳುವಾಗೆಲ್ಲಾ ಅವರ ಮುಖದಲ್ಲಿ ಒಂದು ನೆಮ್ಮದಿ ಹಾದು ಹೋಗುತ್ತಿತ್ತು.


ಮೇ 19ರಂದು ತುಂಗಭದ್ರಾ ನದೀ ತಟದಲ್ಲಿ ಮಲಗಿದ್ದ ಅವರ ಮುಖದಲ್ಲಿ ಅತೀವ ಪ್ರಶಾಂತತೆ ಇದ್ದುದನ್ನು ಅಂತ್ಯಕ್ರಿಯೆಗೆ ಹೋಗಿದ್ದ ನನ್ನ ಮಡದಿ ಹೇಳಿದಾಗ ಒಡನೆಯೇ ನನಗನ್ನಿಸಿದ್ದು, ತಮ್ಮ ಮಹತ್ವಾಕಾಂಕ್ಷೆಯ ‘ಗಾಂಧಿ ಕಥನ’ವನ್ನು, ಆ ಮೂಲಕ ಗಾಂಧಿಯನ್ನು ಕನ್ನಡಿಗರು ಅಪ್ಪಿಕೊಂಡ ಬಗೆಯನ್ನು ಕಂಡಿದ್ದೇ ಅವರ ಆ ಪ್ರಶಾಂತತೆಗೆ ಕಾರಣ.