ಹೆಂಡದ ಬಾಟಲಿಗೆ ಬಿರಡೆ ಹಾಕಿ ಮಾಡಿಕೊಂಡ ಅನಾಹುತ!?

toddy-bottle-and-cap, ಹೆಂಡದ ಬಾಟಲಿಗೆ ಬಿರಡೆ ಹಾಕಿ ಮಾಡಿಕೊಂಡ ಅನಾಹುತ!?

ಹೆಂಡದ ಬಾಟಲಿಗೆ ಬಿರಡೆ ಹಾಕಿ ಮಾಡಿಕೊಂಡ ಅನಾಹುತ!?

ಒಂದು ಗಳಿಗೆ
ಕುಚ್ಚಂಗಿ ಪ್ರಸನ್ನ 

ಮನುಷ್ಯನಿಂದ ಮನುಷ್ಯನಿಗಾಗಿ ಮನುಷ್ಯನಿಗೋಸ್ಕರ ಸೃಷ್ಟಿಯಾಗಿರುವ ಮದ್ಯವನ್ನು ಈ ಮನುಷ್ಯ ಅನ್ನುವ ಪ್ರಾಣಿ ಪ್ರಾಣ ಹೋದರೂ ಸರಿ ಕುಡಿಯೋದನ್ನು ಬಿಡಲ್ಲ. ಹೆಂಡ, ಸಾರಾಯಿ, ವೈನ್‌, ರಮ್‌, ಬ್ರಾಂದಿ, ವಿಸ್ಕಿ, ಜಿನ್‌, ವೋಡ್ಕಾ, ಬಿಯರ್‌ ಹೀಗೇ ಹತ್ತಾರು ಹೆಸರುಗಳಲ್ಲಿ ಸಾವಿರಾರು ಬ್ರಾಂಡ್‌ಗಳಲ್ಲಿ ಮಾರಾಟವಾಗುವ ದ್ರವದ ಜೀವದ್ರವ್ಯ  ಆಲ್ಕೋಹಾಲ್‌. ಈ ಆಲ್ಕೋಹಾಲ್‌ನ  ಹಿಸ್ಟರಿ, ಕೆಮಿಸ್ಟ್ರಿ ಕುರಿತ ಸದ್ಯದಲ್ಲೇ ಪ್ರಕಟವಾಗಲಿರುವ ನನ್ನ ಪುಸ್ತಕ ʼಚಿರ‍್ಸ್‌ʼನಿಂದ ಆಯ್ದ ಅಧ್ಯಾಯ

ಹೆಂಡದ ಬಾಟಲಿಗೆ ಬಿರಡೆ ಹಾಕಿ ಮಾಡಿಕೊಂಡ ಅನಾಹುತ!?

ಉತ್ತರ ಕೇರಳದ ಬೇಕಲ್‌ನಿಂದ ಮಡಕೇರಿ ಮರ‍್ಗವಾಗಿ ಬರುವ ಹಾದಿಯಲ್ಲಿ ಕರಿಕೆಯಿಂದ ಭಾಗಮಂಡಲಕ್ಕಿರುವುದು ಕೇವಲ 20 ಕಿಲೋಮೀಟರ್ ಎಂದು ಮೈಲಿಗಲ್ಲು ಹೇಳುತ್ತಿತ್ತು. ಹೈವೇಗಳಲ್ಲಿ 20 ನಿಮಿಷಗಳಲ್ಲಿ ತಲುಪಬಹುದಾದ ಈ ದೂರವನ್ನು ಕ್ರಮಿಸಲು ನಮಗೆ ಒಂದೂವರೆ ಗಂಟೆಗೂ ಹೆಚ್ಚಿನ ಅವಧಿ ಹಿಡಿಯಿತು. ರಸ್ತೆ ಚೆನ್ನಾಗಿಲ್ಲ ಎಂಬುದನ್ನೂ ಮರೆಸಿ, ಇಲ್ಲೇ ಇದ್ದು ಬಿಡೋಣ ಎನ್ನುವಂತೆ ಮಾಡಿದ್ದು ಈ ಹಾದಿಯಲ್ಲಿನ ಅಪ್ಸರೆಯರಂಥಾ ಬೆಳ್ನೊರೆಯ ಝರಿಗಳು. ಇವನ್ನು ಕಿರು ಜಲಪಾತ ಎಂದು ಕರೆಯುವುದೇ ವಾಸಿ. ರಸ್ತೆಯ ಎಡಭಾಗದಲ್ಲಿ ಒಂದಷ್ಟು ಝರಿಗಳು ಕಂಡವು. ಮಳೆಗಾಲದಲ್ಲೇನಾದರೂ ಹೋಗಿದ್ದರೆ ಅದರ ಕತೆಯೇ ಬೇರೆ ಹೆಚ್ಚು ಕಮ್ಮಿ ಹದಿನೈದರಿಂದ ಇಪ್ಪತ್ತು ತುಂಬಿ ಹರಿಯುವ ಝರಿಗಳನ್ನು ಕಾಣಬಹುದು ಎಂಬುದಾಗಿ ಸಣ್ಣಗೆ ಸೋನೆಯಂತೆ ಹರಿಯುತ್ತಿರುವ ಜಾಗಗಳಲ್ಲಿ ನೀರು ಹರಿದಿದ್ದ ಮಾರ್ಕುಗಳನ್ನು ಕಂಡು ಅರ್ಥ ಮಾಡಿಕೊಂಡೆವು. 


ಈ ಝರಿಗಳನ್ನು ಸುಮ್ಮನೇ ಕಿಟಕಿಯಿಂದಾಚೆ ನೋಡುತ್ತ ಹೋಗಲು ನಮ್ಮ ಕೋತಿ ಮನಸ್ಸು ಒಪ್ಪಲಿಲ್ಲ. ಸರಿ ರಸ್ತೆ ತುಸು ಅಗಲವೂ ಆಗಿದ್ದ ಕಡೆ ಇದ್ದ ಝರಿಯ ಹತ್ತಿರ ವಾಹನವನ್ನು ನಿಲ್ಲಿಸಿದ್ದೇ ತಡ, ಹಿಮದಂತೆ ತಣ್ಣಗೆ ಕೊರೆವ ಜಲಪಾತದ ಷವರ್ ಕೆಳಕ್ಕೆ ನನ್ನ ಮಗಳು ಹೋಗಿ ನಿಂತೇ ಬಿಟ್ಟಳು. ಅವಳು ಜಾರದಂತೆ ನೋಡಿಕೊಳ್ಳುವ ಎಂದಿನ ಹೊಣೆಗಾರಿಕೆ ನನ್ನದಾಗಿ, ಅರೆ ಬರೆ ನೆನೆಯುತ್ತ ನಾನೂ ಮಗ್ಗುಲಲ್ಲಿ ನಿಂತೆ. ತುಸು ಶುಚಿ ಪ್ರಜ್ಞೆ ಜಾಸ್ತಿ ಇರುವ ನನ್ನ ಸಹಯಾನಿ ತೀರಾ ಎಚ್ಚರಿಕೆಯಿಂದ ಜೋಪಾನ ಮಾಡುತ್ತ, ಕೈಕಾಲು ಮುಖ ತೊಳೆಯುತ್ತ, ನೀರನ್ನು ತೀರ್ಥದಂತೆ ಸಿಂಪಡಿಸಿಕೊಳ್ಳುತ್ತಿದ್ದಾಕೆಯ ಕಾಲ ಬೆರಳ ಸಂದಿಗಳಿAದ ನೀರಿನೊಂದಿಗೆ ರಕ್ತವೂ ಒಸರತೊಡಗಿತು. ಅದು ಇನ್ನಾರು ಅಲ್ಲ ನಮ್ಮ ಕಡೆ ಜಿಗಣೆ ಎಂದು ಕರೆಯುವ ಇಂಬಳವೇ ಎಂದು ಖಚಿತವಾಯಿತು. ಪಾಪ ಎಷ್ಟು ದಿನಗಳಿಂದ ಹಸಿದುಕೊಂಡಿತ್ತೋ ಏನೋ. 


ಜಿಗಣೆಯ ಅಹಾರ ಕ್ರಮವೇ ಹಾಗೆ. ಒಂದು ಸಲ ಒಂದಿಷ್ಟು ಸಸ್ತನಿಗಳ ರಕ್ತವನ್ನು ಹೊಟ್ಟೆಗಳ ತುಂಬ ಕುಡಿದುಬಿಟ್ಟರೆ ಸಾಕು. ಕನಿಷ್ಟ ಆರು ತಿಂಗಳಾದರೂ ಪರವಾಗಿಲ್ಲ. ಹೊಟ್ಟೆಗಳ ತುಂಬ ಅಂತ ನಾನು ತಪ್ಪೇನೂ ಬರೆದಿಲ್ಲ, ಜಿಗಣೆಗಳಿಗೆ ನಮ್ಮಂತೆ ಒಂದು ಹೊಟ್ಟೆಯಿಲ್ಲ ಹೊಟ್ಟೆಗಳ ಸಾಲೇ ಇದೆ. ಇಂಥಾ ಹೊಟ್ಟೆಗಳಲ್ಲಿ ತನ್ನ ಆಹಾರವಾದ ರಕ್ತವನ್ನು ಕೂಡಿಟ್ಟುಕೊಂಡು ಜೋಪಾನವಾಗಿ ಹನಿ ಹನಿಯನ್ನೇ ಜೀರ್ಣಿಸಿಕೊಳ್ಳುತ್ತದೆ (ಚಿತ್ರ ನೋಡಿ). ಯಾರಾದರೂ ಜಿಗಣೆಗಳಿಂದ ಕಚ್ಚಿಸಿಕೊಂಡಿರುವವರನ್ನು ಕೇಳಿ ನೋಡಿ, ಆ ಜೀವಿಯನ್ನು ಅವರನ್ನು ಕಚ್ಚಿದಾಗ ಹಾಗೂ ರಕ್ತವನ್ನು ಹೀರುತ್ತಿರುವಾಗ ಅವರಿಗೆ ಏನೂ ಗೊತ್ತಾಗಿರುವುದೇ ಇಲ್ಲ. ಸಾಕಷ್ಟು ರಕ್ತವನ್ನು ಹೀರಿದ ಮೇಲೆ ತಂತಾನೇ ಬಿದ್ದು ಹೋಗುತ್ತದೆ, ಆಮೇಲಷ್ಟೇ ರಕ್ತ ಒಸರುವುದನ್ನು ಕಂಡು ಓ ಏನೋ ಆಗಿದೆ ಎಂದು ಹುಡುಕಿಕೊಳ್ಳುವುದು. ವಿಶಿಷ್ಟವಾದ ಸಾಲು ಹೊಟ್ಟೆಗಳನ್ನು ಹೊಂದಿರುವAತೆಯೇ, ರಕ್ತ ಹೀರುವಾಗಲೂ ತನ್ನ ವಿಶಿಷ್ಟ ಗುಣವನ್ನು ಪ್ರದರ್ಶಿಸುತ್ತದೆ. ನೀರಿಗಿಳಿದ ಮನುಷ್ಯರು ಅಥವಾ ದನ, ಎಮ್ಮೆ ಅಥವಾ ಕಾಡು ಪ್ರಾಣಿಗಳ ಚರ್ಮದ ಮೇಲೆ ಅವರಿಗೆ ಅರಿವೇ ಆಗದೆ ಕುಂತುಕೊಳ್ಳುವ ಜಿಗಣೆಗಳು ಚರ್ಮವನ್ನು ರಂಧ್ರ ಮಾಡುವಾಗ ನಮಗೆ ಶಸ್ತçಚಿಕಿತ್ಸೆ ಮಾಡುವಾಗ ಬಳಸುವ ಅನಸ್ತೇಶಿಯಾದಂತದ್ದೇ ಏನನ್ನೋ ನಮ್ಮ ಚರ್ಮಕ್ಕೆ ಲೇಪಿಸುತ್ತದೆ ಮತ್ತು ಅದು ರಕ್ತವನ್ನು ಕುಡಿಯುವಾಗ ಆ ರಕ್ತವು ಹೆಪ್ಪುಗಟ್ಟದಂತೆ ಮತ್ತೊಂದು ದ್ರವವನ್ನೂ ಬಿಟ್ಟುಕೊಳ್ಳುತ್ತದೆ. ಲ್ಯಾಬುಗಳಲ್ಲಿ ನಮ್ಮ ರಕ್ತವನ್ನು ಪುಟ್ಟ ಬಾಟಲಿಗಳಲ್ಲಿ ಸಂಗ್ರಹಿಸುವಾಗ ಮತ್ತು ನಾವು ಯಾರಿಗಾದರೂ ರಕ್ತವನ್ನು ಕೊಟ್ಟಾಗಲೂ ಒಂದು ರಕ್ತ ಹೆಪ್ಪುಗಟ್ಟದಂತೆ ಒಂದು ರಾಸಾಯನಿಕವನ್ನು ಮೊದಲೇ ಹಾಕಿರುತ್ತಾರೆ. ಇಂತಾ ಜಿಗಣೆಯನ್ನು ಕೆಲ ಮನುಷ್ಯರಿಗೂ ಹೋಲಿಸಿ ಜಿಗಣೆ ಕಣ್ರೀ ಅಂತ ಬೈಯುತ್ತೇವೆ ಅಲ್ವಾ, ಆದರೆ ಜಿಗಣೆಯಾದರೋ ತನಗೆ ಅವಶ್ಯವಿರುವಷ್ಟು ರಕ್ತವನ್ನು ಹೀರಿಕೊಂಡ ಮೇಲೆ ಉದುರಿ ಹೋಗುತ್ತದೆ, ಆದರೆ ಮನುಷ್ಯರು ಹಾಗಲ್ಲ ಬಿಡಿ.


ಜಿಗಣೆಯನ್ನು ಹುಡುಕಿ, ತೆಗೆದು ಹಾಕಿದ ಮೇಲೂ ಬೆರಳುಗಳ ನಡುವೆ ಏನೋ ಇದೆ ಎನ್ನುವ ಭಾವದಲ್ಲೇ ಕುಳಿತಿದ್ದವಳಿಗೆ ಜಿಗಣೆಯ ಜೀವಶಾಸ್ತç ಹೇಳುತ್ತ ಸಮಾಧಾನ ಮಾಡುತ್ತಿದ್ದಾಗಲೇ ಬಾಳೆ, ಅಡಿಕೆ ತೋಟಗಳ ಸಾಲು ಕಣ್ಣಿಗೆ ಬೀಳತೊಡಗಿದವು. ಅಗೋ ಎನ್ನುವಾಗ ಭಾಗಮಂಡಲ ಬಂದೇ ಬಿಟ್ಟಿತು. ಬ್ರಿಟಿಷರ ಕಾಲದ್ದೇನೋ ಎಂಬAತೆ ಕಾಣುವ ಪ್ರವಾಸಿ ಮಂದಿರದ ಹತ್ತಿರ ನಿಂತು ಫ್ರೆಷಪ್ ಆಗುವ ಹೊತ್ತಿಗೆ, ಸಜ್ಜನ ಮೇಟಿಯ ಕಡೆಯಿಂದ ‘ಟೀ ಭಾಗ್ಯ’ವೂ ದೊರಕಿತು. ಈ ಝರಿಗಳ ಸೌಂರ‍್ಯ ಮತ್ತು ಜಿಗಣೆ ಮಾಡಿದ ಅವಾಂತರದಲ್ಲಿ ಕೇರಳ ಟಾಡಿ ಷಾಪ್‌ನಲ್ಲಿ ನೀರಿನ ಬಾಟಲಿಗೆ ತುಂಬಿಟ್ಟುಕೊAಡಿದ್ದ ತಿಳಿನೀರು ಮಜ್ಜಿಗೆಯಂಥ ಹೆಂಡ ಇದ್ದದ್ದು ಮರೆತೇ ಹೋಗಿತ್ತು! ಹೆಂಡದ ಬಗ್ಗೆ ಏನೂ ಗೊತ್ತಿರದ ನಾವು ಮಾಡಿದ್ದ ಆನಾಹುತ ಏನೆಂಬುದು ಆ ಮುಂದಿನ ಕ್ಷಣಗಳಲ್ಲೇ ನಮಗೆ ಅರಿವಾಗಿದ್ದಷ್ಟೇ ಅಲ್ಲದೆ ಮರೆಯಲಾದ ಅನುಭವವೂ ಆಯಿತು. 


ಕಾರಿನ ಸಾರಥಿಯಾಗಿರುವ ನಾನು ಕಾರನ್ನು ಚಾಲನೆ ಮಾಡುತ್ತ, ಕುಡಿಯಲು ನೀರನ್ನೋ ಇನ್ನೇನನ್ನೋ ಕೇಳಿದಾಗ ಪಕ್ಕದಲ್ಲಿ ಕುಳಿತ ಸಹಯಾನಿ ಬಾಟಲಿಯ ಬಿರಡೆಯನ್ನು ತೆಗೆದು, ನೀರು ತುಂಬಿದ ಬಾಟಲಿಯನ್ನು ನನ್ನ ಕೈಗೆ ಕೊಡುವುದು ರೂಡಿ. ನಾನು ಆ ತಿಳಿ ಮಜ್ಜಿಗೆಯಂತ ಬಿಳಿ ದ್ರವವಿದ್ದ ಬಾಟಲಿಯತ್ತಲೂ ಕೈ ತೋರಿ ಕೊಡಿಲ್ಲಿ ಅಂದಾಗಲೂ ಅವಳು ಮಾಡಿದ್ದೂ ಅದೇ ರೂಡಿಗತ ಕ್ರಿಯೆಯನ್ನೇ. ಬಾಟಲಿಯ ಮುಚ್ಚಳವನ್ನು ಒಂದಿಷ್ಟು ಬಿಚ್ಚುತ್ತಲೇ ‘ಟಪ್’ ಎಂಬ ದೊಡ್ಡ ಸದ್ದಿನೊಂದಿಗೆ ಮುಚ್ಚಳ ಹಾರಿ ಕಾರಿನ ಛಾವಣಿಗೆ ಜೋರಾಗಿ ತಗುಲಿ ಎಲ್ಲೋ ಬಿತ್ತು. ಮುಚ್ಚಳ ಹಾರುವಾಗ ಮುಚ್ಚಳವನ್ನು ಬಿಚ್ಚುತ್ತಿದ್ದ ಅವಳ ಕೈಯಿಗೂ ಸಾಕಷ್ಟು ಡ್ಯಾಮೇಜನ್ನೂ ಮಾಡಿಬಿಟ್ಟಿತು. ಆಕೆಯ ಕೈಯ ಬೆರಳುಗಳು ಕ್ಯಾಪ್ಸಿಕಮ್‌ ಬೋಂಡದಂತೆ ಊದಿಕೊಂಡುಬಿಟ್ಟಿತು. ರಸ್ತೆ ನೋಡುತ್ತಿದ್ದ ನನಗೆ ಅದೇನಾಯಿತೆಂದು ಅರಿವಾಗದೇ ಹೋದರೂ ಸದ್ದಿಗೆ ಗಾಬರಿಯಾಗಿ ಕಾರನ್ನು ರಸ್ತೆ ಪಕ್ಕಕ್ಕೆ ಎಳೆದು ನಿಲ್ಲಿಸಿಬಿಟ್ಟೆ. 


ಹೆಂಡದ ಆಘಾತದಿಂದ ತಕ್ಷಣಕ್ಕೆ ಚೇತರಿಸಿಕೊಳ್ಳುವಂತೇನೂ ಕಾಣಲಿಲ್ಲ. ಹೆಂಡದ ಬಾಟಲಿಗಳಿಗೆ ಅದ್ಯಾಕೆ ಬಿರಡೆ ಹಾಕುತ್ತಿರಲಿಲ್ಲ ಅಂತ ಬಾಲ್ಯದಿಂದಲೂ ತಲೆಕೆಡಿಸಿಕೊಂಡಿದ್ದರೂ ನಾನು ಬೆಳೆದು ಬಂದ ಪರಿಸರದಲ್ಲಿ ಆ ಕುರಿತು ತಿಳುವಳಿಕೆ ನೀಡುವವರು ಯಾರೂ ಇರಲಿಲ್ಲವಾಗಿ, ದಶಕಗಳ ಬಳಿಕ ಸ್ವಾನುಭವದ ಮುಖಾಂತರವೇ ಅರಿಯಬೇಕಾಗಿ ಬಂದಿದ್ದು ನನ್ನ ದುರಂತ. ಹೆಂಡವೊAದನ್ನು ಬಿಟ್ಟು ಉಳಿದ ಎಲ್ಲ ರೀತಿಯ ಆಲ್ಕೊಹಾಲಿನ ಬಾಟಲಿಗಳಿಗೆ ಬಿರಡೆ ಹಾಕಿ ಸೀಲು ಮಾಡಿರುತ್ತಾರೆ ನೆನಪಿರಲಿ. ಹೆಂಡವನ್ನು ಈಚಲು, ತೆಂಗು, ತಾಟಿ ನುಂಗು, ಬಗಿನೆ ಮೊದಲಾದ ಮರಗಳಿಂದ ಇಳಿಸಿದ ಬಳಿಕ ಯಾವುದೇ ಮಾರ್ಪಾಡುಗಳನ್ನು ಮಾಡದೆ ನೇರವಾಗಿ ತೆರೆದ ಪೀಪಾಯಿಗಳಲ್ಲಿ ತುಂ

ಬಿ ಮಾರಾಟ ಮಾಡಲು ಅಂಗಡಿಗಳಿಗೆ ಕಳಿಸಿ ಬಿಡುತ್ತಾರೆ. ಕೆಲವು ಕಡೆ ಖಾಲಿ ಬಿಯರ್ ಬಾಟಲಿಗಳಿಗೆ ತುಂಬಿ ಆಗಲೂ ಸಹ ಬಾಯಿ ಮುಚ್ಚದೆ ಕ್ರೇಟುಗಳಲ್ಲಿ ಜೋಡಿಸಿ ಮಾರಾಟಕ್ಕೆ ಕಳಿಸುತ್ತಾರೆ. 
ಹೆಂಡವು ಮರದಿಂದ ಇಳಿಸಿದಾಗ ಎಳನೀರಿನಂತೆ ಸಿಹಿಯಾಗಿ ಇರುತ್ತದೆ, ಇದನ್ನು ನೀರಾ ಎನ್ನುತ್ತಾರೆ. ಈ ನೀರಾದಲ್ಲಿ ಸಕ್ಕರೆ ಅಂದರೆ ಗ್ಲೂಕೋಸ್ ಇರುತ್ತದೆ. ಈ ಸಿಹಿ ದ್ರವವು ಕೆಡದಂತಿರಲು ಅದು ಆಲ್ಕೋಹಾಲ್ ಆಗಿ ಮಾರ್ಪಾಡಾಗುತ್ತದೆ. ಈ ನೀರಾದಲ್ಲೇ ಹುಳಿ ಬರಿಸಲು ಕಾರಣವಾಗುವ ಯೀಸ್ಟ್ ಜೀವಕೋಶಗಳೂ ಸ್ವಲ್ಪ ಪ್ರಮಾಣದಲ್ಲಿ ಇರುತ್ತವೆ. ಜೊತೆಗೆ ಹೆಂಡವನ್ನು ನಿರಂತರವಾಗಿ ಇಳಿಸುವ ಮಡಕೆಗೆ ಅಂಟಿಕೊAಡಿದ್ದ ಯೀಸ್ಟ್ಗಳೂ ನೀರಾದೊಂದಿಗೆ ಸೇರಿಕೊಳ್ಳುತ್ತವೆ. ಅದೇ ಕಾರಣಕ್ಕಾಗಿ ಹೆಂಡದ ಮಡಕೆಗಳನ್ನು ಪದೇ ಪದೇ ತೊಳೆಯುವುದಿಲ್ಲ. ಹಾಗಾಗಿ ಮುಂಜಾನೆ ಇಳಿಸಿದ ಹೆಂಡವು ನಿರಂತರವಾಗಿ ಹುಳಿ ಬರುತ್ತ ಹೋಗುತ್ತದೆ, ಆಗ ಇಂಗಾಲ ಆಮ್ಲ ಎಂದು ಕರೆಯುವ ಕಾರ್ಬನ್ ಡೈ ಆಕ್ಸೆöÊಡ್ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಬಿಡುಗಡೆ ಆಗಿ ಹೆಂಡದಲ್ಲಿ ತುಂಬಿಕೊಳ್ಳುತ್ತದೆ. ಇದೇ ಅನಿಲವು ಬಾಟಲಿಯ ಬಿರಡೆಯನ್ನು ತೆಗೆದ ತಕ್ಷಣ ಹೊರಹೋಗಲು ಹವಣಿಸುತ್ತದೆ. ನಮಗೆ ಆದ ಅನುಭವವೂ ಅದೇ. ಇದೇ ಅನಿಲವನ್ನು ಸೋಡಾ, ಕೋಕಾ ಕೋಲಾ, ಪೆಪ್ಸಿ ಮೊದಲಾದ ಪಾನೀಯಗಳಲ್ಲೂ ತುಂಬಿಸುತ್ತಾರೆ. ಸೋಡಾ ಬಾಟಲನ್ನು ಅಲ್ಲಾಡಿಸಿ, ಬಿರಡೆ ತೆಗೆದಾಗ ಬಾಟಲಿಯ ಅರ್ಧದಷ್ಟು ಚೆಲ್ಲಿಹೋಗುವುದೂ ಅದಕ್ಕೇ. 


ಇದೆಲ್ಲಕ್ಕಿಂತ ಮುಖ್ಯವಾದದ್ದೇನೆಂದರೆ, ಹೆಂಡದ ಆಯುಸ್ಸು ಕೇವಲ ಒಂದು ಹಗಲು ಮಾತ್ರ.  ಆದ್ದರಿಂದಲೇ ಅದನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಕುಡಿದು ಮುಗಿಸಿಬಿಡಬೇಕು. ಮಾರನೇ ದಿನದ ಹೊತ್ತಿಗೆ ಅದು ಆಮ್ಲೀಯ ದ್ರವವಾಗಿ(ಅಸಿಡಿಕ್) ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸಿಬಿಡುತ್ತದೆ. ತೀರಾ ಇತ್ತೀಚೆಗೆ ಫ್ರಿಜ್ಜುಗಳಿರುವುದರಿಂದ ಹೆಂಡವನ್ನು ಶೀಥಲೀಕರಿಸಿ ಕೆಲದಿನ ಇಟ್ಟುಕೊಳ್ಳಬಹುದಾದರೂ ಅದೇ ದಿನ ಮರದಿಂದ ಇಳಿಸಿದ ಹೆಂಡದ ರುಚಿಯನ್ನು ಚಪ್ಪರಿಸಲಾಗುವುದಿಲ್ಲ. ಇತರೆಲ್ಲ ಮದ್ಯಗಳಿಗೆ ಹೋಲಿಸಿದಾಗ, ಕಲಬೆರಕೆ ಮಾಡದ ತಾಜಾ ಹೆಂಡವು ಅತ್ಯಂತ ಆರೋಗ್ಯಕಾರಿ ಮತ್ತು ಮನುಷ್ಯನ ಆರೋಗ್ಯದ ಲೆಕ್ಕದಲ್ಲಿ ಅತಿ ಕಡಿಮೆ ಅಪಾಯಕಾರಿ.