‘ಚಂದ್ರಗಿರಿಯ ನದಿ ತೀರ’ ತೊರೆದ ‘ಸಾರಾ’

' ಸಾರಾ ಅಬೂಬಕರ್ ಆಫೀಸಿಗೆ ಬರ್ತಿದಾರೆ,  ಆಫೀಸ್ ಬಾಯ್ ಗೆ ಅವರ ಪರಿಚಯವಿಲ್ಲ, ಅಂಕಿತಾ ಬುಕ್ ಶಾಪ್ ಹತ್ರ ಬಸ್ ಸ್ಟಾಪ್ ಗೆ‌ಹೋಗಿ ಕರೆದು ತಾ ' ಅಂದರು. 

‘ಚಂದ್ರಗಿರಿಯ ನದಿ ತೀರ’ ತೊರೆದ ‘ಸಾರಾ’

ವಿದಾಯ

ಪಾರ್ವತೀಶ ಬಿಳಿದಾಳೆ

‘ಚಂದ್ರಗಿರಿಯ ನದಿ ತೀರ’ ತೊರೆದ ‘ಸಾರಾ’

ಈಗ್ಗೆ ಡಜನ್ ವರ್ಷಕ್ಕೂ ಹಿಂದೆ ಅದೊಂದು ದಿನ ಬಹುಶಃ ಸಂಜೆ ಅರೂವರೆ ಗಂಟೆ ಇರಬೇಕು, ನಾನು ಪತ್ರಿಕೆ ಆಫೀಸಿನ  ಚೇಂಬರಿನಲ್ಲಿ ಕುಳಿತು  ಪತ್ರಿಕಾ ಬರಹವೊಂದನ್ನು ಕಂಡುಹಿಡಿಯುತ್ತಿದ್ದಾಗ ಗೌರಿ ಇಂಟರ್ ಕಾಂ ನಲ್ಲಿ ಕರೆ ಮಾಡಿ

 ' ಸಾರಾ ಅಬೂಬಕರ್ ಆಫೀಸಿಗೆ ಬರ್ತಿದಾರೆ,  ಆಫೀಸ್ ಬಾಯ್ ಗೆ ಅವರ ಪರಿಚಯವಿಲ್ಲ, ಅಂಕಿತಾ ಬುಕ್ ಶಾಪ್ ಹತ್ರ ಬಸ್ ಸ್ಟಾಪ್ ಗೆ‌ಹೋಗಿ ಕರೆದು ತಾ ' ಅಂದರು. 

ಅದು ಎರಡು ನಿಮಿಷದ ನಡಿಗೆಯ‌ಹಾದಿ.

ಸರಿಯೆಂದು ನಾನು‌ಹೋದೆ.

ಸಾರಾ ಅಲ್ಲಿದ್ದರು,

ರೇಷ್ಮೆ ಸೀರೆಯ ತೊಡುಗೆ, ತೆಳು ದೇಹಿ, ನಿಧಾನಕ್ಕೆ ಹುಷಾರಾಗಿ ಹೆಜ್ಜೆಯಿಡುತ್ತಾ ಮಬ್ಬುಗತ್ತಲಲ್ಲಿ  ಹತ್ತು ನಿಮಿಷ ಕಾಲ  ನಡೆದು ಬಂದರು. ನನ್ನನ್ನು ಆಫೀಸ್ ಬಾಯ್ ಅಂದುಕೊಂಡರೇನೊ 'ನೀನ್ಯಾವೂರ ದಾಸಯ್ಯ' ಅಂತ ಒಂದೂ ಮಾತಾಡದೆ ಬಂದರು.

ಅವರು ಗೌರಿ ಚೇಂಬರಿಗೆ ಹೋಗುವಷ್ಟರಲ್ಲಿ ನಾನು ಬಾಕಿ ಕೆಲಸ‌ಮುಗಿಸಲು ಕುಳಿತೆ.

ಕೆಲ ಹೊತ್ತಿನ ನಂತರ ಗೌರಿ ಮತ್ತೆ ಕರೆ  ಮಾಡಿ ಕರೆದರು, ಹೋದೆ. ನಾನು ಬರಹಗಾರನೆಂದು ಕೆಲ ವಿಶೇಷಣಗಳೊಂದಿಗೆ ಗೌರಿಯಿಂದ  ಪರಿಚಯದ ಶಾಸ್ತ್ರವಾಯಿತು, ಆಗಲೂ ಮಾತಿಲ್ಲ. ಸಾರಾ ಬಾಲ್ಕನಿಯಲ್ಲಿ ಕುಳಿತು ಗಾಂಧೀ ಕ್ಲಾಸಿನವರತ್ತ ನೋಡುವಂತೊಮ್ಮೆ ತಿರುಗಿದರಷ್ಟೆ.  ಹೊರಟಾಗ ಗೌರಿ ' ಆಟೋ ವ್ಯವಸ್ಥೆ ಮಾಡಿ ಕಳಿಸೋಣ ' ಅಂತ ಸೂಚಿಸಿ ಕಳಿಸಿದರು.

 ಹೊರಬಂದ ಸಾರ ,'ಮಲ್ಲೇಶ್ವರಕ್ಕೆ ಹೋಗೊ ಬಸ್ ಬಗ್ಗೆ ಕೇಳಿ ಬಿಟಿಎಸ್ ಗೇ ಕಾದು, ಆ ರಶ್ ನಲ್ಲಿ  ನಿಂತು ಪ್ರಯಾಣಿಸಿದರು.   ಆಗ ಸಾರಾ ಎಪ್ಪತ್ತರ ವಯಸ್ಸಿನವರಿರಬಹುದು.

 ವಿಷಯ ಸರಳ ಬದುಕಿನದಲ್ಲ,  ಹಣದ ಕೊರತೆಯದ್ದೂ ಅಲ್ಲ, ಹಣದ ಹುಷಾರಿನದು.

ಅನ್ನ ಮುದ್ದೆಯಷ್ಟೇ ಲಂಕೇಶ್ ಪತ್ರಿಕೆಯೂ  ಅನಿವಾರ್ಯವಾಗಿದ್ದ ವಯಸ್ಸಲ್ಲಿ ನಮಗೆ ಸಿಕ್ಕ  ಸಾರಾರವರ ಬರಹಗಳು  ಸರಳವಾಗಿರುತ್ತ ಸರಾಗವಾಗಿಯೂ ಓದಿಸಿಕೊಂಡವು.  ದಿನಪತ್ರಿಕೆಯ ಹವಾಮಾನ ವರದಿಯನ್ನೂ ಬಿಡದೆ ಓದುತ್ತಿದ್ದ ನಮಗೆ ಸಾರಾರವರ ಚಂದ್ರಗಿರಿಯ ನದೀ ತೀರದ ಕತೆಯೂ, ವಜ್ರಗಳು, ಸಣ್ಣ ಕತೆಗಳು ನವ್ಯದ ಸಿನಿಮಾ  ರೀತಿ  ಭಾವುಕ  ಮನಸಿಗೆ ಪ್ರವೇಶ ಪಡೆದವು 

ಮುಂದೆ ನಾವು ಸಾಹಿತ್ಯವೆಂಬ ಪ್ರೇಯಸಿಯ ಬೆನ್ನತ್ತಿ  ವಿಶ್ವಪರ್ಯಟನೆ  ಮಾಡುತ್ತಿರುವಾಗ ಲೇಖಕಿಯಾಗಿ ಸಾರಾರ  ವ್ಯಾಪ್ತಿ ಸ್ವಲ್ಸ  ಹರಡಿತ್ತು, ಆದರೆ ಅವರ ಗ್ರಹಿಕೆಯ ಜಗತ್ತು , ಅಭಿವ್ಯಕ್ತಿಯ ಕ್ರಮ ಒಂದು ರೀತಿಯ ಮೊನೋಟಮಸ್...

 

ಸಾರಾ ಮುಸ್ಲಿಂ ಧರ್ಮಶ್ರದ್ಧೆಯ ಹಿರಿಯರೊಂದಿಗೆ   ಜಗಳವಾಡಿಕೊಂಡು ಬರೆಯುವ ತಮ್ಮ  ಹಾದಿ ನಿರ್ಮಿಸಿಕೊಂಡರು ಸರಿ, ಆದರೆ  ಮಹಿಳೆಯರ ಭಾವಕೋಶದಲ್ಲಿ ಅದರಲ್ಲೂ ನಿರ್ಧಿಷ್ಟವಾಗಿ ಮುಸಲ್ಮಾನ ಸಮೂದಾಯದ ಮಹಿಳೆಯರ ಭಾವಕೋಶದೊಳಗೆ ಸಾರಾ ಮತ್ತವರ ಬರಹಗಳು  ಅದೆಷ್ಟರ ಮಟ್ಟಿಗೆ ಪ್ರವೇಶ ಪಡೆದಿರುವವೆಂದು  ನನಗೆ   ಸಂದೇಹವಿದೆ ಅಥವಾ ನನಗೆ  ಪೂರ್ಣ ತಿಳಿಯದು.

ಆರಂಭದ  ಪೀಳಿಗೆಯ ಬರಹಗಾರ್ತಿಯೆಂಬ  ಕೀರ್ತಿಯ ಅನುಕೂಲ  ಅವರ ಇಮೇಜಿನ  ದೀಪಕ್ಕೆ ಕೊನೆಯವರೆಗೂ ಇಂಧನ ಒದಗಿಸಿತು. ಬರಹಗಾರರಿಗಿರುವ ಬರೆಯುವ ಚಟಪಟಿಕೆ, ತಲ್ಲಣ, ಪ್ರಯೋಗಶೀಲತೆ,  ಮುಂತಾದ ಚೈತನ್ಯದಾಯಕ  ದಹನ ವಲಯ ಸೇರದೆ  ಸಾರಾ ಸಾಕಷ್ಟು ಕ್ಷೇಮದ, ಸಿಕ್ಕಷ್ಟು ಕೀರ್ತಿಯ ಹಾದಿ ಹಿಡಿದರು.

ಸಾರಾರ ಕತೆ ಕಾದಂಬರಿಗಳು ಆಗಲೆ ಹೇಳಿದಂತೆ ಸರಳ, ಸರಾಗ. ಅದೊಂದು ಭಿನ್ನ ಜಗತ್ತೂ‌ಹೌದಾಗಿತ್ತು.  ಓದಲು ಅವನ್ನೊದಗಿಸಿದ ಸಾರಾರಿಗೆ ಥ್ಯಾಂಕ್ಸ್.   ಸಾರಾರ ಬರಹಗಳು ಒಂದು‌ಹಂತಕ್ಕೆ ಅವರನ್ನು ಕತೆಗಾರ್ತಿಯಾಗಿ ಬೆಳೆಸಿದ ನಂತರ  ಅವರಿಗೆ ಸಿಗತೊಡಗಿದ ಮೆಚ್ಚುಗೆ -  ಪ್ರಶಸ್ತಿಗಳೇ ಅವರನ್ನು ಇನ್ನಷ್ಟು ಮುಂದಕ್ಕೆ  ಬೆಳೆಸಿದವು ಅನಿಸುತ್ತದೆ. 

ಕೋಮುವಾದಕ್ಕೆ ವಿರೋಧ, , ವೈಚಾರಿಕತೆ, ಬಂಡಾಯ ಇವೇ ಮುಂತಾದ  ವಿಭಾಗಗಳಲ್ಲಿ ಸಾರಾ ಧೈರ್ಯಶಾಲಿಯಾಗಿ ಬರೆದು, ಮಾತನಾಡಿ,ಜಗಳವಾಡಿ , ಹಲ್ಲೆ ಬೆದರಿಕೆ ಬೇಯ್ಗುಳವನ್ನೆಲ್ಲ ಅನುಭವಿಸಿದರು. ಅವರು ತಮಗನಿಸಿದ್ದನ್ನು ಹೇಳಲು‌ಮತ್ತು , ದನಿ ಕಳೆದುಕೊಂಡು ಸುಮ್ಮನಿರಬೇಕಾದ  ಸ್ಥಿತಿಯಲ್ಲಿದ್ದ ಮಹಿಳೆಯರ ಪರ ಕೂಗು ಹಾಕಿದರು, ಲಂಕೇಶ್ ಪತ್ರಿಕೆಯ ವಿಶೇಷಾಂಕಗಳಿಗೆ  ವಿಐಪಿ ಕೋಟಾದ ಲೇಖನಗಳನ್ನು ತಪ್ಪದೆ ಬರೆದು ಕೊಡುತ್ತಿದ್ದರು,

 ಮುಸ್ಲಿಂ ಧರ್ಮದ ಯಾವುದಾದರೂ  ಗಂಡು ಹೆಣ್ಣು ವಿಚಾರವಿದ್ದಾಗ  ನೊಂದವರ ಪರ ನಿಲುವು ತಳೆಯುತ್ತಿದ್ದರು.

ಅವರ ವೈಚಾರಿಕ ಬರಹಗಳಲ್ಲಿ ಒಳನೋಟದ ಅಂಶಗಳ ಕೊರತೆ ಇರುತ್ತಿತ್ತು,

ಸಿಟ್ಟು , ಬೇಸರ, ಆಕ್ಷೇಪ

ಇವೇ ಮುಂತಾದ  ದನಿಯ ಬರಹಗಳನ್ನು ಸಡನ್ನಾಗಿಯೂ ಬರೆದು ಕಳಿಸಬಲ್ಲವರಾಗಿದ್ದರು. ಸಾರಾರ ಬದುಕೂ ಬರಹವು ನಮ್ಮಗಳ ವಲಯದಲ್ಲೇ‌ಸಂಚರಿಸಿತು.  ಆದರೆ ಕನ್ನಡ, ತೆಲುಗು, ತಮಿಳು, ಮಲಯಾಳಿ, ಉರ್ದು ಭಾಷಿಕ ಲೇಖಕಿಯರ ಸೃಜವಶೀಲ  ಬರಹದ ಕಂಟೆಂಟ್ ಹಾಗೂ ತೀವ್ರತೆಗೆ  ಹೋಲಿಸಿದರೆ ಸಾರಾ ಬರಹಗಳು ಸಮಕಾಲೀನತೆಯ ಹಿಂದಿನ ಸೀಟಿಡಿದಂತೆ ಕಾಣುವುದು.

ಸಾರಾ ಬರೆದದ್ದು ಮಾತ್ರವಲ್ಲದೆ ಕೆಲ ಸಮಯದ ನಂತರ ಪ್ರಕಾಶಕರೂ ಆದರು.‌ತಮ್ಮ ಪುಸ್ತಕಗಳನ್ನು ತಾವೇ ಪ್ರಕಟಿಸಿ,  ಸೇಲ್ ಮಾಡುವ ಸಾಹಸವನ್ನೂ ಮಾಡಿದರು. ಆ ಲೆಕ್ಕದಲ್ಲಿ ಅವರು‌ಮೊದಲ ಪೀಳಿಗೆಯ ಮುಸ್ಲಿಂ ಬರಹಗಾರ್ತಿ‌ಮಾತ್ರವಲ್ಲದೆ  ಮೊದಲ  ಮುಸ್ಲಿಂ‌ಮಹಿಳಾ ಪ್ರಕಾಶಕರಲ್ಲೊಬ್ಬರೂ ಸಹ ಆಗಿರಬಹುದು.

 ಸಾರಾರವರು ಸ್ವಂತ ಪ್ರಕಾಶನ ಶುರು ಮಾಡಿದ್ದು  ಪುಸ್ತಕ ಪ್ರಕಾಶಕರು, ವ್ಯಾಪಾರಿಗಳು ಕೊನೆಗೆ ಓದುಗರ.ಈ  ಎಲ್ಲರ ಮೇಲಿನ ಅನುಮಾನದಿಂದಲೂ ಇರಬಹುದು.

 

 ಅವರಿಗಾಗಿರಬಹುದಾದ ಕಹಿಯ, ಮೋಸದ  ಮಾಹಿತಿಯು  ನನಗಿಲ್ಲ, ಆದರೆ ಹಣದ/ವ್ಯವಹಾರದ  ವಿಷಯ ಬಂದಾಗ ಅವರು ಕೊನೆಯ ಬಿಡಿ ರೂಪಾಯಗಳವರೆಗೂ ತಣ್ಣಗೆ ಮಾತನಾಡಲು ಸಿದ್ದವಿರುತ್ತಿದ್ದರು. ಕರ್ನಾಟಕದ ಸಾಕ್ಷರತೆಯ ಪ್ರಮಾಣವು ಶೇಕಡ 75 ಇದ್ದರೆ ಮೋಸಗಾರರ ಪ್ರಮಾಣವು ಶೇಕಡಾ ನೂರೆಂದು ಅವರು ಖಂಡಿತಾ ಭಾವಿಸಿರಬೇಕು.

ಹಣದ ಒಳಹರಿವು-ಹೊರಹರಿವಿನ ಬಗ್ಗೆ ಅವರದು  ಕಠಿಣ ಮನಸ್ಥಿತಿ ಅನಿಸಿತು. ಪ್ರಶಸ್ತಿಗಳ ಬಗ್ಗೆಯೂ ಅವರಿಗೊಂದು ನಿಗಾ ಮತ್ತು ಇಷ್ಟವಿತ್ತು.  ತಮ್ಮ ಕೊಡುಗೆಗೆ ಪ್ರಶಸ್ತಿಗಳು ಸಿಗಬೇಕಾದ್ದು ನ್ಯಾಯವೆಂಬ ಪ್ರಾಮಾಣಿಕ ನಂಬಿಕೆ ನಿರೀಕ್ಷೆಗಳೆರಡೂ ಇದ್ದಿರಬೇಕು. ಜೊತೆಗೆ ತಮ್ಮ‌ಸಮೀಪದ   ಮಹಿಳಾ ಬರಹ ಸ್ಪರ್ಧಿಗಳ ಬಗ್ಗೆಯೂ  ಅವರು ಗಮನವಿಡುತ್ತಿದ್ದರು.

ಅವರ ಆರೋಗ್ಯ, ಹಣಕಾಸಿನ ಸ್ಥಿತಿಗತಿ ಉತ್ಸಾಹವೆಷ್ಟು ಉಳಿದಿತ್ತೆಂಬ ವಿವರ ನಾನರಿಯೆ, ಆದರೆ ಅವರು ಇನ್ನಷ್ಟು , ಮತ್ತೂ ಬರೆಯಬಹುದಿತ್ತು ಅನಿಸಿದ್ದು ನಿಜ.

 ಸಾರಾರಿಗೆ ಗೌರವದ ವಿದಾಯ.

ಸಂಪಾದಕನ ಟಿಪ್ಪಣಿ:

ಕರ್ನಾಟಕ -ಕೇರಳ ಗಡಿಯಲ್ಲಿ ಬೆಳೆದು ಕನ್ನಡದ ಮಹತ್ವದ ಕತೆಗಾತಿ ಸಾರಾ ಅಬೂಬಕರ್ ಅವರಿಗೆ ಲಂಕೇಶ್ ವೈಚಾರಿಕತೆ, ಹೋರಾಟದ ಮೆರುಗು ನೀಡಿದರು.  ಲಂಕೇಶ್  ಹಾಗೂ ನಂತರ ಗೌರಿ ಲಂಕೇಶ್ ಜೊತೆಗೆ ಪತ್ರಿಕೆ ರೂಪಿಸುತ್ತಿದ್ದ ಪಾರ್ವತೀಶ್ ಬಿಳಿದಾಳೆ ಕನಕಪುರ ತಾಲೂಕಿನಲ್ಲಿ ಕಾವೇರಿ ನದಿ ತೀರದಲ್ಲಿ ಓದಿ, ಬೆಳೆದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವಿದ್ಯಾರ್ಥಿಯಾಗಿದ್ಧಾಗ ರೈತ ಚಳವಳಿಯಲ್ಲಿ ಸಕ್ರಿಯವಾಗಿದ್ದವರು, ಕಾಲದ ಎಲ್ಲ ಅಡ್ಡಗಾಲಿಗೂ ಸೆಡ್ಡು ಹೊಡೆದು ನಿಂತಿರುವ ಗಟ್ಟಿ ಜೀವ.  ಈ ಬರಹದೊಂದಿಗೆ ಪ್ರಕಟವಾಗಿರುವ  ಕ್ಯಾರಿಕೇಚರ್‍ನಲ್ಲಿ  ಹೆಸರಾಂತ ಕಲಾವಿದ ಪಿ.ಮಹಮ್ಮದ್ ಸಾರಾ ಅಬೂಬಕರ್ ಅವರಿಗೆ ಮರುಜೀವ ತುಂಬಿದ್ದಾರೆ.