ಸಂಪಾದಕೀಯ- ಅಧಿಕಾರದ ಅಮಲಿನಲ್ಲಿ ಹತ್ಯೆ: ಕ್ಷೀಣವಾದರೂ ಸರಿ, ದನಿ ಎತ್ತಿ..,

Editorial

ಸಂಪಾದಕೀಯ- ಅಧಿಕಾರದ ಅಮಲಿನಲ್ಲಿ ಹತ್ಯೆ: ಕ್ಷೀಣವಾದರೂ ಸರಿ, ದನಿ ಎತ್ತಿ..,
ಸಂಪಾದಕೀಯ- ಅಧಿಕಾರದ ಅಮಲಿನಲ್ಲಿ ಹತ್ಯೆ: ಕ್ಷೀಣವಾದರೂ ಸರಿ, ದನಿ ಎತ್ತಿ..,

ಅಧಿಕಾರದ ಅಮಲಿನಲ್ಲಿ ಹತ್ಯೆ:


ಕ್ಷೀಣವಾದರೂ ಸರಿ, ದನಿ ಎತ್ತಿ..,

ಈ ದೇಶ ಎತ್ತ ಸಾಗುತ್ತಿದೆ ? ಈ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳುತ್ತಲೇ ಇದ್ದೇವೆ. ಕೊಲೆ ಆರೋಪಿಗಳು ಜನಪ್ರತಿನಿಧಿಗಳಾಗಿ ಚುನಾಯಿತರಾದರು, ಸಚಿವರಾದರು ಸಹಿಸಿಕೊಂಡೆವು. ಹತ್ಯಾಕಾಂಡಗಳ ರೂವಾರಿಗಳು ಸಾಂವಿಧಾನಿಕ ಹುದ್ದೆಗಳನ್ನು ಹೊಂದಿದರು, ಒಂದು ಪಕ್ಷದಲ್ಲಿ ಭ್ರಷ್ಟರಾಗಿದ್ದವರು ಮತ್ತೊಂದಕ್ಕೆ ಹಾರಿ ಪ್ರಾಮಾಣಿಕರಾಗಿಬಿಟ್ಟರು. ಜೈಲಿಗೆ ಹೋದವರನ್ನು, ಅಪರಾಧದ ಹಣೆಪಟ್ಟಿ ಇದ್ದವರನ್ನು ಅಧಿಕಾರಪೀಠದಲ್ಲಿ ಕೂರಿಸಿದೆವು. ಹಿಂಸೆಗೆ ಪ್ರಚೋದಿಸಿದವರನ್ನು, ಗುಂಡಿಟ್ಟು ಕೊಲ್ಲಿ ಎಂದವರನ್ನು ಸಚಿವರಾಗಿ ಒಪ್ಪಿಕೊಂಡೆವು. ಮಹಿಳೆಯರನ್ನು ತುಚ್ಚವಾಗಿ ಕಂಡು ಅವಮಾನಿಸಿದವರನ್ನು ಪ್ರಶ್ನಿಸದೆ ಸುಮ್ಮನಾಗಿಬಿಟ್ಟೆವು. 
ಭಾನುವಾರ ಉತ್ತರ ಪ್ರದೇಶದ ಲಖೀಂಪುರ್ ಖೇರಿ ಎಂಬಲ್ಲಿ ಹಾಲಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರ ಅವರ ಮಗ ಶಾಂತಿಯುತ ಪ್ರತಿಭಟನೆ ಮಾಡುತ್ತ ರಸ್ತೆಯಲ್ಲಿ ನಿಂತಿದ್ದ ರೈತರ ಗುಂಪಿನ ಮೇಲೆ ಹಿಂದಿನಿAದ ಜೀಪ್ ಹರಿಸಿ ನಾಲ್ವರು ರೈತರೂ ಸೇರಿ ಎಂಟು ಮಂದಿಯನ್ನು ಹತ್ಯೆ ಮಾಡಿದ್ದಾನೆ. ಇನ್ನೂ ಹಲವರು ಗಾಯಗೊಂಡಿದ್ದಾರೆ.” ಅವರು ಪ್ರತ್ಯೇಕತಾವಾದಿ ಖಾಲಿಸ್ಥಾನಿಗಳು, ಅವರ ಬಳಿ ಮಾರಕಾಸ್ತ್ರಗಳಿದ್ದವು ಅವರು ಭಯೋತ್ಪಾದಕರು " ಎಂದು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿ, ಹತ್ಯಾಕಾಂಡಕ್ಕೆ ಸಮರ್ಥನೆ ನೀಡುವಷ್ಟು ಮಟ್ಟಿಗೆ ನಮ್ಮ ದೇಶದ ಆಡಳಿತ ವ್ಯವಸ್ಥೆ " ಮುಂದುವರೆದಿದೆ ". 
ಉದ್ದೇಶಿತ ಹತ್ಯೆಗಳ ಸಮರ್ಥನೆಗೆ ಕಾನೂನು ಲೋಪಗಳನ್ನು, ಆಧುನಿಕ ತಂತ್ರಜ್ಞಾನವನ್ನು, ಆಡಳಿತ ವ್ಯವಸ್ಥೆಯ ಭ್ರಷ್ಟತೆಯನ್ನು ಜಾಣ್ಮೆಯಿಂದ ಬಳಸಿಕೊಳ್ಳುವುದರಲ್ಲಿ ನಿಷ್ಣಾತರಾಗಿರುವ " ದಕ್ಷ " ಆಡಳಿತಗಾರರನ್ನು ‘ಆತ್ಮನಿರ್ಭರ ಭಾರತ’ ತಯಾರು ಮಾಡಿದೆ. ಅಮಾಯಕರನ್ನು ಅಪರಾಧಿ ಮಾಡಲು , ಅಪರಾಧಿಯನ್ನು ನಿರಪರಾಧಿ ಮಾಡಲು ಲ್ಯಾಪ್ ಟಾಪ್ ಗಳಲ್ಲಿ ಸುಳ್ಳುಸಾಕ್ಷಿಗಳನ್ನು ನೆಡುವುದರಲ್ಲಿ ಪರಿಣತರಾಗಿದ್ದೇವೆ. ಹಾಗಾಗಿ ಹತ್ಯೆಗೊಳಗಾದವರು, ಅತ್ಯಾಚಾರಕ್ಕೀಡಾದವರು, ಹಲ್ಲೆಗೊಳಗಾದವರು ಅಪರಾಧಿಗಳಾಗಿಬಿಡುವುದು ಸಹಜವೇನೋ ಎನ್ನುವಂತಾಗಿಬಿಟ್ಟಿದೆ. 
ಶಂಕರ್‌ನಾಗ್ ಅವರ ಆ್ಯಕ್ಸಿಡೆಂಟ್ ಚಿತ್ರವನ್ನು ನೆನಪಿಸುವಂತಹ ಹತ್ಯೆ ದೇಶದಲ್ಲಿ ಸಂಭವಿಸಿದೆ. ಈ ಸಿನಿಮಾದಲ್ಲಿ ನಡುರಾತ್ರಿಯಲ್ಲಿ ಕಾರು ಚಲಾಯಿಸುತ್ತಿದ್ದ ಮುಖ್ಯಮಂತ್ರಿಯ ಮಗ ಮದ್ಯದ ಹಾಗೂ ಮಾದಕ ದ್ರವ್ಯಗಳ ನಶೆಯಲ್ಲಿರುತ್ತಾನೆ , ಆದರೆ ಭಾನುವಾರ ಉತ್ತರಪ್ರದೇಶದಲ್ಲಿ ಗೃಹ ಸಚಿವರ ಮಗ ಅಧಿಕಾರದ ನಶೆಯಲ್ಲಿ ಅಮಾಯಕರನ್ನು ಹತ್ಯೆ ಮಾಡಿದ್ದಾನೆ. ಈ ಹೇಯ ಕೃತ್ಯಗಳ ವಿರುದ್ಧ ದನಿ ಎತ್ತಬೇಕಾದ ಜನಪ್ರತಿನಿಧಿಗಳು ಪಕ್ಷ ನಿಷ್ಠೆ, ವ್ಯಕ್ತಿ ನಿಷ್ಠೆ, ಅಧಿಕಾರ ವ್ಯಾಮೋಹ, ಕುರ್ಚಿಯ ಪ್ರೀತಿಗೆ ತಮ್ಮ ಸಂವೇದನೆ, ಸೂಕ್ಷ್ಮತೆಗಳನ್ನೂ ಮಾರಿಕೊಂಡು ಬೆತ್ತಲಾಗಿ ನಿಲ್ಲುತ್ತಾರೆ. ಕೊಲೆ, ಹತ್ಯೆ, ಅತ್ಯಾಚಾರ, ದೌರ್ಜನ್ಯಗಳನ್ನು ಸಂಭ್ರಮಿಸುವ ಸಂಸ್ಕೃತಿಯನ್ನು ವ್ಯವಸ್ಥಿತವಾಗಿ ಬೆಳೆಸಲಾಗಿದೆ, ಇನ್ನೂ ಪೋಷಿಸಲಾಗುತ್ತಿದೆ. 
ನಾಗರಿಕರ ಹತ್ಯೆ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸಲು ಹೋದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಅವರನ್ನು ಬಂಧಿಸಿಡಲಾಗಿದೆ. ಹತ್ತು ತಿಂಗಳಿAದ ದಿಲ್ಲಿಯ ಗಡಿಯ ರಸ್ತೆಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ನಡೆಸುತ್ತಿರುವ ರೈತರ ಪ್ರತಿಭಟನೆಗಳನ್ನು ನಿರ್ಲಕ್ಷಿಸಲಾಗಿದೆ. ಇದೆಲ್ಲ ಜನ ತಂತ್ರಕ್ಕೆ ಮಾಡುವ ಅಪಚಾರÀ ಎಂದು ಆಡಳಿತದಲ್ಲಿರುವವರು ಅರ್ಥ ಮಾಡಿಕೊಳ್ಳುತ್ತಿಲ್ಲ.
ಯಾವ ರಾಜಕೀಯ ಪಕ್ಷದ ಕೆಲ ನಾಯಕರು ದಿವಂಗತ ಪ್ರಧಾನ ಮಂತ್ರಿ ಇಂದಿರಾಗಾAಧಿಯ ಸರ್ವಾಧಿಕಾರಿ ನಡವಳಿಕೆ ವಿರುದ್ಧ ಹೋರಾಡಿ ಜೈಲು ಕಂಡಿದ್ದರೋ ಅದೇ ರಾಜಕೀಯ ಪಕ್ಷದ ಎರಡು ಮೂರನೇ ಪೀಳಿಗೆಯ ನಾಯಕರು ಆಂಥ ಹೋರಾಟದ ಕಾರಣವಾಗಿಯೇ ಇವತ್ತು ದೇಶದಲ್ಲಿ ಅಧಿಕಾರ ಹಿಡಿದು, ಅಂಥದ್ದೇ ಮತ್ತು ಅದನ್ನೂ ಮೀರಿದ ಸರ್ವಾಧಿಕಾರಿ ಧೋರಣೆಯನ್ನು ಭಂಡತನದಿAದ ಪ್ರದರ್ಶಿಸುತ್ತಿರುವುದು ವಿಷಾದನೀಯ. 
ಒಬ್ಬ ವ್ಯಕ್ತಿಯ ಲೆಕ್ಕದಲ್ಲಿ 75 ವರ್ಷ ಎಂದರೆ ಆತನ ಜೀವಿತದ ಅಂತ್ಯ ಎಂದುಕೊಳ್ಳಬಹುದು, ಒಂದು ದೇಶದ ಮಟ್ಟಿಗೆ ಇದು ದೀರ್ಘ ಅವಧಿಯೇನಲ್ಲ. ಸ್ವತಂತ್ರ‍್ಯಾನAತರ ಪ್ರಜಾಸತ್ತಾತ್ಮಕ ಆಡಳಿತವನ್ನು ಆಯ್ಕೆ ಮಾಡಿಕೊಂಡಿರುವ ಈ ದೇಶದಲ್ಲಿ ಇಂಥ ದುರ್ಘಟನೆಗಳು ನಾವೇ ಒಪ್ಪಿಕೊಂಡಿರುವ ಸಂವಿಧಾನವನ್ನು ಅಣಕಿಸಬಾರದು. ಮಾನವೀಯ ಪ್ರಜ್ಞೆ ಬೇಡ ಬಿಡಿ, ಕನಿಷ್ಠ ಮೃಗೀಯ ಪ್ರಜ್ಞೆ ಇರುವವರನ್ನಾದರೂ ಎಚ್ಚರಿಸಬೇಕಲ್ಲವೇ. ದೇಶದ ಪ್ರಜೆಯೂ ಈ ಹತ್ಯೆಯ ವಿರುದ್ಧ ದನಿ ಎತ್ತಬೇಕಿದೆ, ಜನರು ಎತ್ತುವ ದನಿ ಕ್ಷೀಣವಾದರೂ ಸರಿ ಇಂಥ ಪ್ರತಿರೋಧದ ದನಿ ಅಧಿಕಾರದ ಅಮಲಲ್ಲಿ ಕುರುಡಾಗಿರುವ ಕ್ರೂರ ವ್ಯವಸ್ಥೆಯನ್ನು ಎಚ್ಚರಿಸಲಿದೆ. ಈಗ ಹಿಂಜರಿದರೆ ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. 
-ಸಂಪಾದಕ