ಕುಚ್ಚಂಗಿ ಪ್ರಸನ್ನ : “ಸೂಲು ತಪ್ಪಿದರೆ ಗೊಡ್ಡಲ್ಲ” ಅನ್ನುತ್ತಲೇ 5 ಸಲ ಎಂಪಿಯಾದ ಜಿ.ಎಸ್.ಬಸವರಾಜು ಉತ್ತರಾಧಿಕಾರಿ ಯಾರಾಗಬಲ್ಲರು …., !?

ಕೋಳಿ ಕೂಗನ್ನು ಅನುಸರಿಸಿ ಬೆಳಗಿನ ಜಾವದ ಗಂಟೆಗಳನ್ನು ಲೆಕ್ಕ ಹಾಕುತ್ತಿದ್ದ ಕಾಲವಲ್ಲ ಇದು

ಕುಚ್ಚಂಗಿ ಪ್ರಸನ್ನ  :     “ಸೂಲು ತಪ್ಪಿದರೆ ಗೊಡ್ಡಲ್ಲ” ಅನ್ನುತ್ತಲೇ  5 ಸಲ ಎಂಪಿಯಾದ ಜಿ.ಎಸ್.ಬಸವರಾಜು  ಉತ್ತರಾಧಿಕಾರಿ ಯಾರಾಗಬಲ್ಲರು …., !?

ಒಂದು ಗಳಿಗೆ

ಕುಚ್ಚಂಗಿ ಪ್ರಸನ್ನ

 

1994ರ ವಿಧಾನ ಸಭಾ ಚುನಾವಣಾ ಫಲಿತಾಂಶ ಹೊರಬಂದಿತ್ತು, ಅಷ್ಟೊತ್ತಿಗಾಗಲೇ ಎರಡು ಸಲ ಲೋಕಸಭೆಗೆ ಚುನಾಯಿತರಾಗಿ, ಮಾಜಿ ಎಂಪಿಯಾಗಿದ್ದ ಜಿ.ಎಸ್.ಬಸವರಾಜು ಗುಬ್ಬಿಯಲ್ಲಿ ಎರಡು ಸಲ ಶಾಸಕರಾಗಿದ್ದ ಜಿ.ಎಸ್.ಶಿವನಂಜಪ್ಪನವರಿಗೆ  ಆ ಸಲ ಕಾಂಗ್ರೆಸ್ ಟಿಕೆಟ್ ತಪ್ಪಿಸಿ ತಾವೇ ವಿಧಾನ ಸಭೆಗೆ ಸ್ಪರ್ಧಿಸಿ ಸೋತಿದ್ದರು. ಟಿಕೆಟ್ ದಕ್ಕದ ಶಿವನಂಜಪ್ಪನವರು ಬಂಡೆದ್ದು ಪಕ್ಷೇತರರಾಗಿ ಕಾರಿನ ಗುರುತು ಪಡೆದು ನಿಂತು ಜಿ.ಎಸ್.ಬಸವರಾಜು ಅವರನ್ನು ಸೋಲಿಸಿಬಿಟ್ಟಿದ್ದರು.

ಫಲಿತಾಂಶ ಬಂದು ಒಂದೆರಡು ದಿನಗಳಾಗಿದ್ದವು.  ತುಮಕೂರಿನಲ್ಲಿ ವರದಿಗಾರನಾಗಿದ್ದ ನಾನು ನಮ್ಮ ಸಂಪಾದಕರೊಡನೆ ತುಮಕೂರು ಪ್ರವಾಸಿ ಮಂದಿರದಲ್ಲಿ ಜಿ.ಎಸ್.ಬಸವರಾಜು ಅವರನ್ನು ಭೇಟಿ ಮಾಡಿದ್ದೆ. ಎಲ್ಲ ವರದಿಗಾರರಂತೆ ನಾನೂ ಕೂಡಾ, ಬಸವರಾಜು ಅವರನ್ನು “ ನಿಮ್ಮ ಸೋಲಿಗೆ ಕಾರಣವೇನು” ಅಂತ ಕೇಳಿದ್ದೆ.

ಬಸವರಾಜು “ sabotage” ಅಂದರು, ನನಗದು ತಕ್ಷಣಕ್ಕೆ ಅರ್ಥವಾಗಲಿಲ್ಲ, , “ ಹಂಗಂದ್ರೆ” ಅಂತಂದೆ, ತುಸು ಸಿಟ್ಟಿಗೆದ್ದವರಂತೆ ಕಂಡ ಬಸವರಾಜು , ಕೈಯಲ್ಲಿ ಚೂರಿ ಇದೆಯೇನೋ ಎಂಬಂತೆ ಗಾಳಿಯಲ್ಲಿ ತಿವಿದು, “ಬೆನ್ನಿಗಿರಿದ್ರು ಕಣ್ರೀ” ಅಂತಂದ್ರು.

ಅಷ್ಟಕ್ಖೇ ಬಿಡಲಿಲ್ಲ ನಾನು, “ಮತ್ತೆ ನಿಮ್ಮ ಮುಂದಿನ ರಾಜಕೀಯ ನಡೆ” ಎಂದೆ.

“ ಸೂಲು ತಪ್ಪಿದ್ರೆ ಗೊಡ್ಡಲ್ಲ ಕಣ್ರೀ” ಎಂದರು ಜಿ.ಎಸ್.ಬಸವರಾಜು, ಬಹುಪಾಲು ಅದೇ ಹೆಡ್ಡಿಂಗ್ ಕೊಟ್ಟು ಒಂದು ಬಾಕ್ಸ್ ಐಟಂ ಮಾಡಿದ್ದೆ ಅಂತ ಕಾಣುತ್ತೆ.

ಹೀಗೆ ಸೂಲು ತಪ್ಪದವರಾಗಿ ಜಿ.ಎಸ್.ಬಸವರಾಜು, 1999, 2009 ಹಾಗೂ 2019ರಲ್ಲಿ ತುಮಕೂರು ಲೋಕ ಸಭಾ ಕ್ಷೇತ್ರದಿಂದ ಗೆಲ್ಲುತ್ತ ಬಂದಿದ್ದಾರೆ ಜಿಎಸ್‍ಬಿ. 1941ರಲ್ಲಿ ಜನಿಸಿ, 82ನೇ ವರ್ಷದಲ್ಲಿರುವ ಹಾಗೂ ಬಿಜೆಪಿಯಲ್ಲಿ ಟಿಕೆಟ್ ಕೊಡಲು ವಯಸ್ಸನ್ನೂ ಪರಿಗಣಿಸುವ ಕಾರಣದಿಂದ ಇನ್ನು ಚುನಾವಣೆಗೆ ಸ್ಪರ್ಧಿಸಲ್ಲ ಅಂತ ಹೇಳಿಕೊಂಡಿದ್ದಾರೆ. ಎಂಬತ್ತು ದಾಟಿದರೂ ಗುಂಡುಕಲ್ಲಿನಂತಿರುವ ಜಿ.ಎಸ್.ಬಸವರಾಜು ಅವರ ಈ ಮಾತನ್ನು ನಂಬಿ ಅವರಿನ್ನು ಚುನಾವಣೆಗೆ ಸ್ಪರ್ಧಿಸಲ್ಲ ಅಂತ ಅಂದುಕೊಂಡು ಯಾರಾದರೂ ಮೋಸ ಹೋದಲ್ಲಿ ನಾನು ಜವಾಬ್ದಾರನಲ್ಲ.

ಜಿ.ಎಸ್.ಬಸವರಾಜು 1984, 89 ಹಾಗೂ 1999ರಲ್ಲಿ ಗೆದ್ದಿದ್ದು ಕಾಂಗ್ರೆಸ್‍ನಿಂದ, ಆದರೆ 2004ರ ಮಹಾ ಚುನಾವಣೆಯಲ್ಲಿ ಬಿಜೆಪಿಯ ಎಸ್.ಮಲ್ಲಿಕಾರ್ಜುನಯ್ಯ ಹಾಗೂ ಜೆಡಿಎಸ್‍ನ ಡಿ.ಎಲ್.ಜಗದೀಶ್ ಎದುರು ನಿಂತು ಸೋತು ಮೂರನೇ ಸ್ಥಾನಕ್ಕಿಳಿದ ಜಿಎಸ್‍ಬಿ ಕಾಂಗ್ರೆಸ್ ತೊರೆದು ಬಿಜೆಪಿಯತ್ತ ಸರಿದುಬಿಟ್ಟರು.

ಹಾಗಾಗಿ 2009 ಹಾಗೂ 2019ರಲ್ಲಿ ಬಸವರಾಜು ಬಿಜೆಪಿಯಿಂದ ಚುನಾಯಿತರಾದರು. ಸೂಲು ತಪ್ಪಿದರೆ ಗೊಡ್ಡಲ್ಲ ಎನ್ನುವ ಅತ್ಯಂತ ವಾಸ್ತವವಾದಿ ರಾಜಕಾರಣಿಯಾಗಿರುವ ಕಾರಣದಿಂದಲೇ ಮೊನ್ನಿನ ವಿಧಾನ ಸಭಾ ಚುನಾವಣೆಯಲ್ಲಿ ಗೆಲ್ಲಲು ಸಾಧ‍್ಯವೇ ಇಲ್ಲ ಎಂದು ಅಂದುಕೊಂಡಿದ್ದ ಮಗ ಜ್ಯೋತಿಗಣೇಶ್ ಅವರನ್ನು ಎಲ್ಲರಿಗೂ ಅಚ್ಚರಿಯಾಗುವಂತೆ ಗೆಲ್ಲಿಸಿಕೊಂಡುಬಿಟ್ಟರು.  ಬಸವರಾಜು ಅಲ್ಲದೇ ಹೋಗಿದ್ದರೆ ಇನ್ಯಾರಿಂದಲೂ ಗೆಲ್ಲಿಸಿಕೊಳ್ಳಲಾಗುತ್ತಿರಲಿಲ್ಲ ಎಂದು ಅವರ ವಿರೋಧಿಗಳೂ ವ್ಯಂಗ್ಯಭರಿತ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ.

2024ರ ಲೋಕಸಭಾ ಚುನಾವಣೆ ಬಹಳ ದೂರವೇನೂ ಉಳಿದಿಲ್ಲ, ಮಧ್ಯಪ್ರದೇಶದಲ್ಲೂ ಬಿಜೆಪಿ ಕರ್ನಾಟಕದಂತೆ ಸೋಲುವ ಸಾಧ್ಯತೆಗಳನ್ನು ಪರಿಗಣಿಸಿ ಅವಧಿಪೂರ್ವ ಚುನಾವಣೆಗೆ ಕರೆ ಕೊಟ್ಟರೂ ಅಚ್ಚರಿಯಿಲ್ಲ. ಹಾಗಾಗಿ ಈಗಾಗಲೇ ತುಮಕೂರಿನಿಂದ ಕಣಕ್ಕಿಳಿಯುವ ಉಮೇದುವಾರರು ಯಾರು ಯಾರು ಎಂಬುದನ್ನು ಮಾಧ್ಯಮಗಳು ಘೋಷಿಸತೊಡಗಿವೆ.

ಕೋಳಿ ಕೂಗನ್ನು ಅನುಸರಿಸಿ ಬೆಳಗಿನ ಜಾವದ ಗಂಟೆಗಳನ್ನು ಲೆಕ್ಕ ಹಾಕುತ್ತಿದ್ದ ಕಾಲವಲ್ಲ ಇದು, ಮಾಧ್ಯಮಗಳು ಹೇಳುವುದೆಲ್ಲ ನಿಜವೂ ಆಗುವುದಿಲ್ಲ. ತುಮಕೂರಿನ ಸ್ಥಳೀಯ ಕೇಬಲ್ ವಾಹಿನಿಯೊಂದು ತಮ್ಮದೇ ಕುಲದ ಅಭ್ಯರ್ಥಿಯೊಬ್ಬರನ್ನು ಕಾಂಗ್ರೆಸ್‍ ಪಕ್ಷಕ್ಕೆ ಪ್ರಮೋಟ್ ಮಾಡತೊಡಗಿದೆ. ವಿಧಾನ ಸಭಾ ಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಮತ್ತೊಂದು ಕೇಬಲ್ ವಾಹಿನಿ ಮುಂದಿಡುತ್ತಿದೆ.

ವಿಧಾನ ಸಭೆಯೇ ಬೇರೆ ಲೋಕಸಭೆಯೇ ಬೇರೆ, ಇಲ್ಲಿಂದ ದಿಲ್ಲಿಗೆ ಕೇವಲ ಬಿಜೆಪಿ ಮಾತ್ರವೇ ಗೆಲ್ಲುವುದು ಎಂಬ ಮಾತು ಆ ಪಕ್ಷದ ಸಿಂಪಥೈಸರ್ ಗಳ ಬಾಯಲ್ಲಿ ಉಲಿದಾಡುತ್ತಿದೆ. ಮೋದಿಯ ಮೋಡಿ ಇನ್ನೂ ಇದೆ ಎಂಬುದು ಅವರ ಗಾಢ ನಂಬಿಕೆ. ನಂಬಿ ಕೆಟ್ಟವರಿಲ್ಲ ಎಂಬುದೊಂದು ಗಾದೆ, ಕೆಟ್ಟು ಬದುಕಿದವರೂ ಇಲ್ಲ ಎಂಬುದು ಮತ್ತೊಂದು ಗಾದೆ.

ಗ್ರಾಮಾಂತರ ಕ್ಷೇತ್ರದಲ್ಲಿ ಸೋತ ಜೆಡಿಎಸ್‍ ಮಾಜಿ ಶಾಸಕ ಗೌರಿಶಂಕರ್ ಕಾಂಗ್ರೆಸ್‍ಗೆ ಬಂದು ಅಭ್ಯರ್ಥಿಯಾಗಲಿದ್ದಾರೆ ಎಂಬ ಗಾಳಿಮಾತೂ ಹರಿದಾಡುತ್ತಿದೆ. ಮಾಜಿ ಸಂಸದ ಮುದ್ದಹನುಮೇಗೌಡರು ತಮಗೆ ಬಿಜೆಪಿ ತುಮಕೂರು ಕ್ಷೇತ್ರದಿಂದಲೇ ಟಿಕೆಟ್ ಕೊಡಲಿ ಎಂದು ಹಂಬಲಿಸುತ್ತಿದ್ದಾರೆ.

ಬಿಜೆಪಿಯಲ್ಲಿ ಯಶಸ್ವಿ ರಿಯಲ್ ಎಸ್ಟೇಟ್ ಉದ್ಯಮಿ ಸ್ಫೂರ್ತಿ ಚಿದಾನಂದ್, ಸಿದ್ದಗಂಗಾ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಎಂ.ಡಿ. ಡಾ. ಪರಮೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಕೂಡಾ ಎಂಪಿ ಟಿಕೆಟ್ ಬಯಸಿದ್ದಾರೆ.

ಕಾಂಗ್ರೆಸ್‍ನಲ್ಲಿ ಐದಾರು ವರ್ಷಗಳಿಂದ ಅದೂ ಇದೂ ಪ್ರಚಾರ ಸಮಾರಂಭಗಳನ್ನು ಮಾಡಿಕೊಂಡು ಅಡ್ಡಾಡುತ್ತಿರುವ ಮುರಳೀಧರ ಹಾಲಪ್ಪನವರ ಹೆಸರೂ ಕಾರ್ಯಕರ್ತರ ನಾಲಿಗೆಯಲ್ಲಿದೆ. ತಾನೂ ಎಂಪಿ ಟಿಕೆಟ್ ಆಕಾಂಕ್ಷಿ ಎಂದು ಖಾಸಗಿಯಾಗಿ ಹೇಳಿಕೊಳ್ಳುತ್ತಿರುವವರ ಪಟ್ಟಿಯೂ ಇದೆ.

ಜೆಡಿಎಸ್‍ನಿಂದ ಕಳೆದ ಸಲ ನಿಂತು ಸೋತ ಮಾಜಿ ಪ್ರಧಾನಿ ದೇವೇಗೌಡರೇ ಈ ಸಲವೂ ಕಣಕ್ಕಿಳಿಯುವುದಾಗಿ ಎಲ್ಲೋ ಅಸ್ಪಷ್ಟ ಹೇಳಿಕೆ ನೀಡಿದ್ದಾರೆ.

( ಅಪೂರ್ಣ)

ತಿಪಟೂರು, ಮಧುಗಿರಿಗಳೂ

ಲೋಕಸಭಾ ಕ್ಷೇತ್ರಗಳಾಗಿದ್ದವು!

 

 

ತುಮಕೂರು ಲೋಕಸಭಾ ಕ್ಷೇತ್ರಕ್ಕೂ ಮೊದಲು ತಿಪಟೂರು ಹಾಗೂ ಮಧುಗಿರಿ ಲೋಕಸಭಾ ಕ್ಷೇತ್ರಗಳಿದ್ದವು. ತಿಪಟೂರು ಲೋಕಸಭಾ ಕ್ಷೇತ್ರಕ್ಕೆ1957 ಮತ್ತು 1962ರ ಚುನಾವಣೆಗಳಲ್ಲಿ ಕಾಂಗ್ರೆಸ್‍ನಿಂದ ಸಿ.ಆರ್.ಬಸಪ್ಪ ಚುನಾಯಿತರಾಗಿದ್ದರು. ನಂತರ ಈ ಕ್ಷೇತ್ರ ತುಮಕೂರು ಲೋಕಸಭಾ ಕ್ಷೇತ್ರದೊಂದಿಗೆ ವಿಲೀನವಾಯಿತು.

ಅದೇ ರೀತಿ ಮಧುಗಿರಿ ಲೋಕಸಭಾ ಕ್ಷೇತ್ರವೂ 1967ರಿಂದ 77ರವರೆಗೆ ಅಸ್ತಿತ್ವದಲ್ಲಿತ್ತು. 1967ರಲ್ಲಿ  ಮಾಲಿ ಮರಿಯಪ್ಪನವರು ಈ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾಗಿದ್ದರು 1968ರಲ್ಲಿ ಅವರು ತೀರಿಕೊಳ್ಳುತ್ತಾರೆ. ನಂತರ ಪದ್ಮಶ್ರೀ ಸುಧಾ ವಿ ರೆಡ್ಡಿ ಈ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾಗಿದ್ದರು ಎಂಬ ಮಾಹಿತಿ ಇದೆ. 1971ರಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಮಧುಗಿರಿ ವಿಲೀನವಾಗಿ ಕೆ.ಮಲ್ಲಣ್ಣ ಎಂಪಿಯಾಗಿದ್ದರು.

 

 

ತುಮಕೂರು ಲೋಕಸಭಾ ಸದಸ್ಯರು

ಅಂದಿನಿಂದ ಇಂದಿನವರೆಗೆ

1952 ಸಿ.ಆರ್.ಬಸಪ್ಪ ( ಕಾಂಗ್ರೆಸ್)

1957 ಎಂ.ವಿ.ಕೃಷ್ಣಪ್ಪ( ಕಾಂಗ್ರೆಸ್)

1962 ಎಂ.ವಿ.ಕೃಷ್ಣಪ್ಪ( ಕಾಂಗ್ರೆಸ್)

1962 ಅಜಿತ್ ಪ್ರಸಾದ್ ಜೈನ್( ಕಾಂಗ್ರೆಸ್)

1965 ಮಾಲಿ ಮರಿಯಪ್ಪ ( ಪ್ರಜಾ ಸೋಶಿಯಲಿಸ್ಟ್ ಪಾರ್ಟಿ)

1967 ಕೆ.ಲಕ್ಕಪ್ಪ ( ಪ್ರಜಾ ಸೋಶಿಯಲಿಸ್ಟ್ ಪಾರ್ಟಿ)

1971 ಕೆ.ಲಕ್ಕಪ್ಪ (ಕಾಂಗ್ರೆಸ್)

1977 ಕೆ.ಲಕ್ಕಪ್ಪ (ಕಾಂಗ್ರೆಸ್)

1980 ಕೆ.ಲಕ್ಕಪ್ಪ (ಕಾಂಗ್ರೆಸ್)

1984 ಜಿ.ಎಸ್.ಬಸವರಾಜ್( ಕಾಂಗ್ರೆಸ್)

1989 ಜಿ.ಎಸ್.ಬಸವರಾಜ್( ಕಾಂಗ್ರೆಸ್)

1991 ಎಸ್.ಮಲ್ಲಿಕಾರ್ಜುನಯ್ಯ( ಬಿಜೆಪಿ)

1996 ಸಿ.ಎನ್.ಭಾಸ್ಕರಪ್ಪ ( ಜನತಾ ದಳ)

1998 ಎಸ್.ಮಲ್ಲಿಕಾರ್ಜುನಯ್ಯ( ಬಿಜೆಪಿ)

1999 ಜಿ.ಎಸ್.ಬಸವರಾಜ್( ಕಾಂಗ್ರೆಸ್)

2004 ಎಸ್.ಮಲ್ಲಿಕಾರ್ಜುನಯ್ಯ( ಬಿಜೆಪಿ)

2009 ಜಿ.ಎಸ್.ಬಸವರಾಜ್(ಬಿಜೆಪಿ)

2014 ಎಸ್.ಪಿ.ಮುದ್ದಹನುಮೇಗೌಡ

2019 ಜಿ.ಎಸ್.ಬಸವರಾಜ್(ಬಿಜೆಪಿ)