ಪಾದಯಾತ್ರೆ ನಿಶ್ಚಿತ: ಸಿದ್ದರಾಮಯ್ಯ

padayatre-siddaramiah-ramanagara

ಪಾದಯಾತ್ರೆ ನಿಶ್ಚಿತ: ಸಿದ್ದರಾಮಯ್ಯ


ಪಾದಯಾತ್ರೆ ನಿಶ್ಚಿತ: ಸಿದ್ದರಾಮಯ್ಯ

ಬೆಂಗಳೂರು: ರಾಮನಗರ ಜಿಲ್ಲೆಗೆ ಸೀಮಿತವಾಗಿ ಸರ್ಕಾರ 144 ಸೆಕ್ಷನ್ ಹೇರಿರುವುದು ಏನಾದರೂ ಮಾಡಿ ನಮ್ಮ ಪಾದಯಾತ್ರೆಯನ್ನು ನಿಲ್ಲಿಸಬೇಕು ಎಂಬ ದುರುದ್ದೇಶವನ್ನು ತೋರಿಸುತ್ತದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಶನಿವಾರ ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾವು ನಾಳೆ ಪಾದಯಾತ್ರೆ ಮಾಡುವುದು ನಿಶ್ಚಿತ, ಈ ಸರ್ಕಾರ ನಮ್ಮ ಮೇಲೆ ಏನು ಕ್ರಮ ಜರುಗಿಸುತ್ತದೋ ಜರುಗಿಸಲಿ. ನಾವು ಎಲ್ಲವನ್ನು ಎದುರಿಸಲು ಸಿದ್ಧರಿದ್ದೇವೆ ಎಂದರು.

ಬಿಜೆಪಿಯವರು ಅಧಿಕಾರದಲ್ಲಿದ್ದಾರೆ. ನಾವು ಕೊರೊನಾ ನಿಯಮಗಳನ್ನು ಅನುಸರಿಸಿಯೇ ಪಾದಯಾತ್ರೆ ಮಾಡುತ್ತೇವೆ. ನಮ್ಮ ಮೇಲೆ ಏನು ಕಾನೂನು ಕ್ರಮ ತೆಗೆದುಕೊಳ್ಳಬೇಕು ಅದನ್ನು ಸರ್ಕಾರ ಮಾಡಲಿ. ನಾವು ಅದನ್ನು ಎದುರಿಸಲು ತಯಾರಾಗಿದ್ದೇವೆ. ನಾವು ಕಾನೂನನ್ನು ಗೌರವಿಸುತ್ತೇವೆ, ಆದರೂ ಅವರು ನಮ್ಮನ್ನು ಬಂಧಿಸುತ್ತಾರೆ ಎಂದರೆ ಬಂಧಿಸಲಿ ಎಂದು ಹೇಳಿದರು.

ಮೇಕೆದಾಟು ಬಳಿ 144 ಸೆಕ್ಷನ್ ಜಾರಿಯಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಹಾಗೇನಾದರೂ ಜಾರಿ ಮಾಡಿದ್ದರೆ ನಾಲ್ಕೇ ಜನ ಪಾದಯಾತ್ರೆ ಮಾಡ್ತೇವೆ. ನಮ್ಮ ಪಾದಯಾತ್ರೆ ಘೋಷಣೆಯಾಗಿ ಎರಡು ತಿಂಗಳಾಯ್ತು. ವಾರಾಂತ್ಯದ ಲಾಕ್ ಡೌನ್ ಘೋಷಣೆ ಆಗಿದ್ದು ಮೊನ್ನೆ ಮೊನ್ನೆ. ಅದೂ ಅಲ್ಲದೆ ರಾಮನಗರ ಜಿಲ್ಲೆಯಲ್ಲಿ ಮಾತ್ರ 144 ಸೆಕ್ಷನ್ ಯಾಕೆ? ಬೇರೆ ಜಿಲ್ಲೆಯಲ್ಲಿ ಏಕಿಲ್ಲ? ಇದು ಏನಾದರೂ ಮಾಡಿ ಪಾದಯಾತ್ರೆ ತಡೆಯಬೇಕು ಎಂಬ ಅವರ ದುರುದ್ದೇಶವನ್ನು ತೋರಿಸುತ್ತದೆ. ರಾಮನಗರದಲ್ಲಿ ಗೆಸ್ಟ್ ಹೌಸ್‌ಗಳು ಸಿಗದಂತೆ ನಿರ್ಬಂಧ ಹೇರಲಾಗಿದೆ. ಇದಕ್ಕೆ ಏನು ಹೇಳಬೇಕು? ಎಂದು ಪ್ರಶ್ನಿಸಿದರು.

ಸರ್ಕಾರದ ಜೊತೆ ಸಂಧಾನ ಮಾಡೋಕೇನಿದೆ? ಈ ಸರ್ಕಾರ ಅಕಾರಕ್ಕೆ ಬಂದು ಎರಡುವರೆ ವರ್ಷ ಕಳೆದಿದೆ. ಅವತ್ತಿಂದ ಏನು ಮಾಡ್ತಿದ್ದಾರೆ. ಕಾವೇರಿ ಜಲ ವಿವಾದ ಇತ್ಯರ್ಥವಾಗಿದ್ದು 2018ರ ಫೆಬ್ರವರಿಯಲ್ಲಿ. ಅದಾದಮೇಲೆ ತಮಿಳುನಾಡಿಗೆ 177.25 ಟಿಎಂಸಿ ನೀರು ಬಿಡಬೇಕು ಎಂದು ಹೇಳಿದ್ದಾರೆ. ಒಂದು ಸಾಮಾನ್ಯ ವರ್ಷದಲ್ಲಿ ಇಷ್ಟು ನೀರು ಬಿಡೋಣ.

ಆದರೆ ಈಗ ಹೆಚ್ಚು ಮಳೆಯಾದ ಕಾರಣ ನೀರು ಸಮುದ್ರಕ್ಕೆ ಹೋಗಿ ವ್ಯರ್ಥವಾಗುತ್ತಿದೆ. ಒಂದು ಜಲಾಶಯ ನಿರ್ಮಾಣ ಮಾಡಿ ವ್ಯರ್ಥವಾಗುವ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಕೆ ಮಾಡಬಹುದು ಎಂದರು.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಬೊಮ್ಮಾಯಿ ಅವರು ಜಲ ಸಂಪನ್ಮೂಲ ಸಚಿವರಾಗಿದ್ದರು ಆಗ ಯಾಕೆ ಯೋಜನೆ ಜಜಾರಿ ಮಾಡಿಲ್ಲ? ಈಗ ಸುಪ್ರೀಂಕೋರ್ಟ್, ಕಾವೇರಿ ಜಲ ಪ್ರಾಕಾರ, ಹಸಿರು ನ್ಯಾಯಾಧೀಕರಣ ಎಲ್ಲಿಯೂ ಯೋಜನೆ ಜಾರಿ ಮಾಡದಂತೆ ತಡೆ ನೀಡಿಲ್ಲ. ಎರಡೂ ಕಡೆ ಬಿಜೆಪಿಯವರ ಸರ್ಕಾರವೇ ಇದೆ, ಅಣೆಕಟ್ಟು ನಿರ್ಮಾಣಕ್ಕೆ ಬೇರಾವ ತೊಂದರೆ ಇದೆ ಹೇಳಲಿ.

ಈ ಸರ್ಕಾರ ಪರಿಸರ ಇಲಾಖೆಯ ಅನುಮತಿ ಪಡೆಯಲು ಯಾವತ್ತಾದರೂ ಒತ್ತಾಯ ಮಾಡಿದೆಯಾ? ಒಂದು ಪರಿಸರ ಒಪ್ಪಿಗೆ ಪತ್ರ ಪಡೆಯಲು ಎರಡೂವರೆ ವರ್ಷ ಬೇಕಾ? ಸಿದ್ದರಾಮಯ್ಯ ಅವರ ಸರ್ಕಾರ ಏನೂ ಮಾಡಿಲ್ಲ ಎಂದು ಇದಕ್ಕೆ ರಾಜಕೀಯ ಬಣ್ಣ ಬಳಿಯಲು ನೋಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವಿದ್ದಾಗಲೇ ಯೋಜನೆ ಜಾರಿ ಪ್ರಕ್ರಿಯೆ ಆರಂಭವಾಗಿದ್ದು, ಡಿ.ಪಿ.ಆರ್ ಸಿದ್ಧಪಡಿಸಿ ಕೇಂದ್ರದ ಅನುಮತಿಗೆ ಕಳುಹಿಸಿದ್ದು. ಈ ಸರ್ಕಾರ ಏನು ಮಾಡಿದೆ ಹೇಳಲಿ. ತಾವು ಏನನ್ನು ಮಾಡದೆ ನಮ್ಮ ಮೇಲೆ ಆರೋಪ ಮಾಡೋದಕ್ಕೆ ಅರ್ಥ ಇಲ್ಲ. ಹಿಂದೆ ಯಡಿಯೂರಪ್ಪ, ಸದಾನಂಗ ಗೌಡರು, ಜಗದೀಶ್ ಶೆಟ್ಟರ್ ಅವರು ಐದು ವರ್ಷ ಮುಖ್ಯಮಂತ್ರಿ ಆಗಿದ್ದರಲ್ಲ ಆಗೇನು ಮಾಡಿದರು? ಈಗಿನ ಸರ್ಕಾರ ಏನು ಮಾಡಿದೆ? ಎಂದು ಮರುಪ್ರಶ್ನೆ ಮಾಡಿದರು.

ಸರ್ಕಾರ ಅನುಮತಿ ನೀಡುತ್ತಾ, ನಮ್ಮ ಬಂಧನ ಮಾಡುತ್ತಾ ಗೊತ್ತಿಲ್ಲ. ಹದಿನೈದು ಜನ ಇದ್ರೂ ಅದು 144 ಸೆಕ್ಷನ್ ನ ಮೀರಿದಂತೆಯೇ ಆಗುತ್ತೆ. ಐದು ಜನಕ್ಕಿಂತ ಜಾಸ್ತಿ ಸೇರಬಾರದು ಎಂದು ನಿಯಮ ಹೇಳುತ್ತೆ. ಐದು ಜನಕ್ಕೆ ಅನುಮತಿ ಏಕೆ? ಎಂದು ಕಿಡಿಕಾರಿದರು.

ಹಿಂದಿನ ಸರ್ಕಾರ ಅದು ಮಾಡಿಲ್ಲ ಇದು ಮಾಡಿಲ್ಲ ಎನ್ನೋಕೆ ಬಿಜೆಪಿ ಅಕಾರಕ್ಕೆ ಬಂದಿರೋದ? ತಾವೇನು ಮಾಡಿದ್ದಾರೆಂದು ಜನರಿಗೆ ಹೇಳಬೇಕಲ್ವಾ? ಕುಮಾರಸ್ವಾಮಿ ಬಗ್ಗೆ ನಾನು ಮಾತನಾಡಲ್ಲ, ಅವರ ಹತಾಶೆಯಿಂದ ಏನೇನೋ ಹೇಳ್ತಾರೆ, ಅದಕ್ಕೆಲ್ಲ ನಾನು ಉತ್ತರ ಕೊಡಲ್ಲ ಎಂದು ಹೇಳಿದರು.