ಕುಚ್ಚಂಗಿ ಕೆರೆ ಅಂಗಳದಲ್ಲಿ ಕಾರಿಗೆ ಬೆಂಕಿ- ಮೂವರ ಅಸ್ತಿಪಂಜರ ಪತ್ತೆ
ಅಷ್ಟು ತಡ ರಾತ್ರಿಯಲ್ಲಿ ನಿರ್ಮಾನುಷವಾದ ಕುಚ್ಚಂಗಿ ಕೆರೆ ಅಂಗಳಕ್ಕೆ ಬಂದು ತಲುಪಬೇಕೆಂದರೆ ಸ್ಥಳದ ಪೂರ್ವ ಪರಿಚಯ ಇರುವವರೇ ಆಗಿರುತ್ತಾರೆ ಎನ್ನಬಹುದಾಗಿದೆ.
ಸತ್ತವರು ಯಾರು- ಕೊಲೆಯೋ, ಆತ್ಮಹತ್ಯೆಯೋ ಇನ್ನೂ ನಿಗೂಢ ?
ತುಮಕೂರು: ತಾಲೂಕಿನ ಕುಚ್ಚಂಗಿ ಗ್ರಾಮದ ನಿರ್ಮಾನುಷ ಕೆರೆ ಅಂಗಳದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿರುವ ಕಾರಿನೊಳಗೆ, ಮೂವರು ಇಡಿಯಾಗಿ ಸುಟ್ಟು ಬೂದಿಯಾಗಿ ಅಸ್ತಿಪಂಜರದ ಸ್ಥಿತಿಯಲ್ಲಿರುವುದು ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದೆ. ಗುರುವಾರ ಮಧ್ಯರಾತ್ರಿಯ ನಂತರ ಈ ಕೃತ್ಯ ಸಂಭವಿಸಿರಬಹುದೆಂದು ಅಂದಾಜು ಮಾಡಲಾಗಿದೆ. ಎರಡು ಅಸ್ತಿಪಂಜರಗಳು ಕಾರಿನ ಹ್ಯಾಚ್‌ಬ್ಯಾಕ್ ಡಿಕ್ಕಿಯಲ್ಲೂ ಮತ್ತೊಂದು ಅಸ್ತಿಪಂಜರ ಕಾರಿನ ಹಿಂಭಾಗದ ಸೀಟಿನಲ್ಲೂ ಕಂಡು ಬಂದಿದೆ ಹಾಗೂ ಕಾರಿನ ಹಿಂಭಾಗದ ಡೋರ್ ತೆರೆದುಕೊಂಡಿದ್ದು, ಹಿಂದಿನ ಸೀಟಿನಿಂದ ಸತ್ತು ಬೂದಿಯಾಗಿರುವ ವ್ಯಕ್ತಿಯ ತಲೆಬುರುಡೆ ಹೊರಕಾಣುತ್ತಿತ್ತು ಹಾಗೂ ಅದೇ ಭಾಗದಲ್ಲಿ ಕಾರಿನ ಪೆಟ್ರೋಲ್ ಟ್ಯಾಂಕಿನ ಕ್ಯಾಪ್ ತೆರೆದಿದ್ದು, ಪೆಟ್ರೋಲ್ ಟ್ಯಾಂಕಿನ ಲಿಡ್ ಕೂಡಾ ತೆರೆದ ಸ್ಥಿತಿಯಲ್ಲಿರುವುದು ಕಂಡು ಬಂತು.
ಸುಟ್ಟು ಬೂದಿಯಾದ ಕಾರಿನಲ್ಲಿ ಪ್ರಾಣ ಕಳೆದುಕೊಂಡಿರುವ ವ್ಯಕ್ತಿಗಳು ಯಾರು ಎಂಬ ಗುರುತು ಇನ್ನೂ ಪತ್ತೆಯಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ವ್ಯಕ್ತಿಯೊಬ್ಬರು ಮೂರೂಕಾಲು ವರ್ಷದ ಹಿಂದೆ ಖರೀದಿಸಿರುವ ಮಾರುತಿ ಸುಜುಕಿ ಕಂಪನಿಯ ಎಸ್‌ಪ್ರೆಸೋ ಎಂಬ ಬಿಳಿ ಬಣ್ಣದ ಸಣ್ಣ ಗಾತ್ರದ ಕಾರು ಇದಾಗಿದೆ. ಅವರ ಕಾರನ್ನು ಯಾರೋ ಎರವಲು ಪಡೆದು ಹೋಗಿದ್ದಾರೆ ಎಂದು ಹೇಳಲಾಗಿದೆ.
ಶುಕ್ರವಾರ ಮಧ್ಯಾಹ್ನ ಕೆರೆ ಅಂಗಳದಲ್ಲಿ ಮಣ್ಣು ಸಾಗಿಸಲೆಂದು ಬಂದ ತಿಮ್ಮಲಾಪುರದ ಟ್ರಾಕ್ಟರ್ ಚಾಲಕ ಇನ್ನೂ ಹೊಗೆಯಾಡುತ್ತಿದ್ದ ಕಾರನ್ನು ಕಂಡ ಬಳಿಕವಷ್ಟೇ ಪೊಲೀಸರಿಗೆ ಸುದ್ದಿ ತಲುಪಿದೆ. ಎಸ್‌ಪಿ ಕೆ.ವಿ.ಅಶೋಕ್, ಅಡಿಶನಲ್ ಎಸ್ಪಿ ಮರಿಯಪ್ಪ, ಡಿವೈಎಸ್‌ಪಿ ಚಂದ್ರಶೇಖರ್ ಹಾಗೂ ಸಿಬ್ಬಂದಿ ತಕ್ಷಣವೇ ಕೃತ್ಯ ನಡೆದ ಸ್ಥಳಕ್ಕೆ ಧಾವಿಸಿದ್ದು ತನಿಖೆ ಕೈಗೊಂಡಿದ್ದಾರೆ.
ಕಾರಿನಲ್ಲಿ ಸುಟ್ಟು ಬೂದಿಯಾದವರನ್ನು ಹೊರಗೆ ಎಲ್ಲಾದರೂ ಕೊಂದು ಇಲ್ಲಿಗೆ ತಂದು ಕಾರು ಸಮೇತ ಸುಟ್ಟು ಹಾಕಲಾಗಿದೆಯೋ , ಅಥವಾ ಇಲ್ಲೇ ಕೊಂದು ಸುಡಲಾಗಿದೆಯೋ, ಅಥವಾ ಯಾರದಾರೂ ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೋ ಎಂಬುದು ತನಿಖೆಯಂದಷ್ಟೇ ಹೊರಬರಬೇಕಿದೆ. ಎಸ್‌ಪಿ ಕೆ.ವಿ.ಅಶೋಕ್ ಅವರು ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾರಿನ ಗುರುತು ಪತ್ತೆಯಾಗಿದೆ. ತನಿಖೆಯ ನಂತರವಷ್ಟೇ ಮಾಹಿತಿ ಹೊರಬರಬೇಕಿದೆ.
ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದ ಅರಕೆರೆ ಗ್ರಾಮ ಪಂಚಾಯಿತಿಗೆ ಸೇರಿದ ಈ ಪ್ರದೇಶದಲ್ಲಿ ಕೆರೆ ಮುಕ್ಕಾಲು ಪಾಲು ಒಣಗಿದ್ದು ಜಾಲಿ ಮರಗಳು ಹಾಗೂ ಕುರುಚಲು ಪೊದಗಳಿಂದ ಆವೃತವಾಗಿದೆ.ಕೋರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಕುಚ್ಚಂಗಿ ಗ್ರಾಮದ ಕೆರೆ ಅಂಗಳದಲ್ಲಿ ರಾಯದುರ್ಗ ರೈಲ್ವೆ ಮಾರ್ಗ ಸಾಗಿದೆ. ಇಲ್ಲಿ ರೈಲ್ವೆಯೂ ಸೇರಿ ಹಲವು ಕಾಮಗಾರಿಗಳಿಗೆ ಮಣ್ಣನ್ನು ಅಗೆದು ಸಾಗಿಸುವುದು ಹತ್ತಾರು ವರ್ಷಗಳಿಂದ ನಡೆದಿದ್ದು, ಊರುಕೆರೆ-ಅಣ್ಣೇನಹಳ್ಳಿ ಕಡೆಯಿಂದ ರೈಲ್ವೆ ಮಾರ್ಗವನ್ನು ನಿರ್ಮಿಸುತ್ತಿದ್ದು ಕೆರೆಯನ್ನು ಅರ್ಧಕ್ಕೆ ವಿಭಾಗಿಸಿಕೊಂಡೇ ಎತ್ತರದ ಏರಿ ಹಾಗೂ ಸೇತುವೆಗಳನ್ನು ನಿರ್ಮಿಸಲಾಗಿದೆ. ಅಣ್ಣೇನಹಳ್ಳಿ ರೈಲು ನಿಲ್ದಾಣ ನಿರ್ಮಾಣವೂ ಅಪೂರ್ಣಸ್ಥಿತಿಯಲ್ಲಿದ್ದು ಕಾರು, ಟ್ರಾಕ್ಟರ್‌ಗಳು ಈ ಸೇತುವೆ ಮಾರ್ಗದಲ್ಲೇ ಸಂಚರಿಸುತ್ತ ಕುಚ್ಚಂಗಿ ಕೆರೆ ಅಂಗಳಕ್ಕೆ ಬಂದು ತಲುಪುತ್ತವೆ. ಅಷ್ಟು ತಡ ರಾತ್ರಿಯಲ್ಲಿ ನಿರ್ಮಾನುಷವಾದ ಕುಚ್ಚಂಗಿ ಕೆರೆ ಅಂಗಳಕ್ಕೆ ಬಂದು ತಲುಪಬೇಕೆಂದರೆ ಸ್ಥಳದ ಪೂರ್ವ ಪರಿಚಯ ಇರುವವರೇ ಆಗಿರುತ್ತಾರೆ ಎನ್ನಬಹುದಾಗಿದೆ.