ಒಟ್ಟಾರೆ ವೈ.ಎಸ್.ವಿ. ದತ್ತಾ  ವಿಧಾನಸಭೆಯಲ್ಲಿರಬೇಕು !?

ಒಟ್ಟಾರೆ ವೈ.ಎಸ್.ವಿ. ದತ್ತಾ  ವಿಧಾನಸಭೆಯಲ್ಲಿರಬೇಕು !?

 

ಒಟ್ಟಾರೆ ವೈ.ಎಸ್.ವಿ. ದತ್ತಾ  ವಿಧಾನಸಭೆಯಲ್ಲಿರಬೇಕು !?

ನೆಂಪೆ ದೇವರಾಜ್

 

' ದತ್ತಾ 'ಎಂಬುದೊಂದು ವಿಸ್ಮಯ ಎಂದು ಹೇಳದೆ ವಿಧಿ ಇಲ್ಲ. ಸತ್ತು ಸ್ವರ್ಗದ ಬಾಗಿಲು ಬಡಿಯುತ್ತಿರುವ ಮೌಲ್ಯಾಧಾರಿತ ರಾಜಕಾರಣಕ್ಕೆ ಹಸಿರು ಚುಕ್ಕಿಯಾಗಿ ಕಂಗೊಳಿಸುತ್ತಿರುವ ಕೆಲವೇ ಕೆಲವು ಮಂದಿಯಲ್ಲಿ ಈ ವೈ.ಎಸ್.ವಿ ದತ್ತ ಕೂಡಾ ಒಬ್ಬರು. ಜನ ಸಮೂಹದ ಸರಳತೆಯ ವೇದಿಕೆಯಾಗಿರುವ ದತ್ತಾ, ಜಾತಿ ಧರ್ಮವನ್ನು ನಂಬಿ ರಾಜಕಾರಣ ಮಾಡಿದವರಲ್ಲ.ದುಡ್ಡು ಬಾಹು ಬಲದ ಮೆಲೆ ನಂಬುಗೆ ಇಟ್ಟವರಲ್ಲ.ಇಡೀ ಕಡೂರು ವಿಧಾನ ಸಭಾ ಕ್ಷೇತ್ರದಲ್ಲಿ ಹುಡುಕುತ್ತಾ ಹೋದರೆ ದತ್ತರವರ ಜಾತ್ಯಸ್ಥರು ಅಂದರೆ ಭ್ರಾಹ್ಮಣರು ಇರುವುದೇ ಒಂದು ಸಾವಿರದ ಸಂಖ್ಯೆಯಲ್ಲಿ?.ಅವರುಗಳಲ್ಲಿ ಮುಕ್ಕಾಲು ಪಾಲು ಆರೆಸ್ಸಸ್ಸಿನವರು!. ಆದರೂ ಈ ಮನುಷ್ಯ 2013 ರ ಚುನಾವಣೆಯಲ್ಲಿ ನಲವತ್ತು ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಇವರ ಸರಳ ಸಂಪನ್ನ ಬದುಕನ್ನು ಹೊಗಳಲು ಹತ್ತಾರು ಪದಗಳು ,ವಾಕ್ಯಗಳು ಕಾದು ಕುಳಿತಿವೆ.,ಅದೀಗ ಬೇಡ.,ಕಳೆದ ಜನವರಿ ಹದಿನಾಲ್ಕರಂದು ಜೆಡಿಎಸ್ ಎಂಬ ತಮ್ಮ ಲಾಗಾಯ್ತಿನ ಪಕ್ಷದಿಂದ ಹೊರಬರುತ್ತಾರೆ.ನಿರೀಕ್ಷಿಸಿದಂತೆ ಕೂದಲೆಳೆಯಲ್ಲಿ ಕಾಂಗ್ರೆಸ್ಸಿನ ಟಿಕೆಟ್ ತಪ್ಪಿಸಿಕೊಳ್ಳುತ್ತಾರೆ.ದುಃಖವೆಂಬುದು ಇವರ ಅಭಿಮಾನಿ ವಲಯದಲ್ಲಿ ಉಮ್ಮಳಿಸುತ್ತದೆ. ಇಡೀ ಎರಡು ದಿನ ದತ್ತಾರವರು ಯಾರ ಕೈಗೂ ಸಿಗದೆ ಒಂಟಿಯಾಗುತ್ತಾರೆ.

ಒಂಟಿತನದಲ್ಲಿದ್ದು ಅ ಮೂಲಕ ಇವರು ನಡೆಸಿದ ಹುಡುಕಾಟ ವ್ಯರ್ಥವಾಗುವುದಿಲ್ಲ. ಉತ್ತರ ಕಂಡು ಕೊಳ್ಳುತ್ತಾರೆ.

ನಿನ್ನೆಯ ದಿನ ಗೆಳೆಯ ಶಿವಾನಂದ ಕರ್ಕಿ ಮತ್ತು ನಿಶ್ಚಲ ಜಾದೂಗಾರನೊಂದಿಗೆ ಕುಮಾರ ವ್ಯಾಸನ ವಂಶಸ್ಥರುಗಳು ಬಾಳಿ ಬದುಕಿದ ಅವರ 'ಯಗಟಿ'ಯ ಮನೆಗೆ ಹೋದಾಗ ಅಲ್ಲಿ ಜನ ತುಂಬಿಕೊಂಡಿದ್ದರು. ಕುರುಬರು,ಒಕ್ಕಲಿಗರು,ಉಪ್ಪಾರರು,ಮುಸಲ್ಮಾನರುಗಳೆ ಮನೆಯೊಳಗಿದ್ದರು..ರಸ್ತೆಗಳು ಜನರಿಂದ ಗಿಜಿಗುಡ ಹತ್ತಿದವು.ಗಲ್ಲಿ ಗಲ್ಲಿಗಳು ಒಂತರಾ ಸಂಭ್ರಮದಲ್ಲಿ ಮೆರೆದಾಡುತ್ತಿದ್ದವು. ಎರಡು ದಿನದ ಹಿಂದಷ್ಟೇ ಪಕ್ಷೇತರರಾಗಿ ಸ್ಪರ್ಧಿಸಲಿ ಎಂದು ದತ್ತಾರವರಿಗೆ ಒತ್ತಾಯ ಹೇರಿದವರೆಲ್ಲ 'ಯಗಟಿ'ಯಲ್ಲಿ  ದಿನವೂ ಸೇರುತ್ತಿದ್ದರು..ಎರಡು ದಿನಗಳ ಹಿಂದೆ ತಮ್ಮದೇ ಖರ್ಚಿನಲ್ಲಿ ಕಡೂರಿನಲ್ಲಿ ಸೇರಿದ್ದ ಅಷ್ಟೂ ಜನರು ಚುನಾವಣೆಗೆ ಎಲ್ಲ ತ್ಯಾಗಕ್ಕೂ ಸಿದ್ದರಾಗಿದ್ದಂತವರು. ಕಾಲಿಗೆ ಚಪ್ಪಲಿ ಇಲ್ಲದವರು,ರಾಗಿ 'ಜೋಳ, ಅಡಿಕೆ ಮಾರಿದವರು, ವೃದ್ದಾಪ್ಯ ವೇತನದ ಹಣವನ್ನು ಉಳಿಸಿ ಕೊಂಡವರು,ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘದಲ್ಲಿ ಹಣ ಉಳಿಸಿಕೊಂಡವರೆಲ್ಲ ಹಾಸಿದ್ದ ಟವೆಲ್ಲು ಟವೆಲ್ಲುಗಳನ್ನೆ ಭರ್ತಿ ಮಾಡಿದ್ದವರೆಲ್ಲ ಮತ್ತೆ ನಿನ್ನೆ 'ದತ್ತಾರವರ ಹುಟ್ಟೂರು' ಯಗಟಿ'ಯಲ್ಲಿ ಕ್ಷಿಪ್ರ ಕಾಲಗತಿಯಲ್ಲಿ ಕರೆದಿದ್ದ ಸಭೆಗೂ ಬರುತಲಿದ್ದರು.

ದತ್ತಾರವರು ಪಕ್ಷೇತರರಾಗಿ ಸ್ಪರ್ಧಿಸಲಿ ಎಂಬ ಒಕ್ಕೊರಲೊತ್ತಾಯ ಅಲ್ಲಿತ್ತಾದರೂ ಮತ್ತೇನೋ ಹೊಸ ವಿಚಾರವೊಂದು ಹೊರ ಬೀಳಲಿದೆ ಎಂಬುದಕ್ಕೆ ಕಾತುರರಾಗಿದ್ದರು.ಒಂದೆಡೆ ಇವರ ಅಭಿಮಾನಿಗಳು ತಯಾರಿಸುತ್ತಿದ್ದ ನೀರು ಮಜ್ಜಿಗೆ ಚೆರಿಗೆಯಿಂದ ಕಡಾಯಕ್ಕೂ, ಕಡಾಯದಿಂದ ಚರಿಗೆಗೂ ನೊರೆ ನೊರೆಯಾಗಿ ಬೀಳುತ್ತಿತ್ತು.ದೊಡ್ಡ ತಂಬಾಳೆಯೊಂದರಲ್ಲಿ ಬೇಯುತ್ತಿದ್ದ ರೈಸ್ ಬಾತು ಮೋಹ ಗೊಳಿಸುವ ಸುವಾಸನೆಯೊಂದನ್ನು ಹೊರಗೆಡವುತ್ತಿತ್ತು. ಹಸಿವೆ ಹೊಟ್ಟೆಯ ಬುಡದಿಂದ ಎದ್ದೆದ್ದು ಬರುವಂತಾಗುತ್ತಿತ್ತು.ಸೇರಿದ್ದ ಜನರ ಬೆವರ ಹನಿಗಳು ಮುಖದಿಂದ ಕೆಳಗೆ ಬೀಳುತ್ತಿದ್ದವು.ಬಹುತೇಕರ ಹೆಗಲ ಮೇಲಿನ ನೀಳ ಟವೆಲ್ಲುಗಳು ಪದೇ ಪದೆ ಮುಖ ಒರೆಸಿಕೊಳ್ಳತ್ತಿದ್ದವು.

ಜನಾಭಿಪ್ರಾಯ ಪಡೆವ ಸಭೆಯಲ್ಲಿ ಹತ್ತು ಸಾವಿರ ಜನ ಸೇರಿ ಕೊಂಡು ಚುನಾವಣೆಯ ಖರ್ಚನ್ನು ಭರಿಸಲು ನಾಮುಂದು ತಾಮುಂದೆಂದು ಕಳೆದೆರಡು ದಿನಗಳ ಹಿಂದೆ ನಡೆದಿದ್ದ ಸಭೆಗೆ ಬಂದಿದ್ದವರೆ ನಿನ್ನೆಯ ಸಭೆಗೂ ಬಂದಿದ್ದರು.ನಿನ್ನೆಯ ಸಭೆ ಗ್ರಾಮ ಭಾರತದ ಭರವಸೆಯಾಗಿ ದತ್ತರವರತ್ತ ನೋಡುತ್ತಿದೆ ಎಂಬ ಭಾವನೆ ಹೊರ ಹಾಕುತ್ತಿತ್ತು.ಕಾಂಗ್ರೆಸ್ಸಿನಿಂದ ಟಿಕೆಟ್ ದೊರೆಯದಾದಾಗ ಆ ಎರಡು ದಿನ ಕೈಕಟ್ಟಿ ಕೂತು ಆಗಸ ನೋಡುತ್ತಾ ನೋಡುತ್ತಾ ಒಂಟಿತನಕ್ಕೆ ಹೋಗಿದ್ದ ದತ್ತಾ ಎಂಬ ಎರಡಕ್ಷರ ಹೀಗೆ ಒಡನಾಟಗಳಿಂದ ತಪ್ಪಿಸಿಕೊಂಡು ಹೋಗುತ್ತಿರುವುದನ್ನು ನೋಡಿ ಸಹಿಸಿಕೊಳ್ಳಲಾಗದೆ ಕಡೂರಿನ ಜನತೆ 'ಯಗಟಿ'ಯ ದತ್ತರವರ ಮನೆಗೆ ಓಡೋಡಿ ಬಂತಂತೆ.ತಮ್ಮ ಮನೆಗೆ ಬರುತ್ತಿದ್ದ ಜನರ ಸಾಲು ನೋಡಿ ದತ್ತ ತಮ್ಮ ಒಂಟಿತನವೆಂಬುದು ಫಲಾಯನವಾಗಬಾರದೆಂದು ಪಕ್ಷೇತರರಾಗಿಯೇ ಸ್ಪರ್ಧಿಸುವ ತೀರ್ಮಾನವನ್ನೂ ಕೈಗೊಳ್ಳಬೇಕಾಯಿತಂತೆ.

ಆದರೆ ಯಾವಾಗ ಮಾಮೂಲಿಯಂತೆ(ಪಕ್ಷ ತೊರೆದ ಮೇಲೂ) ಗೌಡರ ಆರೋಗ್ಯ ವಿಚಾರಿಸಿಕೊಂಡು ಬರಲು ಹಾಗೂ ಪಕ್ಷೇತರನಾಗಿ ಸ್ಪರ್ಧಿಸುತ್ತಿರುವ ತನಗೆ ಆಶೀರ್ವಾವಾದ ಪಡೆಯಲು ಗೌಡರ ಮನೆಗೆ ದತ್ತಾರವರು ಹೋದರೋ ಆ ಕ್ಷಣದಿಂದ ದತ್ತರವರ ಕೈಗಳು ಕಟ್ಟಿ ಹಾಕಲ್ಪಡುತ್ತವೆ.ಗೌಡರ ಮನೆಯಿಂದ ಕಡೂರಿಗೆ ವಾಪಾಸು ಬರುತ್ತಲೇ ದತ್ತಾರವರ ನಿರ್ಧಾರ ಬದಲಾಗುತ್ತಾ ಹೋಗುತ್ತದೆ.'ನಿನ್ನ ಮನೆಗೆ ರೇವಣ್ಣ ಮತ್ತು ಪ್ರಜ್ವಲ ರೇವಣ್ಣ ಇಬ್ಬರನ್ನೂ ಕಳುಹಿಸುತ್ತೇನೆ 'ಎನ್ನುತ್ತಾರೆ ಗೌಡರು.ಅಂತೆಯೇ ನಿನ್ನೆಯ ಮಧ್ಯಾಹ್ನದ ಸಭೆಗೆ ರೇವಣ್ಣ ಮತ್ತು ಪ್ರಜ್ವಲ್ ಇಬ್ಬರೂ ಬರುತ್ತಾರೆ.ಒಂದೊಂದಾಗಿ ಕ್ಷೇತ್ರದ ಜನರ ಅಭಿಪ್ರಾಯಗಳು ಹೊರಬರುತ್ತಿದ್ದಂತೆಯೆ ಜನರ ಬರುವಿಕೆ ಹೆಚ್ಚಾಗುತ್ತಲೆ ಹೋಯಿತು.ಜನಾಭಿಪ್ರಾಯವೆಂಬುದು ಜನತಾ ದಳದ ಅಭ್ಯರ್ಥಿಯಾಗಿ ಸ್ಪರ್ಧಿಸಲಿ ಎಂಬುದಕ್ಕೆ ಪೂರಕವಾಗಿತ್ತು.ದೇವೇಗೌಡರ ಮನೆಯಲ್ಲಿ ನಡೆದಿದ್ದ ಅಷ್ಡೂ ವಿಚಾರಗಳನ್ನು ಸಭೆ ಆರಂಭವಾಗುವುದಕ್ಕೆ ಮುಂಚೆಯೇ ನಮಗೆ ದತ್ತ ಹೇಳಿದ್ದರು.ಆ ಸರಳ ಮಂಚದ ಮೇಲೆ ಕೂರಿಸಿಕೊಂಡು ನಮ್ಮೊಂದಿಗೆ ಹಂಚಿಕೊಂಡ ಮನದಾಳದ ಮಾತುಗಳು ಇನ್ನೂ ಗುಂಯ್ಗುಡುತ್ತಲೇ ಇವೆ.

ಡಯಾಲಿಸೀಸ್ ನಲ್ಲಿರುವ ದೇವೇಗೌಡರು ದತ್ತರವರು ನಾಮ ಪತ್ರ ಸಲ್ಲಿಸುವ ದಿನ ಕಡೂರಿನಲ್ಲಿರುತ್ತಾರೆ.ಇಬ್ಬರೂ ಜೊತೆಯಾಗಿ ನಾಮ ಪತ್ರ ಸಲ್ಲಿಸುವ ಆ ಕ್ಷಣ ನಾಳೆಯೋ ನಾಡಿದ್ದೋ ಇರಬಹುದು.

ದತ್ತಾ ತರಹದವರು ಜೆಡಿಎಸ್ ಮುಖಾಂತರವೋ ಕಾಂಗ್ರೆಸ್ ಮುಖಾಂತರವೋ ಅಥವಾ ಪಕ್ಷೇತರರಾಗಿಯೋ ಒಟ್ಟಿನಲ್ಲಿ ವಿಧಾನ ಸಭೆಯಲ್ಲಿರಬೇಕು.ಆಗ ಮಾತ್ರ ಸದನಕ್ಕೊಂದು ಶೋಭೆ.