ಶೋಷಿತ ಸಮುದಾಯದ ಏಳಿಗೆಗಾಗಿ ಬೆಳಗಿದ ಸೂರ್ಯ

kanshiram

ಶೋಷಿತ ಸಮುದಾಯದ ಏಳಿಗೆಗಾಗಿ ಬೆಳಗಿದ ಸೂರ್ಯ

 

ತಾಯಿಗೆ 24 ಪುಟಗಳ ಸುದೀರ್ಘ ಪತ್ರ ಬರೆದ ಕಾನ್ಶಿರಾಂರವರು ಆ ಪತ್ರದಲ್ಲಿ ತಾನು ಮದುವೆ ಮಾಡಿಕೊಳ್ಳುವುದಿಲ್ಲ. ಕುಟುಂಬದವರೊಂದಿಗೆ ಯಾವುದೇ ಸಂಬಂಧ ಇಟ್ಟುಕೊಳ್ಳುವುದಿಲ್ಲ. ವೈಯಕ್ತಿಕವಾಗಿ ಯಾವುದೇ ಆಸ್ತಿ ಸಂಪಾದನೆ ಮಾಡುವುದಿಲ್ಲ. ನನ್ನ ಮುಂದಿನ ಬದುಕು ಶೋಷಿತ ಸಮುದಾಯದ ಏಳಿಗೆಗಾಗಿ ಸಂಪೂರ್ಣ ಮೀಸಲು ಎಂದು ದೃಢವಾಗಿ ತಿಳಿಸುತ್ತಾರೆ. ತನ್ಮೂಲಕ ಒಂದು ಮಹಾನ್ ತ್ಯಾಗಕ್ಕೆ ತಮ್ಮನ್ನೇ ತಾವು ಒಡ್ಡಿಕೊಳ್ಳುತ್ತಾರೆ. ಸಂಶಯ ಬೇಡ, ಕಾನ್ಶಿರಾಂ ನುಡಿದಂತೆ ನಡೆದರು. ಹಾಗೆಯೇ ಬದುಕಿದರು ಕೂಡ.

 

 

ಮಹೇಶ್ ಸರಗೂರು

 

 

“ನಮಗೊಂದು ಶಕ್ತಿಯಿದೆ. ಅದು ರಾಜಕೀಯ ಶಕ್ತಿ. ಆ ಶಕ್ತಿಯನ್ನು ನಾವು ಗೆಲ್ಲಲೇಬೇಕು. ಆ ಶಕ್ತಿಯನ್ನು ನಾವು ಹೆಗಲಿಗೇರಿಸಿಕೊಂಡರೆ ನಮ್ಮ ಜನರ ಹಿತವನ್ನು ನಾವು ಸುಲಭವಾಗಿ ಕಾಪಾಡಬಹುದು”,

 “ನಿಮ್ಮ ಬಳಿ ಓಟಿದೆ. ನೀವು ಒಗ್ಗಟ್ಟಾದರೆ ನಿಮ್ಮ ಹಿತವನ್ನು ಕಾಯುವ ಪ್ರತಿನಿಧಿಯನ್ನು ಲೋಕಸಭೆ ಹಾಗೂ ವಿಧಾನಸಭೆಗಳಿಗೆ ನೀವು ಕಳುಹಿಸಬಹುದು. ತಪ್ಪಿದರೆ ನೀವು ನಾಶವಾಗುತ್ತೀರಿ”.

ಶೋಷಿತರಿಗೆ ರಾಜಕೀಯ ಅಧಿಕಾರದ ಬಗೆಗಿನ ಮಹತ್ವದ ಕುರಿತು ಹೇಳುವ ಬಾಬಾಸಾಹೇಬರ ಶ್ರೇಷ್ಠ ಮಾತುಗಳಿವು. ಬರೀ ಮಾತಾಡಿದ್ದಷ್ಟೆ ಅಲ್ಲ 1936ರಲ್ಲಿ ಸ್ವತಂತ್ರ ಕಾರ್ಮಿಕ ಪಕ್ಷ ಸ್ಥಾಪಿಸಿ 1937ರಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸಿ 15 ಸ್ಥಾನಗಳನ್ನು ಗೆಲ್ಲುವ ಮೂಲಕ, ಸ್ವಾತಂತ್ರಾನಂತರ 1952ರ ಪ್ರಥಮ ಚುನಾವಣೆಗಳಲ್ಲಿ ಪರಿಶಿಷ್ಟ ಜಾತಿಗಳ ಒಕ್ಕೂಟ ಎಂಬ ಪಕ್ಷದ ಅಡಿಯಲ್ಲಿ ಸ್ಪರ್ಧಿಸುವ ಮೂಲಕ ಅಂಬೇಡ್ಕರರು ತಮ್ಮ ಆ ರಾಜಕೀಯ ಕನಸನ್ನು ನನಸಾಗಿಸಿಕೊಳ್ಳಲು ಯತ್ನಿಸಿದ್ದಾರೆ. ಹಾಗೆಯೇ ನಿಧನ ಸಮಯದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಎಂಬ ಹೊಸ ಪಕ್ಷವನ್ನು ಸ್ಥಾಪಿಸುವ ಯೋಜನೆಯನ್ನು ಕೂಡ ಅಂಬೇಡ್ಕರರು ಹಾಕಿದ್ದರು.

ಒಟ್ಟಾರೆ ತಮ್ಮ ಜೀವಿತದ ಅವಧಿಯಲ್ಲಿ ಅಂಬೇಡ್ಕರರು ಶೋಷಿತರಿಗೆ ತಾವು ಇಚ್ಛಿಸಿದಂತಹ ರಾಜಕೀಯ ಯಶಸ್ಸು ದೊರಕುವಂತಾಗಲು ಭದ್ರಬುನಾದಿ ಹಾಕಿದ್ದಾರೆ. ಅಂದಹಾಗೆ ಅಂತಹ ಭದ್ರ ಬುನಾದಿಯ ಮೇಲೆ ದಲಿತರನ್ನು ಆಳಿಸಿಕೊಳ್ಳುವ ವರ್ಗದಿಂದ ಆಳುವ ವರ್ಗಕ್ಕೆ, ಓಟು ಹಾಕುವ ಸಾಮಾನ್ಯ ಮತದಾರನ ಸ್ಥಿತಿಯಿಂದ ಓಟು ಹಾಕಿಸುವ ರಾಷ್ಟ್ರೀಯ ಪಕ್ಷವೊಂದರ ಮುಖಂಡತ್ವಕ್ಕೆ ಹೊಯ್ದದ್ದು ಬೇರಾರು ಅಲ್ಲ. ಕಾನ್ಶಿರಾಂ. ಪ್ರೀತಿಯಿಂದ ಹೇಳುವುದಾದರೆ ದಾದಾ ಸಾಹೇಬ್ ಕಾನ್ಶಿರಾಂ.

ಕಾನ್ಶಿರಾಂರವರು ಹುಟ್ಟಿದ್ದು ಪಂಜಾಬ್‌ನ ರೋಪರ್ ಜಿಲ್ಲೆಯ ಖಾವಸ್ಪುರ ಎಂಬ ಹಳ್ಳಿಯಲ್ಲಿ. ತಂದೆ ಶ್ರೀಹರಿಸಿಂಗ್ ತಾಯಿ ಬಿಷನ್ಕೌರ್ ಅಸ್ಪೃಶ್ಯ ಜಾತಿಯಿಂದ ಮತಾಂತರಗೊಂಡು ಸಿಖ್ ಧರ್ಮಕ್ಕೆ ಸೇರಿದ್ದ ಕಾನ್ಶಿರಾಂರವರು ತಮ್ಮ ಊರಿನಲ್ಲಿ ಅಸ್ಪಶ್ಯತೆಯ ನೋವುಂಡವರೇನಲ್ಲ. ಸಂದೇಶವೊಂದರಲ್ಲಿ ಅವರೇ ಹೇಳಿರುವ ಹಾಗೇ “ಸಿಖ್ ಗುರುಗಳ ಬೋಧನೆ ಸಮಾನತೆಯನ್ನು ಸಾರುವಂತಹದ್ದು. ಆ ಕಾರಣಕ್ಕೆ ಸಿಖ್ ಧರ್ಮಕ್ಕೆ ಮತಾಂತರಗೊಂಡ ಅಸ್ಪೃಶ್ಯರು ಉನ್ನತ ಸ್ಥಾನಕ್ಕೆ ಏರುತ್ತಲೇ ಇದ್ದಾರೆ”. ಅಂದಹಾಗೆ ಅಂತಹ ಉನ್ನತ ಸ್ಥಾನ ಎಂದರೆ ಸಮಾನತೆ!

ಇಂತಹ ಸಮಾನತೆಯ ವಾತಾವರಣದಲ್ಲಿ ಹುಟ್ಟಿದ ಕಾನ್ಶಿರಾಂರವರಿಗೆ ಅಸ್ಪಶ್ಯತೆ ವಿರುದ್ಧ ಹೋರಾಟ ಮಾಡುವ ಅಗತ್ಯ ಖಂಡಿತ ಇರಲಿಲ್ಲ. ಹಾಗೆಯೇ ರಾಷ್ಟ್ರ ರಾಜಕಾರಣದಲ್ಲಿ ಹೊಸ ಛಾಪು ಬೀರುವ ಅಗತ್ಯವೂ ಇರಲಿಲ್ಲ. ಆದರೆ ಸೃಷ್ಟಿಯ ನಿಯಮ ಬೇರೆಯದೆ ಆಗಿತ್ತು. ಅದೆಂದರೆ ವಿದ್ಯಾಭ್ಯಾಸದಲ್ಲಿ ಬಿಎಸ್ಸಿ ಪದವಿ ಪಡೆದು ರಕ್ಷಣಾ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿದ ಅವರು ಸೀದಾ ವರದಿ ಮಾಡಿ ಕೊಂಡಿದ್ದು ಮಹಾರಾಷ್ಟ್ರದ ಪೂನಾ ನಗರದ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ( ಡಿಆರ್ ಡಿ ಓ) ಯಲ್ಲಿ!

ಒಂದರ್ಥದಲ್ಲಿ ದೂರದ ಪಂಜಾಬಿನ ಕಾನ್ಶಿರಾಂರನ್ನು ಮಹಾರಾಷ್ಟ್ರದ ಅಂಬೇಡ್ಕರ್ ತಮ್ಮತ್ತ ಸೆಳೆದಿದ್ದರು! ಸೆಳೆದು ಡಿ.ಕೆ.ಕಾಪರ್ಡೆ ಎಂಬ ತಮ್ಮ ಅನುಯಾಯಿಯೋರ್ವರನ್ನು ಕಾನ್ಶಿರಾಂರಿಗೆ ಪರಿಚಯ ಮಾಡಿಕೊಟ್ಟಿದ್ದರು! ಖಂಡಿತ ಕಾಪರ್ಡೆ ನೀಡಿದ ಅಂಬೇಡ್ಕರರ ಜಾತಿ ವಿನಾಶ( ಅನ್ ಹಿಲೇಶನ್ ಆಫ್ ಕ್ಯಾಸ್ಟ್ )  ಕೃತಿಯನ್ನು ಒಂದೇ ರಾತ್ರಿ ನಿದ್ರಿಸದೆ ಮೂರು ಬಾರಿ ಓದಿದ ಕಾನ್ಶಿರಾಂರವರು ಅಂಬೇಡ್ಕರರನ್ನು ಮತ್ತವರ ಚಿಂತನೆಯನ್ನು ತಮ್ಮ ತಲೆಗೆ ತುಂಬಿಕೊಂಡರು.

ಅಲ್ಲದೆ ಅಂಬೇಡ್ಕರರ ಮತ್ತೊಂದು ಕೃತಿ’ ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗೆ ಏನು ಮಾಡಿದ್ದಾರೆ?'

ಓದಿದ ಕಾನ್ಶಿರಾಂ ರವರು ದಲಿತರ ರಾಜಕಾರಣದ ದಿಕ್ಕು ಏನಾಗಿರಬೇಕು? ಅವರು ಎತ್ತ ಚಲಿಸಬೇಕು? ಏನು ಮಾಡಬೇಕು? ಇತ್ಯಾದಿ ಪ್ರಶ್ನೆಗಳನ್ನು ತಮಗೆ ತಾವೇ ಹಾಕಿಕೊಳ್ಳುತ್ತಾ ಒಂದು ಮಹಾನ್ ಕಾರ್ಯಕ್ಕೆ ತಮ್ಮನ್ನು ತಾವು ಅಣಿಗೊಳಿಸಿಕೊಂಡರು. ಹಾಗೇ ಅಣಿಗೊಳ್ಳಿಸಿಕೊಳ್ಳುತ್ತಾ ತಮ್ಮ ತಾಯಿಗೆ 24 ಪುಟಗಳ ಸುದೀರ್ಘ ಪತ್ರ ಬರೆದ ಕಾನ್ಶಿರಾಂರವರು ಆ ಪತ್ರದಲ್ಲಿ ತಾನು ಮದುವೆ ಮಾಡಿಕೊಳ್ಳುವುದಿಲ್ಲ. ಕುಟುಂಬದವರೊಂದಿಗೆ ಯಾವುದೇ ಸಂಬಂಧ ಇಟ್ಟುಕೊಳ್ಳುವುದಿಲ್ಲ. ವೈಯಕ್ತಿಕವಾಗಿ ಯಾವುದೇ ಆಸ್ತಿ ಸಂಪಾದನೆ ಮಾಡುವುದಿಲ್ಲ. ನನ್ನ ಮುಂದಿನ ಬದುಕು ಶೋಷಿತ ಸಮುದಾಯದ ಏಳಿಗೆಗಾಗಿ ಸಂಪೂರ್ಣ ಮೀಸಲು ಎಂದು ದೃಢವಾಗಿ ತಿಳಿಸುತ್ತಾರೆ. ತನ್ಮೂಲಕ ಒಂದು ಮಹಾನ್ ತ್ಯಾಗಕ್ಕೆ ತಮ್ಮನ್ನೇ ತಾವು ಒಡ್ಡಿಕೊಳ್ಳುತ್ತಾರೆ. ಸಂಶಯ ಬೇಡ, ಕಾನ್ಶಿರಾಂ ನುಡಿದಂತೆ ನಡೆದರು. ಹಾಗೆಯೇ ಬದುಕಿದರು ಕೂಡ.

ಈ ನಿಟ್ಟಿನಲ್ಲಿ ಅಂದರೆ ಶೋಷಿತರನ್ನು ವಿಮೋಚನೆಗೊಳಿಸುವ ನಿಟ್ಟಿನಲ್ಲಿ ಪ್ರಪ್ರಥಮವಾಗಿ ವಿದ್ಯಾವಂತ ನೌಕರರ ಸಂಘಟನೆ ಮಾಡಿದ ಕಾನ್ಶಿರಾಂರವರು 1973ರಲ್ಲಿ  ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನೌಕರರ ಒಕ್ಕೂಟ BAMCEF  ಸ್ಥಾಪಿಸುತ್ತಾರೆ.

ತನ್ಮೂಲಕ ‘ಸಮಾಜಕ್ಕೆ ಮರಳಿಕೊಡು' ಸಿದ್ಧಾಂತ ಜಾರಿಗೊಳಿಸುತ್ತಾರೆ. ಅದೇನೆಂದರೆ ‘ಮೀಸಲಾತಿಯಡಿ ಸವಲತ್ತನ್ನು ಪಡೆದ ವ್ಯಕ್ತಿಯೊಬ್ಬ ತನ್ನ ಸಮುದಾಯದ ಏಳಿಗೆಗಾಗಿ ತಾನು ಗಳಿಸಿದ್ದರಲ್ಲಿ ಸ್ವಲ್ಪಭಾಗ ವಾಪಸ್ ಕೊಡುವುದು ಎಂದರ್ಥ’. ಖಂಡಿತ ಕಾನ್ಶಿರಾಂರ ಈ ಫಾರ್ಮುಲಾ ಕೆಲಸ ಮಾಡಿತು. ಈ ದಿಸೆಯಲ್ಲಿ 1978ರ ವೇಳೆಗೆ ಕಾನ್ಶಿರಾಂರವರು ಇಡೀ ದೇಶಾದ್ಯಂತ BAMCEFನ ಅಡಿಯಲ್ಲಿ 17ಲಕ್ಷ ನೌಕರರನ್ನು ಸಂಘಟಿಸಿದ್ದರೆಂದರೆ ಅವರ ಸಂಘಟನಾ ಸಾಮರ್ಥ್ಯವನ್ನು ಯಾರಾದರೂ ಊಹಿಸಬಹುದು. BAMCEFನ ಯಶಸ್ಸಿನಿಂದ ಪ್ರೇರಣೆಗೊಂಡ ಕಾನ್ಶಿರಾಂ ಜನಸಮಾನ್ಯರನ್ನು ಇಂತಹ ಹೋರಾಟದ ತೆಕ್ಕೆಯಲ್ಲಿ ಒಳಗೊಳ್ಳುವ ನಿಟ್ಟಿನಿಂದ ಡಿಎಸ್ 4 (ದಲಿತ ಶೋಷಿತ ಸಂಘರ್ಷ ಸಮಿತಿ) ಹುಟ್ಟುಹಾಕಿದರು.

ಅಂದಹಾಗೆ ಬಹುಜನರು ಯಾರು? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇದಕ್ಕೆ ಕಾನ್ಶಿರಾಂ ಕೊಟ್ಟ ಉತ್ತರ ‘ಠಾಕೂರ್, ಬ್ರಾಹ್ಮಣ್, ಬನಿಯಾ ಚೋಡ್, ಬಾಕಿ ಸಬ್ ಹೈ ಡಿಎಸ್ 4 ಎಂಬುದಾಗಿತ್ತು. ಒಂದಂತು ನಿಜ, ಡಿಎಸ್ 4 ಮೂಲಕ ಕಾನ್ಶಿರಾಂ ಚುನಾವಣಾ ರಾಜಕಾರಣಕ್ಕೆ ಅದ್ಭುತ ಎಂಟ್ರಿ ಕೊಟ್ಟರು. ಯಾಕೆಂದರೆ 1982ರಲ್ಲಿ ಡಿಎಸ್ 4  ವತಿಯಿಂದ ಹರ್ಯಾಣ ಅಸೆಂಬ್ಲಿ ಚುನಾವಣೆಯಲ್ಲಿ 46 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಕಾನ್ಶಿರಾಂ, 1983ರ ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ ಹಲವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ತನ್ನ ಗುರಿ ಯಾವುದೆಂದು ಸಂದೇಶ ರವಾನಿಸಿದರು. ಕಾನ್ಶಿರಾಂ ಗುರಿ ಶೋಷಿತರಿಗೆ ರಾಜ್ಯಾಧಿಕಾರ ದೊರಕಿಸಿಕೊಡುವುದಾಗಿತ್ತು.

1984ರ ಏಪ್ರಿಲ್ 14 ಅಂಬೇಡ್ಕರ್ ಜಯಂತಿಯಂದು ಬಿಎಸ್ಪಿ (ಬಹುಜನ ಸಮಾಜ ಪಕ್ಷ) ಸ್ಥಾಪಿಸಿದ ಕಾನ್ಶಿರಾಂ “ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸಮಾಜದ ಶೇ.85ರಷ್ಟಿದ್ದಾರೆ. ಇವರು ಬಹುಜನರು. ಉಳಿದ ಶೇ.15ರಷ್ಟು ಮೇಲ್ಜಾತಿಗಳು ಮನುವಾದಿಗಳು.ಇವರು ಎಂದಿಗೂ ಬಹುಜನರ ಉದ್ಧಾರ ಮಾಡುವುದು ಸಾಧ್ಯವಿಲ್ಲ” ಎಂದು ತಮ್ಮ ರಾಜಕೀಯ ಸಿದ್ಧಾಂತ ತೇಲಿಬಿಟ್ಟರು. ಈ ನಿಟ್ಟಿನಲ್ಲಿ ಬಿಎಸ್ಪಿಯ ಯಶೋಗಾಥೆ ಎಲ್ಲರಿಗೂ ತಿಳಿದದ್ದೆ. 1984ರ ಲೋಕಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದ ಚಂಬಲ್ ಕ್ಷೇತ್ರದಿಂದ ಕಣಕ್ಕಿಳಿದ ಕಾನ್ಶಿರಾಂ ಮುಂದೆ ಹಿಂದಿರುಗಿ ನೋಡಲೇ ಇಲ್ಲ.ತಮ್ಮ ಪಕ್ಷದ ಮೂಲಕ ಒಂದಾದ ಮೇಲೊಂದರಂತೆ ಚುನಾವಣಾ ಯಶಸ್ಸು ಪಡೆದ ಅವರು ಬಹುಜನ ಸಮಾಜ ಪಕ್ಷವನ್ನು ಈ ದೇಶದ ಮೂರನೇ ಅತಿ ದೊಡ್ಡ ಪಕ್ಷವನ್ನಾಗಿ ಮಾಡಿದರು. ಮಾಯಾವತಿಯವರನ್ನು ದೇಶದ ಬೃಹತ್ ರಾಜ್ಯವಾದ ಉತ್ತರಪ್ರದೇಶದಲ್ಲಿ ಒಂದಲ್ಲ, ಎರಡಲ್ಲ 3 ಬಾರಿ ಮುಖ್ಯಮಂತ್ರಿ ಮಾಡಿದರು. 1995 ಮಾಯಾವತಿಯವರು ಬಿಜೆಪಿಯ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದಾಗ ಮಾಧ್ಯಮಗಳು ಅದನ್ನು ‘ಪ್ರಜಾಪ್ರಭುತ್ವದ ಅದ್ಭುತ’ ಎಂದು ಬಣ್ಣಿಸಿದ್ದವು. ಖಂಡಿತ ಅಂತಹ ಅದ್ಭುತದ ಹಿಂದೆ ಕಾನ್ಶಿರಾಂ, ಎಂಬ ಮಾಂತ್ರಿಕನ ಕೈವಾಡವಿತ್ತು.

ಸ್ವತಃ 1992ರಲ್ಲಿ ಉತ್ತರಪ್ರದೇಶದಲ್ಲಿ ಇಟವಾ ಲೋಕಸಭಾ ಸಾಮಾನ್ಯ ಕ್ಷೇತ್ರದಿಂದ 19,000 ಮತಗಳಿಂದ ಚುನಾವಣೆ ಜಯಿಸಿದ ಕಾನ್ಶಿರಾಂ ದಲಿತರು ಬರೀ ಮೀಸಲು ಕ್ಷೇತ್ರಗಳಿಂದಷ್ಟೆ ಗೆಲ್ಲುತ್ತಾರೆ, ಅಲ್ಲಿ ಸ್ಪರ್ಧಿಸಲಷ್ಟೆ ಅರ್ಹರು ಎಂಬ ಮಿಥ್ ಅನ್ನು ಚಿತ್ ಮಾಡಿದರು. 1997 ಮತ್ತು 2002ರಲ್ಲಿ ಮತ್ತದೇ ಬಿಜೆಪಿಯ ಬೆಂಬಲದಿಂದಲೇ ಮಾಯಾವತಿಯವರನ್ನು ಅಧಿಕಾರಕ್ಕೆ ತಂದ ಕಾನ್ಶಿರಾಂ ಹಂತಹಂತದಲ್ಲಿ ತಮ್ಮ ಚಾಕಚಕ್ಯತೆ ತೋರುತ್ತಾ ಹೋದರು.

ಒಂದು ಕಾಲದಲ್ಲಿ ದಲಿತರು ಎಂದರೆ ಬರೀ ಬೇರೆ ಪಕ್ಷಗಳಲ್ಲಿ ಗುಲಾಮಗಿರಿ ಮಾಡಲಷ್ಟೆ ಆಯ್ಕೆಯಾಗುತ್ತಾರೆ ಎಂಬ ನೀತಿ ಚಾಲ್ತಿಯಲ್ಲಿತ್ತು. ಆದರೆ ಕಾನ್ಶಿರಾಂ ಅಂತಹ ನೀತಿಯನ್ನು ‘ಚಮಚಾಗಿರಿ’ ಎಂದು ಜರೆದು ಅದರ ನಿರ್ಮೂಲನೆಗಾಗಿ ‘ಚಮಚಾಯುಗ’ ಎಂಬ ಪುಸ್ತಕ ಬರೆದು ಈ ದೇಶದ ಶೋಷಿತರ ಕಣ್ತೆರೆಸಿದರು. ‘ಚಮಚಾ ಎಂಬುದು ಒಂದು ಸಾಧನ. ಅದು ದಲಿತರ ನಿಜವಾದ ಹೋರಾಟಗಾರನನ್ನು ಹತ್ತಿಕ್ಕಲು ದಲಿತರಲ್ಲೇ ಮತ್ತೊಬ್ಬ ಏಜೆಂಟನನ್ನು  ಸೃಷ್ಟಿಸುವ ಮೇಲ್ಜಾತಿ ಪಕ್ಷಗಳ ಆಟ’ ಎಂದು ತಮ್ಮ ಚಮಚಾಗಿರಿ ಪದಕ್ಕೆ ವಿವರಣೆ ಕೊಟ್ಟರು.

ಈ ವಿವರಣೆ ದೇಶದಾದ್ಯಂತ ಕೆಲಸ ಮಾಡಿದೆ. ಅದು ಇಂದು ಶೋಷಿತರಲ್ಲಿ ಸ್ವಲ್ಪಮಟ್ಟಿಗಾದರೂ ರಾಜಕೀಯ ಸ್ವಾಭಿಮಾನವನ್ನು ಸೃಷ್ಟಿಸಿದೆ. ಯಾಕೆಂದರೆ ಒಂದು ಕಾಲದಲ್ಲಿ ಶೋಷಿತರ ಮತ ಬರೀ ಖರೀದಿಗಾಗಿ ಎಂಬಂತಹ ಪರಿಸ್ಥಿತಿ ಇತ್ತು. ಆದರೆ ಶೋಷಿತರೂ ತಮ್ಮ ನೇತೃತ್ವದಲ್ಲಿ ಒಂದು ಪಾರ್ಟಿ ಕಟ್ಟಿಕೊಳ್ಳಬಹುದು, ಅದರ ಅಡಿಯಲ್ಲಿ ಚುನಾವಣೆಗಳಲ್ಲಿ ಗೆಲ್ಲಬಹುದು, ಗೆದ್ದು ಗದ್ದುಗೆ ಹಿಡಿಯಬಹುದು ಎಂದು ಪ್ರಾಯೋಗಿಕವಾಗಿ ತೋರಿಸಿಕೊಟ್ಟವರು ಡಿಆರ್ ಡಿಓದ  ವಿಜ್ಞಾನಿ ಕಾನ್ಶಿರಾಂ. ಇಂತಹ ರಾಜಕೀಯ ವಿಜ್ಞಾನಿ ಕಾನ್ಶಿರಾಂ ಜನಿಸಿದ್ದು 1934 ಮಾರ್ಚ್‌ 15ರಂದು ಅವರು ನಮ್ಮೊಂದಿಗೆ ಇದ್ದಿದ್ದರೆ  ಅವರು 89 ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದರು.

ಇಂತಹ ಅದ್ಭುತ ಚೇತನ ಶೋಷಿತ ಸಮುದಾಯದ ನಡುವೆ ಹುಟ್ಟಿತ್ತಲ್ಲ ಎಂಬುದೇ ಒಂದು ಸುಂದರ ಕನಸ್ಸಿನ ಮಾದರಿಯದ್ದು.