ಉಪ್ಪಾರಹಳ್ಳಿ ‘ಮಿನಿ ಅಂಡರ್‌ಪಾಸ್’ ದುರಸ್ತಿ ಕಾಮಗಾರಿ ಆರಂಭ, 15 ದಿನ ಸಂಚಾರಕ್ಕೆ ನಿರ್ಬಂಧ
railway-underpass-repair-smart-city-tumakuru
 
                                
ಉಪ್ಪಾರಹಳ್ಳಿ ‘ಮಿನಿ ಅಂಡರ್‌ಪಾಸ್’ ದುರಸ್ತಿ
ಕಾಮಗಾರಿ ಆರಂಭ, 15 ದಿನ ಸಂಚಾರಕ್ಕೆ ನಿರ್ಬಂಧ
ತುಮಕೂರು: ನಗರದ ಉಪ್ಪಾರಹಳ್ಳಿ ಮೇಲ್ಸೇತುವೆ ಕೆಳಭಾಗ ಇರುವ “ಮಿನಿ ಅಂಡರ್‌ಪಾಸ್”ನ್ನು ದುರಸ್ತಿಗೊಳಿಸುವ ಕಾಮಗಾರಿ ಆರಂಭಿಸಲಾಗಿದ್ದು, ಮುಂದಿನ ಸುಮಾರು 15 ದಿನಗಳ ಕಾಲ ಇಲ್ಲಿ ಜನ-ವಾಹನ ಸಂಚಾರ ಬಂದ್ ಆಗಲಿದೆ.
ತುಮಕೂರು ಸ್ಮಾರ್ಟ್ಸಿಟಿ ಕಂಪನಿ ವತಿಯಿಂದಲೇ ಈ  ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಉದ್ದಕ್ಕೂ ಕಾಂಕ್ರಿಟ್ ರಸ್ತೆಯನ್ನು ನಿರ್ಮಿಸಲಾಗುವುದು. ಬಳಿಕ ಕ್ಯೂರಿಂಗ್ ಮಾಡಲಿದ್ದು, ಈ ಹಿನ್ನೆಲೆಯಲ್ಲಿ ಜನ-ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿದೆ.
ಡಾ. ಎಸ್. ರಾಧಾಕೃಷ್ಣನ್ ರಸ್ತೆಯ ದಕ್ಷಿಣದ ಕೊನೆಯಲ್ಲಿ ರೈಲ್ವೆ ಹಳಿಗಳ ಕೆಳಭಾಗದಲ್ಲಿ “ಮಿನಿ ಅಂಡರ್‌ಪಾಸ್” ಇದೆ. ರಾಧಾಕೃಷ್ಣನ್ ರಸ್ತೆ ಕಡೆಯಿಂದ ಅಂಡರ್‌ಪಾಸ್ ಕಡೆಗೆ ಹೋಗುವಾಗ ಇರುವ ಕಾಂಕ್ರಿಟ್ ರಸ್ತೆ ಸಂಪೂರ್ಣವಾಗಿ ಕಿತ್ತುಹೋಗಿದೆ. ಅಲ್ಲದೆ ಅಂಡರ್ ಪಾಸ್ ಒಳಭಾಗದ ಕಾಂಕ್ರಿಟ್ ಸಹ ಸಂಪೂರ್ಣ ಕಿತ್ತುಬಂದಿದ್ದು, ಉದ್ದಕ್ಕೂ ಹಳ್ಳಗಳು ಉಂಟಾಗಿದೆ. ಜಲ್ಲಿ ಹಾಗೂ ಕಬ್ಬಿಣದ ಕಂಬಿಗಳು ಮೇಲೆ ಬಂದು ಸಂಚಾರಕ್ಕೆ ತೊಡಕಾಗಿದೆ. ಕಳೆದ ಕೆಲವು ತಿಂಗಳುಗಳಿಂದಲೂ ಈ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ತುಂಬ ತೊಂದರೆ ಅನುಭವಿಸುತ್ತಿದ್ದರು. ಮಳೆ ಬಂದಾಗಲAತೂ ಸಮಸ್ಯೆ ಉಲ್ಬಣಿಸುತ್ತಿತ್ತು.
ಈ ಸಮಸ್ಯೆ ಬಗ್ಗೆ ಸಾರ್ವಜನಿಕರು ದನಿಯೆತ್ತಿದ್ದರೂ, ಮಾಧ್ಯಮಗಳಲ್ಲಿ ಸುದ್ದಿ ಆಗಿದ್ದರೂ ಯಾರೊಬ್ಬರೂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇದೀಗ ಸ್ಮಾರ್ಟ್ಸಿಟಿ ಕಂಪನಿಯು ದುರಸ್ತಿ ಕಾರ್ಯವನ್ನು ಕೈಗೊಳ್ಳುತ್ತಿದ್ದು, ಈ ಭಾಗದ ಸಂಚಾರಿಗರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಕೈಬಿಟ್ಟ ಪಾಲಿಕೆ; ಕೈ ಹಿಡಿದ ಸ್ಮಾರ್ಟ್ಸಿಟಿ
“ಉಪ್ಪಾರಹಳ್ಳಿ ಮಿನಿ ಅಂಡರ್‌ಪಾಸ್ 2016 ರಲ್ಲಿ ನಿರ್ಮಾಣವಾಗಿತ್ತು. ಅಂದಿನಿಂದ ತುಂಬ ಉಪಯುಕ್ತವಾಗಿದೆ. ಆದರೆ ಕಳೆದ ಕೆಲವು ತಿಂಗಳುಗಳಿAದ ಇದರ ರಸ್ತೆ ಹಾಳಾಗಿ, ತೊಂದರೆ ಕಾಡುತ್ತಿದೆ. ಈ ಬಗ್ಗೆ ತುಮಕೂರು ಮಹಾನಗರ ಪಾಲಿಕೆಯ ಗಮನ ಸೆಳೆದಾಗ, ಹಣಕಾಸು ಇಲ್ಲವೆಂಬ ಸಬೂಬು ಕೇಳಿಬಂತು. ಆಗ ಸ್ಮಾರ್ಟ್ಸಿಟಿ ಕಂಪನಿಯ ಗಮನಕ್ಕೆ ತಂದಾಗ, ಕಂಪನಿಯು ಒಪ್ಪಿ ದುರಸ್ತಿ ಕಾರ್ಯ ಕೈಗೊಂಡಿದೆ” ಎಂದು ಈ ಅಂಡರ್‌ಪಾಸ್ ನಿರ್ಮಾಣಕ್ಕೆ ಪ್ರಮುಖವಾಗಿ ಹೋರಾಟ ನಡೆಸಿದ್ದ ಸಾಮಾಜಿಕ ಕಾರ್ಯಕರ್ತ ಇಮ್ರಾನ್ ಪಾಷ “ಬೆವರಹನಿ” ಜೊತೆ ಮಾತನಾಡುತ್ತ ತಿಳಿಸಿದರು.
“ಪ್ರಸ್ತುತ ರಸ್ತೆ ಸಮಸ್ಯೆಯೇನೋ ಬಗೆಹರಿಯಲಿದೆ. ಆದರೆ ಈ ಅಂಡರ್‌ಪಾಸ್ ಒಳಗೆ ಮತ್ತು ಹೊರಗೆ ಸೂಕ್ತವಾದ ಬೀದಿದೀಪಗಳನ್ನು ಅಳವಡಿಸಬೇಕಾಗಿದೆ. ಅಲ್ಲದೆ ಸುರಕ್ಷತೆ ದೃಷ್ಟಿಯಿಂದ ಎರಡೂ ಬದಿಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಬAಧಿಸಿದ ಇಲಾಖಾಧಿಕಾರಿಗಳು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು” ಎಂದೂ ಇಮ್ರಾನ್ ಪಾಷ ಒತ್ತಾಯಿಸಿದ್ದಾರೆ.
 bevarahani1
                                    bevarahani1                                 
            
             
            
             
            
             
            
             
            
             
            
             
            
             
            
             
            
             
            
             
            
             
            
                                        
                                     
            
             
            
             
            
            