ನಾಮದಚಿಲುಮೆ-ದೇವರಾಯನದುರ್ಗದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ: ಪ್ರತಿಭಟನೆಗೆ ಸಜ್ಜಾದ ತಂಗನಹಳ್ಳಿ ಗ್ರಾಮಸ್ಥರು

ನಾಮದಚಿಲುಮೆ-ದೇವರಾಯನದುರ್ಗದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ: ಪ್ರತಿಭಟನೆಗೆ ಸಜ್ಜಾದ ತಂಗನಹಳ್ಳಿ ಗ್ರಾಮಸ್ಥರು, namada-chilume-devarayanadurga-stone-quarry-permission-protest-from-villagers

ನಾಮದಚಿಲುಮೆ-ದೇವರಾಯನದುರ್ಗದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ: ಪ್ರತಿಭಟನೆಗೆ ಸಜ್ಜಾದ ತಂಗನಹಳ್ಳಿ ಗ್ರಾಮಸ್ಥರು


ನಾಮದಚಿಲುಮೆ-ದೇವರಾಯನದುರ್ಗದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ: ಪ್ರತಿಭಟನೆಗೆ ಸಜ್ಜಾದ ತಂಗನಹಳ್ಳಿ ಗ್ರಾಮಸ್ಥರು


ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕಿನ ಕೋಳಘಟ್ಟದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ನೂರಾರು ಗ್ರಾಮಸ್ಥರು ಹಗಲಿರುಳೂ ಪ್ರತಿಭಟನೆ, ಧರಣಿ ನಡೆಸುತ್ತಿರುವ ಬೆನ್ನಲ್ಲೇ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ತಂಗನಹಳ್ಳಿಗೆ ಸೇರಿದ ಸರ್ವೆ ನಂ 19,32 ಹಾಗೂ 45ರಲ್ಲಿ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಹೋರಾಟಕ್ಕೆ ಸಜ್ಜಾಗಿದ್ದಾರೆ.


ಐತಿಹಾಸಿಕ ದೇವರಾಯನದುರ್ಗ ಹಾಗೂ ನಾಮದ ಚಿಲುಮೆಗೆ ಕೇವಲ ಮೂರು ಕಿಮೀ ಅಂತರದಲ್ಲಿದ್ದು ಫಲವತ್ತಾದ ಕೃಷಿ ಭೂಮಿ ಹಾಗೂ ವನ್ಯ ಜೀವಿಗಳನ್ನೊಳಗೊಂಡ ಅರಣ್ಯಕ್ಕೆ ಲಗತ್ತಾಗಿರುವ ತಂಗನಹಳ್ಳಿಯಲ್ಲಿ ತೀವ್ರ  ವಿರೋಧದ ನಡುವೆಯೂ ಸರ್ಕಾರ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.


ಗುಡ್ಡ ಬೆಟ್ಟಗಳಿಂದ ಕೂಡಿದ ಈ ಪ್ರದೇಶದಲ್ಲೇ ಸುವರ್ಣಮುಖಿ ನದಿಯ ಉಗಮಸ್ಥಾನವಿದೆ ಹಾಗೂ ಕಲ್ಲುಗಣಿಗಾರಿಕೆಗೆ ಸರ್ಕಾರ ಅನುಮತಿ ನೀಡಿರುವ ಸ್ಥಳಕ್ಕೆ ಅತಿ ಸಮೀಪದಲ್ಲಿ ಈ ಗ್ರಾಮವಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರು ಮಳೆ, ಕೆರೆ, ಕೊಳವೆ ಬಾವಿ ಆಶ್ರಯದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಹಾಲಿ ಕಲ್ಲುಗಣಿಗಾರಿಕೆಗೆ ನೀಡಿರುವ ಸಣ್ಣಪುಟ್ಟ ಗುಡ್ಡಗಳೇ ನಿರಂತರ ಜಲಮೂಲಗಳಾಗಿವೆ. ಇಂಥ ಪರಿಸರದಲ್ಲಿ ಕಲ್ಲುಗಣಿಗಾರಿಕೆಗೆ ಅವಕಾಶ ನೀಡಿರುವುದು ಜನ ವಿರೋಧಿ ಹಾಗೂ ಜೀವ ವಿರೋಧಿ ಎನ್ನುತ್ತಾರೆ ಗ್ರಾಮಸ್ಥರು.


ಎರಡು ವರ್ಷದಿಂದಲೂ ಇಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡುವ ಸಲುವಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಗನಹಳ್ಳಿಗೆ ಭೇಟಿ ನೀಡಿದ್ದರು. ಹೀಗೆ ಅವರು ಭೇಟಿ ನೀಡಿದಾಗಲೆಲ್ಲ ಗ್ರಾಮಸ್ಥರು ಇಲಾಖೆಯ ವಾಹನ ತಡೆದು ಕಲ್ಲುಗಣಿಗಾರಿಕೆಗೆ ಅವಕಾಶ ನೀಡದಂತೆ ಆಗ್ರಹಪಡಿಸಿದ್ದರು. 25.09.2020ರಂದು ರೈತ ಸಂಘದ ಅಧ್ಯಕ್ಷ ಗೋವಿಂದರಾಜು ನಾಯಕತ್ವದಲ್ಲಿ ಸಾರ್ವಜನಿಕ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಲಿಖಿತ ಮನವಿಯನ್ನೂ ನೀಡಿದ್ದರು.


ಆದರೆ ಇದೆಲ್ಲ ವಿರೋಧವನ್ನೂ ಲೆಕ್ಕಿಸದೇ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಿರುವುದನ್ನು ಗ್ರಾಮಸ್ಥರು ತೀವ್ರವಾಗಿ ಖಂಡಿಸಿ, ವಿರೋಧ ವ್ಯಕ್ತಪಡಿಸಿದ್ದಾರೆ.


ಪ್ರಸ್ತುತ ತಂಗನಹಳ್ಳಿ ಗ್ರಾಮಸ್ಥರು ನಾಲ್ಕು ಪುಟಗಳ ಹಕ್ಕೊತ್ತಾಯ ಪತ್ರಕ್ಕೆ ಗ್ರಾಮದ ಎಲ್ಲರೂ ಸಹಿ ಮಾಡಿದ್ದು ,  ಕಲ್ಲು ಗಣಿಗಾರಿಕೆಗೆ ನೀಡಿರುವ ಅನುಮತಿ (ಸಂ.ಸಿಐ 140ಪಿಎಸ್‌ಕ್ಯೂ(ಈ) 2020, ದಿನಾಂಕ 27.07.2020 ನಿರ್ಣಯ ದಿನಾಂಕ 30.01.2021 ಹಾಗೂ ಹಿಂಬರಹ ದಿನಾಂಕ 05.04.2021)ಯನ್ನು ಕೂಡಲೇ ರದ್ದು ಪಡಿಸಿ, ಗ್ರಾಮಸ್ಥರು ಹಾಗೂ ರೈತರು ನೆಮ್ಮದಿಯಾಗಿ ಜೀವನ ನಡೆಸಲು ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿ, ಜಿಲ್ಲಾಧಿಕಾರಿಯವರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಅರಣ್ಯ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದಾರೆ.


ಲಿಖಿತ ಮನವಿಯನ್ನು ಪರಿಗಣಿಸಿ ಈಗಾಗಲೇ ನೀಡಿರುವ ಕಲ್ಲುಗಣಿಗಾರಿಕೆ ಅನುಮತಿಯನ್ನು ರದ್ದು ಪಡಿಸದೇ ಹೋದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರೂ ರೈತರ ಹಿತ ಕಾಪಾಡಬೇಕೆಂದು ಆಗ್ರಹಿಸಿದ್ದಾರೆ.