ಹಿಂದುಳಿದ ಜಾತಿಗಳಲ್ಲೂ ಒಳ ಮೀಸಲಾತಿಗೆ ನನಗೇನೂ ತಕರಾರಿಲ್ಲ: ಸಿದ್ಧರಾಮಯ್ಯ ಸ್ಪಷ್ಟನೆ
ಅಧಿಕಾರ ಬರುತ್ತೆ ಹೋಗುತ್ತೆ, ಸಿಎಂ ಹುದ್ದೆ ಇರುತ್ತೆ ಹೋಗುತ್ತೆ, ಆದರೆ ತುಳಿತಕ್ಕೊಳಗಾದವರಿಗೆ ಸಾಮಾಜಿಕ ನ್ಯಾಯ ನೀಡುವ ಕುರಿತ ನನ್ನ ಬದ್ಧತೆ ಎಂದಿಗೂ ಬದಲಾಗುವುದಿಲ್ಲ
ಹಿಂದುಳಿದ ಜಾತಿಗಳಲ್ಲೂ ಒಳ ಮೀಸಲಾತಿಗೆ ನನಗೇನೂ
ತಕರಾರಿಲ್ಲ: ಸಿದ್ಧರಾಮಯ್ಯ ಸ್ಪಷ್ಟನೆ
ತುಮಕೂರು: ಪರಿಶಿಷ್ಟ ಜಾತಿಗಳ ರೀತಿಯಲ್ಲೇ ಹಿಂದುಳಿದ ಜಾತಿಗಳಲ್ಲೂ ಒಳ ಮೀಸಲಾತಿ ಮಾಡ್ತೀವಿ ಅಂದ್ರೆ ನನ್ನದೇನೂ ತಕರಾರಿಲ್ಲ ಎಂದು ವಿಧಾನ ಸಭೆಯಲ್ಲಿ ವಿರೋಧ ಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು.
ಅಧಿಕಾರ ಬರುತ್ತೆ ಹೋಗುತ್ತೆ, ಸಿಎಂ ಹುದ್ದೆ ಇರುತ್ತೆ ಹೋಗುತ್ತೆ, ಆದರೆ ತುಳಿತಕ್ಕೊಳಗಾದವರಿಗೆ ಸಾಮಾಜಿಕ ನ್ಯಾಯ ನೀಡುವ ಕುರಿತ ನನ್ನ ಬದ್ಧತೆ ಎಂದಿಗೂ ಬದಲಾಗುವುದಿಲ್ಲ , ತತ್ವ ಸಿದ್ಧಾಂತ ಹೇಳೋದು ಬೇರೆ, ಆದರೆ ಬದ್ಧತೆಯಿಂದ ನಡೆದುಕೊಳ್ಳುವುದು ಬೇರೆ ಎಂದ ಸಿದ್ದರಾಮಯ್ಯನವರು ಬಹಳಷ್ಟು ರಾಜಕಾರಣಿಗಳು ಬದ್ಧತೆ ಕಳೆದುಕೊಂಡು ಬಿಟ್ಟಿದ್ದಾರೆ ಎಂದು ವಿಷಾದಿಸಿದರು.
ಸ್ವಾಮಿ ವಿವೇಕಾನಂದ ಸಹಕಾರ ಸಂಘದ ಬೆಳ್ಳಿ ಹಬ್ಬ ಹಾಗೂ ಸದರಿ ಸಂಘದ ಸಂಸ್ಥಾಪಕ ಮಾಜಿ ಸಚಿವ ದಿವಂಗತ ಲಕ್ಷ್ಮೀನರಸಿಂಹಯ್ಯನವರ 21ನೇ ಸಂಸ್ಮರಣಾ ಸಮಾರಂಭದ ಆರಂಭದಲ್ಲಿ ಮಾತನಾಡಿದ ಮುಖ್ಯ ಮಂತ್ರಿ ಚಂದ್ರು, ಹಿಂದುಳಿದ 2 ಎ ಪ್ರವರ್ಗಕ್ಕೆ ಸೇರಿದ ಹಿಂದೂ ಸಾದರು ಅತಿ ಸೂಕ್ಷ್ಮ ಸಂಖ್ಯೆಯಲ್ಲಿದ್ದು, ರಾಜಕೀಯ ಪ್ರಾತಿನಿಧ್ಯವಿಲ್ಲ, ಕಡೇ ಪಕ್ಷ ಪರಿಶಿಷ್ಟ ಜಾತಿಗಳಲ್ಲಿ ಕೋರಿರುವಂತೆ ಹಿಂದುಳಿದ ಜಾತಿಗಳಲ್ಲೂ ಒಳ ಮೀಸಲಾತಿ ನೀಡಬೇಕೆಂದು ಮಾಡಿದ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದರು ಸಿದ್ದರಾಮಯ್ಯ .
1992ರಲ್ಲಿ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ 9 ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಮೀಸಲಾತಿ ಒಟ್ಟು ಪ್ರಮಾಣ 50% ಮೀರುವಂತಿಲ್ಲ ಎಂದು ನೀಡಿರುವ ತೀರ್ಪನ್ನು ರಾಜ್ಯಗಳ ಮುಂದೆ ಅಡ್ಡಗಟ್ಟೆಯಾಗಿ ಇಡುವ ಕೇಂದ್ರದ ಬಿಜೆಪಿ ಸರ್ಕಾರ ಜನಸಂಖ್ಯೆಯಲ್ಲಿ ಕೇವಲ 4% ಇರುವ ಜಾತಿಗಳಿಗೆ ಆರ್ಥಿಕವಾಗಿ ಹಿಂದುಳಿದ ಕೋಟಾದಲ್ಲಿ 10 % ಮೀಸಲಾತಿ ನೀಡುತ್ತದೆ. ಸುಮಾರು 55% ಇರುವ ಹಿಂದುಳಿದ ವರ್ಗಗಳಿಗೆ ಕೇವಲ 26% ಮೀಸಲಾತಿ ಇದೆ, ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಅಲ್ಲದೇ, ನಾನು ಕ್ಯಾಬಿನೆಟ್ ಉಪ ಸಮಿತಿ ಅಧ್ಯಕ್ಷನಾಗಿದ್ದಾಗ ಸ್ಥಳೀಯ ಸಂಸ್ಥೆಯಲ್ಲಿ ಹಿಂದುಳಿದ ವರ್ಗಗಳಿಗೆ 26% ಹಾಗೂ ಒಟ್ಟಾರೆ ಮಹಿಳೆಯರಿಗೆ 33% ಮೀಸಲಾತಿ ನೀಡುವಂತೆ ಶಿಫಾರಸು ಮಾಡಿದ್ದೆ, ಈ ಮೀಸಲಾತಿಯನ್ನು ಅನುಷ್ಟಾನಗೊಳಿಸುವುದನ್ನು ವಿರೋಧಿಸಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯ ಸಭಾ ಸದಸ್ಯರಾಗಿದ್ದ ನಿವೃತ್ತ ನ್ಯಾಯಮೂರ್ತಿ ರಾಮಾ ಜೋಯಿಸ್ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಿ ಅವರೇ ವಾದ ಮಾಡಿದ್ದರು. ಆದರೆ ನ್ಯಾಯಾಲಯ ಈ ಪ್ರಕರಣವನ್ನು ವಜಾ ಮಾಡಿತು. ಇದು ಬಿಜೆಪಿ ಸಾಮಾಜಿಕ ನ್ಯಾಯ ಹಾಗೂ ಮೀಸಲಾತಿ ವಿರೋಧಿ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದರು ಸಿದ್ದರಾಮಯ್ಯ.
ಜಾತಿ ಸಮೀಕ್ಷೆ ವರದಿಗೆ ಅಡ್ಡಿ ನಾನಲ್ಲ
ನಾನು ಮುಖ್ಯಮಂತ್ರಿಯಾಗಿದ್ದಾಗ ಜಾತಿ ಸಮೀಕ್ಷೆ ಮಾಡಲು ಆದೇಶ ನೀಡಿದ್ದೆ, ಆಯೋಗವು ವರದಿ ಸಲ್ಲಿಸಲು ಬಂದಾಗ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ವರದಿಯನ್ನು ಸಲ್ಲಿಸದಂತೆ ಸೂಚಿಸಿದವರು ಯಾರು, ಆ ನಂತರ ಮೂರು ವರ್ಷಗಳಾದರೂ ಸಾರ್ವಜನಿಕಗೊಳಿಸದಂತೆ ತಡೆ ಹಿಡಿದುಕೊಂಡಿರುವವರು ಯಾರು ಎಂದು ಸಿದ್ದು ಪ್ರಶ್ನಿಸಿದರು.
ʼಲಚ್ಚಣ್ಣ ಅಜಾತ ಶತ್ರುವಾಗಿದ್ದರುʼ
ಅತ್ಮೀಯ ಗೆಳೆಯನನ್ನು ಸ್ಮರಿಸಿದ ಸಿದ್ದು
ತುಮಕೂರು: ಹಿಂದುಳಿದ ವರ್ಗಗಳ ನಾಯಕ ಮಾಜಿ ಸಚಿವ ಲಕ್ಷ್ಮೀನರಸಿಂಹಯ್ಯನವರು ಸರಳ,ಸಜ್ಜನಿಕೆಯ, ಸ್ನೇಹ ಪರ ವ್ಯಕ್ತಿತ್ವ ಹೊಂದಿದ್ದ , ಅಜಾತ ಶತ್ರು ಅಂತ ಕರೆಸಿಕೊಂಡಿದ್ದ ಒಬ್ಬ ಅತ್ಯುತ್ತಮ ರಾಜಕಾರಣಿ, ನನಗೆ ಬಹಳ ಒಳ್ಳೆಯ ಸ್ನೇಹಿತರಾಗಿದ್ದರು, ನಾನೂ , ಜಾಲಪ್ಪ ಹಾಗೂ ಲಕ್ಷ್ಮೀನರಸಿಂಹಯ್ಯ ನಾಲ್ಕು ದಿನ ಒಟ್ಟಿಗೆ ಇರುವಷ್ಟು ಆತ್ಮೀಯರಾಗಿದ್ದರು, ಸ್ನೇಹ ಮತ್ತು ನಂಬಿಕೆಗೆ ಹೇಳಿ ಮಾಡಿದ ವ್ಯಕ್ತಿ.
ಜನಪರ ಕಾಳಜಿ ಇದ್ದವರು, ಸಮಾಜದಲ್ಲಿ ಸದಾ ಕೆಳಸ್ತರ ಜನರ ಏಳಿಗೆ ಬಗ್ಗೆ ಚರ್ಚೆ ಮಾಡುತ್ತಿದ್ದರು, ತುಮಕೂರಿನಿಂದ ಶಾಸಕರಾಗಿ ಚುನಾಯಿತರಾಗಿ , ಮಂತ್ರಿಯಾಗಿಯೂ ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು, ಅನೇಕ ಜನರನ್ನು ರಾಜಕಾರಣದಲ್ಲಿ ಬೆಂಬಲಿಸಿ ಬೆಳೆಸಿದರು. ನಾನು ಪಶು ಸಂಗೋಪನಾ ಮಂತ್ರಿಯಾಗಿದ್ದಾಗ ಜೆ.ಸಿ.ಮಾಧುಸ್ವಾಮಿ ಅವರನ್ನು ಕರೆತಂದು ತುಮಕೂರು ಮಿಲ್ಕ್ ಯೂನಿಯನ್‌ಗೆ ಅಧ್ಯಕ್ಷರನ್ನಾಗಿ ಮಾಡಲು ಒತ್ತಾಯ ಮಾಡಿದರು, ಎಸ್. ಆರ್. ಬೊಮ್ಮಾಯಿ ಹಾಗೂ ರಾಮಕೃಷ್ಣ ಹೆಗಡೆ ಅವರಿಂದಲೂ ಹೇಳಿಸಿದ್ದರು, ನಂತರ ಮಾಧುಸ್ವಾಮಿಯವರನ್ನು ಕೆಎಂಎಫ್ ಗೆ ಅಧ್ಯಕ್ಷರನ್ನಾಗಿ ಮಾಡಿಸಿದರು. ಇವತ್ತು ಮಾಧುಸ್ವಾಮಿ ಏನಾದರೂ ರಾಜಕೀಯವಾಗಿ ಬೆಳೆದಿದ್ದರೆ ಅದಕ್ಕೆ ಲಕ್ಷ್ಮೀನರಸಿಂಹಯ್ಯನವರೇ ಕಾರಣ ಎಂದವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಶನಿವಾರ, ನಗರದ ಸಿದ್ದಿವಿನಾಯಕ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ , ಸ್ವಾಮಿ ವಿವೇಕಾನಂದ ಸಹಕಾರ ಸಂಘದ ಬೆಳ್ಳಿ ಹಬ್ಬ ಹಾಗೂ ಸದರಿ ಸಂಘದ ಸಂಸ್ಥಾಪಕ ಮಾಜಿ ಸಚಿವ ದಿವಂಗತ ಲಕ್ಷ್ಮೀನರಸಿಂಹಯ್ಯನವರ 21ನೇ ಸಂಸ್ಮರಣಾ ಸಮಾರಂಭದಲ್ಲಿ ತಮ್ಮ ಆತ್ಮೀಯ ಗೆಳೆಯರಾಗಿದ್ದ ಲಕ್ಷ್ಮೀನರಸಿಂಹಯ್ಯನವರ ಕುರಿತು ಆಡಿದ ಮಾತುಗಳಿವು.
ಮಾಧುಸ್ವಾಮಿಯವರಂತೆ ಅನೇಕ ವ್ಯಕ್ತಿಗಳನ್ನು ರಾಜಕೀಯ ಕ್ಷೇತ್ರದಲ್ಲಿ ಲಚ್ಚಣ್ಣ ಬೆಳೆಸಿದರು, ತುರ್ತು ಪರಿಸ್ಥಿತಿಯಲ್ಲಿ ಜೈಲು ವಾಸ ಅನುಭವಿಸಿದರು, ತುಮಕೂರು ಜಿಲ್ಲೆಯಲ್ಲಿ ಜನತಾ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿ ಪಕ್ಷ ಕಟ್ಟಿ ಬೆಳೆಸಿದರು, ತುಮಕೂರಿನಲ್ಲಿ ಹೆಚ್‌ಎಂಟಿ ಕಾರ್ಖಾನೆ ಬರಲು ಲಚ್ಚಣ್ಣ ಕಾರಣರು, ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ ಮಾತ್ರವಲ್ಲದೇ ದೇವೇಗೌಡರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಅನಾರೋಗ್ಯವನ್ನೂ ಲೆಕ್ಕಿಸದೇ ಪಕ್ಷ ಸಂಘಟನೆ ಮಾಡಿದರು
ನಾನು ಸೋತು ಮನೆಯಲ್ಲಿದ್ದಾಗ ಪ್ರತಿ ಭಾನುವಾರ ಬೆಂಗಳೂರಿನಲ್ಲಿ ಅವರ ಮಗಳ ಮನೆಗೆ ಬಂದು ನನ್ನನ್ನು ಭೇಟಿ ಮಾಡಿ ಇಡೀ ದಿನ ಜೊತೆಯಲ್ಲಿರುತ್ತಿದ್ದರು ಎಂದರು.
ʼನನ್ನ ಬೆಳವಣಿಗೆಗೆ ಕಾರಣರುʼ
ಮಾಧುಸ್ವಾಮಿ ಅಭಿಮಾನದ ನುಡಿ
ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿಯವರು ಮಾತನಾಡಿ, ನನ್ನ ಬೆಳವಣಿಗೆಯಲ್ಲಿ ಲಕ್ಷ್ಮೀನರಸಿಂಹಯ್ಯನವರ ಪಾತ್ರ ಇದೆ ಎಂದು ಎಲ್ಲರೂ ಹೇಳುತ್ತಾರೆ, ಈ ಮಾತು ನೂರಕ್ಕೆ ನೂರರಷ್ಟು ಸತ್ಯ ಎಂದರಲ್ಲದೇ, ನಾನೂ ಮತ್ತು ಲಚ್ಚಣ್ಣನವರು ಇಬ್ಬರೂ ಶಾಸಕರ ಭವನದ ಒಂದೇ ಕೋಣೆಯಲ್ಲಿ ಹತ್ತು ವರ್ಷ ಇದ್ದೆವು.ನಾನು ಇವತ್ತೇನಾದರೂ ರಾಜಕೀಯ ರಂಗದಲ್ಲಿ ಸೀನಿಯರ್ ಲೀಡರ್ಸ್ ಜೊತೆ ಇದ್ದೇನೆ ಅಂದ್ರ ಅದಕ್ಕೆ ಲಕ್ಷ್ಮೀನರಸಿಂಹಯ್ಯನವರು ಕಾರಣ ಎಂದರು.
ʼ ಸಂಪನ್ನ, ಸಮಾಧಾನ ಗುಣ, ರಾಜಕಾರಣದಲ್ಲಿ ಎಲ್ಲರನ್ನೂ ಒಟ್ಟಿಗೇ ತೆಗೆದುಕೊಂಡು ಹೋಗುವ ಶಕ್ತಿ ಲಚ್ಚಣ್ಣನವರದು, ಒಂದು ಕಚೇರಿಲಿ ಕೆಲಸ ಆಗಬೇಕಂದ್ರೆ ಆ ಕೆಲಸ ಆಗೋವರೆಗೆ ಕೊನೆವರೆಗೂ ಸುಮ್ಮನೆ ಇರುತ್ತಿರಲಿಲ್ಲ ಎಂದರು.
ಒಂದು ಕಾಲಕ್ಕೆ ಜನನಾಯಕರಾಗಿದ್ದವರೆಲ್ಲ ಇವತ್ತು ಜಾತಿ ನಾಯಕರಾಗಿದ್ದಾರೆ, ನಮ್ಮ ನಮ್ಮ ತೀಟೆಗೆ, ತೆವಲಿಗೆ ಜಾತಿ ಗುಂಪುಗಳನ್ನು ಮಾಡಿಕೊಂಡಿದ್ದೇವೆ ಎಂದು ವಿಷಾದಿಸಿದ ಜೆಸಿಎಂ ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ ಲಕ್ಷ್ಮೀನರಸಿಂಹಯ್ಯನಂತವರು ಚುನಾವಣೆ ಮಾಡಲು ಆಗುವುದಿಲ್ಲ ಎಂದರು.
ಮಾಜಿ ಸ್ಪೀಕರ್ ಹಾಗು ಮಾಜಿ ಸಚಿವ ಕೆ.ಆರ್.ರಮೇಶಕುಮಾರ್ ಮಾತನಾಡಿ, ಲಕ್ಷ್ಮೀನರಸಿಂಹಯ್ಯ ಮತ್ತು ಅವರ ಪತ್ನಿ ಚೌಡಮ್ಮನವರೂ ನಮಗೆ ಆತ್ಮೀಯರಾಗಿದ್ದರು. ಒಳ್ಳೆ ಸ್ವಭಾವದ ಮನುಷ್ಯ, ಅಷ್ಟು ಒಳ್ಳೆಯವರಾಗಿ ರಾಜಕೀಯದಲ್ಲಿ ಹೇಗೆ ಬಂದೆಯೋ ಗೊತ್ತಿಲ್ಲ ಎನ್ನುತ್ತಿದ್ದೆ ನಾನು, ಲಚ್ಚಣ್ಣನವರಿಗೆ ಪಟಿಂಗತನ, ಜಾತಿ, ದುಡ್ಡು ಇರಲಿಲ್ಲ, ಆದರೂ ಗೌರವಯುತ ಸ್ಥಾನವಿತ್ತು.