‘ನೆಹರೂ  ಶಾಪವಾಗಿ  ಕಾಡಲಿದ್ದಾರೆ’ ನೆನಪಿಟ್ಟುಕೊಳ್ಳಿ

ನೆಹರೂ ಹೆಸರು ತೆಗೆಯುವುದೆಂದರೆ ಕೋಟ್ಯಂತರ ಭಾರತೀಯರಿಗೆ ಮಾಡುವ ಅವಮಾನವೂ ಹೌದು. ಈ ಪಾಪ ಕೃತ್ಯವು ಅದರಲ್ಲಿ ಭಾಗಿಯಾದ ಎಲ್ಲರನ್ನೂ ಬೆಂಬಿಡದ ಶಾಪದ ಹಾಗೆ ಮುಂದಿನ ದಿನಗಳಲ್ಲಿ ಕಾಡಲಿದೆ.

‘ನೆಹರೂ  ಶಾಪವಾಗಿ  ಕಾಡಲಿದ್ದಾರೆ’ ನೆನಪಿಟ್ಟುಕೊಳ್ಳಿ

ವರ್ತಮಾನ

ಡಾ.ಪುರುಷೋತ್ತಮ ಬಿಳಿಮಲೆ

ನೆಹರೂ ಅವರನ್ನು ಜನರೇ ಪ್ರಧಾನಿಯಾಗಿ ಆರಿಸಿದ್ದಾರೆ. ಅದರಲ್ಲಿ ಈಗಣ ಬಿಜೆಪಿಯ ಅಜ್ಜ ಮುತ್ತಜ್ಜರೆಲ್ಲ ಇದ್ದಿರಲೇಬೇಕು. ಹೀಗಾಗಿ ನೆಹರೂ ಹೆಸರು ತೆಗೆಯುವುದೆಂದರೆ ಕೋಟ್ಯಂತರ ಭಾರತೀಯರಿಗೆ ಮಾಡುವ ಅವಮಾನವೂ ಹೌದು. ಈ ಪಾಪ ಕೃತ್ಯವು ಅದರಲ್ಲಿ ಭಾಗಿಯಾದ ಎಲ್ಲರನ್ನೂ ಬೆಂಬಿಡದ ಶಾಪದ ಹಾಗೆ ಮುಂದಿನ ದಿನಗಳಲ್ಲಿ ಕಾಡಲಿದೆ. ಈಗ ಪ್ರಧಾನ ಮಂತ್ರಿಗಳಾಗಿರುವ ಮೋದಿಯವರ ಹೆಸರನ್ನು ಮುಂದೆ ಯಾರಾದರೂ ಕೈ ಬಿಟ್ಟರೂ ನನ್ನದು ಇದೇ ನಿಲುವು.

‘ನೆಹರೂ  ಶಾಪವಾಗಿ  ಕಾಡಲಿದ್ದಾರೆ’ ನೆನಪಿಟ್ಟುಕೊಳ್ಳಿ

       2022 ರ ಸ್ವಾತಂತ್ರ್ಯ ದಿನಾಚರಣೆಯಂದು ಕರ್ನಾಟಕದ ಬಿಜೆಪಿ ಸರಕಾರವು ತಾನು ನೀಡಿದ ಜಾಹೀರಾತಿನಿಂದ ಪಂಡಿತ್ ಜವಾಹರಲಾಲ್ ನೆಹರೂ ಅವರ ಹೆಸರನ್ನು ಕೈಬಿಟ್ಟಿತ್ತು. ಈ ವಾರ ಬೆಳಗಾವಿಯ ಸುವರ್ಣ ಸೌಧದಲ್ಲಿಯೂ ನೆಹರೂ ಅವರ ಭಾವಚಿತ್ರವನ್ನು ಕೈಬಿಡಲಾಗಿದೆ. ಭಾರತದ ಮೊದಲ ಪ್ರಧಾನ ಮಂತ್ರಿಯಾಗಿ 17 ವರ್ಷಗಳ ( 1947-1964) ಕಾಲ ದೇಶವನ್ನು ಮುನ್ನಡೆಸಿದವರ ಹೆಸರನ್ನು ಹೀಗೆ ಕೈಬಿಡುವುದರ ಮೂಲಕ ಬಿಜೆಪಿ ಸರಕಾರವು ಅಕ್ಷಮ್ಯ ಮತ್ತು ಘೋರ ಅಪರಾಧ ಎಸಗಿದೆ. ನೆಹರೂ ಅವರನ್ನು ಜನರೇ ಪ್ರಧಾನಿಯಾಗಿ ಆರಿಸಿದ್ದಾರೆ. ಅದರಲ್ಲಿ ಈಗಣ ಬಿಜೆಪಿಯ ಅಜ್ಜ ಮುತ್ತಜ್ಜರೆಲ್ಲ ಇದ್ದಿರಲೇಬೇಕು. ಹೀಗಾಗಿ ನೆಹರೂ ಹೆಸರು ತೆಗೆಯುವುದೆಂದರೆ ಕೋಟ್ಯಂತರ ಭಾರತೀಯರಿಗೆ ಮಾಡುವ ಅವಮಾನವೂ ಹೌದು. ಈ ಪಾಪ ಕೃತ್ಯವು ಅದರಲ್ಲಿ ಭಾಗಿಯಾದ ಎಲ್ಲರನ್ನೂ ಬೆಂಬಿಡದ ಶಾಪದ ಹಾಗೆ ಮುಂದಿನ ದಿನಗಳಲ್ಲಿ ಕಾಡಲಿದೆ. ಈಗ ಪ್ರಧಾನ ಮಂತ್ರಿಗಳಾಗಿರುವ ಮೋದಿಯವರ ಹೆಸರನ್ನು ಮುಂದೆ ಯಾರಾದರೂ ಕೈ ಬಿಟ್ಟರೂ ನನ್ನದು ಇದೇ ನಿಲುವು.

ನೆಹರೂ ಅವರ ಆಡಳಿತವನ್ನು ಒಪ್ಪುವುದು ಬಿಡುವುದು ಬೇರೆ ವಿಚಾರ. ಆದರೆ ಅವರು ಗಾಂಧೀಜಿಯ ಮಾರ್ಗದರ್ಶನದಲ್ಲಿ ಪಳಗಿದ ಸರ್ವ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಪ್ರಖರ ರಾಷ್ಟ್ರವಾದಿ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ 9 ಬಾರಿ ಜೈಲು ಪಾಲಾಗಿ ಒಟ್ಟು 3259 ದಿನಗಳನ್ನು ಕತ್ತಲ ಕೋಣೆಯಲ್ಲಿ ಕಳೆದರು. ಜಿನ್ನಾ ಅವರು ಮುಸ್ಲಿಮರಿಗೆ ಪ್ರತ್ಯೇಕ ಮತದಾನದ ಹಕ್ಕು ಅಥವಾ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನಿಟ್ಟಾಗ ಅದನ್ನು ಬಲವಾಗಿ ವಿರೋಧಿಸಿದ್ದ ನೆಹರೂ ಕೇಂದ್ರ ಪ್ರಧಾನ ಒಕ್ಕೂಟ ವ್ಯವಸ್ಥೆಯ ಸ್ವತಂತ್ರ ಭಾರತದ ಪರವಾಗಿ ವಾದಿಸಿದ್ದರು.

ಆನಂತರ ದೇಶ ವಿಭಜನೆಯ ರಕ್ತ ಸಿಕ್ತ ಇತಿಹಾಸದ ಬಿಕ್ಕಟ್ಟಿನ ಕ್ಷಣಗಳಲ್ಲಿ ನಾಡಿಗೆ ನಾಯಕತ್ವ ಒದಗಿಸಿದವರು ಅವರು. ಗಾಂಧಿ ಹತ್ಯೆಯ ಭೀಕರ ಸಂದರ್ಭದಲ್ಲಿಯೂ ಅವರು ದೇಶಕ್ಕೆ ಸಾಂತ್ವನ ಹೇಳಬೇಕಾಯಿತು. ೧೯೫೦ರಲ್ಲಿ ಭಾರತದ ಸಂವಿಧಾನವನ್ನು ಜಾರಿಗೊಳಿಸುವಲ್ಲಿ ಅವರದ್ದೂ ಮುಖ್ಯಪಾತ್ರವಿತ್ತು. ವಸಾಹತು ದೇಶವಾಗಿದ್ದ ಭಾರತವನ್ನು ಗಣರಾಜ್ಯವಾಗಿಸುವತ್ತ ಅವರು ಇಟ್ಟ ಹೆಜ್ಜೆಗಳು ಅಸಾಮಾನ್ಯ ಧೈರ್ಯ ಮತ್ತು ಮುನ್ನೋಟಗಳಿಂದ ಕೂಡಿದ್ದವು. ೧೯೫೪ರ ಚೀನಾ ಭಾರತ ಗಡಿ ಒಪ್ಪಂದದ ಆಧಾರದ ಮೇಲೆ ಶಾಂತಿಯುತ ಸಹಬಾಳ್ವೆಗಾಗಿ ಒಪ್ಪಿಕೊಳ್ಳಲಾಗಿದ್ದ ಪಂಚಶೀಲ ತತ್ವಗಳನ್ನು ನೆಹರೂ ನಂಬಿದ್ದರು. ಚೀನಾ ನಂಬಿರಲಿಲ್ಲ. ರಕ್ಷಣಾ ಕ್ಷೇತ್ರಕ್ಕೆ ಹೆಚ್ಚು ಹಣ ಒದಗಿಸುವ ಕಾಲವೂ ಅದಾಗಿರಲಿಲ್ಲ. ಇದರಿಂದ ನೆಹರೂವಿಗೆ ಚೀನಾ ವಿಷಯದಲ್ಲಿ ಸೋಲುಂಟಾದದ್ದು ನಿಜ. ೧೯೬೪ರಲ್ಲಿ ಭಾರತೀಯ ಸೈನಿಕರಿಗೆಂದು ನಿಧಿ ಸಂಗ್ರಹಿಸಲು ಹೊರಟಿದ್ದ ನನ್ನ ಮಾಸ್ತರರಾಗಿದ್ದ ಈಶ್ವರ ಭಟ್ಟರ ಜೊತೆ ನಾವು ಹಲವರು ಮನೆ ಮನೆ ಓಡಾಡಿದ್ದೆವು. ಯುದ್ಧದ ಸೋಲಿನ ಗಾಯ ಪಂಜದವರೆಗೂ ತಲುಪಿತ್ತು. ಆಗ ಬಿಜೆಪಿ ಎಂಬ ಪಕ್ಷವೇ ಹುಟ್ಟಿರಲಿಲ್ಲ.

ನೆಹರೂ ಅವರು ಸಮಾಜವಾದೀ ತತ್ವಗಳ ಆಧಾರದಲ್ಲಿ ಸ್ವತಂತ್ರ ಭಾರತವನ್ನು ಕಟ್ಟುವ ಕನಸು ಕಂಡರು. ಅದಕ್ಕಾಗಿ ಪ್ರಜಾಪ್ರಭುತ್ವವಾದೀ ಗಣರಾಜ್ಯದ ಮತ್ತು ಜಾತ್ಯತೀತ ತತ್ವಗಳನ್ನು ಬಲಪಡಿಸಲು ಶ್ರಮಿಸಿದರು. ಆದರೆ ಸಮಾಜವಾದದ ಗುರಿಯನ್ನು ಸಾಧಿಸುವುದು ಸುಲಭದ ಕೆಲಸ ಅಲ್ಲ ಎಂದು ಅವರು ಹೇಳುತ್ತ ಜನರನ್ನು ಎಚ್ಚರಿಕೆಯಲ್ಲಿಟ್ಟರೇ ವಿನಾ ʼಎಲ್ಲವನ್ನು ಸಾಧಿಸಿಬಿಟ್ಟೆʼ ಎಂದು ಹೇಳಿ ಜನರಿಗೆ ಮಂಕುಬೂದಿ ಎರಚಲಿಲ್ಲ. ಅವರ ದಿಟ್ಟ ನಿಲುವುಗಳಿಗಾಗಿ ಅವರನ್ನು ಒಟ್ಟು ನಾಲ್ಕು ಸಲ ಕೊಲೆ ಮಾಡಲು ಪ್ರಯತ್ನಿಸಲಾಗಿದ್ದು ಅದರಲ್ಲಿ ಮೂರು ಯತ್ನಗಳು ಮಹಾರಾಷ್ಟ್ರದಲ್ಲಿಯೇ ನಡೆಯಿತು ಎಂಬುದು ಇವತ್ತು ತುಂಬ ಸಾಂಕೇತಿಕವಾಗಿ ಕಾಣುತ್ತದೆ.

ನೆಹರೂ ಅವರು ಭಾರತದ ಯುವಕರ ಭವಿಷ್ಯವನ್ನು ಆಧುನಿಕ ಶಿಕ್ಷಣದಲ್ಲಿ ಕಂಡದ್ದರಿಂದಲೇ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ , ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೊದಲಾದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡರು. ಮೂಢ ನಂಬಿಕೆಗಳನ್ನು ಅವರು ಮಕ್ಕಳ ತಲೆಗೆ ತುರುಕಲಿಲ್ಲ.

ಸದ್ಯದ ರಾಜಕೀಯ ಲಾಭಕ್ಕಾಗಿ ಬಿಜೆಪಿ ಇದನ್ನೆಲ್ಲ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಈ ಪಾಪ ಕಾರ್ಯಗಳಿಗೆ ಅವರು ಒಂದಲ್ಲ ಒಂದು ದಿವಸ ಬೆಲೆ ತೆರಲೇ ಬೇಕಾಗುತ್ತದೆ. ಸೊಫೊಕ್ಲಿಸ್‌ ಬರೆದ ಅಂತಿಗೊನೆ ನಾಟಕದಲ್ಲಿ ಕುರುಡ ಟೈರಿಸಿಯಸ್‌ ಹೇಳುವ ಮಾತುಗಳನ್ನು ಲಂಕೇಶ್‌ ಅನುವಾದಿಸಿದ್ದು ಹೀಗೆ-

ʼ ನಮಗೆ ನಿನ್ನ ಕೃತ್ಯಗಳಿಂದ ರೋಗತಟ್ಟಿದೆ,

ನಮ್ಮ ಪುಣ್ಯಪೀಠಗಳನ್ನು , ದೇವಸ್ಥಾನಗಳನ್ನು

ನೆನೆಸಿದ ರಕ್ತ ,

ಹದ್ದು ನಾಯಿಗಳು ನೆಕ್ಕಿ ಕುಡಿಯುವ ರಕ್ತ ,

ನೀನು ನಿರ್ಭಾಗ್ಯ ಈಡಿಪಸ್ ಪುತ್ರನ ನಾಳಗಳಿಂದ ಚೆಲ್ಲಿದ ನೆತ್ತರಲ್ಲದೆ ಬೇರೆಯಲ್ಲ.

ನಮ್ಮ ಪ್ರಾರ್ಥನೆ, ಯಜ್ಞ , ಕಾಣಿಕೆಗಳನ್ನು ದೇವರು ತಿರಸ್ಕರಿಸಿದ್ದಾನೆ.

ಮನುಷ್ಯ ರಕ್ತ ಹೀರಿದ ಹಕ್ಕಿ

ಆಪಶಕುನದ ಸದ್ದಲ್ಲದೆ ಮತ್ತೇನನ್ನು ಮಾಡೀತು

ಆದರೆ ಪಶ್ಚಾತ್ತಾಪ ಪಡದೆ ಉಬ್ಬುವವ ಮಾತ್ರ

ನಿರ್ವೀರ್ಯನಾಗಿ ನಾಶವಾಗುತ್ತಾನೆ.

ನಿನ್ನ ಒಳ್ಳೆಯದಕ್ಕೆ ಇಷ್ಟು ಹೇಳಿದ್ದೇನೆ, ನನಗನ್ನಿಸಿದಂತೆʼ

********