ಎನ್ನಾರ್ ಜಗದೀಶ್ ಇನ್ನಿಲ್ಲ

NR-Jagadish

ಎನ್ನಾರ್ ಜಗದೀಶ್ ಇನ್ನಿಲ್ಲ

ಎನ್ನಾರ್ ಜಗದೀಶ್ ಇನ್ನಿಲ್ಲ

      ಜಗದೀಶ್ ಆರಾಧ್ಯರು, ಸಾಹುಕಾರರು ಎಂದೇ ಪರಿಚಿತರಾಗಿದ್ದ ,ತುಮಕೂರು ನಗರದ ಉದ್ಯಮ, ಸಹಕಾರ, ಶಿಕ್ಷಣ, ಧಾರ್ಮಿಕ ಹಾಗೂ ರಾಜಕೀಯ ರಂಗದಲ್ಲಿ ತಮ್ಮ ವಿಶಿಷ್ಟ ಹೆಜ್ಜೆ ಗುರುತುಗಳನ್ನು ಉಳಿಸಿರುವ ಎನ್.ಆರ್.ಜಗದೀಶ್ ಬುಧವಾರ ಮಧ್ಯಾಹ್ನ 1.55ರಲ್ಲಿ ತೀವ್ರ ಹೃದಯಾಘಾತದಿಂದಾಗಿ ನಿಧನರಾದರು. ಕಳೆದ ನವೆಂಬರ್ 12ರಂದು 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಅವರು ಸಾಂದರ್ಭಿಕ ಅನಾರೋಗ್ಯದಿಂದಾಗಿ ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

     ಬುಧವಾರ ಸಂಜೆ ಐದು ಗಂಟೆ ಸುಮಾರಿಗೆ ಹೆಚ್ ಎಂ ಟಿ ಎದುರಿನ ಅವರ ‘ಶಿವ ಕೃಪ’ದಲ್ಲಿ ಸಾರ್ವಜನಿಕ ಅಂತಿಮ ದರ್ಶನ ಕ್ಕೆ ವ್ಯವಸ್ಥೆ ಮಾಡಲಾಗುವುದು, ತುಮಕೂರು ನಗರ ವೀರಶೈವ ಸಮಾಜದ ಮಾಜಿ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದ ಎನ್ನಾರ್ ಜಗದೀಶ್ ಅವರ ಕ್ರಿಯಾಸಮಾಧಿ ಗುರುವಾರ ಸಂಜೆ 4 ಗಂಟೆಗೆ ಬನಶಂಕರಿಯ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ತುಮಕೂರು ನಗರ ವೀರಶೈವ ಸಮಾಜದ ಅಧ್ಯಕ್ಷರಾದ ಟಿ.ಬಿ.ಶೇಖರ್ ತಿಳಿಸಿದ್ದಾರೆ.

    ಪತ್ನಿ ಪಾರ್ವತಮ್ಮ, ಹಿರಿಯ ಮಗ ಉದ್ಯಮಿ ಎನ್.ಜೆ.ರುದ್ರಪ್ರಕಾಶ್ ಸೇರಿ ಮೂವರು ಮಕ್ಕಳ ಬಹುದೊಡ್ಡ ಕುಟುಂಬ ಹಾಗೂ ಅಪಾರ ಬಂಧು ಮಿತ್ರರನ್ನು ಎನ್.ಆರ್.ಜಗದೀಶ್ ತೊರೆದಿದ್ದಾರೆ.

     ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬೂಕಿನಕೆರೆ ಸಮೀಪದ ಗ್ರಾಮವೊಂದರ ಮೂಲದವರಾದ ಜಗದೀಶ್ ಆರಾಧ್ಯರ ತಂದೆ ಹೆಸರಾಂತ ವರ್ತಕ ಎನ್.ರುದ್ರಯ್ಯನವರು ಧರ್ಮಕಾರ್ಯಗಳಿಗೆ ಹೆಸರಾದವರು.

      ಬೆಂಗಳೂರು ಧಾನ್ಯ ವರ್ತಕರ ಸಂಘದ ಶಾಖೆಯನ್ನು ತುಮಕೂರಿನಲ್ಲಿ ಸ್ಥಾಪಿಸಿ, ಆ ಮೂಲಕ ತುಮಕೂರು ಗ್ರೈನ್ ಮರ್ಚೆಂಟ್ಸ್ ಕೋ ಆಪರೇಟಿವ್ ಬ್ಯಾಂಕ್ ಪ್ರಾರಂಭಕ್ಕೆ ಕಾರಣರಾದ ಎನ್ನಾರ್ ಬಹು ದೀರ್ಘ ಅವಧಿಯಿಂದ ಇಂದಿನವರೆಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಎನ್.ಆರ್.ಜಗದೀಶ್ 2013-14ನೇಸಾಲಿನಲ್ಲಿ ರಾಜ್ಯ ಸರ್ಕಾರದ ‘ ಸಹಕಾರ ರತ್ನ’ ಪ್ರಶಸ್ತಿ ಪಡೆದಿದ್ದರು,

      ಸಿದ್ಧಗಂಗಾ ಮಠಾಧೀಶ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರ ಅಂತರಂಗದ ಆಪ್ತರಾಗಿ ಮಠದ ಪರಮಭಕ್ತರಾಗಿ, ಸಿದ್ಧಗಂಗಾ ಮಠದ ಸಕಲ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಎನ್ನಾರ್ ಜಗದೀಶ್ ಆರಾಧ್ಯರು ಶ್ರೀ ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಅನೇಕ ಶಾಲೆ,ಕಾಲೇಜುಗಳ ಆಡಳಿತ ಮಂಡಳಿ ನಿರ್ದೇಶಕರಾಗಿ ಅವುಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ನಗರದ ಚಿಕ್ಕಪೇಟೆಯಲ್ಲಿರುವ ಹಿರೇಮಠದ ಅಭಿವೃದ್ದಿಗೆ ಮೂಲ ಕಾರಣ ಜಗದೀಶ್ ಆರಾಧ್ಯರು.

    ‘ಸಿದ್ದಿ’ ಹೆಸರಿನ ರೈಸ್ ಮಿಲ್ ಹಾಗೂ ಶ್ರೀ ಸಿದ್ದಗಂಗಾ ಆಯಿಲ್ ಎಕ್ಸ್ ಟ್ರಾಕ್ಷನ್ಸ್ ವ್ಯವಸ್ಥಾಪಕ ನಿರ್ದೇಶಕರಾಗಿ ಯಶಸ್ವಿ ಉದ್ಯಮಿಯಾಗಿದ್ದರು. ಎನ್.ಆರ್. ಜಗದೀಶ್ ಅವರು ಆರಂಭಿಸಿದ ಎನ್.ಆರ್ ಬ್ರಾಂಡ್ ಅನ್ನು ಇವರ ಸೋದರ ಎನ್.ಆರ್.ವಿಶ್ವಾರಾಧ್ಯರು ವ್ಯಾಪಕಗೊಳಿಸಿದರು.

       ಎನ್.ಆರ್. ಜಗದೀಶ್ ವಿದ್ಯಾನಿಕೇತನ, ಸರ್ವೋದಯ ಹಾಗೂ ಚೇತನ  ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.  ಧಾನ್ಯ ವರ್ತಕರ ಸಂಘ, ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ತುಮಕೂರು ನಗರ ವೀರಶೈವ ಸಮಾಜ, ರೋಟರಿ ಕ್ಲಬ್, ಸರ್ವೋದಯ ವಿದ್ಯಾಸಂಸ್ಥೆ, ಜಿಎಂಎಸ್ ಟ್ರಸ್ಟ್ (ಸಿದ್ದರಾಮಣ್ಣ ಹಾಸ್ಟೆಲ್) , ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ ಹೀಗೆ ಹಲವಾರು ಸಂಘ ಸಂಸ್ಥೆಗಳ  ಅಧ್ಯಕ್ಷರಾಗಿ, ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಟಿಜಿಎಂಸಿ ಬ್ಯಾಂಕ್ ಆವರಣದ ಮಹಾಲಕ್ಷ್ಮಿ ದೇವಸ್ಥಾನ ಮತ್ತು ಈ ಮಹಾಲಕ್ಷ್ಮಿ ಟ್ರಸ್ಟಿನ ಟ್ರಸ್ಟಿಯಾಗಿ ಮೈದಾಳದ ಸಮೀಪ ಹಿರಿಯ ಚೇತನಗಳಿಗಾಗಿ ಖಾಸಗಿ ವೃದ್ಧಾಶ್ರಮ ಸ್ಥಾಪಿಸಿ ಸ್ವಂತ ಕಟ್ಟಡವನ್ನೂ ನಿರ್ಮಿಸಲು ಇವರು ಕಾರಣರಾಗಿದ್ದಾರೆ.

      ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರಾಗಿ ಹಲವು ವರ್ಷ ಜಿಲ್ಲಾ ಕಾಂಗ್ರೆಸ್ ಖಜಾಂಚಿಯೂ ಆಗಿದ್ದರು. ಕೆಲಸ ಸಮಯ ತುಮಕೂರು ವಿಧಾನಸಭೆ ಹಾಗೂ ಲೋಕಸಭೆ ಗೆ ಸ್ಪರ್ಧಿಸಲು ಇವರು ಆಸಕ್ತಿ ತೋರಿದ್ದರು.

       ಎನ್. ಆರ್. ಜಗದೀಶ್ ಅವರ ನಿಧನಕ್ಕೆ ಸಿದ್ಧಗಂಗಾ ಮಠಾಧೀಶ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಪಂಚಪೀಠದ ಜಗದ್ಗುರುಗಳು, ಮಾಜಿ ಸಚಿವ ಸೊಗಡು ಶಿವಣ್ಣ , ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ  ಕೆ. ಎನ್. ರಾಜಣ್ಣ, ಟಿಎಂಸಿ ಸಿ ಅಧ್ಯಕ್ಷರಾದ ಡಾ. ಎನ್. ಎಸ್. ಜಯಕುಮಾರ್, ಲೋಕಸಭಾ ಸದಸ್ಯರಾದ ಜಿ. ಎಸ್. ಬಸವರಾಜ್, ತುಮಕೂರು ನಗರ ಶಾಸಕ ಜಿ. ಬಿ. ಜ್ಯೋತಿ ಗಣೇಶ್, ಮಾಜಿ ಶಾಸಕ ಎಸ್. ಷಫಿ ಅಹಮದ್, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್‌, ಸಹಕಾರ ಯೂನಿಯನ್ ಅಧ್ಯಕ್ಷ ಬಿ. ಜಿ. ವೆಂಕಟೇಗೌಡ, ವೀರಶೈವ ಸಮಾಜದ ಅಧ್ಯಕ್ಷ ಟಿ. ಬಿ. ಶೇಖರ್, ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಡಾ.ಜಯರಾಮರಾವ್, ಸುರೇಂದ್ರ ಎ. ಶಾ,  ಸರ್ವೋದಯ ಶಿಕ್ಷಣ ಸಂಸ್ಥೆಯ ಜಿ.ಸೀತಾರಾಂ, ಮೊದಲಾದವರು ಟಿಜಿಎಂಸಿ ಬ್ಯಾಂಕ್ ನ ಉಪಾಧ್ಯಕ್ಷ ದಿವ್ಯಾನಂದಮೂರ್ತಿ , ನಿರ್ದೇಶಕರು, ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.