ಬೇಸಾಯದ ಬದುಕು ಅತ್ಯಂತ ಬರ್ಬರ ಸ್ವಾಮಿ! ಜೊತೆಗೆ ಬರ ಬೇರೆ
ರಾಜ್ಯದಲ್ಲಿ ಈ ವರ್ಷ ತಲೆದೋರಿರುವ ಬರ ಕಳೆದ 122 ವರ್ಷಗಳಲ್ಲೇ ಮೂರನೇ ಅತ್ಯಂತ ಭೀಕರವಾದ ಬರ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಬೇರೆ ವೃತ್ತಿ ಜೊತೆಗೆ ಎಂದಿಗೂ ಕೃಷಿ -ಹೈನುಗಾರಿಕೆ ಮಾಡುತ್ತಿರುವ ನನಗಾದ ಈ ವರ್ಷದ ಅನುಭವ ಹೇಳಿದರೆ ಬರ ಹಾಗೂ ಬೇಸಾಯದ ಬದುಕು ಎಷ್ಟು ದುರ್ಬರವೆಂಬುದು ಅರಿವಾಗುತ್ತದೆ.
ವರ್ತಮಾನ

ರಘು ಗಂಕಾರನಹಳ್ಳಿ
ನಮ್ಮಕುಟುಂಬ ಒಂದು ಸಣ್ಣ ಹಿಡುವಳಿ ರೈತಕುಟುಂಬ. ನಮಗೆ ಒಂದುಎಕರೆ ಮಳೆಯಾಶ್ರಿತ ಭೂಮಿಯಿದೆ. ಪ್ರತಿ ವರ್ಷ ಮಳೆಯನ್ನು ನಂಬಿ ಮೆಕ್ಕೆಜೋಳ ಬೆಳೆಯುತ್ತಿದ್ದ ನನಗೆ ಈ ವರ್ಷ ಲಭಿಸಿದ ಫಸಲು ನಾಲ್ಕು ಕ್ವಿಂಟಾಲ್ ಮೆಕ್ಕೆಜೋಳ, ಅರ್ಧಗಾಡಿ ಒಣ ಮೇವು ಮಾತ್ರ. ಇದರ ಒಟ್ಟು ಆದಾಯ ಪ್ರತಿ ಕ್ವಿಂಟಲ್‌ಗೆ 2150ರೂ. ನಂತೆ ಒಟ್ಟು ರೂ.8,600 ಮಾತ್ರ.
ಖರ್ಚು ಹೇಳುವುದಾದರೆ ಉಳುಮೆಗೆ ರೂ 3000,ಬಿತ್ತನೆಗೆ, ರೂ.2000, ಕೂಲಿ ರೂ.6,000 ರಸಗೊಬ್ಬರ ರೂ.3000. ಇಷ್ಟೆಲ್ಲಾಖರ್ಚು ಮಾಡಿದ ನಾನು ಕಳೆ ತೆಗೆಸಿ ರಸಗೊಬ್ಬರ ಹಾಕಿದ ನಂತರ ಮಳೆ ಕೈಕೊಟ್ಟಿತು. ಮಳೆ ಇಂದು ಬರುತ್ತದೆ, ನಾಳೆ ಬರುತ್ತದೆಎಂದುಕಾದು ಕುಳಿತ ನಾನು ಕಡೆಗೆ ಬಹಳ ಪ್ರಯತ್ನಪಟ್ಟುಗಂಟೆಗೆ. ರೂ.80ರಂತೆ ಬೇರೆಯವರ ಬೋರ್‌ವೆಲ್ ಸಹಾಯದಿಂದ, ಹಗಲು ಕೆಲಸ ನಿರ್ವಹಿಸಿ ರಾತ್ರಿ ಹೊತ್ ತುತ್ರಾಸವಾದರೂ ಸರಿ ಎಂದುಎರಡು ಬಾರಿ ನೀರು ಹಾಯಿಸಿದೆ. ಅದಕ್ಕೆತಗುಲಿದ ವೆಚ್ಚ ರೂ.3000. ಗಿಡದ ನೆತ್ತಿಯ ಮೇಲೆ ನೀರು ಬೀಳದ ಕಾರಣ ಶುರುವಾಯಿತು ನೋಡಿ "ಸೈನಿಕ ಹುಳುಗಳ ಕಾಟ ಅಥವಾ ಕಾಂಡಕೊರಕ ಹುಳುಗಳ ಕಾಟ", ಆ ಹುಳುಗಳ ಕಾಟ ಹೇಗಿತ್ತೆಂದರೆ ಹುಳುಗಳು ಸಸ್ಯದ ಕಾಂಡಕೊರೆದ ಹಾಗೆಲ್ಲ ನನ್ನ ಮನಸ್ಸುಕೂಡ ಹೊಲದ ಬೆಳೆ ಕಂಡು ತೂತು ಬೀಳತೊಡಗಿತ್ತು. ಔಷಧಿ ಸಿಂಪಡಿಸಲು ಸಾಧ್ಯವಾಗದೆ ಕೈ ಚೆಲ್ಲಿಬಿಟ್ಟೆ. ನಾನು ಮಾಡಿದ ಒಟ್ಟು ಖರ್ಚು ರೂ.17,000 ಇದರಲ್ಲಿ ನನ್ನ ಹಾಗೂ ನನ್ನ ತಾಯಿಯ ಶ್ರಮವನ್ನು ಸೇರಿಸಿಲ್ಲ.
ಜಗತ್ತಿನಲ್ಲಿ ಹಾಕಿದ ಬಂಡವಾಳದ ಅರ್ಧದಷ್ಟು ಆದಾಯ ಪಡೆಯುವ ಏಕೈಕ ಉದ್ಯಮ ಅಥವಾ ವ್ಯವಹಾರವೆಂದರೆ ಅದು ವ್ಯವಸಾಯ ಮಾತ್ರ ಎಂಬುದು ನನಗೆ ಈ ವರ್ಷ ಸಂಪೂರ್ಣವಾಗಿ ಮನದಟ್ಟಾಯಿತು. ಎಲ್ಲರೂ ವ್ಯವಸಾಯವೆಂಬುದು ಉದ್ಯಮ ಅಥವಾ ವ್ಯವಹಾರವಾಗಿರದೇ ಅದೊಂದು "ಜೀವನ ಪದ್ಧತಿ" ಎಂದು ಹೇಳುತ್ತಿದ್ದರೆ ಇಂತಹ ಜೀವನ ಪದ್ಧತಿಯು ರೈತನನ್ನು ಹಾಗೂ ಆತನಕುಟುಂಬವನ್ನು ಸಂಕಷ್ಟಕ್ಕೆ ತಳ್ಳುತ್ತದೆ ಎಂಬುದು ಇದರಿಂದ ರುಜುವಾತಾಗಿದೆ; ಇಂಥಜೀವನ ಪದ್ಧತಿ ಬೇಕೇ ಎಂಬ ಪ್ರಶ್ನೆಯೂ ಮೂಡುತ್ತದೆ. ಇನ್ನು ಹೈನುಗಾರಿಕೆ ಮಾಡುತ್ತಲೇ ಸ್ನಾತಕೋತ್ತರ ಪದವೀಧರನಾದ ನಾನು, ನಡೆದು ಬಂದ ಹಾದಿಯನ್ನು ಮರೆಯಬಾರದು ಎಂಬ ಮನೋಭಿಲಾಷೆಯಿಂದ ಇಂದಿಗೂ ಕೂಡ ಕಷ್ಟವಾದರೂ ಸರಿಯೇ ಹೈನುಗಾರಿಕೆಯನ್ನು ಬಹಳ ಆಸ್ತೆಯಿಂದ ನಿರ್ವಹಿಸುತ್ತಿದ್ದೇನೆ. ಆದರೆ ಇಂದು ಹಸುಗಳ ಸಾಕಣೆ, ದಿನೇ ದಿನೇ ಏರುತ್ತಿರುವ ಪಶು ಆಹಾರದ ಬೆಲೆ ಹಾಗೂ ಮೇವಿನ ಕೊರತೆಯಿಂದ ತುಂಬಾಕಷ್ಟವಾಗುತ್ತಿದೆ, ನಾನೊಬ್ಬನೇಅಲ್ಲ , ಎಲ್ಲಾರೈತರು ಕಂಗಾಲಾಗಿ ಹೋಗಿದ್ದಾರೆ. ತಿಂಗಳ ಸಂಬಳ ಪಡೆದು ಜೊತೆಗೆ ವ್ಯವಸಾಯ- ಹೈನಗಾರಿಕೆ ಮಾಡುವ ನನಗೆ ಇಷ್ಟು ಕಷ್ಟವೆನಿಸಿದರೆ ವ್ಯವಸಾಯವನ್ನೇ ನಂಬಿ ಜೀವನ ನಡೆಸುವವರ ಪರಿಸ್ಥಿತಿ ಶಿವ ಶಿವಾ!
ಈ ರೀತಿಯ ಫಸಲು ನನ್ನೊಬ್ಬನ ಹೊಲದಲ್ಲಿ ಅಲ್ಲಎ ಲ್ಲರ ಹೊಲದ ಬೆಳೆಯೂ ಇದೇ ರೀತಿಯಾಗಿದೆ. ನಮ್ಮೂರಿನ ರೈತ ಸೂರಪ್ಪನೊಂದಿಗೆ ಮಾತನಾಡುತ್ತಿರುವಾಗ "ಇನ್ನು ಮುಂದೆ ನಾನು ವ್ಯವಸಾಯ ಮಾಡೋದಿಲ್ಲ "ಎಂದು ಹೇಳಿದಾಗ ಅವನು ಹೇಳಿದ ಅನುಭವದ ಮಾತು ಇನ್ನೂ ಭಾಗಶಃ ಸತ್ಯವಾಗಿ ಉಳಿದಿದೆ ಎಂದೆನಿಸುತ್ತಿದೆ. "ಇಷ್ಟೆಲ್ಲಾ ಆದರೂ ನಾವು ಮುಂಗಾರಿನ ಮಳೆ ಬೀಳುತ್ತಲೇ ಜೀವ ನಿಲ್ಲದೆ ಟ್ರಾಕ್ಟರ್ ಮಾಲೀಕರ ಮನೆ ಬಳಿ ಓಡಿ ಓಡಿ ಹೋಗಿ ಉಳುಮೆ ಮಾಡಿಸಲು ಹಾತೊರೆಯುತ್ತೇವೆ. ಕಾರಣ ಕೇಳಿದರೆ ಅಯ್ಯೋ ಮಣ್ಣನ್ನು ನಂಬಿ ಬದುಕುತ್ತಿರುವವರು ನಾವು "ಜೀವತಡೆಯದು" ಎಂದು ಹೇಳುತ್ತೇವೆ." ಎಂಥಾ ಅನುಭವದ ಮಾತು. ಬೆಳಕಿಗೆ ಆಕರ್ಷಿತವಾದ ಚಿಟ್ಟೆಗಳೆಲ್ಲ ಬೆಳಕಿನ ಸುತ್ತ ಸುತ್ತಿ-ಸುತ್ತಿರೆಕ್ಕೆ ಸುಟ್ಟು ಕೆಳಗೆ ಬೀಳುತ್ತಿದ್ದರೂ ಉಳಿದಿರುವ ಚಿಟ್ಟೆಗಳು ಮತ್ತೆ ದೀಪದ ಬೆಳಕಿನ ಸುತ್ತ ಹಾರಾಡುವಂತೆ ಆಗಿದೆ ನಮ್ಮ ನಾಡಿನ ರೈತರ ಪರಿಸ್ಥಿತಿ.
ಸರ್ಕಾರವೇನೋ ಬರ ಪರಿಹಾರ ಎಂಬ ತಾತ್ಕಾಲಿಕ ವ್ಯವಸ್ಥೆ ಮಾಡುವ ಸಲುವಾಗಿ "ಫ್ರೂಟ್ಸ್" ಎಂಬ ತಂತ್ರಾಂಶದಲ್ಲಿ ನಮ್ಮ ಹೊಲದ ಬೆಳೆಯ ಪರಿಸ್ಥಿತಿಯನ್ನು ಅಪ್ಲೋಡ್ ಮಾಡಬೇಕೆಂಬ ನಿಯಮತಂದಿದೆ. ಈ ನಿಯಮವೇನು ಒಳ್ಳೆಯದೇ. ಈ ನಿಯಮ 'ಪಹಣಿ' ಹೊಂದಿದರೈತರಿಗೆ ಬಹಳ ಅನುಕೂಲ. ಇಂದಿಗೂ ಕೂಡ ನಮ್ಮ ನಾಡಿನಲ್ಲಿ ಲಕ್ಷಾಂತರ ಜನ ರೈತರು ಪಹಣಿ ರಹಿತ ರೈತರಾಗಿದ್ದಾರೆ. ಅವರೆಲ್ಲರೂ ಭೂರಹಿತ ರೈತ ಕಾರ್ಮಿಕರಂತಾಗಿದ್ದಾರೆ. ಇಂಥ ದಾಖಲೆ ರಹಿತ ರೈತರ ಪರಿಸ್ಥಿತಿ ಖಂಡಿತವಾಗಿಯೂ ಅರಣ್ಯರೋದನವಾಗಿದೆ. ಏಕೆಂದರೆ ಇವರು ಪ್ರತಿವರ್ಷ ವ್ಯವಸಾಯ ಮಾಡಿದರೂ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯ ಸಿಗುತ್ತಿಲ್ಲ. ಪ್ರತಿ ವರ್ಷ ಸಿಗದಿದ್ದರೂ ಪರವಾಗಿಲ್ಲ ಆದರೆ ಈ ವರ್ಷ ಅವರ ಬರ ಪರಿಸ್ಥಿತಿಯನ್ನು ನೀಗಿಸಲು ಅಲ್ಪ ಸ್ವಲ್ಪವಾದರೂ ಬರ ಪರಿಹಾರ ಹಾಕಲೇಬೇಕೆಂದು ನಾನು ಈ ಮೂಲಕ ಕೋರುತ್ತೇನೆ.
ಈ ಬರ ಪರಿಹಾರವೆಂಬ ಪ್ರಹಸನವುಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ನಡುವಿನ "ತೆರಿಗೆ ಯುದ್ಧದಲ್ಲಿ " ರೈತರು ಖಂಡಿತವಾಗಿಯೂ ಹೈರಾಣಾಗಿ ಹೋಗಿದ್ದಾರೆ. ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ ನನಗೆ ಕ್ಲೀಶೆಯೆನಿಸಿದರೂ ಹೇಳಬೇಕೆನಿಸುತ್ತಿರುವುದು 'ಕುಮಾರವ್ಯಾಸ ಭಾರತ'ದ ಸಭಾ ಪರ್ವತದ ಮಾತುಗಳು, " ಅರಸು ರಾಕ್ಷಸ, ಮಂತ್ರಿ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ, ಬಡವರ ಬಿನ್ನಪವೇ ನಿನ್ನಾರು ಕೇಳುವರು......" ಎಂಬಂತಾಗಿದೆ. ಸಾಲದೆಂಬಂತೆ ಇತರ ವೃತ್ತಿ ಬಾಂಧವರು ನಮ್ಮ ಗೋಳಾಟ, ಪ್ರತಿಭಟನೆಗಳನ್ನು ನೋಡಿ "ಇವರದು ಇದ್ದದ್ದೇ "ಎಂದು ಮಾತನಾಡಿಕೊಳ್ಳುವಷ್ಟು ಅತಿಸಾರವಾಗಿ ಬಿಟ್ಟಿದೆ ರೈತರ ಬದುಕು. ಈಗ ನಾಡಿನ ಜನರು ಮಾಡಬೇಕಾದ ಕೆಲಸ ರೈತರ ಬದುಕನ್ನು ಹಸನು ಮಾಡುವ ಭೂಪಾಲ ಬರುವನು ಎಂದುಕಾಯುತ್ತಾ ಕುಳಿತಿರುವುದೊಂದೆ, ಆದರೆ ತಿಳಿದಿರಲಿ ಖಂಡಿತವಾಗಿಯೂ ಇದು ಸ್ಯಾಮುಯಲ್ ಬೆಕೆಟ್ ನ ಪ್ರಸಿದ್ಧ ಅಸಂಗತ ನಾಟಕ, ' Waiting for Godot' ನ ಪ್ರತಿರೂಪವಾಗಿರುತ್ತದೆ.
ಹೈನುಗಾರರ ಕಷ್ಟ ಹೇಳಲಾಗದು
ನಮ್ಮರಾಜ್ಯವುದೇಶದಲ್ಲೇರಾಜಸ್ಥಾನದತರುವಾಯಅತಿ ಹೆಚ್ಚು ಒಣ ಭೂಮಿ ಹೊಂದಿರುವರಾಜ್ಯವಾಗಿದೆ. ಆದರೂ ನಾವು ಇಂದು ಹಾಲಿನ ಉತ್ಪಾದನೆಯಲ್ಲಿದೇಶದಲ್ಲಿಎರಡನೇ ಸ್ಥಾನದಲ್ಲಿದ್ದೇವೆ. ಕೆಲವು ದಶಕಗಳ ಹಿಂದೆಕೃಷಿಯಲ್ಲಿಅಹಾರ ಮತ್ತು ಕಾಳುಗಳ ಉತ್ಪಾದನೆಗೆ ಪ್ರಥಮ ಆದ್ಯತೆ ಹೊಂದಿತ್ತು. ಮೇವು ಕೃಷಿಯ ಉಪ ಉತ್ಪನ್ನವಾಗಿತ್ತು. ರೈತರ ಮನೆಯ ಪಶುಗಳು ಕೃಷಿಗೆ ನೆರವಾಗಲು ಮತ್ತು ಮನೆಯ ಮಂದಿಗೆ ಹಾಲು ನೀಡಲಿಕ್ಕಷ್ಟೆ ಬಳಕೆ ಯಾಗುತ್ತಿದ್ದವು. ದಿನ ಕಳೆದಂತೆ ಕೃಷಿಯು ಕೈ ಕಚ್ಚಿದ್ದರಿಂದ ಜನರು ನಿಶ್ಚಿತ ಆದಾಯ ಕೊಡುವ, ಮಹಿಳೆಯರೂ ಕೂಡ ಅಚ್ಚುಕಟ್ಟಾಗಿ ನಿರ್ವಹಿಸಬಹುದಾದ ಕ್ಷೇತ್ರವಾಗಿ ಹೈನುಗಾರಿಕೆ ಮುನ್ನಲೆಗೆ ಬಂದಿತು. ಕೆ.ಎಂ.ಎಫ್‌ಕೂಡಾ ಯಶಸ್ವೀ ಸಹಕಾರ ಮಂಡಲವಾಗಿದ್ದರಿಂದ ರೈತರು, ಅದರಲ್ಲೂ ಸಣ್ಣ ಹಿಡುವಳಿ ದಾರರು ಹೆಚ್ಚೆಚ್ಚು ಹಾಲು ಉತ್ಪಾದಿಸ ತೊಡಗಿದರು. ಆದ್ದರಿಂದಲೇ ಕೆ.ಎಂ.ಎಫ್ ಏನೋ ಸುಸ್ಥಿತಿಯಲ್ಲಿದೆ. ಆದರೆ ರೈತರು ಸುಸ್ಥಿತಿಯಲ್ಲಿದ್ದಾರೆಯೇ? ಎಂದರೇ ಉತ್ತರ ಎಲ್ಲರಿಗೂಗೊತ್ತಿದೆ.
ಕೈ ಸುಡುತ್ತಿರುವ ಪಶು ಆಹಾರದ ಬೆಲೆ, ಕಾಲು-ಬಾಯಿ ರೋಗ, ಮೇವಿನ ಕೊರತೆಯಿಂದ ರೈತರು ಕೃಶವಾಗಿದ್ದಾರೆ. ನಮ್ಮೂರಿನ ಹಿರಿಯರೊಬ್ಬರ ಮಾತಿನಂತೆ ಮೇವಿನ ಕೊಳ್ಳುವಿಕೆ ಎಂಬುದು ಹೈನುಗಾರಿಕೆಗೆ 'ಬಿಳಿ ಅನೆ'ಯಾಗಿದೆ. ಸರ್ಕಾರದ ಅಧಿಕಾರಿಗಳು ಏಕೆ 'ಬರ ಎಂದರೆ ಬಲು ಇಷ್ಟ ' ಎಂದು ಕೊಂಡಿದ್ದಾರೆ ಎಂಬುದು ಬಹಳ ಹಿಂದೆಯೇ ಪಿ. ಸಾಯಿನಾಥ್ ತಮ್ಮ ಪುಸ್ತಕದಲ್ಲಿ ನೈಜವಾಗಿ ವಿವರಿಸಿದ್ದಾರೆ. ಇಂದು ತುಮುಲ್ ಪ್ರತಿ ಲೀಟರ್ ಹಾಲಿಗೆ ರೂ 32 ರ ಆಸುಪಾಸಿನಲ್ಲಿ ನೀಡುತ್ತಿದೆ. ಇನ್ನೂ ಹಾಲಿನ ಪ್ರೋತ್ಸಾಹಧನ ಅನಿಯಮಿತವಾಗಿ ಬರುವುದು ಸಹಜವಾಗಿದೆ. ಇದಕ್ಕೆ ಪರಿಹಾರ ಕಂಡು ಹಿಡಿಯಲೇಬೇಕಾದ ಅನಿವಾರ್ಯತೆ ಸರ್ಕಾರದ ಮುಂದಿದೆ.
ವಿಳಾಸ :
ರಘು ಜಿ ಎನ್ ಬಿನ್ ನಾರಾಯಣಪ್ಪ ಗಂಕಾರನಹಳ್ಳಿ , ಪುರವರ ಹೋಬಳಿ (572175) ಮಧುಗಿರಿ ತಾಲ್ಲೂಕ್ ತುಮಕೂರು ಜಿಲ್ಲೆ
ಫೋನ್:9740266059
bevarahani1