ಬ್ರಹ್ಮ ಸೃಷ್ಟಿಯಲ್ಲಿ ಹದವಾಗಿ ಬೆಂದವರು !
ಬ್ರಹ್ಮ ಸೃಷ್ಟಿಯಲ್ಲಿ ಹದವಾಗಿ ಬೆಂದವರು !
60ರ ಹಿನ್ನೋಟ
ಡಾ.ರಂಗಸ್ವಾಮಿ
ಪಂಚನಹಳ್ಳಿಯಲ್ಲಿ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಹೆಚ್ಚಾಗಿಯೇ ಇರಲಾಗಿ ಅವರಿಗೆಲ್ಲಾ ಊಟ, ತಿಂಡಿಗೆ ಅನುಕೂಲವಾಗುವಂತೆ ಒಂದು ಹೋಟೆಲಿನ ಅಗತ್ಯವಿತ್ತು. ಮೊದಮೊದಲು ನಾವು ಗಮನಿಸಿದಂತೆ ಪಂಚನಹಳ್ಳಿಯಲ್ಲಿ ಒಂದೆರಡು ಗುಡಿಸಲು ಹೋಟೆಲ್‌ಗಳಿದ್ದವು. ಅವುಗಳಲ್ಲಿ ಇಡ್ಲಿ, ವಡ, ಪುರಿ ಉಸಲಿ, ಕಾಫಿ, ಟೀ ಗಳನ್ನೂ ಮಾಡಲಾಗುತ್ತಿತ್ತು. ಅಲ್ಲಿ ಪೂರ‍್ಣ ಪ್ರಮಾಣದ ಊಟದ ವ್ಯವಸ್ಥೆ ಇರಲಿಲ್ಲ. ಸಾಮಾನ್ಯವಾಗಿ ಶಾಲಾ ಕಾಲೇಜು ಮಕ್ಕಳಿಗೆ ಅನುಕೂಲವಾಗುವಂತೆ ಸ್ವಲ್ಪ ಅನ್ನ ಸಾಂಬಾರು ನೀಡುತ್ತಿದ್ದ ನೆನಪು. ಆದರೆ ಎಷ್ಟೋ ಜನ ಸಂಸಾರ ಇನ್ನೂ ಇರದವರು ಮತ್ತು ಸಂಸಾರವನ್ನು ಊರುಗಳಿಗೆ ಕಳಿಸಿದಾಗ ಉತ್ತಮ ಮನೆ ವಾತಾವರಣದ ಭೋಜನ ವ್ಯವಸ್ಥೆ ಇರುವ ಮೆಸ್‌ನ ಅಗತ್ಯ ಮನಗಂಡ ಲಕ್ಕಮ್ಮ ಅಂತಹ ಮೆಸ್ ಅನ್ನು ಪ್ರಾರಂಭಿಸಿಬಿಟ್ಟರು. ರುಚಿಕಟ್ಟಾಗಿ ಅಡಿಗೆ ಮಾಡಿ ಮನೆಯಲ್ಲಿಯಂತೆಯೇ ಬಡಿಸುತ್ತಿದ್ದರಾಗಿ ಈ ಮೆಸ್ ಬಹಳ ಬೇಗ ಹೆಸರುವಾಸಿಯಾಯ್ತು. ನಮ್ಮ ಶಾಲೆಯ ಮಾಸ್ತರುಗಳೂ ಅಲ್ಲಿಗೆ ತಿಂಡಿ ಊಟಕ್ಕೆ ಅಂತ ಅಗತ್ಯ ಬಿದ್ದಾಗ ಹೋಗುತ್ತಿದ್ದರು. ಒಂದೊಂದು ಬಾರಿ ಅವರ ಅಚ್ಚು ಮೆಚ್ಚಿನ ವಿದ್ಯರ‍್ಥಿಯಾದ ನನ್ನನ್ನೂ ಜೊತೆಯಲ್ಲಿ ತಿಂಡಿಗೆ ಕರೆದೊಯ್ಯುತ್ತಿದ್ದರು. ಈ ಮೆಸ್ ಈಗಲೂ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಇಂದಿಗೂ ಹಾಗೇ ಉಳಿದುಕೊಂಡಿದೆ. ನಾವು ತುಮಕೂರಿನಿಂದ ಸಂಸಾರ ಸಮೇತವಾಗಿ ಊರಿಗೆ ಹೋಗಿ ಬರುವಾಗ ಊಟ ತಿಂಡಿಗಾಗಿ ಎಡತಾಕುವುದು ಇಲ್ಲಿಗೇನೆ. ಆ ಸಂದರ್ಭದಲ್ಲಿ ಇಲ್ಲಿ ನಡೆದ ಸ್ವಾರಸ್ಯಕರ ಘಟನೆಯೊಂದನ್ನು ಇಲ್ಲಿ ಹಂಚಿಕೊಳ್ಳಲೇಬೇಕು.
ಧಾರವಾಡ ಜಿಲ್ಲೆಯಿಂದ ಅಲ್ಲಿಯದೇ ಬಿಳಿ ಕಚ್ಚೆ ಪಂಚೆ, ಜುಬ್ಬಾವನ್ನು ಗರಿ ಗರಿಯಾಗಿ ಉಡುವ ವ್ಯಕ್ತಿಯೊಬ್ಬರು ಪಂಚನಹಳ್ಳಿಯಲ್ಲಿ ಪ್ರತ್ಯಕ್ಷವಾಗತೊಡಗಿದರು. ಪಂಚನಹಳ್ಳಿಗೆ ವರ‍್ಗವಾಗಿ ಬಂದ ಗ್ರಾಮ ಲೆಕ್ಕಿಗ ಇರಬಹುದು ಅಂತ ನೆನಪು. ಅವನ ಧಿರಿಸಿನಷ್ಟೆ ಅವನ ಭಾಷೆಯ ಸೊಗಡೂ ಬಹಳ ಆಕರ‍್ಷಣೀಯವಾಗಿತ್ತು. ಈ ವ್ಯಕ್ತಿಯು ಇನ್ನೂ ಒಬ್ಬಂಟಿಗನಾಗಿಯೇ ಇರಲಾಗಿ ಲಕ್ಕಮ್ಮನ ಮೆಸ್‌ನ ಮಾಮೂಲಿ ಸದಸ್ಯನಾಗಿದ್ದ. ಈತ ಬಂದು ತಿಂಡಿಗೆ ಅಂತ ಕೂತಾಗ ಲಕ್ಕಮ್ಮ “ಏನು ತಿಂಡಿ ಕೊಡಲಿ?” ಅಂತ ಕೇಳುತ್ತಿದ್ದಂತೆಯೇ, ಮುಸಿ ಮುಸಿ ನಗುತ್ತಾ “ಏನು ಬೆರಕಿ ಜನಾರಿ ನೀವು” ಅನ್ನಬೇಕೆ ಈ ಮನುಷ್ಯ. ಈ ಆಸಾಮಿಯ ಭಾಷೆಯನ್ನ ಪಂಚನಹಳ್ಳಿ ಅರ‍್ಥದಲ್ಲಿ ಗ್ರಹಿಸಿದ ಲಕ್ಕಮ್ಮ “ಹೇ, ಧಾರವಾಡಪ್ಪ, ಅದೇನು ಹಂಗಂತೀಯ? ಅದೇನು ಬೆರಕೆ ಗಿರಕೆ ಅಂತ ಮಾತಾಡ್ತೀಯ? ಅದ್ಯಾವ ಸೀಮೇನು ನೀನು? “ಅಂತ ರಂಪಾಟ ಶುರುಮಾಡಿಕೊಳ್ಳಲು ಈತ ಕಕ್ಕಾ ಬಿಕ್ಕಿಯಾಗಿ “ ನಾನೇನ ಅಂದೀನ್ರಿ ತಂಗ್ಯಮ್ಮಾ?” ಅಂತ ಪರಿತಪಿಸುವಂತಾಗಿದ್ದ ಧಾರವಾಡಪ್ಪ.
ಈತನಿಗೆ ನಮ್ಮ ಕಡೆ ಭಾಷೆಯಲ್ಲಿ ತಿಂಡಿ ಅಂತ ಲಕ್ಕಮ್ಮ ಹೇಳಿದ್ದುದು ತುರಿಕೆ ಅನ್ನುವಂತೆ ಅರ‍್ಥೆಸಿಕೊಂಡಿದ್ದ. ನಮ್ಮ ತಿಂಡಿ, ಆ ಕಡೆಯವರಿಗೆ ನಾಷ್ಠ. ಈ ರೀತಿ ಅಪರ‍್ಥವಾಗಿ ದೊಡ್ಡ ರಂಪಾಟವಾದ್ದು ಪಂಚನಹಳ್ಳಿ ಬಸ್ ಸ್ಟ್ಯಾಂಡ್ ನ ಸುಮಾರು ಒಂದು ವಾರದ ತಮಾಷೆೆಯ ಮಾತುಕತೆಯಾಗಿತ್ತು. ಯಾರೋ ಎರಡೂ ಕಡೆಯ ಭಾಷಾರ‍್ಥಗಳನ್ನು ಬಲ್ಲವರು ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ ಮೇಲೆ ಲಕ್ಕಮ್ಮ ನಕ್ಕು ಸುಮ್ಮನಾದರಂತೆ. ಆಮೇಲಾಮೇಲೆ ಲಕ್ಕಮ್ಮ “ಏನು ನಾಷ್ಟಾ ಕೊಡಲಿ?” ಅಂದರೆ, ಆತ “ನಾಷ್ಠ ಅಲ್ರಲಾ, ತಿಂಡಿ ತಿಂಡಿ” ಅಂತಿದ್ದನಂತೆ.
ಪಂಚನಹಳ್ಳಿಯ ಕೆರೆಯ ಹಿಂದೆ ಕರಲಕಟ್ಟೆ ಅನ್ನುವ ಮತ್ತೊಂದು ಸಣ್ಣ ಕಟ್ಟೆ ಇತ್ತು ಮತ್ತು ಈಗಲೂ ಇದೆ ಕೂಡ. ಈ ಕರಲಕಟ್ಟೆಯ ಮೇಲುಭಾಗದ ತೋಟದಲ್ಲಿ ನಾವು ಸ್ವಲ್ಪ ದಿನ ಹಂದಿಯ ಮಂದೆ ಹಾಕಿದ್ದೆವು. ಕರಲಕಟ್ಟೆಯ ನೀರು ಕೆರೆಯ ನೀರಿಗಿಂತ ತಿಳಿ ನೀಲಿ ಬಣ್ಣದಿಂದ ಶುಭ್ರವಾಗಿತ್ತು ಮತ್ತು ಆಗ ಯಾವಾಗಲೂ ತುಂಬಿರುತ್ತಿತ್ತು. ನಾನು, ನನ್ನ ತಮ್ಮ ಲಕ್ಷಣನಿಗೆ ಈ ನೀರಿನಲ್ಲಿ ಈಜುವುದೆಂದರೆ ತುಂಬಾ ಖುಷಿ. ನಮ್ಮ ಜೊತೆಯಲ್ಲಿ ಈಜಲು ನನ್ನ ಸೀನಿಯರ್ ಗಳಾದ ಶಿವಸ್ವಾಮಿ ಮತ್ತು ಮಂಜುನಾಥ್ ಅನ್ನುವ ಗೆಳೆಯರು ಜೊತೆಯಾಗುತ್ತಿದ್ದರು. ನಮ್ಮ ಹಾಸ್ಟಲ್ ನಲ್ಲಿ ಸ್ನಾನಕ್ಕೆ ಮತ್ತು ಬಟ್ಟೆ ಒಗೆಯಲು ಸರಿಯಾದ ವ್ಯವಸ್ಥೆ ಇರಲಿಲ್ಲವಾಗಿ ನಾವು ಸಾಮಾನ್ಯವಾಗಿ ಈ ಕರಲಕಟ್ಟೆ, ಕಣಕಟ್ಟೆ ಕೆರೆ, ತಿಮ್ಮಲಾಪುರದ ಮೆಟ್ಟಿಲ ಬಾವಿ ಮತ್ತು ಪಂಚನಹಳ್ಳಿ ಮತ್ತು ನಮ್ಮೂರ ಮಧ್ಯದ ಗಾರೆಕಟ್ಟೆಗಳನ್ನು ಉಪಯೋಗಿಸಿಕೊಳ್ಳುತ್ತಿದ್ದೆವು.
ನಾವು ಮಂದೆ ಹಾಕಿದ್ದ ತೋಟ ಸುಮಾರು ಇಲ್ಲಿಂದ ರ‍್ಧ ಮೈಲಿ ದೂರವಷ್ಟೆ ಇರಲಾಗಿ ನಾವು ಈಜಲು ನೀರಿಗೆ ಇಳಿಯುತ್ತಿದ್ದಂತೆ ಯಾರೋ ನಮ್ಮ ಅಪ್ಪನಿಗೆ ಸುದ್ದಿ ಮುಟ್ಟಿಸಿಬಿಡುತ್ತಿದ್ದರು. ಅಪ್ಪನಿಗೆ ಈಜು ಬರುತ್ತಿರಲಿಲ್ಲವಾಗಿ ಗಾಬರಿಯಿಂದ ಸಣ್ಣ ಕೋಲು ಹಿಡಿದು ದಡದಲ್ಲಿ ಬಂದು ನಿಂತುಬಿಡುತ್ತಿದ್ದರು. ನಮಗೆ ಆಚೆ ದಡಕ್ಕೆ ಈಜುವುದು, ಇಲ್ಲವೇ ಒದೆ ತಿನ್ನುವುದಷ್ಟೆ ಬಾಕಿ. ಆದರೆ ಕೊನೆಯಲ್ಲಿ ನಾವು ಒಂದು ಉಪಾಯ ಕಂಡುಕೊಂಡಿದ್ದೆವು. ನಾವು ಅಪ್ಪನ ಕಡೆಗೇ ಈಜುತ್ತಾ ಬಂದು ನೀರು ಕೋಳಿ ತರಹ ನೀರಿನಲ್ಲಿ ಮುಳುಗಿ ಅಪ್ಪನಿಂದ ಸ್ವಲ್ಪ ದೂರದಲ್ಲಿಯೇ ದಡ ಸೇರಿ ಬಟ್ಟೆಯನ್ನೂ ಎತ್ತಿಕೊಂಡು ಕೆರೆಯ ಏರಿ ಮೇಲೆ ನಿಂತು ಕೇಕೆ ಹಾಕುತ್ತಿದ್ದೆವು. ಅಪ್ಪ ನಾವು ಮುಳುಗಿದ್ದಕ್ಕೆ ಗಾಬರಿಯಿಂದ ಅತ್ತಲೇ ನೋಡುತ್ತಾ ಕೂಗಾಡುತ್ತಿದ್ದರೆ ನಾವಾಗಲೆ ಏರಿ ಮೇಲಿಂದ ಪರಾರಿಯಾಗಿರುತ್ತಿದ್ದೆವು.
ಈ ಕರಲಕಟ್ಟೆ ಭಾಗದ ತೋಟದಲ್ಲಿದ್ದಾಗ ನಡುರಾತ್ರಿಯಲ್ಲಿ ಒಂದು ಭಯಾನಕ ಘರ್ಜನೆ ಕೇಳಿಬಂತು. ಈ ಘರ್ಜನೆ ಚಿರತೆಯದು ಅಂತ ಅಪ್ಪ ಹೇಳಲಾಗಿ ನಮಗೆ ಹೃದಯ ಬಡಿತವೇ ನಿಂತ ಅನುಭವವಾಯ್ತು. ಆ ರಾತ್ರಿಯಲ್ಲಿ ಬೆಂಕಿ ಹಾಕಿಕೊಂಡು ಭಯದಿಂದಲೇ ರಾತ್ರಿ ಕಳೆದೆವು. ಈ ಘಟನೆಯ ನಂತರ ಅಪ್ಪ ಮತ್ತೆ ನಮ್ಮ ಊರಾದ ದೇವರ ಹೊಸಹಳ್ಳಿಗೇ ಸಂಸಾರ ಸಮೇತ ವಾಪಸ್ಸಾದರು. ನಾನು ಹಾಸ್ಟಲ್ ನಲ್ಲಿಯೇ ಮುಂದುವರೆದೆ.
ಪಬ್ಲಿಕ್ ಪರೀಕ್ಷೆ
ಬಹಳ ದಿನಗಳಿಂದ ನಿರೀಕ್ಷಿಸಿದ್ದ ಏಳನೇ ಕ್ಲಾಸಿನ ಪಬ್ಲಿಕ್ ಪರೀಕ್ಷೆ ಬಂದೇ ಬಿಟ್ಟಿತು. ಮೊದಲ ಬಾರಿಗೆ ಪಬ್ಲಿಕ್ ಪರೀಕೆಯಲ್ಲಿ ವೀಕ್ಷಕರು ಅದೆಷ್ಟು ಎಚ್ಚರದಿಂದ ಕಾಯುತ್ತಾರೆಂಬುದರ ಅರಿವಾಯ್ತು. ಈ ಹಿಂದಿನ ತರಗತಿಗಳ ಅಂತಿಮ ಪರೀಕ್ಷೆಯಲ್ಲೂ ತಕ್ಕ ಮಟ್ಟಿಗೆ ಇದೇ ತರಹ ಇರುತ್ತಿತ್ತಾದರೂ ಸ್ವಲ್ಪ ಅಕ್ಕ ಪಕ್ಕದವರಿಗೆ ಹೇಳಿಕೊಡಲು, ಅಥವಾ ಉತ್ತರ ಪತ್ರಿಕೆಯಾದರೆ ಸ್ವಲ್ಪ ಬಾಗಿಸಿ ತೋರಿಸಲು ಅವಕಾಶವಿರುತ್ತಿತ್ತು. ಆದರೆ ಈ ಪಬ್ಲಿಕ್ ಪರೀಕ್ಷೆಯಲ್ಲಿ ಮಾತ್ರ ನಮ್ಮ ಮಾಸ್ತರುಗಳು ಅಂದುಕೊAಡವರೇ ತುಂಬಾ ಸೀರಿಯಸ್ ಆಗಿ ಪೋಲೀಸರಿಗಿಂತಲೂ ಒಂದು ಪಟ್ಟು ಹೆಚ್ಚೇ ಕಾಪಿ ಹೊಡೆಯುವವರನ್ನು ಹಿಡಿದುಬಿಡುತ್ತಿದ್ದರು. ನಮ್ಮ ಅಕ್ಕ ಪಕ್ಕ ಕಾಪಿ ವೀರರಿದ್ದಾರೆಂದು ನಮಗೆ ಗೊತ್ತೇ ಇರುತ್ತಿರಲಿಲ್ಲ. ಆದರೆ ಈ ಇನ್ವಿಜಿಲೇಟರ್‌ಗಳು ಇವರನ್ನು ಮುಲಾಜಿಲ್ಲದೆ ಪತ್ತೆ ಹಚ್ಚಿಬಿಡುತ್ತಿದ್ದರು. ಅವರ ಅಂಗಿಯ ಕಾಜಾಗಳಿಂದಲೋ, ಕುತ್ತಿಗೆ ಕಾಲರ್‌ನ ಹಿಂದಿನಿಂದಲೋ ಆ ಕಾಪಿ ಚೀಟಿಯನ್ನು ಉದುರಿಸಿಬಿಡುತ್ತಿದ್ದರು. ಅದೆಲ್ಲಕ್ಕಿಂತ ಹೆಚ್ಚಾಗಿ ಇನ್ನೂ ಉತ್ತರ ಬರೆಯಲು ಇದ್ದಾಗ್ಯೂ, ಕೊನೆಯ ಬೆಲ್ ಹೊಡೆಯುತ್ತಿದ್ದಂತೆ ಉತ್ತರ ಪತ್ರಿಕೆಗಳನ್ನು ನಿರ್ದಾಕ್ಷಿಣ್ಯವಾಗಿ ಕಿತ್ತುಕೊಳ್ಳುತ್ತಿದ್ದುದು.
ಅಂತೂ ಪರೀಕ್ಷೆ ಮುಗಿದು ಬೇಸಿಗೆ ರಜೆಯೂ ಕಳೆಯಿತು. ಇದ್ದಕ್ಕಿದ್ದಂತೆ ಒಂದು ದಿನ ಫಲಿತಾಂಶ ಪ್ರಕಟವಾಗಿ ಹೈ ಫಸ್ಟ್ ಕ್ಲಾಸಿನಲ್ಲಿ ನಾವು ನಾಲ್ಕೆöÊದು ಜನ ಪಾಸಾಗಿದ್ದುದು ತಿಳಿಯಿತು. ಪಂಚನಹಳ್ಳಿ ಜೂನಿಯರ್ ಕಾಲೇಜಿಗೆ ಸೇರಿದ್ದೂ ಆಯ್ತು.
ಪಂಚನಹಳ್ಳಿಯಲ್ಲಿ ಎಂಟನೇ ತರಗತಿಗೆ ಸೇರಿದ ಸ್ವಲ್ಪ ದಿನಗಳಲ್ಲೆ ಚಿಕ್ಕಮಗಳೂರು ಜಿಲ್ಲಾ ಕೇಂದ್ರದ ಕಾಲೇಜು ಕಟ್ಟಡವೊಂದರಲ್ಲಿ ಮೆರಿಟ್ ಪರೀಕ್ಷೆಯನ್ನು ಬರೆಯಲು ಆಹ್ವಾನ ಬಂತು. ಈ ಹಿಂದೆ ಐದನೆ ಕ್ಲಾಸಿನಲ್ಲಿ ಆಣೇಗೆರೆಯಲ್ಲಿ ಸ್ಕೌಟ್ ಕ್ಯಾಂಪಿಗೆ ಹೋಗಿದ್ದಾಗ ಜಿ ಆರ್ ಎಂ ಮಾಸ್ತರು ಕರೆದುಕೊಂಡು ಹೋಗಿದ್ದರು. ಆದರೆ ಈ ಸಾರಿ ಹೋಗುವುದಾದರೂ ಹೇಗೆ ಅನ್ನುವುದು ನನ್ನನ್ನು ಕಾಡತೊಡಗಿತು. ಅದೂ ಆ ಪರೀಕ್ಷೆ ಬೆಳಿಗ್ಗೆಯೇ ಪ್ರಾರಂಭ ಆಗುವುದಿತ್ತು. ವಿಷಯ ಬೇರೆ ತಡವಾಗಿ ತಿಳಿದಿತ್ತು.
ಇದೇ ಯೋಚನೆಯಲ್ಲಿರುವಾಗ ನಮ್ಮ ಹಾಸ್ಟಲ್‌ನಲ್ಲಿ ಇಬ್ಬರು ಹೊಸದಾಗಿ ಆಯ್ಕೆಯಾಗಿ ಬಂದಿದ್ದ ಟೀಚರ್‌ಗಳಿದ್ದರು. ಒಬ್ಬರಂತೂ ಜಯಣ್ಣ, ಮತ್ತೊಬ್ಬರ ಹೆಸರು ನೆನಪಿಲ್ಲ. ಈ ಜಯಣ್ಣ ಅನ್ನುವವರ ಸಂಬಂಧಿಕರೊಬ್ಬರು ನಾವು ಪರೀಕ್ಷೆ ಬರೆಯಬಹುದಾದ ಕಾಲೇಜಿನ ಕಾಂಪೌAಡ್‌ಗೆ ಆತುಕೊಂಡಿದ್ದ ಕ್ವಾಟ್ರಸ್‌ನಲ್ಲಿ ವಾಸವಿದ್ದರು. ಅವರು ಅಂದು ರಜೆ ಚೀಟಿಯನ್ನ ಕಳಿಸಿಕೊಟ್ಟು ನನ್ನನ್ನು ಹಿಂದಿನ ದಿನವೇ ಈ ಸಂಬAಧಿಕರ ಮನೆಗೆ ಕರೆತಂದರು. ಆ ಮನೆಯಲ್ಲಿದ್ದ ರೂಮೊಂದರಲ್ಲಿ ನನಗೆ ಓದಲು ಅವಕಾಶ ಮಾಡಿಕೊಟ್ಟರು.
ಮಾರನೆ ದಿನ ಪರೀಕ್ಷೆಗೆ ಹಾಜರಾದಾಗ ರ‍್ಥವಾದದ್ದು, ಈ ಪರೀಕ್ಷೆ ಅಷ್ಟು ಸುಲಭವಲ್ಲ ಅಂತ. ಇಲ್ಲಿ ನನ್ನ ಪಠ್ಯೇತರ ಓದು ಉಪಯೋಗಕ್ಕೆ ಬಂತು. ನಾನು ಈ ಪರೀಕ್ಷೆಯಲ್ಲಿ ಮೂರನೆ ಕ್ರಮಾಂಕದಲ್ಲಿ ಉತರ‍್ಣನಾಗಿದ್ದು ಶಿಕ್ಷಕರ ವರ್ಗದಲ್ಲಿ ಸಂತಸ ತಂದಿತ್ತು. ಅಷ್ಟರಲ್ಲಾಗಲೇ ನಾನು ಪಂಚನಹಳ್ಳಿ ಜೂನಿಯರ್ ಕಾಲೇಜಿನಲ್ಲಿ ಎಂಟನೇ ತರಗತಿಗೆ ಸೇರಿಕೊಂಡದ್ದಾಗಿತ್ತು. ಮೆರಿಟ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗುವಷ್ಟರಲ್ಲಿ ಸುಮಾರು ನಾಲ್ಕರಿಂದ ಐದು ತಿಂಗಳವರೆಗೆ ಪಂಚನಹಳ್ಳಿಯಲ್ಲಿ ನನ್ನ ಎಂಟನೇ ತರಗತಿ ವಿದ್ಯಾಭ್ಯಾಸ ಮುಂದುವರೆಯಿತು. ಈ ಕಾಲಘಟ್ಟದ ಕೆಲವು ನೆನಪುಗಳು ನನ್ನಲ್ಲಿ ಉಳಿದಿವೆ.
ನಾವೆಲ್ಲಾ ಮಾಧ್ಯಮಿಕ ಶಾಲೆಯಲ್ಲಿರುವಾಗಲೆ ಜೂನಿಯರ್ ಕಾಲೇಜು ಮೈದಾನದಲ್ಲಿ ನಮ್ಮ ಸೀನಿಯರ್‌ಗಳು ಸೈನಿಕರಂತ ಧಿರಿಸಿನೊಂದಿಗೆ ʼಲೆಫ್ಟ್ ರೈಟ್, ಲೆಫ್ಟ್ ರೈಟ್ …. ರೈಟ್ ಎಬೌಟ್ ಟರ್ನ್, ದೈನೇ ಮೂಡ್ …ʼ ಅಂತ ಸರ‍್ಜೆಂಟ್ ಧ್ವನಿಗೆ ಲಯಬದ್ಧವಾಗಿ ಹೆಜ್ಜೆ ಹಾಕುತ್ತಿದ್ದುದು, ಸಲ್ಯೂಟ್ ಹೊಡೆವಾಗ ಬಲ ಅಂಗೈಯನ್ನು ಹಣೆಯ ಬಲಭಾಗಕ್ಕೆ ಬೆರಳ ತುದಿ ತಾಕುವಂತೆ ಇಟ್ಟು ಬಲಗಾಲನ್ನು ನೆಲಕ್ಕೆ ಟಪ್ ಅಂತ ಕುಕ್ಕುತ್ತಿದ್ದುದನ್ನು ನೋಡಿ ರೋಮಾಂಚಿತರಾಗುತ್ತಿದ್ದೆವು. ನಮಗೆ ಯಾವಾಗ ಈ ಎನ್‌ಸಿಸಿ ಸೇರುವ ಭಾಗ್ಯ ಅನ್ನುವಂತೆ ಪರಿತಪಿಸುತ್ತಿದ್ದೆವು. ಇದಕ್ಕಿಂತ ಮುಖ್ಯವಾಗಿದ್ದುದು ತಾಲೀಮು ಮುಗಿದ ಮೇಲೆ ನೀಡುತ್ತಿದ್ದ ಘಮ್ ಎನ್ನುವ ಬಿಸಿ ಉಪ್ಪಿಟ್ಟು. ಆ ಭಾಗ್ಯ ಈಗ ನಮ್ಮ ಮುಂದೆ ತೆರಕೊಂಡಿತ್ತು. ವಿಜಿಜಿ ಯವರು ಈ ವಿಭಾಗದ ಮುಖ್ಯಸ್ಥರಿದ್ದರು. ನಾನಿನ್ನೂ ಮಾಧ್ಯಮಿಕ ಶಾಲೆಯಲ್ಲಿರುವಾಗಲೆ ವಿಜಿಜಿ ಮತ್ತು ಇತರ ಶಿಕ್ಷಕರ ಪರಿಚಯವಾಗಿತ್ತು.
ಈ ವಿಜಿಜಿ ಬಗ್ಗೆ ಈ ಹಿಂದೆ ಪ್ರಸ್ತಾಪಿಸಿದ್ದೇನೆ. ಇವರದು ಸುಮಾರು ಆರು ಅಡಿ ಎತ್ತರದ ನಿಲುವು, ಗಿಣಿಮೂಗು ಅವರ ಮುಖದಲ್ಲಿ ಎದ್ದು ಕಾಣುವಂತೆ ಇದ್ದ ಭಾಗ. ನಮಗೆ ಎನ್ ಸಿ ಸಿ ಮುಖ್ಯಸ್ಥರಾಗಿದ್ದರಲ್ಲದೆ, ಹಿಂದಿ ಪ್ರಥಮ, ಮಧ್ಯಮಗಳಂತಹ ಪರೀಕ್ಷೆಗಳನ್ನು ಜರುಗಿಸುವ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದರು. ಉತ್ತಮ ʼಬ್ಯಾಟ್‌ಮಿಟನ್ʼ ಆಟಗಾರರೂ ಹೌದು. ಚೆನ್ನಾಗಿ ಓದುವ ಬಡ ಮತ್ತು ಕೆಳವರ್ಗದ ವಿದ್ಯಾರ್ಥಿಗಳನ್ನ ಕಂಡರೆ ಭಾರಿ ಪ್ರೀತಿ, ಈ ಕಾರಣಕ್ಕೋ ಏನೋ ನನ್ನನ್ನು ವಿಶೇಷವಾಗಿ ಪ್ರೋತ್ಸಾಹಿಸುತ್ತಿದ್ದವರಲ್ಲಿ ಇವರೂ ಒಬ್ಬರು. ನಮ್ಮ ಸೀನಿಯರ್ ಆಗಿದ್ದ ನನ್ನದೇ ಹೆಸರಿನ ರಂಗಸ್ವಾಮಿ ಅನ್ನುವ ತಮಿಳು ಮೂಲದ ವಿದ್ಯರ‍್ತಿ ಪ್ರತಿಭೆಯನ್ನು ಗುರುತಿಸಿ ಎನ್‌ಸಿಸಿ ಲೀಡರ್ ಮಾಡಿದ್ದರು. ನಾನು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಓದು, ಬರೆಯುವ ವಿಷಯದಲ್ಲಿ ಚೆನ್ನಾಗಿರುವದನ್ನು ಕಂಡು ಹಿಂದಿಗೆ ಸಂಬಂಧಪಟ್ಟ ಪರೀಕ್ಷೆಗಳನ್ನೆಲ್ಲಾ ಕಟ್ಟಲು ತಿಳಿಸಿ ಅವಕಾಶಗಳನ್ನು ಒದಗಿಸಿದರು. ಹಂಗಾಗಿ ನಾನು ಈ ಹೊತ್ತಿಗಾಗಲೇ ಪ್ರಥಮ, ಮಧ್ಯಮದಂತಹ ಪರೀಕ್ಷೆಗಳನ್ನು ಉತ್ತಮ ಅಂಕಗಳೊಂದಿಗೆ ಪಾಸುಮಾಡಿಕೊಳ್ಳಲು ಸಹಾಯವಾಯ್ತು.
ನನ್ನನ್ನು ಪ್ರೋತ್ಸಾಹಿಸುತ್ತಿದ್ದ ಮತ್ತೊಬ್ಬರೆಂದರೆ ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಮಹಾಬಲೇಶ್ವರ. ಕುಳ್ಳಗಿದ್ದ ಸ್ಫುರದ್ರೂಪಿ ಮತ್ತು ಗಂಭೀರವಾದ ವ್ಯಕ್ತಿತ್ವ ಇವರದು. ಬುದ್ಧಿವಂತ ಮತ್ತು ಒಳ್ಳೆ ಆಡಳಿತಗಾರನೆಂಬ ಹೆಸರಿತ್ತು ಇವರಿಗೆ. ಹಾಸ್ಟಲ್ ಮ್ಯಾನೇಜರ್‌ರೊಬ್ಬರ ಜೊತೆಗಿನ ಇವರ ಪ್ರಸಂಗವನ್ನು ಈಗಾಗಲೇ ತಿಳಿಸಿದ್ದೇನೆ. ಆಡಳಿತದಲ್ಲಿ ಕಟ್ಟು ನಿಟ್ಟಿನ ಮನುಷ್ಯನೆಂಬ ಕಾರಣಕ್ಕೆ ಕೆಲವರು ಇವರನ್ನು ಬಯ್ದುಕೊಳ್ಳುತ್ತಿದ್ದುದನ್ನು ನಾವು ಕೇಳಿಸಿಕೊಂಡಿದ್ದೇವೆ. ಶಿಕ್ಷಕರು ಪಾಠ ಮಾಡುವಾಗ ಏಕಾಏಕಿ ತರಗತಿಗಳಿಗೆ ಬಂದು ನಮಗೆಲ್ಲ ಆ ಟೀಚರ್ ಮಾಡುತ್ತಿದ್ದ ಪಾಠದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆ ಟೀಚರ್‌ಗೆ ಮಾತ್ರ ಒಂದು ಮಾತನ್ನೂ ತಿರುಗಿಸಿ ಹೇಳಿದ್ದನ್ನು ನಾವು ನೋಡಿಯೇ ಇಲ್ಲ. ಇಷ್ಟು ಮಾತ್ರಕ್ಕೇ ಶಿಕ್ಷಕರು ಉತ್ತಮ ತಯಾರಿಯೊಂದಿಗೆ ಬರುತ್ತಾರೆಂಬ ವದಂತಿಯೂ ಇತ್ತು. ಕಾಲೇಜಿನ ಸುತ್ತಮುತ್ತಲಿನ ಪರಿಸರದ ಬಗೆಯೂ ಕಾಳಗಿ ವಹಿಸುತ್ತಿದ್ದರು.
ಒಂದು ವಿಶಿಷ್ಟ ಕಾರಣಕ್ಕೆ ನೆನಪಿಟ್ಟುಕೊಳ್ಳಬಹುದಾದ ವ್ಯಕ್ತಿಯೆಂದರೆ ಲೆಕ್ಚರರ್ ಗೋಪಾಲ್. ಯಾವುದೇ ಸಭೆ ಸಮಾರಂಭದಲ್ಲಿ ಅವರದೇ ವಿಶಿಷ್ಟವಾದ ಮಾತುಗಾರಿಕೆ, ಮಧ್ಯೆ ಮಧ್ಯೆ ಪ್ರಾಸಂಗಿಕವಾಗಿ ಕಥೆಗಳನ್ನು ಹೇಳಿ ರಂಜಿಸುತ್ತಿದ್ದರು. ಈ ಗೋಪಾಲ್‌ರವರ ಮನೆ ಇದ್ದುದು ಕೂಡ ಆಗಿನ ಪಂಚನಹಳ್ಳಿ ಸರ್ಕಾರಿ ಆಸ್ಪತ್ರೆಯ ಮುಂಭಾಗದ ಪಂಚಾಯ್ತಿಯ ವಸತಿ ಸಮುಚ್ಛಯಗಳಲ್ಲಿ ಒಂದು. ಕೆಂಚಮಾರಯ್ಯನವರಿದ್ದ ಮನೆಯಿಂದ ನಾಲ್ಕನೆಯದೋ, ಐದನೆಯದೋ ಇರಬೇಕು. ಇವರು ಒಬ್ಬರೇ ಆ ಮನೆಯಲ್ಲಿ ವಾಸವಿರುತ್ತಿದ್ದರು. ನಮ್ಮ ಹಾಸ್ಟಲ್‌ನ ಕೆಲ ಹುಡುಗರು ಅದೂ, ಇದೂ ಸಣ್ಣ ಸಹಾಯ ಮಾಡಲು ಗೋಪಾಲ್‌ರವರ ಮನೆಗೆ ಹೋಗುತ್ತಿದ್ದರು. ಹೆಚ್ಚಾಗಿ ಹಾಸ್ಟಲ್ ಹುಡುಗರಾದ ನಾವು ಈ ರೀತಿ ಮಾಸ್ತರುಗಳ ಮನೆಗೆ ಹೋಗುತ್ತಿದ್ದುದು ನೀರು ತಂದು ಕೊಡಲು. ಪಂಚನಹಳ್ಳಿಯಲ್ಲಿ ಕೆರೆಯ ಮಧ್ಯೆ ಇದ್ದ ಒಂದೇ ಬಾವಿಯ ಬಗ್ಗೆ ಈ ಹಿಂದೆ ಪ್ರಸ್ತಾಪಿಸಿದ್ದೇನೆ. ಈ ವಸತಿ ಸಮುಚ್ಛಯದಿಂದ ಅಲ್ಲಿಗೆ ಸುಮಾರು ಒಂದು ಕಿ.ಮೀ. ದೂರವಾಗುತ್ತಿತ್ತು. ಒಂದಷ್ಟು ನಮಗೆ ಪಾಠ ಹೇಳಿಕೊಟ್ಟು ಸಹಕರಿಸುತ್ತಿದ್ದರಾಗಿ ನಾವು ಈ ಅಳಿಲು ಸೇವೆಯನ್ನು ಸಂತೋಷದಿAದಲೇ ಸ್ವೀಕರಿಸಿದ್ದೆವು.
ಗೋಪಾಲ್ ಮನೆಗೆ ಹೋದ ನಮ್ಮ ಹಾಸ್ಟಲ್ ಹುಡುಗರು ಅವರ ಮನೆಯಲ್ಲಿ ಕಸ ಗುಡಿಸದೆ ಇರುವ ಬಗ್ಗೆ. ಅಪ್ಪಿ ತಪ್ಪಿ ಇವರೆ ಕಸ ಗುಡಿಸಲು ಹೋದರೆ “ಬೇಡ ಬೇಡ, ಗುಡಿಸಬೇಡ್ರಿ. ದರಿತ್ರ ಬರುತ್ತೆ, ದರಿದ್ರ” ಅಂತ ತಡೆದುಬಿಡುತ್ತಿದ್ದರಂತೆ.
ಎಲ್ಲೆಂದರಲ್ಲಿ ಕಸ ಬಿದ್ದರೂ ಅವರಿಗೇನೂ ಅನ್ನಿಸುತ್ತಿಲಿಲ್ಲ. ಈ ಕುತೂಹಲದ ಕಾರಣಕ್ಕಾಗಿ ನಾವು ನೋಡುವುದಕ್ಕೋಸ್ಕರವೇ ಸರತಿಯ ಮೇಲೆ ಒಂದೊಂದು ಬಾರಿ ಅವರ ಮನೆಗೆ ಹೋಗಿ ಬರುತ್ತಿದ್ದೆವು. ಸುಮ್ಮನೆ ಗುಡಿಸಲು ಪೊರಕೆ ಹುಡುಕುತ್ತಿದ್ದೆವು. ತಕ್ಷಣವೇ ಅವರು ನಮ್ಮನ್ನು ತಡೆದುಬಿಡುತ್ತಿದ್ದರು. ಒಂದೊಂದು ಬಾರಿ ಅವರು ಕಾಲೇಜಿನಲ್ಲಿರುವಾಗ ನಮ್ಮ ಕೈಗೇ ಮನೆಯ ಕೀ ಕೊಡುತ್ತಿದ್ದರು. ಆಗ ಮೊದಲೇ ಕಸ ಗುಡಿಸದಂತೆ ಹೇಳಿ ಕಳಿಸಿಬಿಡುತ್ತಿದ್ದರು.
ಈ ವ್ಯಕ್ತಿಯನ್ನ ನಾವು ಅರೆ ಹುಚ್ಚನಂತೆ ಕಲ್ಪಿಸಿಕೊಂಡಿದ್ದೆವಾದರೂ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ವ್ಯಕ್ತಿಯು ಜ್ಞಾನಿಯೂ ಹೌದು ಅನ್ನುವುದು ಸಾಬೀತಾಯ್ತು. ಆ ಸಂದರ್ಭದಲ್ಲಿ ಈತ ಹೇಳಿದ ದೃಷ್ಟಾಂತವೊಂದನ್ನು ನೆನಪು ಮಾಡಿಕೊಳ್ಳುವುದು ಸೂಕ್ತವೆಂದು ಭಾವಿಸಿದ್ದೇನೆ. ಅದು ಬ್ರಹ್ಮ ಸೃಷ್ಟಿಯ ಬಗ್ಗೆ ಮಂಡಿಸಿದ ರೀತಿ:
ಭಾರತದವರು ಹದವಾಗಿ ಬೆಂದವರು
ಸೃಷ್ಟಿಕರ‍್ತ ಬ್ರಹ್ಮನಿಗೆ ಭೂಮಿಯ ಮೇಲೆ ಸಕಲ ಜೀವಿಗಳನ್ನೂ ಸೃಜಿಸಿದ ಮೇಲೂ ಕೂಡ ತೃಪ್ತಿಯಾಗಲಿಲ್ಲವಂತೆ. ಬ್ರಹ್ಮನ ಕೊನೆಯ ಸೃಷ್ಟಿಯೇ ಮನುಷ್ಯ. ರೂಪು, ಬುದ್ಧಿಮತ್ತೆಯಲ್ಲಿ ತನ್ನನ್ನೇ ಸರಿದೂಗುವ ಪ್ರತಿ ರೂಪವೊಂದನ್ನು ಸೃಷ್ಟಿಸಲು ಬಾಂಡಲಿಯಲ್ಲಿ ಎಣ್ಣೆ ಕಾಯಿಸಿಕೊಂಡು ಬ್ರಹ್ಮ ಹಸಿ ಮಾಂಸದ ಮುದ್ದೆ ಮಾಡಿಕೊಂಡು ನಿಂತನಂತೆ. ಮೊದಲಿಗೆ ಕಾಯಿಸಿದವುಗಳನ್ನು ಚುಂಚುಕದಿಂದ ಎತ್ತಿ ನೋಡಿದಾಗ ಸ್ವಲ್ಪ ಜಾಸ್ತೀನೆ ಬೆಂದು ಕೆಲವಂತೂ ಕರಕಲಾಗುವಷ್ಟು ಬೇಯಲಾಗಿ ಹದ ಸರಿಹೋಗದ್ದಕ್ಕೆ ಸ್ವಲ್ಪ ಬೇಜಾರಿನಿಂದಲೇ ಚುಂಚುಕದಿಂದ ಒಂದು ಕಡೆ ಎತ್ತಿ ಬಿಸಾಕಿದನಂತೆ. ಆ ಎಲ್ಲಾ ಹೋಗಿ ಆಫ್ರಿಕಾ ಖಂಡದಲ್ಲಿ ಬಿದ್ದವಂತೆ.
ಮತ್ತೊಮ್ಮೆ ಬ್ರಹ್ಮ ಮಾಂಸದ ಮುದ್ದೆಗಳನ್ನು ಹದವಾಗಿ ಕಾಯಿಸಲು ಹೋಗಿ ಸ್ವಲ್ಪ ಹಸಿಯಾಗಿಯೇ ಇರುವಾಗ ಎತ್ತಿ ನೋಡಿದರೆ ಇನ್ನೂ ಹಸಿ ಹಸಿ ಹಾಗೇ ಇತ್ತಂತೆ. ಇರಲಿ ಮತ್ತೆ ಕಾಯಿಸಿದರೆ ಕರಕಲು ಆಗಿ ಬಿಡಬಹುದು ಅಂತ ತೀರ್ಮಾನಿಸಿ ಭೂಮಿಯ ಮತ್ತೊಂದು ಭಾಗಕ್ಕೆ ಚುಂಚುಕದಿಂದ ಚಿಮ್ಮಿದನಂತೆ. ಈ ತುಂಡುಗಳು ಯೂರೋಪ್ ಖಂಡದಲ್ಲಿ ಹೋಗಿ ಬಿದ್ದವಂತೆ.
ಕೊನೆಯ ಪ್ರಯತ್ನವಾಗಿ ನೋಡಿಯೇ ಬಿಡೋಣ ಅಂದುಕೊಂಡು ಮತ್ತೊಮ್ಮೆ ಪ್ರಯತ್ನಿಸಿದಾಗ ಮಾಂಸದ ಮುದ್ದೆಗಳು ಹದವಾಗಿ ಬೆಂದು ಕಂದು ಬಣ್ಣಕ್ಕೆ ತಿರುಗಿದ್ದವಂತೆ. ಅವನ್ನು ಚುಂಚುಕದಿಂದ ಎಸೆದಾಗ ಭೂಮಿಯ ಭಾರತದ ಭಾಗದಲ್ಲಿ ಬಂದು ಬಿದ್ದವಂತೆ. ಹಂಗಾಗಿ ಭಾರತ ದೇಶದ ನಾವೆಂದರೆ ಸೃಷ್ಟಿಯ ಎಣ್ಣೆಯಲ್ಲಿ ಹದವಾಗಿ ಹುರಿದುಕೊಂಡು ಬೆಂದಿದ್ದವರು ಅನ್ನುವುದು ಗೋಪಾಲ್ ಮಾಸ್ತರರ ವಿವರಣೆ.
ಮನುಷ್ಯನ ವರ್ಣ ವೈವಿಧ್ಯತೆಯ ಬಗೆಗಿನ ಗೋಪಾಲ್ ವಿವರಣೆ ಹೇಗಿದೆ ನೋಡಿ!?