ದೇಶಕ್ಕೆ ಮಾದರಿಯಾದವರಿಗೆ ಯು.ಪಿ.ಮಾದರಿಯೇ..!

ದೇಶಕ್ಕೆ ಮಾದರಿಯಾದವರಿಗೆ ಯು.ಪಿ.ಮಾದರಿಯೇ..!

ದೇಶಕ್ಕೆ ಮಾದರಿಯಾದವರಿಗೆ ಯು.ಪಿ.ಮಾದರಿಯೇ..!

ದೇಶಕ್ಕೆ ಮಾದರಿಯಾದವರಿಗೆ ಯು.ಪಿ.ಮಾದರಿಯೇ..!

ರಾಜ್ಯದಲ್ಲಿ ಇದೀಗ ಮಾತು ಮಾತಿಗೂ ಉತ್ತರ ಪ್ರದೇಶದ ಜಪ.ಇದಕ್ಕಾಗಿ ಉತ್ತರಪ್ರದೇಶ ಮಾದರಿ ಅನುಸರಿಸುತ್ತೇವೆ.ಅದಕ್ಕಾಗಿ ಉತ್ತರಪ್ರದೇಶ ಮಾದರಿ ಎಂದು ಬಿಜೆಪಿ ಮತ್ತು ರಾಜ್ಯ ಸರ್ಕಾರದ ಪ್ರಮುಖರು ಹೇಳುತ್ತಿದ್ದಾರೆ.


ಹೌದು ಜಗತ್ತಿಗೆ ಪ್ರೀತಿಯ ಪಾಠ ಹೇಳಿ ದುಷ್ಟ ಶಿಕ್ಷಣ ಶಿಷ್ಟರಕ್ಷಣದೊಂದಿಗೆ ವಸುದೈವ ಕುಟುಂಬಕಂ‌ ಎಂದು ಸಾರಿದ ಮಥುರಾದ ಕೃಷ್ಣ , ಜಗತ್ತಿಗೆ ನಿರೀಶ್ವರ ವಾದ ಬೋಧಿಸಿದ ವಾರಾಣಾಸಿಯ ಶಿವ,ಸಾರನಾಥದ ಬುದ್ಧ ಮಾದರಿಯಾಗಿದ್ದರೆ ನಿಜಕ್ಕೂ ಹೆಮ್ಮೆಯಿಂದ ಬೀಗ ಬಹುದಿತ್ತು. ಇವುಗಳು ನಮಗಿರಲಿ ಉತ್ತರಪ್ರದೇಶಕ್ಕೆ ಮಾದರಿಯಲ್ಲ.ಇಲ್ಲಿ ಪ್ರಮುಖವಾಗಿ ಕೇಳಬರುವುದು ಶೋಷಣೆ, ದೌರ್ಜನ್ಯ,ಕೊಲೆ,ಸುಲಿಗೆ ಅದು ಹೇಗೆಂದರೆ ಜಮೀನ್ದಾರಿ ಠಾಕೂರ್ ಗಳ ಅಟ್ಟಹಾಸ,ಪಂಡಿತರ ಶೋಷಣೆ,ದಲಿತರ ಬವಣೆ,ಹಿಂದುಳಿದವರ ಜೀತ ಇದನ್ನು ಬಿಟ್ಟರೆ ಕೆಲ ಅಲ್ಪಸಂಖ್ಯಾತರ ಅಪರಾಧ ಕೃತ್ಯ ಇವುಗಳಿಂದಾಗಿ ಈ ರಾಜ್ಯದ ಜಿಡಿಪಿ ಧರ ತೀರಾ ಕೆಳಮಟ್ಟದಲ್ಲಿದ್ದರೆ, ನಿರುದ್ಯೋಗದ ಪ್ರಮಾಣ ಮೇಲ್ಮುಖವಾಗಿದೆ ಬಡತನ ಮಾಮೂಲು ಇಂತಹವುಗಳನ್ನು ಪಟ್ಟಿ ಮಾಡುತ್ತಾ ಸಾಗಬಹುದು. ಆದರೆ ಕರ್ನಾಟಕ ಇವುಗಳಿಗಿಂತ ಭಿನ್ನವಾದದು ಇಲ್ಲಿನ ಬಹುತೇಕ ಪಾನಿಪೂರಿ, ಬೀಡಾವಾಲಾಗಳು ಉತ್ತರಪ್ರದೇಶದವರೇ .


ಹೀಗಿದ್ದರೂ ನಮ್ಮ ರಾಜ್ಯದಲ್ಲಿ ಇದೀಗ ಉತ್ತರಪ್ರದೇಶ ಮಾದರಿಯದ್ದೇ ಮಾತು.ರಾಜ್ಯದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವ  ಪಣ ತೊಟ್ಟಿರುವ ಆಡಳಿತರೂಢ ಬಿಜೆಪಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಉತ್ತರಪ್ರದೇಶ ಮಾದರಿಯನ್ನು ಅನುಸರಿಸಲು ಮುಂದಾಗಿದೆ.


ಉತ್ತರ ಪ್ರದೇಶದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬರಲು ಬಿಜೆಪಿ ಕೇವಲ ನಿರ್ದಿಷ್ಟ ಜಾತಿಯ ಮತಗಳಿಗೆ ಸೀಮಿತವಾಗದೆ ಸಣ್ಣಪುಟ್ಟ ಸಮುದಾಯಗಳನ್ನು ಓಲೈಸಿಕೊಂಡಿತ್ತು ಇದೇ ತಂತ್ರವನ್ನು ಇಲ್ಲಿಯೂ ಬಳಸಲು ಬಿಜೆಪಿ ಚಿಂತಕರ ಚಾವಡಿ ಸಲಹೆ ಮಾಡಿದೆ.


ಬ್ರಾಹ್ಮಣ ಸಮುದಾಯದ ಮತಗಳು ಬಿಜೆಪಿಗೆ ಈಗಲೂ ಗಟ್ಟಿಯೇ. ಲಿಂಗಾಯತರನ್ನು ಯಡಿಯೂರಪ್ಪ ಮೂಲಕ ಬಿಜೆಪಿ ಹೇಗಾದರೂ ಒಲಿಸಿಕೊಳ್ಳುತ್ತದೆ. ಎಡಗೈ ದಲಿತ ಸಮುದಾಯದಲ್ಲಿ ಬೇರೆ ಪಕ್ಷಗಳಿಗಿಂತ ಬಿಜೆಪಿಗೆ ಹೆಚ್ಚು ಬೆಂಬಲ ಇದೆ. ಈಗ ಬಿಜೆಪಿಗೆ ಸಮಸ್ಯೆಯಾಗಿರುವುದು ಹಿಂದುಳಿದ ಮತ್ತು ಒಕ್ಕಲಿಗ ಸಮುದಾಯದ್ದು, ಇವುಗಳ ಓಲೈಕೆಗೆ ಬಿಜೆಪಿ ಮುಂದಾಗಿದೆ.


ಸುಮಾರು 200 ಜಾತಿಗಳು ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿವೆ  ಅವುಗಳಲ್ಲಿ ಕುರುಬ, ತಿಗಳ, ಈಡಿಗ, ಉಪ್ಪಾರ ಇತ್ಯಾದಿ ಸಮುದಾಯಗಳು. ರಾಜ್ಯದಲ್ಲಿ ಶೇ.30ಕ್ಕಿಂತ ಹೆಚ್ಚಿವೆ. ಒಕ್ಕಲಿಗ, ಲಿಂಗಾಯತ ಸಮುದಾಯಗಳಂತೆ ಈ ವರ್ಗಗಳಲ್ಲಿ ಐಕ್ಯತೆ ಕಡಿಮೆ. ಹಿಂದುಳಿದ ಎನ್ನುವುದು ಜಾತಿಯ ವರ್ಗೀಕರಣವಾಗಿ ಮಾತ್ರ ಉಳಿದಿದೆ. ಹೀಗಾಗಿ, ಯಾವ ಪಕ್ಷಕ್ಕೂ ಅದು ಮತ ಬ್ಯಾಂಕ್ ಆಗಿ ಪರಿಗಣಿತವಾಗಿಲ್ಲ.


ಕುರುಬ ಸಮುದಾಯ ಮಾತ್ರ ರಾಜಕೀಯವಾಗಿ ನಿರ್ಧಾರಿತ ಸ್ಥಿತಿಯಲ್ಲಿದ್ದಾರೆ. ಒಕ್ಕಲಿಗರಿಗೆ ದೇವೇಗೌಡರು ಪರಮೋಚ್ಚ ನಾಯಕರಾಗಿರುವಂತೆ ಕುರುಬರಿಗೆ ಸಿದ್ದರಾಮಯ್ಯರೇ ಮೇರು. ಹಿಂದುಳಿದ ವರ್ಗಗಳಲ್ಲಿ ಕುರುಬರ ಸಂಖ್ಯೆ ಶೇ. 8ಕ್ಕಿಂತ ಹೆಚ್ಚು ಇದೆ. ಇವರನ್ನು ಬಿಟ್ಟು ಇತರ ನೂರಕ್ಕೂ ಹೆಚ್ಚು ಹಿಂದುಳಿದ ಸಮುದಾಯಗಳನ್ನು ಓಲೈಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್ ಪರವಾಗಿಲ್ಲದ ಹಿಂದುಳಿದ ಸಮುದಾಯಗಳನ್ನು ಗುರುತಿಸಿ ಅವುಗಳನ್ನು ಗಟ್ಟಿ ಮಾಡಿಕೊಳ್ಳುವುದು ಬಿಜೆಪಿಯ ಗುರಿ. ಇದಕ್ಕಾಗಿ ಇದಕ್ಕೆ ದೊರೆತಿರುವುದು ಉತ್ತರಪ್ರದೇಶ ಮಾದರಿ. ಈ ಸಮುದಾಯಗಳನ್ನು ಒಲಿಸಿಕೊಳ್ಳಲು ಕೆಲ ಭಾವನಾತ್ಮಕ ಅಂಶಗಳನ್ನು ಅಳವಡಿಸಿಕೊಂಡರೆ ಸಾಕು ಎನ್ನುವುದು ಸಾಕಷ್ಟು ಬಾರಿ ಸಾಬೀತಾಗಿರುವ ಅಂಶ. ರಾಜ್ಯದ ಕರಾವಳಿ ಈಗಾಗಲೇ ಈ ವಿಷಯವಾಗಿ ಪ್ರಯೋಗ ಶಾಲೆಯಾಗಿದೆ.


ಇದನ್ನು ಮತ್ತಷ್ಟು ಆಳಕ್ಕೆ ಕೊಂಡೊಯ್ಯುವ ಸಂಬಂಧ‌ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರ ಜೊತೆ ಕೆಲಅಂಶಗಳು ಚರ್ಚೆಯಾಗಿವೆ.ಅವರ ರಾಜ್ಯ ಭೇಟಿಯ ಸಮಯದಲ್ಲಿ ರಾಜ್ಯದ ಬಿಜೆಪಿ ನಾಯಕರ ಜೊತೆಗೆ ಸಂಘ ಪರಿವಾರದ ಮುಖಂಡರೂ ಮಾತುಕತೆ ನಡೆಸಿದ್ದಾರೆ.


ಪ್ರಮುಖವಾಗಿ ಉತ್ತರಪ್ರದೇಶದಲ್ಲಿ ಜಾರಿಯಲ್ಲಿರುವ ಬುಲ್ಡೋಜರ್ ಕಾನೂನು, ಮದರಸಾಗಳ ನಿಯಂತ್ರಣದ ಕಾನೂನು ಈಗಾಗಲೇ ಚರ್ಚೆಯಲ್ಲಿದೆ.ಬಿಜೆಪಿ ಆಡಳಿತ ಪಕ್ಷವಾಗಿ ಅಲ್ಲಿ ಅನುಸರಿಸಿದ ಕಾರ್ಯತಂತ್ರ ಇಲ್ಲಿ ಅನುಕರಣವಾಗುತ್ತಿದೆ.


ಹಾಗೇ ನೋಡಿದರೆ ಸರ್ವ ಜನಾಂಗದ ಶಾಂತಿಯ ತೋಟ ಎಂದು ದೇಶಕ್ಕೆ ಮಾದರಿಯಾದ ಕರ್ನಾಟಕ ಇಲ್ಲಿನ ಉದ್ಯೋಗ ಸೃಷ್ಟಿ, ಕೃಷಿ, ತಲಾ ವರಮಾನ, ವಸತಿ, ಆರೋಗ್ಯ, ಶಿಕ್ಷಣ ,ಕಾನೂನು ಸುವ್ಯವಸ್ಥೆ ಎಲ್ಲದರಲ್ಲೂ ಉತ್ತರಪ್ರದೇಶಕ್ಕಿಂತ ಕರ್ನಾಟಕ ಮೇಲ್ಮುಖವಾಗಿದೆ ಇತ್ತೀಚಿನ ಕೆಲ ಅಪವಾದಗಳನ್ನು ಹೊರತುಪಡಿಸಿದರೆ ಸಹಿಷ್ಣುತೆಯ ವಿಷಯದಲ್ಲೂ ಕರ್ನಾಟಕವೇ ಮೊದಲು.


ಜಗತ್ತಿಗೆ ಕಾಯಕ ತತ್ವ ಸಮಾನತೆಯನ್ನು ಸಾರಿದ ಬಸವಣ್ಣನಿಂದ ಹಿಡಿದು ಇತ್ತೀಚಿನ ಐ.ಟಿ.ಕ್ರಾಂತಿಯವರೆಗೆ ಕರ್ನಾಟಕವೇ ದೇಶದಲ್ಲಿ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ.


ದಲಿತ ಚಳವಳಿ, ಕನ್ನಡ ಚಳವಳಿ, ರೈತ ಹೋರಾಟ, ಉಳುವವನೆ ಭೂಮಿಯ ಒಡೆಯ ಎಂಬ ತತ್ವದ ಭೂ ಸುಧಾರಣೆ,ಸ್ಥಳೀಯ ಸಂಸ್ಥೆಗಳ ಸಬಲೀಕರಣ, ಚುನಾವಣೆಯಲ್ಲಿ ಹಿಂದುಳಿದ ವರ್ಗಗಳು ಮತ್ತು ಮಹಿಳಾ ಮೀಸಲಾತಿ ದೊಡ್ಡ ದಾಖಲೆಯೇ ಸರಿ.


ಇನ್ನೂ ರಾಜಕೀಯ ಪ್ರಜ್ಞೆಯ ವಿಷಯಕ್ಕೆ ಬಂದರೆ ಸಮಾಜವಾದಕ್ಕೆ ಬಿಹಾರ ತವರು ಮನೆಯಾದರೆ ಇದಕ್ಕೆ ನೀರೆರದು ಬೆಳೆಸಿ ಪೋಷಿಸಿದ್ದು ಕರ್ನಾಟಕ.


ಜನತಾ ಪರಿವಾರದ ಉಗಮ, ಪ್ರಗತಿಗೆ ವೇದಿಕೆಯಾಗಿದ್ದು ಕರ್ನಾಟಕವೇ


ತುರ್ತು ಪರಿಸ್ಥಿತಿ ನಂತರ ಪರ್ಯಾಯ ರಾಜಕಾರಣದ ಚಿಂತನೆ ಆರಂಭವಾಗಿದ್ದು ಕರ್ನಾಟಕದ ಜೈಲಿನಲ್ಲಿ.ನಂತರ ಅದು ಬೇರೆಡೆ‌ ಪಸರಿಸಿ ಅಂದಿನ ಇಂದಿರಾಗಾಂಧಿ ಸರ್ಕಾರದ ವಿರುದ್ಧ ಸೆಡ್ಡು ಹೊಡೆದ ರಾಜಕೀಯ ಶಕ್ತಿಯ ಉಗಮವಾಗಿದ್ದು ಕರ್ನಾಟಕದಲ್ಲೇ.


ಇದಿಷ್ಟೇ ಅಲ್ಲ ಸೋತು ಸುಣ್ಣವಾಗಿದ್ದ ಕಾಂಗ್ರೆಸ್ ಗೆ ಮರುಹುಟ್ಟು ನೀಡಿದ್ದೂ  ಕೂಡ ಕರ್ನಾಟಕವೇ. ಇದಾದ ಬಳಿಕ ಜನತಾದಳ ವಿಭಜನೆಯಾಗಿ ಎನ್.ಡಿ.ಎ. ಜನ್ಮ ತಾಳಿದ್ದೂ ಕೂಡಾ ಕರ್ನಾಟಕದಲ್ಲಿಯೇ.


ಹೀಗೆ ಪಟ್ಟಿ ಮಾಡುತ್ತಾ ಸಾಗಿದರೆ ಹಲವು ಮೊದಲುಗಳಿಗೆ ವೇದಿಕೆಯಾಗಿದ್ದು ಕರ್ನಾಟಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಆರೋಗ್ಯ ಸೇರಿದಂತೆ ಹಲವು ವಲಯಗಳಲ್ಲಿ ಕರ್ನಾಟಕ ದೇಶಕ್ಕೆ ಮಾದರಿ.ಇಂತಹ ರಾಜ್ಯದಲ್ಲಿ ಇದೀಗ ಅಸಹಿಷ್ಣುತೆ,ಅಸಹಕಾರ, ಅಸಮಧಾನ, ನಿರುದ್ಯೋಗ, ಬಡತನವೇ ವಿಜೃಂಭಿಸುತ್ತಿರುವ ಉತ್ತರಪ್ರದೇಶವನ್ನು ಮಾದರಿ ಎಂದು ಬಣ್ಣಿಸುತ್ತಿರುವುದು,ಅನುಸರಿಸ ಹೊರಟಿರುವುದು ಮಾತ್ರ ದುರಂತ..

ಯುಪಿ ಮಾದರಿ ಏಕೆ ಬೇಕು?

ತುಮಕೂರು: ಎಲ್ಲ ದೃಷ್ಟಿಯಲ್ಲೂ ಕರ್ನಾಟಕವೇ ದೇಶಕ್ಕೆ ಮಾದರಿಯಾಗಿರುವಾಗ ಯುಪಿ ಮಾದರಿ ರಾಜ್ಯವನ್ನಾಗಿ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿರುವುದು ಹಾಸ್ಯಾಸ್ಪದ ಎಂದು ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಪ್ರಶ್ನಿಸಿದರು.

ಕರ್ನಾಟಕಕ್ಕೆ ಭವ್ಯ ಇತಿಹಾಸವಿದೆ. ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರಿಂದ ಆರಂಭಿಸಿ ಕೆಂಗಲ್ ಹನುಮಂತಯ್ಯನವರು, ವೀರೇಂದ್ರ ಪಾಟೀಲರು, ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಜೆ.ಹೆಚ್.ಪಟೇಲ್, ದೇವೇಗೌಡರು, ಎಸ್.ಎಂ.ಕೃಷ್ಣ ಹಾಗೂ ಇತ್ತೀಚಿನ ಸಿದ್ಧರಾಮಯ್ಯವರೆಗೆ ಎಲ್ಲರೂ ಉತ್ತಮ ಆಡಳಿತ ನಡೆಸಿ ರಾಜ್ಯವನ್ನು ಅಭಿವೃದ್ಧಿ ಪಡಿಸಿದ್ದಾರೆ. ಜೊತೆಗೆ ರಾಜ್ಯದ ರಾಜಧಾನಿ ಸಿಲಿಕಾನ್ ಸಿಟಿ ಎಂದು ಹೆಸರು ಪಡೆದು ದೇಶದ ಎಲ್ಲೆಡೆಯಿಂದ ಕಲಿಯಲು, ದುಡಿಯಲು ಯುವಕರು ಇಲ್ಲಿಗೆ ಬರುತ್ತಿರುವಾಗ ಕರ್ನಾಟವನ್ನು ಯುಪಿ ಮಾಧರಿ ಮಾಡುವುದಾಗಿ ಹೇಳುವ ಮೂಲಕ ಬೊಮ್ಮಾಯಿ ರಾಜಕೀಯ ದೂರದೃಷ್ಟಿ ಇಲ್ಲದವರೆಂದು ತೋರಿಸಿಕೊಂಡಿದ್ದಾರೆಂದು ಟೀಕಿಸಿದರು.