ಸಿನಿಮಾ ಉತ್ಸವದ ಗುಂಗಿನಲ್ಲಿ

ಸಿನಿಮಾ ಉತ್ಸವದ ಗುಂಗಿನಲ್ಲಿ

ಸಿನಿಮಾ ಉತ್ಸವದ ಗುಂಗಿನಲ್ಲಿ

 

ಮಾರ್ಚ್ 23 ರಿಂದ 30 ರವರೆಗೆ ಒರಾಯನ್ ಮಾಲ್ ನಲ್ಲಿರುವ ಸಿನಿಮಾ ಮಂದಿರಗಳಲ್ಲಿ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಬಹುಪಾಲು ಸಿನಿಮಾಗಳನ್ನು ನಮ್ಮ ನಾಗರಾಜ ಶೆಟ್ಟಿಯವರು ನೋಡಿ ಬರೆದ ಟಿಪ್ಪಣಿಗಳಿವು. ಯಾವ ಉತ್ಸವಗಳಿಗೆ ಹೋಗದೇ ಇದ್ದರೂ ಚಿತ್ರೋತ್ಸವಗಳನ್ನು ತಪ್ಪಿಸಿಕೊಳ್ಳುವುದಿಲ್ಲ ಎನ್ನುವ ಇವರು ಈ ಉತ್ಸವದಿಂದ ಏನನ್ನೂ ಪಡೆದುಕೊಂಡಿಲ್ಲವೆನ್ನಲಾರೆ” ಎನ್ನುತ್ತಾರೆ ಇವರು. 


ನಾಗರಾಜಶೆಟ್ಟಿಯವರು ತುಮಕೂರಿನವರೇ, ಇಲ್ಲೇ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಲೇ ಭೂಮಿ ಬಳಗದ ಸೋಮಣ್ಣ, ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಹಾಗೂ ತುಮಕೂರಿನಲ್ಲಿ ನೆಲೆಸಿರುವ ಕರಾವಳಿಯ ಭಂಟರ ಬಳಗದೊಂದಿಗೆ ಸೇರಿ ಸಾಹಿತ್ಯ, ಸಂಸ್ಕೃತಿ ಅಂತ ಒದ್ದಾಡುತ್ತಿದ್ದವರು, ನಿವೃತ್ತಿಯಾದ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸಿನಿಮಾ ಉತ್ಸವಗಳಲ್ಲಿ ಸಿನಿಮಾ ನೋಡುವ ಸಮಯಕ್ಕಿಂತ ಹೆಚ್ಚು ಹೊತ್ತು ಕ್ಯೂಗಳಲ್ಲಿ ನಿಲ್ಲಬೇಕಾಗುತ್ತದೆ, ಹೀಗೆ ಗಂಟೆಗಟ್ಟಲೆ ಕಾದು ಸಿನಿಮಾ ನೋಡುವವರಲ್ಲಿ ಮಕ್ಕಳ ಮುಗ್ದತನವಿರುತ್ತದೆ. ನಾಗರಾಜ ಶೆಟ್ಟಿಯವರ ಪುಟ್ಟ ಪುಟ್ಟ ಟಿಪ್ಪಣಿಗಳು ಜಾಗತಿಕ ಸಿನಿಮಾ ಲೋಕದೊಳಕ್ಕೆ ನಿಮ್ಮನ್ನು ಇಣುಕಿ ನೋಡುವಂತೆ ಮಾಡುತ್ತವೆ, ಓದಿ - ಸಂಪಾದಕ 

ನಾಗರಾಜಶೆಟ್ಟಿ

ಚಿತ್ರೋತ್ರವದ ಗುಂಗು  ಒಂದೆರೆಡು ದಿನ  ಇರುವಂತೆ ಗೆಳೆಯರ ಒಡನಾಟ,ಹೊಸ ಗೆಳೆಯರ ಸಹವಾಸ ಒದಗಿಸಿದ ಚೈತನ್ಯ ಮರೆಯುವಂತಿಲ್ಲ.ಉತ್ಸವಗಳೆಂದರೆ ಇದೇ ಅಲ್ಲವೇ,ದಣಿದ ಮನಸ್ಸುಗಳಿಗೆ ಹುರುಪು ತುಂಬಿ ಭರವಸೆಯನ್ನು ಹೊಂದುವುದು!

ಚಿತ್ರೋತ್ಸವದಲ್ಲಿ ಏಳು ದಿನ ಒಂಟಿಯಾಗಿ ಸಿನಿಮಾ ನೋಡಿದ್ದೇ ಇಲ್ಲ.ಆಡಿಟೋರಿಯಂ ಪ್ರವೇಶಿಸುತ್ತಲೇ ಬೀಸುವ ಕೈಗಳು ಕಾಣುತ್ತಿದ್ದವು,ಅಥವಾ ನಾನೇ ಕೈ ಬೀಸುತ್ತಿದ್ದೆ. ಚರ್ಚೆ,ವಿವರಣೆ ಮತ್ತು ಭಿನ್ನಾಭಿಪ್ರಾಯಗಳು ಕೂಡಾ ನಮ್ಮ ದುಷ್ಟಕೂಟದ ಅಂಗವಾಗಿ ಚಿತ್ರ ನೋಡುವ ಸೊಗಸನ್ನು ಹೆಚ್ಚಿಸಿತು.

ಈಗ ಬೆಂಗಳೂರಿನ 24 ಡಿಗ್ರಿ ಸೆಖೆಯಲ್ಲಿ‌ ತಣ್ಣಗೆ ಕುಳಿತು ನೋಡಿದ 24 ಸಿನಿಮಾಗಳಲ್ಲಿ  ಮನಸ್ಸಿಗೆ ತಟ್ಟಿದ್ದೆಷ್ಟು ಎಂದು ಯೋಚಿಸುತ್ತಿದ್ದೇನೆ‌.ನಾನು ಮನರಂಜನೆಗೆ‌ ಚಿತ್ರ ನೋಡುವವನಲ್ಲ.ಬಾಹುಬಲಿ, RRR ನನಗೆ ರುಚಿಸುವುದಿಲ್ಲ.ಇದು ನನ್ನ ಆಯ್ಕೆ.ನನಗಿಂತ ಭಿನ್ನ ಅಭಿರುಚಿಯಿರುವವರ ಬಗ್ಗೆ ನನ್ನದೇನೂ ತಕರಾರಿಲ್ಲ.ಚಿತ್ರೋತ್ಸವದಲ್ಲಿ ಕೆಲವು ಚಿತ್ರಗಳು ಕಾಡಿವೆ,ಅರಿವನ್ನು ಹೆಚ್ಚಿಸಿವೆ,ಹೊಸ ಅನುಭವವನ್ನು ಒದಗಿಸಿವೆ‌.ಅಂತಹ ಚಿತ್ರಗಳ‌ ಕಿರು ನೋಟ ಇಲ್ಲಿದೆ:

ಕಾಡಿದ ಸಿನಿಮಾಗಳು

ಚಿಂತನೆಗೆ ಹಚ್ಚುವ ಸಿನಿಮಾಗಳು ನನಗಿಷ್ಟ.ಆ ರೀತಿಯಲ್ಲಿ ಗುಂಗಿ ಹುಳದಂತೆ‌ ಕೊರೆವ ಚಿತ್ರಗಳು: Wood Cutter Story ಮತ್ತು RMN. ಮಿದುಳನ್ನು  ಸ್ಕಾನ್ ಮಾಡುವ ವಿಧಾನವೊಂದಕ್ಕೆ R M N ಎಂದು ಹೇಳಲಾಗುತ್ತದಂತೆ.ಮಥಾಯಿಸ್ ತಂದೆಯ ಮಿದುಳಲ್ಲಿ ಗಡ್ಡೆಯಿದೆ.ಬೇರೊಂದು ರೀತಿಯ ಕ್ಯಾನ್ಸರ್ ನಂತ  ಗಡ್ಡೆ ಎಲ್ಲರ ಮಿದುಳಲ್ಲೂ ಬೆಳೆಯುತ್ತಿದೆ.ಅದು ಈ ಕಾಲದ ಜನಾಂಗೀಯ ಭಾವನೆ.ಭಾಷೆ,ಧರ್ಮ,ರಾಷ್ಟ್ರೀಯತೆ,ಹುಟ್ಟು ಇವುಗಳು ಸಂಬಂಧಗಳನ್ನು,ಬದುಕನ್ನು ಸಮಸ್ಯಾತ್ಮಕವಾಗಿಸುವುದರ ಬಗ್ಗೆ,ತೀರ್ಮಾನವನ್ನು ಕೊಡದೆ ನಿರ್ದೇಶಕ ಮುಂಗ್ಯು  ಚಿತ್ರ ರೂಪಿಸಿದ್ದಾರೆ.ರುಮಾನಿಯದ ಈ ಚಿತ್ರ ಮತ್ತೆ,ಮತ್ತೆ ನೋಡಬೇಕೆನಿಸುವಂತಿದೆ.

Triangle of Sadness ರೂಪದರ್ಶಿಗಳಿಬ್ಬರ ಕತೆಯೆನ್ನುವ  ಕುತೂಹಲ ಹುಟ್ಟಿಸಿದರೂ ಕ್ಯಾಪಿಟಲಿಸಂನ ಅಸಹ್ಯ ಮುಖವನ್ನು ಅನಾವರಣ ಮಾಡುವುದರೊಂದಿಗೆ ಕಮ್ಯುನಿಸಂನ್ನೂ ಪ್ರಶ್ನೆ ಮಾಡುತ್ತದೆ.ಖ್ಯಾತ ನಿರ್ದೇಶಕ ರೂಬೆನ್ ಒಸ್ಟ್ ಲುಂಡ್ ನಿರ್ದೇಶನದ ಚಿತ್ರದಲ್ಲಿ ರಂಜನೀಯ ಅಂಶಗಳೂ ಇವೆ.

ಪ್ರತಿಯೊಂದು ದೇಶದಲ್ಲು ಅದರದೇ ಅಧ ಸಮಸ್ಯೆಗಳಿರುತ್ತವೆ.ಕೆಲವು ನಾವು ಎದುರಿಸುವ ಸಮಸ್ಯೆಗಳಿಗೆ ಸಂವಾದಿಯಾಗಿಯೂ ಇರುತ್ತವೆ. ಅಂತಹ‌ ಚಿತ್ರಗಳಲ್ಲಿ ತುಂಬಾ  ಇಷ್ಟವಾದ ನಮ್ಮದೇ ಸಿನಿಮಾ, ಫೋಟೋ. ದುರ್ಗ್ಯಾ ಎನ್ನುವ ಬಾಲಕನ ಸಣ್ಣ ಅಸೆಯೆಂಬಂತೆ ತೋರುವ ಚಿತ್ರ,ಹೆಚ್ಚು ವಿವರಗಳಿಗೆ ಹೋಗದೆ ಏನು ಹೇಳಬೇಕೋ ಅದನ್ನು ನೇರವಾಗಿ ಹೇಳಿಬಿಡುತ್ತದೆ.ಮನೆ ಕತ್ತಲಲ್ಲಿರುವಾಗ ದೀಪ‌ ಬೆಳಗಿಸುವುದು,ಬುಡಮೇಲಾದ ಖಾಲಿ ಸಿಲಿಂಡರ್ ಮೇಲೆ ಕೂತಿರುವುದು,ತಟ್ಟೆ ಬಡಿಯುವುದು,ಜಾಲಿ ಮರ ಇಂತಹ ಪ್ರತಿಮೆಗಳ‌ ಮೂಲಕ ನವ ನಿರ್ದೇಶಕ ಉತ್ಸವ್ ಗೋನ್ವಾರ್ ತಮ್ಮ ಛಾಪು ಮೂಡಿಸಿದ್ದಾರೆ‌.ದುರ್ಗ್ಯಾ,ಅವನ ತಂದೆ,ತಾಯಿ,ಮಾವ ಇವರ ಅಭಿನಯ ಕೊನೆಯ ದೃಶ್ಯ ಮರೆಯಲಾರದ ಅನುಭವ ನೀಡುತ್ತದೆ.

ಪ್ರಶಸ್ತಿ ನೀಡುವಲ್ಲಿ  ಈ ಚಿತ್ರಕ್ಕೆ ಅನ್ಯಾಯವಾಗಿದೆ ಎನ್ನುವುದಕ್ಕೆ ಕಣಿ ಕೇಳಬೇಕಿಲ್ಲ.ಮೊದಲ ಬಹುಮಾನಕ್ಕೆ ಅರ್ಹವಾದ  ಚಿತ್ರ ಇದಾಗಿತ್ತು.

 

No Bears ಚಿತ್ರದಲ್ಲಿ ಖ್ಯಾತ ಇರಾನಿಯನ್ ನಿರ್ದೇಶಕ ಜಾಫರ್ ಫನಾಹಿ ನಂಬಿಕೆ,ಕಟ್ಟು ಪಾಡುಗಳು,ಸರ್ಕಾರದ ಹತೋಟಿ,ಸಂಬಂಧಗಳು,ಇವುಗಳನ್ನು ಪರೀಕ್ಷೆಗೊಳಪಡಿಸುತ್ತಾರೆ.ಈ‌ ಚಿತ್ರ ತೆರೆ ಕಾಣುವ ಮೊದಲೇ ಜಾಫರ್ ಫನಾಹಿಯವರನ್ನು ಇರಾನಿಯನ್ ಸರ್ಕಾರ ಆರು ವರ್ಷಕಾಲ‌ ಸೆರೆಮನೆಗೆ ತಳ್ಳಿದೆ ಎನ್ನುವುದು ಗಮನಿಸಬೇಕಾದ ವಿಷಯ.

When the Wave are Gone  ಚಿತ್ರದಲ್ಲಿ ಫಿಲಿಪೈನ್ಸ್ ನಲ್ಲಿ ಮಾದಕ ದ್ರವ್ಯ ವ್ಯವಹಾರವನ್ನು ಹತೋಟಿಯಲ್ಲಿಡುವ ನೆವದಲ್ಲಿ ಸರ್ವಾಧಿಕಾರಿ ಡುಕಾರ್ಟೆ ಅತಿರೇಕದ ಕ್ರಮಗಳನ್ನು ಕೈಕೊಂಡ.ಮಾನವ ಹಕ್ಕುಗಳನ್ನು ಉಲ್ಲಂಘಿಸಿ ,ಹಲವರನ್ನು ಹತ್ಯೆ ಮಾಡಲಾಯಿತು.ಸರಕಾರದ ಅಂಗಗಳನ್ನು ನಿರ್ದಯವಾಗಿ ಬಳಸಿಕೊಳ್ಳಲಾಯಿತು. ನಿರ್ದೇಶಕ ಇಬ್ಬರು‌ ಪೋಲೀಸ್ ಅಧಿಕಾರಿಗಳ‌ ಮೂಲಕ ತಣ್ಣಗೆ ಕರುಳು‌ ದ್ರವಿಸುವಂತೆ‌ ಈ ಕ್ರೌರ್ಯವನ್ನು ಕಟ್ಟಿಕೊಡುತ್ತಾರೆ.ಫಿಲಿಪೈನ್ಸ್ ನ ದುರಂತ‌ಕ್ಕೆ  ಸಾಕ್ಷಿಯಂತಿರುವ ಈ ಚಿತ್ರದ ನಿರ್ದೇಶಕ ಲಾಜ್ ಡಯಾಸ್.

 

Until Tomorrow ಸಿನಿಮಾ ಧರ್ಮಾಧಾರಿತ ರಾಷ್ಟ್ರದಲ್ಲಿ ಹೆಣ್ಣೊಬ್ಬಳ‌ ಸಂಕಟಗಳ‌ ಕಡೆಗೆ ಗಮನ ಹರಿಸುತ್ತದೆ. ಪೆಟ್ರಿಯಾರ್ಕಿಯೊಂದಿಗೆ,ಹೆಣ್ಣಿನ ಅಸಹಾಯಕತೆಯನ್ನು,ಕಾನೂನಿನ ತೊಡಕುಗಳನ್ನು  ಚಿತ್ರ ಬಿಚ್ಚಿಡುತ್ತದೆ.

 

ಈ‌ ಕಾಲದ ಮಹಿಳಾ ನಿರ್ದೇಶಕಿಯರು ಸವಾಲುಗಳನ್ನು ಸ್ವೀಕರಿಸಿ,ವಿಶಿಷ್ಟವಾದ ರೀತಿಯಲ್ಲಿ ಸಿನಿಮಾ ಕಟ್ಟುತ್ತಾರೆ.ಆ ರೀತಿಯ ಮೂರು ಚಿತ್ರಗಳು: Snow and the Bear ಹಿಮಾಚ್ಛಾದಿತ ಟರ್ಕಿಯ ಗಡಿ ಪ್ರದೇಶದ ಸುಂದರ ಛಾಯಾಗ್ರಹಣದ ಚಿತ್ರ ಪ್ರಕೃತಿ ಮತ್ತು ಮನುಷ್ಯನ  ಅಂತರ್ ಸಂಬಂಧವನ್ನು ಸೊಗಸಾಗಿ ಕಟ್ಟಿ ಕೊಡುತ್ತದೆ. ನಿರ್ದೇಶಕಿ ಸೆಸೆನ್ ಎರ್ಗುನ್

Klondike ಯುಕ್ರೇನ್ ನಲ್ಲಿ ಸ್ವಾಯತ್ತತೆಯನ್ನು ಬಯಸುವವರು ಮತ್ತು ಪ್ರತ್ಯೇಕತಾವಾದಿಗಳು ರಷ್ಯಾದ ನೆರವಿನೊಂದಿಗೆ ಗಡಿ ಪ್ರದೇಶದಲ್ಲಿ‌ ಅಂತರ್ಯುದ್ಧ ಮಾಡುವ ಸಂದರ್ಭದಲ್ಲಿ‌ ಕುಟುಂಬವೊಂದರ‌ ದುರಂತದ ಸಿನಿಮಾ.

ಅಮಾಯಕ ಮಹಿಳೆಯರಿಗೆ ಚಿತ್ರವನ್ನು ಅರ್ಪಿಸಿರುವ ನಿರ್ದೇಶಕಿ ಮರ್ಯಾನಾ ಗೋರ್ಬಾಕ್ ಯುದ್ಧದ ಪರಿಣಾಮಗಳನ್ನು‌ ನಿರ್ಲಿಪ್ತತೆಯಿಂದ ನಿರ್ವಹಿಸಿದ್ದಾರೆ.

Before Now and Then ಎಲ್ಲಾ ಅನುಕೂಲತೆಗಳಿದ್ಧರೂ‌ ಹೃದಯದ ಮಾತನ್ನು ಕೇಳುವ ಸಂಪ್ರದಾಯಸ್ಥ ಇಂಡೋನೇಷ್ಯಾದ ಮಹಿಳೆಯ ದಿಟ್ಟ‌ ನಿರ್ಧಾರವನ್ನು  ನಿರ್ದೇಶಕಿ ಕಮಿಲಾ ಆಂಡಿನಿ ಸಂಯಮದಿಂದ‌ ಕಟ್ಟಿಕೊಟ್ಟಿದ್ದಾರೆ.

ಇವಲ್ಲದೆ ಪಾಲೆಸ್ತೀನಿಯನ್ ಸಿನಿಮಾ Alam, ತಮ್ಮ ನೆಲದಲ್ಲಿ‌ ಪರಕೀಯಾಗುವ ತರುಣರ ಕತೆಯನ್ನು ಆಪ್ತವಾಗಿ ಕಟ್ಟಿಕೊಡುತ್ತದೆ.

Boy from Heaven ನಲ್ಲಿ ಅಮಾಯಕ ಹುಡುಗನೊಬ್ಬನನ್ನು ದಾಳವಾಗಿ ಬಳಸುವುದನ್ನು ಕಾಣಬಹುದು.ಚಿತ್ರಕತೆಗೆ ಹಲವು ಪ್ರಶಸ್ತಿಗಳನ್ನು ಪಡೆದ ಈ‌ ಚಿತ್ರ ಕ್ಲಿಷ್ಟ ವಿಷಯವನ್ನು ಸೊಗಸಾಗಿ ಹಿಡಿದಿಡುತ್ತದೆ.

 

ಉತ್ತಮ ಚಿತ್ರಗಳನ್ನು ನೋಡಿದ ಸಿಹಿ ನೆನಪುಗಳೊಂದಿಗೆ ಚಿತ್ರೋತ್ಸವದಲ್ಲಿ ಕಹಿಯೂ ಇರುತ್ತದೆ. ಕೆಲವು ತಪ್ಪುಗಳು ಪ್ರತಿ ಚಿತ್ರೋತ್ಸವದಲ್ಲಿ ಪುನರಾವರ್ತನೆಯಾಗುತ್ತಲೇ ಇವೆ.

ಸಿನೋಪ್ಸಿಸ್ ನಲ್ಲಿ ಪ್ರತಿ ಸಲವೂ ತಪ್ಪುಗಳು. A Minor ಎನ್ನುವ ಚಿತ್ರಕ್ಕೆ ನೀಡಿದ ವಿವರಣೆಗೂ ಚಿತ್ರಕ್ಕೂ‌ ಸಂಬಂಧವೇ ಇಲ್ಲ.ಅದೇ ರೀತಿ‌ ಕನ್ನಡ ಇಂಗ್ಲಿಷ್ ಅನುವಾದದಲ್ಲಿ ತಪ್ಪುಗಳಿವೆ. ಸಕಾಲದಲ್ಲಿ ಸಿನೋಪ್ಸಿಸ್,ಡೆಲಿಗೇಟ್ ಪಾಸ್ ಒದಗಿಸದಿರುವುದು,ಸಿನಿಮಾಗಳ‌ ಆಯ್ಕೆಯಲ್ಲಿ ತಾರತಮ್ಯ ನಡೆಯುತ್ತಲೇ ಇದೆ.

ಚಿತ್ರೋತ್ಸವದಲ್ಲಿ ಒಳಗೊಳ್ಳುವಿಕೆ ಇರಬೇಕು.ವರ್ಷಗಳಿಂದ ಆಸನ‌ ಬಿಟ್ಟಗಲದವರನ್ನು ಬದಲಿಸಿ,ಪ್ರಾತಿನಿಧಿಕ‌ ಸಮಿತಿಯನ್ನು ರಚಿಸಬೇಕು. ಬೆಂಗಳೂರಲ್ಲಿ ಮಾತ್ರಾ ಪ್ರದರ್ಶನಗೊಳ್ಳುವ ಬದಲು ಆಯ್ದ ಸ್ಥಳಗಳಲ್ಲಿ ಕೆಲವು ಉತ್ತಮ ಚಿತ್ರಗಳನ್ನು  ಪ್ರದರ್ಶಿಸಬೇಕು.ತುಮಕೂರು,ಮೈಸೂರು,ದಾವಣಗೆರೆ ಇಂತಹ ಸ್ಥಳಗಳಲ್ಲಿ ಪ್ರದರ್ಶನ ವ್ಯವಸ್ಥೆ ಮಾಡುವುದು ಕಷ್ಟವೇನಲ್ಲ.

ಜಗತ್ತಿಗೆ ಬೆಳಕಿಂಡಿಯಾಗಿರುವ  ಸಿನಿಮಾಗಳನ್ನು ನೋಡುವ,ಅರ್ಥಮಾಡಿಸುವ,ಅಭಿರುಚಿ ಬೆಳೆಸುವ ಕೆಲಸ ಚಿತ್ರೋತ್ಸವಗಳಿಂದ ಸಾಧ್ಯ.ಅದಕ್ಕಾಗಿ ಚಿತ್ರೋತ್ಸವಗಳು ವಿಕೇಂದ್ರೀಕರಣಗೊಳ್ಳಬೇಕು.ಚಲನಚಿತ್ರ ಅಕಾಡೆಮಿ ಜಿಲ್ಲಾ ಮಟ್ಟದಲ್ಲಿ ಕೇರಳದಂತೆ ಚಿತ್ರಸಮಾಜಗಳನ್ನು ಬೆಳೆಸಬೇಕು.ಇಲ್ಲದಿದ್ದರೆ,ಸಿನಿಮಾ ಎಂದರೆ  ನಾಟ್ಟು‌,ನಾಟ್ಟು ಗೆ ಹೆಜ್ಜೆ ಹಾಕುವುದು ಎಂದಾಗುತ್ತದೆ.


01


'ಫೋಟೋ'


14 ನೇ ಬೆಂಗಳೂರು ಚಲನಚಿತ್ರೋತ್ಸವ ಹೊಸ,ಭರವಸೆಯ ನಿರ್ದೇಶಕನೊಬ್ಬನನ್ನು ಪರಿಚಯಿಸಿದೆ ಎಂದು ನಿಸ್ಸಂಕೋಚದಿAದ ಹೇಳಬಹುದು.'ಫೋಟೋ' ಕನ್ನಡ ಚಿತ್ರ ನೋಡಿದವರೆಲ್ಲರನ್ನು ತರುಣ ನಿರ್ದೇಶಕ ಉತ್ತಮ್ ಗೋನ್ವಾರ್ ಸೆಳೆದಿದ್ದಾರೆ.


ಪ್ರಚಾರವೇ ಇಲ್ಲದ 'ಫೋಟೋ' ಸಿನಿಮಾದ ಪೋಸ್ಟರ್ ನಲ್ಲಿರುವುದು ಮುಗ್ಧ ಬಾಲಕನೊಬ್ಬನ ಚಿತ್ರ.ಅಷ್ಟಾಗಿಯೂ ಹೊಸಬರೇ ನಟಿಸಿರುವ,ಕಡಿಮೆ ಬಜೆಟ್ಟಿನ,ಹೊಸ ತಂತಜ್ಞರ ಈ ಚಿತ್ರ ಅಚ್ಚರಿಯ ಸಾಧನೆ ಮಾಡಿದೆ.


ದುರ್ಗ್ಯಾನಿಗೊಂದು ಸಣ್ಣ ಅಸೆ.ವಿಧಾನ ಸೌಧದ ಮುಂದೆ ಫೋಟೋ ತೆಗೆಸಿಕೊಳ್ಳುವುದು.ಕಾಡಿಬೇಡಿ, ಅಪ್ಪ ಕೂಲಿ ಕೆಲಸ ಮಾಡುವ ಬೆಂಗಳೂರಿಗೆ ಬರುತ್ತಾನೆ.ಇದ್ದಕ್ಕಿದ್ದಂತೆ ಲಾಕ್ ಡೌನ್ ಹೇರಿದಾಗ ಅಪ್ಪ ಮಗ ದೂರದ ಮಸ್ಕಿಗೆ ಹೊರಡಬೇಕಾಗುತ್ತದೆ. ಅವರ ನಡಿಗೆಯೊಂದಿಗೆ ಚಿತ್ರ ಸಾಗುತ್ತದೆ. ಪ್ರತಿ ಹೆಜ್ಜೆಯನ್ನು ಸಿನಿಮಾ ಕಟ್ಟಿಕೊಡುತ್ತದೆ.ಮನುಷ್ಯರಾದವರ ಕಣ್ಣು ಆರ್ದವಾಗಿಸುತ್ತದೆ.


ಮಹದೇವ ಹಡಪದ, ಜಹಂಗೀರ್, ಸುಧಾ ಅರಕೆರೆ,ಎಲ್ಲಿದ್ದರು ಇವರೆಲ್ಲ?ಇಂತವರಿದ್ದರೆ ಸ್ಟಾರ್ ಗಳು ಯಾಕೆ ಬೇಕು? ದುರ್ಗ್ಯಾನ ಪಾತ್ರದ ಹುಡುಗನಂತೂ ಕಣ್ಣಲ್ಲೇ ಕಾಡುತ್ತಾನೆ.


ತಟ್ಟೆ ಬಡಿಯುವುದು, ದೀಪ ಹಚ್ಚುವುದು ಮುಂತಾದವುಗಳೊಂದಿಗೆ, ವಿಧಾನ ಸೌಧದ ಫೋಟೋ ಹರಿದೆಸೆಯುವ ರೂಪಕ ಪರಿಣಾಮಕಾರಿಯಾಗಿದೆ. ರಾಯಚೂರಿನ ಭಾಷೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ.


02


UNTILL TOMORROW


ಅಲಿ ಆಸ್ಗರಿಯ ಚಿತ್ರ ವಿವಾಹ ಬಾಹಿರ ಸಂಬಂಧದಿಂದ ಹುಟ್ಟಿದ ಮಗುವನ್ನು ತಂದೆತಾಯಿಗೆ ತಿಳಿಯದಂತೆ ಬಚ್ಚಿಡಲು ಯತ್ನಿಸುವ ಹೆಣ್ಣೊಬ್ಬಳ ಕತೆ.


ಇದನ್ನು ಹೇಳುವಾಗ ನಿರ್ದೇಶಕ ಹೆಣ್ಣೊಬ್ಬಳ ಪಾಡಿನ ಜೊತೆಗೆ ಗಂಡಸರ ಆಷಾಢಭೂತಿತನವನ್ನೂ ಬಯಲು ಮಾಡುತ್ತಾನೆ.


ಫರೆಸ್ಟೆ ತಾನು ವಾಸಿಸುವ ಅಪಾರ್ಟ್ ಮೆಂಟಿನಲ್ಲೂ ಮಗುವಿನ ದಿರಿಸುಗಳನ್ನಿರಿಸಲು ಕಷ್ಟ ಪಡುತ್ತಾಳೆ.ಸ್ನೇಹಿತೆಯೊಬ್ಬಳು ನಿಶ್ಚಿತವಾಗಿ ಸಹಾಯ ಮಾಡುತ್ತಾಳೆಂಬ ಭರವಸೆಯಿಂದ ಹೋದಾಗ ಪೋಲೀಸರು ಕಾರಣ ಕೊಡದೆ ಆಕೆಯನ್ನು ಬಂಧಿಸಿರುತ್ತಾರೆ.ಮಗುವಿನ ತಂದೆಯೆನಿಸಿಕೊಂಡವ, ನರ್ಸ್ ಒಬ್ಬಳನ್ನು ಗೊತ್ತು ಪಡಿಸಿಯೂ ಮಗು ತನ್ನದೇ ಎಂದು ಒಪ್ಪಿಕೊಳ್ಳಲಾರ.ಹಾಸ್ಪಿಟಲಿನ ಹಿರಿಯ ಅಧಿಕಾರಿ ಫರಿಸ್ಟೆಯನ್ನು ಬಳಸಿಕೊಳ್ಳಲು ಇಚ್ಚಿಸುತ್ತಾನೆ.ಫರಿಸ್ಟೆ ಉಪಾಯ ಕಾಣದೆ ಗೆಳತಿಯ ಡಾರ್ಮೆಂಟರಿಯಲ್ಲಿ ಮಗುವನ್ನು ಬಿಟ್ಟು ಬರುತ್ತಾಳೆ.ಅದರೆ ಸಂಕಟ ತಡೆದುಕೊಳ್ಳಲಾರಳು.


ಇದು ಸರಳ ಕತೆಯನ್ನು ಪರಿಣಾಮಕಾರಿಯಾಗಿ ದೃಶ್ಯ ರೂಪಕ್ಕೆ ತರುವ ಸಿದ್ಧ ಮಾದರಿಯ ಇರಾನ್ ಸಿನಿಮಾ.


03

SNOW AND THE BEAR


ಹಿಮಾಚ್ಛಾದಿತ ಟರ್ಕಿಯ ಗಡಿ ಪ್ರದೇಶದ ಸುಂದರ ಛಾಯಾಗ್ರಹಣದ ಚಿತ್ರವಿದು.


ನರ್ಸ್ ಒಬ್ಬಳು ಕೆಲಸಕ್ಕೆ ಸೇರಿದ ಕಾಲದಲ್ಲಿ ವ್ಯಕ್ತಿಯೊಬ್ಬ ಕಣ್ಮರೆಯಾಗುತ್ತಾನೆ. ಹಿಮಕರಡಿಗಳು ಆಹಾರ ದೊರಕದೆ ಮನುಷ್ಯರನ್ನೇ ತಿನ್ನುತ್ತವೆ ಎನ್ನುವ ಅನುಮಾನವಿರುತ್ತದೆ. ಕಾಡಿನ ಬಗ್ಗೆ ಬಲ್ಲ ವ್ಯಕ್ತಿಯೊಬ್ಬ,ತನ್ನ ತಂದೆ ಹಿಮಕರಡಿಗೆ ಗುಂಡು ಹೊಡೆಯಲು ಮುಂದಾದಾಗ ಅದು ಬೇಡ ಎನ್ನುವಂತೆ ಕೈ ಮುಗಿದ್ದಿದ್ದು, ಆತ ಕೋವಿಯ ಟ್ರಿಗರ್ ಎಳೆಯದಂತಾಗಿದ್ದನ್ನು ಹೇಳುತ್ತಾನೆ. ಅಪ್ಪನನ್ನು ಕರಡಿ ಕೊಲ್ಲದೆ ಬಿಟ್ಟಿದ್ದನ್ನು ಹೇಳಿ ಪ್ರಾಣಿಗಳಿಗೆ ತೊಂದರೆ ಕೊಡದಿದ್ದರೆ ಅವೂ ಕೊಡುವುದಿಲ್ಲ ಎನ್ನುತ್ತಾನೆ. 


ಹೆಣ್ಣಿನ ಶೋಷಣೆಯ ಬಗ್ಗೆಯೂ ಚಿತ್ರ ಹೇಳುತ್ತದೆ. ವಿಶ್ರಾಂತಿ ಪಡೆಯಬೇಕಾದ ಗರ್ಭಿಣಿ ಮಹಿಳೆ ಕೆಲಸ ಮಾಡುವುದು, ಅನೈತಿಕ ಸಂಬಂಧ ಮುಂತಾದವೂ ಇವೆ.ಯಾರನ್ನೂ ನಂಬದ ನರ್ಸ್ ಗೆ ನಿಜ ತಿಳಿಯುವ ಸಮಯ ಒದಗುತ್ತದೆ.


ಪ್ರಕೃತಿ ಮತ್ತು ಪ್ರಾಣಿಯ ಅಂತರ್ ಸಂಬಂಧವನ್ನು ಸೊಗಸಾದ ಪರಿಸರದಲ್ಲಿ ಕಟ್ಟಿ ಕೊಡುವ ಸಿನಿಮಾದ ನಿರ್ದೇಶಕಿ ಸೆಸೆನ್ ಎರ್ಗುನ್


04


RMN


ಹೆಸರೇ ವಿಚಿತ್ರವೆಂದು ಕಾಣುವ ಈ ಚಿತ್ರದ ವಸ್ತು ಈಗ ಜಗತ್ತನ್ನು ಕಾಡುತ್ತಿರುವ ಜನಾಂಗೀಯ ಸಮಸ್ಯೆ ಮತ್ತು ರಾಷ್ಟ್ರೀಯತೆ.


ಜರ್ಮನಿಯಲ್ಲಿ ಸ್ಲಾಟರ್ ಹೌಸ್ ನಲ್ಲಿ ಕೆಲಸ ಮಾಡುವ ಮಥಾಯಿಸ್ ಜನಾಂಗೀಯ ನಿಂದೆಗೆ ವ್ಯಕ್ತಿಯೊಬ್ಬನ ಹತ್ಯೆ ಮಾಡುತ್ತಾನೆ.ಅವನಿಗೆ ರುಮಾನಿಯಾದಲ್ಲಿ ಪರಿತ್ಯಕ್ತೆ ಹೆಂಡತಿ ಮತ್ತು ಮಗ ಇರುತ್ತಾನೆ.ಪ್ರೇಯಸಿಯೂ ಇದ್ದಾಳೆ.


ಸೆಸಿಲಾ ಕೆಲಸ ಮಾಡುವ ಬ್ರೆಡ್ ಪ್ಯಾಕ್ಟರಿಯಲ್ಲಿ ಐವರು ಕೆಲಸಗಾರರ ಅವಶ್ಯಕತೆ ಇರುತ್ತದೆ.ಕನಿಷ್ಟ ಸಂಬಳದ ಕಾರಣಕ್ಕೆ ಕೆಲಸಗಾರರು ಸಿಗದೆ ಶ್ರೀಲಂಕಾದ ಇಬ್ಬರನ್ನು ಸೇರಿಸಿಕೊಳ್ಳಲಾಗುತ್ತದೆ.ಕೆಲವೇ ದಿನಗಳಲ್ಲಿ ಮತ್ತೊಬ್ಬನೂ ಸೇರಿಕೊಳ್ಳುತ್ತಾನೆ.ಇದು ಊರವರ ಆಕ್ರೋಶಕ್ಕೆ ಕಾರಣವಾಗುತ್ತದೆ.ಅದಕ್ಕೆ ಪಾದ್ರಿಯ ಬೆಂಬಲವೂ ದೊರಕುತ್ತದೆ.


ಅಶಾಂತಿಯನ್ನು ನಿವಾರಿಸಿ,ಸಮಸ್ಯೆಯನ್ನು ಬಗೆ ಹರಿಸಲು ಮೇಯರ್ ಸಭೆ ಸೇರಿಸುತ್ತಾನೆ.ಇದು ಚಿತ್ರದ ಅತ್ಯುತ್ತಮ ಭಾಗ.ಎಲ್ಲರಿಗೂ ಮಾತಾಡಲು ಅವಕಾಶವಿದೆ.ಒಂದು ಜನಾಂಗ ಮತ್ತೊಂದು ಜನಾಂಗದ ಮೇಲೆ ದ್ವೇಷ ಕಾರುವುದು ನಿಚ್ಚಳವಾಗುತ್ತದೆ.ಕೆಲಸ ಮಾಡಿಸುವವರೂ ಕನಿಷ್ಟ ಸಂಬಳ ಕೊಟ್ಟು ಶೋಷಣೆ ಮಾಡುವುದು,ಯುರೋಪಿಯನ್ ಯೂನಿಯನ್ ನಿಯಮಗಳನ್ನು ಹೇರುವುದು,ಜನರನ್ನು ಸಮಾಧಾನ ಪಡಿಸಲು ರಸ್ತೆ, ಬೀದಿ ದೀಪಗಳನ್ನು ಒದಗಿಸುವುದು ಮುಂತಾದ ಪ್ರಸ್ತುತ ವಿಷಯಗಳೂ ಚರ್ಚೆಗೆ ಬರುತ್ತದೆ.ಈ ಸಮಯದಲ್ಲೆ ಮಥಾಯಿಸ್ ತಂದೆ ನೇಣು ಹಾಕಿಕೊಂಡ ವಿಷಯ ತಿಳಿದು ಸಭೆ ಬರಕಸ್ತಾಗುತ್ತದೆ.


ಮಥಾಯಿಸ್ ಜರ್ಮನಿಯಿಂದ ತಪ್ಪಿಸಿಕೊಂಡ ವಿಷಯ ಪೋಲೀಸರಿಗೆ ತಿಳಿದು ಮನೆಗೆ ಮುತ್ತಿಗೆ ಹಾಕಿರುತ್ತಾರೆ.ತಂದೆ ಮನೆಗೆ ಹೋದ ಹೆಂಡತಿ ಮಥಾಯಿಸ್ ನನ್ನು ಸೇರಿಸುವುದಿಲ್ಲ.ಪ್ರೇಯಸಿ ನನ್ನನ್ನು ಕ್ಷಮಿಸು ಎಂದು ಹೇಳುತ್ತಿರುವಾಗಲೇ ಮಥಾಯಿಸ್ ಗುಂಡು ಹೊಡೆಯುತ್ತಾನೆ.ಅವಳೇ ಪೋಲೀಸರಿಗೆ ಸುಳಿವು ಕೊಟ್ಟಿರಬೇಕು.


ಸ್ಪೋಟಕ ವಿಷಯವನ್ನು ಎತ್ತಿಕೊಂಡ ನಿರ್ದೇಶಕ ಕ್ರಿಷ್ಟಿಯನ್ ಮುಂಗಿಯು ಜನಾಂಗೀಯ ವಿಷಯ,ರಾಷ್ಟ್ರೀಯತೆಯ ಕುರಿತು ತೀರ್ಮಾನ ಕೊಡದಿರುವುದು ಸರಿಯೇ.ಆದರೆ ಸಿನಿಮಾ ಮುಕ್ತಾಯ ಮಾಡುವಲ್ಲಿ ಗೊಂದಲ ಮಾಡಿಕೊಂಡಂತಿದೆ.

05


TORI AND  LOKITA


ಕಪ್ಪು ವರ್ಣೀಯರ ಸಿನಿಮಾ ಇಲ್ಲ ಎಂದು ಗೆಳೆಯರಲ್ಲಿ ಕೊರಗುತ್ತಿದ್ದೆ. ಗೆಳೆಯ ಚಂದ್ರಪ್ರಭ ಕಠಾರಿ,ಪ್ರದೀಪ್ ಕೆಂಚನೂರು ಎರಡು ಚಿತ್ರ ಹಾಕಿಸಿದ್ದಾರೆ ಅಂತಿದ್ದರು.ನಾವು ಯಾರೂ ನೋಡಿಲ್ಲ.


ಆ ಕೊರತೆಯನ್ನು ಟೋರಿ ಮತ್ತು ಲೊಕಿಟ ಸ್ವಲ್ಪ ಮಟ್ಟಿಗೆ ನೀಗಿತು.ಆಫ್ರಿಕಾದಿಂದ ಬೆಲ್ಜಿಯಂಗೆ ಅಕ್ರಮ ವಲಸೆ ಬರುವ ಲೊಕಿಟ ಮತ್ತು ಟೋರಿ ಜೈವಿಕ ಅಕ್ಕ ತಮ್ಮ ಅಲ್ಲದಿದ್ದರೂ ಒಬ್ಬರನ್ನೊಬ್ಬರು ಹಚ್ಚಿಕೊಂಡಿರುತ್ತಾರೆ.ಆಫ್ರಿಕಾದಲ್ಲಿರುವ ತಾಯಿ,ತಮ್ಮಂದಿರಿಗೆ ನಿಯಮಿತವಾಗಿ ಹಣ ಕಳಿಸಬೇಕಾದ ಲೊಕಿಟ ಅಕ್ರಮ ವಲಸೆ ಮಾಡಿದವನಿಗೂ ಸಂದಾಯ ಮಾಡಬೇಕು.ವಲಸೆ ದಾಖಲಾತಿ ಸಿಕ್ಕಿದರೆ ಸಿಕ್ಕಿದರೆ ಅವಳ ಸಮಸ್ಯೆ ಪರಿಹಾರವಾಗುತ್ತದೆ.ಅದಕ್ಕಾಗಿ ಅಸಹನೀಯ ಕೆಲಸಕ್ಕೂ ಒಪ್ಪಿಕೊಳ್ಳುತ್ತಾಳೆ.ಟೋರಿ ಅವಳ ಸಂಕಟವನ್ನು ಗಮನಿಸುತ್ತಾನೆ.


ವಲಸಿಗರ ಸಂಕಷ್ಟಗಳು,ಅವರ ಶೋಷಣೆಯ ಜೊತೆಯಲ್ಲಿ ಮಾದಕ ದೃವ್ಯ ವ್ಯವಹಾರದ ಎಳೆಯೂ ಇದೆ.ನಿರ್ದೇಶಕ ಲುಕ್ ಡಾರ್ಡೆನೆ.
ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿರದ,ಲೀನಿಯರ್ ನಿರೂಪಣೆಯ ಸಿನಿಮಾ ನಗು ನಗುತ್ತಾ ಬೀಳ್ಕೊಡಲು ಸರಿಯಾಗಿತ್ತು.

06

Boy from Heaven

 

ಪ್ರಸಿದ್ಧ ಅಲ್ ಅಜರ್ ವಿಶ್ವವಿದ್ಯಾಲಯ ಸುನ್ನಿ ಮುಸ್ಲಿಮರ ನಿಯಂತ್ರಣದಲ್ಲಿದೆ.ಈಜಿಪ್ತಿನ ಅಧ್ಯಕ್ಷ ಮತ್ತು ವಿಶ್ವವಿದ್ಯಾಲಯವನ್ನು ನಿಯಂತ್ರಿಸುವ ಅಧಿಕಾರ ಹೊಂದಿರುವ ಗ್ರಾಂಡ್ ಇಮಾಮ್ ಇಬ್ಬರೂ ಪ್ರಭಾವಶಾಲಿಗಳು.ಇಮಾಮ್ ಗಳಿಂದ ಆಯ್ಕೆಯಾದ ಗ್ರಾಂಡ್ ಇಮಾಮ್ ಹುದ್ದೆ ಜೀವನ ಪರ್ಯಂತ. ರಾಷ್ಟ್ರದ ಅಧ್ಯಕ್ಷರು ಈ ಹುದ್ದೆಗೆ ತಮಗೆ ನಿಷ್ಠರಾದವರು ಆಯ್ಕೆಯಾಗುವಂತೆ ಮಸಲತ್ತು ಮಾಡುತ್ತಾರೆ.


ಅಡಂ ಎನ್ನುವ ಮೀನುಗಾರನ ಮಗ ಯೂನಿವರ್ಸಿಟಿಗೆ ದಾಖಲಾಗುವ ಸಮಯದಲ್ಲಿ ಗ್ರಾಂಡ್ ಇಮಾಮ್ ತೀರಿಕೊಳ್ಳುತ್ತಾರೆ.ಪ್ರಭುತ್ವ ಉಪಾಯವಾಗಿ ಆಡಮ್ ನನ್ನು ತಮಗೆ ಬೇಕಾದವರನ್ನು ಅರಿಸಿಕೊಳ್ಳಲು ಬಳಸಿಕೊಳ್ಳುತ್ತದೆ. ಗುಪ್ತವಾಗಿ ಹದಿಹರೆಯದ ಹುಡುಗಿಯೊಂದಿಗೆ ಸಂಬಂಧವಿದೆಯೆಂದು ಆಡಳಿತದ ವಿರುದ್ಧವಿರುವ ಇಮಾಮ್ ನನ್ನು ನಿವಾರಿಸಿಕೊಳ್ಳುತ್ತದೆ.ಉದ್ದೇಶ ಸಾಧನೆಯಾದ ಬಳಿಕ ಆಡಮ್ ನ ಉಪಯೋಗ ಅವರಿಗಿರುವುದಿಲ್ಲ.ಆತನನ್ನೂ ಮುಗಿಸಬೇಕೆಂದಿದ್ದಾಗ ಸೆಕ್ಯುರಿಟಿ ಅಧಿಕಾರಿ ತಡೆಯುವ ಪ್ರಯತ್ನ ಮಾಡುತ್ತಾನೆ.


ಪ್ರಭುತ್ವ ತನ್ನ ಅನುಕೂಲಕ್ಕಾಗಿ ಅಮಾಯಕರನ್ನು ಬಳಸಿಕೊಳ್ಳುವ ರೀತಿಯನ್ನು ಚಿತ್ರ ಕಟ್ಟಿಕೊಡುತ್ತದೆ.ರಿಲಿಜನ್ ಪಾಲಿಸುವವರ ಹಿಪೋಕ್ರಸಿ,ಪ್ರಭುತ್ವ ಮತ್ತು ಧರ್ಮಗಳ ಹೊಯ್ ಕಯ್ ಈಜಿಪ್ಟಿನ ಸನ್ನಿವೇಶದಲ್ಲಿ ಪರಿಣಾಮಕಾರಿಯಾಗಿ ರೂಪಿತವಾಗಿದೆ.


ಚಿತ್ರದ ಸ್ಕ್ರೀನ್ ಪ್ಲೇ ಹಲವು ಪ್ರಶಸ್ತಿಗಳನ್ನು ದಕ್ಕಿಸಿಕೊಂಡಿದೆ.ಹಿನ್ನೆಲೆ ಸಂಗೀತ ಚೆನ್ನಾಗಿದೆ.


ದೂರದ ಕರಾವಳಿಯಿಂದ ಬಂದ ಹುಡುಗ ಯೂನಿವರ್ಸಿಟಿ ಸೇರಿದ ಹೊಸದರಲ್ಲೆ ಬೇಹುಗಾರಿಕೆ ಮಾಡಲು ಒಪ್ಪಿಕೊಳ್ಳುವುದು, ಪ್ರಬಲರನ್ನು ಎದುರು ಹಾಕಿಕೊಳ್ಳುವ ಧೈರ್ಯ ಮಾಡುವುದನ್ನು ಒಪ್ಪಕೊಳ್ಳುವುದು ಕಷ್ಟ.


126 ನಿಮಿಷಗಳ ಚಿತ್ರದ ನಿರ್ದೇಶಕ ತಾರಿಕ್ ಸಾಲೆಹ್


07

BROKER


ಬೇಡದ ಶಿಶುಗಳನ್ನು ತಾಯಂದಿರು ಡ್ರಾಪ್ ಬಾಕ್ಸಿನಲ್ಲಿಟ್ಟು ಹೋಗಬಹುದು.ಅಂತಹ ಮಕ್ಕಳನ್ನು ಮಕ್ಕಳಿಲ್ಲದವರಿಗೆ ಮಾರುವ ಮಧ್ಯವರ್ತಿಗಳಿದ್ದಾರೆ.


ಕೊಲೆಯ ಆರೋಪವಿರುವ ಮಹಿಳೆಯೊಬ್ಬಳು ತಿಂಗಳ ಮಗುವನ್ನು ಡ್ರಾಪ್ ಬಾಕ್ಸಿಗೆ ಹಾಕಿರುತ್ತಾಳೆ.ಆದರೆ ಅವಳಿಗೆ ಅದು ಯೋಗ್ಯರ ಆರೈಕೆಯಲ್ಲಿರಬೇಕೆಂಬಾಸೆ.ಅದಕ್ಕಾಗಿ ಮಧ್ಯವರ್ತಿಗಳ ಜೊತೆಯಲ್ಲಿ ಮಗುವನ್ನು ಪಡೆಯುವವರ ಹುಡುಕಾಟ ನಡೆಸುತ್ತಾರೆ.ಗುಪ್ತ ಮಹಿಳಾ ಪೋಲಿಸರಿಬ್ಬರು ಮಾರು ವೇಷದಲ್ಲಿ ಇವರ ಚಟುವಟಿಕೆಗಳನ್ನು ಗಮನಿಸಿರುತ್ತಾರೆ.


ಮಗು ಮಾರಾಟ ಮಾಡುವವರೆಂದು ತಿಳಿದುಕೊಳ್ಳಲಾದವರ ವೈಯಕ್ತಿಕ ಸಂಕಟಗಳು,ಪೋಷಕರಿಲ್ಲದೆ ಬೆಳೆವ ಮಕ್ಕಳ ನೋವು,ಹಣದ ಅವಶ್ಯಕತೆಯಿದ್ದರೂ ಮಾನವೀಯ ಕಾಳಜಿ ಚಿತ್ರದಲ್ಲಿ ಮನದಟ್ಟಾಗುತ್ತಾ ಹೋಗುತ್ತದೆ.


ಕೊರ್ ಎಡ ಹಿರೊಕಾಜು ನಿರ್ದೇಶನದ ಕೊರಿಯಾ ಸಿನಿಮಾ ಬದಲಾದ ಪರಿತ್ಯಕ್ತರ ಬದುಕಿನ ದರ್ಶನ ಮಾಡಿಸುವ ಮಾಡಿಸುತ್ತದೆ.


08


WOOD CUTTERS STORY


ಸಿನಿಮಾ ಮುಗಿದ ಮೇಲೆ ನಾನು Madhu YN  ಒಂದೈದು ನಿಮಿಷ ಆಡಿಟೋರಿಯಂನಲ್ಲೆ ಕೂತಿದ್ದೆವು. ನನಗೆ ತಲೆ ಕೆಟ್ಟು ಹೋಗಿತ್ತು. ಮಧು ಅರ್ಥ ಮಾಡಿಸುವ ಪ್ರಯತ್ನ ಮಾಡಿದರು.


ಮರ ಕೊಯ್ಯುವ ಕಾರ್ಖಾನೆಯಲ್ಲಿ ಕೆಲಸ ಮಾಡುವ ಪೆಪೆ ಹುಟ್ಟುಹಬ್ಬದ ದಿನ ಎಲ್ಲರೂ ಸಂಭ್ರಮಿಸುತ್ತಾರೆ.ಸಹ ಕಾರ್ಮಿಕರು ದುಬಾರಿ ಉಡುಗೊರೆಯನ್ನೂ ನೀಡುತ್ತಾರೆ.ಎಲ್ಲವೂ ಚೆನ್ನಾಗಿರುವ ಸಮಯದಲ್ಲಿ ಮೈನಿಂಗ್ ಕೆಲಸ ಆರಂಭವಾಗುತ್ತದೆ,ಫ್ಯಾಕ್ಟರಿ ಮುಚ್ಚಲಾಗುತ್ತದೆಂದು ಹೇಳಲಾಗುತ್ತದೆ.


ಎಲ್ಲರಿಗೂ ದಿಗ್ಬ್ರಾಂತಿಯಾದರೂ ಪೆಪೆ ಕಳವಳ ಪಡುವುದಿಲ್ಲ.ಸರಿಯಾಗುತ್ತದೆ ಎನ್ನುವ ಅವನ ಮಾತು ಇತರರಿಗೆ ರುಚಿಸುವುದಿಲ್ಲ.


ಬಾರ್ಬರ್ ವೃತ್ತಿಯವನು ತಮ್ಮ ಹೆಂಡತಿಯರನ್ನು ಕೆಡಿಸುತ್ತಾನೆಂದು ಪೆಪೆಯ ಗೆಳೆಯ ಅವನನ್ನು ಕಡಿದು ಕೊಲ್ಲುತ್ತಾನೆ.ಇಲ್ಲಿಂದ ದುರ್ಘಟನೆಗಳು ನಡೆಯತೊಡಗುತ್ತವೆ.ಪೆಪೆಯ ತಾಯಿ ಸ್ತಂಭನದಿಂದ ಸಾಯುತ್ತಾಳೆ.ಮಹಿಳೆಯರೆಲ್ಲ ಊರು ಬಿಡುತ್ತಾರೆ.ಸತ್ತವರನ್ನು ಮಾತಾಡಿಸುತ್ತೇನೆಂದು ಬಂದವನು ಮೈಮರೆಯುವಂತೆ ವರ್ತಿಸುತ್ತಾನೆ.ಪೆಪೆಯ ಕಿರಿಯ ವಯಸ್ಸಿನ ಮಗ ಬಾರ್ಬರ್ ಕೆಲಸ ಮಾಡುವವಳ ಹಿಂದೆ ಹೋಗುತ್ತಾನೆ.


ಮಗನನ್ನು ಅರಸಿ ಹೋಗುವ ಪೆಪೆಗೆ ಬೆಳಕಿನ ಗೋಲವೊಂದು ಎಲ್ಲಿಂದಲೋ ಬಂದು ಕುಕ್ಕುತ್ತದೆ.ಮುಟ್ಟಿದರೆ ಮಾಯವಾಗುತ್ತದೆ.ಡ್ರೈವರಿಲ್ಲದ ಉರಿವ ಕಾರಿನೊಳಗೆ ಮಗ ಹೋಗುತ್ತಾನೆ.


ರೂಪಕಗಳು ಒತ್ತೊತ್ತಾಗಿರುವ, ಸರ್ರಿಯಲಿಸ್ಟಿಕ್ ಅನ್ನಿಸುವ ಚಿತ್ರಕ್ಕೆ ಕಾಡಿಸುವ ಗುಣವಿದೆ.ಪೆಪೆಯ ಮಗ ಅವನ ಅಲ್ಟರ್ ಇಗೋ ಎಂದರು ಮಧು.'ಸ್ಪಿರಿಚುವಾಲಿಟಿ ಎನ್ನುವುದು ಸುಳ್ಳು ಬದುಕಿಗೆ ಅರ್ಥವಿಲ್ಲ' ಎಂದು ಬಾಲಕ ಹೇಳಿದಾಗ 'ಇಷ್ಟು ಚಿಕ್ಕ ಹುಡುಗನ ಬಾಯಲ್ಲಿ ಇಷ್ಟು ದೊಡ್ಡ ಮಾತಾ?' ಎಂದರು ಕೃಷ್ಣಪ್ರಸಾದ್.


ನನಗಂತೂ ಸರಿಯಾಗಿ ಅರ್ಥವಾಗಲಿಲ್ಲ.ಅಸ್ತಿತ್ವದ ಕುರಿತ ಪ್ರಶ್ನೆಗಳನ್ನು ಕೇಳುತ್ತದೆ ಅಂತ ಅನ್ನಿಸಿತು.ಪಾಪದ ವ್ಯಕ್ತಿ ಪೆಪೆಗೆ ಒಂದರ ಮೇಲೊಂದು ಕಷ್ಟಗಳು ಬರುತ್ತವೆ.ಒಳ್ಳೆಯವರು ಕೆಟ್ಟವರು ಎಲ್ಲಾ ಒಂದೇ ಎನ್ನುವ ಅರ್ಥವೇ?ಹಿಮಕರಡಿಯಂತಹ ಗಾತ್ರದ ಪ್ರಾಣಿ ಪೆಪೆ ತಾಯನ್ನು ನೋಡಿ ಓಡಿ ಹೋಗುತ್ತದೆ.ಆ ನಂತರ ಅಕೆ ಸಾಯುತ್ತಾಳೆ.ಕೊನೆಯಲ್ಲಿ ಮತ್ತೆ ಬಂದು ಸತ್ತವರನ್ನು ತಿನ್ನುತ್ತದೆ.ಸಾವು ಯಾರನ್ನೂ ಬಿಡದು ಎಂದರ್ಥವೇ?


ಪೆಪೆ ಬೆಟ್ಟ ಹತ್ತಿ ಬಂದಾಗ ಮಕ್ಕಳ ಆಟಿಕೆ ರೈಲು ಹಳಿಯಲ್ಲಿ ತಿರುಗುತ್ತಾ ಇರುತ್ತದೆ, ಬಾಳೂ ಹೀಗೆ ಅಲ್ಲವೇ?


ಸರಿಯಾಗಿ ಅರ್ಥ ಮಾಡಿಕೊಳ್ಳಲು ಇನ್ನೊಮ್ಮೆ ಎಲ್ಲಾದರೂ ನೋಡಬೇಕು,ಅಥವಾ ಅರ್ಥ ಮಾಡಿಸುವಿರಾ?


ಫಿನ್ಲೆಂಡಿನ ಈ ಚಿತ್ರದ ನಿರ್ದೇಶಕ ಮಿಕ್ಕೋ ಮೈಲಿಲಾಟಿ.ಅವಧಿ 98 ನಿಮಿಷಗಳು

09

GODLAND


ನನಗೆ ಐಸ್ ಲ್ಯಾಂಡ್ ನ ಸಿನಿಮಾಗಳೆಂದರೆ ಇಷ್ಟ. ಸಿನಿಮಾ ಹೇಗೇ ಇದ್ದರೂ ಪ್ರಾಕೃತಿಕ ಸೌಂದರ್ಯ ಮೋಸ ಮಾಡುವುದಿಲ್ಲ.


19 ಶತಮಾನದಲ್ಲಿ ಐಸ್ ಲ್ಯಾಂಡಿನಲ್ಲಿ ಚರ್ಚ್ ಸ್ಥಾಪಿಸಲು ಡೆನ್ಮಾರ್ಕ್ನಿಂದ ಯುವ ಪಾದ್ರಿಯೊಬ್ಬನನ್ನು ಕಳಿಸಿಕೊಡುತ್ತಾರೆ.ಆತ ಅಲ್ಲಿಯ ಜನರನ್ನು ಅರಿಯುವ ಸಲುವಾಗಿ ಬೆಟ್ಟ, ಕಣಿವೆಗಳ ಕಡಿದಾದ ದಾರಿ ಆರಿಸಿಕೊಳ್ಳುತ್ತಾನೆ.ಕಡಿದಾದ ಬೆಟ್ಟಗಳನ್ನು,ಶೀತಲ ವಾತಾವರಣವನ್ನು ಎದುರಿಸುವುದು ಒಂದು ಬಗೆಯಾದರೆ, ಜನರೊಂದಿಗೆ ಏಗುವುದು ಇನ್ನೊಂದು ರೀತಿಯಾಗುತ್ತದೆ.


ಡ್ಯಾನಿಶ್ ಮಾತಾಡದ ಐರ್ಲಾಂಡಿಗನಿಗೆ ಧರ್ಮದ ಮೇಲೆ ಅಷ್ಟೊಂದು ಒಲವಿಲ್ಲ.ಇಬ್ಬರು ಹೆಣ್ಣು ಮಕ್ಕಳ ತಂದೆಯಾದ ಡೆನ್ಮಾರ್ಕ್ ಬಲ್ಲ ವ್ಯಕ್ತಿಗೆ ಪಾದ್ರಿಯ ಮೇಲೆ ಅನುಮಾನ.ಇಗರ್ಜಿಯ ನಿರ್ಮಾಣಕ್ಕಿಂತ ಫೋಟೋ ತೆಗೆಯುವುದಲ್ಲೆ ಹೆಚ್ಚು ಆಸಕ್ತಿ ಇರುವ ಪಾದ್ರಿ ಪರಿಸ್ಥಿತಿಯನ್ನು ನಿಭಾಯಿಸಲು ಸೋಲುತ್ತಾನೆ.ತಮ್ಮ ಪಾಡಿಗೆ ತಾವಿರುವವರ ಮೇಲೆ ಧರ್ಮದ ಹೇರಿಕೆ,ಅವರವರವೇ ಆಸಕ್ತಿಗಳು ಇವುಗಳನ್ನು ಸಿನಿಮಾ ಹೇಳುವಂತೆ ಕಾಣುತ್ತದೆ.


ಸುಂದರ ಪರ್ವತ ಪ್ರದೇಶದಲ್ಲು ಇಗರ್ಜಿ ಕಟ್ಟುವ ಬುದ್ದಿ ನೋಡಿ ಎಂದು ಸಿನಿಮಾ ನೋಡುತ್ತಾ ಕಠಾರಿ ಹೇಳಿದರೆ ನಾನು, ನಮ್ಮವರು ದೇವರನ್ನು ಪ್ರತಿಷ್ಠಾಪಿಸುತ್ತಿದ್ದರು ಎಂದೆ.


143 ನಿಮಿಷಗಳ ಈ ಚಿತ್ರದ ನಿರ್ದೇಶನ ಹೈನೂರ್ ಪಾಲ್ಮ್ ಸನ್


10


KLONDIKE


ಮೊದಲ ದಿನವೇ ಈ ಸಿನಿಮಾ ನೋಡಬೇಕೆಂದಿದ್ದರೂ ಹೌಸ್ ಫುಲ್ಲಾಗಿತ್ತು.ಯಕ್ರೇನ್-ರಷ್ಯಾ ಯುದ್ಧಾನಂತರ ಅಲ್ಲಿಯ ಸ್ಥೂಲ ನೋಟ ಪಡೆಯಬೇಕೆಂಬಾಸೆ ಇತ್ತು.


2014 ರಲ್ಲಿ ಮಲೇಶಿಯಾದ ವಿಮಾನ ಯುಕ್ರೇನ್- ರಷ್ಯಾ ಗಡಿಯಲ್ಲಿ ಪತನವಾದ ನಂತರದ ನಿಜಘಟನೆಗಳನ್ನು ಚಿತ್ರ ಆಧರಿಸಿದೆ.ಇರ್ಕಾ ತುಂಬು ಗರ್ಭಿಣಿ.ಆಕೆಯ ಗಂಡ ತಾವಿರುವ ಪಾರ್ಮ್ ಹೌಸ್ ಬಿಟ್ಟು ತೆರಳೋಣವೆಂದರೆ ಆಕೆ ಒಪ್ಪುವುದಿಲ್ಲ.ಆ ಸಮಯದಲ್ಲಿ ಅವರ ಪಾರ್ಮ್ ಹೌಸ್ ಸಮೀಪದಲ್ಲೆ ವಿಮಾನ ಪತನವಾಗುತ್ತದೆ.


ಇರ್ಕಾ ಮತ್ತವಳ ತಮ್ಮ ಯುಕ್ರೇನಿಯನ್ನಿನ ಪರವಾಗಿದ್ದರೆ,ಆಕೆಯ ಗಂಡ ಮತ್ತು ಆತನ ಗೆಳೆಯ ಯುಕ್ರೇನ್ ಸೆಪರೇಟಿಸ್ಟರ ಪರವಾಗಿರುತ್ತಾರೆ.ಪಾರ್ಮ ಹೌಸ್ ನಲ್ಲೆ ಉಳಿಯಬೇಕೆನ್ನುವ ಇರ್ಕಾಳ ಬಯಕೆಗೆ ಕುತ್ತು ಬರುತ್ತದೆ.ರಷ್ಯಾ ಪಡೆಗಳಿಗೆ ಆಕೆಯ ಗಂಡ ಹಸುವನ್ನು ಕಡಿದು ಒಪ್ಪಿಸುತ್ತಾನೆ.ತಮ್ಮನ ಹೆಡೆಮುಡಿ ಕಟ್ಟುತ್ತಾನೆ.ವಿಮಾನ ಹೊಡೆದುರುಳಿಸಿದವರ ಪತ್ತೆಗೆ ಬರುವ ಯುಕ್ರೇನ್ ಯೋಧರು ಹಿಂಸಿಸುತ್ತಾರೆ.ಇರ್ಕಾ ಹೆರುವ ಸಂದರ್ಭದಲ್ಲಿ ಒಬ್ಬರೂ ಇಲ್ಲ.


ಯುದ್ಧ ಜನರ ಬದುಕಿನ ಮೇಲೆ ಮಾಡುವ ಪರಿಣಾಮವನ್ನು ನಿರ್ಲಿಪ್ತತೆಯಿಂದ ಚಿತ್ರ ದಾಖಲಿಸುತ್ತದೆ.ಮಗುವಿಗೆ 'ವ್ಲಾದಿಮಿರ್ ' ಎಂದು ಹೆಸರಿಡಬೇಕೆಂದು ಹೇಳುವ ಇರ್ಕಾ ಗಂಡ ರಷ್ಯಾ ಪರವೆಂದು ಅನ್ನಿಸಿದರೂ ಪರಿಸ್ಥಿತಿಯ ಶಿಶು ಆತ.


ಚಿತ್ರದ ನಿರ್ದೇಶಕಿ ಮರ್ಯಾನಾ ಗೋರ್ಬಾಕ್ ಈ ಚಿತ್ರವನ್ನು ಅಮಾಯಕ ಮಹಿಳೆಯರಿಗೆ ಅರ್ಪಿಸಿದ್ದು ಮೆಚ್ಚುವಂತದ್ದು.


11

BEFORE NOW AND THEN


'ಹೆಣ್ಣು ತನ್ನ ತುರುಬಿನ ಗಂಟಿನಲ್ಲಿ ಹುಟ್ಟುಗಳನ್ನು ಬಚ್ಚಿಟ್ಟುಕೊಳ್ಳುತ್ತಾಳೆ' ಎಂದು ಚಿತ್ರದ ನಾಯಕಿ ನಾನಾ ಹೇಳುತ್ತಾಳೆ.ಅವಳಲ್ಲಿ ಗುಟ್ಟುಗಳಿವೆ.ಕಮ್ಯುನಿಸ್ಟ್ ವಿರೋಧಿ ಹೋರಾಟದಲ್ಲಿ ಗಂಡ ಮತ್ತು ಮಗನನ್ನು ಕಳೆದುಕೊಂಡ ಆಕೆ ಅನಿವಾರ್ಯವಾಗಿ ಎರಡನೇ ಮದುವೆ ಆಗುತ್ತಾಳೆ.1966 ನಂತರ ಸುಕಾರ್ನೋ ಸರಕಾರ ಹೋಗಿ ಸುಹಾರ್ತೋ ಅಧಿಕಾರಕ್ಕೆ ಬರುತ್ತಾನೆ.ಸತ್ತನೆಂದು ತಿಳಿದಿರುವ ನಾನಾ ಗಂಡ ಭೇಟಿಯಾಗುತ್ತಾನೆ.ಮುಂದೆ ಅವಳಿಗೆ ಕೆಟ್ಟ ಕನಸುಗಳು ಬೀಳುವುದಿಲ್ಲ.ಗಂಡ ನಂಬಿಕೆ ದ್ರೋಹ ಮಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ.'ಹೆಣ್ಣಿಗೆ ಮಾತ್ರಾ ಗಿಲ್ಟ್ ಯಾಕಿರಬೇಕೆಂದು' ಆಕೆ ತನ್ನ ಇಚ್ಚೆಯಂತೆ ಬದುಕುವ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾಳೆ.


ಚಿತ್ರದ ನಿರ್ದೇಶಕಿ ಕಮಿಲಾ ಆಂಡಿನಿ ಬೋಲ್ಡ್ ಅಗಿ ಕತೆಯ ನಿರ್ವಹಣೆ ಮಾಡಿದ್ದಾರೆ.ನಾನಾ ಪಾತ್ರ ನೆನಪುಳಿಯುವಂತಿದೆ.ಹಿನ್ನೆಲೆ ಸಂಗೀತ ಅಪೂರ್ವ ಅನುಭವ ನೀಡುತ್ತದೆ.

12

THE BLUE KAFTAN


ಕಫ್ತಾನ್ ಹೊಲಿಗೆ ಕಲಿಯಲು ಹೊಸಬನೊಬ್ಬ ಬಂದಾಗ ಟೈಲರ್ ಹಲೀಮನ ಹೆಂಡತಿ ಮಿನಾ ಅವನು ಹೆಚ್ಚು ದಿನ ಇರುವುದಿಲ್ಲ ಎನ್ನತ್ತಾಳೆ.ಹಲೀಮ್ ಗೆ ಹೆಂಡತಿಯೆಂದರೆ ಇಷ್ಟ.ಅದರೆ ಅಕೆ ಸೆಕ್ಸ್ ಇಷ್ಟ ಪಟ್ಟಾಗಿ ಅಷ್ಟಾಗಿ ಆಸಕ್ತಿ ತೋರಿಸುವುದಿಲ್ಲ.ದುಡ್ಡು ಕೊಟ್ಟು ಸಲಿಂಗ ರತಿ ಮಾಡುತ್ತಾನೆ.ಕೆಲಸಕ್ಕೆ ಬಂದ ಹುಡುಗ ಸಲಿಂಗ ರತಿ ಬಯಸಿದಾಗ ನಿರಾಸಕ್ತಿ ತೋರುತ್ತಾನೆ.ಹೆಂಡತಿಯ ಕಾಯಿಲೆ ಗುಣವಾಗುವುದಿಲ್ಲವೆಂದು ತಿಳಿದಾಗ ಸತ್ಯವನ್ನು ತೋಡಿಕೊಳ್ಳುತ್ತಾನೆ.ಅಕೆ ಆಕ್ಷೇಪಿಸುವುದಿಲ್ಲ.


ಇಂತಹ ಒಂದು ಅಸಾಮಾನ್ಯ ವಿಷಯವನ್ನು ನಿರ್ದೇಶಕಿ ಮರಿಯಮ್ ತೌಜನಿ ಎಚ್ಚರದಿಂದಲೂ,ಸಂಯಮದಿಂದಲೂ ರೂಪಿಸಿದ್ದಾರೆ.ಹಲೀಮ್,ಮಿನಾ ಪಾತ್ರಧಾರಿಗಳು ಅತ್ಯಂತ ಸಂಯಮದಿಂದ ನಟಿಸಿದ್ದಾರೆ.ಸಂಗೀತ ಚೆನ್ನಾಗಿದೆ.


ಮೂರು ಚಿತ್ರಗಳ ನಿರ್ದೇಶಕಿಯರು ಮಹಿಳೆಯರು.ಚಿತ್ರದ ವಿಷಯ ಸಾಮಾನ್ಯವಾದುದಲ್ಲ.ಕ್ಲೊಂಡಿಕ್ ಯುದ್ಧ ಸಂಬಂಧಿ ಚಿತ್ರವಾದರೆ ಮತ್ತೆರಡು ಕಾನೂನಿಗೆ ಹೊರತಾದ ಸಂಬಂಧಗಳ ಕುರಿತಾದ್ದು.ಮಹಿಳಾ ನಿರ್ದೇಶಕಿಯರು ಈ ರೀತಿಯ ಬೋಲ್ಡ್ ವಿಷಯಗಳನ್ನು ಎತ್ತಿಕೊಂಡು ಸಮರ್ಥವಾಗಿ ನಿರ್ವಹಣೆ ಮಾಡುತ್ತಿರುವುದನ್ನು ಮೆಚ್ಚಬೇಕು.


ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಮುಸ್ಲಿಂ ರಾಷ್ಟ್ರಗಳೆಂದು ಕರೆದುಕೊಳ್ಳುವ ಮೊರಾಕ್ಕೋ,ಇಂಡೋನೇಷ್ಯಾ ದೇಶಗಳಲ್ಲಿ ಮೂಲಭೂತವಾದ ಕಾಣುವುದಿಲ್ಲ.ಮಹಿಳೆಯರು ಗಂಡಸರಂತೆ ಸ್ವಚ್ಚಂದ ಜೀವನ ನಡೆಸುವ ಅವಕಾಶವಿದೆ.ಕಾನೂನು ಬಾಹಿರ ಸೆಕ್ಸ್ ನಡೆಸುವ ಅಡ್ಡೆಗಳೂ ಇವೆ.ಇಂಡೋನೇಷ್ಯಾದ ಚಿತ್ರದಲ್ಲಿ ಮಹಿಳೆಯೊಬ್ಬಳು 'ನಾನು ಮದುವೆಯಾಗುವುದಿಲ್ಲ,ನನ್ನ ಬದುಕನ್ನು ಯಾರೂ judge  ಮಾಡುವುದು ಬೇಕಿಲ್ಲ' ಅನ್ನುತ್ತಾಳೆ.


BEFORE NOW AND AFTER  'ಬದುಕುವುದು ಫುಲ್‌ಫಿಲ್‌ಮೆಂಟಿಗೆ' ಎಂದರೆ THE BLUE CAFTAN 'ಪ್ರೀತಿಸಿದಂತೆ ಬದುಕಬೇಕು' ಎನ್ನುತ್ತದೆ.ಮನನ ಮಾಡಬೇಕಾದ ಮಾತುಗಳು.

13

THE WORST ONES


ಸಿನಿಮಾದೊಳಗೊಂದು ಸಿನಿಮಾ.ನಿರ್ದೇಶಕನೊಬ್ಬ ತನ್ನ ಸಿನಿಮಾಕ್ಕಾಗಿ ಫ್ರಾನ್ಸಿನ ಕಡೆಗಣಿಸಲ್ಪಟ್ಟ ವರ್ಗದ ಮಕ್ಕಳ ಆಡಿಷನ್ 
ತೆಗೆದುಕೊಳ್ಳುತ್ತಾನೆ.

ಅವರೆಲ್ಲರ ಹಿನ್ನೆಲೆಯೂ ನೋವಿನಿಂದ ಕೂಡಿದೆ.ಅವರಲ್ಲಿ 15 ವರ್ಷದ ಹುಡುಗಿಯೊಬ್ಬಳು ಅಪ್ರಾಪ್ತ ವಯಸ್ಸಿನ ಗರ್ಭಿಣಿ ಪಾತ್ರಕ್ಕೆ ಅಯ್ಕೆಯಾಗುತ್ತಾಳೆ.ಸಿಟ್ಟಲ್ಲೆ ಇರುವ,ಅತ್ತು ಗೊತ್ತಿಲ್ಲದ ಹುಡುಗನೊಬ್ಬ ಅವಳ ತಮ್ಮನ ಪಾತ್ರಕ್ಕೆ ಆಯ್ಕೆಯಾಗುತ್ತಾನೆ.


ನಟನೆ ತಿಳಿಯದ ನಾಲ್ವರ ನೋವು,ನಲಿವುಗಳನ್ನು ಸಹಜವಾಗಿ ನಿರ್ದೇಶಕ ಕಟ್ಟಿಕೊಡುತ್ತಾ ಹೋಗುತ್ತಾರೆ.ತಾಯಿಯ ಪ್ರೀತಿ ವಂಚಿತ ಬಾಲಕ ತಾಯಿಯನ್ನು ಸೂಳೆಯೆಂದಾಗಿ ಹಿಗ್ಗಾಮುಗ್ಗಿ ಹೊಡೆಯುವ ಸಹಜ ದೃಶ್ಯದಂತೆ, ಸೆಕ್ಸ್ ಕೂಡಾ ಸಹಜವಾಗಿ ನಡೆಯುತ್ತದೆ.ಶಿಷ್ಟ ಬದುಕಿಗಿಂತ ಭಿನ್ನವಾದ ಫ್ರಾನ್ಸ್ ನ ಬದುಕನ್ನು ನಿರೂಪಿಸುತ್ತದೆ.ಗೂಡಿನಲ್ಲಿಟ್ಟ ಪಾರಿವಾಳಗಳನ್ನು ಹಾರಿ ಬಿಡುವ ರೂಪಕ ಸ್ವಚ್ಚಂದ ಬದುಕಿನ ಹಾರೈಕೆಯನ್ನು ಬಿಂಬಿಸುತ್ತದೆ. ಅಳು ಬಾರದ ಹುಡುಗ ಅಕ್ಕನನ್ನು ಅಪ್ಪಿ ಕಣ್ಣೀರು ಸುರಿಸುವ ಕೊನೆಯ ದೃಶ್ಯ ಪ್ರೀತಿಯ ಅಗತ್ಯವನ್ನು ಹೇಳುತ್ತದೆ.


ಚಿತ್ರ ರೂಪಿಸುವುದರಲ್ಲು ನಿರ್ದೇಶಕಿಯರಾದ ಲಿಸ್ ಅಕೋಕ ಮತ್ತು ರೊಮಾನೆ ಗ್ಯುರೆಟ್ ರವರ ತಾಯ್ತನವಿದೆ.


14

JUDAS


ಚಿತ್ರೋತ್ಸವಕ್ಕೆ ಬಂದಿದ್ದ ನಿರ್ದೇಶಕ ಡಾನ್ ವೊಲ್ನನ್ ಈ ಚಿತ್ರದಲ್ಲಿ ಎಮೋಷನ್,ಎಂಟರ್ ಟೈನ್ ಮೆಂಟ್ ಇಲ್ಲ, ಚಿಂತನೆ ಇದೆ ಎಂದರು.ಆದರೆ, ಅವರು ಎಲ್ಲಾ ದೇಶಗಳಲ್ಲು SUFFERING  ಇತ್ತು,ಅದಕ್ಕಾಗಿ ಹೋರಾಟ ಮಾಡಿದ್ದಾರೆ, ನಿಮ್ಮ ದೇಶದಲ್ಲಿ ಸಫರಿಂಗ್ ಇರಲಿಲ್ಲ ಎಂದಿದ್ದು ತಪ್ಪಾಗಿತ್ತು.ನಮ್ಮ ದೇಶದಲ್ಲಿ ಸಫರಿಂಗ್ ಇತ್ತು,ಇದೆ.ಸಫರ್ ಅದವರಿಗೆ ದನಿಯಿಲ್ಲ, ಅವರ ನೋವು ಯಾರಿಗೂ ಗೊತ್ತಾಗುವುದಿಲ್ಲ ಎಂದು ಮನದಟ್ಟು ಮಾಡಬೇಕಾಗಿತ್ತು.


ಹೀಬ್ರೋ ಯೂನಿವರ್ಸಿಟಿಯಲ್ಲಿ ಥೀಸಿಸ್ ಬರೆಯುತ್ತಿದ್ದ ವಿದ್ಯಾರ್ಥಿ ಅನಿವಾರ್ಯ ಕಾರಣಗಳಿಂದ ಅದನ್ನು ಬಿಟ್ಟು, ಮನೆಯೊಂದರಲ್ಲಿ ಹಿರಿಯರೊಬ್ಬರ ಆರೈಕೆಯ ಕೆಲಸ ವಹಿಸಿಕೊಳ್ಳುತ್ತಾನೆ.ಅವರಿಬ್ಬರಲ್ಲಿ ಥೀಸಿಸ್ ಸಂಬಂಧಿತ ಚರ್ಚೆ,ಹಿರಿಯ ವ್ಯಕ್ತಿಯ ಮಗ ಬಿಡುಗಡೆಯ ಸಮರದಲ್ಲಿ ಸತ್ತಿದ್ದು,ಸೊಸೆಯ ಜೊತೆ ಸಂಬಂಧ ಚಿತ್ರದ ವಸ್ತು.


ಜುದಾಸ್ ನಿರ್ದೋಷಿ, ಕ್ರುಸಿಫಿಕ್ಷನ್ ಆಗಿದುದರಿಂದಲೇ ಕ್ರಿಶ್ಚಿಯಾನಿಟಿ ಬೆಳೆಯಿತು ಎನ್ನುವುದು ವಿದ್ಯಾರ್ಥಿಯ ವಾದ. ಜುದಾಸ್ ಮಾಡಿದ ದ್ರೋಹದಿಂದ ಎಂದೆಂದಿಗೂ ಯಹೂದಿಗಳು ಶತ್ರುಗಳಾದರು ಎನ್ನುವುದು ಹಿರಿಯನ ಅಭಿಪ್ರಾಯ.ಮೊದಲಲ್ಲಿ ಇಸ್ರೇಲ್ ಆಕ್ರಮಣವನ್ನು ಸಮರ್ಥಿಸುವ ಹಿರಿಯ ಕೊನೆಗೆ ಸ್ಲೊವೇಕಿಯಾವವನ್ನು ಜೆರೆಸೊಲೆಮ್ ಎಂದು ತಿಳಿದು ಅಲ್ಲೆ ನೆಲೆ ನಿಂತವರ ಕತೆಯನ್ನೂ ಹೇಳುತ್ತಾರೆ.
ಹಲವು ವಿಷಯಗಳನ್ನು ಜಿಜ್ಞಾಸೆಗೊಳಪಡಿಸುವ ಚಿತ್ರಕ್ಕೆ ಕಾಡುವ ಗುಣವಿದೆ.


15

ALAM


ಈ ಚಿತ್ರದಲ್ಲಿ ವಿದ್ಯಾರ್ಥಿಗಳು ಇಸ್ರೇಲಿನ ಪ್ರಜೆಗಳಾದರೂ ಪಾಲೆಸ್ತೀನಿನ ಮೇಲಿನ ಪ್ರೀತಿಯನ್ನು ಬಿಟ್ಟು ಕೊಡಲು ಸಿದ್ಧರಿಲ್ಲ.ಸೆಕ್ಯುರಿಟಿ ಒಬ್ಬನಿಗೆ ತೊಡರು ಕಾಲು ಹಾಕಿ ಬೀಳಿಸುವುದಲ್ಲದೆ,ಶಾಲೆಯ ಆದೇಶ ಮೀರಿ ಪಾಲೆಸ್ತೀನಿಯನ್ ಧ್ವಜ ಹಾರಿಸುವ ಅಪೇಕ್ಷೆ ಅವರದು.ಸೌಮ್ಯ ಸ್ವಭಾವದ ತಮೀರ್,ಮೈಸಾಳ ಸ್ಕೂಲಿಗೆ ಸೇರಿದ ನಂತರ ಪಾಲೆಸ್ತೀನಿಯನ್ ಸಮರ್ಥಿಸುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾನೆ.


ಧ್ವಜ ಹಾರಿಸುವುದು ಸಾಂಕೇತಿಕ.ಹೋರಾಟದ ಆರಂಭದಲ್ಲಿ ಧ್ವಜ ಅಗತ್ಯ,ಕೊನೆಗಳನ್ನು ಸುಡಬೇಕು ಎನ್ನುವ ಮಾತೂ ಬರುತ್ತದೆ.ಆಡಳಿತದ ಅಡ್ಡಿ,ಆತಂಕಗಳನ್ನು ಹುಡುಗರು ಎದುರಿಸುವ ಬಗೆಯನ್ನು ಚಿತ್ರ ನವಿರಾಗಿ ಕಟ್ಟಿ ಕೊಡುತ್ತದೆ.


109 ನಿಮಿಷಗಳ ಚಿತ್ರದ ನಿರ್ದೇಶಕ ಫಿರಸ್ ಕೌರಿ


16

MEDITERRANEAN FEVER


ವಾಲೀದ್ ಮಗನಿಗೆ ಪ್ರತಿ ಮಂಗಳವಾರ ಜ್ವರ.ಇದು ಮೆಡಿಟರೇನಿಯನ್ ಫಿವರ್ ಇರಬೇಕು,ಅದಕ್ಕೆ ಟೆಸ್ಟ್ ಮಾಡಿಸಬೇಕೆಂದಾಗ ಧರ್ಮವನ್ನು ತಿಳಿಸಲು ವಾಲೀದ್ ಒಪ್ಪವುದಿಲ್ಲ;ಟೆಸ್ಟ್ ಮಾಡಲಾಗುವುದಿಲ್ಲ.ಆದರೆ ಈ ಫಿವರ್ ಏಕೆ ಬರುತ್ತದೆ ಎಂದು ವಾಲೀದ್ ತಿಳಿದುಕೊಳ್ಳುತ್ತಾನೆ.ಮಂಗಳವಾರ ಭೂಗೋಳ ಪಾಠವಿದೆ.ಅದರಲ್ಲಿ ಜೆರೆಸಲೆಮ್ ಇಸ್ರೇಲ್ ನದೆಂದು ಹೇಳಲಾಗುತ್ತದೆ.ವಾಲೀದ್ ಮಗನಿಗೆ ಅದು ಪಾಲೆಸ್ತೀನಿಯನ್.ಅದಕ್ಕವನಿಗೆ ಅದೇ ದಿನ ಜ್ವರ ಬರುತ್ತದೆ!


ಇದು ಚಿತ್ರದ ಸೂಕ್ಷ್ಮ ಅಂಶ ಮಾತ್ರ.ಜಲಾಲ್,ವಾಲೀದ್ ಪಕ್ಕದ ಮನೆಗೆ ಬಂದಾಗ ಕಿರಿಕಿರಿಯೊಂದಿಗೆ ಪ್ರಾರಂಭವಾದ ಪರಿಚಯ ಗಾಢವಾಗಿ,ಅನೂಹ್ಯ ರೀತಿಗೆ ತಿರುಗುತ್ತದೆ.ಇಸ್ರೇಲ್,ಪಾಲೆಸ್ತೀನ್ ರಾಜಕೀಯ ನೇರವಾಗಿ ಚಿತ್ರದಲ್ಲಿ ಪ್ರಸ್ತಾಪವಾಗದಿದ್ದರೂ ಒಬ್ಬನ ಖಿನ್ನತೆ, ಮತ್ತೊಬ್ಬನ ಅಸ್ತವ್ಯಸ್ತತೆಯಲ್ಲಿ ಕಾಣಬಹುದು.


ಮಹಿಳಾ ನಿರ್ದೇಶಕಿಯೊಬ್ಬರು ಗಂಡಸರ ಸ್ನೇಹದ ವಿಷಯವನ್ನೆತ್ತಿಕೊಂಡು ಸಿನಿಮಾ ಮಾಡಿದ್ದು ವಿಶೇಷವೇ.ಇಬ್ಬರ ಮನೆಯಲ್ಲು ಗಂಡಸರಿಗೆ ಕೆಲಸವಿಲ್ಲದೆ ಹೆಂಗಸರು ದುಡಿಯುತ್ತಿರುವುದು ಇಸ್ರೇಲ್ ಆಕ್ರಮಿತ ಪ್ರದೇಶದ ವಾಸ್ತವವೂ ಇರಬಹುದೇನೋ?


ಮಹಾ ಹಜ್ ನಿರ್ದೇಶನದ 108 ನಿಮಿಷಗಳ ಚಿತ್ರ ಮುಗಿದಿದ್ದೇ ಗೊತ್ತಾಗುವುದಿಲ್ಲ.


17

A MINOR


ಮೂರನೇ ದಿನದ ಮೊದಲ ಸಿನಿಮಾ ಸಂಗೀತ ಕಚೇರಿಯಿಂದಲೇ ಶುರುವಾಯಿತೆನ್ನಬಹುದು. ಈಗಷ್ಟೇ ಹದಿನೆಂಟು ತುಂಬಿದ ನಾದಿಗೆ ಸಂಗೀತ ಕಲಿಯವ ಮಹದಾಸೆ.ಸಂಗೀತ ಬಿಟ್ಟು ಓದಿನಲ್ಲೂ ಅವಳಿಗೆ ಆಸಕ್ತಿಯಿಲ್ಲ.ತಂದೆ ಸಂಗೀತಕ್ಕೆ ವಿರೋಧ.


ತಾತನ ಪ್ರೋತ್ಸಾಹವಿದೆ.ಮಗನಿಗೆ ಬಾಲ್ಯದಿಂದಲೂ ಫ್ಯಾಸಿಸ್ಟ್ ಮನೋಸ್ಥಿತಿ ಎನ್ನುವ ತಾತನಿಗೆ ಕಾಡುವ ನೋವೊಂದಿದೆ.ಅದನ್ನು ಮರೆಸಲು ಮೊಮ್ಮಗಳು, ತಂದೆ-ತಾಯಿ ಇಲ್ಲದ ವೇಳೆಯಲ್ಲಿ ತಾತನ ಹುಟ್ಟು ಹಬ್ಬವನ್ನು ಆಚರಿಸುವ ವ್ಯವಸ್ಥೆ ಮಾಡುತ್ತಾಳೆ.ಅದು ಅವಳ ಇಚ್ಚೆಯಂತೆ ನಡೆಯುತ್ತದೆಯೇ ಎನ್ನುವ ಪ್ರಶ್ನೆಗೆ ಉತ್ತರ ಸಿನಿಮಾದಲ್ಲಿದೆ.


ಗಿಟಾರ್,ಸಂತೂರ್ ಮುಂತಾದ ವಾದ್ಯಗಳು,ಹಾಡುಗಳು ಆಡಿಟೋರಿಂನಲ್ಲಿ ಪ್ರತಿಧ್ವನಿಸಿ ಹೃದಯ ತುಂಬುತ್ತದೆ.'ಚಿನ್ನ ಗಂಡಸರಂತೆ ಬಣ್ಣ ಬದಲಿಸುವುದಿಲ್ಲವಾದುದರಿಂದ ಹೆಣ್ಣು ಮಕ್ಕಳಿಗೆ ಇಷ್ಟ' ಎನ್ನುವ ಮಾತು ಮಹಿಳೆಯರಿಗೆ ಖಂಡಿತಾ ಇಷ್ಟವಾಗುತ್ತದೆ.


ನಾಯಕಿ ನಟಿ ಮುದ್ದಾಗಿದ್ದಾಳೆ,ಭಾವನೆಗಳನ್ನು ಅಭಿವ್ಯಕ್ತಿಸುವ ರೀತಿಯೂ ಚೆನ್ನಾಗಿದೆ.ಸ್ತ್ರೀ ಸ್ವಾತಂತ್ರ‍್ಯದAತಹ ಗಹನವಾದ ವಿಷಯ ಕುಟುಂಬಕ್ಕಷ್ಟೇ ಸೀಮಿತವಾಗುಳಿಯುವುದು ಸಿನಿಮಾ ಕೊರತೆ.


ಇರಾನಿನ ಈ ಚಿತ್ರದ ನಿರ್ದೇಶಕ:ದಾರಿಯುಷ್ ಮೆಹರ್ಜುಯಿ.


ಸಿನೋಪ್ಸಿಸ್ ನಲ್ಲಿ ಈ ಚಿತ್ರದ ಬಗ್ಗೆ ಇಂಗ್ಲಿಷ್,ಕನ್ನಡ ಭಾಷೆಗಳಲ್ಲಿ ಸಂಪೂರ್ಣ ತಪ್ಪು ಮಾಹಿತಿ ನೀಡಲಾಗಿದೆ.ಇಂತಹ ಬೇಜವಾಬ್ದಾರಿ ಕೆಲಸ ಆಗದಂತೆ ಆಯೋಜಕರು ನಿಗಾ ವಹಿಸಬೇಕು.


18

NO BEARS


ಜಾಫರ್ ಫನಾಹಿ ಹೆಸರು ಸಿನಿಮಾಸಕ್ತರಿಗೆ ಯಾರಿಗೆ ಗೊತ್ತಿಲ್ಲ.ಕೆಲವು ಚಿತ್ರಗಳಲ್ಲಿ ಅವರನ್ನು ಕಂಡಿರುವವರು ನೋ ಬರ‍್ಸ್ನಲ್ಲಿ ಮತ್ತೆ ನೋಡಬಹುದು.


ಇರಾನಿನ ಹಳ್ಳಿಯೊಂದರಲ್ಲಿ ವಾಸಕ್ಕೆ ಬರುವ ಫನಾಹಿ ಅನಪೇಕ್ಷಿತ ಘಟನೆಗಳನ್ನು ಎದುರಿಸಬೇಕಾಗುತ್ತದೆ.ಹೊಕ್ಕಳು ಬಳ್ಳಿಯನ್ನು ಕತ್ತರಿಸುವಾಗ ಯಾರನ್ನು ಮದುವೆಯಾಗಬೇಕೆಂದು ಹೇಳುತ್ತಾರೋ ಅದನ್ನು ಮೀರುವಂತಿಲ್ಲ.ಇದು ಆ ಊರ ನಂಬಿಕೆ.ಗೊತ್ತು ಪಡಿಸಿದ ಹುಡುಗನ ಬದಲು ಮತ್ತೊಬ್ಬನನ್ನು ಪ್ರೀತಿಸುವ ಹುಡುಗಿ, ಮತ್ತವಳ ಪ್ರಿಯತಮ ಜೊತೆಗಿರುವ ಪೋಟೋ ಫನಾಹಿ ತೆಗೆದಿದ್ದಾರೆ ಎಂದು ಊರವರು ತಿಳಿದುಕೊಂಡಿರುತ್ತಾರೆ. ತೆಗೆದಿಲ್ಲ ಎನ್ನುವುದನ್ನು ಫನಾಹಿ ಸಿದ್ಧಪಡಿಸಬೇಕಾಗುತ್ತದೆ.


ಇದಕ್ಕೆ ಸಮಾನಾಂತರವಾಗಿ ಇನ್ನೊಂದು ಪ್ರೀತಿಯ ಕತೆಯಿದೆ.ಇರಾನಿನ ಬದುಕಿಗೆ ರೋಸಿ ಹೋಗಿ ಫ್ರಾನ್ಸ್ ಗೆ ತೆರಳಲು ಒಂದು ಜೋಡಿ ಪ್ರಯತ್ನಿಸುತ್ತಿರುತ್ತದೆ.ಗಂಡನನ್ನು ಬಿಟ್ಟು ಹೋಗಲು ಹೆಂಡತಿಗೆ ಇಷ್ಟವಿಲ್ಲ.ಕೊನೆಗೆ ಅವರ ಫೇಕ್ ಪಾಸ್ ಪೋರ್ಟ್ ಸಿದ್ಧವಾಗುತ್ತದೆ.ಈ ಗಂಡು ಹೆಣ್ಣಿನ ನಿಜ ಬದುಕನ್ನು ದೃಶ್ಯೀಕರಿಸಲು ಫನಾಹಿ ಹೇಳಿರುತ್ತಾರೆ.ಇದರಿಂದ ಅವರ ಮೋಸ ದಾಖಲಾಗುತ್ತದೆ.


ಒಂದು ಕಡೆ ಮೂಢನಂಬಿಕೆ,ಇನ್ನೊಂದು ಕಡೆ ಫೇಕ್.ಸಂಪ್ರದಾಯದ ಹತೋಟಿ ಒಂದೆಡೆಗಿದ್ದರೆ,ಕಾನೂನಿನ ಕಿರುಕುಳ ಇನ್ನೊಂದು ಕಡೆ. ಒಂದು ಕಡೆ ಪ್ರೀತಿಗೆ ಫನಾಹಿಯೇ ತಪ್ಪಿತಸ್ಥನಂತೆ ಕಂಡರೆ ಇನ್ನೊಂದು ಕಡೆಯಲ್ಲಿ ಜನರೇ ಕಾರಣ.'ಅಲ್ಲಿ ಬೇರ್ಸ್ ಇದೆ' ಎಂದು ಹೇಳುವ ಪಾತ್ರವೇ 'ಬೇರ್ಸ್' ಇಲ್ಲ ಎಂದೂ ಹೇಳುತ್ತೆ.ಬರ‍್ಸ್ ಎನ್ನುವುದು ಮನುಷ್ಯರೇ ಅಗಿರಬಹುದೇನೋ?


ಟೆಹೆರಾನ್ ನಿಂದ ಕಣ್ತಪ್ಪಿಸಿ ಹಳ್ಳಿಗೆ ಬರುವ ಫನಾಹಿಯ ಪಾತ್ರ ನಿಜವಾದಂತೆ ಚಿತ್ರ ಬಿಡುಗಡೆಯಾಗುವ ಮೊದಲೇ ಅವರನ್ನು ಬಂಧಿಸಿ,ಆರು ವರ್ಷಗಳ ಸೆರೆಮನೆಗೆ ತಳ್ಳಿದ್ದು ವಿಪರ್ಯಾಸ. 


19

WHEN THE WAVE ARE GONE


ಲಾಜ್ ಡಯಾಸ್ ಸಿನಿಮಾ ಆತುರ ಪಡುವವರಿಗಲ್ಲ.ಹತ್ತು ಗಂಟೆಯ ಸಿನಿಮಾ ಮಾಡಿದ, ದೀರ್ಘಾವಧಿಯ ಸಿನಿಮಾಗಳಿಗೆ ಹೆಸರಾದ ಈ ನಿರ್ದೇಶಕ ಈ ಸಲ ಮೂರು ಗಂಟೆ ಸಿನಿಮಾ ಮಾಡಿ ಉಪಕಾರ ಮಾಡಿದ್ದಾರೆ.


ಫಿಲಿಪೈನ್ಸ್ ನಲ್ಲಿ ಡುಕಾರ್ಟೆ ಅಧಿಕಾರಕ್ಕೆ ಬಂದ ಮೇಲೆ ಮಾದಕ ದೃವ್ಯ ವ್ಯವಹಾರದ ಮೇಲೆ ಅತಿರೇಕದ ಕ್ರಮಗಳನ್ನು ಕೈಕೊಂಡರು.ಪೋಲೀಸರು ಎಗ್ಗಿಲ್ಲದೆ ಜನರನ್ನು ಪೀಡಿಸಿ,ಕಾರಣವಿಲ್ಲದೆ ಹತ್ಯೆಗಳನ್ನು ಮಾಡಿದರು.


ಇನ್ ವೆಸ್ಟಿಗೇಷನಲ್ಲಿ ಪರಿಣಿತನಾದ ಲೆಫ್ಟಿನೆಂಟನೊಬ್ಬ ಹಲವು ಕೇಸುಗಳನ್ನು ಪರಿಹರಿಸಿದ್ದರೂ ಮಾಡಬಾರದ ಕೆಲಸಗಳನ್ನೂ ಮಾಡಿರುತ್ತಾನೆ.ಚರ್ಮರೋಗದಿಂದಾಗಿ ರಜೆ ಪಡೆದು ಹುಟ್ಟೂರಿಗೆ ಬಂದಿದ್ದಾನೆ.ಅವನಿಗೆ ಪೋಲೀಸ್ ಡಿಪಾರ್ಟ್ಮೆಂಟ್ ನಲ್ಲಿ ಶಿಕ್ಷಕನಾಗಿದ್ದ ವ್ತಕ್ತಿ,ಹಲವು ಹತ್ಯೆಗಳನ್ನು ಮಾಡಿ, ದೃವ್ಯದ ವ್ಯಾಪಾರವನ್ನೂ ಮಾಡಿರುತ್ತಾನೆ.ಲೆಫ್ಟಿನೆಂಟ್ ಅವನನ್ನು ತನಿಖೆಗೊಳಪಡಿಸಿ ಹತ್ತು ವರ್ಷ ಶಿಕ್ಷೆಯಾಗುವಂತೆ ಮಾಡಿರುತ್ತಾನೆ. ಬಿಡುಗಡೆಯಾದ ಬಳಿಕ ಸೇಡು ತೀರಿಸಲು ಆತ ಲೆಫ್ಟಿನೆಂಟ್ ನನ್ನು ಹುಡುಕಿಕೊಂಡು ಬರುತ್ತಾನೆ.


ಕಪ್ಪು ಬಿಳುಪಿನ ಈ ಚಿತ್ರ ಅವಸರವಿಲ್ಲದೆ ಪ್ರತಿಯೊಂದು ಸನ್ನಿವೇಶವನ್ನೂ ಬಿಡಿಬಿಡಿಯಾಗಿ ಕಟ್ಟಿಕೊಡುತ್ತದೆ.ಇಲ್ಲಿ ವ್ಯಕ್ತಿಗಳಿಗಿಂತ ಪರಿಸರವೇ ಮುಖ್ಯ.ಕ್ಲೋಸ್ ಅಪ್ ಶಾಟ್ ಗಳು ಇಲ್ಲವೇ ಇಲ್ಲವೆನ್ನಬಹುದು.ಆಕ್ರೋಶದ,ಕೊಲ್ಲುವ ದೃಶ್ಯಗಳಲ್ಲೂ ಅತ್ಯಂತ ಸಂಯಮ.ಫಿಲಿಫೈನ್ಸ್ ನ ಸರ್ವಾಧಿಕಾರದ ಅತಿರೇಕವನ್ನು ತಣ್ಣಗೆ ಕರುಳಿಗಿಳಿವಂತೆ ಹೇಳುವ ವಿಧಾನವೇ ವಿಶೇಷ.


ಚಲನಚಿತ್ರದ ವಿದ್ಯಾರ್ಥಿಗಳು ತಪ್ಪದೇ ನೋಡಬೇಕಾದ ಚಿತ್ರ. 

20MY BROTHERS DREAM AWAKE


21ನೇ ಶತಮಾನದ ಮೊದಲ ದಶಕದಲ್ಲಿ ಚಿಲಿಯ ಬಾಲಾಪರಾಧಿಗಳ ಕಾರಾಗೃಹ ಸುಟ್ಟು ಹತ್ತು ಬಾಲಕರು ಮರಣಿಸಿದ ನಿಜಘಟನೆಯನ್ನಾಧರಿಸಿದ ಚಿತ್ರ.


ಆದರೆ,ಅಷ್ಟೇ ಆಗಿದ್ದರೆ ಚಿತ್ರ ಇಷ್ಟವಾಗುತ್ತಿರಲಿಲ್ಲ.ಬಾಲಕರ ಅಸೆ,ಆಕಾಂಕ್ಷೆಗಳು,ಮಾನವೀಯ ತುಡಿತಗಳನ್ನು ಚಿತ್ರ ಕಟ್ಟಿಕೊಡುತ್ತದೆ.ಸೆರೆಮನೆಯ ಮೇಲ್ವಿಚಾರಕಿ,ನಿಮ್ಮ ಬದುಕನ್ನು ಉತ್ತಮ ಪಡಿಸಲು ಯತ್ನಸುತ್ತೇವೆ ಎಂದಾಗ ಬಂಧನದಲ್ಲಿ ಬದುಕು ಉತ್ತಮವಾಗದು ಎನ್ನುವ ಮಾತು ಚಿತ್ರದ ಉದ್ದೇಶವನ್ನು ಹೇಳುತ್ತದೆ.


21

CLOSE


ಅಕ್ಕಪಕ್ಕದ ವಸತಿ ಪ್ರದೇಶದಲ್ಲಿರುವ ಲಿಯೋ ಮತ್ತು ರೆಮಿ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಸ್ನೇಹಿತರು.ಅವರ ಗೆಳೆತನ 'ಹೋಮೋ' ಎಂದು ಸಹಪಾಠಿಗಳ ಗೇಲಿಗೂ ತುತ್ತಾಗುತ್ತದೆ.ಒಮ್ಮೆ ರೆಮಿ ಮುಂದುವರೆದಾಗ ಲಿಯೋ ನಿರಾಕರಿಸುತ್ತಾನೆ.ರೆಮಿ ಇಲ್ಲವಾದ ನಂತರ ಲಿಯೋಗೆ ನೋವಿನಿಂದ ಬಿಡುಗಡೆ ಪಡೆಯಲು ಕಷ್ಟವಾಗುತ್ತದೆ.ಅತ ರೆಮಿ ತಾಯಿಗೆ ಕಾರಣ ತಿಳಿಸುವ ಧೈರ್ಯ ಮಾಡುತ್ತಾನೆ.


ಹೋಮೋ ಸೆಕ್ಷುವಾಲಿಟಿ ಗೇಲಿಯ ವಿಷಯವೇ ಎನ್ನುವ ಪ್ರಶ್ನೆಯನ್ನು ಚಿತ್ರ ಮೂಡಿಸುವಂತಿದೆ.ಫೋಟೋಗ್ರಫಿ,ಬಿಗಿಯಾದ ಚಿತ್ರಕತೆ,ಎಡಿಟಿಂಗ್ ಮೆಚ್ಚುವ ಅಂಶಗಳು


22

TRIANGLE OF SADNESSರ‍್ಯುಬೆನ್ ಆಸ್ಟ್ ಲುಂಡ್ ಫೋರ್ಸ್ ಮಜುರೆ,ದಿ ಸ್ಕ್ಯಾರ್ ಚಿತ್ರಗಳಿಂದ ತನ್ನದೇ ಆದ ಶೈಲಿಯನ್ನು ರೂಪಿಸಿಕೊಂಡವರು. ಖಿಡಿiಚಿಟಿgಟe oಜಿ Sಚಿಜಟಿess ನಲ್ಲು ಹರಿತ ವ್ಯಂಗ್ಯ, ಸಮಾಜ ಕುರಿತ ತೀಕ್ಷ್ಣ ಟೀಕೆಗಳಿವೆ.


ರೂಪದರ್ಶಿಗಳಾದ ಗಂಡು-ಹೆಣ್ಣು ಹಣಕಾಸಿನ ವಿಷಯದಲ್ಲಿ ಕಚ್ಚಾಡುವುದರೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. ಸಂಬAಧಗಳು ಬೆಸೆದುಕೊಳ್ಳುತ್ತವೆ ಎನ್ನುವಾಗ ಕ್ರುಜ್ ಪ್ರಯಾಣ ಶುರುವಾಗುತ್ತದೆ.


ಕ್ರುಜ್ ನಲ್ಲಿ ಅತಿ ಶ್ರೀಮಂತರ ಶ್ರೀಮಂತಿಕೆಯ ಅಸಹ್ಯ ಪ್ರದರ್ಶನ. ಹರಿತವಾದ ಸಂಭಾಷಣೆಯೂ ಇದೆ.ಇದು ಚಿತ್ರದ ಅತ್ಯಂತ ರಂಜನೀಯ ಭಾಗ.


ಕ್ರುಜ್ ಕಡಲ ನಡುವೆ ಪತನಗೊಳ್ಳುತ್ತದೆ.ದ್ವೀಪವೊಂದರಲ್ಲಿ ಬದುಕುಳಿಯುವವರ ಶ್ರೀಮಂತಿಕೆ ಬುಡಮೇಲಾಗುತ್ತದೆ.ಸ್ವಾರ್ಥ, ಸಣ್ಣತನ,ಸಿದ್ಧಾಂತಗಳ ಮಿತಿ ಇವೆಲ್ಲ ಪ್ರಶ್ನಿಸಲ್ಪಟ್ಟರೂ ಅಷ್ಟಕ್ಕೆ ನಿಂತು ಬಿಡುತ್ತದೆ.


ಬೇಸರವಿಲ್ಲದೆ 150 ನಿಮಿಷ ನೋಡಬಹುದಾದರೂ ಇಷ್ಟೊಂದು ಅದ್ದೂರಿಯ ನಿರ್ಮಾಣದ ಚಿತ್ರ ಹೇಳುವುದಾದರೂ ಏನು ಎನ್ನುವುದೇ ತಿಳಿಯುವುದಿಲ್ಲ. ಚಿತ್ರದಲ್ಲಿ ಸುಖಿಸುವವರಂತೆ ಸುಖಿಸಲು ಅಡ್ಡಿಯಿಲ್ಲ.


23

CRANE LANTERN


ನ್ಯಾಯವೆಂದರೇನು? ತಪ್ಪು ಮಾಡಿದವರಿಗೆಲ್ಲ ಶಿಕ್ಷೆಯಾಗುತ್ತದೆಯೇ? ಅಪರಾಧಕ್ಕೂ ಶಿಕ್ಷೆಗೂ ಸಂಬಂಧವಿದೆಯೇ? ಇಂತಹ ಪ್ರಶ್ನೆಗಳು ಏಳುತ್ತಿರುವ ಈ ಕಾಲದಲ್ಲಿ, 'ಕ್ರೇನ್ ಲಾಂಟ್ರೆನ್' ಚಿತ್ರದ ಮೂಸಾ ಇದೇ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡುತ್ತಾನೆ
ಅಝರ್ ಬೈಜಾನಿನ ಸಿನಿಮಾ, ಬದುಕಿನ ಅರ್ಥ,ನ್ಯಾಯ ತೀರ್ಮಾನದ ಪರಿಮಿತಿಗಳನ್ನು ಶೋಧಿಸುತ್ತದೆ.ಒಳಿತು ಮಾಡುವುದು ಕಾನೂನಿನ ಉದ್ದೇಶ ಎನ್ನುವ ಮಾತೂ ಚಿತ್ರದಲ್ಲಿದೆ.


ನಾಲ್ವರು ಮಹಿಳೆಯರನ್ನು ಬಂಧನದಲ್ಲಿಟ್ಟ ದಾವೂದ್ ಗೆ ಶಿಕ್ಷೆ ನೀಡುವ ಬಗ್ಗೆ ಸಂತ್ರಸ್ತರಿಗೆ ಒಲವಿಲ್ಲ. ಥೀಸಿಸ್ ಬರೆಯುವ ವಿದ್ಯಾರ್ಥಿ ಮೂಸಾ,ಇದರ ಕುರಿತು ಕುತೂಹಲ ತಾಳುತ್ತಾನೆ.ನಾಲ್ವರು ಮಹಿಳೆಯರ ಭೇಟಿ,ಅವರನ್ನು ಬಂಧನದಲ್ಲಿಟ್ಟವನ ಜೊತೆಯ ಸಂವಾದ ವಿದ್ಯಾರ್ಥಿಯನ್ನು ಬದಲಿಸುತ್ತದೆಯೇ,ನ್ಯಾಯದ ಬಗ್ಗೆ ಅರಿವು ಮೂಡುತ್ತದೆಯೇ, ಇದು ಕಥಾ ವಸ್ತು.


ಸಂಭಾಷಣೆ ಕುತೂಹಲಕಾರಿಯಾಗಿದೆ.'ಶಾಲೆಯೆಂದರೆ ಗೋಡೆ ನೋಡುವುದು','ಸಾವಿಗೂ ಬದುಕಿಗೂ ವ್ಯತ್ಯಾಸವೇನಿಲ್ಲ','ಮರ,ಆಕಾಶ,ಪ್ರಾಣಿಗಳನ್ನು ನೋಡುತ್ತಾ ಮೈಮರೆಯುವುದು,ಪುಸ್ತಕ ಓದಿಗಿಂತ ಉತ್ತಮ ಎಂದರಿತೆ'...ಇಂತಹ ಕಾಡುವ ಮಾತುಗಳಿವೆ.


ಈ ಸಿನಿಮಾವನ್ನು ಮೈ ಮರೆತೇ, ಧ್ಯಾನಸ್ಥ ಸ್ಥಿತಿಯಲ್ಲೆ ನೋಡಬೇಕು. ಹಿನ್ನೆಲೆ ಸಂಗೀತ, ಉಚ್ಚ ಸ್ಥಾಯಿಯ ಎರಡು ಹಾಡುಗಳು ಅಪೂರ್ವ ಅನುಭವ ನೀಡುತ್ತವೆ.ಛಾಯಾಗ್ರಹಣವೂ ಈ ಲೋಕದ್ದಲ್ಲ ಎನ್ನುವಂತಿದೆ. ಓಟಿಟಿಯಲ್ಲಿ ನೋಡಿದರೆ ಅನುಭವಕ್ಕೆ ದಕ್ಕಲಾರದ ಈ ಸಿನಿಮಾ ತಾಳ್ಮೆ ಬೇಡುತ್ತದೆ.


ಅವಧಿ: 101 ನಿಮಿಷ.ನಿರ್ದೇಶಕ:ಹಿಲಾಲ್ ಬೈಡರೋವ್


24 

STONE TURTLE


ಈ ಸಿನಿಮಾದ ಬಗ್ಗೆ ಹೇಳುವ ಮೊದಲು ನಿಮಗೊಂದು ಕತೆ ಹೇಳುವೆ:


ಒಂದು ಕೊಳದಲ್ಲಿ ಗಂಡು- ಹೆಣ್ಣು ಆಮೆಗಳೆರಡು ಸುಖವಾಗಿದ್ದವು. ಒಮ್ಮೆ ಪ್ರವಾಹ ಬಂದು ಅವು ಬೇರ್ಪಟ್ಟವು.ಸಂಗಾತಿಯನ್ನು ಹುಡುಕುತ್ತಾ ಗಂಡು ಆಮೆ ಸಂಚರಿಸುತ್ತಿರುವಾಗ ಸಂತ ಏಡಿಯನ್ನು ಭೇಟಿ ಮಾಡಿತು. ಏಡಿ ನೀನೊಂದು ಕೊಳಕ್ಕೆ ಹೋಗು, ಅದರಲ್ಲಿ ಸುಂದರವಾದ ಜೆಲ್ಲಿ,ವಿಧವಿಧ ಮೀನುಗಳಿರುತ್ತವೆ,ಆದರೆ ನೀನದನ್ನು ತಿನ್ನಬಾರದು ಎಂದು ಎಚ್ಚರಿಕೆ ಕೊಡುತ್ತದೆ.ಒಪ್ಪಿ ಕೊಳಕ್ಕೆ ಹೋದ ಆಮೆ,ಮಾತು ಮೀರಿ ಮುಕ್ಕುತ್ತದೆ.ಅದರ ದೇಹವೆಲ್ಲಾ ಕಲ್ಲಾಗುತ್ತದೆ.ಈಗ ಸಿನಿಮಾದ ಹೆಸರು ಹೇಳುವೆ: ಸ್ಟೋನ್ ಟರ್ಟಲ್


ಈಗ ಸಿನಿಮಾದ ಕತೆ:ಕಡಲಾಮೆಗಳ ಮೊಟ್ಟೆ ಮಾರಿ ಹೊಟ್ಟೆ ಹೊರೆಯುವ ಜಹರಾ ತನಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಬೇಕು.ಅದಕ್ಕವಳು ಬೇರೆ ಬೇರೆ ದಾರಿಗಳ ಅನ್ವೇಷಣೆ ಮಾಡುತ್ತಾಳೆ. ಜಹರಾ ಆಮೆಗಳ ಕತೆ ಪೂರ್ಣ ಮಾಡುತ್ತಾಳೆ. ಗಂಡು ಆಮೆಯನ್ನು ಹುಡುಕಿಕೊಂಡು ಬಂದ ಹೆಣ್ಣಾಮೆ,ಸಂತ ಏಡಿ ಹೇಳಿದಂತೆ ಬೆಟ್ಟದ ಮೇಲೆ ಹೂವರಳುವುದನ್ನು ಕಾಯುತ್ತದೆ.ಹೂವರಳಿ ಕಲ್ಲಾಮೆ ತೊಡಿಸುವಾಗ ಮುದಿಯಾದ ಹೆಣ್ಣಾಮೆಗೆ ತಾನೇಕೆ ಇದನ್ನು ಮಾಡಿದೆ ಎನ್ನುವುದೇ ಮರೆತು ಹೋಗಿರುತ್ತದೆ.


ಕನ್ಫ್ಯೂಸ್ ಆಯಿತೇ? ಕುತೂಹಲ ಹುಟ್ಟಿಸಿದರೂ ಸಿನಿಮಾ ಹಾಗೇ ಇರುವುದು.
ತೊಂಬತ್ತೊಂದು ನಿಮಿಷದ ಮಲೇಷ್ಯಾ ಸಿನಿಮಾದ ನಿರ್ದೇಶಕ ವು ವಿಂಗ್ ಜಿನ್.