ಅದಾನಿ : ಈಗ ನಾವೇನು ಮಾಡಬೇಕಿದೆ

 ಅದಾನಿ ಕಂಪನಿಯ ದಗಾಕೋರತನಕ್ಕೆ ಶಿಕ್ಷೆ ಆಗಲೇಬೇಕು

ಅದಾನಿ : ಈಗ ನಾವೇನು ಮಾಡಬೇಕಿದೆ

 

ಕ್ರಿಯೆ-ಪ್ರತಿಕ್ರಿಯೆ

ನಾಗೇಗೌಡ ಕೀಲಾರ ಶಿವಲಿಂಗಯ್ಯ

ಅದಾನಿ : ಈಗ ನಾವೇನು ಮಾಡಬೇಕಿದೆ

    ಆಕ್ಟಿವಿಸ್ಟ್ ಶಾರ್ಟ್ ಸೆಲ್‍ ಎಂದು ಹೇಳಿಕೊಳ್ಳುವ  ಹಿಂಡೆನ್‍ಬರ್ಗ್‍ ಎಂಬ 2017ರಲ್ಲಿ ಕಾರ್ಯಾರಂಭ ಮಾಡಿರುವ ಅಮೆರಿಕದಲ್ಲಿರುವ ಶೇರು ಮಾರುಕಟ್ಟೆ ಸಂಶೋಧನಾ ಕಂಪನಿ, ಇಂಡಿಯಾದ ಗುಜರಾತ್ ಮೂಲದ ಅದಾನಿ ಕಂಪನಿಯ ವಂಚನೆ, ದಗಲ್‍ಬಾಜಿತನವನ್ನು 103 ಪುಟಗಳಲ್ಲಿ 83 ಪ್ರಶ್ನೆಗಳ ರೂಪದಲ್ಲಿ ಪಬ್ಲಿಕ್ ಡೊಮೇನ್‍ನಲ್ಲಿ  ಜನವರಿ 23ರಂದು ಪ್ರಕಟಿಸಿತು.

    ಅದಾನಿ ಕಂಪನಿ ಕಳೆದ ಮೂರು ವರ್ಷಗಳಲ್ಲಿ ತನ್ನ ಶೇರುಗಳ ಮೌಲ್ಯವನ್ನು ಕುತಂತ್ರದಿಂದ ಅಪಾರ ಪಟ್ಟು  ಹೆಚ್ಚಿಸಿಕೊಳ್ಳುವ ಮೂಲಕ  ಜಗತ್ತಿನ ಮೂರನೇ ಅತಿ ದೊಡ್ಡ ಶ್ರೀಮಂತ ಸಂಸ್ಥೆ ಎನಿಸಿಕೊಂಡಿದೆ. ತನ್ನ ಆಸ್ತಿಗಿಂತ ಹೆಚ್ಚು ಪಟ್ಟು ಸಾಲ ಪಡೆದು, ವಿದೇಶಗಳಲ್ಲಿ ನಕಲಿ ಕಂಪನಿಗಳನ್ನು ಆರಂಭಿಸಿ, ಆ ಕಂಪನಿಗಳ ಮೂಲಕ ತನ್ನ ಶೇರಿನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಇಂಥ ಕಾರಣಗಳಿಂದಾಗಿ ಈ ಆದಾನಿ ಕಂಪನಿಯ ಶೇರುಗಳ ಮೌಲ್ಯ  80% ಕುಸಿಯಲಿದೆ ಎಂಬ ಅಕ್ಷರ ಬಾಂಬ್‍ ಅನ್ನು ಹಾಕಿಬಿಟ್ಟಿತು.

   ಈ ವರದಿ ಶೇರು ಮಾರುಕಟ್ಟೆಯಲ್ಲಿ ಭಯಂಕರ ಪರಿಣಾಮವನ್ನು ಉಂಟು ಮಾಡಿತು. ಸಹಜವಾಗೇ ತನಗೆ ಆಪ್ತವಾಗಿರುವ ಒಕ್ಕೂಟ ಸರ್ಕಾರದ ಬೆಂಬಲವನ್ನು ನೆಚ್ಚಿಕೊಂಡು ಹಾಗೂ ಬಳಸಿಕೊಂಡು ಮೊದಲ ಎರಡು ಮೂರು ದಿನಗಳ ಕಾಲ ಏನೂ ಆಗೇ ಇಲ್ಲವೇನೋ, ಏನೋ ಆಗುವುದೇ ಇಲ್ಲವೇನೋ ಎಂಬಂತೆ ಪೋಸ್ ಕೊಟ್ಟ ಅದಾನಿ, ಕಡೆಗೆ ಇದೆಲ್ಲ ಭಾರತದ ಮೇಲೆ ನಡೆದಿರುವ ಜಾಗತಿಕ ಪಿತೂರಿ, ಈ ಸಂಸ್ಥೆ ವಿರುದ್ಧ ದಾವೆ ಹೂಡುತ್ತೇನೆ ಎಂದೆಲ್ಲ ತಿಪ್ಪೇ ಸಾರಿಸಲು ಹೊರಟಿತೇ ಹೊರತು, ಹಿಂಡೆನ್‍ಬರ್ಗ್‍ ಹಾಕಿದ ಪ್ರಶ್ನೆಗಳಿಗೆ ಉತ್ತರ ನೀಡುವ ಸಾಹಸ ಮಾಡಲಿಲ್ಲ. ಅದಾನಿಯ ಮ್ಯಾಜಿಕ್ ನಡೆಯಲಿಲ್ಲ. ದಿನೇ ದಿನೇ ಅದಾನಿ ಕಂಪನಿಗಳ ಶೇರು ಮೌಲ್ಯ ಕುಸಿತ ಕಂಡು, ಗುರುವಾರದ ಹೊತ್ತಿಗೆ 70%ನಷ್ಟು ಕೆಳಕ್ಕೆ ಇಳಿದು ಬಿಟ್ಟಿತು. ಮೋರ್ ಆರ್ ಲೆಸ್‍ ಹಿಂಡೆನ್‍ಬರ್ಗ್ ನುಡಿದ ಭವಿಷ್ಯವನ್ನು ನಿಜ ಮಾಡಿಬಿಟ್ಟಿತು.

 ಅದಾನಿ ಕಂಪನಿಯ ದಗಾಕೋರತನಕ್ಕೆ ಶಿಕ್ಷೆ ಆಗಲೇಬೇಕು, ಆದರೆ ಅವರಿಗೆ ಶಿಕ್ಷೆ ಆಗುತ್ತ ಅನ್ನೋದು ನಾವೆಲ್ಲರೂ ಈ ದೇಶದ ನಾಗರಿಕರಾಗಿ ಹಾಕುವ ರಾಜಕೀಯ ಒತ್ತಡದ ಮೇಲೆ ಅವಲಂಬಿತವಾಗಿದೆ.

 

  1. ಇಂತಹ ಒಂದು ಆರ್ಥಿಕ ಕ್ರೈಮ್ ಅನ್ನು ಇತರೆ ರಾಜಕೀಯ ಪಕ್ಷಗಳು ಒಂದು ದೊಡ್ಡ ರಾಜಕೀಯ ಹೋರಾಟವಾಗಿ ಪರಿವರ್ತನೆ ಮಾಡಬಹುದಿತ್ತು. ಇನ್ನು ಕಾಲ ಮಿಂಚಿಲ್ಲ. ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಈ ಪ್ರಮಾದ ಕುರಿತು ಒಂದು ದೊಡ್ಡ ರಾಜಕೀಯ ಹೋರಾಟವನ್ನು ಹುಟ್ಟು ಹಾಕುತ್ತವೆ ಎಂದು ಆಶಿಸುತ್ತೇನೆ.
  2. ನಾವುಗಳು ರಾಜಕೀಯ ನಾಯಕರು ಮತ್ತು ಪಕ್ಷಗಳನ್ನು ನಂಬಿಕೊಂಡು ಕೂತರೆ ದೇಶದ ಆರ್ಥಿಕ ವ್ಯವಸ್ಥೆಯೇ ಮುಳುಗಿ ಹೋಗುತ್ತದೆ.
  3. ನಮ್ಮ ಇತಿ ಮಿತಿಯಲ್ಲಿ, ನಮಗೆ ಇರುವ ಪ್ರಚಾರದ ಟೂಲ್ ಗಳಾದ ಸೋಶಿಯಲ್ ಮೀಡಿಯಾ ಉಪಯೋಗಿಸಿಕೊಂಡು ಒಂದು ದೊಡ್ಡ ಮಟ್ಟದ ರಾಜಕೀಯ ಹೋರಾಟವನ್ನು ಹುಟ್ಟು ಹಾಕಬೇಕು.
  4. ಮೊದಲನೇಯದಾಗಿ ಎಲ್‍ಐಸಿ , ಯಾವ ಕಂಪೆನಿಗಳ ಮೇಲೆ ಬಂಡವಾಳ ಹೂಡಿದೆ, ಬಂಡವಾಳ ಹೂಡಿಕೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಹೂಡಿಕೆ ಮಾಡಿದ್ದಿರಾ ಅಥವಾ ಸರ್ಕಾರ ನಡೆಸುವವರ ಮಾತಿಗೆ ತಲೆಬಾಗಿ ಕೊಟ್ಟಿದ್ದಿರಾ, ಕೊಟ್ಟಿದ್ದರೆ ಎಷ್ಟು ಕೊಟ್ಟಿದ್ದೀರಿ ಅನ್ನುವ ಲೆಕ್ಕವನ್ನು ಸಾರ್ವಜನಿಕಗೊಳಿಸುವಂತೆ ಒತ್ತಾಯ ಮಾಡಬೇಕು.
  5. ಎರಡನೇಯದಾಗಿ ನಮ್ಮ ರಾಷ್ಟ್ರೀಕೃತ ಬ್ಯಾಂಕ್ ಗಳ ಎನ್‍ಪಿಎ ಎಷ್ಟಿದೆ, ಕದ್ದು ಮುಚ್ಚಿ ಎಷ್ಟು ಲಕ್ಷ ಕೋಟಿ ರೂಪಾಯಿಗಳನ್ನು ರೈಟ್ ಆಫ್ ಮಾಡಿದ್ದೀರಿ, ಯಾರೆಲ್ಲರಿಗೂ ಸರಿಯಾದ ಗ್ಯಾರಂಟಿ ಇಲ್ಲದೇ ಸಾಲ ಕೊಟ್ಟಿದ್ದೀರಿ. ಯಾವೆಲ್ಲ ಕಂಪೆನಿಗಳಿಗೆ ವಿದೇಶಗಳಲ್ಲಿ ನೀವು ಗ್ಯಾರಂಟಿ ನಿಂತಿದ್ದೀರಿ, ಏಕೆ ರಾಷ್ಟ್ರೀಕೃತ ಬ್ಯಾಂಕ್ ಗಳ ಲೂಟಿ ನಡೆಯುತ್ತಿದೆ. ಈ ಲೂಟಿ ಹಿಂದೆ ಇರುವ ವ್ಯಕ್ತಿಗಳು ಯಾರು ಅನ್ನುವುದನ್ನು ನಮಗೆ ತಿಳಿಸಿ ಅನ್ನುವ ಒತ್ತಡವನ್ನು ಸೃಷ್ಟಿಸಬೇಕು.
  6. ಮೂರನೇಯದಾಗಿ ದಶಕಗಳಿಂದ ದೇಶದಲ್ಲಿ ತಾಂಡವ ಆಡುತ್ತಿರುವ ಕ್ರೋನಿ ಕ್ಯಾಪಿಟಲಿಸಮ್‍ ಅನ್ನು ಹೇಗೆ ಅಂತ್ಯಗೊಳಿಸುವುದು. ಅಂತ್ಯಗೊಳಿಸಲು ನಮ್ಮ ರಾಜಕಾರಣಿಗಳನ್ನು ಯಾವೆಲ್ಲ ರೀತಿಯಲ್ಲಿ ನಾವುಗಳು ಪ್ರಶ್ನಿಸಿ ಅವರನ್ನು ಉತ್ತರದಾಯಿಗಳನ್ನಾಗಿ ಮಾಡಬೇಕು ಅನ್ನುವುದರ ದೊಡ್ಡ ಚರ್ಚೆಯನ್ನು ನಾವೆಲ್ಲರೂ ಸೇರಿ ಹುಟ್ಟು ಹಾಕಬೇಕು.
  7. ಕೊನೆಯದಾಗಿ ನಾವುಗಳು ಕೇವಲ ಮತ ಹಾಕುವ "ಜನ" ಅಲ್ಲ ನಾವೆಲ್ಲರೂ ಅರಿವು ಉಳ್ಳ ನಾಗರಿಕರು ಅನ್ನುವುದನ್ನು ಈ ದೇಶದ ಭ್ರಷ್ಟ ರಾಜಕಾರಣಿಗಳಿಗೆ ಮತ್ತು ಕ್ರೋನಿ ಕ್ಯಾಪಿಟಲಿಸ್ಟರಿಗೆ ತಿಳಿಸಬೇಕು. ಇಲ್ಲವಾದರೆ ಇವರುಗಳು ನಮ್ಮನ್ನು ನಾಯಿಗಳ ತರ ಪರಿಗಣಿಸಿ ತಮ್ಮ ಲೂಟಿಯನ್ನು ಮುಂದುವರೆಸುತ್ತಾರೆ.

( ಸಂಪಾದಕನ ಟಿಪ್ಪಣಿ: ನಾಗೇಗೌಡ ಕೀಲಾರ ಶಿವಲಿಂಗಯ್ಯ ಹೆಸರಿನ ಫೇಸ್ ಬುಕ್‍ನಲ್ಲಿ ಪರಿಚಿತರಾಗಿರುವ ಗೆಳೆಯರು ಹಿಂಡೆನ್‍ಬರ್ಗ್ ಹೊರತಂದ ಅದಾನಿ ಕಂಪನಿಯ ದಗಾಕೋರತನವನ್ನು ಎಂಟತ್ತು ದಿನಗಳಿಂದ ಅವರ ವಾಲ್‍ನಲ್ಲಿ ನಿರಂತರವಾಗಿ ವಿಶ್ಲೇಷಿಸುತ್ತಾ ಬಂದಿದ್ದಾರೆ. ನಾಗೇಗೌಡರ ಕನ್ನಡವನ್ನು ನಿಮ್ಮೆಲ್ಲರ ಮೇಲೆ ಯಥಾವತ್ತು ಹೇರಲು ದಮ್ ಇಲ್ಲದ ನಾನು, ನಮ್ಮ ನಿಮ್ಮೆಲ್ಲರ ರೂಡಿಗತ ಕನ್ನಡದಲ್ಲಿ ಅವರ ವಿಚಾರವನ್ನು ಸಂಕ್ಷಿಪ್ತವಾಗಿ ಇಲ್ಲಿರಿಸಿದ್ದೇನೆ.)