ರಿಪೇರಿ ಬೇಕು ಎಂದಾದರೆ ‘ಜಸ್ಟ್ ಡೂ ಇಟ್’- ಒಂದು ಗಳಿಗೆ - ಕುಚ್ಚಂಗಿ ಪ್ರಸನ್ನ
ರಿಪೇರಿ ಬೇಕು ಎಂದಾದರೆ ‘ಜಸ್ಟ್ ಡೂ ಇಟ್’-ಒಂದು ಗಳಿಗೆ -ಕುಚ್ಚಂಗಿ ಪ್ರಸನ್ನ, Bevarahani-newss-paper-kannada-daily-ondu-galige-article-kuchangi-prasanna
ಗುತ್ತಿಗೆದಾರರು ಸರ್ಕಾರ ಅಂದರೆ, ಇಲಾಖೆಯ ಇಂಜಿನಿಯರ್‌ಗಳು ಹಾಗೂ ಅಧಿಕಾರಸ್ಥ ರಾಜಕಾರಣಿಗಳಾದ, ಗ್ರಾಮ ಪಂಚಾಯ್ತಿ ಸದಸ್ಯರಿಂದ ಹಿಡಿದು ಶಾಸಕರು,ಸಂಸದರು ಹಾಗೂ ಮಂತ್ರಿಗಳ ಪಾಲಿಗೆ 24/7 ಬಯಸಿದ್ದನ್ನೆಲ್ಲ ಒದಗಿಸುವ ಕಾಮಧೇನು ಹಾಗೂ ಕಲ್ಪವೃಕ್ಷದಂತೆ .
ರಿಪೇರಿ ಬೇಕು ಎಂದಾದರೆ ‘ಜಸ್ಟ್ ಡೂ ಇಟ್’
ಒಂದು ಗಳಿಗೆ
ಕುಚ್ಚಂಗಿ ಪ್ರಸನ್ನ
ಯಾರನ್ನಾದರೂ ಹೊಸದಾಗಿ ಪರಿಚಯ ಮಾಡಿಕೊಳ್ಳೋವಾಗ “ನನ್ನ ಹೆಸರು ‘ ಕುಚ್ಚಂಗಿ ಪ್ರಸನ್ನ’ ”ಅಂತೀನಿ,
“ಹೌದು ಹೌದು ಕೇಳಿದ್ದೀನಿ, ಈ ಉಚ್ಚಂಗಿ ಅಂದ್ರೆ ಚಿತ್ರದುರ್ಗದ ಹತ್ರ ಇದೆ ಅಲ್ವಾ” ಅಂತಾರೆ.
“ ಅಲ್ಲ ಅಲ್ಲ ಸಾರ್, ಅದು ಉಚ್ಚಂಗಿ ನಮ್ಮೂರು ಕುಚ್ಚಂಗಿ, ಕ ಕೊಂಬು ಕು, ಕುಚ್ಚಂಗಿ , ಅದು ಇಲ್ಲೇ ತುಮಕೂರು ತಾಲೂಕಿಗೆ ಸೇರಿದೆ, ಇಲ್ಲಿಗೆ ಎಂಟೇ ಕಿಲೋಮೀಟರ್” ಅಂತ ಸ್ಪಷ್ಟನೆ ಕೊಡ್ತೀನಿ.
ಜಿಲ್ಲಾ ಕೇಂದ್ರ ತುಮಕೂರಿಗೆ ಕೇವಲ ಐದು ಮೈಲಿ ಅಥವಾ ಎಂಟರಿAದ ಒಂಬತ್ತು ಕಿಲೋಮೀಟರ್‌ಗಳಷ್ಟು ಸಮೀಪದಲ್ಲೇ ಇದ್ದರೂ ಈಗಲೂ ನಗರದ ಬಹಳಷ್ಟು ಜನರಿಗೆ ಕುಚ್ಚಂಗಿ ಅಂದರೆ ಅದೇನು, ಊರ ಹೆಸರಾ , ಅದೆಲ್ಲಿದೆ, ಉಚ್ಚಂಗೀನಾ, ಉಚ್ಚಂಗಿ ಚಿತ್ರದುರ್ಗದ ಹತ್ತಿರ ಇರೋದಲ್ವಾ ಅಂತಾ ಕೇಳ್ತಾರೆ.
“ಇಲ್ಲ ಸಾರ್, ಇಲ್ಲೇ ತುಮಕೂರಿನಿಂದ ಅರಕೆರೆ ಮೇಲಾಸಿ ತೋವಿನಕೆರೆಗೆ ಹೋಗ್ತೀವಲ್ಲಾ, ಅದೇ ದಾರೀಲಿ ಅರಕೆರೆ ಆದ ಮೇಲೆ ಮೂರು ಕಿಲೋಮೀಟರ್ ಅಷ್ಟೇ, ಎಡಗಡೆ ಒಂದು ಕಿಲೋಮೀಟರ್ ಒಳಕ್ಕೆ ಸಾಗಬೇಕು, ನಮ್ಮೂರಲ್ಲಿ ಬಹಳ ಪುರಾತನವಾದ ಒಂದು ಜೈನರ ಬಸದಿ ಕೂಡಾ ಇದೇ ಗೊತ್ತಾ” ಅಂತ ಹಾಗೆ ಕೇಳಿದವರಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡ್ತೀನಿ.
“ಚಿಕ್ಕತೊಟ್ಟಿಲುಕೆರೆ ಗೊತ್ತಲ್ವಾ ಅದಕ್ಕಿಂತ ಎರಡು ಕಿಲೋಮೀಟರ್ ಮುಂಚೇನೇ ಸಿಗುತ್ತೆ, ಅದೇ ರಾಮಗೊಂಡನಹಳ್ಳಿ , ಗುಂಡಗಲ್ ಗೇಟ್ ಗಿಂತ ಮುಂಚೆ ಸಿಗೋ ಸ್ಟಾಪು, ಅಲ್ಲಿ ಹೆಚ್ಚಿಗೆ ಬಸ್‌ಗಳು ನಿಲ್ಲಿಸಲ್ಲ, ನಮ್ಮ ಬೋರ್ಡ್ಗಲ್ಲು ಹತ್ರ ನಿಂತು ಪೂರ್ವಕ್ಕೆ ತಿರುಗಿ ನೋಡಿದರೆ ದೊಡ್ಡದೊಂದು ನಂದೀನೋ, ಸಿಂಹಾನೋ ಒಂದು ಪ್ರಾಣಿ ಮಲಗಿದ ತರಾ ಒಂದು ಬೆಟ್ಟ ಕೂಡಾ ಕಾಣುತ್ತೆ, ಅದು ಗುಂಡಗಲ್ ಬೆಟ್ಟ, ಅದರೆ ಎದುರು ಇರೋದೇ ಕುಚ್ಚಂಗಿ” ಅಂತೀನಿ,
ಅವರು, ಇನ್ನೂ ಅರ್ಥವಾಗದೇ ಕಣ್ಣರಳಿಸಿ ನೋಡುತ್ತಿದ್ದರೆ ,” ನೀವು ನಮ್ಮೂರಿಗೆ ಶಿರಾ ರೋಡಲ್ಲೂ ಹೋಗಬಹುದು, ಊರುಕೆರೆ ಆದಮೇಲೆ ಬಲಕ್ಕೆ ತಿರುಗಿಕೊಂಡರೆ ಎಫ್‌ಸಿಐ ಗೋಡೌನ್ ಐತಲ್ವಾ ಅಲ್ಲಿ ಬಲಕ್ಕೆ ತಿರುಗಿ ಸಾಗಿದರೆ ಮೊದಲಿಗೆ ಕುಚ್ಚಂಗಿಯಮ್ಮನ ಗುಡಿ, ನಂತರ ಕುಚ್ಚಂಗಿ ಪಾಳ್ಯ ಅದಾದ ಮೇಲೆ ಕುಚ್ಚಂಗಿ ಸಿಗುತ್ತೆ ಸಾರ್ “ ಅಂತೀನಿ.
1983-84ರ ದಿನಗಳವು, ಇಂಥಾ ಕುಚ್ಚಂಗಿಗೆ ತುಮಕೂರಿನಿಂದ ದಿನವೂ ಬೈಸಿಕಲ್‌ನಲ್ಲಿ ಅಡ್ಡಾಡುತ್ತಾ, ಕಾಲೇಜು ಓದಿನೊಂದಿಗೆ ತೋಟವನ್ನೂ ಬೆಳೆಸುತ್ತಿದ್ದೆ. ತುಮಕೂರಿನಿಂದ ಮಧುಗಿರಿಗೆ ಹೋಗುವ ಜಿಲ್ಲಾ ಮುಖ್ಯ ಹೆದ್ದಾರಿಯಲ್ಲಿ ಯಲ್ಲಾಪುರ ಆದ ಮೇಲೆ ಅರ್ಧ ಕಿಮೀ ಬಳಿಕ ಎಡಕ್ಕೆ ಒಂದು ರಸ್ತೆ ಕವಲೊಡೆಯುತ್ತದೆ. ಅದು ಅರಕೆರೆ -ಜೋನಿಗರ ಹಳ್ಳಿ ರಸ್ತೆ, ಅಲ್ಲಿಂದ ಮೂರೂವರೆ ಕಿಮೀ ಹೋದರೆ ನಮ್ಮೂರು ಕುಚ್ಚಂಗಿ, ಮಧುಗಿರಿ ರಸ್ತೆ ಸುಮಾರಾಗಿ ಇತ್ತು, ಹಳ್ಳ ಗುಂಡಿ ಇದ್ದರೂ ಆಂಧ್ರದ ಹಿಂದೂಪುರ, ಮಡಕಸಿರಾ ತಲುಪುವ ಹೆದ್ದಾರಿ ಆಗಿದ್ದರಿಂದ ಆಗಾಗ ಟಾರು ಕಾಣುತ್ತಿತ್ತು. ಆದರೆ ಅರಕೆರೆ-ಜೋನಿಗರ ಹಳ್ಳಿ ರಸ್ತೆ ಮಾತ್ರ ಆಗ ಇನ್ನೂ ಟಾರು ಕಂಡಿರಲಿಲ್ಲ, ಅಥವಾ ಟಾರು ಹಾಕಿದ್ದರೂ ಅದು ಹತ್ತಾರು ವರ್ಷಗಳ ಹಿಂದೆ ಹಾಕಲಾಗಿತ್ತಾದ್ದರಿಂದ ರಸ್ತೆ ಮೇಲೆ ಟಾರಿನ ಕುರುಹೂ ಕಾಣದೇ ಕೇವಲ ಜಲ್ಲಿಗಳ ದ್ವೀಪದ ದಿಂಡುಗಳು ಉಳಿದುಕೊಂಡಿದ್ದವರು. ನಮ್ಮೂರಿನವನೊಬ್ಬ ಹಾಗೂ ಮತ್ತೊಬ್ಬ ಇಬ್ಬರೂ ಈ ರಸ್ತೆಯಲ್ಲಿ ಅಲ್ಲಲ್ಲಿ ದಿನವೂ ಗುದ್ದಲಿ ಬಾಂಡಲಿ ಹಿಡಿದು ರಸ್ತೆಯ ಶೌಲ್ಡರ್ ಸಮಮಾಡುತ್ತ, ರಸ್ತೆ ಬದಿ ಮಣ್ಣು ಹೆರೆದು ರಸ್ತೆಗೆ ಚೆಲ್ಲುತ್ತಾ ಗುಂಡಿ ಗುದ್ದರಗಳನ್ನು ಸಮ ಮಾಡುವ ವಿಫಲ ಯತ್ನ ಮಾಡುತ್ತಿದ್ದರು.
ಊರಿಗೆ ಹೋಗುತ್ತಾ ಬರುತ್ತಾ ನಾನು ಇವರನ್ನು ತಮಾಶೆಗೆ “ ಏನು , ರಸ್ತೆಗೆ ಬಣ್ಣ ಹಾಕ್ತಾ ಇದ್ದೀರಾ” ಅಂತ ಕೇಳುವುದೂ, ಅವರು,” ಹೂ ಕಣ್ ಹೇಳ್ರಿ” ಅನ್ನುವುದೂ ನಡೆದಿತ್ತು. ಈ ಇಬ್ಬರು ‘ಪಿಡಬ್ಲ್ಯುಡಿ’ ಎಂದೇ ಖ್ಯಾತಿ ಪಡೆದಿರುವ ಲೋಕೋಪಯೋಗಿ ಇಲಾಖೆಯಲ್ಲಿ ದಿನಗೂಲಿ ಆಧಾರದ ಮೇಲೆ ನೇಮಕಗೊಂಡಿದ್ದ ಗ್ಯಾಂಗ್‌ಮನ್‌ಗಳು. ರಸ್ತೆಗಳ ನಿರ್ವಹಣೆ ಇವರ ಕೆಲಸವಾಗಿತ್ತು. ಈಗ ಈ ಹುದ್ದೆಗಳೇ ಇಲ್ಲ, ಈ ಗ್ಯಾಂಗ್‌ಮನ್‌ಗಳ ಪೈಕಿ 1984ರವರೆಗೆ ನಿರಂತರ ಹತ್ತು ವರ್ಷ ಕೆಲಸ ಮಾಡಿದ್ದವರನ್ನು 1990ರಲ್ಲಿ ಖಾಯಂ ಮಾಡಿ ಸರ್ಕಾರಿ ನೌಕರರೆಂದು ಪರಿಗಣಿಸಲಾಯಿತು. ಹೀಗೆ ಎಂಬತ್ತರ ದಶಕದಲ್ಲಿ ನಾನೇ ತಮಾಶೆ ಮಾಡುತ್ತಿದ್ದ ಜನರ ಸೇವಾ ವಿಷಯವನ್ನು 2009ರಲ್ಲಿ ನಾನೇ ವಿಧಾನ ಸೌಧದಲ್ಲಿ ಕರ್ನಾಟಕ ಸರ್ಕಾರದ ಸಚಿವಾಲಯದ ನೌಕರನಾಗಿ ಕೂತು ನಿರ್ವಹಿಸುತ್ತೇನೆ ಅಂತ ಅಂದುಕೊAಡಿರಲಿಲ್ಲ.
ಹೀಗೆ ತೀರಾ ಹಳ್ಳ, ಗುದ್ದರಗಳಿಂದ ಕೂಡಿದ ನಮ್ಮ ಅರಕೆರೆ- ಜೋನಿಗರಹಳ್ಳಿ ರಸ್ತೆಯ ಅದ್ವಾನದ ಸ್ಥಿತಿ ಕುರಿತು ಪತ್ರಿಕೆಗಳಿಗೆ ಓದುಗರ ಪತ್ರವೊಂದನ್ನು ಬರೆದುಬಿಟ್ಟಿದ್ದೆ. ಆ ಪತ್ರ ಯಥಾವತ್ ಅಲ್ಲದಿದ್ದರೂ ಸಂಕ್ಷೇಪಗೊAಡು ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪ್ರಕಟವಾಗಿಬಿಟ್ಟಿತ್ತು. ನನ್ನ ಆ ಪತ್ರದಲ್ಲಿದ್ದ “ ಆ ರಸ್ತೆ ಎಷ್ಟು ಕೆಟ್ಟದಾಗಿದೆ ಎಂದರೆ, ಒಂದು ವೇಳೆ ಗರ್ಭಿಣಿಯರೇನಾದರೂ ಪ್ರಯಾಣಿಸಿದಲ್ಲಿ ಅವರಿಗೆ ಅಲ್ಲೇ ಹೆರಿಗೆ ಆಗುವುದು ಗ್ಯಾರಂಟಿ” ಎಂಬ ಸಾಲು ಆ ರಸ್ತೆಯನ್ನು ನಿರ್ವಹಿಸುತ್ತಿದ್ದ ಪಿಡಬ್ಲ್ಯುಡಿ ಸಿಬ್ಬಂದಿಯನ್ನು ಕೆಣಕಿಬಿಟ್ಟಿತ್ತು. ಆ ಗ್ಯಾಂಗ್ ಮನ್‌ಗಳು ಅವರ ಮೇಲಧಿಕಾರಿ ಉರಿದುಕೊಂಡಿದ್ದನ್ನು ನನಗೆ ಹೇಳಿದರು. ಆದರೂ ಅಷ್ಟೇನೂ ತುರ್ತಾಗಿ ಆ ರಸ್ತೆ ಟಾರು ಕಾಣಲಿಲ್ಲವೆನ್ನಿ.
ಕುಚ್ಚಂಗಿ ಎಂಬ ಬೋರ್ಡ್ಗಲ್ಲಿನ ಬಳಿ ಇಳಿದು ನಮ್ಮೂರಿನತ್ತ ಸಾಗುವಾಗ ಎರಡು ಹಳ್ಳಗಳನ್ನು ದಾಟಬೇಕಿತ್ತು. ಮೊದಲ ಹಳ್ಳದಲ್ಲಿ ಮಳೆಗಾಲ ಪೂರ್ತಾ ತೀರಾ ತೆಳ್ಳಗೆ, ಮರಳಿನ ಮೇಲೆ ಒಂದು ತೆಳುವಾದ ಪಾರದರ್ಶಕವಾದ ಸೀರೆಯ ಸೆರಗಿನಂತೆ ನೀರು ಹರಿಯುತ್ತಲೇ ಇರುತ್ತಿತ್ತು. ಮತ್ತೊಂದು ಹಳ್ಳ ಹಾಗಲ್ಲ, ಒಂದು ದೋಣಿಗೆರೆ ಮಳೆ ಬಿದ್ದರೂ ತುಂಬಿ ಉಕ್ಕಿ ಹರಿದು ಕೆರೆ ತುಂಬಿಸಿ, ಮತ್ತೆ ಬರಿದಾಗಿ ಇದ್ದು ಬಿಡುತ್ತಿತ್ತು. ಹೀಗೆ ಜೋರಾಗಿ ಹರಿವ ಹಳ್ಳಕ್ಕೆ ದೊಡ್ಡದೊಂದು ಕಲ್ಲಿನ ಸೇತುವೆಯನ್ನೂ ಕಟ್ಟಲಾಗಿತ್ತಾದ್ದರಿಂದ ಈ ಹಳ್ಳ ನಮಗೆ ಅಷ್ಟೇನೂ ಅಪ್ಯಾಯಮಾನವಾಗಿರಲಿಲ್ಲ. ಮೊದಲು ಹೇಳಿದ ಹಳ್ಳವಿತ್ತಲ್ಲ ಅದನ್ನು ದಾಟುವಾಗಲೆಲ್ಲ ಆ ಹಳ್ಳಕ್ಕೆ ಕಟ್ಟಿದ್ದ ಪರ್ಸ್ ಬಂಡ್‌ನ ಮೇಲೂ ತೆಳ್ಳಗೆ ಹರಿಯತ್ತಿದ್ದ ನೀರಿನಲ್ಲಿ ಕೈಕಾಲು ಮುಖ ತೊಳೆದುಕೊಂಡೇ ಮುಂದಕ್ಕೆ ಹೋಗುತ್ತಿದ್ದೆವು.
ಆ ಹಳ್ಳಕ್ಕೆ ಇದ್ದ ಫರ್ಸ್ ಬಂಡ್ ತೀರಾ ಎತ್ತರವಾಗೇನೂ ಇರಲಿಲ್ಲ, ಹಾಗಾಗಿ ವರ್ಷದಲ್ಲಿ ಎರಡೋ ಮೂರೋ ಸಲ ಬಹಳ ಜೋರಾಗಿ ಬೀಳುತ್ತಿದ್ದ ಮಳೆಗೆ ಭರ್ತಿ ಆಗಿಬಿಟ್ಟು ರಸ್ತೆ ದಾಟಲು ಕಷ್ಟವಾಗುತ್ತಿತ್ತು. ಕೆಲವು ಸಲ ವಾಪಸ್ ಹೋಗಿ ಕೆಂತರ್ಲು ಕಡೆಯಿಂದ ತಿರುಗಿ ಕೊಂಡು ಗುಂಡಗಲ್ ಗೇಟಿಗೆ ಬಂದು ರಸ್ತೆ ಸೇರಿಕೊಳ್ಳಬೇಕಿತ್ತು. ಈ ಅನಾನುಕೂಲದ ಬಗ್ಗೆ ಜನರು ಗೊಣಗುತ್ತಿದ್ದರು. ಇದು ಸರ್ಕಾರದ ಗಮನಕ್ಕೆ ಬಂತೋ ಏನೋ ಗೊತ್ತಿಲ್ಲ. ಆಗಾಗ ಕೆಲವು ರಸ್ತೆ ಕೆಲಸಗಳನ್ನು ಮಾಡಿಸುತ್ತ ಕಂಟ್ರಾಕ್ಟರ್ ಎನಿಸಿಕೊಂಡಿದ್ದ ನಮ್ಮ ಮಾವ ದೊಡ್ಡಯ್ಯನಿಗೆ ಈ ಫರ್ಸ್ ಬಂಡ್ ಎತ್ತರಿಸುವ ಕಾಮಗಾರಿ ಸಿಕ್ಕಿಬಿಟ್ಟಿತು.
ಸರಿ ಬಂಡೆಯಿAದ ದೊಡ್ಡ ದೊಡ್ಡ ಸೈಜುಗಲ್ಲುಗಳು, ಚಪ್ಪಡಿಗಲ್ಲುಗಳನ್ನು , ಬೌಲ್ಡರ್‌ಗಳನ್ನು ಒಡೆಸಿ ತಂದು ಕಾಮಗಾರಿ ಆರಂಭಿಸಿದರು, ಮೊದಲು ರಸ್ತೆಗಿಂತ ಕೆಳಮಟ್ಟದಲ್ಲಿ ಹಳ್ಳದ ಹರಿವಿಗೆ ಸಮಾನವಾಗಿ ಇದ್ದ ಫರ್ಸ್ ಬಂಡು ಸೇತುವೆಯ ರೂಪ ಪಡೆದು ಮೂರಡಿ ಎತ್ತರ ಕಂಡಿತು. ಆದರೆ ಕೆಳಗೆ ಕೊಳವೆಗಳನ್ನು ಹಾಕದ ಪರಿಣಾಮ ನೀರಿನ ಹರಿವಿಗೆ ತಡೆ ಉಂಟಾಯಿತು. ಪರಿಣಾಮ ಮರಳು ಆ ಕಡೆಯ ದಡದಲ್ಲೇ ಬಂದು ಸ್ಟಾಕ್ ಆಗತೊಡಗಿತು. ಮನೆ ಕಟ್ಟುವವರಿಗೆ ಸುಲಭವಾಗಿ ಒಂದರೆಡು ಗಾಡಿ ಮರಳು ಸಿಗತೊಡಗಿತು. ಹಳ್ಳದ ಇನ್ನೊಂದು ಭಾಗದಲ್ಲಿ ಮರಳು ಸಾಗದೇ ಬರೀ ನೀರು ಹರಿಯುತ್ತ ಕೊರಕಲು ಬಿದ್ದಿತು. ಹೀಗೆ ನಮ್ಮ ಮಾವನ ಕಂಟ್ರಾಕ್ಟ್ನಿAದಾಗಿ ನಮ್ಮ ಮಾವನಿಗೆ ಎಷ್ಟು ಆರ್ಥಿಕ ಲಾಭವಾಯಿತೋ ಇಲ್ಲವೋ ಗೊತ್ತಿಲ್ಲವಾದರೂ ಈ ಎತ್ತರದ ಫರ್ಸ್ ಬಂಡ್ ನಿರ್ಮಾಣ ಮಾಡಿದ್ದರಿಂದ ಜೀವಂತ ಹಳ್ಳವೊಂದು ಬತ್ತಿ ಹೋದದ್ದಂತೂ ಸತ್ಯ. ಕೃಷಿ ಇಲಾಖೆಗಳು ಮಳೆ ನೀರು ಇಂಗಿಸಲೆAದು ನಿರ್ಮಿಸಿದ ಮತ್ತು ನಿರ್ಮಿಸುತ್ತಿರುವ ಇಂಥ ಕೃಷಿ ಬಂಡ್‌ಗಳೂ ಕೂಡಾ ಹಳ್ಳಗಳು ಕೆರೆಗಳಿಗೆ ನೀರು ಪೂರೈಸುವ ಜಾಲವನ್ನು ಕತ್ತರಿಸಿಹಾಕಿವೆ.
ಪದವಿ ಮುಗಿಸಿ, 1988ರಲ್ಲಿ ಪತ್ರಕರ್ತನಾಗಿ ವೃತ್ತಿ ಆರಂಭಿಸಿದ ಬಳಿಕ ಆಗ ಜ್ವಲಂತವಾಗಿದ್ದ ಹೇಮಾವತಿ ನಾಲಾ ಕಾಮಗಾರಿ ಹಾಗೂ ಇತರ ರಸ್ತೆ ಕಾಮಗಾರಿಗಳ ಕಳಪೆ ಕುರಿತು ವರದಿಗಳನ್ನು ಬರೆಯುವಾಗ ದಿವಂಗತ ವೈ.ಕೆ.ರಾಮಯ್ಯನವರು ಮತ್ತು ಇತರ ರಾಜಕಾರಣಿಗಳು ಹಾಗೂ ಇಂಜಿನಿಯರ್ ಗಳ ಸಂಪರ್ಕದಿAದಾಗಿ ಗುತ್ತಿಗೆದಾರರು ಮತ್ತವರ ಪ್ರೊಸ್ ಅಂಡ್ ಕಾನ್ಸ್ ಗೊತ್ತಾಗತೊಡಗಿತು. ಆದರೆ ಅದಷ್ಟೇ ಕಾರಣಕ್ಕೆ ಅವರ ಕಷ್ಟಗಳು ನನಗೆ ಅರ್ಥವಾಗಿಬಿಟ್ಟವು ಅಂತಲ್ಲ.
ಹಾಗೂ 2009ರ ನಂತರ ಅದೇ ಪಿಡಬ್ಲ್ಯುಡಿಯಲ್ಲಿ ಇಂಜಿನಿಯರ್‌ಗಳ ಸೇವಾ ವಿಷಯಗಳನ್ನು ನಿರ್ವಹಿಸತೊಡಗಿದ ನಂತರ ಗುತ್ತಿಗೆ ಮತ್ತು ಗುತ್ತಿಗೆದಾರರ ಮತ್ತೊಂದು ಆಯಾಮವೂ ಅರಿವಾಗತೊಡಗಿತು.
ಈ ಗುತ್ತಿಗೆದಾರರೇ ಒಂದು ತರದ ವಿಚಿತ್ರ ವಿಲಕ್ಷಣ ಜೀವಿಗಳು, ಪ್ರೆಸ್ಟೀಜ್ ಅಥವಾ ಪ್ರತಿಷ್ಟೆಗಾಗಿ ಏನನ್ನು ಬೇಕಾದರೂ ಮಾಡಿಬಿಡುತ್ತಾರೆ. ಅಷ್ಟು ಹುಂಬರು. ನಾನು ಹೇಳುತ್ತಿರುವುದು ವ್ಯಕ್ತಿಗತವಾಗಿ ಗುತ್ತಿಗೆ ಮಾಡುತ್ತಾರಲ್ಲ ಫಸ್ಟ್ ಕ್ಲಾಸ್ ಅಥವಾ ಸೆಕಂಡ್ ಕ್ಲಾಸ್ ಕಂಟ್ರಾಕ್ಟರ್ ಗಳು ಅವರ ಬಗ್ಗೆ, ದೊಡ್ಡ ದೊಡ್ಡ ಕಂಪನಿಗಳ ಬಗ್ಗೆ ಅಲ್ಲ.
ಗುತ್ತಿಗೆದಾರರು ಸರ್ಕಾರ ಅಂದರೆ, ಇಲಾಖೆಯ ಇಂಜಿನಿಯರ್ ಸಿಬ್ಬಂದಿ ಹಾಗೂ ಅಧಿಕಾರಸ್ಥ ರಾಜಕಾರಣಿಗಳಾದ, ಗ್ರಾಮ ಪಂಚಾಯ್ತಿ ಸದಸ್ಯರಿಂದ ಹಿಡಿದು ಶಾಸಕರು,ಸಂಸದರು ಹಾಗೂ ಮಂತ್ರಿಗಳ ಪಾಲಿಗೆ 24/7 ಬಯಸಿದ್ದನ್ನೆಲ್ಲ ಒದಗಿಸುವ ಕಾಮಧೇನು ಹಾಗೂ ಕಲ್ಪವೃಕ್ಷದಂತೆ .
ಒಂದು ಸಲ ಅಂದಿನ ಉಪ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಹೇಮಾವತಿ ನಾಲೆ ವಿಸಿಟ್‌ಗೆ ಬಂದರು. ಬಾಗೂರು ನವಿಲೆ ಸುರಂಗದಿAದ ತಿಪಟೂರು ತಾಲೂಕಿನವರೆಗೆ ಅವರ ಪ್ರವಾಸ. ಅವರು ಎಲ್ಲೆಲ್ಲಿ ನಿಂತು ನಾಲಾ ಕಾಮಗಾರಿ ಪರಿವೀಕ್ಷಣೆ ಮಾಡಬೇಕಿತ್ತೋ ಅಲ್ಲೆಲ್ಲ, ನಿರ್ಜನ, ನಿರ್ವಸತಿ ಬೆಂಗಾಡಿನAತಿದ್ದ ಆ ಸ್ಥಳಗಳಲ್ಲೂ ಶಾಮಿಯಾನ ತಂದು ನೆರಳು ಮಾಡಲಾಗಿತ್ತು. ಕುಡಿಯಲು ಎಲ್ಲ ಕಡೆ ಎಳನೀರು ಕೊಚ್ಚಿ ಸ್ಟ್ರಾ ಹಾಕಿ ಹಿಡಿದು ನಿಂತವರು, ಜೊತೆಗೆ ಈ ಡಿಸಿಎಂ ಮತ್ತವರ ತಂಡ ತುಸು ವಿಶ್ರಮಿಸಲು ಕುಂತ ತಕ್ಷಣ ಡ್ರೈ ಫ್ರೂಟ್ಸ್ , ಐಸ್ ಕ್ರೀಮ್‌ಗಳ ಬಟ್ಟಲುಗಳನ್ನು ಮುಂಚಾಚುತ್ತಿದ್ದರು, ಅಲ್ಲದೇ ತರಾವರಿ ಜ್ಯೂಸ್ ಗಳು. ಇನ್ನು ಮಧ್ಯಾಹ್ನದ ಊಟಕ್ಕೆಂದು ಐಬಿಯಲ್ಲಿ ನಾನ್‌ವೆಜ್ ಊಟ, ಊಟವೆಂದರೆ ಕೇವಲ ಹೊಟ್ಟೆ ತುಂಬಿಸುವುದಲ್ಲ, ಚಿಕನ್ ಕಬಾಬ್, ಫಿಶ್ ಫ್ರೈಗಳು, ಮಟನ್ ಬಿರ್ಯಾನಿ ಹೀಗೆ ಕಡಿಮೆ ಎಂದರೂ ಐದಾರು ಬಗೆಯ ಬಾಯಲ್ಲಿ ನೀರೂರಿಸುವ ಅತ್ಯುತ್ತಮ ಗುಣಮಟ್ಟದ ಭಕ್ಷ್ಯಗಳು. ಮಂತ್ರಿಗಳಿಗೆ ಈ ಬಗೆ ಬಗೆಯ ಮಾಯಾ ಬಜಾರ್ ಸಿನಿಮಾದಂಥ ಸತ್ಕಾರವನ್ನು ಇಂಜಿನಿಯರ್‌ಗಳು ಮಾಡಿದರು ಅಂತೀರಾ, ಖಂಡಿತಾ ಇಲ್ಲ, ಇದನ್ನೆಲ್ಲ ಪೂರೈಸಿದವರು ಹೇಮಾವತಿ ನಾಲಾ ಕಾಮಗಾರಿ ಮಾಡುತ್ತಿದ್ದ ಗುತ್ತಿಗೆದಾರರು!
ಯೆಸ್, ಇದು ಹೀಗೇ ಇಡೀ ಇಂಡಿಯಾದಲ್ಲಿ ಸರಕಾರಗಳು ನಡೆಯುತ್ತಿರುವುದೇ ಹೀಗೆಯೇ. ನಮ್ಮ ಪ್ರಜಾಪ್ರಭುತ್ವದ ಎರಡು ಮುಖ್ಯ ಅಂಗಗಳಾದ ಶಾಸಕಾಂಗ ಮತ್ತು ಕಾರ್ಯಾಂಗದ ವೇತನ, ಭತ್ಯೆಗಳಲ್ಲದ ಹೆಚ್ಚುವರಿ ಆದಾಯದ ಮೂಲವೇ ಈ ಕಂಟ್ರಾಕ್ಟರ್‌ಗಳೆAದು ಕರೆಯಲಾಗುವ ಗುತ್ತಿಗೆದಾರರು. ಸರ್ಕಾರಗಳು ಜನರ ಅನುಕೂಲಕ್ಕಾಗಿ ರಸ್ತೆ, ಸೇತುವೆ, ಅಣೆಕಟ್ಟು, ಕಾಲುವೆ, ಕಟ್ಟಡಗಳನ್ನು ಹೇಗೆ ನಿರ್ಮಿಸುವುದು, ಸರಕಾರಿ ನೌಕರರೇ ಹೋಗಿ ಗಾರೆ ಕೆಲಸ ಮಾಡಲಿಕ್ಕಾದೀತಾ, ಊಹೂಂ, ಅಬ್ಬಬ್ಬಾ ಎಂದರೆ ಯೋಜನೆ ತಯಾರಿಸಲು, ಉಸ್ತುವಾರಿ ನೋಡಿಕೊಳ್ಳಲು ತಾಂತ್ರಿಕ ಜ್ಞಾನ ಮತ್ತು ಪರಿಣಿತಿ ಇರುವವರನ್ನು ನೇಮಿಸಿಕೊಳ್ಳಬಹುದು. ಲೋಕೋಪಯೋಗಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಹಾಗೂ ಇಂಧನ ಇಲಾಖೆಗಳಲ್ಲಿರುವ ಇಂಥ ಪರಿಣಿತರನ್ನು ಇಂಜಿನಿಯರ್‌ಗಳೆAದು ಕರೆಯುತ್ತೇವೆ. ಜನರಿಗೆ ಅವಶ್ಯವಿರುವ ಕಟ್ಟಡವನ್ನೋ ರಸ್ತೆ ಅಥವಾ ಇನ್ನಿತರ ನಿರ್ಮಿತಿಗಳನ್ನೋ ಮಾಡಿ ಎಂದು ಸರ್ಕಾರ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡರೆ, ಅವುಗಳನ್ನು ಗುತ್ತಿಗೆದಾರರ ಮುಖಾಂತರ ಅನುಷ್ಟಾನಗೊಳಿಸುವವರು ಇಂಜಿನಿಯರ್‌ಗಳು. ಈ ತ್ರಿವಳಿ ವ್ಯೂಹದಲ್ಲಿ ಅತಿ ಹೆಚ್ಚು ಲಾಭ ದೊರಕುವುದು ಗುತ್ತಿಗೆದಾರರಿಗೆ ಎಂಬುದು ಮೇಲ್ನೋಟಕ್ಕೆ ಕಂಡು ಬರುವ ಹಾಗೂ ಜನ ಸಾಮಾನ್ಯರಲ್ಲಿ ಇರುವ ಗಟ್ಟಿ ನಂಬಿಕೆ. ಯಾವುದೇ ಕಾಮಗಾರಿ ಕಳಪೆಯಾಗಿ ಕಂಡರೆ, ನಿರ್ಮಿಸಿದ ಕಡಿಮೆ ಅವಧಿಯಲ್ಲೇ ಹಾಳಾಗಿ ಬಿಟ್ಟರೆ ನಾವೂ ನೀವು ಎಲ್ಲರೂ ಮೊದಲ ಮಾತಿನಲ್ಲೇ ಬೈಯುವುದು ಗುತ್ತಿಗೆದಾರರನ್ನು. ಆದರೆ ಅವರು ಮಾಡುವ ಕಾಮಗಾರಿಗಳು ಕಳಪೆಯಾಗಲು ಪ್ರತ್ಯಕ್ಷ ಕಾರಣ ಇಂಜಿನಿಯರ್ ಗಳು ಹಾಗೂ ಪರೋಕ್ಷ ಮತ್ತು ನಿಜಕಾರಣ ಅಧಿಕಾರಸ್ಥ ಜನಪ್ರತಿನಿಧಿಗಳು.
ಕೆಲವು ಬೃಹತ್ ಯೋಜನೆಗಳನ್ನು ರೂಪಿಸುವಾಗಲೇ ಯಾರು ಯಾರಿಗೆ ಎಷ್ಟು ಪ್ರಮಾಣದ ಹಣ ಬೇಕು ಎನ್ನುವುದನ್ನೂ ನಿಗದಿ ಪಡಿಸಲಾಗಿರುತ್ತದೆ, ಉಳಿದ ಕಾಮಗಾರಿಗಳಿಗೆ ನಿಗದಿಪಡಿಸಿರುವ ಮೊತ್ತದಲ್ಲಿ ಇಂತಿಷ್ಟು ಪ್ರಮಾಣದ ಹಣವನ್ನು ಇಂಜಿನಿಯರ್‌ಗಳು ಹಾಗೂ ಜನಪ್ರತಿನಿಧಿಗಳಿಗೆ ಮುಂಗಡವಾಗಿ ಕೊಟ್ಟರೆ ಮಾತ್ರವೇ ಕಾಮಗಾರಿ ಮಂಜೂರಾಗುವುದು. ಪುರಾತನ ಟೆಂಡರ್ ವ್ಯವಸ್ಥೆ ಹಾಗೂ ಅತ್ಯಾಧುನಿಕ ಪಾರದರ್ಶಕ ಇ-ಟೆಂಡರ್ ವ್ಯವಸ್ಥೆಗಳಲ್ಲೂ ಕಣ್ಕಟ್ಟು ಮಾಡಿ ಹಣಮಾಡುವ ವಿಧಾನ ಮತ್ತು ಕಲೆ ಈ ಇಬ್ಬರಿಗೂ ಗೊತ್ತಿದೆ.
ಸ್ವಾತಂತ್ರ‍್ಯ ಪಡೆದ ಆರಂಭದಲ್ಲಿ ಕಾಮಗಾರಿಗಳ ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ಇರುತ್ತಿತ್ತು. ಗುತ್ತಿಗೆದಾರರಿಂದ ಪರ್ಸೆಂಟೇಜ್ ಪಡೆಯುವುದನ್ನು ಭ್ರಷ್ಟಾಚಾರ ಎಂದು ಗುರುತಿಸಲಾಗುತ್ತಿತ್ತು. ಹೀಗೆ ಬೆಳಕಿಗೆ ಬಂದ ಪ್ರಕರಣಗಳಲ್ಲಿ ಗುರುತಿಸಲಾದವರಿಗೆ ಅದು ಅಪಮಾನ ಎನ್ನಿಸುತ್ತಿತ್ತು. ಶೀಲ ಮತ್ತು ಅಶ್ಲೀಲ, ಪ್ರೇಮ ಮತ್ತು ವ್ಯಭಿಚಾರಗಳ ನಡುವೆ ಇದ್ದ ತೆಳುವಾದ ಗೆರೆ ಕಾಲಾನುಕ್ರಮದಲ್ಲಿ ಹೇಗೆ ಅಳಿಸಿ ಎಲ್ಲವೂ ಸರಿ ಎನ್ನುವ ಭಂಡತನಕ್ಕೆ ಸಮಾಜ ಇಳಿದಿರುವಂತೆಯೇ ಭ್ರಷ್ಟಾಚಾರವನ್ನೂ ಎಲ್ಲ ರೀತಿಯಲ್ಲಿ ಸಮರ್ಥನೆಯನ್ನು ಕೊಡಲಾಗುತ್ತಿದೆ, ಹಾಗಾಗಿ ಎಲ್ಲಕ್ಕೂ ಗುತ್ತಿಗೆದಾರರೇ ಕಾರಣ ಎನ್ನುವಂತಿಲ್ಲ ಆದರೆ ಗುತ್ತಿಗೆದಾರರೂ ಕಾರಣ ಎನ್ನುವುದು ಸೂಕ್ತ.
ಕೆಲವು ಪ್ರಕರಣಗಳನ್ನು ವೃತ್ತಿ ತಾಂತ್ರಿಕತೆಗಿAತ ವ್ಯಾವಹಾರಿಕ ತಂತ್ರದಲ್ಲಿ ಪರಿಣಿತರಾದ ಇಂಜಿನಿಯರ್‌ಗಳೂ ಇದ್ದಾರೆ, ಈ ಇಂಜಿನಿಯರ್‌ಗಳು ಗುತ್ತಿಗೆದಾರರು ಹಾಗೂ ಎಂಎಲ್‌ಎ, ಎಂಪಿ ಹಾಗೂ ಮಿನಿಸ್ಟರ್‌ಗಳನ್ನೂ ವಂಚಿಸಿ ತಾವೇ ಎಲ್ಲವನ್ನೂ ಬಾಚಿಕೊಳ್ಳುತ್ತಾರೆ. ಇನ್ನು ಕೆಲವು ಶಾಸಕರು ಗುತ್ತಿಗೆದಾರ ಮತ್ತು ಇಂಜಿನಿಯರ್‌ಗಳಿಗೂ ಟೋಪಿ ಹಾಕುವವರಿದ್ದಾರೆ. ಭರವಸೆ ಕೊಟ್ಟು ಮಾಡಿಸಿದ ಕೆಲಸಕ್ಕೆ ಬಿಲ್ಲು ಕೊಡುವುದಿಲ್ಲ, ಇನ್ನು ಕೆಲ ಪ್ರಕರಣಗಳಲ್ಲಿ ಕೆಲಸವನ್ನೇ ಮಾಡಿರುವುದಿಲ್ಲ, ಕೋಟಿಗಟ್ಟಲೆ ಮೊತ್ತದ ಬಿಲ್ ಪಾಸಾಗಿ ಹಣ ಹಂಚಿಕೆ ಆಗಿಬಿಟ್ಟಿರುತ್ತದೆ.
ಗ್ರಾಮ ಪಂಚಾಯ್ತಿಯಿAದ ಹಿಡಿದು ಪಾರ್ಲಿಮೆಂಟ್ ವರೆಗೆ ಜನಪ್ರತಿನಿಧಿಗಳ ಮಕ್ಕಳು, ಸಂಬAಧಿಕರ ಹೆಸರಿನಲ್ಲಿ ಹಾಗೂ ಜ್ಯೂನಿಯರ್ ಇಂಜಿನಿಯರ್‌ಗಳಿAದ ಹಿಡಿದು ಇಂಜಿನಿಯರ್ ಇನ್ ಚೀಫ್‌ವರೆಗೆ ಅವರ ಹೆಂಡತಿ, ಮಕ್ಕಳು, ಸೋದರರು ಹಾಗು ಸಂಬAಧಿಕರ ಹೆಸರಲ್ಲಿ ಗುತ್ತಿಗೆ ನಡೆಸುವವರೂ ಇದ್ದಾರೆ.
ಗುತ್ತಿಗೆದಾರರಿಂದ ಪೀಕುವ ಪ್ರಮಾಣ ಹೆಚ್ಚಾಗುತ್ತಾ ಹೆಚ್ಚಾಗುತ್ತಾ, ತಡೆದುಕೊಳ್ಳಲಾಗದ ಮಟ್ಟಕ್ಕೆ ತಲುಪಿ, ಸಹಜವಾಗೇ ಕಾಮಗಾರಿಗಳು ಕಳಪೆಯಾಗಿ ( ಕೆಲವು ಪ್ರಕರಣಗಳಲ್ಲಿ ಗುತ್ತಿಗೆದಾರರೂ ದೂರ್ತರಿರುತ್ತಾರೆ) ಕಡೆಗೆ ಅವರ ಸಂಘದ ಅಧ್ಯಕ್ಷರು ಮಾಧ್ಯಮಗಳ ಮುಂದೆ ಗಟ್ಟಿ ದನಿಯಲ್ಲಿ ಘೋಷಿಸುವವರೆಗೆ ಹಾಗೂ ಗುತ್ತಿಗೆದಾರನೊಬ್ಬ ಆತ್ಮಹತ್ಯೆಮಾಡಿಕೊಳ್ಳುವ ಹಂತಕ್ಕೆ ಬಂದು ಮುಟ್ಟಿದೆ.
ಹೇಳುತ್ತ ಹೋದರೆ ಕೇಳುವವನಿಗೆ ಅಯೋಮಯವೆನಿಸುವ ಈ ತ್ರಿಕೂಟ ವ್ಯೂಹದಲ್ಲಿ ಕಳೆದುಕೊಳ್ಳುತ್ತಿರುವುದು ಮತ್ತು ಕಳೆದು ಹೋಗುತ್ತಿರುವುದು ಈ ದೇಶದಲ್ಲಿ ಸುಮ್ಮನೆ ಮಾತನಾಡದೇ ಎಲ್ಲಕ್ಕೂ ಕೇಳಿದಷ್ಟು ದರ ಕೊಟ್ಟು 28%, 18%, 12%. 8% ಹಾಗೂ 5% ಜಿಎಎಸ್‌ಟಿ ತೆರುತ್ತಿರುವ, 50 ರೂಪಾಯಿ ಮೌಲ್ಯದ ಪೆಟ್ರೋಲಿಗೆ ಲೀಟರಿಗೆ 120 ರೂ ತೆರುತ್ತಿರುವ ನಾವು ಮತ್ತು ನೀವು.
40% ಕಮೀಶನ್ ಕೊಡುತ್ತಿದ್ದೇವೆ ಎನ್ನುವ ಗುತ್ತಿಗೆದಾರರ ಸಂಘದ ಕೆಂಪಣ್ಣ, 4 ಕೋಟಿ ಬರಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಹಾಗೂ 40% ಕಮೀಶನ್ ಕೇಳುತ್ತ ‘ ಸ್ವ ಇಚ್ಚೆ’ಯಿಂದ ರಾಜಿನಾಮೆ ಕೊಟ್ಟ ಬಚ್ಚಲು ಬಾಯಿಯ ಈಶ್ವರಪ್ಪ ಇವೆಲ್ಲ ಕೇವಲ ಬಿಡಿ ಪ್ರಹಸನಗಳು ಅಷ್ಟೇ. ಎಲ್ಲಿಂದ ರಿಪೇರಿ ಮಾಡಬೇಕು, ಹೇಗೆ ರಿಪೇರಿ ಮಾಡಬೇಕು ಎನ್ನುವುದನ್ನು ನೀವೇ ಕಂಡುಕೊಳ್ಳಿ, ಆದರೆ ರಿಪೇರಿ ಅವಶ್ಯಕತೆ ಇದೆ ಎನ್ನುವುದಾದರೇ ತಡಮಾಡದೇ ಮಾಡಿ ಬಿಡಿ ಎನ್ನುತ್ತಾರೆ ಸಂವಿಧಾನ ರಚಿಸಿಕೊಟ್ಟ ಬಾಬಾ ಸಾಹೇಬ ಡಾ.ಅಂಬೇಡ್ಕರ್, ಜಸ್ಟ್ ಡೂ ಇಟ್.