ಎಂಪಿ ಜಿ.ಎಸ್.ಬಸವರಾಜು ಮಾಡಿಕೊಂಡ ಎಡವಟ್ಟು!? ಮಾಧ್ಯಮದ ಮುಂದೆ ಬೆತ್ತಲಾದ ಬಿಜೆಪಿ 99% ಲೋಕಲ್ ಕುಚ್ಚಂಗಿ ಪ್ರಸನ್ನ
kuchangi-[rasanna-bhyrati-basavaraj-mp-basavaraju-bjp
ಎಂಪಿ ಜಿ.ಎಸ್.ಬಸವರಾಜು ಮಾಡಿಕೊಂಡ ಎಡವಟ್ಟು!?
ಮಾಧ್ಯಮದ ಮುಂದೆ ಬೆತ್ತಲಾದ ಬಿಜೆಪಿ
99% ಲೋಕಲ್
ಕುಚ್ಚಂಗಿ ಪ್ರಸನ್ನ
ತುಮಕೂರು: “ ಈ ನನ್ ಮಗ ನಮ್ಮ ಮಂತ್ರಿ ಹೆಂಗ್ ಗೊತ್ತಾ, ಈ ದಕ್ಷಿಣ್ ಕೊರಿಯಾದ ಕಿಂಗ್ ಪಿನ್(?) ಅವನಲ್ಲಾ ಹಂಗೇ,”
“ ಏ ಹಾಳು ಮಾಡಿಬಿಟ್ಟಾರೀ ನಮ್ ಜಿಲ್ಲೇನಾ.., ಒಂದ್ ಸೀಟ್ ಬರಲ್ಲಾ..,”
“ಮಾತ್ ಎತ್ತಿದ್ರೆ ಹೊಡಿ ಬಡಿ ಕಡಿ ಅಂತಾನೇ”
ಅವುನ್ ಅದ್ಯಾವುದೋ ಇಂಜಿನಿಯರ್ ಗೆ, ನೀನು ಹೆಣ್ತಿ ಸೀರೆ ಸೆಣೆಯೋಕೇ ಲಾಯಕ್ಕು ಅಂತ, ಸಭೆಯಿಂದ ಆಚೀಕ್ ಹೋಗು ಅಂತಾನೆ, ಎಕ್ಸಿಕ್ಯುಟೀವ್ ಇಂಜಿನಿಯರ್ ಗೇ,
“ಮೊನ್ನೆ ತಾಲೂಕಿಗೆ ಒಂದ್ ಸಾವ್ರ ಕೋಟಿ ಡಿಕ್ಲೇರ್ ಮಾಡಿಕೊಂಡು ಬಂದವ್ನೇ, ನಮಗ್ಯಾರಿಗೂ ಇನ್ವಿಟೇಶನ್ ಇಲ್ಲ, ನಮ್ಮನ್ನ ಕರೆಯೋಕೂ ಇಲ್ಲ”
ಈ ಮೇಲಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು, ಯಾವಾಗ, ಎಲ್ಲಿ ಅನ್ನೋದು ಗುರುವಾರ ಬೆಳಿಗ್ಗೆಯಿಂದಾನೇ ಎಲ್ಲ ಟಿವಿ ಚಾನೆಲ್ ಗಳಲ್ಲಿ, ಮೊಬೈಲ್ ವಾಟ್ಸಪ್ಗಳಲ್ಲಿ ಪ್ರಸಾರವಾಗಿ ಬಹುಪಾಲು ಎಲ್ಲರಿಗೂ ಬಾಯಿ ಪಾಠವೇ ಆಗಿ ಹೋಗಿದ್ದರೂ ಅಚ್ಚರಿ ಪಡುವಂತಿಲ್ಲ.
ಇತ್ತೀಚೆಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ನ ಉಗ್ರಪ್ಪ ಮತ್ತೊಬ್ಬರು ಮಾಡಿಕೊಂಡಂಥ ಎಡವಟ್ಟನ್ನೇ ಗುರುವಾರ ಬೆಳ್ಳಂಬೆಳಗ್ಗೆ ಬೈರತಿ ಬಸವರಾಜು ಜೊತೆಯಲ್ಲಿ ನಮ್ಮ ಲೋಕ ಸಭಾ ಸದಸ್ಯ ಜಿ.ಎಸ್.ಬಸವರಾಜು ಮಾಡಿದ್ದಾರೆ.
ಇಲ್ಲಿನ ಮಹಾನಗರ ಪಾಲಿಕೆ ಹೊಸ ಕಟ್ಟಡ ಉದ್ಘಾಟನೆಗೆ ಮೊದಲು ಪಾಲಿಕೆಯಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು (ಬೈರತಿ) ಸುದ್ದಿ ಗೋಷ್ಟಿ ನಡೆಸಿದರು, ಸುದ್ದಿಗೋಷ್ಟಿ ಆರಂಭಕ್ಕೆ ತುಸು ಹೊತ್ತು ಮೊದಲು, ಅವರ ಪಕ್ಕ ಕೂತಿದ್ದ ಸಂಸದ ಜಿ.ಎಸ್.ಬಸವರಾಜು ಸಚಿವರ ಕಿವಿ ಕಚ್ಚಲು ಆರಂಭಿಸಿದರು.
ಬಸವರಾಜು ಮೇಲಿನ ಮಾತುಗಳನ್ನು ಆಡುತ್ತಿರುವಂತಯೇ ಸಚಿವ ಬೈರತಿ ಬಸವರಾಜು “ ನಾನು ಮ್ಯಾನೇಜ್ ಮಾಡ್ತೀನಿ ಸುಮ್ನಿರು” ಅಂಥ ಸುಮ್ಮನಿರುವ ಪ್ರಯತ್ನ ಮಾಡುತ್ತಲೇ ಇದ್ದರು, ಅವರ ಎಲ್ಲ ಮಾತುಗಳೂ ಅವರ ಮೇಜಿನ ಮುಂದಿದ್ದ ಟಿವಿ ವಾಹಿನಿಗಳ ಮೈಕ್ ಮುಖಾಂತರ ರೆಕರ‍್ಡ್ ಆಗೇ ಬಿಟ್ಟಿದ್ದವು.
ನಮ್ಮ ಎಂಪಿ ಬಸವರಾಜು ಯಾರನ್ನು ಕುರಿತು ಈ ಮಾತುಗಳನ್ನು ಆಡಿದರೂ ಎನ್ನುವುದನ್ನು ನಾವು ಹೇಳಬೇಕಿಲ್ಲ ಅಲ್ವಾ,
ಜಿಲ್ಲೆಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಜಿಲ್ಲೆಯೊಳಗೆ ಮತ್ತು ಅವರ ಪಕ್ಷದೊಳಗೆ ಮಾತ್ರ ಗೊತ್ತಿದ್ದರೆ ಏನು ಚೆನ್ನ ಅಂತ ಸಂಸದರಿಗೆ ಅನ್ನಿಸಿರಬೇಕು. ತುಮಕೂರು ಜಿಲ್ಲೆಯ ರಾಜಕಾರಣಿಗಳ ಪೈಕಿ ಗುಬ್ಬಿ ತಾಲೂಕಿನವರ ಮಾತಿನ ಶೈಲಿಯೇ ಒಂಥರಾ ಚೆಂದ, ಬೇಕಿದ್ರೆ ಮಾಜಿ ಸಚಿವ ಗುಬ್ಬಿಯ ಎಂಎಲ್ಎ ವಾಸಣ್ಣನವರ ಮಾತಿನ ಓಘವನ್ನೇ ಗಮನಿಸಿ, ನಗರಕ್ಕೆ ಸಮೀಪದ ಗಂಗಸಂದ್ರದಲ್ಲೇ ಹುಟ್ಟಿ ಬೆಳೆದರೂ ಮೂಲ ಗುಬ್ಬಿ ತಾಲೂಕಿನವರಾದ ಎಂಪಿ ಬಸವರಾಜು ಕೂಡಾ ಅದೇ ಗುಬ್ಬಿಯ ನುಡಿಗಟ್ಟುಗಳನ್ನು ಮಾತಿನ ವರಸೆಗಳನ್ನು ರೂಡಿಸಿಕೊಂಡವರೇ ಆಗಿದ್ದಾರೆ.
ವಿಡಿಯೋದಲ್ಲಿ ದಾಖಲಾದ ಬಸವರಾಜು ಅವರ ಮಾತುಗಳನ್ನೇ ಕೇಳಿ, ದಕ್ಷಿಣ ಕೊರಿಯಾದ ಕಿಂಗ್ ಪಿನ್ ಅಂತಾರೆ, ವಾಸ್ತವದಲ್ಲಿ ಅದು ದಕ್ಷಿಣ ಕೊರಿಯಾ ಅಲ್ಲ, ಅದು ಉತ್ತರ ಕೊರಿಯಾ ಆಗಬೇಕು ಮತ್ತು ಆ ದೇಶದ ರ‍್ವಾಧಿಕಾರಿ ನಡವಳಿಕೆಯ ಅಧ್ಯಕ್ಷನ ಹೆಸರು ಕಿಂಗ್ ಪಿನ್ ಅಲ್ಲ ಅದು ಕಿಂಗ್ ಜಾಂಗ್- ವುನ್. ಇಲ್ಲಿ ಅದೆಲ್ಲ ಮುಖ್ಯವಲ್ಲ, ನಮ್ಮ ಮಂತ್ರಿಯನ್ನು ಉತ್ತರ ಕೊರಿಯಾದ ಡಿಕ್ಟೇಟರ್ ಕಿಂಗ್ ಜಾಂಗ್-ವುನ್ ಗೆ ಹೋಲಿಸುತ್ತಾರಲ್ಲ, ಬಸವರಾಜು ಅವರ ಉಪಮಾಲಂಕಾರ ಎಷ್ಟು ಚೆನ್ನಾಗಿದೆ ನೋಡಿ.
ಇವರ ಸಿಡಿಮಿಡಿ, ಸಿಟ್ಟು ಸಿಡುಕುಗಳನ್ನೂ ಅಷ್ಟೇ ಎಷ್ಟು ಚೆನ್ನಾಗಿ ಬಣ್ಣಿಸುತ್ತಾರೆ ಗೊತ್ತಾ ಈ ಎಂಪಿ ಸಾಹೇಬರು, ಇಂದಿಗೆ ಸರಿ ಸುಮಾರು ಒಂದು ರ‍್ಷದ ಹಿಂದೆ ಇದೇ ಜನವರಿ ಎಂಟರಂದು ಕೆಡಿಪಿ ಸಭೆಯಲ್ಲಿ ಒಂದಿಬ್ಬರು ತಮ್ಮ ಮಾತನ್ನು ನರ‍್ಲಕ್ಷಿಸಿದ ಮೈಗಳ್ಳ ಇಂಜಿನಿರ‍್ಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಸಚಿವರು, “ ಜಾಡಿಸಿ ಒದ್ದರೆ ಎಲ್ಲಿಗೆ ಹೋಗಿ ಬೀಳಬೇಕು ಗೊತ್ತಾ” ಎಂದು ರ‍್ಜಿಸಿದ್ದ ಪ್ರಸಂಗ ಕನ್ನಡವಷ್ಟೇ ಅಲ್ಲದೇ ಹಿಂದಿ , ಇಂಗ್ಲಿಷ್ ಸೇರಿದಂತೆ ಎಲ್ಲ ದೇಶ ಭಾಷೆಗಳ ಚಾನೆಲ್ ಗಳಲ್ಲಿ ನಿರಂತರ ಪ್ರಸಾರ ಕಂಡಿತ್ತು.
ನಮ್ಮ ಮಾನ್ಯ ಸಂಸದರು ಆ ಘಟನೆಯನ್ನೂ ಇನ್ನೂ ಮರೆತಿಲ್ಲ, ಆ ಪ್ರಸಂಗವನ್ನು ಈ ದಿನ ನಗರಾಭಿವೃಧಿ ಸಚಿವರ ಗಮನಕ್ಕೂ ತರುವ ಯತ್ನ ಮಾಡಿದರು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಸಂಗತಿಗಳನ್ನೂ ನೇರ ನೇರ ಅವರಿಗೇ ಮುಟ್ಟಿಸುತ್ತಿದ್ದ ಎಂಪಿ ಸಾಹೇಬರಿಗೆ ಬೊಮ್ಮಾಯಿಯವರು ಸಿಎಂ ಆದಮೇಲೆ ಅವರತ್ರ ಅದನ್ನೆಲ್ಲ ಹೇಳಕ್ಕೇ ಆಗ್ತಾ ಇಲ್ಲ ಅಂತ ಕಾಣುತ್ತೆ.
ಈ ಎಲ್ಲ ಮಾತುಗಳಿಗಿಂತ, ಮಾನ್ಯ ಮಂತ್ರಿಯವರು ತಾಲೂಕುಗಳಿಗೆ ತಲಾ ಸಾವಿರ ಕೋಟಿ ಅನುದಾನ ಘೋಷಿಸಿದ್ದು ಮಾನ್ಯ ಲೋಕಸಭಾ ಸದಸ್ಯರು ನಗರಾಭಿವೃದ್ಧಿ ಮಂತ್ರಿಯವರಿಗೆ ಮುಟ್ಟಿಸಬೇಕಿದ್ದ ಮತ್ತೊಂದು ಮಹತ್ವದ ಸಂಗತಿ ಅಂತ ಕಾಣುತ್ತೆ, ಕಾಮಗಾರಿಗಳಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಇಂಜಿನಿಯರ್ ಗಳಿಗೆ 40% ಕಮೀಶನ್ ಕೊಡಬೇಕು ಅಂತ ರಾಜ್ಯ ಗುತ್ತಿಗೆದಾರರ ಸಂಘವು ಪ್ರಧಾನಿಯವರಿಗೆ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಈ ಸಾವಿರ ಕೋಟಿ ಅನುದಾನ ಘೋಷಿಸುವಾಗ ನಮಗೆ ಇನ್ವಿಟೇಶನ್ ಕೊಟ್ಟಿಲ್ಲ ನಮ್ಮನ್ನು ಕರೆಯೋದೂ ಇಲ್ಲ ಎನ್ನುವ ಮಾತಿಗೆ ಹೆಚ್ಚು ಮಹತ್ವ ಬಂದಂತಾಗುತ್ತದೆ ಅಲ್ವಾ.
ಇವರಿಬ್ಬರ ನಡುವೆ ಹೊಂದಾಣಿಕೆ ಅಥವಾ ಸಾಮರಸ್ಯ ಯಾಕಿಲ್ಲ ಅಂಥ ಹೇಳಲು ಹೋದರೆ ಅದೇ ದೊಡ್ಡ ಸ್ಟೋರಿ ಆಗಿಬಿಡುತ್ತದೆ, ಅದಕ್ಕೂ ಟೈಮ್ ಬರಬೇಕು, ಇವತ್ತಿನದು ಟೀಸರ್ ಮಾತ್ರ.
ಈ ಹೊಡಿ,ಬಡಿ, ಕಡಿ ಎನ್ನುವ ಪ್ರಾಸಬದ್ಧ ಮಾತುಗಳನ್ನು ಕೇಳಿದಾಗ ಇದೇ ಬೆಳಿಗ್ಗೆ ಈ ಸುದ್ದಿ ಗೋಷ್ಟಿ ಮುಗಿದ ಬಳಿಕ ಎಂಪ್ರೆಸ್ ಪದವಿ ಪರ‍್ವ ಕಾಲೇಜಿನ ನೂತನ ಸಭಾಂಗಣದಲ್ಲಿ ನಡೆದ ವೇದಿಕೆ ಕರ‍್ಯಕ್ರಮದಲ್ಲಿ ನಿರೂಪಕ ಮಾನ್ಯ ಮಂತ್ರಿಗಳ ಕೆಂಗಣ್ಣಿಗೆ ಮಾತ್ರವೇ ಅಲ್ಲದೇ ಸಿಟ್ಟು ಸಿಡುಕಿಗೂ ಗುರಿಯಾದದ್ದನ್ನು ನೋಡಬೇಕಿತ್ತು.
ಸಚಿವರು ಕ್ಯಾಬಿನೆಟ್ ಮೀಟಿಂಗ್ಗೆ ಹೋಗಬೇಕು , ಸಮಾರಂಭ ಬೇಗ ಮುಗಿಸಿ, ನಾನು ಮಾತನಾಡುವುದಿಲ್ಲ ಅಂಥ ತಮ್ಮನ್ನು ನಿರೂಪಕ ಭಾಷಣಕ್ಕೆ ಕರೆದಾಗ ಅವರ ಬದಲಿಗೆ ನಗರಾಭಿವೃದ್ಶಿ ಸಚಿವ ಬಸವರಾಜು ಅವರನ್ನು ಪೋಡಿಯಂ ಮುಂದಕ್ಕೆ ಕಳಿಸಿದರು. ಅದಾದ ಮೇಲೆ ಸದರಿ ನಿರೂಪಕ ಈಗ ಮಾನ್ಯ ಸಚಿವರು ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸುತ್ತಾರೆ ಅಂಥ ಘೋಷಿಸಿದ್ದನ್ನು ಕಂಡು ಎದ್ದು ನಿಂತು ರೇಗುತ್ತಲೇ ಆತನನ್ನ ಬೈದುಕೊಂಡು ವೇದಿಕೆ ಇಳಿದು ಬರಬರ ನಡೆದು ಹೊರ ಹೋಗುವ ಮೂಲಕ ಸುದ್ದಿಗೋಷ್ಟಿಗೂ ಮುನ್ನ ಸಂಸದ ಬಸವರಾಜು ಆಡಿದ ಗುಸುಗುಸು ಮಾತಿಗೆ ತಾಜಾ ಸಾಕ್ಷಿ ಒದಗಿಸಿಬಿಟ್ಟರು.
ಮಾನ್ಯ ಸಂಸದರು ಈ ಗುಲ್ಲೆದ್ದ ಗುಟ್ಟಿನಲ್ಲಿ ಹೇಳಿರುವಂತೆ ಬರುವ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯಿಂದ ಬಿಜೆಪಿ ಒಂದು ಸೀಟನ್ನೂ ಗೆಲ್ಲೋದೇ ಇಲ್ವಾ, ಇಂಥಾ ಕಟು ಸತ್ಯವನ್ನು ಅತ್ಯಂತ ಸುದರ‍್ಘ ಅವಧಿಗೆ ರಾಜಕಾರಣ ಮಾಡಿರುವ ಜಿಎಸ್ಬಿ ಬಹಿರಂಗಗೊಳಿಸಿಬಿಟ್ಟರಾ ಅಂತ, ಅವರ ಈ ಭವಿಷ್ಯವಾಣಿ ನಿಜವೇ ಆಗಿಬಿಟ್ಟರೆ, ಕಾಂಗ್ರೆಸ್ನವರು ಒಬ್ಬಟ್ಟಿಗೆ ಒಂದೆರಡು ಚಮಚ ತುಪ್ಪ ಹಾಕಿಕೊಳ್ಳುವ ಬದಲು ಸೀದಾ ತುಪ್ಪದ ಬಕೆಟ್ಟಿಗೇ ಅದ್ದಿಕೊಂಡು ತಿನ್ನತೊಡಗುತ್ತಾರೆ ಬಿಡಿ.
ಈಗಲೇ ಇಡೀ ಜಿಲ್ಲೆಗೆ ಒಬ್ಬ ಅಧ್ಯಕ್ಷನ್ನ ನೇಮಿಸಲಾಗದೇ ಜಿಲ್ಲೆಯನ್ನು ಎರಡೆರಡು ಭಾಗ ಮಾಡಿ, ಇಬ್ಬಿಬ್ಬರು ಅಧ್ಯಕ್ಷರನ್ನು ನೇಮಕ ಮಾಡಿದ ಆದೇಶ ಹೊರಬಿದ್ದಿರುವ ಬೆನ್ನಲ್ಲೇ ಎಂಪಿ ಬಸವರಾಜು ಹೀಗೆ ಮೈಕ್, ಕ್ಯಾಮರಾ ಮುಂದೆ ಕುಂತು ಹಿಂಗೆಲ್ಲ ಆಡಬೇಕಿತ್ತಾ…,!?