ನೀರಿನ ಬಿಕ್ಕಟ್ಟುಗಳು ಮತ್ತು ಸಾಧ್ಯತೆಯ ಹುಡುಕಾಟಗಳು-2

ಎಲ್ಲವೂ ಸರ್ಕಾರದ ಜವಾಬ್ಧಾರಿ ಎಂಬ ಮನಸ್ಥಿತಿಯೇ ಅನೇಕ ಸಮಸ್ಯೆಗಳಿಗೆ ಕಾರಣವಾಗಿರುವುದು. ಡಾ.ರಾಜೇಂದ್ರಸಿಂಗರು ನಮಗೆ ಮುಖ್ಯ ಅನ್ನಿಸುವುದು ಈ ಕಾರಣಕ್ಕೆ

ನೀರಿನ ಬಿಕ್ಕಟ್ಟುಗಳು ಮತ್ತು ಸಾಧ್ಯತೆಯ ಹುಡುಕಾಟಗಳು-2

ವಾಸ್ತವ 

ಡಾ.ನೆಲ್ಲುಕುಂಟೆ ವೆಂಕಟೇಶ್

 

      ಮೊನ್ನೆ ದೀಪಾವಳಿಯ ದಿನ ನೀರ ಮಾನವ ಖ್ಯಾತಿಯ ಡಾ. ರಾಜೇಂದ್ರಸಿಂಗ್ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರು. ಆದಿಚುಂಚನಗಿರಿ ಮಠದ ಸ್ವಾಮೀಜಿಗಳ ನೇತೃತ್ವದಲ್ಲಿ ಬಯಲು ಸೀಮೆಯ ನೀರಿನ ಸಮಸ್ಯೆ ಮತ್ತು ಪರಿಹಾರಗಳಿಗಾಗಿ ನಡೆದ ಈ ಕಾರ್ಯಾಗಾರದಲ್ಲಿ ಮನೆಗಳಲ್ಲಿ ನಡೆಯುತ್ತಿದ್ದ ಹಬ್ಬವನ್ನು ಬಿಟ್ಟು ಜನ ಭಾಗವಹಿಸಿದ್ದರು. ಡಾ.ಸಿಂಗರು ಸರಿಸುಮಾರು ಒಂದು ದಶಕದ ಹಿಂದೆ ದೊಡ್ಡಬಳ್ಳಾಪುರಕ್ಕೆ ಬಂದಿದ್ದನ್ನು ಪ್ರೊ.ಎಂ.ಜಿ.ಚಂದ್ರಶೇಖರಯ್ಯನವರು ನೆನಪಿಸಿದರು. ಸಮಸ್ಯೆ ಆರಂಭವಾಗುತ್ತಿದ್ದ ದಿನಗಳಲ್ಲಿ ಬಂದು ಎಚ್ಚರಿಸಿ ಹೋಗಿದ್ದ ಅವರ ಮಾತುಗಳನ್ನು ಬಹುಪಾಲು ಜನ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಮೊನ್ನೆ ದೊಡ್ಡ ಸಭಾಂಗಣದಲ್ಲಿ ನೆರೆದಿದ್ದ ಸಾವಿರಗಟ್ಟಲೆ ಜನ ನಿಶ್ಯಬ್ಧವಾಗಿ ಕೇಳಿದರು. ಸ್ವತಃ ಸ್ವಾಮೀಜಿ ನಿರ್ಮಲಾನಂದನಾಥರು ವಿದ್ಯಾರ್ಥಿಯಂತೆ ಕೂತು ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ಸಂತರು-ಸಾರ್ವಜನಿಕರು ಮತ್ತು ಸರ್ಕಾರಗಳು ಸೇರಿದರೆ ಅದ್ಭುತವಾದುದನ್ನು ಸೃಷ್ಟಿಸಬಹುದೆಂದು ಡಾ.ಸಿಂಗರು ಹೇಳುತ್ತಾರೆ. ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆವ ಸಮಾರಂಭಗಳಲ್ಲಿ ಜನ ವಿಚಿತ್ರವಾದ ಶ್ರದ್ಧೆಯನ್ನು ತೋರಿಸುತ್ತಾರೆ. ಅವರು ತೀರ್ಮಾನಿಸಿದರೆ ಸಮಾಜದಲ್ಲಿ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಲು ಸಾಧ್ಯವಿದೆ. ಸ್ವಾಮೀಜಿಗಳು ತಮ್ಮ ತಮ್ಮ ಜಾತಿಗಳಿಗೆ ಸೀಮಿತರಾಗದೆ ಮನುಕುಲದ ಸಾಮರಸ್ಯ ಮತ್ತು ಏಳಿಗೆ ಬಯಸುವ ಧೀರೋದ್ಧಾತತೆಯ ದಿಕ್ಕಿನ ಕಡೆಗೆ ನಡೆದು ಶಾಶ್ವತರಾಗುವ ಉತ್ಸಾಹವನ್ನೂ ತುಸು ರಿಸ್ಕನ್ನೂ ತೆಗೆದುಕೊಂಡರೆ ಮನುಕುಲಕ್ಕೆ ಒಳ್ಳೆಯದಾದೀತು. ನನಗೆ ಗೊತ್ತಿರುವಂತೆ ತುಸು ಮಟ್ಟಿಗೆ ಚಿತ್ರದುರ್ಗದ ಸಾಣೇಹಳ್ಳಿ ಮಠ ಹೊಸದುರ್ಗ ಭಾಗದಲ್ಲಿ ಮಳೆ ನೀರು ಹಿಡಿದಿಡುವ ಕೆಲಸ ಮಾಡುತ್ತಿದೆ. ನಾಡಿನ ಅನೇಕ ಮಠ, ಮಸೀದಿಗಳು ಜನರನ್ನು ಪ್ರೇರೇಪಿಸುವ ಶಕ್ತಿ ಪಡೆದಿವೆ. ಅವುಗಳು ಈ ಸಂದರ್ಭದಲ್ಲಿ ಜನಮುಖಿಯಾದ ದಿಕ್ಕಿನ ಕಡೆಗೆ ಯೋಚಿಸಲೇಬೇಕಾಗಿದೆ. ಇದು ಸಾಂಸ್ಥೀಕೃತ ಧರ್ಮಕ್ಕಿಂತ ಮಾನವೀಯ ಧರ್ಮವಾದೀತು. ಮೊನ್ನೆ ಅರಸೀಕೆರೆಯ ಶಾಸಕರು ಬಂದಿದ್ದರು.’ಸಾರ್, ಪ್ರತಿ ವಾರ ಮೂವತ್ತು ಲಾರಿಗಳಷ್ಟು ಎತ್ತು, ದನಗಳನ್ನು ಗಂಡಸಿ ಸಂತೆಯಲ್ಲಿ ಮಾರಲಾಗುತ್ತಿದೆ. ಗೋಮಾತೆಯನ್ನು ಉಳಿಸುವ ಮಾತನಾಡುತ್ತಿರುವ ನಿಮ್ಮ ಕಡೆಯವರು ಯಾರಾದರೂ ಇದ್ದರೆ ದಯಮಾಡಿ ಹೇಳಿ ಎಂದರು. ನನ್ನ ಬಾಯಿ ಕಟ್ಟಿ ಹೋಗಿತ್ತು. ಜನರಿಗೇ ಕುಡಿಯಲು ನೀರಿಲ್ಲದ ಸ್ಥಿತಿ ಬಂದಿದೆ’ ಎಂದರು. ಇಂಥಾ ಸ್ಥಿತಿಯಲ್ಲಿ ಧರ್ಮ ಧರ್ಮಗಳ ನಡುವಿನ ಸಂಘರ್ಷಕ್ಕಿಂತ ಸರ್ವರೂ ಉಳಿಯಲೇಬೇಕಾದ ಸೂತ್ರವನ್ನು ಕಂಡು ಹಿಡಿಯಬೇಕಾಗಿದೆ. ಪಶು, ಪಕ್ಷಿ ಮಾನವರೆಲ್ಲರೂ ಶಾಂತಿಯಿಂದ ಬದುಕಲು ಬೇಕಾದ ವಾತಾವರಣವನ್ನು ಆದಷ್ಟು ಬೇಗ ನಿರ್ಮಿಸಬೇಕು. ಜನಪರವಾಗಿರುವ ಮಠಗಳಾದರೂ ಬೇಗನೆ ಈ ದಿಕ್ಕಿನ ಕಡೆ ಯೋಚಿಸಿದರೆ ಫಲಿತಾಂಶವೂ ಒಳ್ಳೆಯದಾಗುತ್ತದೆ. ಮಳೆಯಿಲ್ಲದೆ ಭರವಸೆಗಳೆಲ್ಲ ಇಂಗಿ ಹೋಗಿ ನಿರಾಸೆಯಲ್ಲಿರುವ ಜನರ ಮುಂದೆ ಡಾ.ಸಿಂಗರು ಮಾತನಾಡಿದರು. ಅವರ ಮಾತುಗಳು ಜನರಲ್ಲಿ ಭರವಸೆಯ ಸಾಧ್ಯತೆಗಳ ಕುರಿತು ಆಸೆ ಹುಟ್ಟಿಸುವಂತೆ ಮಾಡಿದವು. ಗ್ರಾಮದ ಕೆಲಸಗಳು ಸರ್ಕಾರದ ಮತ್ತು ಸಿವಿಲ್ ಇಂಜಿನಿಯರುಗಳ ಜವಾಬ್ಧಾರಿ ಎಂಬ ಮನೋಭಾವವೇ ಈ ದುಸ್ಥಿತಿಗೆ ಕಾರಣವೆಂದು ಡಾ.ಸಿಂಗರು ವಿವರಿಸಿದರು.

ಎಲ್ಲವೂ ಸರ್ಕಾರದ ಜವಾಬ್ಧಾರಿ ಎಂಬ ಮನಸ್ಥಿತಿಯೇ ಅನೇಕ ಸಮಸ್ಯೆಗಳಿಗೆ ಕಾರಣವಾಗಿರುವುದು. ಡಾ.ರಾಜೇಂದ್ರಸಿಂಗರು ನಮಗೆ ಮುಖ್ಯ ಅನ್ನಿಸುವುದು ಈ ಕಾರಣಕ್ಕೆ:

     ರಾಜಸ್ಥಾನದ ತಮ್ಮ ಕರ್ಮಭೂಮಿಯಲ್ಲಿ ಕಳೆದ ಎರಡೂವರೆ ದಶಕಗಳಿಂದ ತಪಸ್ಸಿನಂತೆ ಜಲಮೂಲಗಳಿಗೆ ಜೀವತರುವ ಕಾಯಕ ಮಾಡುತ್ತಿದ್ದಾರೆ. ವಾರ್ಷಿಕ ಸರಾಸರಿ ಕೇವಲ 200 ಮಿ.ಮೀ ಮಳೆ ಬೀಳುವ ಪ್ರದೇಶದ ಸಮುದಾಯಗಳಲ್ಲಿ ಬಹುದೊಡ್ಡ ಭರವಸೆಯನ್ನು ಹುಟ್ಟಿಸಿದ್ದಾರೆ. 10650 ಚದರ ಕಿಮೀ ಪ್ರದೇಶದಲ್ಲಿನ ತಮ್ಮ ಹೆಜ್ಜೆ ಜಾಡುಗಳನ್ನು ಕಳೆದುಕೊಂಡಿದ್ದ ಏಳು ನದಿಗಳಿಗೆ ಜೀವ ಬಂದಿದೆ. ಜನರ ನಡುವೆ ಜಗಳ ಬಂದರೆ ಪರಿಹರಿಸಲು ನದಿ ಸಂಸತ್ತುಗಳಿವೆ. ಜಲದಾಹಿ ದುಷ್ಟ ಬಹುರಾಷ್ಟ್ರೀಯ ಕಂಪೆನಿಗಳಿಗೆ ಈ ಪ್ರದೇಶದಲ್ಲಿ ಜಾಗ ನೀಡಿಲ್ಲ. ಬೆಳೆದ ತರಕಾರಿ,ಹಣ್ಣುಗಳ ಮಾರಾಟಕ್ಕೆ ದೆಹಲಿಯಂಥಾ ನಗರಗಳಲ್ಲಿ ಪ್ರತ್ಯೇಕ ಮಾರುಕಟ್ಟೆ ಇದೆಯಂತೆ. ಇಲ್ಲಿ ಗ್ರಾಮದ ಜನರನ್ನೇ ಇಂಜಿನಿಯರುಗಳಾಗಿಸಿದ್ದಾರೆ.ನೀರಿನ ಚಲನೆಯನ್ನು ನೋಡಿಕೊಂಡು ಸ್ಥಳೀಯ ಮಣ್ಣು, ಕಲ್ಲುಗಳನ್ನೇ ನಂಬಿ ಒಡ್ಡುಗಳನ್ನು ನಿರ್ಮಿಸಿ ನೀರಿಂಗಿಸಿ ಅಂತರ್ಜಲ ಹೆಚ್ಚಿಸುತ್ತಿದ್ದಾರೆ. ಐದು-ಹತ್ತು-ಹದಿನೈದು ಅಡಿಗಳ ತೆರೆದ ಬಾವಿಗಳಲ್ಲಿ ನೀರು ತುಂಬಿದ ಚಿತ್ರಗಳನ್ನು ತೋರಿಸುತ್ತಾರೆ. ವರ್ಷದ ಎಂದೋ ಕೆಲವು ದಿನ ಧೋ ಎಂದು ಸುರಿದು ಆವಿಯಾಗುತ್ತಿದ್ದ ಮಳೆ ನೀರನ್ನು ಹಿಡಿದು ನಿಲ್ಲಿಸಿ ಭೂಮಿಯ ಪದರಗಳಲ್ಲಿ ಇಂಗಿಸಿ ಅರ್ಥಪೂರ್ಣವಾದ ನವನಾಗರೀಕತೆಯನ್ನು ಸೃಜಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ಅನುಭವದ ಜ್ಞಾನವನ್ನು ಲೋಕಕ್ಕೆ ಹಂಚುವ ಹುಮ್ಮಸ್ಸಿನಲ್ಲಿ ತಿರುಗುತ್ತಿದ್ದಾರೆ. ಅವರು ನಮಗೆ ಹೇಳುತ್ತಿರುವುದು ಹೀಗೆ. ಸಮುದಾಯಕ್ಕೆ ತಿಳುವಳಿಕೆ ನೀಡಿ. ನೀವು ಇನ್ನೂ ಅದೃಷ್ಟವಂತರೇ, ನಿಮ್ಮಲ್ಲಿ 600 ಮಿ.ಮೀಗೂ ಹೆಚ್ಚು ಮಳೆ ಬೀಳುತ್ತದೆ. ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡರೆ ಬತ್ತಿ ಹೋಗಿರುವ ನದಿಗಳಿಗೆ ಮರುಜೀವ ನೀಡಬಹುದು. ಮರಗಳು, ಹುಲ್ಲುಗಾವಲುಗಳು ನಮ್ಮ ಶತ್ರುಗಳಲ್ಲ. ಹಸಿರಿನ ಶಾಖ ಮಾತ್ರ ಮೋಡಗಳಿಂದ ಮಳೆಯನ್ನು ಸುರಿಸುವ ಶಕ್ತಿ ಪಡೆದಿದೆ. ಆದ್ದರಿಂದ ಮೊದಲು ಮರ ಗಿಡ, ಹುಲ್ಲುಗಾವಲುಗಳಿಗೆ ಆದ್ಯತೆ ಕೊಟ್ಟು ಬದುಕುವುದನ್ನು ಅಭ್ಯಾಸ ಮಾಡಬೇಕಾಗಿದೆ ಎನ್ನುತ್ತಾರೆ. ರೆಡ್ಡಿ ಮತ್ತವರ ಗೆಳೆಯರು ವೈದ್ಯರಾದ ಡಾ. ಮಧುಸೀತಪ್ಪನವರು ಸಿದ್ಧಪಡಿಸಿರುವ ಶರಾವತಿ ಯೋಜನೆಯಿಂದ ನೀರು ತರುವ ಕುರಿತು ಉತ್ಸಾಹದಿಂದ ಚರ್ಚಿಸುತ್ತಿದ್ದರು. ಕೆ.ಗೌಡರು ಇದೆಲ್ಲ ಈ ಜನ್ಮದಲ್ಲಿ ಆಗುವ ಯೋಜನೆಗಳೇನ್ರಿ ಎಂದರು. ಸಾವಿರಾರು ವರ್ಷಗಳಿಂದ ನಮ್ಮ ಹಿರಿಯರು ರೂಪಿಸಿದ್ದ ಜಲತಂತ್ರಜ್ಞಾನವನ್ನೇ, ಪ್ರಕೃತಿ-ಮನುಷ್ಯ-ಪ್ರಾಣಿ-ಕ್ರಿಮಿ-ಕೀಟಗಳ ಜೈವಿಕ ಸಂಬಂಧಕ್ಕೆ ಧಕ್ಕೆ ಬಾರದಂತೆ ಸಮಗ್ರ ದೃಷ್ಟಿಕೋನವುಳ್ಳ ಕೆರೆ-ಕಟ್ಟೆ-ಬಾವಿ ನೀರಾವರಿಯೇ ಅತ್ಯುತ್ತಮ ಮಾದರಿ ಎಂಬುದು ಗೌಡರ ವಾದವಾಗಿತ್ತು. ಇದಕ್ಕೆ ಪೂರಕವೆಂಬಂತೆ ಡಾ.ಸಿಂಗರು ಸ್ಥಳೀಯ ಜಲಮೂಲಗಳ ರಕ್ಷಣೆ, ಅಭಿವೃದ್ಧಿ ಮತ್ತು ಬೆಳೆಪದ್ಧತಿಯಲ್ಲಿನ ಸುಧಾರಣೆಗಳ ಕುರಿತು ಮಾತನಾಡಿದರು. ನಮ್ಮ ಎಲ್ಲ ಸಮಸ್ಯೆಗಳಿಗೂ ಪಶ್ಛಿಮಘಟ್ಟಗಳೆಂಬ ಕಾಮಧೇನುವಿನ ಬಳಿ ಪರಿಹಾರವಿದೆ ಎಂದು ಭಾವಿಸುವ ಅನೇಕರಿಗೆ ಅದರಿಂದ ಹಾಲನ್ನು ಮಾತ್ರ ಕರೆದುಕೊಳ್ಳಬೇಕೆ ಹೊರತು ಕೆಚ್ಚಲಿಗೆ ತೊಂದರೆ ಮಾಡಬಾರದೆಂಬ ವಿವೇಕ ನಿಧಾನಕ್ಕೆ ಮೂಡುವಂತಾಯಿತು. ತಮ್ಮೂರಿನ ಉದಾಹರಣೆಗಳ ಸಮೇತ ಕೇವಲ ಒಂದೂವರೆ ಗಂಟೆಗಳ ಕಾಲ ಮಾತನಾಡಿದ ಡಾ.ಸಿಂಗರು, ನೆರೆದಿದ್ದ ಜನರ ಕಣ್ಣುಗಳಲ್ಲಿ ಇದು ಸಾಧ್ಯವಿದೆಯೆಲ್ಲ ಎಂಬ ಭರವಸೆಯನ್ನು ಹುಟ್ಟಿಸಿದರು. ನಮಗೊಂದು ಸಂದೇಹವಿತ್ತು. ರಾಜಾಸ್ಥಾನದಲ್ಲಿ ಮಣ್ಣಿನ ಸಾಂದ್ರತೆ ಹೆಚ್ಚು, ನಮ್ಮಲ್ಲಿ ನೀರು ಇಂಗುವುದಕ್ಕಿAತ ಸೂರ್ಯ ಕದಿಯುವುದೇ ಹೆಚ್ಚು ಎಂದು. ಡಾ.ಸಿಂಗರು ತೋರಿಸಿದ ಚಿತ್ರಗಳು ಮಾತ್ರ ಕಲ್ಲು ಮಣ್ಣುಗಳಿಂದ ಕೂಡಿದ ಕೆಮ್ಮಣ್ಣಿನ ನೀರು ನಿಂತಿರುವುದು ಕಾಣಿಸುತ್ತದೆ. ಅದು ನಮ್ಮ ಭಾಗದ ನೆಲದಂತೇ ಕಾಣಿಸುತ್ತದೆ. ನಮ್ಮ ಈ ಜಿಲ್ಲೆಗಳಲ್ಲೇ ಹಿಂದೊಮ್ಮೆ ಏಳು ಜೀವನದಿಗಳು ಹರಿಯುತ್ತಿದ್ದವು. ಇಂದು ಅವುಗಳ ಪಾತ್ರಗಳೇ ಕಾಣೆಯಾಗಿವೆ. ನೀರಿನ ತೀವ್ರ ಬವಣೆಗೆ ತುತ್ತಾಗಿರುವ ಈ ಜಿಲ್ಲೆಗಳು ಜಗತ್ತಿನಲ್ಲೇ ಅತ್ಯುತ್ತಮವಾದ ಕೆರೆಜಾಲವನ್ನು ಹೊಂದಿವೆ. ಅವುಗಳಿಗೆ ಮರುಜೀವ ನೀಡಿದರೆ ಸಾಕು. ಎಲ್ಲಿಂದಲೂ ನೀರು ತರುವ ಅಗತ್ಯವಿಲ್ಲ.ಅದಕ್ಕಾಗಿ ಹುಲ್ಲುಗಾವಲುಗಳನ್ನು , ನೆಲಮೂಲದ ಅರಣ್ಯವನ್ನು ರಕ್ಷಿಸಿ ಬೆಳೆಸುವುದು ಅಗತ್ಯವಾಗಿದೆ. ಕೊಳವೆ ಬಾವಿಗಳೇ ಅಂತರ್ಜಲದ ಅತಿದೊಡ್ಡ ಶತ್ರುಗಳು. ಅದರ ಜೊತೆಗೆ ಜಲಭಕ್ಷಕ, ಈ ನೆಲದ ವಿರೋಧಿ ಯೂಕಲಿಪ್ಟಸ್ ಕಳೆ ಇನ್ನೊಂದು ಭೂತ. ಇವುಗಳ ಜೊತೆಗೆ ಮರಳು ಮಾಫಿಯಾ, ಒತ್ತುವರಿ ಸಮಸ್ಯೆಗಳು ಭೂತಾಕಾರವಾಗಿ ಬೆಳೆದಿವೆ. ಎಷ್ಟು ಬೇಗ ಇವುಗಳನ್ನು ನಿಯಂತ್ರಿಸಲಾಗುತ್ತದೆಯೋ ಅಷ್ಟು ಬೇಗ ಇಲ್ಲಿನ ಬದುಕು ಸರಿದಾರಿಗೆ ಬರಲಾರಂಭಿಸುತ್ತದೆ. 


ತಕ್ಷಣದ ಪರಿಹಾರಗಳು:


      ಆಧುನಿಕ ಜಗತ್ತಿನ ನಾಗರೀಕತೆಗಳಲ್ಲಿ ಅಣೆಕಟ್ಟುಗಳು ವರ ಮತ್ತು ಶಾಪ ಎರಡೂ ಆಗಿವೆ. ಬಹು ಉದ್ದೇಶಿತ ಈ ಯೋಜನೆಗಳು ಆಹಾರ ಉತ್ಪಾದನೆಯಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸಿವೆಯಾದರೂ ಇಂದು ಬಗೆಹರಿಸಲಾಗದ ಬಿಕ್ಕಟ್ಟುಗಳನ್ನೂ ಸೃಷ್ಟಿಸಿವೆ. ಜಗತ್ತಿನಲ್ಲಿ ಅತಿ ಹೆಚ್ಚು ಬೃಹತ್ ಅಣೆಕಟ್ಟುಗಳನ್ನು ನಿರ್ಮಿಸಿದ ದೇಶ ಅಮೇರಿಕ. ಇಂದು ಅದೇ ದೇಶವೇ ತನ್ನ ತಪ್ಪನ್ನು ತಿದ್ದಿಕೊಳ್ಳಲು ಅಣೆಕಟ್ಟುಗಳನ್ನು ‘ಡಿಕಮಿಷನ್’[ಹಂತ ಹಂತವಾಗಿ ಒಡೆದು ಹಾಕುವುದು]ಮಾಡುತ್ತಿದೆ. ನಮ್ಮಲ್ಲಿನ ಉದಾಹರಣೆಗಳನ್ನೇ ನೋಡಿದರೂ ತುಂಗಭದ್ರ ಅಣೆಕಟ್ಟೆಯಲ್ಲಿ ಶೇ.35 ರಷ್ಟು ಹೂಳು ತುಂಬಿದೆಯೆಂದು ಹೇಳಲಾಗುತ್ತಿದೆ. ಆ ಹೂಳನ್ನು ತೆಗೆಯಬೇಕೆಂದರೆ ಸುಮಾರು 68000 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅದರಲ್ಲಿ 12 ಅಡಿಗಳ ಎತ್ತರ ರಾಶಿಹಾಕಿದರೆ ತುಂಬಬಹುದಾದಷ್ಟು ಹೂಳಿದೆ. ಈ ಪರಿಸ್ಥಿತಿಯಲ್ಲಿ ಹೂಳು ತೆಗೆಯಲು ಸಾಧ್ಯವೇ? ಈ ಅಣೆಕಟ್ಟುಗಳೆಲ್ಲ ನಿಧಾನಕ್ಕೆ ಟೈಂ ಬಾಂಬುಗಳಾಗಿ ಮಾರ್ಪಡುತ್ತಿವೆ. ಉತ್ತರದ ಬಯಲಿನ ಬಹುಪಾಲು ಅಣೆಕಟ್ಟೆಗಳ ಸ್ಥಿತಿ ಇದೇ ರೀತಿ ಇದೆ. ಈ ಅಣೆಕಟ್ಟುಗಳ ಕೆಳಗೆ ನೀರು ನಿಲ್ಲಿಸಿ ಬೆಳೆವ ಬೆಳೆವ ಭತ್ತ, ಕಬ್ಬು ಮುಂತಾದ ಬೆಳೆಗಳಿಂದ ಇಲ್ಲಿನ ಭೂಮಿಯನ್ನು ಹಸಿ ಮರುಭೂಮಿಗಳೆಂದು ಕರೆಯಲಾಗುತ್ತದೆ. 
2015-16 ರ ಕೇಂದ್ರ ಸರ್ಕರದ ಆರ್ಥಿಕ ಸಮೀಕ್ಷೆ ಪ್ರಕಾರ ಈ ಬೆಳೆಗಳನ್ನು ಬೆಳೆದು ದೇಶದ ಅಮೂಲ್ಯ ಸಂಪತ್ತಾದ ನೀರನ್ನು ರಫ್ತು ಮಾಡಲಾಗುತ್ತಿದೆ. ಅಣೆಕಟ್ಟುಗಳನ್ನು ನೋಡಿದ ಮೇಲೆ ಕೆರೆ-ಕಟ್ಟೆ ಬಾವಿಗಳ ಮೂಲಕ ನಡೆಯುತ್ತಿದ್ದ ನೀರಾವರಿಯೇ ಅತ್ಯುತ್ತಮ ವಿಧಾನ ಎಂಬ ಅರಿವು ನಿಧಾನಕ್ಕೆ ಜನರಲ್ಲಿ ಮೂಡುತ್ತಿದೆ. ಆದರೆ ಇಲ್ಲೊಂದು ಸಮಸ್ಯೆ ಇದೆ. ದಲಿತ ದಮನಿತರು ಭೂ ಹೀನ ಜಾತಿಗಳು ಹೊಸದಾಗಿ ಪಡೆಯುತ್ತಿರುವ ಭೂಮಿಗಳಲ್ಲೂ ಕೊಳವೆ ಬಾವಿ ಕೊರೆಯದೆ ಕೃಷಿ ಮಾಡುವುದು ಹೇಗೆ ಎಂಬ ಪ್ರಶ್ನೆ ಹುಟ್ಟುತ್ತಿದೆ. ಇದನ್ನು ಹೇಗೆ ಬಿಡಿಸಿಕೊಳ್ಳಬೇಕೆಂಬುದು ಅತ್ಯಂತ ಸೂಕ್ಷ್ಮ ವಿಚಾರವಾಗಿದೆ. ಕೆಲವು ವರ್ಷಗಳ ಹಿಂದೆ ಯುಗಾದಿ ಮುಗಿದ ಕೂಡಲೇ ಕೆರೆಗಳಲ್ಲಿನ ಗೋಡು ಮಣ್ಣನ್ನು ಗಾಡಿಗಳಲ್ಲಿ ತುಂಬಿ ಹೊಲಗಳಿಗೆ ಹೊಡೆಯುತ್ತಿದ್ದರು. ಇಟ್ಟಿಗೆ ,ಮರಳು ಮಾಫಿಯಾಗಳಿರಲಿಲ್ಲ. ಈಗ ಎಲ್ಲರೂ ಗೊಣಗುತ್ತಿದ್ದಾರೆ ಕೆಲಸ ಮಾತ್ರ ನಡೆಯುತ್ತಿಲ್ಲ. ಕೇವಲ ಮೂರು ವರ್ಷಗಳ ಹಿಂದೆ ತಿಪಟೂರಿನಲ್ಲಿ ಅದ್ಭುತವಾದ ಕೆಲಸವೊಂದು ನಡೆಯಿತು. ಸುಮಾರು 116 ಎಕರೆ ಪ್ರದೇಶದ ಅಮಾನಿಕೆರೆಯನ್ನು ನಯಾಪೈಸೆ ಖರ್ಚಿಲ್ಲದೆ 4-5 ಅಡಿಗಳಷ್ಟು ಹೂಳೆತ್ತಲಾಯಿತು. ಹೂಳೆತ್ತುವುದರ ಮೂಲಕ ಸುಮಾರು 5 ಲಕ್ಷ ರೂಗಳಷ್ಟು ಹಣವೂ ಸಂಗ್ರಹಿಸಲಾಗಿತ್ತAತೆ. ಅಕ್ಕ ಪಕ್ಕದ ತಾಲ್ಲೂಕುಗಳಲ್ಲಿ ಹೂಳೆತ್ತುವುದಕ್ಕಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡಲಾಗಿತ್ತು. ದೊಡ್ಡ ಗುಣಿ ಕೆರೆಯನ್ನೇ ನೋಡಿದರೂ ಇಲಿ ಕಚ್ಚಿದಂತೆ ತುಸು ಹೂಳೆತ್ತಲಾಗಿದೆ. ಈ ಪ್ರಯೋಗ ನೋಡಿದ ಅನೇಕ ಹಳ್ಳಿಗಳ ರೈತರು ಸ್ವಯಂಪ್ರೇರಿತರಾಗಿ ತಮ್ಮ ಊರುಗಳ ಕೆರೆಗಳ ಹೂಳೆತ್ತಿಕೊಂಡರು. ಡಿ.ಕೆ ರವಿಯವರು ಜಿಲ್ಲಾಧಿಕಾರಿಗಳಾಗಿದ್ದ ಕಾಲದಲ್ಲಿ ಕೋಲಾರದ ಅನೇಕ ಕೆರೆಗಳ ಕಾಲುವೆಗಳ ಒತ್ತುವರಿಯನ್ನು ತೆರವು ಮಾಡಿದ್ದರು. ಕಳೆದ ವರ್ಷ ಬಿದ್ದ ಮಳೆಯಲ್ಲಿ ಈ ಕೆರೆಗಳು ತುಂಬಿದ್ದವೆಂದು ಗೆಳೆಯರು ಹೇಳುತ್ತಾರೆ. ರಾಜ್ಯದ ದಕ್ಷಿಣದಲ್ಲಿರುವ ಈ ಜಿಲ್ಲೆಗಳಲ್ಲಿ ಅತಿ ಹೆಚ್ಚು ಫ್ಲೋರೈಡ್ ಅಂಶವುಳ್ಳ ನೀರಿದೆ. ತಕ್ಷಣಕ್ಕೆ ಅದರಿಂದ ಬಚಾವಾಗಲು ಪ್ರತಿಮನೆಯೂ ಮಳೆ ನೀರು ಕೊಯಿಲಿನ ವ್ಯವಸ್ಥೆ ಮಾಡಿಕೊಳ್ಳಬಹುದು. ಗುಜರಾತಿನ ಅಹಮದಾಬಾದಿನ ಅನೇಕ ಪೋಲ್[ಮನೆಗಳ ಸಮೂಹ]ಗಳಲ್ಲಿ ನಾಲ್ಕೈದು ಶತಮಾನಗಳಿಂದಲೇ ಮಳೆ ನೀರು ಕೊಯಿಲು ಮಾಡಿಕೊಂಡು ನೀರು ಕುಡಿಯುತ್ತಿದ್ದಾರೆ. ಊರಿನ ನಮ್ಮ ಮನೆಯ ಸಣ್ಣ ಉದಾಹರಣೆಯನ್ನೇ ನೋಡುವುದಾದರೆ 30*40 ಅಡಿಯ ಮನೆಯ ಅರ್ಧಭಾಗದಲ್ಲಿ ಬೀಳುವ ಮಳೆ ನೀರನ್ನು ಕೊಯ್ಲು ಆಡಿ ನನ್ನ ತಮ್ಮ ಸುಮಾರು 20000 ಲೀಟರ್ ನೀರನ್ನು ಸಂಗ್ರಹಿಸುತ್ತಿದ್ದಾನೆ. ಕೆಲವು ಗಂಟೆಗಳಷ್ಟು ಜೋರು ಮಳೆ ಬಂದರೆ ಸಾಕು ತೊಟ್ಟಿ ತುಂಬುತ್ತದೆ. 2 ವರ್ಷಗಳ ಹಿಂದೆ ಪಂಚಾಯಿತಿ ನೀರಿಗಾಗಿ ಇರುಳೆಲ್ಲ ಕಾದು ಸಂಘರ್ಷ ಮಾಡಿಕೊಂಡು ಒದ್ದಾಡಬೇಕಾದ ಪರಿಸ್ಥಿತಿ ಇಲ್ಲವಾಗಿದೆ. ಮನೆ ಮಾಡಿನ ಮೇಲೆಲ್ಲ ಬೀಳುವ ನೀರನ್ನು ಹಿಡಿದಿರಿಸಿದರೆ ಲಕ್ಷಗಟ್ಟಲೆ ಲೀಟರ್ ನೀರಾಗುತ್ತದೆ. ಸರ್ಕಾರ ಯಾವುದಾದರೂ ಯೋಜನೆಯಲ್ಲಿ ಇದನ್ನು ಈ ಭಾಗದಲ್ಲಿ ಮಾಡಬಹುದು. ಕೃಷಿ ಹೊಂಡ ಈ ರೀತಿಯದಕ್ಕೆ ಒಂದು ಅದ್ಭುತ ಪ್ರಯೋಗ. ಅದರಲ್ಲಿಯೂ ನನ್ನ ತಮ್ಮ ಸುಮಾರು 1600000 ಲೀಟರುಗಳಷ್ಟು ನೀರನ್ನು ಸಂಗ್ರಹಿಸುತ್ತಿದ್ದಾನೆ. ಕೋಲಾರ ಮುಂತಾದ ಕಡೆ ಕೆಲವು ರೈತರು ಮಳೆ ನೀರು ಸಂಗ್ರಹಿಸಿಯೇ ಲಕ್ಷಾಂತರ ದುಡಿಯುತ್ತಿದ್ದಾರೆಂದು ಹೇಳಲಾಗುತ್ತಿದೆ. ಕೊರೆದ ಕೊಳವೆ ಬಾವಿಗಳಲ್ಲಿ ನೀರಿಲ್ಲದಿದ್ದರೆ ಅವನ್ನು ಮುಚ್ಚುವ ಬದಲು ಮಕ್ಕಳು ಪ್ರಾಣಿ ಪಕ್ಷಿಗಳು ಬೀಳದ ಹಾಗೆ ಮಾಡಿ ಹರಿವ ನೀರನ್ನು ಕೊಳವೆಯೊಳಕ್ಕೆ ಫಿಲ್ಟರ್ ಮಾಡಿ ತಿರುಗಿಸಬಹುದು. ಆ ಮೂಲಕ ಸಾವಿರ ಗಟ್ಟಲೆ ಅಡಿ ಒಣಗಿ ಧೂಳಾಗಿರುವ ಭೂಮಿಯ ಬಾಯಾರಿಕೆಯನ್ನು ತುಸುತುಸುವೇ ಕಡಿಮೆ ಮಾಡುತ್ತಾ ಬರಬಹುದು. ಮೊದಲೇ ಹೇಳಿದ ಹಾಗೆ ನೆಲದ ಗುಣಕ್ಕೆ ಅನುಗುಣವಾದ ಸಸ್ಯ ಸಂಪತ್ತನ್ನು ಅಭಿವೃದ್ಧಿಪಡಿಸುವುದು. ಹುಲ್ಲನ್ನು ನಾಶಪಡಿಸದೆ ಬೆಳೆಯುವ ಮರಗಳು ನಮ್ಮಲ್ಲಿದ್ದರಿಂದ ಅವುಗಳನ್ನೇ ಉಳಿಸಿ ಬೆಳೆಸಬಹುದಾಗಿದೆ. ಆಸ್ಟ್ರೇಲಿಯಾದ ಮರುಭೂಮಿಯ ಗಿಡಗಳಾದ ಯೂಕಲಿಪ್ಟಸ್ ಮುಂತಾದವು ಮರುಭೂಮಿಗಳಿಗಷ್ಟೇ ಸೀಮಿತ. ಅವುಗಳ ಕೆಳಗೆ ಹುಲ್ಲಿನ ಎಸಳೂ ಬದುಕುವುದು ಸಾಧ್ಯವಿಲ್ಲವೆಂದು ರೈತರಿಗೆ ಅರ್ಥವಾಗಿದೆ. ಆದ್ದರಿಂದಲೇ ಈ ವಿಚಾರದಲ್ಲಿ ಕೋಲಾರದ ಡಿ.ಸಿ ಯಾಗಿದ್ದ ಡಿ.ಕೆ ರವಿಯವರಿಗೂ ಅಲ್ಲಿ ಹಿರಿಯ ಅರಣ್ಯ ಅಧಿಕಾರಿಗಳಿಗೂ ಸಂಘರ್ಷವಾದಾಗ ರೈತರು ಡಿ.ಕೆ ರವಿಯವರ ಪರ ನಿಂತಿದ್ದರು. ಎಷ್ಟು ಬೇಗ ಈ ಕಳೆಯನ್ನು ತೊಳೆದರೆ ಅಷ್ಟು ಬೇಗ ನೆಲಕ್ಕೆ ಒಳ್ಳೆಯದು. ತಮಿಳುನಾಡಿನ ಉಚ್ಚನ್ಯಾಯಾಲಯ ಇತ್ತೀಚೆಗೆ ಪಶ್ಚಿಮ ಘಟ್ಟಗಳಲ್ಲಿನ ಯೂಕಲಿಪ್ಟಸ್ ತಳಿಯನ್ನು ತೆರವು ಮಾಡಲು ಆದೇಶಿಸಿದೆ. ಮಳೆ ಸೆಳೆಯುವ ಪ್ರಕ್ರಿಯೆಯಲ್ಲಿ ಹಸಿರಿನ ಪಾತ್ರ ಬಹುದೊಡ್ಡದೆಂದು ಡಾ.ಸಿಂಗ್ ಹೇಳುತ್ತಾರೆ. ಅವರು ಶಾಖಗಳನ್ನು ನೀಲಿ ,ಹಸಿರು, ಹಳದಿ ಮತ್ತು ಕೆಂಪು ಎಂದು ವರ್ಗೀಕರಿಸುತ್ತಾರೆ. ಸಮುದ್ರದ ನೀಲಿಯಿಂದ ಆವಿಯಾದ ಶಾಖ ಮೋಡವಾಗಿ ಹಸಿರಿನ ಶಾಖದಿಂದ ಆಕರ್ಷಣೆಗೊಂಡು ಮಳೆಯಾಗಿ ಸುರಿಯುತ್ತದೆ. ನಗರೀಕರಣದ ಶಾಖ ಕೆಂಪಾಗಿರುವುದರಿAದ ಅವು ಮಳೆ ಸೆಳೆಯಲು ವಿಫಲವಾಗುತ್ತಿವೆ. ಹಾಗಾಗಿ ಹಳದಿ ಮತ್ತು ಕೆಂಪು ಶಾಖವನ್ನು ತಗ್ಗಿಸಿ ಅಲ್ಲೆಲ್ಲ ಹಸಿರು ಶಾಖವನ್ನು ಹೆಚ್ಚಿಸಬೇಕಾದ ಅನಿವಾರ್ಯತೆಯನ್ನು ಮತ್ತೆ ಮತ್ತೆ ಪ್ರಸ್ತಾಪಿಸುತ್ತಿದ್ದಾರೆ. ಹಾಗಾಗಿ ನೆಲ ಮೂಲದ ಮರ ಗಿಡಗಳನ್ನು ಬೆಳೆದು ಧರೆ ಉಳಿಸಬೇಕಾಗಿದೆ. 

ಸಂಕೀರ್ಣ:

    ಡಾ.ಸಿಂಗರಿಗೆ ರಾಜಕೀಯ ಆರ್ಥಿಕತೆಯ ತಿಳುವಳಿಕೆಯೂ ಇದ್ದಂತಿದೆ. ಅವರು ಸಿರಿಯಾದಲ್ಲಿ ಧರ್ಮಕ್ಕಾಗಿ ನಡೆಯುತ್ತಿರುವ ಜಿಹಾದ್ ಅಲ್ಲ. ಅದು ನೀರಿಗಾಗಿ ನಡೆಯುತ್ತಿರುವ ಕದನ ಎನ್ನುತ್ತಾರೆ. ಇರಬಹುದು ಓಯಸಿಸ್ಸುಗಳಿಗಾಗಿ ದೊಡ್ಡ ಕದನಗಳು ನಡೆದ ದೀರ್ಘ ಇತಿಹಾಸ ಅರಬ್ಬಿನ ಮರುಭೂಮಿ ನಾಡುಗಳಿಗಿದೆ. ಅಸ್ಗರ್ ಅಲಿ ಇಂಜಿನಿಯರ್ ಹೇಳುವಂತೆ ಒಂದು ಬಾವಿಗಾಗಿ ಪ್ರವಾದಿ ಮಹಮ್ಮದರ ಕುಟುಂಬದಲ್ಲಿ ನಡೆದ ಸಂಘರ್ಷವೊಂದರ ಕಾರಣಕ್ಕೆ ಅವರು ನೆಲೆನಿಂತ ಕ್ಷೇತ್ರವನ್ನು ಮಕ್ಕಾದಿಂದ ಮದೀನಾಕ್ಕೆ ಸ್ಥಳಾಂತರಿಸಲಾಗುತ್ತದೆ. ಅಲ್ಲಿ ಅಷ್ಟೇ ಅಲ್ಲ ನಮ್ಮಲ್ಲೂ ಈ ರೀತಿಯ ಉದಾಹರಣೆಗಳಿಗಿವೆ. ಡಾ.ಬಿ.ಆರ್ ಅಂಬೇಡ್ಕರರ ಪ್ರಕಾರ ಸಿದ್ದಾರ್ಥ ಮನೆಬಿಟ್ಟು ಗೌತಮ ಬುದ್ಧನಾಗಿದ್ದು ಸೋದರ ಬುಡಕಟ್ಟುಗಳ ನಡುವಿನ ನದಿಯೊಂದರ ಸಂಘರ್ಷಕ್ಕಾಗಿ. ಬಸವಣ್ಣ ಕೂಡ ಜಲದಲ್ಲೇ ಯಾತ್ರೆ ಮುಗಿಸುತ್ತಾನೆ. ಜಗತ್ತಿನ ಬಹುಪಾಲು ದೊಡ್ಡ ಧಾರ್ಮಿಕ ಪುರುಷರೆಲ್ಲ ಬಯಲು ಸೀಮೆಯಿಂದ ಬಂದವರು. ನೀರ ಕನಸ್ಸು ಈ ಎಲ್ಲರಿಗೂ ಇದ್ದಂತಿದೆ. ನೀರು ಸಂಸ್ಕೃತಿ ಮತ್ತು ಹಾಲು ಸಂಸ್ಕೃತಿಗಳ ಅದ್ಭುತ ಬೆಸುಗೆಯೇ ಈ ದೇಶದ ನಾಗರೀಕತೆಯ ಜೀವಾಳ.ವಅಗ್ನಿ ಸಂಸ್ಕೃತಿಯೆಂಬುದು ಈ ಸಂಸ್ಕೃತಿಗಳ ಮೇಲೆ ನುಗ್ಗಿದ ಘಾತುಕ. ಅದೇ ಘಾತುಕನೇ ಇಂದು ನೀರು ಮತ್ತು ಹಾಲು ಸಂಸ್ಕೃತಿಗಳ ಮೇಲೆ ಯಜಮಾನಿಕೆ ನಡೆಸುತ್ತಿದ್ದಾನೆ. ಆದ್ದರಿಂದ ಮರಳಿ ಜೀವ ಮೂಲದ ಸಂಸ್ಕೃತಿಗಳ ಕಡೆಗೆ ದಿಟ್ಟ ಪಯಣವನ್ನು ಮಾಡಬೇಕಾದ ಬಹುದೊಡ್ಡ ಅಗತ್ಯ ಎದುರಾಗಿದೆ. ಕೇವಲ ಮೂವತ್ತು ವರ್ಷಗಳ ಕೆಳಗೆ ನೀರು ಮಾರಾಟದ ವಸ್ತು ಎಂದಿದ್ದರೆ ಜನ ನಗುವಂಥಾ ಪರಿಸ್ಥಿತಿ ಇತ್ತು, ಆದರೆ ಇಂದು ನೀರ ವ್ಯಾಪಾರಿಗಳು ಎಲ್ಲರಿಗಿಂತ ಹೆಚ್ಚು ಸಂಪತ್ತಿನ ಒಡೆಯರಾಗುತ್ತಿದ್ದಾರೆ. ಲ್ಯಾಟಿನ್ ಅಮೇರಿಕಾದ ಬೊಲಿವಿಯಾ ಮುಂತಾದ ದೇಶಗಳು ನದಿಗಳನ್ನು ಖಾಸಗಿಯವರಿಗೆ ಮಾರಿಬಿಟ್ಟಿವೆ. ನಮ್ಮ ಮಧ್ಯಭಾರತದಲ್ಲೂ ನದಿಯನ್ನು ಖಾಸಗಿಯವರಿಗೆ ನೀಡಲಾಗಿತ್ತು. ಈ ರೀತಿಯ ಎಲ್ಲ ದುರಾಸೆಗಳಿಂದ ಜಗತ್ತು ದೊಡ್ಡ ಯುದ್ಧವೊಂದಕ್ಕೆ ಸಿದ್ಧವಾಗುತ್ತಿರುವಂತಿದೆ. ಅದನ್ನು ಸರಿಮಾಡಿಕೊಳ್ಳುವುದೂ ಬಿಡುವುದೂ ನಮ್ಮ ಮೇಲೆ ಇದೆ. ಆದ್ದರಿಂದಲೇ ಕುವೆಂಪು ಮಾತನ್ನು ಈ ಸಂದರ್ಭದಲ್ಲಿ ಹೀಗೆ ಹೇಳಬಹುದು. “ನೀರೆಲ್ಲ ಊ ತೀರ್ಥ”ವೇ!