ಜಗತ್ತಿನ ಅರಿವಿಗೆ ಬಾರದ ಗಾಂಧಿ ಸಾಧ್ಯವೇ ?

      ಗಾಂಧಿ ಮತ್ತು ಅಂಬೇಡ್ಕರರನ್ನು ಪರಸ್ಪರ ವೈರಿಗಳಂತೆ ಬಿಂಬಿಸುವ ಸಾಂಘಿಕ ಪ್ರಯತ್ನಗಳ ನಡುವೆಯೇ ಗಾಂಧಿ ಹಂತಕ ನಾಥುರಾಮ್‌ ಗೋಡ್ಸೆಯನ್ನು ವೈಭವೀಕರಿಸುವ, ಮೂರ್ತೀಕರಿಸುವ  (Iconisation) ಮತ್ತು ಆರಾಧಿಸುವ ಒಂದು ಪರಂಪರೆಗೂ ಹೊಸ ಸಹಸ್ರಮಾನದ ರಾಜಕಾರಣ ಸಾಕ್ಷಿಯಾಗಿದೆ.

ಜಗತ್ತಿನ ಅರಿವಿಗೆ ಬಾರದ ಗಾಂಧಿ ಸಾಧ್ಯವೇ ?

 ವರ್ತಮಾನ

ನಾ ದಿವಾಕರ

 

     ಸ್ವತಂತ್ರ ಭಾರತದ ಮೊದಲ ನಾಲ್ಕು ದಶಕಗಳಲ್ಲಿ ರಾಜಕೀಯ ಸಂಕಥನಗಳ ಕೇಂದ್ರ ಬಿಂದು ಗಾಂಧಿಯೇ ಆಗಿದ್ದರು. 1990ರ ಅನಂತರ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ಕುರಿತ ಸಾಹಿತ್ಯ ದೇಶದ ಎಲ್ಲ ಭಾಷೆಗಳಲ್ಲೂ ಲಭ್ಯವಾಗತೊಡಗಿಂತೆ ರಾಜಕೀಯ ವಲಯದ ಬೌದ್ಧಿಕ ಚರ್ಚೆಗಳು ಸಂವಿಧಾನ ಮತ್ತು ಅಂಬೇಡ್ಕರ್‌ ಸುತ್ತಲೂ ಬೆಳೆದುಬಂದವು. ಅಯೋಧ್ಯೆ ರಾಜಕಾರಣದ ಹಿನ್ನೆಲೆಯಲ್ಲಿ ಸೃಷ್ಟಿಯಾದ ಬಿಜೆಪಿ ನೇತೃತ್ವದ ಬಲಪಂಥೀಯ ರಾಜಕಾರಣದಲ್ಲಿ ಗಾಂಧಿಯನ್ನು ದೇಶದ ಶತ್ರುವಿನಂತೆ ನೋಡುವ ಒಂದು ಪರಂಪರೆಯನ್ನೂ ಪೋಷಿಸಲಾಯಿತು. ಗಾಂಧಿ ಪ್ರಣೀತ ಆರ್ಥಿಕತೆ, ಗ್ರಾಮೀಣಾಭಿವೃದ್ಧಿ ಹಾಗೂ ಅಹಿಂಸಾತ್ಮಕ ಮಾರ್ಗಗಳನ್ನು ಕಡೆಗಣಿಸುತ್ತಲೇ ಬೆಳೆದುಬಂದ ನವ ಭಾರತದ ಆಳ್ವಿಕೆಯ ಕೇಂದ್ರಗಳು ಒಂದು ಹಂತದಲ್ಲಿ ಮಹಾತ್ಮನನ್ನು ಕೇವಲ ಅಕ್ಟೋಬರ್‌ 2-ಜನವರಿ 30ಕ್ಕೆ ಸೀಮಿತಗೊಳಿಸಿದ್ದನ್ನೂ ಕಂಡಿದ್ದೇವೆ.

 

      ಗಾಂಧಿ ಮತ್ತು ಅಂಬೇಡ್ಕರರನ್ನು ಪರಸ್ಪರ ವೈರಿಗಳಂತೆ ಬಿಂಬಿಸುವ ಸಾಂಘಿಕ ಪ್ರಯತ್ನಗಳ ನಡುವೆಯೇ ಗಾಂಧಿ ಹಂತಕ ನಾಥುರಾಮ್‌ ಗೋಡ್ಸೆಯನ್ನು ವೈಭವೀಕರಿಸುವ, ಮೂರ್ತೀಕರಿಸುವ  (Iconisation) ಮತ್ತು ಆರಾಧಿಸುವ ಒಂದು ಪರಂಪರೆಗೂ ಹೊಸ ಸಹಸ್ರಮಾನದ ರಾಜಕಾರಣ ಸಾಕ್ಷಿಯಾಗಿದೆ. ಹಾಲಿ ಬಿಜೆಪಿ ಸಂಸದೆಯೊಬ್ಬರು ಗಾಂಧಿ ಪ್ರತಿಕೃತಿಗೆ ಸಾಂಕೇತಿಕವಾಗಿ ಶೂಟ್‌ ಮಾಡುವ ಒಂದು ದೃಶ್ಯ ದೇಶಾದ್ಯಂತ ಹರಡಿತ್ತು. ಸ್ವಾತಂತ್ರ್ಯಪೂರ್ವ ಭಾರತದ ಇತರ ಯಾವುದೇ ನಾಯಕರೊಡನೆ ಗಾಂಧಿಯನ್ನು ಮುಖಾಮುಖಿಯಾಗಿಸಿ, ವಿಮರ್ಶಾತ್ಮಕವಾಗಿ ನೋಡುವ ಮೂಲಕ ಅವರ ಸೈದ್ದಾಂತಿಕ-ತಾತ್ವಿಕ ನೆಲೆಗಳನ್ನು ಪ್ರಶ್ನಿಸುವುದು ಬೌದ್ಧಿಕವಾಗಿ ಪ್ರಜಾಸತ್ತಾತ್ಮಕ ನಡೆ. ಆದರೆ 2014ರ ಅನಂತರದ ರಾಜಕಾರಣದಲ್ಲಿ ಈ ಬೌದ್ಧಿಕ ಪ್ರಜ್ಞೆಯೇ ಭ್ರಷ್ಟವಾದ ಕಾರಣ ಗಾಂಧಿ ದ್ರೋಹಿಯಾಗಿ ಕಾಣತೊಡಗಿದ್ದರು.

 

     ಕಾರ್ಪೋರೇಟ್‌ ಮಾರುಕಟ್ಟೆಯ ಬಂಡವಾಳ ಮತ್ತು ತತ್ಸಂಬಂಧಿತ ಭ್ರಷ್ಟ ಮಾರ್ಗಗಳಲ್ಲೇ ನಡೆಯುತ್ತಿರುವ ಭಾರತದ ಚುನಾವಣೆಗಳಲ್ಲಿ ಕಳೆದ ಹತ್ತು ವರ್ಷಗಳಲ್ಲಂತೂ ಗಾಂಧಿ ರಾಜಕೀಯ ಸಂಕಥನದ ಭಾಗ ಆಗಿರಲಿಲ್ಲ. ಯಾವುದೇ ರಾಜಕೀಯ ಪಕ್ಷವೂ ಗಾಂಧಿಯನ್ನು ತಮ್ಮ ಆದರ್ಶ ನಾಯಕ ಎಂದು ಬಿಂಬಿಸುವಂತಹ ಪ್ರಚಾರ ಸಾಮಗ್ರಿಯನ್ನು ಜನತೆಯ ಮುಂದಿರಿಸಿದ ಉದಾಹರಣೆಗಳಿಲ್ಲ. ಏಕೆಂದರೆ ಪ್ರಸ್ತುತ ದ್ವೇಷ ರಾಜಕಾರಣದಲ್ಲಿ ತಾತ್ವಿಕವಾಗಿ ಗಾಂಧಿ ಅಪ್ರಸ್ತುತರಾಗಿಹೋಗಿದ್ದಾರೆ. ಗ್ರಾಮೀಣ ಆರ್ಥಿಕತೆ ಹಾಗೂ ಸ್ವಾವಲಂಬನೆಯ ಹಾದಿಯನ್ನು ಎಂದೋ ತೊರೆದಿರುವ ಭಾರತದ ಆಳುವ ವರ್ಗಗಳು ಆರ್ಥಿಕ ನೆಲೆಯಲ್ಲೂ ಗಾಂಧಿಯನ್ನು ಅಪ್ರಸ್ತುತರಾಗಿಸಿವೆ. ಖಾದಿ, ಚರಕ ಇತ್ಯಾದಿಗಳೆಲ್ಲವೂ ಕೇವಲ ಸಾಂಕೇತಿಕ ಪ್ರತಿಮೆಗಳಾಗಿ ಉಳಿದಿವೆ.

 

ಜಗತ್ತಿನ ದೃಷ್ಟಿಯಲ್ಲಿ ಗಾಂಧಿ

 

     ಇಂತಹ ಸನ್ನಿವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊನೆಯ ಹಂತದ ಮತದಾನದ ವೇಳೆಗೆ, ಏಕಾಏಕಿ ಗಾಂಧಿಯನ್ನು ಚುನಾವಣಾ ಸಂಕಥನಕ್ಕೆ ಎಳೆದುತಂದಿರುವುದು ಅಚ್ಚರಿ ಮೂಡಿಸುತ್ತದೆ.  ಇನ್ನೂ ಅಚ್ಚರಿ ಮೂಡಿಸಿರುವುದು ನರೇಂದ್ರ ಮೋದಿಯವರ ಹೇಳಿಕೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೋದಿ “ ರಿಚರ್ಡ್‌ ಅಟನ್‌ಬರೋ 1982ರಲ್ಲಿ ಗಾಂಧಿ ಚಿತ್ರ ನಿರ್ಮಿಸುವವರೆಗೂ ಜಗತ್ತಿಗೆ ಮಹಾತ್ಮ ಗಾಂಧಿ ಕುರಿತು ಅರಿವು ಇರಲಿಲ್ಲ ” ಎಂದು ಹೇಳಿರುವುದು ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆಗಳನ್ನು ಹುಟ್ಟುಹಾಕಿದೆ. “ ಯಾರಿಗೂ ಅವರ ಬಗ್ಗೆ ತಿಳಿದಿಲ್ಲ ಎಂದು ಹೇಳಲು ವಿಷಾದಿಸುತ್ತೇನೆ , ಗಾಂಧಿ ಚಲನಚಿತ್ರವನ್ನು ನಿರ್ಮಿಸಿದಾಗ ಮೊದಲ ಬಾರಿಗೆ ಇಡೀ ಜಗತ್ತಿಗೆ ಮಹಾತ್ಮ ಗಾಂಧಿ ಕುರಿತು ಕುತೂಹಲ ಮೂಡಿತು. ನಾವು ಕೇಳಿರದ ಈ ಮಹಾನ್‌ ವ್ಯಕ್ತಿ ಯಾರು ಎಂದು ತನ್ನನ್ನೇ ಪ್ರಶ್ನಿಸಿಕೊಂಡಿತು ”(ಪ್ರಜಾವಾಣಿ 30 ಮೇ 2024) ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಹೊಸ ಬೌದ್ಧಿಕ ಸಂವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ.

 

     ಇಲ್ಲಿ ಪ್ರಧಾನಿ ಮೋದಿ ಯಾವ ಜಗತ್ತಿನ ಬಗ್ಗೆ ಮಾತನಾಡುತ್ತಿದ್ದಾರೆ ? ಈ ಗಹನವಾದ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಏಕೆಂದರೆ ಸಮಕಾಲೀನ ಭಾರತದಲ್ಲಿರುವ , ಹಿರಿಯ ತಲೆಮಾರು ಮತ್ತು ಮಿಲೆನಿಯಂ ತಲೆಮಾರು ಸೇರಿದಂತೆ ಒಂದು ಬೃಹತ್‌ ಜನಸಂಖ್ಯೆಗೆ ಗಾಂಧಿ ಅಪಥ್ಯವಾಗಿಹೋಗಿದ್ದಾರೆ. ಭಾರತ ಎನ್ನುವ ದೇಶ ಹುಟ್ಟಿದ್ದೇ 2014ರಲ್ಲಿ ಎಂದು ಭಾವಿಸುವ ಒಂದು ಹಿರಿಯ-ಕಿರಿಯ ಸಂತತಿ ನಮ್ಮ ನಡುವೆ ಇದ್ದು, ವಾಟ್ಸಾಪ್‌ ವಿಶ್ವವಿದ್ಯಾಲಯದ ಮೂಲಕ ಹೊಸ ಇತಿಹಾಸವನ್ನು ರಚಿಸಲು ಯತ್ನಿಸುತ್ತಿದೆ. ಈ ಜಗತ್ತಿಗೆ ʼಗಾಂಧಿʼ ವಿಸ್ಮಯಕಾರಿ ವ್ಯಕ್ತಿಯಾಗಿ ಕಾಣುವುದಷ್ಟೇ ಅಲ್ಲ, ದೇಶದ್ರೋಹಿಯಾಗಿಯೂ ಕಾಣುತ್ತಾರೆ. ಚರಿತ್ರೆಯ ಆಗುಹೋಗುಗಳನ್ನು ವರ್ತಮಾನದಲ್ಲಿಟ್ಟು ನೋಡುವ ಧೋರಣೆ ಬೌದ್ಧಿಕ ವಲಯಗಳಲ್ಲೂ ವ್ಯಾಪಕವಾಗಿರುವುದರ ಪರಿಣಾಮ ಅಂಬೇಡ್ಕರ್‌ವಾದಿಗಳ ಒಂದು ವಲಯವೂ ಸಹ ಗಾಂಧಿಯನ್ನು ವಿಲನ್‌ ಆಗಿಯೇ ನೋಡುತ್ತದೆ.

 

     ಮತ್ತೊಂದು ಜಗತ್ತನ್ನು ಆರೆಸ್ಸೆಸ್‌ನೊಳಗೆ ಕಾಣಬಹುದು. ಆರೆಸ್ಸೆಸ್‌ ಶಾಖೆಗಳಲ್ಲೇ ಬೆಳೆದುಬಂದ ಯಾರಿಗೇ ಆದರೂ ಗಾಂಧಿ ಅಮಾನ್ಯರಾಗಿಯೇ ಕಾಣುತ್ತಾರೆ. ಈ ಜಗತ್ತಿನೊಳಗೆ ಬೆಳೆದುಬಂದ ಹಿರಿಯ ತಲೆಮಾರು ಹಾಗೂ ಈಗಲೂ ಬೆಳೆಯುತ್ತಿರುವ ಮಿಲೆನಿಯಂ ಮಕ್ಕಳಿಗೆ ಗಾಂಧಿ ಒಬ್ಬ ಮಹಾತ್ಮನಾಗಿ ಕಾಣುವುದಿಲ್ಲ. ಹಾಗಾಗಿಯೇ ಗೋಡ್ಸೆಯನ್ನು ಆರಾಧಿಸುವ ಪರಂಪರೆಯೊಂದನ್ನು ಪೋಷಿಸಲಾಗುತ್ತದೆ. ಚರಿತ್ರೆಯ ಆಗುಹೋಗುಗಳನ್ನು ವಕ್ರದೃಷ್ಟಿಯಿಂದ ನೋಡುವ ಅಥವಾ ಸ್ವ-ಅನುಕೂಲಕರ ನೆಲೆಗಳಲ್ಲಿಟ್ಟು ನೋಡುವ ಒಂದು ಬೌದ್ಧಿಕ ಸಂಸ್ಕೃತಿಯಲ್ಲಿ ಗಾಂಧಿ ಪ್ರತಿಯೊಂದು ಹೆಜ್ಜೆಯಲ್ಲೂ ಮತ್ತೊಬ್ಬ ರಾಜಕೀಯ ನಾಯಕನಿಗೆ ಮುಖಾಮುಖಿಯಾಗುತ್ತಾ ನಿಷ್ಕರ್ಷೆಗೊಳಗಾಗುತ್ತಾರೆ. ಹಾಗಾಗಿಯೇ ಗಾಂಧಿ VS ಸಾವರ್ಕರ್‌, ಗಾಂಧಿ Vs ಅಂಬೇಡ್ಕರ್‌, ಗಾಂಧಿ Vs ಸರ್ದಾರ್‌ ಪಟೇಲ್‌ ಮುಂತಾದ ಸಂಕಥನಗಳು ಹೆಚ್ಚು ಬೌದ್ಧಿಕ ಮೌಲ್ಯ ಗಳಿಸಿಕೊಳ್ಳುತ್ತವೆ. ಈ ಜಗತ್ತನ್ನು ಪ್ರತಿನಿಧಿಸುವ ಬಹುತೇಕ ಜನರು ಬಹುಶಃ ಅಟನ್‌ಬರೋ ಅವರ ಗಾಂಧಿ ಚಿತ್ರವನ್ನೂ ನೋಡಿರಲಿಕ್ಕಿಲ್ಲ. ಅದನ್ನೇನು ನೋಡುವುದು ಎನ್ನುವ ದಾರ್ಷ್ಟ್ಯ ಇರಲಿಕ್ಕೂ ಸಾಧ್ಯ.

 

ಗಾಂಧಿ-ಚರಿತ್ರೆಯ ಹಾದಿಯಲ್ಲಿ

 

     ಪ್ರಧಾನಿ ಮೋದಿಯವರ ಬಾಲಿಶ ಹೇಳಿಕೆಯ ಹಿಂದೆ ಇರುವ ಉದ್ದೇಶ ಏನೇ ಆಗಿದ್ದರೂ ಜಗತ್ತಿಗೆ ಗಾಂಧಿಯ ಬಗ್ಗೆ ಅರಿವು ಮೂಡಿಸಲು ಅಟನ್‌ಬರೋ ಅವರ ಚಲನಚಿತ್ರ ಬರಬೇಕಿರಲಿಲ್ಲ. ಸ್ವತಃ ಅಟನ್‌ಬರೋ ಅವರೇ 20 ವರ್ಷಗಳ ಕಾಲ ಗಾಂಧಿಯ ಹೆಜ್ಜೆಗಳನ್ನು ಅಧ್ಯಯನ ಮಾಡುತ್ತಾ 1960ರಲ್ಲಿ ಲೂಯಿ ಫಿಷರ್‌ ಅವರು ಬರೆದ ಗಾಂಧಿ ಜೀವನ ಚರಿತ್ರೆಯಿಂದ ಪ್ರೇರಿತರಾಗಿ ಈ ಚಿತ್ರ ನಿರ್ಮಾಣ ಮಾಡಿದ್ದರು. ಜಗತ್ತಿನ ಇತಿಹಾಸದಲ್ಲಿ ಅತಿ ಹೆಚ್ಚು ಚರ್ಚೆಗೊಳಗಾಗಿರುವ ಚಾರಿತ್ರಿಕ ವ್ಯಕ್ತಿಯಾಗಿ ಗಾಂಧಿ ವಿಶ್ವದ ಮಹಾನ್‌ ಚೇತನಗಳಿಗೆ ಸ್ಪೂರ್ತಿಯ ಸೆಲೆಯಾಗಿದ್ದುದು ಇತಿಹಾಸ ಗುರುತಿಸುವ ಸತ್ಯ. ಹಾಗೆಂದ ಮಾತ್ರಕ್ಕೆ ಗಾಂಧಿ ಅಜಾತ ಶತ್ರು ಎನ್ನಲಾಗುವುದಿಲ್ಲ. ರಾಜಕೀಯ ಜೀವನದಲ್ಲಿ ತೊಡಗಿಕೊಂಡವರು ಅಜಾತಶತ್ರು ಎನಿಸಿಕೊಂಡರೆ ಮತ್ತೊಂದು ಬದಿಯಲ್ಲಿ ಸಮಯಸಾಧಕರೂ ಆಗಿರುತ್ತಾರೆ. ತಮ್ಮ ಸೈದ್ಧಾಂತಿಕ ತತ್ವಗಳಿಗೆ ಕೊನೆಯವರೆಗೂ ಬದ್ಧರಾಗಿದ್ದುಕೊಂಡೇ ವಿಭಿನ್ನ ಸನ್ನಿವೇಶಗಳಲ್ಲಿ ತಮ್ಮ ಪೂರ್ವನಿರ್ಧಾರಿತ ನಿಲುವುಗಳನ್ನು ಪರಿಷ್ಕರಿಸಿಕೊಳ್ಳುತ್ತಾ ಹೊಸ ಚಿಂತನೆಗಳಿಗೆ ತೆರೆದುಕೊಂಡ ಗಾಂಧಿ ಪ್ರತಿಯೊಂದು ಘಟ್ಟದಲ್ಲೂ ಮಿತ್ರರನ್ನು ಗಳಿಸಿದಷ್ಟೇ ಪ್ರಮಾಣದಲ್ಲಿ ವಿರೋಧಿಗಳನ್ನೂ ಗಳಿಸಿರುವುದು ವಾಸ್ತವ.

 

     ಗಾಂಧಿ ಹೊರ ಜಗತ್ತಿಗೆ ಎಷ್ಟು ಪರಿಚಿತರಾಗಿದ್ದರು, ಈ ಜಗತ್ತಿನ ಸಾಮಾಜಿಕ ಚಳವಳಿಗಳಿಗೆ ಹೇಗೆ ಸ್ಪೂರ್ತಿಯಾಗಿದ್ದರು, ಅವರ ತಾತ್ವಿಕ ನಿಲುವುಗಳು ವಿಶ್ವದ ಮಹಾನ್‌ ನಾಯಕರ ಬದುಕಿಗೆ ಹೇಗೆ ಪ್ರೇರಣೆ ನೀಡಿದ್ದವು ಎನ್ನುವುದನ್ನು ಇತಿಹಾಸ ದಾಖಲಿಸಿದೆ. ಈ ದಾಖಲೆಯನ್ನು ಅಳಿಸಿಹಾಕುವ ನವ ಭಾರತದ ವಾಟ್ಸಾಪ್‌ ವಿಶ್ವವಿದ್ಯಾಲಯದ ಪ್ರಯತ್ನಗಳ ನಡುವೆಯೂ ಗಾಂಧಿ ನಮ್ಮ ಸಾರ್ವಜನಿಕ ಸಂಕಥನಗಳ ಒಂದು ಭಾಗವಾಗಿ ಉಳಿಯುತ್ತಾರೆ. ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮಾ ಒಮ್ಮೆ ವಿದ್ಯಾರ್ಥಿಯೋರ್ವನ ಪ್ರಶ್ನೆಗೆ ಉತ್ತರಿಸುತ್ತಾ ಹೀಗೆ ಹೇಳಿದ್ದರು “ ಜೀವಂತವಾಗಿರುವ ಅಥವಾ ಅಗಲಿರುವ ಯಾವುದೇ ನಾಯಕನೊಡನೆ ನಾನು ಭೋಜನ ಮಾಡುವುದೇ ಆದರೆ ಅದು ಗಾಂಧಿಯೊಡನೆ ಮಾತ್ರ ಏಕೆಂದರೆ ಅವರು ನನ್ನ ನೈಜ ಹೀರೋ ” ಎಂದು ಹೇಳುತ್ತಾರೆ.

 

       ಮ್ಯಾನ್ಮಾರ್‌ನ ಸ್ವಾತಂತ್ರ್ಯ ಹೋರಾಟಗಾರ್ತಿ ನೊಬೆಲ್‌ ಪ್ರಶಸ್ತಿ ವಿಜೇತೆ ಆಂಗ್‌ ಸನ್‌ ಸೂ ಕಿ 2012ರಲ್ಲಿ ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ಮಾಡುತ್ತಾ ತಮ್ಮ ಬದುಕಿನುದ್ದಕ್ಕೂ ನಿರಂತರವಾಗಿ ಪ್ರಭಾವಿಸಿದ ಮಹಾನ್‌ ವ್ಯಕ್ತಿಯಾಗಿ ಮಹಾತ್ಮ ಗಾಂಧಿಯನ್ನು ಗುರುತಿಸುತ್ತಾರೆ. ಗಾಂಧಿ ಕುರಿತು ಅಧ್ಯಯನ ಮಾಡುವಂತೆ ಯುವ ಸಮೂಹಕ್ಕೆ ಕರೆ ನೀಡುತ್ತಾರೆ. ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ವಿರುದ್ಧ ಜೀವನವಿಡೀ ಹೋರಾಡುತ್ತಾ, ಸತತ 27 ವರ್ಷಗಳ ಸೆರೆವಾಸ ಅನುಭವಿಸಿದ ನೆಲ್ಸನ್‌ ಮಂಡೇಲಾ ಗಾಂಧಿಯಿಂದ ಪ್ರೇರಣೆ ಪಡೆದ ಮಹಾನ್‌ ನೇತಾರರಾಗಿದ್ದು. “ ದಕ್ಷಿಣ ಆಫ್ರಿಕಾದ ಕ್ರಾಂತಿಕಾರಿ ಪರಿವರ್ತನೆಯಲ್ಲಿ ಮಹಾತ್ಮ ಗಾಂಧಿಯ ಚಿಂತನೆಗಳು ಮಹತ್ವದ ಪಾತ್ರ ವಹಿಸಿವೆ, ಗಾಂಧಿಯ ಬೋಧನೆಗಳ ನೆರವಿನಿಂದಲೇ ವರ್ಣಭೇದ ನೀತಿಯನ್ನು ಹೋಗಲಾಡಿಸಲು ಸಾಧ್ಯವಾಯಿತು ” ಎಂದು ಹೇಳುತ್ತಾರೆ.

 

       ವಿಶ್ವಮಾನ್ಯ ಬೌದ್ಧ ಗುರು, ಟಬೆಟ್‌ ಜನರ ಬಹುದೊಡ್ಡ ನಾಯಕರಾದ ದಲಾಯಿ ಲಾಮಾ ತಮ್ಮನ್ನು ಸ್ವತಃ ಗಾಂಧಿ ಅನುಯಾಯಿ ಎಂದೇ ಘೋಷಿಸಿಕೊಂಡಿದ್ದಾರೆ. “ ಮಹಾತ್ಮ ಗಾಂಧಿಯವರ ಬಗ್ಗೆ ನನಗೆ ಅಪಾರ ಮೆಚ್ಚುಗೆ ಇದೆ. ಮನುಷ್ಯ ಸ್ವಭಾವವನ್ನು ಆಳವಾಗಿ ಅರ್ಥಮಾಡಿಕೊಂಡಿದ್ದ ಮಹಾನ್‌ ಮಾನವ ಚೇತನವಾಗಿ ನನಗೆ ಗಾಂಧಿ ಕಾಣುತ್ತಾರೆ. ಅವರ ಜೀವನವೇ ನನಗೆ ಸ್ಫೂರ್ತಿಯಾಗಿದೆ ” ಎಂಬ ದಲಾಯಿ ಲಾಮಾ ಅವರ ಮಾತುಗಳು ಗಾಂಧಿ ಪ್ರಭಾವವನ್ನು ಸೂಚಿಸುತ್ತದೆ. ಬ್ರಿಟನ್ನಿನ ಸಂಗೀತಗಾರ, ರೆವಲ್ಯೂಷನರಿ ಬ್ಯಾಂಡ್‌ ಎಂಬ ಖ್ಯಾತಿವೆತ್ತ ಬೀಟಲ್ಸ್‌ ಗುಂಪಿನ ನಾಯಕರಾದ ಜಾನ್‌ ಮತ್ತು ಆತನ ಪತ್ನಿ ಯೋಕೋ ಓನೋ ತಮ್ಮ ಸಂಗೀತದ ಪಯಣದಲ್ಲಿ ಗಾಂಧಿ ಪ್ರಭಾವವೇ ಹೆಚ್ಚಾಗಿದೆ ಎಂದು ಹೇಳುತ್ತಾರೆ. ಅಮೆರಿಕದಲ್ಲಿ ಕಪ್ಪು ಜನರ ಪರ ಹೋರಾಡಿ, ಕ್ರಾಂತಿಕಾರಿ ಚಳವಳಿಯ ಮೂಲಕ ಈ ಶೋಷಿತ ಸಮುದಾಯಗಳ ವಿಮೋಚನೆಗೆ ದಾರಿಮಾಡಿಕೊಟ್ಟ ಮಾರ್ಟಿನ್‌ ಲೂಥರ್‌ ಕಿಂಗ್‌ ಜೂನಿಯರ್‌  ಮಹಾತ್ಮ ಗಾಂಧಿಯ ಕಟ್ಟಾ ಅನುಯಾಯಿಯಾಗಿದ್ದು “ ಕ್ರೈಸ್ತನು ನಮಗೆ ಧ್ಯೇಯ-ಗುರಿಯನ್ನು ನೀಡಿದರೆ ಗಾಂಧಿ ನಮಗೆ ಕಾರ್ಯತಂತ್ರಗಳನ್ನು ನೀಡಿದ್ದರು ”  ಎಂದು ಹೇಳುತ್ತಾರೆ.

 

         ವಿಶ್ವದ ಅತ್ಯಂತ ಶ್ರೇಷ್ಠ ವಿಜ್ಞಾನಿ, ವೈಜ್ಞಾನಿಕ ಸಂಶೋಧನೆಗಳ ಪಿತಾಮಹ ಆಲ್‌ಬರ್ಟ್‌ ಐನ್ಸ್‌ಸ್ಟೀನ್‌ ಮಹಾತ್ಮ ಗಾಂಧಿಯ ಪ್ರಭಾವಕ್ಕೊಳಗಾದವರಲ್ಲಿ ಪ್ರಮುಖರು. ಗಾಂಧಿಯೊಡನೆ ಪತ್ರವ್ಯವಹಾರಗಳನ್ನೂ ಇಟ್ಟುಕೊಂಡಿದ್ದ ಐನ್‌ಸ್ಟೀನ್‌ “ ಗಾಂಧಿ ಮುಂದಿನ ಹಲವು ತಲೆಮಾರುಗಳಿಗೆ ರೋಲ್‌ ಮಾಡೆಲ್‌ ” ಎಂದು ಹೇಳುತ್ತಲೇ “ ನಮ್ಮ ಕಾಲಘಟ್ಟದ ಎಲ್ಲ ರಾಜಕೀಯ ಚಿಂತನೆಗಳಿಗೂ ಹೋಲಿಸಿದಾಗ ಗಾಂಧಿಯ ಚಿಂತನೆಗಳು ಹೆಚ್ಚು ಉನ್ನತ ಜ್ಞಾನವನ್ನು ನೀಡುವಂತಹವು ” ಎಂದು ಹೇಳುತ್ತಾರೆ. ಜಗತ್ತಿಗೆ ವಿಶ್ವಮಾನವ ಸಂದೇಶವನ್ನು ನೀಡಿದ ಮಹಾನ್‌ ಕವಿ ರವೀಂದ್ರನಾಥ ಟ್ಯಾಗೋರ್‌ ಗಾಂಧಿಯೊಡನೆ ಹಲವು ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಅವರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು. “ ಮಹಾತ್ಮ ಗಾಂಧಿ ಬಂದರು, ಭಾರತದ ಕೋಟ್ಯಂತರ ಶೋಷಿತ ಬಡವರ ಬಾಗಿಲಲ್ಲಿ ನಿಂತರು,,,, ಭಾರತದ ಕೋಟ್ಯಂತರ ಜನತೆಯನ್ನು ತಮ್ಮ ಬದುಕಿನ ಒಂದು ಭಾಗ ಎಂದು ಬೇಷರತ್ತಾಗಿ ಭಾವಿಸಿದ ಮತ್ತಾವ ನಾಯಕರನ್ನು ಕಾಣಲು ಸಾಧ್ಯ, ಸತ್ಯವೇ ಸತ್ಯವನ್ನು ಜಾಗೃತಗೊಳಿಸಿತ್ತು ” ಎಂಬ ಟ್ಯಾಗೋರರ ಮಾತುಗಳು ಅವರಲ್ಲಿದ್ದ ಗೌರವ ಭಾವಕ್ಕೆ ಸಾಕ್ಷಿಯಾಗಿದೆ.

 

        The story of Civilization ಎಂಬ ಚಾರಿತ್ರಿಕ ಕೃತಿಯನ್ನು ರಚಿಸಿದ ವಿಲ್‌ ಡ್ಯುರಾಂಟ್‌ ಮಹಾತ್ಮ ಗಾಂಧಿಯಿಂದ ತಾವು ಪ್ರೇರಣೆ ಪಡೆದದ್ದನ್ನು ದಾಖಲಿಸುತ್ತಾ “ ಬುದ್ಧನ ಅನಂತರ ಭಾರತ ಇಂತಹ ಗೌರವಯುತ ವ್ಯಕ್ತಿಯನ್ನು ಪಡೆದಿಲ್ಲ. ಸಂತ ಫ್ರಾನ್ಸಿಸ್‌ ಅಸ್ಸಿಸಿ ಅವರ ಅನಂತರ ಆ ಪ್ರಮಾಣದ ಸರಳತೆ, ಸೌಜನ್ಯ, ನಿಸ್ವಾರ್ಥತೆ, ನಿಸ್ಪೃಹತೆ ಮತ್ತು ಶತ್ರುಗಳನ್ನೂ ಕ್ಷಮಿಸುವ ಔದಾರ್ಯವನ್ನು ಹೊಂದಿರುವ ವ್ಯಕ್ತಿ ಜಗತ್ತಿನಲ್ಲಿ ಜನಿಸಿದ್ದರೆ ಅದು ಗಾಂಧಿ ಮಾತ್ರ. ಓರ್ವ ಸಂತ ಕ್ರಾಂತಿಯನ್ನು ಮುನ್ನಡೆಸಿದ ಆಶ್ಚರ್ಯಕರ ವಿದ್ಯಮಾನವನ್ನು ನಾವು ಮಹಾತ್ಮ ಗಾಂಧಿಯಲ್ಲ ಕಾಣಬಹುದು ” ಎನ್ನುತ್ತಾರೆ. ವಿಯಟ್ನಾಂ ಕ್ರಾಂತಿಯ ನೇತಾರ ಹೋ ಚಿ ಮಿನ್‌ ಗಾಂಧಿಯ ಪ್ರಶಂಸಕರಲ್ಲಿ ಒಬ್ಬರಾಗಿದ್ದು “ ನಾನಾಗಲೀ ಇತರ ಯಾರೇ ಆಗಲೀ ಕ್ರಾಂತಿಕಾರಿಗಳಾಗಿರಬಹುದು ಆದರೆ ನಾವು ಪ್ರತ್ಯಕ್ಷವಾಗಿ ಅಥವಾ ಪರೊಕ್ಷವಾಗಿ ಗಾಂಧಿಯ ಅನುಯಾಯಿಗಳೆನ್ನುವುದು ನಿರ್ವಿವಾದ ಅಂಶ ” ಎಂದು ಹೇಳುತ್ತಾರೆ.

 

       ಖ್ಯಾತ ಆಂಗ್ಲ ಕವಿ , ನೊಬೆಲ್‌ ವಿಜೇತ ನಾಟಕಕಾರ ಜಾರ್ಜ್‌ ಬರ್ನಾರ್ಡ್‌ ಷಾ ಮಹಾತ್ಮ ಗಾಂಧಿಯನ್ನು ಕೆಲವೇ ಪದಗಳಲ್ಲಿ ಬಣ್ಣಿಸುತ್ತಾರೆ. “ ಗಾಂಧಿಯ ಬಗ್ಗೆ ಅನಿಸಿಕೆಗಳು ! ನೀವು ಹಿಮಾಲಯ ಶ್ರೇಣಿಯ ಬಗ್ಗೆ ಅನಿಸಿಕೆಗಳನ್ನು ಕೇಳಿದಂತೆಯೇ ಸರಿ ” ಎಂಬ ಅವರ ಮಾತುಗಳು ಗಾಂಧಿ ಹೊರಜಗತ್ತಿಗೆ ಎಷ್ಟು ಪರಿಚಿತರಾಗಿದ್ದರು ಎನ್ನುವುದನ್ನು ಸೂಚಿಸುತ್ತದೆ. ಈ ಬೌದ್ಧಿಕ ಚಿಂತನಾ ಕ್ರಮಗಳ ನಡುವೆಯೇ ಗಾಂಧಿ ಜಗತ್ತಿನ ಹಲವು ರಾಷ್ಟ್ರಗಳ ಮಹಾನ್‌ ಚೇತನಗಳನ್ನು ಪ್ರಭಾವಿಸಿದ್ದನ್ನು ಗಮನಿಸಿಯೇ ರಿಚರ್ಡ್‌ ಅಟನ್‌ಬರೊ 20 ವರ್ಷಗಳ ಸುದೀರ್ಘ ಪರಿಶ್ರಮದ ಅನಂತರ ʼ ಗಾಂಧಿ ʼ ಚಿತ್ರ ನಿರ್ಮಿಸಿದ್ದರು. 1983ರ ಆಸ್ಕರ್‌ ಪ್ರಶಸ್ತಿ ಪಡೆದ ಈ ಚಿತ್ರ ಗಾಂಧಿಯನ್ನು ಜಗತ್ತಿಗೆ ಮತ್ತೊಮ್ಮೆ ಪರಿಚಯಿಸಿದ್ದೂ ವಾಸ್ತವ. ಅದರೆ ಅದಕ್ಕೂ ಮುನ್ನ ಜಗತ್ತಿಗೆ ಗಾಂಧಿಯ ಬಗ್ಗೆ ತಿಳಿದೇ ಇರಲಿಲ್ಲ ಎನ್ನುವುದು ಬಾಲಿಶ ಹೇಳಿಕೆಯಾಗುತ್ತದೆ.

 

       ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯ ಹಿಂದೆ ಅವರ ವ್ಯಕ್ತಿಗತ ಇಂಗಿತ ಏನೇ ಇದ್ದರೂ, ಓರ್ವ ಪ್ರಧಾನಿಯಾಗಿ ಇತ್ತೀಚಿನ ಅವರ ಹೇಳಿಕೆಗಳು ಆ ಹುದ್ದೆಗೆ ಶೋಭೆ ತರುವಂತಹುದಲ್ಲ. ಏನೇ ಆದರೂ ಮಹಾತ್ಮ ಗಾಂಧಿ ಜಗತ್ತಿನ ಮೂಲೆಮೂಲೆಗಳಲ್ಲೂ ಚಿರಪರಿಚಿತರಾಗಿದ್ದ ಮಹಾನ್‌ ವ್ಯಕ್ತಿತ್ವ ಎನ್ನುವುದನ್ನು ನಿರಾಕರಿಸಲಾಗುವುದಿಲ್ಲ. ಇದು ಚಾರಿತ್ರಿಕ ಸತ್ಯ.

-೦-೦-